ಏಕರೂಪಿ ನಿಯಮ ಜಾರಿ ಅಸಾಧ್ಯವೇ ?
ವಿಶ್ಲೇಷಣೆ
ರಮಾನಂದ ಶರ್ಮಾ
ಒಂದು ದೇಶ, ಒಂದು ತೆರಿಗೆ, ಒಂದು ಪಡಿತರ ಚೀಟಿ ಎನ್ನುವ ನಾಡಿನಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕಾನೂನು ಮತ್ತು ನೀತಿ-ನಿಯಮಾವಳಿ ಇವೆ. ಇದೇ ಈ ದೇಶದ ವೈಚಿತ್ರ್ಯ. ವೇದಿಕೆಯಲ್ಲಿ, ಚರ್ಚಾಗೋಷ್ಠಿಯಲ್ಲಿ ಇದನ್ನು ವೈಭವೀಕರಿಸಿ ಅಟ್ಟಕ್ಕೇರಿಸಲಾಗುತ್ತದೆ. ಅದರೆ, ವಾಸ್ತವದಲ್ಲಿ ‘ದೊರೆ ಗೊಂದಾದರೆ, ಪ್ರಜೆಗೊಂದು’ ಎಂಬಂಥ ನೀತಿಗಳನ್ನು ಧಾರಾಳವಾಗಿ ಕಾಣಬಹುದಾಗಿದೆ.
ಹಾಗೆಯೇ ಇವುಗಳ ಅಳವಡಿಕೆಯಲ್ಲೂ ಏಕರೂಪತೆ ಕಾಣುವುದಿಲ್ಲ, ಒಬ್ಬೊಬ್ಬರಿಗೆ ಒಂದೊಂದು ಮಾನದಂಡ. ಆಡಳಿಗಾರರು ಮತ್ತು ಜನಪ್ರತಿನಿಧಿಗಳು ಇದನ್ನು ತಮ್ಮ ಅನುಕೂಲಕ್ಕೆ ಚೆನ್ನಾಗಿ ಬಳಸಿಕೊಳ್ಳುತ್ತಾರೆ. ದೇಶದಲ್ಲಿ ಯಾವ ಸೇವೆಯನ್ನೂ ಉಚಿತವಾಗಿ ನೀಡಲಾಗದು, ಪ್ರತಿಯೊಂದಕ್ಕೂ ಶುಲ್ಕನೀಡಿಯೇ ಪಡೆಯಬೇಕು ಎಂಬ ೮೦ರ ದಶಕದ ಜಾಗತೀಕರಣ, ಉದಾರೀಕರಣ ಮತ್ತು ಆರ್ಥಿಕ ಸುಧಾರಣಾ ಕ್ರಮದ ಅಂಗವಾಗಿ ದೇಶದಲ್ಲಿ ‘ರಸ್ತೆ ಟೋಲ್’ ಅನ್ನು ಜಾರಿಮಾಡಲಾಯಿತು. ರಸ್ತೆ ಅಭಿವೃದ್ಧಿ ನಿಟ್ಟಿನಲ್ಲಿ ಬಳಕೆದಾರರ ಪಾಲೂ ಇರಲಿ, ತನ್ನ ಮೇಲಿನ ಹೊರೆ ಕೊಂಚ ಕಡಿಮೆಯಾಗಲಿ ಎಂಬುದು ಸರಕಾರದ ಉದ್ದೇಶ.
೨೦೨೩ರ ಏಪ್ರಿಲ್ ಮಾಸವೊಂದರ ಅಂಕಿ-ಅಂಶಗಳನ್ನೇ ಪರಿಗಣಿಸಿದರೆ, ದಿನಕ್ಕೆ ಸರಾಸರಿ ೧.೧೬ ಕೋಟಿ ರು.ನಂತೆ ಇದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಒಟ್ಟು ೧೯೩.೦೨ ಕೋಟಿ ರು. ಸಂಗ್ರಹವಾಗಿದೆಯಂತೆ. ಗುಣಮಟ್ಟದ ರಸ್ತೆಯನ್ನು ನೀಡುವಲ್ಲಿ ಈ ವ್ಯವಸ್ಥೆಯ ಪಾಲು ಮುಖ್ಯ ಎನ್ನುವು ದರಲ್ಲಿ ಎರಡು ಮಾತಿಲ್ಲ. ಆದರೆ, ಈ ವ್ಯವಸ್ಥೆಯಲ್ಲಿ ಟೋಲ್‌ಶುಲ್ಕ ನೀಡುವುದರಿಂದ ವಿನಾಯತಿ ಪಡೆದವರ ಪಟ್ಟಿ ಹೆದ್ದಾರಿಯಷ್ಟು ಉದ್ದವಿದ್ದರೆ, ಶುಲ್ಕ ನೀಡುವವರ ಪಟ್ಟಿ ಹಳ್ಳಿದಾರಿಯಷ್ಟು ಉದ್ದವಿದೆ ಎನ್ನಲಾಗುತ್ತಿದೆ.
ಗುಣಮಟ್ಟದ ರಸ್ತೆಗಳನ್ನು ಬಳಸುವವರೆಲ್ಲರೂ ಶುಲ್ಕ ನೀಡುವಂತಾದರೆ, ಇಂಥ ಮತ್ತಷ್ಟು ಯೋಜನೆಗಳನ್ನು ಕೈಗೊಳ್ಳಲು ಆ ಶುಲ್ಕಸಂಗ್ರಹ ಸಾಕಾಗ ಬಹುದು ಎಂಬುದು ಕೆಲ ಹೆದ್ದಾರಿ ತಜ್ಞರ ಅಂದಾಜು. ಸಾಂವಿಧಾನಿಕ ಹುದ್ದೆಯಲ್ಲಿರುವವರಿಗೆ, ಆಂಬುಲೆನ್ಸ್‌ಗಳಿಗೆ ಇಂಥ ವಿನಾಯತಿ ನೀಡುವುದರಲ್ಲಿ ಅರ್ಥವಿದೆ; ಆದರೆ ಜನಪ್ರತಿನಿಧಿಗಳು, ಸರಕಾರಿ ಸೇವೆಯಲ್ಲಿರುವವರು, ವಿವಿಧ ವಿಐಪಿಗಳು, ಪ್ರಶಸ್ತಿ ವಿಜೇತರನ್ನು ಈ ಪಟ್ಟಿಗೆ ಸೇರಿಸಿರುವುದು ಯಾವ ನ್ಯಾಯ? ಇವರೆಲ್ಲಾ ರಸ್ತೆ ಟೋಲ್ ನೀಡಲಾಗದಷ್ಟು ಅಸಮರ್ಥರೇ? ಈ ದೇಶದಲ್ಲಿ ಪ್ರತಿಯೊಬ್ಬನೂ ಏನಾದರೊಂದು ರೀತಿಯಲ್ಲಿ ಸಾರ್ವಜನಿಕ/ಸಮಾಜ ಸೇವೆಯಲ್ಲಿ ತೊಡಗಿರುತ್ತಾನೆ; ಆದರೆ ಕೆಲವರಿಗೆ ಮಾತ್ರವೇ ಇಂಥ ರಿಯಾಯತಿ ಏಕೆ? ಸಮಾಜಸೇವೆಯಲ್ಲಿ ತಾವು ತೊಡಗಿರುವುದರಿಂದ ತಮಗೂ ಈ ವಿನಾಯತಿ ನೀಡಬೇಕೆಂದು ಕೆಲ ಕಾರ್ಯಕ್ಷೇತ್ರಗಳವರು ಆಗ್ರಹಿಸಿರುವುದಿದೆಯಂತೆ.
ಒಂದೊಮ್ಮೆ ಇದಕ್ಕೆ ಸಮ್ಮತಿಸಿದರೆ, ಇಂಥ ವಿನಾಯತಿ ಕೇಳುವವರ ಪಟ್ಟಿ ಹನುಮಂತನ ಬಾಲದಂತೆ ಬೆಳೆಯಬಹುದು. ದುಡಿಯುವ ವರ್ಗಕ್ಕೆ ನಿವೃತ್ತಿ ನಂತರದ ನೆಮ್ಮದಿಯ ಜೀವನಕ್ಕಾಗಿ ಪಿಂಚಣಿ ವ್ಯವಸ್ಥೆಯಿದೆ. ಆದರೆ ಇದರಲ್ಲೂ ದ್ವಂದ್ವನೀತಿ. ಕೆಲವರಿಗೆ ಪಿಂಚಣಿ ಮತ್ತು ಭವಿಷ್ಯನಿಧಿ ಎರಡೂ ಇದ್ದರೆ, ಕೆಲವರಿಗೆ ಭವಿಷ್ಯನಿಧಿ ಮಾತ್ರ ಇರುತ್ತದೆ. ಕೆಲವರಿಗೆ ಭವಿಷ್ಯನಿಧಿಯಲ್ಲಿ ಉದ್ಯೋಗಿಗಳ ಕೊಡುಗೆಯ ಪಾಲು ಮಾತ್ರ ಇರುತ್ತದೆ, ಉದ್ಯೋಗ ದಾತರದ್ದು ಇರುವುದಿಲ್ಲ. ಪ್ರತಿ ವೇತನ ಪರಿಷ್ಕರಣೆಯ ಸಂಗಡ ಕೆಲವರಿಗೆ ಪಿಂಚಣಿಯೂ ಹೆಚ್ಚಳಗೊಂಡರೆ, ಮತ್ತೆ ಕೆಲವರು ಇದಕ್ಕಾಗಿ ಹೋರಾಡ ಬೇಕಾಗುತ್ತದೆ.
ಕೆಲವು ಪಿಂಚಣಿದಾರರಿಗೆ ವಾರ್ಷಿಕವಾಗಿ ತುಟ್ಟಿಭತ್ಯೆ ಹೆಚ್ಚಾದರೆ, ಮತ್ತೆ ಕೆಲವರಿಗೆ ಅರ್ಧವಾರ್ಷಿಕವಾಗಿ. ಪಿಂಚಣಿ ಲೆಕ್ಕ ಹಾಕುವಾಗ ಕೆಲವರಿಗೆ ವಿಶೇಷ ಭತ್ಯೆಯನ್ನು ಲೆಕ್ಕಕ್ಕೆ ತೆಗೆದುಕೊಂಡರೆ, ಕೆಲವರಿಗೆ ನಿರಾಕರಿಸಲಾಗುತ್ತದೆ. ಕೆಲವು ವರ್ಗದವರಿಗೆ ನಿರಂತರವಾಗಿ ಪಿಂಚಣಿ ಹೆಚ್ಚಾಗುತ್ತಾ ಹೋದರೆ, ಕೆಲವರಿಗೆ ಆರಂಭದಿಂದ ಕೊನೆಯವರೆಗೂ ಒಂದೇ ಪಿಂಚಣಿ. ಹಲವರಿಗೆ ಪಿಂಚಣಿಯೇ ಇಲ್ಲ. ಹೀಗೆ ಎದ್ದುಕಾಣುವಂತಿರುವ ತಾರತಮ್ಯವು ನ್ಯಾಯಾ ಲಯಗಳಲ್ಲಿ ಸಮರಕ್ಕೆ ಕಾರಣವಾಗುತ್ತಿರುವುದು ಬೇರೆ ಮಾತು. ವಿಚಿತ್ರವೆಂದರೆ, ಸರಕಾರಿ ನೌಕರರು ಪಿಂಚಣಿ ಪಡೆಯಬೇಕೆಂದರೆ ಕನಿಷ್ಠ ೨೦ ವರ್ಷ ಸೇವೆ ಮಾಡಿರಬೇಕು; ಆದರೆ ಜನಪ್ರತಿನಿಧಿ ಕೇವಲ ೫ ವರ್ಷದ ಸೇವೆ ಮಾಡಿದರೆ ಸಾಕು!
ಆದಾಯ ತೆರಿಗೆ ವಿಷಯದಲ್ಲೂ ಅವರಿಗೊಂದಾದರೆ, ಜನ ಸಾಮಾನ್ಯರಿಗೆ ಮತ್ತೊಂದು ನಿಯಮ. ದುಡಿಯುವ ವರ್ಗದವರಿಗೆ ಅವರ ದುಡಿಮೆಯ ಕೊನೆಯ ರುಪಾಯಿವರೆಗೂ ಲೆಕ್ಕಹಾಕಿ ತೆರಿಗೆ ವಿಧಿಸಿದರೆ, ಜನಪ್ರತಿನಿಧಿಗಳಿಗೆ ಅವರಿಗೆ ನೀಡುವ ಸಂಬಳಕ್ಕೆ ಮಾತ್ರ ತೆರಿಗೆ; ಭತ್ಯೆಗಳಿಗೆ ತೆರಿಗೆ ಇರುವುದಿಲ್ಲ. ಕೆಲ ರಾಜ್ಯಗಳಲ್ಲಿ ಜನಪ್ರತಿನಿಧಿಗಳು ನೀಡುವ ತೆರಿಗೆಯನ್ನು ಅಲ್ಲಿ ಸರಕಾರವು ಅವರಿಗೆ ನಂತರ ಮರಳಿಸುತ್ತದಂತೆ. ಉತ್ತರ ಪ್ರದೇಶದಲ್ಲಿ ೧೯೮೧ರಿಂದತೀರಾ ಇತ್ತೀಚಿನವರೆಗೆ ಮುಖ್ಯಮಂತ್ರಿ ಮತ್ತು ಇತರ ಮಂತ್ರಿಗಳ ಆದಾಯಕರ ಹೊರೆಯನ್ನು ಅಲ್ಲಿನ ಸರಕಾರವೇ ಭರಿಸುತ್ತಿತ್ತಂತೆ. ಯೋಗಿ ಆದಿತ್ಯ ನಾಥರ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಇದನ್ನು ನಿಲ್ಲಿಸಲಾಗಿದೆಯಂತೆ.
ಜನಪ್ರತಿನಿಧಿಗಳ ಸೌಲಭ್ಯ ಹೆಚ್ಚಿಸುವ ವಿಧೇಯಕಗಳು ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಯಾವುದೇ ಚರ್ಚೆಯಿಲ್ಲದೆ ಸರಾಗವಾಗಿ ಧ್ವನಿಮತದಿಂದಅನುಮೋದನೆಗೊಳ್ಳುತ್ತವೆ. ಆದರೆ ದುಡಿಯುವ ವರ್ಗ ತನ್ನ ನ್ಯಾಯಸಮ್ಮತ ಬೇಡಿಕೆಗಳಿಗಾಗಿ ಹೋರಾಟ ಮಾಡಿ, ದೈನಂದಿನ ಜೀವನ ಅಸ್ತವ್ಯಸ್ತ ಗೊಂಡಿದ್ದಕ್ಕೆ ಸಾರ್ವಜನಿಕರು ಹೋರಾಟಗಾರರ ಮೇಲೆ ಆಕ್ರೋಶ ವ್ಯಕ್ತಪಡಿಸಿದ ನಂತರವಷ್ಟೇ ಸರಕಾರ ಕಣ್ಣು ತೆರೆಯುವುದು, ಸಮಸ್ಯೆಯೇನೆಂದು ವಿಚಾರಿಸುವುದು. ದುಡಿಯುವ ವರ್ಗವನ್ನು ‘ಆಸ್ತಿ’ ಎಂಬುದಕ್ಕೆ ಬದಲಾಗಿ ‘ಹೊರೆ’ ಎಂದು ಪರಿಗಣಿಸಲಾಗುತ್ತದೆ.
ಇವರ ಯಾವುದೇ ಬೇಡಿಕೆಗೆ ಸರಕಾರದ ಸಹಾನುಭೂತಿ ಅಷ್ಟಕ್ಕಷ್ಟೇ. ಅದರಲ್ಲೂ ಹಣಕಾಸು ಸಂಬಂಧಿತ ಬೇಡಿಕೆ ಆಗಿಬಿಟ್ಟರಂತೂ ಅದನ್ನು ಮಹಾ ಪರಾಧ ಎಂದು ಭಾವಿಸಲಾಗುತ್ತದೆ ಎಂದು ಕಾರ್ಮಿಕ ಸಂಘಗಳು ಆರೋಪಿಸುತ್ತವೆ. ಶ್ರಮಿಕರ ಬೇಡಿಕೆಗಳನ್ನು ಅಭ್ಯಸಿಸದೇ, ಅದರ ಹಿಂದಿನ ಕಾರಣ ಅರಿಯದೇ ಅವರನ್ನು ಖಳನಾಯಕರಂತೆ ಬಿಂಬಿಸುವ ಪ್ರಯತ್ನ ನಡೆಯುತ್ತದೆ. ಅವರು ಎತ್ತಿದ ಸಮಸ್ಯೆಗಳಿಗೆ ತೇಪೆಹಾಕಲಾಗುತ್ತದೆಯೇ ವಿನಾ, ಅವನ್ನು ಪೂರ್ಣ ಪರಿಹರಿಸುವ/ತಾರ್ಕಿಕ ಅಂತ್ಯ ನೀಡುವ ಪ್ರಾಮಾಣಿಕ ಯತ್ನವಾಗುವುದಿಲ್ಲ.
ಹಣದುಬ್ಬರದ ಬಿಸಿಯನ್ನು ತಡೆಯಲಾಗದೆ ದುಡಿಯುವ ವರ್ಗವು ಪರಿಹಾರ ಕೇಳಿದರೆ, ಅಂಥ ಬೇಡಿಕೆಯನ್ನು ಅಭ್ಯಸಿಸಲು ಒಂದು ಸಮಿತಿ, ಅದರ ಶಿಫಾರಸುಗಳನ್ನು ವಿಶ್ಲೇಷಿಸಲು ಇನ್ನೊಂದು ಸಮಿತಿ ಹೀಗೆ ಕಾಲಹರಣ ಮಾಡಲಾಗುತ್ತದೆ. ರಾಜ್ಯ ಸರಕಾರಿ ನೌಕರರಿಗಾಗಿ ಇರುವ ಏಳನೇ ವೇತನ ಆಯೋಗವು ತನ್ನ ವರದಿಯನ್ನು ಸಲ್ಲಿಸುವುದಿನ್ನೂ ಬಾಕಿಯಿದೆ. ವರದಿ ಸಲ್ಲಿಕೆಯಾದ ನಂತರ ಅದರ ಸಾಧಕ-ಬಾಧಕಗಳನ್ನು ತಿಳಿಯಲು ಇನ್ನೊಂದು ಸಮಿತಿಯ ರಚನೆಯಾಗುತ್ತದೆ. ಅದು ನೌಕರರಿಗೆ ತೃಪ್ತಿಯಾಗುವುದಿಲ್ಲ ಎಂಬುದು ಬೇರೆ ಮಾತು. ಇತಿಹಾಸದ ಪುಟಗಳನ್ನು ತೆರೆದಾಗ ಇಂಥ ಸಾಕಷ್ಟುಪ್ರಹಸನಗಳು ಧುತ್ತೆಂದು ಕಣ್ಣಮುಂದೆ ಬರುತ್ತವೆ.
ನಿಯಮಗಳಲ್ಲಿನ ಇಂಥ ತಾರತಮ್ಯ ಆರ್ಥಿಕ ವಿಷಯಕ್ಕಷ್ಟೇ ಸೀಮಿತವಾಗಿಲ್ಲ. ಕೆಲವು ದೇವಾಲಯಗಳಲ್ಲಿ ಕೂಡ ವಿಐಪಿಗಳಿಗೆ ವಿಶೇಷ ದರ್ಶನ ವ್ಯವಸ್ಥೆ ಇರುತ್ತದೆ. ಜನಸಾಮಾನ್ಯರು ಸರತಿ ಸಾಲಿನಲ್ಲಿ ತಾಸುಗಟ್ಟಲೆ ನಿಂತು ಕಾಲುನೋವು, ಮಂಡಿನೋವನ್ನು ಸಹಿಸಿಕೊಂಡು ದೇವರ ದರ್ಶನಕ್ಕೆ ಕಾಯು ತ್ತಿರುವಾಗ, ವಿಐಪಿಗಳು ದರ್ಶನ ಮುಗಿಸಿ ಕಾರು ಹತ್ತುತ್ತಿರುತ್ತಾರೆ. ಕ್ರಿಕೆಟ್ ಪಂದ್ಯಾವಳಿ ಸಂದರ್ಭದಲ್ಲಿ ಕ್ರೀಡಾಭಿಮಾನಿಗಳು ಹಗಲು-ರಾತ್ರಿ, ಚಳಿ-ಮಳೆ-ಬಿಸಿಲು ಎನ್ನದೆ ಟಿಕೆಟ್‌ಗೆ ಕಾಯುವಾಗ, ಗಮನಾರ್ಹ ಸಂಖ್ಯೆಯ ಟಿಕೆಟ್‌ಗಳು ವಿಐಪಿ ಪ್ರೇಕ್ಷಕರ ಹೆಸರಿನಲ್ಲಿ ಬ್ಲಾಕ್ ಆಗುತ್ತಿರುತ್ತವೆ. ಜನಸಾಮಾನ್ಯರು ಅಪರಾಧ ಎಸಗಿದರೆ ಕೂಡಲೇ ಪ್ರಕರಣ ದಾಖಲಾಗಿ ಮುಂದಿನ ಕ್ರಮವನ್ನು ಕೈಗೊಳ್ಳಲಾಗುತ್ತದೆ; ಆದರೆ ಮಂತ್ರಿಗಳು, ಪ್ರಭಾವಿ ಅಧಿಕಾರಿಗಳು ಅಪರಾಧ ಎಸಗಿದರೆ, ‘ಅವರ ಅನುಮತಿ, ಇವರ ವರದಿ’ ಮುಂತಾಗಿ ಕಾಲಹರಣ ಮಾಡಲಾಗುತ್ತದೆ.
ಯಾರೇ ಮಾಡಿರಲಿ, ಅಪರಾಧ ಅಪರಾಧವೇ! ಆದರೆ ವಿಚಾರಣೆಯ ಪ್ರಹಸನದಲ್ಲಿ ಯಾಕಿಷ್ಟು ತಾರತಮ್ಯ? ಇಂಥ ಅನುಮತಿಗಳು ದೊರಕುವ ಹೊತ್ತಿಗೆ ಬಹುತೇಕ ಸಾಕ್ಷಿಗಳು, ಪುರಾವೆಗಳು ಕಾಣೆಯಾಗಿರುತ್ತವೆ. ಆರೋಪಿ ತನ್ನ ರಕ್ಷಣೆಯನ್ನು ತಾನು ಮಾಡಿಕೊಂಡಿರುತ್ತಿದ್ದು ವಿಚಾರಣೆ ಬೂಟಾಟಿಕೆ ಎನಿಸು ತ್ತದೆ. ಬರೆಯುತ್ತ ಹೋದರೆ ತಾರತಮ್ಯದ ಇಂಥ ಸಾಕಷ್ಟು ನಿದರ್ಶನಗಳು ಸಿಗುತ್ತವೆ. ಅವು ಸರಿರೂಪಕ್ಕೆ ಬರುವುದು ಯಾವಾಗ?
(ಲೇಖಕರು ಬ್ಯಾಂಕಿಂಗ್ ಕ್ಷೇತ್ರದ ಪರಿಣತರು)