ವಿಶ್ವಸಂಸ್ಥೆ ಮೌನವಾಗಿದೆಯೇಕೆ?
ಎರಡನೇ ಮಹಾಯುದ್ಧದ ನಂತರದಲ್ಲಿ, ಜಗತ್ತಿನಲ್ಲಿ ಶಾಂತಿಸ್ಥಾಪನೆ ಮಾಡುವ ಉದ್ದೇಶಕ್ಕಾಗಿ ಸುಮಾರು ೫೦ ದೇಶಗಳು ಸೇರಿ ಸ್ಥಾಪಿಸಿದಂಥ ವ್ಯವಸ್ಥೆಯೇ ‘ವಿಶ್ವಸಂಸ್ಥೆ’. ೧೯೪೫ರಲ್ಲಿ ಆರಂಭಗೊಂಡ ನಂತರದ ದಿನಗಳಲ್ಲಿ ಅನೇಕ ದೇಶಗಳ ನಡುವಿನ ಸಂಘರ್ಷವನ್ನು ನಿಯಂತ್ರಿಸುವಲ್ಲಿವಿಶ್ವಸಂಸ್ಥೆ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ.
ಇದರ ಪ್ರಯತ್ನದಿಂದಾಗಿ ಸಾಕಷ್ಟು ರಾಷ್ಟ್ರಗಳಲ್ಲಿ ಶಾಂತಿಸ್ಥಾಪನೆಯೂ ಆಗಿದೆ. ಈಗ ಜಗತ್ತಿನ ಬಹುತೇಕ ರಾಷ್ಟ್ರಗಳು ಇದರ ಸದಸ್ಯರಾಗಿವೆ. ೧೯೩ ಸದಸ್ಯರಾಷ್ಟ್ರಗಳನ್ನು ಹೊಂದಿರುವ ವಿಶ್ವಸಂಸ್ಥೆ ಇತ್ತೀಚಿನ ದಶಕ ಗಳಲ್ಲಿ ಅದೇಕೋ ಏನೋ ಹೆಚ್ಚು ಪರಿಣಾಮಕಾರಿಯಾದ ರೀತಿಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿಲ್ಲ ಎನಿಸುತ್ತಿದೆ. ಇದಕ್ಕೆ ಅನೇಕ ಉದಾಹರಣೆಗಳಿವೆ. ಆರ್ಥಿಕವಾಗಿ, ರಾಜಕೀಯವಾಗಿ ಬಲಿಷ್ಠವಾದಂಥ ರಾಷ್ಟ್ರಗಳ ಕೆಲವೊಂದು ಸ್ವೀಕಾರಾರ್ಹವಲ್ಲದ ನಿಲುವುಗಳನ್ನು ಪ್ರಶ್ನಿಸುವ ಮತ್ತು ಖಂಡಿಸುವ ವಿಚಾರದಲ್ಲಿ ವಿಶ್ವಸಂಸ್ಥೆಯ ದನಿ ಗಟ್ಟಿಯಾಗಿರುವುದಿಲ್ಲ.
ಅಂದರೆ, ಅಭಿವೃದ್ಧಿ ಕಾಣಲಾಗದೆ ಆರ್ಥಿಕವಾಗಿ ದುರ್ಬಲವಾಗಿರುವ ಸಣ್ಣಪುಟ್ಟ ರಾಷ್ಟ್ರಗಳು ಇಲ್ಲವೇ ರಾಜಕೀಯವಾಗಿ ಅತಂತ್ರವಾಗಿರುವ ರಾಷ್ಟ್ರಗಳ ನಡುವಿನ ಸಂಘರ್ಷದವಿಚಾರದಲ್ಲಿ ಮಾತನಾಡುವ ಧಾಟಿಯಲ್ಲಿ ಅದು ದೊಡ್ಡ ರಾಷ್ಟ್ರಗಳ ವಿಚಾರದಲ್ಲಿ ದನಿಯೆತ್ತುತ್ತಿಲ್ಲ.
ರಷ್ಯ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾಗಿ ಈಗಾಗಲೇ ಹತ್ತತ್ತಿರ ಒಂದು ವರ್ಷವಾಗುತ್ತಿದೆ. ಎರಡೂ ಕಡೆಯಲ್ಲೂ ಸಾವಿರಾರು ಮಂದಿ ಯೋಧರು, ನಾಗರಿಕರು, ಹೆಂಗಸರು, ಮಕ್ಕಳು ಪ್ರಾಣವನ್ನು ಕಳೆದುಕೊಂಡಿ ದ್ದಾರೆ. ಆದರೆ ಈ ಯುದ್ಧವನ್ನು ತಡೆಯುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಹೇಳಿಕೊಳ್ಳುವಂಥ ಮಾತುಕತೆಗೆ ಮುಂದಾದಂತಿಲ್ಲ, ಅಥವಾ ಕ್ರಮ ಕೈಗೊಂಡಿರುವ ವಿಷಯ ಕೇಳಿಬಂದಿಲ್ಲ. ಇದೇ ರೀತಿಯಲ್ಲಿ, ಈಗ ಆರಂಭವಾಗಿರುವ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷದಲ್ಲೂ ವಿಶ್ವಸಂಸ್ಥೆ ಸರಿಯಾದ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಈ ಹಣಾಹಣಿ ಕೆಲವೇ ದಿನಗಳ ಹಿಂದಷ್ಟೇ ಶುರುವಾಗಿರುವುದು ಹೌದಾದರೂ, ಅದಕ್ಕೆ ಹಿನ್ನೆಲೆಯಾಗಿರುವ ಚರ್ಚಾ ವಿಷಯ ಅಥವಾ ಸಮಸ್ಯೆ ಬಹಳ ಕಾಲದಿಂದಲೂ ಗೊತ್ತಿರು ವಂಥದ್ದೇ ಅಲ್ಲವೇ? ಜಗತ್ತಿನಾದ್ಯಂತ ಭಯೋತ್ಪಾದನೆ ಮತ್ತು ಪ್ರತೀಕಾರದ ಕ್ರಮಗಳು ಹೆಚ್ಚಾಗುತ್ತಲೇ ಇವೆ.
ಎರಡು ಬಲಿಷ್ಠ ರಾಷ್ಟ್ರಗಳ ಪ್ರತಿಷ್ಠೆಗೆ ಅಥವಾ ಮಿಲಿಟರಿ ಸಾಮರ್ಥ್ಯದ ಮೇಲಾಟಕ್ಕೆ, ಅವುಗಳ ಅಡಕತ್ತರಿಯಲ್ಲಿ ಅಮಾಯಕರು ಸಿಲುಕುತ್ತಿದ್ದಾರೆ. ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರೂ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮಾತ್ರವಲ್ಲದೆ, ಆಯಾ ದೇಶಗಳಿಗೆ ಸೇರಿದ ಯೋಧರು ಕೂಡ, ತಮ್ಮ ಆಳುಗ ವ್ಯವಸ್ಥೆ ನೀಡುವ ಆದೇಶಗಳನ್ನು ಪಾಲಿಸುವ ಸಲುವಾಗಿ ಎದುರಾಳಿಗಳ ಗುಂಡುಗಳಿಗೆ ತಮ್ಮ ಗುಂಡಿಗೆಯನ್ನು ಒಡ್ಡಬೇಕಾಗಿ ಬರುತ್ತಿದೆ. ಪರಿಸ್ಥಿತಿ ಹೀಗಿರುವಾಗ ಸಹೃದಯಿಗಳು ಮತ್ತು ಶಾಂತಿಪ್ರಿಯರು ವಿಶ್ವಸಂಸ್ಥೆಯತ್ತ ಮುಖಮಾಡುವುದು ಸಹಜ ತಾನೇ? ಹೌದು, ಪ್ರಸ್ತುತ ರೂಪುಗೊಂಡಿರುವ ತ್ವೇಷಮಯ ಪರಿಸ್ಥಿತಿಯನ್ನು ತಹಬಂದಿಗೆ ತರುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಪರಿಣಾಮಕಾರಿ ಕ್ರಮಗಳು, ಕಾರ್ಯಚಟುವಟಿಕೆಗಳು ಮತ್ತು ನಿರ್ಧಾರಗಳ ಕುರಿತಾಗಿ ಶಾಂತಿಪ್ರಿಯರು ನಿರೀಕ್ಷಿಸುತ್ತಿದ್ದಾರೆ.
ಹೀಗಾಗಿ ವಿಶ್ವಸಂಸ್ಥೆಯು ಇನ್ನಾದರೂ ಮೈಕೊಡವಿಕೊಂಡು ಮೇಲೆ ಏಳಬೇಕಾಗಿದೆ. ಕೇವಲ ಬೆದರುಬೊಂಬೆಯ ರೀತಿಯಲ್ಲಿ ವರ್ತಿಸುವ ಬದಲಿಗೆ, ಪ್ರಸ್ತುತ ತಲೆದೋರಿರುವ ಯುದ್ಧದ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಗಮನಾರ್ಹವಾದ ಮತ್ತು ಗಂಭೀರ ಸ್ವರೂಪದ ಚರ್ಚೆ ಗಳಲ್ಲಿ ಅದು ತೊಡಗಿಸಿಕೊಳ್ಳಬೇಕಿದೆ. ತನ್ಮೂಲಕ, ತಾನು ಅಸ್ತಿತ್ವಕ್ಕೆ ಬಂದ ಆರಂಭದ ದಿನಗಳಲ್ಲಿ ತನಗಿದ್ದ ಮಹತ್ವ ಮತ್ತು ಗೌರವವನ್ನು ವಿಶ್ವಸಂಸ್ಥೆಯು ಮತ್ತೊಮ್ಮೆ ದಕ್ಕಿಸಿಕೊಳ್ಳಬೇಕಿದೆ.
ಭಿನ್ನ ಭಿನ್ನ ಚಿತ್ತಸ್ಥಿತಿಯ ಅಥವಾ ಧೋರಣೆಯ ಎರಡು ರಾಷ್ಟ್ರಗಳ ನಡುವಿನ ಯಾವುದೇ ತೆರನಾದ ಸಮಸ್ಯೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಗೆಹರಿಸುವುದು ನಮ್ಮಂಥ ಸಾಮಾನ್ಯರು ಅಂದುಕೊಂಡಷ್ಟು ಸುಲಭವಲ್ಲ ಎಂಬ ಮಾತನ್ನು ಒಪ್ಪೋಣ; ಆದರೆ ಆ ನಿಟ್ಟಿನಲ್ಲಿ ಪ್ರಯತ್ನಗಳೇ ಆಗದಿದ್ದರೆ ನಿರೀಕ್ಷಿತ ಸಕಾರಾತ್ಮಕ ಫಲಿತಾಂಶ ದಕ್ಕುವುದಾದರೂ ಹೇಗೆ? ಈ ಎಲ್ಲ ಸೂಕ್ಷ್ಮಗಳನ್ನು ಅರಿತು ವಿಶ್ವಸಂಸ್ಥೆಯು ಇನ್ನಾದರೂ ಅಖಾಡಕ್ಕೆ ಇಳಿಯಲಿ ಮತ್ತು ಜಗದ ಜನತೆಗೆ ಶಾಂತಿ ಮತ್ತು ನೆಮ್ಮದಿಯು ದೊರಕುವಂತಾಗಲು ಅದು ಕಟಿಬದ್ಧವಾಗಲಿ.