ಪಂಚರಾಜ್ಯಗಳಲ್ಲಿ ಯಾರಿಗೆ ಪಂಚಕಜ್ಜಾಯ ?
ವೀಕ್ಷಕ ವಿವರಣೆ
ಡಾ.ಸತೀಶ್ ಕೆ.ಪಾಟೀಲ್
ದೇಶಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂ ವಿಧಾನಸಭಾ ಚುನಾ ವಣೆಗಳಿಗೆ ವೇದಿಕೆ ಸಿದ್ಧವಾಗಿದೆ. ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ವಿಪಕ್ಷಗಳ ‘ಇಂಡಿಯ’ ಮೈತ್ರಿಕೂಟಗಳಿಗೆ ಈ ಚುನಾವಣೆ ಸತ್ವಪರೀಕ್ಷೆ ಯಾಗಿದೆ. ವಿಧಾನಸಭೆ ಮತ್ತು ಲೋಕಸಭೆ ಚುನಾ ವಣೆಗಳಿಗೆ ವ್ಯತ್ಯಾಸವಿರುತ್ತದೆ ಎಂಬುದು ಗಮನಿಸ ಬೇಕಾದ ಅಂಶ.
ಕಳೆದ ವಿಧಾನಸಭಾ ಚುನಾವಣೆ ಗಳಲ್ಲಿ ಈ ರಾಜ್ಯಗಳ ಪೈಕಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಗೆದ್ದಿತ್ತು. ನಂತರದ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿಯು ಈ ರಾಜ್ಯಗಳಲ್ಲಿ ಹೆಚ್ಚು ಸ್ಥಾನ ಗಳನ್ನು ಗೆದ್ದಿತ್ತು. ಹಾಗಾದರೆ ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಈ ರಾಜ್ಯಗಳಲ್ಲಿನ ಮತದಾರರು ಯಾವ ಪಕ್ಷಕ್ಕೆ ಜೈ ಎನ್ನುತ್ತಾರೆ ಎಂಬುದು ಕುತೂಹಲ ಹುಟ್ಟಿಸಿದೆ. ಈ ನಿಟ್ಟಿನಲ್ಲಿ ಅವಲೋಕಿಸಿದಾಗ, ಮಧ್ಯ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿಯ ವಿರುದ್ಧ ಆಡಳಿತ- ವಿರೋಧಿ ಅಲೆ ತೀವ್ರವಾಗಿದ್ದು, ಈ ಸಲ ಕಾಂಗ್ರೆಸ್ ಅಧಿಕಾರಕ್ಕೇರುವ ಲಕ್ಷಣಗಳು ಹೆಚ್ಚಾಗಿ ಗೋಚರಿಸು ತ್ತಿವೆ.
೨೦೧೮ರ ಚುನಾವಣೆಯಲ್ಲಿ ಆಗಿನ ಶಿವರಾಜ್‌ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧದ ಆಡಳಿತ- ವಿರೋಧಿ ಅಲೆಯ ಲಾಭ ಪಡೆದ ಕಾಂಗ್ರೆಸ್ ಅಧಿಕಾರ ಪಡೆದು ಕಮಲ್‌ನಾಥ್ ಸಿಎಂ ಆದರೂ, ನಂತರ ನಡೆದ ಕ್ಷಿಪ್ರ ರಾಜಕೀಯ ಕ್ರಾಂತಿ ಮತ್ತು ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯ ಅವರ ಬಂಡಾಯದಿಂದಾಗಿ ಕೈ ಸರಕಾರ ಪತನವಾಯಿತು. ನಂತರ ಬಿಜೆಪಿ ಸರಕಾರ ರಚನೆಯಾಗಿ ಶಿವರಾಜ್‌ಸಿಂಗ್ ಚೌಹಾಣ್ ಮತ್ತೆ ಸಿಎಂ ಆಗಿದ್ದು ಈಗ ಇತಿಹಾಸ. ಈ ಸಲ ಮಧ್ಯಪ್ರದೇಶದಲ್ಲಿ ಪರಿಸ್ಥಿತಿಯು ಬಿಜೆಪಿಗೆ ಪೂರಕವಾಗಿಲ್ಲ. ಶಿವರಾಜ್‌ಸಿಂಗ್ ಸರಕಾರ ತೀವ್ರವಾದ ಆಡಳಿತ-ವಿರೋಧಿ ಅಲೆಯನ್ನು ಎದುರಿಸಬೇಕಾಗಿದೆ.
ಬರೋಬ್ಬರಿ ೧೮ ವರ್ಷಗಳ ಕಾಲ ಸಿಎಂ ಗದ್ದುಗೆಯಲ್ಲಿದ್ದ ಹಿಂದುಳಿದ ವರ್ಗದ ನಾಯಕ ಶಿವರಾಜರ ಮೊದಲಿನ ಇಮೇಜ್ ಈಗ ಉಳಿದಿಲ್ಲ. ಹೀಗಾಗಿ ಅವರು ಪ್ರಧಾನಿ ಮೋದಿ ಯವರ ನಾಮಬಲದ ಮೇಲೆ ಅಧಿಕಾರ ಉಳಿಸಿ ಕೊಳ್ಳುವ ತವಕದಲ್ಲಿದ್ದಾರೆ. ‘ಪ್ರಸ್ತುತ ಕೇಂದ್ರದಲ್ಲಿ ನಮ್ಮದೇ ಸರಕಾರವಿದ್ದು, ಇಲ್ಲಿ ನಮಗೆ ಮತ್ತೊಮ್ಮೆ ಅವಕಾಶ ನೀಡಿದರೆ ರಾಜ್ಯವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುತ್ತೇವೆ’ ಎಂಬ ಅವರ ಪ್ರಚಾರಕ್ಕೆ ಮತದಾರರು ಎಷ್ಟು ಮನ್ನಣೆ ನೀಡುತ್ತಾರೆ ಎಂಬುದಕ್ಕೆ ಫಲಿತಾಂಶವೇ ಉತ್ತರವಾಗಬೇಕು.
ಶಿವರಾಜರು ರಾಜ್ಯದ ಹಿಂದುಳಿದ ವರ್ಗದ ಮಹಿಳೆಯರಿಗೆ ಮಾಸಿಕ ೧೦೦೦ ರು. ನೀಡುವ ಯೋಜನೆಯನ್ನು ಜಾರಿಮಾಡಿದ್ದು ಇದಕ್ಕಾಗಿ ೧೬ ಸಾವಿರ ಕೋಟಿ ರುಪಾಯಿ ಗಳನ್ನು ಮೀಸಲಿಟ್ಟಿದ್ದಾರೆ. ೧.೮೪ ಲಕ್ಷ ಆದಿವಾಸಿ ಬುಡಕಟ್ಟು ಕುಟುಂಬಗಳಿಗೆ ೨೭ ಕೋಟಿ ರುಪಾಯಿ ಮೊತ್ತದ ಆರ್ಥಿಕ ಯೋಜನೆ ಪ್ರಕಟಿಸಿದ್ದು, ಉದ್ಯೋಗದಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಭರವಸೆ ನೀಡಿದ್ದಾರೆ. ಆದರೂ, ಹೆಚ್ಚುತ್ತಿರುವ ಭ್ರಷ್ಟಾಚಾರ, ನಿರುದ್ಯೋಗ, ಬಡತನ, ಬರಗಾಲದಂಥ ಸಮಸ್ಯೆಗಳಿಂದಾಗಿ ಈ ಚುನಾವಣೆಯಲ್ಲಿ ಆಡಳಿತ-ವಿರೋಧಿ ಅಲೆ ವ್ಯಾಪಕ ವಾಗಿದ್ದು ಶಿವರಾಜ್‌ಸಿಂಗ್ ಅವರ ಆತ್ಮವಿಶ್ವಾಸವನ್ನು ಅದು ಕುಗ್ಗಿಸಿದೆ.
ಇನ್ನು ರಾಜ್ಯದಲ್ಲಿ ಗದ್ದುಗೆಯೇ ರುವ ಕನಸು ಕಾಣುತ್ತಿರುವ ಕಾಂಗ್ರೆಸ್, ಮತದಾರ ರಿಗೆ ನೂರು ಯುನಿಟ್ ಉಚಿತ ವಿದ್ಯುತ್, ೫೦೦ ರು.ಗೆ ಎಲ್‌ಪಿಜಿ ಸಿಲಿಂಡರ್ ನೀಡುವ ಭರವಸೆಯಿತ್ತು ಮತ್ತೊಮ್ಮೆ ಕಮಲ್‌ನಾಥ್ ನೇತೃತ್ವದಲ್ಲಿ ಗೆಲ್ಲುವ ವಿಶ್ವಾಸವಿಟ್ಟುಕೊಂಡಿದೆ. ಒಟ್ಟಿನಲ್ಲಿ ಮಧ್ಯಪ್ರದೇಶ ದಲ್ಲಿಉಭಯ ಪಕ್ಷಗಳೂ ಅಧಿಕಾರಕ್ಕಾಗಿ ತೀವ್ರ ಕಸರತ್ತು ಮಾಡುತ್ತಿರುವುದು ಖರೆ. ರಾಜಸ್ಥಾನ ವಿಧಾನಸಭೆಯ ೨೦೦ ಸ್ಥಾನಗಳಿಗೆ ಅಖಾಡ ಸಿದ್ಧವಾಗಿದ್ದು, ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ಪರಸ್ಪರ ತೊಡೆ ತಟ್ಟುತ್ತಿವೆ.
ಇಲ್ಲೂ ಮುಖ್ಯಮಂತ್ರಿ ಅಶೋಕ್ ಗೆಹ್ಲೋಥ್ ನೇತೃತ್ವದ ಸರಕಾರವು ಆಡಳಿತ-ವಿರೋಧಿ ಅಲೆ ಎದುರಿಸುತ್ತಿದ್ದು ಇದರ ಲಾಭ ಪಡೆಯುವ ಹುಮ್ಮಸ್ಸಿ ನಲ್ಲಿದೆ ಬಿಜೆಪಿ. ೨೦೧೮ರಲ್ಲಿ, ವಸುಂಧರಾ ರಾಜೆ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧದ ಆಡಳಿತ-ವಿರೋಧಿ ಅಲೆಯಿಂದಾಗಿ ಕಾಂಗ್ರೆಸ್‌ಗೆ ಭರ್ಜರಿ ಗೆಲುವು ದಕ್ಕಿತ್ತು. ಈಗ ಬೇರೆಯೇ ಪರಿಸ್ಥಿತಿಯಿದೆ. ಸಿಎಂ ಅಶೋಕ್ ಗೆಹ್ಲೋಥ್ ಮತ್ತು ಯುವನಾಯಕ ಸಚಿನ್ ಪೈಲಟ್ ನಡುವಿನ ಮುಸುಕಿನೊಳಗಿನ ಗುದ್ದಾಟ, ತರುವಾಯದ ಬಹಿರಂಗ ಕಾಳಗದಿಂದಾಗಿ ಕಾಂಗ್ರೆಸ್ ಸರಕಾರದ ವರ್ಚಸ್ಸಿಗೆ ಸಾಕಷ್ಟು ಧಕ್ಕೆಯಾಗಿದೆ. ಸಚಿನ್ ರಾಜ್ಯದೆಲ್ಲೆಡೆ ಸಂಚರಿಸಿ ತಮ್ಮ ಪಕ್ಷದ ಸರಕಾರ ಮತ್ತು ಸಿಎಂ ಮೇಲೆಯೇ ಹಲವು ಆರೋಪ ಮಾಡಿದ್ದು ಎದುರಾಳಿ ಬಿಜೆಪಿಗೆ ಈ ಚುನಾವಣೆಯಲ್ಲಿ ವರವಾಗಿ ಪರಿಣಮಿಸಲಿದೆ.
ಹಾಗಂತ ಅಶೋಕ್ ಗೆಹ್ಲೋಥ್ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸರಿಯಾಗಿ ಮಾಡಿಲ್ಲ ಎನ್ನಲಾಗದು. ‘ಇಂದಿರಾ ರಸೋಯಿ’, ‘ಮುಖ್ಯಮಂತ್ರಿ ಚಿರಂಜೀವಿ’ ಯೋಜನೆ ಸೇರಿದಂತೆ ಹಲವು ಜನೋಪಯೋಗಿ ಯೋಜನೆಗಳನ್ನು ಅವರು ಜಾರಿಗೆ ತಂದಿದ್ದಾರೆ. ಆದರೆ ಸಚಿನ್ ಪೈಲಟ್‌ರ ಆರೋಪಮತ್ತು ಹೋರಾಟಗಳಿಂದಾಗಿ ಈ ಯೋಜನೆಗಳೆಲ್ಲ ಮಂಕಾಗಿವೆ. ಕಾಂಗ್ರೆಸ್‌ನ ಇಂಥ ಆಂತರಿಕ ಬಂಡಾಯದ ಲಾಭ ಪಡೆಯಲು ಬಿಜೆಪಿ ಸಜ್ಜಾಗಿದೆ. ಜತೆಗೆ ಪ್ರಧಾನಿ ಮೋದಿಯವರ ಜನಪ್ರಿಯತೆ ಹಾಗೂ ಅವರ ಸರಕಾರದ ಯೋಜನೆಗಳ ಪ್ರಯೋಜಕತೆಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಮತ್ತೆ ಅಽಕಾರಕ್ಕೇರಲು ಅದು ಸಜ್ಜಾಗಿದೆ.
ಇನ್ನು, ೧೧೭ ಸದಸ್ಯ ಬಲದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕೆ.ಚಂದ್ರಶೇಖರ ರಾವ್ (ಕೆಸಿಆರ್) ನೇತೃತ್ವದ ಬಿಆರ್‌ಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ತೀವ್ರ ಹಣಾಹಣಿಯಿದೆ. ಆಂಧ್ರಪ್ರದೇಶದಿಂದ ಪ್ರತ್ಯೇಕಗೊಂಡ ನಂತರ ತೆಲಂಗಾಣಕ್ಕೆ ಇದು ೩ನೇ ಚುನಾವಣೆ. ಸತತ ೨ ಬಾರಿ ಗೆದ್ದಿರುವ ಕೆಸಿಆರ್ ಈ ಬಾರಿ ಹ್ಯಾಟ್ರಿಕ್ ಗೆಲುವಿನ ಹುಮ್ಮಸ್ಸಿನಲ್ಲಿದ್ದಾರೆ. ಆದರೆ ‘ಗ್ಯಾರಂಟಿ’ಗಳ ಭರವಸೆ ಹಾಗೂ ಆಡಳಿತ-ವಿರೋಧಿ ಅಲೆಯ ಲಾಭ ಪಡೆಯುವ ಮೂಲಕ ಕಾಂಗ್ರೆಸ್ ಅವರಿಗೆ ಬಿಸಿ ಮುಟ್ಟಿಸಲು ತವಕಿಸುತ್ತಿದೆ.
ಎರಡು ಅವಧಿಯ ಆಡಳಿತದಲ್ಲಿ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಕೆಸಿಆರ್ ಕೃಷಿ ನೀರಾವರಿ ಮೂಲಕ ರೈತರಿಗೆ ಅನುಕೂಲ ಒದಗಿಸಿದ್ದಾರೆ. ಜತೆಗೆ ಕಾಂಗ್ರೆಸ್‌ನ ೧೨ ಶಾಸಕರನ್ನು ತಮ್ಮೆಡೆಗೆ ಸೆಳೆದು ಸಂಖ್ಯೆಯನ್ನು ೧೦೪ಕ್ಕೆ ಹೆಚ್ಚಿಸಿಕೊಂಡಿದ್ದಾರೆ. ಆದರೆ ಈ ಸಲ ಬಹುತೇಕ ಶಾಸಕರ ಬಗ್ಗೆ ಜನರು ಅಸಮಾಧಾನಗೊಂಡಿದ್ದು ಈ ಅಲೆಯನ್ನು ಕೆಸಿಆರ್ ಎದುರಿಸಬೇಕಿದೆ. ತೆಲಂಗಾಣದ ಜನಸಂಖ್ಯೆಯಲ್ಲಿ ಶೇ.೪೮ರಷ್ಟಿರುವ ಹಿಂದುಳಿದ ವರ್ಗದವರು, ಶೇ.೧೭ರಷ್ಟಿರುವ ದಲಿತರು ಮತ್ತು ಶೇ.೧೧ರಷ್ಟಿರುವ ಎಸ್‌ಟಿ ಜನಾಂಗದ ವರನ್ನು ಬಳಸಿಕೊಳ್ಳಲು ಮೂರೂ ಪಕ್ಷಗಳು ಮುಂದಾಗಿವೆ.
ಆದರೆ ‘ಪ್ರಾದೇಶಿಕ ಅಸ್ಮಿತೆ’ಯ ಲಾಭ ತಮಗೆ ಸಿಗಲಿದೆ ಎಂಬ ವಿಶ್ವಾಸದಲ್ಲಿ ಕೆಸಿಆರ್ ಇದ್ದರೆ, ಆಡಳಿತ-ವಿರೋಧಿ ಅಲೆಯಿಂದ ತನಗೆ ಲಾಭವಾಗುತ್ತದೆ ಎಂಬ ನಂಬಿಕೆಯಲ್ಲಿದೆ ಕಾಂಗ್ರೆಸ್. ಜತೆಗೆ, ಕರ್ನಾಟಕ ಮಾದರಿಯ ಯೋಜನೆಗಳನ್ನು ತೆಲಂಗಾಣದಲ್ಲೂ ಘೋಷಿಸುವ ಮೂಲಕ ಮಹಿಳೆಯರು ಮತ್ತು ಯುವಕರನ್ನು ಸೆಳೆಯಲು ಕಾಂಗ್ರೆಸ್ ತವಕಿಸುತ್ತಿದೆ. ಇನ್ನು ಒವೈಸಿ ಅವರ ಎಐಎಂಐಎಂ ಪಕ್ಷವು ಅಲ್ಪಸಂಖ್ಯಾತರ ಮತಗಳನ್ನು ವಿಭಜಿಸುತ್ತದೆ ಎಂಬ ಆತಂಕವೂ ಕಾಂಗ್ರೆಸ್‌ಗಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಅಬ್ಬರದ ಪ್ರಚಾರ ನಡೆಸಿ ಪಕ್ಷದ ಪುನಶ್ಚೇತನಕ್ಕೆ ಯತ್ನಿಸಿದ್ದಾರೆ. ಆದರೆ ತೆಲಂಗಾಣದಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂಥ ನೆಲೆಯಿಲ್ಲ. ಹೀಗಾಗಿ ಈ ಬಾರಿಯ ಚುನಾವಣೆ ಬಿಆರ್‌ಎಸ್ ಮತ್ತು ಕಾಂಗ್ರೆಸ್ ನಡುವಿನ ನೇರ ಹಣಾಹಣಿಯಾಗಿ ಮಾರ್ಪಟ್ಟಿದೆ.
೯೦ ಸದಸ್ಯಬಲದ ಛತ್ತೀಸ್‌ಗಢದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿಯಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರ ಪಡೆಯುವ ಸಾಧ್ಯತೆ ಹೆಚ್ಚಾಗಿದೆ. ಮುಖ್ಯಮಂತ್ರಿ ಭೂಪೇಶ್ ಬಘೇಲ್ ಜಾರಿಗೆ ತಂದಿರುವ ರೈತರಿಗಾಗಿನ ರಾಜೀವ್ ಗಾಂಧಿ ಕಿಸಾನ್ ಕಲ್ಯಾಣ್ ಯೋಜನೆ, ಯುವಕರಿಗಾಗಿನ ೨,೫೦೦ ರು. ಮಾಸಿಕ ಭತ್ಯೆ ಯೋಜನೆ, ವಿದ್ಯುತ್ ಬಿಲ್‌ನಲ್ಲಿ ಶೇ.೫೦ರಷ್ಟು ರಿಯಾಯಿತಿ, ಪ್ರತಿ ಕ್ವಿಂಟಾಲ್ ಬತ್ತಕ್ಕೆ ಬೆಂಬಲ ಬೆಲೆಯಂಥ ಯೋಜನೆಗಳೇ ಇದಕ್ಕೆ ಕಾರಣ. ಜತೆಗೆ ನಕ್ಸಲ್ ಹಾವಳಿಯೂ ಕಡಿಮೆಯಾಗಿರುವುದು ತಮಗೆ ಪ್ರಯೋಜನಕಾರಿ ಅಂಶವಾಗಲಿದೆ ಎಂಬ  ಲೆಕ್ಕಾಚಾರದಲ್ಲಿದೆ ಕಾಂಗ್ರೆಸ್.
ಈ ಬಾರಿ ಶತಾಯಗತಾಯ ಸಿಂಹಾಸನ ದಕ್ಕಿಸಿಕೊಳ್ಳಬೇಕು ಎಂಬ ಹವಣಿಕೆಯಲ್ಲಿರುವ ಬಿಜೆಪಿ, ಚುನಾವಣೆಗೆ ಒಂದು ತಿಂಗಳು ಮೊದಲೇ ಅಭ್ಯರ್ಥಿ ಗಳನ್ನು ಘೋಷಿಸಿ ಕಾಂಗ್ರೆಸ್ ಗಿಂತ ಮೊದಲೇ ಅಖಾಡಕ್ಕೆ ಇಳಿದಿದೆ. ಕಾಂಗ್ರೆಸ್ ಸರಕಾರದಲ್ಲಿ ಕಂಡುಬಂದ ಭ್ರಷ್ಟಾಚಾರ ಮತ್ತು ಹಗರಣಗಳನ್ನು‘ಪರಿವರ್ತನಾ ರ‍್ಯಾಲಿ’ ಮೂಲಕ ಜನರಿಗೆ ತಲುಪಿಸಲು ಬಿಜೆಪಿ ಯತ್ನಿಸುತ್ತಿರುವುದರ ಜತೆಗೆ ಪ್ರಧಾನಿ ಮೋದಿಯವರ ಜನಪ್ರಿಯತೆಯನ್ನೂ ಎನ್‌ಕ್ಯಾಶ್ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಮಾಜಿ ಸಿಎಂ ರಮಣ್‌ಸಿಂಗ್, ಓಂ ಪ್ರಕಾಶ್ ಮಾಥುರ್ ಸೇರಿದಂತೆ ರಾಜ್ಯದ ಅನೇಕ ಬಿಜೆಪಿ ನಾಯಕರು ಈ ನಿಟ್ಟಿನಲ್ಲಿ ಬೆವರು ಸುರಿಸುತ್ತಿದ್ದಾರೆ. ಹೀಗಾಗಿ ಛತ್ತೀಸ್‌ಗಢವೂ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ.
ಇನ್ನು ೪೦ ಸ್ಥಾನಗಳನ್ನು ಹೊಂದಿರುವ ಮಿಜೋರಾಂ ನಲ್ಲಿ ಹಾಲಿ ಆಡಳಿತ ಪಕ್ಷ ಎಂಎನ್‌ಎಫ್ ಮತ್ತು ಪ್ರತಿಪಕ್ಷವಾದ ಮಿಜೋರಾಂ ಪೀಪಲ್ಸ್ ಮೂವ್‌ಮೆಂಟ್ ನಡುವೆ ತೀವ್ರ ಪೈಪೋಟಿಯಿದ್ದು, ಗತವೈಭವಕ್ಕೆ ಮರಳಲು ಕಾಂಗ್ರೆಸ್ ಹರಸಾಹಸ ಪಡುವಂತಾಗಿದೆ. ಬಿಜೆಪಿಗೆ ಇಲ್ಲಿ ಹೇಳಿಕೊಳ್ಳು ವಂಥ ನೆಲೆಯಿಲ್ಲ. ಒಟ್ಟಿನಲ್ಲಿ, ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಯಾವ ಪಕ್ಷಕ್ಕೆ ಮತದಾರರು ಜೈ ಅನ್ನುತ್ತಾರೆ ಎನ್ನುವ ಕುತೂಹಲದ ಪರದೆ ಸರಿಯಬೇಕೆಂದರೆ ಡಿಸೆಂಬರ್ ೩ರವರೆಗೂ ಕಾಯಬೇಕು.
(ಲೇಖಕರು ಪ್ರಾಧ್ಯಾಪಕರು ಹಾಗೂರಾಜಕೀಯ ವಿಶ್ಲೇಷಕರು)