ಯಾಕಿಂಥ ತಾರತಮ್ಯ ಧೋರಣೆ ?
ಕುಮಾರ ಶ್ರೀಶೈಲ ಸಿದ್ದಪ್ಪ
ಕೃಷಿ ಪ್ರಧಾನ ರಾಷ್ಟ್ರವಾದ ಭಾರತದಲ್ಲಿ ಅನ್ನದಾತನೇ ಸಾರ್ವಭೌಮನಾಗಬೇಕು. ಆದರೆ ಇಂದು ರೈತರ ಕಷ್ಟಗಳನ್ನು ಕೇಳುವವರಿಲ್ಲ. ಕೃಷಿಕರಿಗೆ ಪ್ರೋತ್ಸಾಹವಾಗಲೀ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆಯಾಗಲೀ ಸಿಗುತ್ತಿಲ್ಲ. ಹೀಗಾಗಿ ಮನನೊಂದ ರೈತರು ಭವಿಷ್ಯವನ್ನರಸಿ ಅಥವಾ ಹೊಟ್ಟೆಪಾಡಿಗಾಗಿಪಟ್ಟಣ-ನಗರಗಳತ್ತ ವಲಸೆ ಹೋಗುತ್ತಿದ್ದಾರೆ.
ಸ್ವಾತಂತ್ರ್ಯಪೂರ್ವದಲ್ಲಿ ರೈತ ಸಾಲಗಾರನಾಗಿರಲಿಲ್ಲ. ಆದರೆ ಇಂದು ಸಾಲದ ಶೂಲದ ಇರಿತವನ್ನು ಸಹಿಸಲಾಗದೆ ಸಾಕಷ್ಟು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂಥ ಪರಿಸ್ಥಿತಿ ಎದುರಾಗಿದ್ದೇಕೆ ಎಂಬುದನ್ನು ರೈತರು ಇನ್ನಾದರೂ ಅರಿತು ಎಚ್ಚೆತ್ತುಕೊಳ್ಳದಿದ್ದರೆ ಒಂದಿಡೀ ರೈತ ಸಂಕುಲಕ್ಕೆ ಮಾತ್ರವಲ್ಲದೆ ದೇಶಕ್ಕೇ ಆಪತ್ತು ಬರುವುದು ನಿಶ್ಚಿತ. ರೈತರು ಆತ್ಮಹತ್ಯೆ ಮಾಡಿಕೊಂಡರೆ ಸಾಂತ್ವನ ಹೇಳಿ ಒಂದೆರಡು ಲಕ್ಷ ರುಪಾಯಿ ಹಣ ನೀಡಿಬಿಟ್ಟರೆ ಅವರ ಸಮಸ್ಯೆಗದು ಪರಿಹಾರವಾಗಿಬಿಡುತ್ತದೆ ಎಂದು ಕೆಲವರು ಭಾವಿಸಿದಂತಿದೆ; ಆದರಿದು ವಾಸ್ತವವಲ್ಲ.
ಮಳೆ-ಗಾಳಿ-ಚಳಿ ಎನ್ನದೆ ಹಗಲಿರುಳೂ ಕಷ್ಟಪಟ್ಟು ದುಡಿಯುವ ರೈತರು ತಾವು ಬೆಳೆದ ಬೆಳೆಗಳಿಗೆ ಸೂಕ್ತವಾದ ವೈಜ್ಞಾನಿಕ ಹಾಗೂ ಬೆಂಬಲಬೆಲೆ ಸಿಗುವಂತಾಗಬೇಕು ಎಂದು ಆಶಿಸುವುದು ಸಹಜ. ಆದರೆ ತನ್ನ ಕೃಷಿ ಉತ್ಪನ್ನ ಗಳಿಗೇ ಕಿಮ್ಮತ್ತು ಕಟ್ಟುವ ಸ್ವಾತಂತ್ರ್ಯ ರೈತರಿಗಿಲ್ಲ! ಹೀಗಾಗಿ ಆತ ದಾರಿಗಾಣದೆ ಮಧ್ಯವರ್ತಿಗಳ ಕೈಗೊಂಬೆಯಂತಾಗಿ ಅಸಹಾಯಕನಾಗಿದ್ದಾನೆ. ಇದು ಸಾಲದೆಂಬಂತೆ, ಕಾಲಕ್ಕೆ ಸರಿಯಾಗಿ ಮಳೆಯನ್ನು ಸುರಿಸದ ನಿಸರ್ಗದ ಅವಕೃಪೆ. ಪರಿಣಾಮವಾಗಿ ಶ್ರಮದ ಭಾರ ಹೆಚ್ಚಾಗುತ್ತಿದೆಯೇ ವಿನಾ, ಅವನಿಗೆ ನ್ಯಾಯಸಮ್ಮತವಾಗಿ ದಕ್ಕಬೇಕಾದ ಆದಾಯ ದಕ್ಕುತ್ತಿಲ್ಲ. ಮತ್ತೊಂದೆಡೆ ಬಿತ್ತನೆ ಬೀಜ, ರಸಗೊಬ್ಬರ ಹೀಗೆ ಒಂದೊಂದು ಬಾಬತ್ತಿಗೂ ಮಾಡಿದ ಸಾಲಕ್ಕೆ ಬಡ್ಡಿಯನ್ನು ಕಟ್ಟಿ ಕಟ್ಟಿ ರೈತ ಹೈರಾಣಾಗುತ್ತಿದ್ದಾನೆಯೇ ವಿನಾ ಅವನ ಸಾಲ ತೀರುತ್ತಿಲ್ಲ, ಬದುಕು ಹಸನಾಗುತ್ತಿಲ್ಲ.
ಹೀಗಾಗಿ ಅವನನ್ನೇ ನೆಚ್ಚಿದ ಕುಟುಂಬ ಬೀದಿಪಾಲಾಗುತ್ತಿದೆ, ಕರುಣೆಯಿಂದ ಸಾಕಿದ ಜಾನುವಾರುಗಳು, ಪ್ರಾಣಿ-ಪಕ್ಷಿಗಳು ಕಟುಕರ ಪಾಲಾಗುತ್ತಿವೆ.‘ರೈತನೇ ದೇಶದ ಬೆನ್ನೆಲುಬು, ಅವನೇ ನಮ್ಮ ಅನ್ನದಾತ’ ಎಂದು ವೇದಿಕೆಯ ಮೇಲೆ ತೌಡುಕುಟ್ಟುವ ಆಳುಗರು, ಕಾಣುವ ಕೈಯಿಂದ ಕೊಟ್ಟಂತೆ ಮಾಡಿ ಕಾಣದ ಕೈಗಳಿಂದ ಕಸಿದುಕೊಳ್ಳುತ್ತಿದ್ದಾರೆ. ತಮ್ಮ ಕರ್ತವ್ಯ ಮತ್ತು ನೈತಿಕ ಹೊಣೆಗಾರಿಕೆಗಳನ್ನು ಮರೆತು ರೈತರೆಡೆಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ನಾಗರಿಕ ಸಮಾಜದಲ್ಲಿ ಪ್ರತಿಯೊಂದು ಕಾರ್ಯಕ್ಷೇತ್ರದಲ್ಲಿ ಒದಗುವ ಸವಾಲು- ಸಮಸ್ಯೆಗಳಿಗೂ ಪರಿಹಾರವಿದೆ; ಆದರೆ ಕೃಷಿಕ್ಷೇತ್ರದ ವಿಷಯ ಬಂದಾಗ ಮಾತ್ರ ಹೊಮ್ಮುವುದು ಪಲಾಯನವಾದವೇ!
ಹೀಗಾಗಿ, ‘ರೈತರ ಸಂಕಷ್ಟಗಳಿಗೆ ರೈತರೇ ಹೊಣೆ’ ಎಂಬ ಚಿತ್ತಸ್ಥಿತಿ ರೂಪುಗೊಂಡಿದೆ. ಶಿಕ್ಷಣ, ಮೂಲಸೌಕರ್ಯ, ಉದ್ಯೋಗಾವಕಾಶ ಮೊದಲಾದವನ್ನು ಆದ್ಯತಾ ಕ್ಷೇತ್ರವಾಗಿ ಪರಿಗಣಿಸುವ ಮತ್ತು ಬಂಡವಾಳಶಾಹಿಗಳ ಕೈಗೊಂಬೆಗಳಂತೆ ವರ್ತಿಸುವ ಆಳುಗರು ಕೃಷಿಯನ್ನು ಈ ನೆಲೆಯಲ್ಲಿ ನಿರ್ಲಕ್ಷಿಸು ವುದೇಕೆ ಎಂಬುದು ಅರ್ಥವಾಗದ ಸಂಗತಿ. ರಾಜ್ಯದ ಬಹುತೇಕ ಎಲ್ಲ ಭಾಗಗಳ ರೈತರ ಪರಿಸ್ಥಿತಿಯೂ ಹೀಗೇ ಇದೆಯೆನ್ನಬೇಕು. ನಿರ್ದಿಷ್ಟವಾಗಿ ನಮ್ಮ ಅಖಂಡ ವಿಜಯಪುರ-ಬಾಗಲಕೋಟೆ ಜಿಲ್ಲೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಒಂದಷ್ಟು ಕಹಿವಾಸ್ತವಗಳನ್ನು ಸಂಬಂಧಪಟ್ಟವರ ಗಮನಕ್ಕೆ ತರಲು ಬಯಸುತ್ತೇನೆ. ಈ ಪ್ರದೇಶ ‘ಪಂಚನದಿಗಳ ಬೀಡು’ ಎನಿಸಿಕೊಂಡಿದೆ, ಎಚ್.ಡಿ. ದೇವೇಗೌಡರು, ಎಂ.ಬಿ. ಪಾಟೀಲರಂಥ ಜನನಾಯಕರಿಂದ ಒಂದಷ್ಟು ನೀರಾವರಿ ಕಾರ್ಯಗಳೂ ಆಗಿವೆ.
ಆದರೆ ನಮಗಿಂದು ಕುಡಿಯಲು ನೀರಿಲ್ಲ. ದ್ರಾಕ್ಷಿ, ದಾಳಿಂಬೆ, ಬಾಳೆ, ನಿಂಬೆ, ಕಬ್ಬು ಮೊದಲಾದ ಬಂಗಾರದಂಥ ಬೆಳೆಗಳನ್ನು ಬೆಳೆದರೂ ಇಲ್ಲಿನವರ ಬದುಕು ಬಂಗಾರವಾಗಿಲ್ಲ. ಎರಡು ಜಲಾಶಯಗಳನ್ನು ಕಟ್ಟಿದ ಪರಿಣಾಮ ಮುಳುಗಡೆಯಾದ -ಲವತ್ತಾದ ಭೂಮಿಯನ್ನು ಕಳೆದುಕೊಂಡಿರುವ ಮತ್ತು ಬಹಳ ಕಾಲದಿಂದ ಬರಗಾಲಕ್ಕೆ ತುತ್ತಾಗುತ್ತಲೇ ಬಂದಿರುವಂಥ ಪ್ರದೇಶವಿದು. ಆದರೆ ಈ ಪ್ರದೇಶವು ೩೭೧-ಜೆ ಕಲಂ ಜಾರಿಯಲ್ಲಿ ಸೇರ್ಪಡೆಗೊಳ್ಳ ಲಿಲ್ಲವೇಕೆ? ಎಂಬುದು ಯಕ್ಷಪ್ರಶ್ನೆ. ಇಂಥ ತಾರತಮ್ಯ ಭಾವನೆ, ಒಡೆದು ಆಳುವ ಮನಸ್ಥಿತಿ ದೂರವಾಗಿ, ‘ಸರ್ವರಿಗೂ ಸಮಪಾಲು, ಸರ್ವರಿಗೂಸಮಬಾಳು’ ನೀಡುವಂಥ ಔದಾರ್ಯ ಸುರಿಸಬೇಕು.