ನಮ್ಮ ಬೆಂಬಲ ರಾಷ್ಟ್ರಪ್ರೇಮಕ್ಕಾಗಿ, ಭಯೋತ್ಪಾದನೆಗಲ್ಲ
ಗಂಟಾಘೋಷ
ಗುರುರಾಜ್ ಗಂಟಿಹೊಳೆ
ಛಲ ಬಿಡದ ತ್ರಿವಿಕ್ರಮಬುದ್ಧಿಯ ಇಸ್ರೇಲ್ ಈ ಯುದ್ಧದಲ್ಲೂ ಗೆಲುವು ಸಾಧಿಸುವುದರಲ್ಲಿ ಸಂಶಯವಿಲ್ಲ. ಆದರೆ ಇಸ್ರೆಲ್‌ನ ಇಂದಿನ ಪರಿಸ್ಥಿತಿ ಹದಗೆಟ್ಟಿದೆ. ಜನರ ಆಕ್ರಂದನ ಮುಗಿಲು ಮುಟ್ಟಿದೆ. ಇಡೀ ದೇಶ ಬಾಂಬ್ ದಾಳಿಗೆ ಸಿಲುಕಿ ಕರಕಲಾಗುತ್ತಿದೆ. ಅಲ್ಲಿನ ಹೃದಯ ವಿದ್ರಾವಕ ಸನ್ನಿವೇಶಗಳು ಜಗತ್ತಿನ ನಾಗರಿಕ ಸಮಾಜವನ್ನು ಕಲಕಿವೆ.
ಈ ಹಿಂದೆ ರಷ್ಯಾ ಹಾಗೂ ಉಕ್ರೇನ್ ಯುದ್ಧವನ್ನು ನಾವು ನೋಡಿದ್ದೇವೆ. ಯುದ್ಧದ ಪರಿಣಾಮವಾಗಿ ಅವೆರಡೂ ದೇಶಗಳು ಸಾಕಷ್ಟು ಹಿನ್ನಡೆಯನ್ನು ಅನುಭವಿಸುತ್ತಿವೆ. ಆ ಯುದ್ಧದ ಸಂದರ್ಭದ ಸಾವು-ನೋವು, ಆಕ್ರಂದನ ಮನುಕುಲವನ್ನೇ ಬೆಚ್ಚಿ ಬೀಳಿಸುತ್ತಿವೆ. ಜಗತ್ತು ಆ ಯುದ್ಧದ ಭಯಾನಕತೆ ಯಿಂದ ಇನ್ನೂ ಹೊರಬರುವ ಮೊದಲೇ ಇನ್ನೊಂದು ಘೋರಯುದ್ಧ ಮನುಕುಲವನ್ನು ಕಲಕುತ್ತಿದೆ. ಹೌದು, ಅದು ಇಸ್ರೇಲ್ ಹಾಗೂ ಪ್ಯಾಲೆ ಸ್ತೀನ್ ಯುದ್ಧ. ಈಗಾಗಲೇ ಸಾಕಷ್ಟು ಜನ ಈ ಯುದ್ಧದ ಪರಿಣಾಮವಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಅದೆಷ್ಟೋ ಕಂದಮ್ಮಗಳು ಹಸಿವಿನಿಂದ ಬಳಲುತ್ತಿವೆ, ಸಾವು ಬದುಕಿನ ನಡುವೆ ಹೋರಾಡುತ್ತಿವೆ. ಅನೇಕ ಜನರು ಜೀವ ಉಳಿಸಿಕೊಳ್ಳಲು ಪರದಾಟ ನಡೆಸುತ್ತಿದ್ದಾರೆ. ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನಡುವಿನ ಈ ಕದನ ವಿಶ್ವ ಮಟ್ಟದಲ್ಲಿ ಒಂದು ಕರಾಳ ಅಧ್ಯಾಯಕ್ಕೆ ಸಾಕ್ಷಿಯಾಗಿದೆ. ಒಂದು ಮತ್ತು ಎರಡನೇ ಮಹಾ ಯುದ್ಧಗಳನ್ನು ನೋಡಿ ಸಾಕಷ್ಟು ದೇಶಗಳು ‘ಯುದ್ಧದ ಬಗ್ಗೆ ಯೋಚಿಸುವುದನ್ನು ಬಿಟ್ಟು ಶಾಂತಿಯಿಂದ ಬದುಕೋಣ’ ಎನ್ನುವ ಸಂಕಲ್ಪ ಮಾಡಿದ್ದವು. ಆದರೆ ಇಂದು ನಡೆಯುತ್ತಿರುವ ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ ಭಯಾನಕ ವಿಧ್ವಂಸ ಗಳಿಗೆ ಕಾರಣವಾಗುತ್ತಿದೆ.
ಒಂದು ಯುದ್ಧ ಇಡೀ ದೇಶದ ಚಿತ್ರಣವನ್ನೇ ಬದಲಿಸಿಬಿಡುತ್ತದೆ. ದೇಶ ದೇಶಗಳ ನಡುವೆ ಯುದ್ಧ ನಡೆದರೆ ಅಲ್ಲಿ ಬಲಿಯಾಗುವುದು ಅಪಾರ ಸೈನಿಕ ಬಳಗ ಹಾಗೂ ಆ ದೇಶಗಳ ಮುಗ್ಧ ಪ್ರಜೆಗಳು. ಈಗಾಗಲೇ ಅಪಾರ ಸಾವು-ನೋವುಗಳಿಗೆ ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ದೇಶಗಳು ಸಾಕ್ಷಿಯಾಗಿವೆ. ಗಾಜಾದಿಂದ ಇಸ್ರೇಲ್ ಮೇಲೆ ಸಾಕಷ್ಟು ರಾಕೆಟ್ ದಾಳಿ ಎಡಬಿಡದೆ ಮುಂದುವರಿದಿದೆ. ಹಮಾಸ್ ಉಗ್ರಗಾಮಿ ಸಂಘಟನೆ ಈಗಾಗಲೇ ೫,೦೦೦ಕ್ಕಿಂತಲೂ ಅಽಕ ರಾಕೆಟ್‌ಗಳನ್ನು ಇಸ್ರೇಲ್ ಮೇಲೆ ಉಡಾಯಿಸಿದೆ.
ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ದ್ವೇಷ ನಿನ್ನೆ ಮೊನ್ನೆಯದೇನಲ್ಲ. ಇದಕ್ಕೆ ೨೦೦ ವರ್ಷಗಳ ಇತಿಹಾಸ ವಿದೆ. ಮೊದಲನೇ ಮಹಾಯುದ್ಧದ ಸಮಯ, ಒಟ್ಟೋ ಮನ್ ಸಾಮ್ರಾಜ್ಯವನ್ನು ಸೋಲಿಸಿ ತದನಂತರ ಯೆಹೂದಿ ಅಲ್ಪಸಂಖ್ಯಾತರು ಮತ್ತು ಅರಬ್ ಬಹು ಸಂಖ್ಯಾತರು ವಾಸವಾಗಿದ್ದ ಪ್ಯಾಲೆಸ್ತೀನ್ ಮೇಲೆ ಬ್ರಿಟನ್ ತನ್ನ ಹಿಡಿತವನ್ನು ಸಾಧಿಸಿತು. ಪ್ಯಾಲೆಸ್ತೀನ್‌ನಲ್ಲಿ ಯೆಹೂದಿಗಳ ತಾಯ್ನಾಡನ್ನು ರಚಿಸುವ ಜವಾಬ್ದಾರಿ ಯೊಂದನ್ನು ಅಂತಾರಾ ಷ್ಟ್ರೀಯ ಸಮುದಾಯವು ಬ್ರಿಟನ್‌ಗೆ ನೀಡಿತು.
೧೯೨೦ ಹಾಗೂ ೧೯೪೦ರ ಸಂದರ್ಭ ದಲ್ಲಿ ಪ್ಯಾಲೆಸ್ತೀನ್‌ಗೆ ವಲಸೆ ಬರುವ ಯೆಹೂದಿಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿತು. ಯುರೋಪಿಯನ್ನ ರಿಂದ ನಡೆದ ಕಿರುಕುಳದಿಂದ ಯೆಹೂದಿಗಳು ಯುರೋಪ್‌ನಿಂದ ಪ್ಯಾಲೆಸ್ತೀನ್‌ಗೆ ವಲಸೆ ಬಂದು ಬಿಟ್ಟರು. ಇತ್ತ ೧೯೪೭ರಲ್ಲಿ ಯುನೈಟೆಡ್ ನೇಷನ್ಸ್ಯೆಹೂದಿ ಮತ್ತು ಅರಬ್ಬರಿಗೆ ಪ್ರತ್ಯೇಕವಾಗಿ ರಾಜ್ಯಗಳನ್ನು ವಿಂಗಡಣೆ ಮಾಡಲು ಮತಯಾಚನೆ ಪ್ರಾರಂಭ ಮಾಡಿತ್ತು. ಯೆಹೂದಿ ನಾಯಕತ್ವ ಈಯೋಜನೆಯನ್ನು ಸ್ವೀಕರಿಸಿದರೆ, ಅರಬ್ ಪಡೆಗಳು ತಿರಸ್ಕರಿಸಿಬಿಟ್ಟವು. ೧೯೪೮ರ ಸಂದರ್ಭದಲ್ಲಿ ಯೆಹೂದಿ ಹಾಗೂ ಅರಬ್ಬರ ಕದನವನ್ನು ಕೊನೆ ಗೊಳಿಸಲು ಸಾಧ್ಯವಾಗಲಿಲ್ಲ.
ಹಾಗೆಯೇ ಯೆಹೂದಿ ನಾಯಕರು ಇಸ್ರೇಲ್ ಸ್ಥಾಪನೆ ಬಗ್ಗೆ ಘೋಷಣೆ ಮೊಳಗಿಸಿದರು. ಆದರೆ ಈ ಘೋಷಣೆಗೆ ಪ್ಯಾಲೆಸ್ತೀನ್ ತೀವ್ರ ವಿರೋಧ ವ್ಯಕ್ತಪಡಿ ಸಿತು, ಅಷ್ಟೇ ಅಲ್ಲದೆ ಯುದ್ಧಕ್ಕೂ ಈ ಸನ್ನಿವೇಶ ನಾಂದಿ ಹಾಡಿತು. ೧೧ ಜುಲೈ ೨೦೦೦ರಂದು ಅಂದಿನ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ನೇತೃತ್ವದಲ್ಲಿ ಕ್ಯಾಂಪ್ ಡೇವಿಡ್ ಶೃಂಗಸಭೆಯನ್ನು ಕರೆಯಲಾಯಿತು. ಇಸ್ರೇಲ್ ಪ್ರಧಾನಮಂತ್ರಿ ಎಹುದ್ ಬರಾಕ್ ಹಾಗೂ ಪ್ಯಾಲೆಸ್ತೀನ್ ಪ್ರಾಧಿಕಾರ ಅಧ್ಯಕ್ಷ ಯಾಸೆರ್ ಅರಾಫತ್ ಮಾತುಕತೆಗೆ ಮುಂದಾದರು. ಈ ಮಾತುಕತೆ ಯಾವುದೇ ಶಾಂತಿ ಸೌಹಾರ್ದಕ್ಕೆ ಕಾರಣವಾಗದೆ ಮತ್ತೆ ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ಕದನ ಮುಂದುವರಿಯಲು ಹೇತುವಾಯಿತು. ಅಂದಿನಿಂದ ಪ್ರಾರಂಭವಾದ ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ಕದನ ಇದೀಗ ಮತ್ತೆಮರುಜೀವ ಪಡೆದುಕೊಂಡಿದೆ.
ಪ್ಯಾಲೆಸ್ತೀನ್ ಬಂಡುಕೋರರು ಮಾಡುತ್ತಿರುವ ಹಿಂಸೆ, ದೌರ್ಜನ್ಯಗಳನ್ನು ಕಂಡ ಜನರು ಈಗಾಗಲೇ ಅವರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಆದರೆ ಭಾರತದಲ್ಲಿ ಕಾಂಗ್ರೆಸ್ ಪಕ್ಷ ಮಾತ್ರ ಪ್ಯಾಲೆಸ್ತೀನಿಯರ ಪರವಾಗಿ ಮಾತನಾಡಲು ಪ್ರಾರಂಭಿಸಿದೆ. ಈ ಕಾಂಗ್ರೆಸ್ ಪಕ್ಷಕ್ಕೆ ದೇಶದ್ರೋಹಿಗಳೆಲ್ಲರೂ ದೇಶಪ್ರೇಮಿಗಳಾಗಿ ಕಾಣಿಸುವುದು ಇದೇ ಮೊದಲೇನಲ್ಲ. ಎಂದಿನಿಂದಲೂ ದೇಶದ್ರೋಹಿಗಳ ಪೋಷಣೆ ಮಾಡುತ್ತಾ ಬಂದಿರುವ ಕಾಂಗ್ರೆಸ್ ಪಕ್ಷ ಇದೀಗ ಪ್ಯಾಲೆಸ್ತೀನ್ ಉಗ್ರರಿಗೆ ಬೆಂಬಲ ನೀಡಿರುವುದರಲ್ಲಿ ಆಶ್ಚರ್ಯವೇನಿಲ್ಲ.
ಇಸ್ರೇಲ್ ವಿರುದ್ಧ ಸಮರ ಸಾರಲು ಹಮಾಸ್ ಪಡೆಗಳು ವೆಸ್ಟ್ ಬ್ಯಾಂಕ್ ಹಾಗೂ ಅರಬ್ ಹೋರಾಟಗಾರರಿಗೆ ಆಹ್ವಾನ ನೀಡಿವೆ. ಗಾಜಾದಲ್ಲಿ ವಾಸವಾಗಿ ರುವ ಜನಗಳು ಈಗಾಗಲೇ ನೀರು, ಆಹಾರ ಸಿಗದೇ ಪರದಾಡುವ ಸ್ಥಿತಿಗೆ ತಲುಪಿದ್ದಾರೆ. ಇತ್ತ ಇಸ್ರೇಲ್ ಹಮಾಸ್ ಉಗ್ರರು ಆಯುಧಗಳನ್ನು ಪಡೆಯದೇ ಇರುವ ಹಾಗೆ ನೋಡಿಕೊಳ್ಳಲು ಗಾಜಾದ ಗಡಿಭಾಗದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದೆ. ಹಮಾಸ್ ತನ್ನ ಕ್ರೂರ ಬುದ್ಧಿಯನ್ನು ಪದೇ ಪದೆ ತೋರಲು ಪ್ರಾರಂಭ ಮಾಡಿದ್ದು, ಯುದ್ಧ ದಿನೇ ದಿನೆ ಉಗ್ರಸ್ವರೂಪವನ್ನು ಪಡೆಯುತ್ತಿದೆ, ಸಾವಿನ ಸಂಖ್ಯೆ ಜಾಸ್ತಿಯಾಗುತ್ತಿದೆ. ಇಸ್ರೇಲ್ ದೇಶವು ಹಿಂದೆಂದೂಕಂಡರಿಯದಂಥ ದುರಂತಕ್ಕೆ ಸಾಕ್ಷಿಯಾಗುತ್ತಿದೆ.
ಯುದ್ಧದ ಪರಿಣಾಮಗಳು ತೀವ್ರಗೊಳ್ಳುತ್ತಿದ್ದಂತೆ, ಯುದ್ಧಪ್ರದೇಶದಲ್ಲಿರುವ ಜನರು ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳನ್ನು ಹುಡುಕುತ್ತಿದ್ದಾರೆ.ಇಸ್ರೇಲ್ ಮೇಲಿನ ಹಮಾಸ್ ದಾಳಿಗೆ ಇಸ್ರೇಲ್ ದೇಶದ ಶತ್ರುರಾಷ್ಟ್ರ ಇರಾನ್ ಈಗಾಗಲೇ ಸಂಭ್ರಮ ವ್ಯಕ್ತಪಡಿಸಿದೆ. ಮನುಕುಲವೇ ಅಸಹ್ಯಪಡುವಂಥ ಘಟನೆಗಳು ಕಣ್ಣ ಮುಂದೆಯೇ ನಡೆಯುತ್ತಿದ್ದರೂ ಇರಾನ್ ಮಾತ್ರ ತನ್ನ ಆಂತರಿಕ ಲಾಭಕ್ಕಾಗಿ ಉಗ್ರರಿಗೆ ಬೆಂಬಲ ಕೊಡುತ್ತಿದೆ. ಇರಾನ್ ಮುಂದಿನ ದಿನಗಳಲ್ಲಿ ಇದಕ್ಕೆ ಬೆಲೆ ತೆರಬೇಕಾಗುವುದು ನಿಸ್ಸಂಶಯ.
ಈ ಘೋರಯುದ್ಧಕ್ಕೆ ಸಾಕಷ್ಟು ಕಾರಣಗಳನ್ನು ನೀಡಬಹುದು. ಈ ಹಿಂದೆ ೧೯೬೭ರ ಸಂದರ್ಭದಲ್ಲಿ ಸಿರಿಯಾದ ಬೆಂಬಲ ಪಡೆದ ಪ್ಯಾಲೆಸ್ತೀನ್ ಗೆರಿಲ್ಲಾ ಪಡೆ ಇಸ್ರೇಲ್ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ಅರಬ್ ರಾಷ್ಟ್ರಗಳು ಬೆಂಬಲ ಸೂಚಿಸಿದ್ದವು. ಇದಕ್ಕೆ ಕೆರಳಿ ಕೆಂಡಾಮಂಡಲವಾದ ಇಸ್ರೇಲ್ ದೊಡ್ಡ ಪ್ರತಿದಾಳಿಯನ್ನು ನಡೆಸಿತ್ತು. ೧೯೬೭ರಲ್ಲಿ ೬ ದಿನಗಳ ಕಾಲ ನಡೆದ ಯುದ್ಧದಲ್ಲಿ ಇಸ್ರೇಲ್, ಪೂರ್ವ ಜೆರುಸಲೇಂ ಹಾಗೂ ವೆಸ್ಟ್ ಬ್ಯಾಂಕ್ ಪ್ರದೇಶಗಳನ್ನು ವಶಕ್ಕೆ ಪಡೆದಿತ್ತು. ಇದೇ ಕಾರಣಕ್ಕೆ ಜೆರುಸಲೇಂ ಅನ್ನು ಪುನಃ ತನ್ನ ವಶಕ್ಕೆ ಪಡೆಯಲೇಬೇಕೆಂದು ಪ್ಯಾಲೆಸ್ತೀನ್ ಪದೇ ಪದೆ ಇಸ್ರೇಲ್ ಜತೆ ಸಂಘರ್ಷ ಮಾಡುತ್ತಲೇ ಇರುತ್ತದೆ. ಈಗಲೂ ಇದೇ ವಿಚಾರಕ್ಕೆ ಹಮಾಸ್ ಉಗ್ರರ ಪಡೆ ಇಸ್ರೇಲ್ ಜತೆ ಸಮರ ಪ್ರಾರಂಭಿಸಿದೆ.
ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನಡುವಿನ ಯುದ್ಧ ವಿಶ್ವ ಸಮುದಾಯವನ್ನು ಸಾಕಷ್ಟು ಚಿಂತೆಗೀಡು ಮಾಡಿದೆ. ಭಾರತದೆಲ್ಲೆಡೆ ತುಷ್ಟೀಕರಣ ರಾಜಕಾರಣಮಾಡುವ ತಥಾಕಥಿತ ನಾಯಕರು ಇಂಥ ಮತಾಂಧತೆ ಮತ್ತು ಹಿಂಸಾಚಾರವನ್ನು ನೋಡಿ ಇನ್ನಾದರೂ ಬುದ್ಧಿ ಕಲಿಯಬೇಕು. ಈ ಹಿಂದೆ ಅಫ್ಘಾನಿ ಸ್ತಾನದಲ್ಲಿ ನಡೆದ ಉಗ್ರರ ಅಟ್ಟಹಾಸವನ್ನು ಇಡೀ ಜಗತ್ತು ನೋಡಿದೆ. ತಮ್ಮನ್ನು ಶಾಂತಿದೂತರೆಂದು ಕರೆದುಕೊಂಡು ವಿಶ್ವಕ್ಕೆ ಶಾಂತಿಪಾಠ ಮಾಡು ವವರು ಜಗತ್ತಿನಾದ್ಯಂತ ಭಯೋತ್ಪಾದಕತೆಯನ್ನು ಬಿತ್ತುತ್ತಿರುವುದನ್ನು ಓಲೈಕೆ ರಾಜ ಕಾರಣದವರು ಅರ್ಥಮಾಡಿಕೊಳ್ಳಬೇಕು. ಈಗಾಗಲೇ ಭಾರತ ಮಾತ್ರವಲ್ಲದೆ ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ, ಫ್ರಾನ್ಸ್, ನಾರ್ವೆ ಮೊದಲಾದ ದೇಶಗಳು ಇಸ್ರೇಲ್‌ಗೆ ಬೆಂಬಲ ನೀಡಿವೆ.
ಪ್ರಧಾನಿ ನರೇಂದ್ರ ಮೋದಿಯವರು ‘ಇಸ್ರೇಲ್‌ನ ಮುಗ್ಧ ಪ್ರಜೆ ಗಳೊಂದಿಗೆ ನಾವಿದ್ದೇವೆ’ ಎಂಬ ಭಾವನಾತ್ಮಕ ಸಂದೇಶ ನೀಡಿದ್ದಾರೆ. ಇಸ್ರೇಲ್ ಏನೋ ಶತ್ರುರಾಷ್ಟ್ರಗಳನ್ನು ಸುತ್ತ ಇಟ್ಟುಕೊಂಡು, ದೇಶಪ್ರೇಮ ಎಂಬ ಇಂಧನ ಮಾತ್ರ ದಿಂದ ಜಗತ್ತಿಗೆ ಮಾದರಿಯಾಗಿ ಬದುಕುತ್ತಿದೆ. ಅದು ಇಂಥ ದಾಳಿಗಳನ್ನು ಹಿಂದೆ ಸಾಕಷ್ಟು ಬಾರಿ ಕಂಡಿದೆ. ತನ್ನನ್ನು ಕೆಣಕಿದವರಿಗೆ ಮುಟ್ಟಿನೋಡಿಕೊಳ್ಳುವಂಥ ಪಾಠ ಗಳನ್ನೂ ಕಲಿಸಿದೆ. ಭಯೋತ್ಪಾದಕ ರಾಷ್ಟ್ರಗಳ ನಡುವೆಸಾಕಷ್ಟು ಯುದ್ಧಗಳ ಕುಲುಮೆಯಲ್ಲಿ ಬೆಂದು ಗಟ್ಟಿಯಾದ ಇಸ್ರೇಲ್ ಇದೀಗ ಮತ್ತೊಂದು ಸವಾಲಿಗೆ ಎದೆ ಸೆಟೆದಿದೆ.
ಛಲ ಬಿಡದ ತ್ರಿವಿಕ್ರಮಬುದ್ಧಿಯ ಇಸ್ರೇಲ್ ಈ ಯುದ್ಧದಲ್ಲೂ ಗೆಲುವು ಸಾಽಸುವುದರಲ್ಲಿ ಸಂಶಯವಿಲ್ಲ. ಆದರೆ ಇಸ್ರೆಲ್‌ನ ಇಂದಿನ ಪರಿಸ್ಥಿತಿ ಹದಗೆಟ್ಟಿದೆ.ಜನರ ಸಾವು-ನೋವು, ಆಕ್ರಂದನ ಮುಗಿಲು ಮುಟ್ಟಿವೆ. ಇಡೀ ದೇಶ ಬಾಂಬ್‌ದಾಳಿಗೆ ಸಿಲುಕಿ ಕರಕಲಾಗುತ್ತಿದೆ. ಅಲ್ಲಿನ ಹೃದಯವಿದ್ರಾವಕ ಸನ್ನಿವೇಶಗಳು ಜಗತ್ತಿನ ನಾಗರಿಕ ಸಮಾಜವನ್ನು ಕಲಕಿವೆ. ಉದ್ಯೋಗವನ್ನು ಅರಸಿಕೊಂಡು ಇಸ್ರೇಲ್‌ಗೆ ತೆರಳಿದ ಲಕ್ಷಾಂತರ ಭಾರತೀಯರೂ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತ ಜೀವ ಕೈಯಲ್ಲಿ ಹಿಡಿದು ಬದುಕುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರೆಲ್ಲರಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸ ವಾಗಬೇಕು. ಕೇವಲ ಭಾರತೀಯರಿಗಷ್ಟೇ ಅಲ್ಲದೆ ಇಡೀ ಇಸ್ರೇಲ್ ದೇಶದ ಅಮಾಯಕ ಪ್ರಜೆಗಳ ಉಳಿವಿಗಾಗಿ ನಮ್ಮ ಪ್ರಾರ್ಥನೆಗಳು ಸಲ್ಲಬೇಕು.
ರಾಜಕಾರಣವನ್ನು ಬದಿಗಿಟ್ಟು ಎಲ್ಲ ನಾಯಕರೂ ಒಟ್ಟಾಗಿ ಮುಗ್ಧಜನರ ಹಿತರಕ್ಷಣೆಯತ್ತ ಗಮನ ಹರಿಸಬೇಕು. ಈಗಾಗಲೇ ಇಸ್ರೇಲ್‌ನಲ್ಲಿ ವಾಸವಾಗಿ ರುವ ನಮ್ಮ ಬೈಂದೂರು ಕ್ಷೇತ್ರದ ಯುವಕರನ್ನು ಮಾತನಾಡಿಸಿ ಅವರ ಸುರಕ್ಷತಾ ಕ್ರಮಗಳ ಬಗ್ಗೆ ಗಮನ ಹರಿಸಿದ್ದೇವೆ. ಈ ಯುದ್ಧದಲ್ಲಿ ಸಾವು ನೋವಿನ ಪ್ರಕರಣಗಳು ಹೆಚ್ಚಾಗದಿರಲಿ, ಜನ ಸಾಮಾನ್ಯರು ಆದಷ್ಟು ಬೇಗ ಈ ಯುದ್ಧದಿಂದ ಹೊರ ಬಂದು ಇಸ್ರೇಲ್ ಮೊದಲಿನಂತಾಗಲಿ ಎಂದು ನಾವೆಲ್ಲರೂ ಹಾರೈಸೋಣ. ನಮ್ಮ ಬೆಂಬಲ ಕೇವಲ ರಾಷ್ಟ್ರಪ್ರೇಮಕ್ಕಾಗಿ, ಭಯೋತ್ಪಾದನೆಗಲ್ಲ ಎಂಬುದನ್ನು ಪುನರುಚ್ಚರಿಸೋಣ.