ಬೋಧಕರ ಸಾಮರ್ಥ್ಯ ವರ್ಧನೆ ಆಗಬೇಕಿದೆ
ವಿಶ್ಲೇಷಣೆ
ಪ್ರೊ.ಆರ್‌.ಜಿ.ಹೆಗಡೆ
ಶಿಕ್ಷಣ ಕ್ಷೇತ್ರಕ್ಕೆ, ಮುಖ್ಯವಾಗಿ ‘ಜನರಲ್’ ಪದವಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಪದೇಪದೆ ಚರ್ಚೆಯ ಮುನ್ನೆಲೆಗೆ ಬರುವ ವಿಷಯಗಳು ಪಠ್ಯಪುಸ್ತಕಗಳಕುರಿತಾದವು ಅಥವಾ ‘ಶಿಕ್ಷಣ ನೀತಿ’ಯ ಕುರಿತಾದವು. ಆದರೆ, ಪಠ್ಯದ ವಿಷಯ, ನೀತಿ, ಜ್ಞಾನ, ಕೌಶಲಗಳನ್ನು ಮಕ್ಕಳಿಗೆ ಮುಟ್ಟಿಸಿ ಪ್ರಭಾವಿಸಬೇಕಾದಬೋಧಕರ ವಿಷಯ ಚರ್ಚೆಗೆ ಬರುವುದು ಕಮ್ಮಿ. ಹೀಗಾಗಿಶಸ್ತ್ರಾಸ್ತ್ರಗಳಿಲ್ಲದೆ ಯುದ್ಧಮಾಡಬೇಕಾದ ಪರಿಸ್ಥಿತಿ ಅವರದ್ದು.
ಶಿಕ್ಷಕರ ವೃತ್ತಿಪರ ಸಾಮರ್ಥ್ಯ ವರ್ಧನೆಗೆ ಸಂಬಂಧಿಸಿದ ಬಾಬತ್ತನ್ನು ಮೊದಲಿಗೆ ಗಮನಿಸೋಣ. ೩೭ ವರ್ಷಗಳ ಹಿಂದೆ ಕಾಲೇಜೊಂದರಲ್ಲಿ ಇಂಗ್ಲಿಷ್ ಉಪನ್ಯಾಸಕನಾಗಿ ಸೇರಿಕೊಂಡಾಗ ನನ್ನ ವಯಸ್ಸು ೨೩ ವರ್ಷ ೧೦ ತಿಂಗಳು. ಪದವಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಸುವ ಬೌದ್ಧಿಕ ಸಾಮರ್ಥ್ಯವಾಗಲೀ, ಸಂವಹನ ಕೌಶಲವಾಗಲೀ ನನಗಿರಲಿಲ್ಲ. ಆಗ ನಾನು ಏನನ್ನು, ಹೇಗೆ ಕಲಿಸಿದೆ ಎಂದು ಇಂದು ಯೋಚಿಸಿದರೆ ಮುಜುಗರವಾಗುತ್ತದೆ. ಇದು ಅಂದಿನ ಪೀಳಿಗೆಯ ಸಾವಿರಾರು ಉಪನ್ಯಾಸಕರ ಕಥೆ. ಕಾರಣ, ಸ್ನಾತಕೋತ್ತರ ಪದವಿ ಮುಗಿಯಿತೆಂದರೆ ಕಲಿಸುವ ಅರ್ಹತೆ ಬಂದೇಬಿಡುತ್ತಿತ್ತು, ಸಿದ್ಧತೆಯ ಪ್ರಶ್ನೆಯೇ ಇರಲಿಲ್ಲ.
೪೦ ವರ್ಷಗಳ ಹಿಂದೆ ಅದು ಅನಿವಾರ್ಯವಾಗಿತ್ತು ಎನಿಸುತ್ತದೆ. ದೇಶದಲ್ಲಿ ಉನ್ನತ ಶಿಕ್ಷಣ ವಿಸ್ತಾರಗೊಳ್ಳುತ್ತಿದ್ದ ಸಮಯವದು. ವಿಶ್ವವಿದ್ಯಾಲಯಗಳು ಕಡಿಮೆಯಿದ್ದವು, ಶಾಲಾ ಕಾಲೇಜುಗಳು ಆಗಷ್ಟೇ ವಿಸ್ತಾರಗೊಳ್ಳುತ್ತಿದ್ದವು. ಅರ್ಹ ಸ್ನಾತಕೋತ್ತರ ಪದವೀಧರರ ಕೊರತೆಯೂ ತೀವ್ರವಾಗಿತ್ತು. ವಿಶೇಷ ತರಬೇತಿ ಇಲ್ಲದಿದ್ದರೂ ಸ್ನಾತಕೋ ತ್ತರ ಎನಿಸಿಕೊಂಡುಬಿಟ್ಟರೆ ಕಾಲೇಜು ನೌಕರಿ ಗ್ಯಾರಂಟಿ. ಅವರಲ್ಲಿ ಬಹಳಷ್ಟು ಜನ ಒಳ್ಳೆಯ ಕೆಲಸ ಮಾಡಿ ತಮ್ಮ ಜೀವನವನ್ನೇ ಶಿಕ್ಷಣಕ್ಕಾಗಿ ಸಮಾಜಕ್ಕಾಗಿ ಮುಡಿಪಾಗಿಟ್ಟರು ಎನ್ನಿ. ಆದರೆ ಇಂದಿನ ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿ ಬದಲಾಗಿದೆ.
ಅಗತ್ಯವಿರುವ ಶಿಕ್ಷಣದ ಸ್ವರೂಪವು ‘ಜನರಲ್’ನಿಂದ ಮುಂದೆ ಹೋಗಿ ಹೆಚ್ಚೆಚ್ಚು ತಾಂತ್ರಿಕ ಅಥವಾ ‘ಸ್ಪೆಷಲೈಸ್ಡ್’ ಆಗುತ್ತ ಸಾಗಿದೆ. ಕೋರ್ಸ್, ಸಿಲಬಸ್ ಅನ್ನು ಹೆಚ್ಚೆಚ್ಚು ‘ತಾಂತ್ರಿಕ’ಗೊಳಿಸುವ, ಹೊಸ ಕೋರ್ಸ್ ಸೇರಿಸುವ ಯತ್ನಗಳೂ ಸಾಗಿವೆ. ಹೊಸ ನೀತಿಗಳನ್ನು ನಿರೂಪಿಸಲಾಗಿದೆ. ನಿರಂತರ ಪ್ರಯೋಗ ಮಾಡಲಾಗಿದೆ. ಆದರೆ ಬಹುತೇಕವಾಗಿ ಇಂಥ ಕ್ರಮಗಳು ಹೇಳಿಕೊಳ್ಳುವಷ್ಟೇನೂ ಯಶಸ್ವಿಯಾಗಿಲ್ಲ. ನೀತಿಗಳೂ ನಿರೀಕ್ಷೆಯ ಮಟ್ಟದಲ್ಲಿ ಸ-ಲವಾಗಿಲ್ಲ. ಏಕೆಂದರೆ ತರಗತಿ ಕೊಠಡಿಯೊಳಗಿನ ಶಿಕ್ಷಕರು ಹೆಚ್ಚುಕಡಿಮೆ ಅವರೇ. ಅದರು ಅವರ ತಪ್ಪಲ್ಲ. ಏಕೆಂದರೆ ಅವರೂ ಹಿಂದಿನ ಅದೇ ಮಾನಸಿಕತೆಯ, ಬೌದ್ಧಿಕ ಶಿಕ್ಷಣ ವ್ಯವಸ್ಥೆಯ ಹಿನ್ನೆಲೆಯವರೇ.
ಕಾರಣ ಶಿಕ್ಷಕರನ್ನು ಸಜ್ಜುಗೊಳಿಸುವ ವಿಧಾನಗಳು, ಅರ್ಹತೆಗಳು ಬದಲಾಗಿಯೇ ಇಲ್ಲ ಅಥವಾ ಆಗಿರುವ ಬದಲಾವಣೆಗಳು ಸಾಲವು. ಅಂದರೆ, ಶಿಕ್ಷಕ ಹುದ್ದೆಗೆ ಬೇಕಿರುವ ಅರ್ಹತೆಗಳು, ಬೌದ್ಧಿಕ-ಮಾನಸಿಕ ಸಿದ್ಧತೆಯತ್ತ ನಾವು ಭಾರಿ ಪ್ರಮಾಣದಲ್ಲಿ ಗಮನ ಹರಿಸಿಲ್ಲ. ಇಂದಿಗೂ ಹೆಚ್ಚಿನ ಸಂಖ್ಯೆಯ ಶಿಕ್ಷಕರು, ಹಿಂದಿನಂತೆಯೇ ‘ಮಾಸ್’ ಅಂದರೆ ‘ಜನರಲ್’ ಶಿಕ್ಷಣದಿಂದ ಹೊರಬಿದ್ದವರೇ. ಅಂದರೆ ಬೋಧನೆಯೆಂಬುದು ಒಂದು ಏಕತಾನತೆಯ ಕ್ರಿಯೆಯಾಗಿದೆಯೇ ವಿನಾ, ವಿಶೇಷ ಕೌಶಲವುಳ್ಳ ಪರಿಪೂರ್ಣ ವೃತ್ತಿಯಾಗಿ ಬದಲಾಗಿಲ್ಲ.
ಪ್ರತಿಯೊಂದು ಮಗುವಿನ ಮಾನಸಿಕತೆ, ಬೌದ್ಧಿಕ ಮತ್ತು ಸಾಮಾಜಿಕ ಅಗತ್ಯ, ಬೆಳವಣಿಗೆಯನ್ನು ನಿರಂತರ ಗಮನಿಸಿ ಪೋಷಿಸುವ ರೀತಿಯಲ್ಲಿ ಇದು ರೂಪಾಂತರಗೊಂಡಿಲ್ಲ. ಹೀಗಾಗಿ ‘ಸ್ಪೆಷಲೈಸ್ಡ್’ ಎನ್ನಲಾಗುವ ತರಬೇತಿಯಿಲ್ಲದೆ ಸ್ನಾತಕೋತ್ತರ ಪದವೀಧರರು ಬೋಧನಾ ವೃತ್ತಿಗೆ ಇಳಿಯುತ್ತಿದ್ದಾರೆ. ‘ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುವರಯ್ಯ’ ಎನ್ನುವ ವಿಪರೀತ ಪರಿಸ್ಥಿತಿ ಇಲ್ಲಿದೆ. ‘ಸ್ಪೆಷಲೈಸ್ಡ್ ಕೋರ್ಡ್’ ಎಂದರೇನೆಂದು ಹೇಳಬೇಕು. ಹಾಗೆಂದರೆ ವಿದ್ಯಾರ್ಥಿಗಳಿಗೆ ನೇರವಾಗಿ ಕನಿಷ್ಠ ಕೌಶಲ ಒದಗಿಸುವಂಥವು- ಎಂಜಿನಿಯರಿಂಗ್, ವೈದ್ಯಕೀಯ, ಹೋಟೆಲ್ ಮ್ಯಾನೇಜ್‌ಮೆಂಟ್ ಇಂಥವು. ಇಂದಿನ ದಿನಗಳಲ್ಲಂತೂ ಯಾವ ಪದವಿಯೂ ಅಷ್ಟು ‘ಜನರಲ್’ ಆಗಿರಲು ಸಾಧ್ಯವೇ ಇಲ್ಲ, ಆಗಲೂಬಾರದು.
ಏಕೆಂದರೆ, ಇಂದಿನ ಸಾಮಾಜಿಕ ಅವಶ್ಯಕತೆಗಳ ಸ್ವರೂಪವೇ ಬೇರೆ. ಇದನ್ನು ಅರ್ಥಮಾಡಿಕೊಂಡಿರುವ ‘ರಾಷ್ಟ್ರೀಯ ಶಿಕ್ಷಣ ನೀತಿ’ಯು (ಎನ್‌ಇಪಿ),ಆರ್ಟ್ಸ್, ಕಾಮರ್ಸ್, ಸೈನ್ಸ್ ಪದವಿಗಳಿಗೂ ತಾಂತ್ರಿಕ ಸ್ವರೂಪ ನೀಡುವ ಪ್ರಯತ್ನಕ್ಕೆ ಮುಂದಾಗಿದೆ. ಕೌಶಲಾಭಿವೃದ್ಧಿ ಕೋರ್ಸ್‌ಗಳನ್ನು ಸಿಲೆಬಸ್‌ನ ಭಾಗವಾಗಿಸಿದೆ. ೪ ವರ್ಷಗಳ ಕೋರ್ಸ್ ಉದ್ದೇಶ, ಪದವಿಗಳನ್ನು ‘ಸ್ಪೆಷಲೈಸ್ಡ್’ ಆಗಿಸುವುದು. ಅದಕ್ಕೆ ಪೂರಕವಾಗಿ ಬೋಧಕರ ಸಾಮರ್ಥ್ಯವನ್ನೂ ನಾವು ಹೆಚ್ಚಿಸಬೇಕಿದೆ.
ಅಂದರೆ ಬೋಧನೆಯನ್ನು ಎಲ್ಲ ಹಂತಗಳಲ್ಲೂ ಒಂದು ಪೂರ್ಣಪ್ರಮಾಣದ ಕೋರ್ಸ್ ಆಗಿಸಿ, ‘ಕುಶಲಿ ಶಿಕ್ಷಕರನ್ನು’ ಅಭಿವೃದ್ಧಿಪಡಿಸುವುದು. ಹಾಗೆ ಮಾಡಿದರೆ, ಈಗಿನ ಪದವಿ ಶಿಕ್ಷಣವನ್ನೇ ಸಮೃದ್ಧಗೊಳಿಸಲು ಸಾಧ್ಯವಿದೆ (ಇದನ್ನು ಮನಗಂಡಿರುವ ಕೆಲವು ಎಂಜಿನಿಯರಿಂಗ್ ಕಾಲೇಜುಗಳು ಈ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿವೆ). ‘ಜನರಲ್’ ಶಿಕ್ಷಣವನ್ನು ‘ವಿಶೇಷ ಅರ್ಹತೆಗಳ’ ಶಿಕ್ಷಣವಾಗಿಸಿ, ನಿರ್ದಿಷ್ಟ ಕೌಶಲ ಹೊಂದಿದ ಪದವೀಧರರನ್ನು ಸಜ್ಜುಗೊಳಿಸಿ, ಉದ್ಯೋಗ ಮಾರುಕಟ್ಟೆಗೆ ಸಂಪರ್ಕಿಸಲು ಸಾಧ್ಯವಿದೆ. ಹಿರಿಮೆಯುಳ್ಳ ಕೆಲ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಇಂಥ ಯತ್ನದಲ್ಲಿ ತೊಡಗಿ ಸಾಕಷ್ಟು ಯಶಸ್ವಿಯೂ ಆಗಿವೆ. ಉದ್ಯಮಸ್ನೇಹಿ, ಸಮಾಜ ಸ್ನೇಹಿ ಪಠ್ಯಕ್ರಮಗಳು ಹೇಗಿರಬೇಕು, ಶಿಕ್ಷಕರ ಪರಿಪೂರ್ಣ ಸಿದ್ಧತೆಗೆ ಅಗತ್ಯವಿರುವುದೇನು ಎನ್ನುವ ಕುರಿತು ಸ್ಥೂಲ ವಿಚಾರಗಳು ಅವುಗಳ ತೆಕ್ಕೆಯಲ್ಲಿವೆ.
ಇದು ಕಠಿಣ ಸವಾಲು ನಿಜ; ಆದರೆ ಸರಕಾರ, ಖಾಸಗಿ ಮತ್ತು ಕಾರ್ಪೊರೇಟ್ ವಲಯಗಳು ಸೇರಿದರೆ ಗುರಿ ನೆರವೇರಿತು. ಇಂಥ ರೂಪಾಂತರವು ವಿಶೇಷ ವಾಗಿ ಇಂದು ಕಷ್ಟದಲ್ಲಿರುವ ಖಾಸಗಿ ಕಾಲೇಜುಗಳಿಗೆ ಜೀವತುಂಬಲಿದೆ. ಏಕೆಂದರೆ, ಪದವಿಗಳನ್ನು ಉದ್ಯೋಗ ನೇಮಕಾತಿಯೊಂದಿಗೆ ತಳುಕು ಹಾಕಿದರೆ ಸೂಕ್ತ ಶುಲ್ಕ ನೀಡಲು ವಿದ್ಯಾರ್ಥಿಗಳ ಪೋಷಕರು ಹಿಂದುಮುಂದು ನೋಡುವುದಿಲ್ಲ ಮತ್ತು ದೇಶಕ್ಕೂ ಇದು ತುಂಬಾ ಮಹತ್ವದ್ದು. ಏಕೆಂದರೆ, ಹೊಸದಾಗಿ ಉದಯಿಸುತ್ತಿರುವ ಕ್ಷೇತ್ರಗಳ ನಿರ್ವಹಣೆಗೆಂದು ‘ಸ್ಪೆಷಲಿಸ್ಟ್’ಗಳನ್ನು ತಯಾರಿಸಬಲ್ಲ ಶಿಕ್ಷಣ ನೀಡುವತ್ತ ಗಮನ ಹರಿಸಬೇಕಿದೆ.
ಇಂದಿನ ಪದವೀಧರರಿಗೆ ಅಕೆಡೆಮಿಕ್ ಜ್ಞಾನ ಇರಬಹುದು; ಆದರೆ ಇದರ ಜತೆಗೇ ಬೇಕಿರುವುದು, ಇಂದಿನ ಹಲವು ಮೂಲಗಳಿಂದ ವಿದ್ಯಾರ್ಥಿಗಳಿಗೆ ಸಿಗುವ ಜ್ಞಾನದೊಂದಿಗೆ, ಸಮಕಾಲೀನವಾಗಿ ಪ್ರಸ್ತುತವಾಗುವಂತೆ, ಹೆಚ್ಚೆಚ್ಚು ಪ್ರಾಯೋಗಿಕವಾಗಿ ಕಲಿಸುವುದು. ಅಂದರೆ ಥಿಯರಿಯ ಜತೆಗೆ ‘ಪ್ರಾಕ್ಟೀಸ್’ ಅನ್ನೂ ಮಾಡಿಸುವುದು. ಜ್ಞಾನವನ್ನು ಕಸ್ಟಮೈಸ್ ಮಾಡಿ ಹೇಗೆ ಹೇಳುವುದು ಎಂಬ ಕೌಶಲವನ್ನು ಕಲಿಸುವುದು, ಕಲಿಕೆಯನ್ನುಮನಶ್ಶಾಸೀಯ ಮತ್ತುವ್ಯಾವಹಾರಿಕ ಪ್ರಕ್ರಿಯೆಯಾಗಿಸಿ ವಿದ್ಯಾರ್ಥಿ-ಕೇಂದ್ರಿತ ವಾಗುವಂತೆ ಮಾಡುವುದು. ವ್ಯಕ್ತಿತ್ವ ನಿರ್ಮಾಣ, ಆಧುನಿಕ ಸಂವಹನ ಇತ್ಯಾದಿ ವಿಷಯಗಳಲ್ಲಿ ತರಬೇತಿ ನೀಡುವಾಗ, ಈ ಕ್ಷೇತ್ರಗಳಲ್ಲಿ ಅಪಾರ ಅನುಭವವಿರುವ ಸಂಸ್ಥೆಯ (ಉದಾಹರಣೆಗೆ ಇನೋಸಿಸ್) ಜ್ಞಾನವನ್ನು ಈ ದಿಸೆಯಲ್ಲಿ ಬಳಸಿಕೊಳ್ಳಬಹುದು. ಬೋಧಕರನ್ನು ಅವರ ಅರ್ಹತಾ ಮಾನದಂಡಗಳ ಆಧಾರದ ಮೇಲೆ ಶ್ರೇಣೀಕರಣ ಕೂಡ ಮಾಡಬಹುದು.
ಇನ್ನೊಂದು ವಿಷಯ. ಇವೆಲ್ಲ ಮಾತು ಹೇಳುವಾಗ, ಶಿಕ್ಷಕರ ಬವಣೆಯ ಕುರಿತೂ ಯೋಚಿಸಬೇಕು. ಇಂದು ಹೆಚ್ಚಿನ ಕ್ಯಾಂಪಸ್‌ಗಳು ಅಸಮಾನತೆಯ ಕೇಂದ್ರಗಳಾಗಿ ಬಿಟ್ಟಿವೆ. ಯುಜಿಸಿ ಪ್ರಾಧ್ಯಾಪಕರು, ಸರಕಾರಿ ಉಪನ್ಯಾಸಕರಿಗೆ ಒಳ್ಳೆಯ ಸಂಬಳವಿದೆ. ಬೋಧಕರ ಹಿತಕಾಯುವ, ಗುಣಮಟ್ಟದ ಶಿಕ್ಷಣ ನೀಡುವ ಖಾಸಗಿ ಶಿಕ್ಷಣ ಸಂಸ್ಥೆಗಳೂ ಇವೆ. ಅಂಥವುಗಳಲ್ಲಿ ವಿದ್ಯಾರ್ಥಿಗಳು ದೊಡ್ಡ ಪ್ರಮಾಣದಲ್ಲಿ ತುಂಬಿ ತುಳುಕುತ್ತಿದ್ದಾರೆ. ಆದರೆ ಕೆಲವೊಂದು ಖಾಸಗಿ ಸಂಸ್ಥೆಗಳಲ್ಲಿ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಅಲ್ಲಿನ ಶಿಕ್ಷಕರ ಬವಣೆ ಹೇಳಲಸಾಧ್ಯ; ನೀಡಬೇಕಾದ ಕನಿಷ್ಠ ವೇತನವನ್ನೂ ಅಲ್ಲಿ ನೀಡಲಾಗುತ್ತಿಲ್ಲ ಎಂಬ ವರದಿಗಳಿವೆ.
ಅವಮಾನದಲ್ಲಿ ಮೀಯುವ, ಬಡತನದ ಬೇಗೆಯಲ್ಲಿ ಬೇಯುವ ಇಂಥ ಶಿಕ್ಷಕರು ಹೇಗೆ ತಾನೇ ಬೋಧಿಸಿಯಾರು, ಮಕ್ಕಳಲ್ಲಿ ಕೌಶಲವನ್ನು ತುಂಬಿಯಾರು? ಶಿಕ್ಷಣ ನೀತಿಗಳನ್ನು ಹೇಗೆ ಯಶಸ್ವಿಗೊಳಿಸಿಯಾರು? ಪರಿಸ್ಥಿತಿ ಹೀಗಿದ್ದಾಗ ಎಂಥ ಶ್ರೇಷ್ಠ ಪಠ್ಯವೂ, ನೀತಿಯೂ ಪ್ರಸ್ತುತವಾಗಿಬಿಡುತ್ತವೆ.ನಮ್ಮ ದೇಶದ ದೊಡ್ಡ ಆಸ್ತಿ ಜನಸಂಖ್ಯೆ, ಅದರಲ್ಲೂ ಯುವಪೀಳಿಗೆಯ ಸಂಖ್ಯೆ. ಹಾಗೆಯೇ ನಮ್ಮ ದೇಶ ಪ್ರಸಿದ್ಧವಾಗಿರುವುದು ಸೇವಾಕ್ಷೇತ್ರಕ್ಕಾಗಿ. ಮಾನವ ಸಂಪನ್ಮೂಲ ಅಭಿವೃದ್ಧಿಯಾಗುವುದು ನಮ್ಮ ಶಾಲಾ ಕಾಲೇಜುಗಳಲ್ಲಿ. ಇಲ್ಲಿ ಬೋಧಕರೇ ಅಭಿವೃದ್ಧಿಯ ಹರಿಕಾರರು. ಈ ಹಿನ್ನೆಲೆಯಲ್ಲಿ ಬೋಧಕರ ಕೌಶಲ ಮತ್ತು ಸಾಮರ್ಥ್ಯವನ್ನು ವಧಿಸಬಲ್ಲ ಸಂಗತಿಗಳ ಕಡೆಗೆ ಗಮನಹರಿಸಬೇಕಾದ್ದು ಈ ಕ್ಷಣದ ಅನಿವಾರ್ಯವಾಗಿದೆ.
(ಲೇಖಕರು ಮಾಜಿ ಪ್ರಾಂಶುಪಾಲರು ಮತ್ತು ಶಿಕ್ಷಣ ಸಮಾಲೋಚಕರು)