ಭಾರತದ ಪರಿಸ್ಥಿತಿಯೂ ಇಸ್ರೇಲಿಗಿಂತ ಭಿನ್ನವಾಗಿಲ್ಲ
ಕದನ ಕುತೂಹಲ
ರಾಜ್ ಗುರು ಕೆ.ಆರ್‌.
ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ತಲ್ಲಣ ಶುರುವಾಗಿದೆ. ಹಮಾಸ್ ಉಗ್ರರು ಇಸ್ರೇಲನ್ನು ನಿರ್ನಾಮ ಮಾಡುವ ಉಮೇದಿನೊಂದಿಗೆ ಕಾಲುಕೆರೆದು ಯುದ್ಧಕ್ಕೆ ಮುಂದಾಗಿರುವುದು ಆತಂಕ ಮೂಡಿಸಿದೆ. ಹೊರಜಗತ್ತಿಗಿದು ‘ಜಾಗದ ಸಲುವಾಗಿ’ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ನಡೆಯುತ್ತಿರುವ ಕದನವೆಂದುಬಿಂಬಿತವಾದರೂ, ಯೆಹೂದಿ ಜನಾಂಗದ ನಿರ್ನಾಮಕ್ಕೆಂದೇ ಹೂಡಿರುವ ಷಡ್ಯಂತ್ರದ ಭಾಗವಿದು ಎಂದೇ ಇಸ್ರೇಲ್ ಇದನ್ನು ಪರಿಗಣಿಸುತ್ತದೆ. ಕಾರಣ, ಪ್ರಪಂಚದ ಪುರಾತನ ನಾಗರಿಕತೆಗಳಲ್ಲಿ ಒಂದೆನಿಸಿರುವ ಯೆಹೂದಿ ಸಮುದಾಯವು ನೆರೆರಾಷ್ಟ್ರಗಳನ್ನು ಯಾವತ್ತಿಗೂ ನಂಬದ ಸ್ಥಿತಿಯಲ್ಲಿದೆ.
ಭಾರತವೂ ಇಂಥದ್ದೇ ಸ್ಥಿತಿಯಲ್ಲಿದ್ದರೂ ನೆರೆರಾಷ್ಟ್ರಗಳೊಂದಿಗಿನ ಸಂಬಂಧವನ್ನು ಅದು ಅತ್ಯಂತ ಎಚ್ಚರಿಕೆ ಯಿಂದ ನಿರ್ವಹಿಸುತ್ತಿದೆ. ಪಾಕಿಸ್ತಾನ ಮತ್ತು ಚೀನಾಗಳಲ್ಲಿ ಭಾರತ-ವಿರೋಧಿ ಮನಸ್ಥಿತಿ ಕೆನೆಗಟ್ಟಿದ್ದರೂ ಪ್ರಧಾನಿ ಮೋದಿಯವರು ಅದನ್ನು ಓವರ್‌ಟೇಕ್ ಮಾಡಿ ಭಾರತದ ಪರವಾಗಿ ಜಾಗತಿಕ ಅಭಿಪ್ರಾಯ ರೂಪು ಗೊಳ್ಳುವಂತಾಗಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಗಮನಾರ್ಹ. ಭಾರತದ ರಾಷ್ಟ್ರೀಯ ಭದ್ರತಾ ಸಲಹೆ ಗಾರ ಅಜಿತ್ ದೋವಲ್ ಅವರು, ‘ಪಾಕಿಸ್ತಾನ ಏನಾದರೂ ಇನ್ನೊಮ್ಮೆ ಮುಂಬೈ ಸ್ಪೋಟದಂಥ ಕುಕೃತ್ಯಗಳಿಗೆ ಕುಮ್ಮಕ್ಕು ನೀಡಿದಲ್ಲಿ, ಬಲೂಚಿಸ್ತಾನ, ಪಾಕ್-ಆಕ್ರಮಿತ ಕಾಶ್ಮೀರ ಭಾರತದ ತೆಕ್ಕೆಗೆ ಬೀಳಲಿವೆ’ ಎಂದು ಹಿಂದೊಮ್ಮೆ ಎಚ್ಚರಿಸಿದ್ದುಂಟು.
ಯುದ್ಧದ ಆಯ್ಕೆಯನ್ನು ಬದಿಗಿರಿಸಿಯೂ ಭಾರತವು ಪಾಕಿಸ್ತಾನದ ಸುತ್ತಲೂ ಹೆಣೆದಿರುವ ಬಲೆ ಅಸಾಮಾನ್ಯ ವಾದುದು. ಒಂದೊಮ್ಮೆ ಯುದ್ಧ  ಅನಿವಾರ್ಯವಾದರೆ, ಭಾರತ ಈ ಬಾರಿ ಕೊಡಲಿರುವ ಹೊಡೆತವು ವಿಶ್ವದಲ್ಲಿ ಹೊಸ ನಕಾಶೆಗೆ ಕಾರಣವಾಗಲಿದೆ. ಅದಕ್ಕೆ ಪೂರಕವಾಗಿರುವ ಬೆಳವಣಿಗೆಗಳನ್ನು ವಿಶ್ಲೇಷಿಸೋಣ. ಸಂವಿಧಾನದ ೩೭೦, ೩೫ ಎ ವಿಧಿಗಳನ್ನು ವಜಾ ಗೊಳಿಸಿ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ವನ್ನು ರದ್ದುಗೊಳಿಸಿದ ನಂತರ ಕಣಿವೆ ರಾಜ್ಯದಲ್ಲಿ ನಡೆಯುತ್ತಿರುವ ಸಕಾರಾತ್ಮಕ ಬೆಳವಣಿಗೆಗಳನ್ನು ನೋಡಿದರೆ ಮತ್ತು ಸದ್ಯದ ಜಾಗತಿಕ ವಿದ್ಯಮಾನಗಳನ್ನು ಅವಲೋಕಿಸಿದರೆ, ಪಾಕ್ -ಆಕ್ರಮಿತ ಕಾಶ್ಮೀರವು ಭಾರತದ ತೆಕ್ಕೆಗೆ ಮರಳುವ ಕಾಲ ಸನ್ನಿಹಿತವಾಗಿದೆಯೇ ಎನಿಸುತ್ತದೆ.
ಭಾರತದ ಬದಲಾದ ವಿದೇಶಾಂಗ ನೀತಿಗಳನ್ನು ಗಮನಿಸಿದರೆ ಮೋದಿ ಸರಕಾರದ ಆದ್ಯತಾ ಪಟ್ಟಿಯಲ್ಲಿ ಈ ಯತ್ನ ಇರುವಂತೆ ತೋರುತ್ತಿದೆ. ಮೋದಿ ಯವರು ಅಧಿಕಾರಕ್ಕೆ ಬಂದಾಗಿನಿಂದಲೂ, ಪಾಕ್-ಪ್ರಾಯೋಜಿತ ಭಯೋತ್ಪಾದನಾ ನೀತಿಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧ್ಯವಿರುವ ವೇದಿಕೆಗಳಲ್ಲೆಲ್ಲ ಬಯಲು ಮಾಡಿದ್ದರ ಜತೆಗೆ, ನೆರೆರಾಷ್ಟ್ರಕ್ಕೆ ಅರ್ಥವಾಗುವ ಭಾಷೆಯಲ್ಲೇ ಮಾರುತ್ತರ ನೀಡುತ್ತಿದ್ದಾರೆ. ಭಾರತದ ಆಪ್ತಮಿತ್ರ ಮತ್ತುಇಸ್ಲಾಂ ಮೂಲಭೂತವಾದದ ಕಡುವಿರೋಧಿಯಾಗಿರುವ ಇಸ್ರೇಲ್‌ಗೆ, ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಭಾಗದಲ್ಲಿ ‘ಇಂಡೋ-ಇಸ್ರೇಲ್ ಅಗ್ರಿಕಲ್ಚರಲ್ ಪ್ರಾಜೆಕ್ಟ್’ (ಐಐಎಪಿ) ಹಣೆಪಟ್ಟಿಯ ಕೃಷಿ ಯೋಜನೆಯ ಭಾಗವಾಗಿ ಎರಡು ‘ಸೆಂಟರ್ ಆಫ್ ಎಕ್ಸಲೆನ್ಸ್’ ಕೇಂದ್ರಗಳನ್ನು ತೆರೆಯಲು ಮೋದಿ ಸರಕಾರ ಕಳೆದ ನವೆಂಬರ್‌ನಲ್ಲಿ ಅನುಮತಿ ನೀಡಿದೆ.
ಇದು ಗಡಿಯಾಚೆಗಿನ ಉಗ್ರಗಾಮಿ ಸಂಘಟನೆ ಗಳು ಮತ್ತು ಐಎಸ್‌ಐನ ಕಣ್ಣು ಕೆಂಪಾಗಿಸಿರುವುದು ಸುಳ್ಳಲ್ಲ. ಕೃಷಿ ಕ್ಷೇತ್ರದಲ್ಲಿನ ಹೂಡಿಕೆಯ ಹಿನ್ನೆಲೆ ಯಲ್ಲಿ ಈ ಕೇಂದ್ರಗಳ ಸ್ಥಾಪನೆಗೆ ಇಸ್ರೇಲ್‌ಗೆ ಅನುಮತಿಸಲಾಗಿದೆ ಎಂಬುದು ನಿಜವಾದರೂ, ಬೇಹುಗಾರಿಕೆ ಕ್ಷೇತ್ರದ ಕುರಿತು ಅರಿವಿರುವ ಪಂಡಿತರು ಇದರ ಮೂಲೋದ್ದೇಶವನ್ನು ವ್ಯಾಖ್ಯಾನಿಸುವುದೇ ಬೇರೆ ರೀತಿಯಲ್ಲಿ. ಕೃಷಿಕ್ಷೇತ್ರದಲ್ಲಿನ ಸಾಧನೆಗಳ ಹೊರತಾಗಿ, ಬೇಹುಗಾರಿಕಾ ತಂತ್ರಗಳ ವಿಷಯದಲ್ಲಿ ಇಸ್ರೇಲ್ ಪಾರಮ್ಯ ದಕ್ಕಿಸಿಕೊಂಡಿದೆ. ಅಂತಾರಾಷ್ಟ್ರೀಯ ಗಡಿಯಲ್ಲಿ ಅದಕ್ಕೆ ಜಾಗಮಾಡಿಕೊಟ್ಟಿರುವುದರ ಹಿಂದಿನ ಮರ್ಮ ಇದೇ ಎನ್ನುತ್ತಾರೆ ಈ ಪಂಡಿತರು.
ರಾಜತಾಂತ್ರಿಕ ತಿರುಗೇಟು
ಆರ್ಥಿಕ ಬಿಕ್ಕಟ್ಟು ಸೇರಿದಂತೆ ಪಾಕಿಸ್ತಾನ ಪ್ರಸ್ತುತ ಎದುರಿಸುತ್ತಿರುವ ಅನೇಕ ಸವಾಲುಗಳ ಕಥೆ ಹೇಳತೀರದು. ಇಷ್ಟಾಗಿಯೂ ಭಾರತದ ವಿರುದ್ಧದ ಅದರ ಕಿತಾಪತಿಗಳು ನಿಂತಿರಲಿಲ್ಲ. ಆಗ ಅಖಾಡಕ್ಕಿಳಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೈಗೊಂಡ ಕಾರ್ಯಾಚರಣೆಗಳು, ಭಯೋತ್ಪಾ ದನಾ ಜಾಲವನ್ನು ಕತ್ತರಿಸಿದ ಪರಿ, ಅಫ್ಘಾನಿಸ್ತಾನದಲ್ಲಿನ ಹಲವು ಗುಂಪುಗಳನ್ನು ಪಾಕ್ ವಿರುದ್ಧ ಎತ್ತಿ ಕಟ್ಟಿದ ರೀತಿ ನಿಜಕ್ಕೂ ರೋಚಕ. ಇದುವರೆಗೆ ಕಾಶ್ಮೀರ ಚರ್ಚಾವಿಷಯದ ಬಗ್ಗೆ ಅಪಪ್ರಚಾರ ಮಾಡುತ್ತಿತ್ತು ಪಾಕಿಸ್ತಾನ.
ಆದರೆ ಅಲ್ಲಿನ ಬಲೂಚಿಸ್ತಾನ, ಗಿಲ್ಗಿಟ್ ಬಾಲ್ಟಿ ಸ್ತಾನಗಳಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತಾಗಿ ಪ್ರಧಾನಿ ಮೋದಿಯವರು ಸ್ವಾತಂತ್ರ್ಯೋತ್ಸವದ ಭಾಷಣದ ವೇಳೆ ಪ್ರಸ್ತಾಪಿಸಿದ್ದು ಹಾಗೂ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನಕ್ಕೆ ಮುಖಭಂಗ ವಾಗುತ್ತಿರುವುದು ನಿಸ್ಸಂಶ ಯವಾಗಿ ಭಾರತದ ಪರವಾದ ಅಲೆಯನ್ನು ಸೃಷ್ಟಿಸಿದೆ. ಸಾಲದೆಂಬಂತೆ, ಧರ್ಮದ ಆಧಾರದ ಮೇಲೆ ಮಧ್ಯಪ್ರಾಚ್ಯದ ಮುಸ್ಲಿಂ ರಾಷ್ಟ್ರಗಳ ವಿಶ್ವಾಸ ಗಳಿಸಲು ಪಾಕ್ ನಡೆಸಿದ ಯತ್ನಗಳು ಮೋದಿ ಸರಕಾರದ ರಾಜತಾಂತ್ರಿಕ ಜಾಣ್ಮೆಯೆದುರು ಮಕಾಡೆ ಮಲಗಿವೆ. ಇರಾನ್, ಸೌದಿ ಅರೇಬಿಯ, ಅರಬ್ ಸಂಯುಕ್ತ ಗಣರಾಜ್ಯ ಸೇರಿದಂತೆ ಅನೇಕ ಮುಸ್ಲಿಂ ರಾಷ್ಟ್ರಗಳು ಕೂಡ ಪಾಕಿಸ್ತಾನದ ಮಾತಿಗೆ ಮನ್ನಣೆ ನೀಡದಿರುವುದು ಆ ದೇಶದ ವಿಷಯದಲ್ಲಿಗಟ್ಟಿಯಾಗಿರುವ ಅಪನಂಬಿಕೆಗೆ ಸಾಕ್ಷಿ.
ಭಾರತದ ಪರವಾದ ಅಲೆ
ಜಾಗತಿಕ ಸಾರ್ವಭೌಮತ್ವಕ್ಕೆ ಸಂಬಂಧಿಸಿದ, ಸೋವಿಯತ್ ಒಕ್ಕೂಟ ಮತ್ತು ಅಮೆರಿಕಗಳ ನಡುವಿನ ಶೀತಲ ಸಮರದಲ್ಲಿ ಫುಟ್‌ಬಾಲ್‌ನಂತಾಗಿದ್ದ ಅಫ್ಘಾನಿಸ್ತಾನದ ಅನಿಶ್ಚಿತ ಪರಿಸ್ಥಿತಿಯ ದುರ್ಲಾಭ ಪಡೆದ ಪಾಕಿಸ್ತಾನವು, ಕಾಶ್ಮೀರದಲ್ಲಿ ತಾನು ನಡೆಸುತ್ತಿದ್ದ ಜಿಹಾದ್‌ಗೆ ಮತ್ತು ತರುವಾಯದಲ್ಲಿ ಭಯೋತ್ಪಾದನೆಗೆ ಆಫ್ಘಾನ್ ನೆಲವನ್ನು ಬಳಸಿಕೊಂಡಿದ್ದು ಗೊತ್ತಿರುವಂಥದ್ದೇ. ೭೦ರ ದಶಕದವರೆಗೆಸ್ತ್ರೀಯರು ಮತ್ತು ಮಕ್ಕಳ ಹಕ್ಕುಗಳಿಗೆ ಯಾವುದೇ ನಿರ್ಬಂಧವಿರದಿದ್ದ ಅಫ್ಘಾನಿಸ್ತಾನವನ್ನು ಪಾಕ್‌ನ ಧರ್ಮಾಂಧ ಮುಲ್ಲಾಗಳು ಮತ್ತು ಐಎಸ್‌ಐ ಸೇರಿಕೊಂಡು ವಿನಾಶದ ಅಂಚಿಗೆ ತಳ್ಳಿದರು. ಆದರೆ ಆಫ್ಘಾನಿಸ್ತಾನದಲ್ಲಿ ಭಾರತ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಅಲ್ಲಿನ ಜನರಲ್ಲಿ ಭಾರತದ ಮೇಲೆ ಅಭಿಮಾನವನ್ನು ಹೆಚ್ಚಿಸಿವೆ.
೨೦೧೬ರಲ್ಲಿ ಬಿಬಿಜಿ-ಗ್ಯಾಲಪ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಭಾರತದ ಪರವಾಗಿ ಶೇ.೬೨ರಷ್ಟು ಹಾಗೂ ಪಾಕ್ ಪರವಾಗಿ ಕೇವಲ ಶೇ.೩.೭ರಷ್ಟು ಆ-ನ್ನರು ವಿಶ್ವಾಸ ವ್ಯಕ್ತಪಡಿಸಿದ್ದು ಇದಕ್ಕೆ ಸಾಕ್ಷಿ. ಇತ್ತೀಚೆಗೆ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರವೂ ಭಾರತದ ೫ ರಾಯಭಾರ ಕಚೇರಿಗಳು (ಕಾಬೂಲ್,ಹೆರಾತ್, ಕಂದಹಾರ್, ಜಲಾಲಾಬಾದ್ ಮತ್ತು ಮಜಾರ್ -ಷರೀಫ್) ಕಾರ್ಯನಿರ್ವಹಿಸುತ್ತಿರುವುದು ಪಾಕ್‌ಗೆ ನುಂಗಲಾರದ ತುತ್ತಾಗಿದೆ.
ಪಾಕ್-ಆಕ್ರಮಿತ ಕಾಶ್ಮೀರಕ್ಕೆ ಮಹತ್ವವೇಕೆ?
ಭಾರತ ವಿಭಜನೆ ಸಂದರ್ಭದಲ್ಲಿ, ಸೋವಿಯತ್ ಒಕ್ಕೂಟ ಮತ್ತು ಅವಿಭಜಿತ ಭಾರತಗಳ ನಡುವೆ ಒಂದು ‘ಖಾಲಿ ಪ್ರದೇಶ’ ಸೃಷ್ಟಿಸುವ ಹುನ್ನಾರ ಬ್ರಿಟಿಷರದಾಗಿತ್ತು ಮತ್ತು ಇದೇ ಕಾರಣಕ್ಕೆ ಪಾಕಿಸ್ತಾನದ ಸೃಷ್ಟಿಯಾಯಿತು ಎಂಬುದು ಹಲವು ಇತಿಹಾಸಕಾರರ ಅಭಿಪ್ರಾಯ.
ಅದೇನೇ ಇರಲಿ, ಸದ್ಯದ ‘ಪಾಕ್ ಆಕ್ರಮಿತ’ ಕಾಶ್ಮೀರವು, ಜಾಗತಿಕ ವ್ಯೂಹರಚನೆ ಮತ್ತು ಸಾಮರಿಕ ದೃಷ್ಟಿಯಿಂದ ಮಹತ್ವದ ನೆಲೆಯಾಗಿದೆ. ಇದನ್ನುವಿವಾದಾತ್ಮಕವಾಗಿಸಿದಷ್ಟೂ ದಕ್ಷಿಣ ಏಷ್ಯಾ ರಾಷ್ಟ್ರಗಳ ನಡುವೆ ಕಂದಕ ಸೃಷ್ಟಿಸಲು ‘ಹಿತಶತ್ರು’ಗಳಿಗೆ ಅನುಕೂಲವಾಗಬಲ್ಲದು ಎನ್ನುವುದು ಕೂಡ ಅಷ್ಟೇ ಸತ್ಯ. ಶ್ರೀ ಶಾರದಾಂಬೆಯ ಒಂದು ಪೀಠ ಹಾಗೂ ಹಿಂದೂಗಳ ಅನೇಕ ಶ್ರದ್ಧಾಕೇಂದ್ರಗಳು ಇದೇ ಪ್ರದೇಶದಲ್ಲಿರುವುದರಿಂದ ಭಾರತದ ಪಾಲಿಗಿದು ಅತಿ ಮಹತ್ವದ ಪ್ರದೇಶವೇ. ದೇಶದ ಇಂಚಿಂಚು ಪ್ರದೇಶವನ್ನೂ ಸಂರಕ್ಷಿಸುವುದು ಆಳುಗರ ಆದ್ಯ ಕರ್ತವ್ಯವಾಗಬೇಕು; ಆದರೆ ನಮ್ಮ ಹಿಂದಿನ ಕೆಲವು ಅಸಮರ್ಥ ನಾಯಕರಿಂದಾಗಿ ಕಾಶ್ಮೀರದ ಕೆಲಭಾಗ ಕೈತಪ್ಪಿಹೋಗಿದೆ.
ಇದನ್ನು ಮರಳಿ ಪಡೆಯಲು ಮೋದಿ ಸರಕಾರ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದು ಕುತೂಹಲ ಹುಟ್ಟಿಸಿರುವ ಸಂಗತಿ. ದೇಶದ ಅಖಂಡತೆ-ಸಾರ್ವಭೌಮತೆಗಳ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲೊಪ್ಪದ ಮತ್ತು ಈ ನಿಟ್ಟಿನಲ್ಲಿ ದೃಢ ನಿರ್ಧಾರ ಕೈಗೊಳ್ಳಬಲ್ಲ ಮೋದಿ ನೇತೃತ್ವದ ಸರಕಾರಕ್ಕೆ ಇಂಥ ತಾಕತ್ತಿದೆ ಎಂಬುದು ರಾಷ್ಟ್ರದ ಸುರಕ್ಷತೆ ಬಗೆಗೆ ಕಾಳಜಿ ವಹಿಸುವ ಪ್ರತಿಯೊಬ್ಬ ಭಾರತೀಯನಿಗೂ ತಿಳಿದ ಸಂಗತಿ. ‘ಸಂಸ್ಕೃತಿ ಮತ್ತು ನಾಗರಿಕತೆಯ ಪುನರುತ್ಥಾನ’ದ ವಿಷಯದಲ್ಲಿ ಕೇಂದ್ರ ಸರಕಾರಕ್ಕಿರುವ ಬದ್ಧತೆಯನ್ನು ಗಮನಿಸಿದರೆ, ಪಾಕ್ ಆಕ್ರಮಿತ ಕಾಶ್ಮೀರವು ಭಾರತದ ಭೂಭಾಗ ದೊಂದಿಗೆ ಮತ್ತೆ ಸಂಪರ್ಕ ಪಡೆಯುವ ದಿನಗಳು ದೂರವಿಲ್ಲ ಎನಿಸುತ್ತದೆ.
ಆಯ್ಕೆ ನಮ್ಮೆದುರೇ ಇದೆ.
ರಾಜತಾಂತ್ರಿಕತೆ ಮತ್ತು ಮಿಲಿಟರಿ ಬಳಕೆ- ಇವು ಮಗ್ಗುಲುಮುಳ್ಳು ಪಾಕ್ ವಿಷಯದಲ್ಲಿ ನಮ್ಮೆದುರು ಇರುವ ಆಯ್ಕೆಗಳು. ಎರಡೂ ಪರಸ್ಪರ ವಿರುದ್ಧ ಆಯ್ಕೆಯಾದರೂ ಇವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎನ್ನಲಡ್ಡಿಯಿಲ್ಲ. ಅಂದರೆ, ರಾಜತಾಂತ್ರಿಕತೆಯು ಯುದ್ಧ ತಪ್ಪಿಸುವಲ್ಲಿನ ಮೊದಲ ಆಯ್ಕೆಯಾದರೆ, ಮಿಲಿಟರಿ ಬಳಕೆಯು ಕೊನೆಯ ಆಯ್ಕೆಯಾಗುತ್ತದೆ. ಪಾಕ್-ಆಕ್ರಮಿತ ಕಾಶ್ಮೀರ, ಬಲೂಚಿಸ್ತಾನ, ಗಿಲ್ಗಿಟ್ ಬಾಲ್ಟಿಸ್ತಾನ ಪ್ರದೇಶಗಳಲ್ಲಿ ಪಾಕಿಸ್ತಾನದಿಂದ ನಡೆಯುತ್ತಿರುವ ದೌರ್ಜನ್ಯ ಹಾಗೂ ಅಲ್ಲೆಲ್ಲ ತಲೆಯೆತ್ತಿರುವ ಉಗ್ರಗಾಮಿ ತರಬೇತಿ ಶಿಬಿರಗಳು, ಅದರಿಂದ ದಕ್ಷಿಣ ಏಷ್ಯಾ ವಲಯದಲ್ಲಿ ಉಗ್ರಗಾಮಿ ಚಟುವಟಿಕೆಗಳಿಗೆ ಕುಮ್ಮಕ್ಕು ಸಿಕ್ಕಿ ಆಗುತ್ತಿರುವ ತೊಂದರೆಗಳ ಕುರಿತು ಪ್ರಧಾನಿ ಮೋದಿಯವರು ಈಗಾಗಲೇ ವಿವಿಧ ವೇದಿಕೆಗಳಲ್ಲಿ ಉಲ್ಲೇ ಖಿಸಿ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವರಿಕೆ ಮಾಡಿ ಕೊಟ್ಟಿದ್ದಾರೆ.
ಈಗಿನ ವಿದೇಶಾಂಗ ಸಚಿವ ಎಸ್.ಜೈಶಂಕರ್ ಕೂಡ ತಮ್ಮದೇ ನೆಲೆಗಟ್ಟಿನಲ್ಲಿ ಭಾರತದ ಸಾರ್ವಭೌಮತೆಯನ್ನು ಎತ್ತಿಹಿಡಿದಿದ್ದಾರೆ. ಭಾರತದ ಇಂಥ ರಾಜತಾಂತ್ರಿಕ ಪಾರಮ್ಯದ ಎದುರು ಪಾಕಿಸ್ತಾನ ಮಂಡಿಯೂರಲೇಬೇಕಾಗುತ್ತದೆ ಎಂಬುದು ವಾಸ್ತವ. ಆದರೆ ಅದು ಇನ್ನೂ ಪಾಕಿಸ್ತಾನಕ್ಕೆ ಅರ್ಥವಾಗ ದಿರುವುದು ದುರಂತ!
(ಲೇಖಕರು ಹವ್ಯಾಸಿ ಬರಹಗಾರರು)