ಅಧೋಮುಖಿ ಜಾಗತಿಕ ಆರ್ಥಿಕತೆ
ಮನಿಮ್ಯಾಟರ್‌
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
ಆರ್ಥಿಕ ವಿದ್ಯಮಾನಗಳು ಭಾರತಕ್ಕೆ ಷಏಹಲವು ಸ್ತರಗಳಲ್ಲಿ ತಲೆನೋವಾಗಿದೆ. ಇಸೇಲ್-ಹಮಾಸ್ ಯುದ್ಧದಿಂದಾಗಿ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲಬೆಲೆ ಏರಿಕೆಯಾಗುವ ಅಪಾಯವಿದ್ದು, ಬ್ಯಾರಲ್‌ಗೆ ೯೦ ಡಾಲರ್ ದಾಟಿ ಮುನ್ನುಗ್ಗುವ ಸಂಭವವಿದೆ. ಇದು ಹಣದುಬ್ಬರವನ್ನು ಹೆಚ್ಚಿಸುವ ಸಾಧ್ಯತೆಗಳಿವೆ.
ಜಾಗತಿಕ ಆರ್ಥಿಕತೆಯು ಅಧೋಮುಖಿಯಾಗಿ ಚಲಿಸಲು ಪ್ರಾರಂಭಿಸಿದ ಈ ಸಮಯದಲ್ಲೇ ಇಸ್ರೇಲ್-ಪ್ಯಾಲೆ ಸ್ತೀನ್ ಸಮರವು ಅದರ ಮೇಲೆ ಇನ್ನಷ್ಟು ಕಾರ್ಮೋಡ ಕವಿಯುವಂತೆ ಮಾಡಿದೆ. ಹೀಗಾಗಿ ಜಾಗತಿಕ ಆರ್ಥಿಕತೆ ಅತ್ಯಂತ ದುಸ್ಥಿತಿಗೆ ಜಾರುವ ಮುನ್ಸೂಚನೆಗಳು ಕಾಣುತ್ತಿವೆ. ಈಗಾಗಲೇ ಹೆಚ್ಚುತ್ತಿರುವ ಬಡ್ಡಿದರ ಮತ್ತು ಪ್ರತಿಕೂಲ ಪರಿಸ್ಥಿತಿಗಳನ್ನು ಗಮನಿಸಿರುವ ಐಎಂಎಫ್ ಮತ್ತು ವಿಶ್ವಬ್ಯಾಂಕ್‌ಗಳು, ಜಾಗತಿಕ ಆರ್ಥಿಕತೆಯು ಚಿಂತಾಜನಕ ವಾಗಲಿರುವುದರ ಕುರಿತು ಎಚ್ಚರಿಸಿವೆ.
ಈಗಾಗಲೇ ತೈಲ ಬೆಲೆ ಏರಿದ್ದು ಅದು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಲಿದೆ. ಹೀಗಾಗಿ ಈ ವರ್ಷದ ಜಾಗತಿಕ ಆರ್ಥಿಕ ಬೆಳವಣಿಗೆಯನ್ನು ಶೇ.೩ ಎಂದೂ, ಮುಂದಿನ ವರ್ಷ ಅದು ಶೇ.೨.೯ಕ್ಕಿಂತಲೂ ಕೆಳಗಿಳಿಯಲಿದೆ ಯೆಂದೂ ಐಎಂಎಫ್ ಹೇಳಿದೆ. ಜಾಗತಿಕ ಮಟ್ಟದಲ್ಲಿನ ಎಲ್ಲಾ ಕಳಪೆ ಆರ್ಥಿಕ ವಿದ್ಯಮಾನಗಳು, ಮುಗಿಯದ ರಷ್ಯಾ- ಉಕ್ರೇನ್ ಮತ್ತು ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧಗಳು, ಹವಾಮಾನ ವೈಪರೀತ್ಯಗಳು ಜಾಗತಿಕ ಆರ್ಥಿಕತೆ ಯನ್ನು ಸಂಕಷ್ಟದ ಪರಿಸ್ಥಿತಿಗೆ ಕೊಂಡೊಯ್ಯದೇ ಇರವು.
ಹಲವಾರು ವ್ಯತಿರಿಕ್ತ ಸಂಗತಿಗಳ ನಡುವೆಯೂ, ಹಣದುಬ್ಬರದ ಏರಿಳಿತದ ಹೊರತಾಗಿಯೂ ಕಳೆದ ೩ ವರ್ಷಾ ವಧಿಯಲ್ಲಿ ಭಾರತವು ಜಗತ್ತಿನ ಗಮನಾರ್ಹ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವುದರ ಅರಿವಾಗುತ್ತದೆ. ಈ ಅವಧಿಯಲ್ಲಿನ ಆರ್ಥಿಕ ಸಂಕಷ್ಟಗಳಿಂದಾಗಿ ನ್ಯೂಜಿಲೆಂಡ್ ಪ್ರಧಾನಿ ರಾಜೀನಾಮೆ ನೀಡಿದರೆ, ಆಸ್ಟ್ರೇಲಿಯಾಮೀಸಲುಗಳನ್ನು ಮುಂದಿಟ್ಟಿದೆ. ಅಮೆರಿಕ ಆರ್ಥಿಕ ಹಿಂಜರಿತದ ಭಯದಲ್ಲಿದ್ದರೆ, ಚೀನಾ ಆರ್ಥಿಕತೆಯು ತೀರಾ ಬಿಕ್ಕಟ್ಟಿನಲ್ಲಿದ್ದು ಸರಿದಾರಿಗೆ ಮರಳ ಲಾಗದೆ ಹೆಣಗುತ್ತಿದೆ. ಅಕ್ಕಪಕ್ಕದ ಪಾಕಿಸ್ತಾನ, ಅಫ್ಘಾನಿಸ್ತಾನ, ಶ್ರೀಲಂಕಾ ಸಂಪೂರ್ಣ ದಿವಾಳಿಯಾಗಿವೆ. ಮೆಚ್ಚ ಬೇಕಾದ ಸಂಗತಿಯೆಂದರೆ, ನಮ್ಮ ದೇಶದಲ್ಲಿ ಬೃಹತ್ ಯೋಜನೆ ಗಳು ರಾಷ್ಟ್ರಕ್ಕೆ ಸಮರ್ಪಿತವಾಗುತ್ತಿವೆ.
ಬಲಿಷ್ಠ ಆರ್ಥಿಕತೆಯ ವಿಷಯದಲ್ಲಿ ಜಗತ್ತಿನಲ್ಲಿ ೩ನೇ ಸ್ಥಾನದಲ್ಲಿ ರುವ ಭಾರತವು ಬೆಳವಣಿಗೆಯ ಶೇಕಡಾವಾರು ಅಂಕಿ- ಅಂಶಗಳಲ್ಲಿ ಚೀನಾವನ್ನುಹಿಂದಿಕ್ಕಿದೆ. ಪ್ರಸಕ್ತ ವರ್ಷದ ಜಿಡಿಪಿಯ ಶೇ.೬.೫ರ ಬೆಳವಣಿಗೆಯ ಸಾಧ್ಯತೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಂದಾಜಿಸಿದೆ. ಆದರೆ ಅನಿಶ್ಚಿತತೆಗಳು ಕಾಡುತ್ತಿವೆ.
ವಿವಿಧ ದೇಶಗಳ ಆರ್ಥಿಕ ಬೆಳವಣಿಗೆಯ ಮುನ್ನೋಟ ವನ್ನು ಐಎಂಎಫ್ ಪ್ರಕಟಿಸಿದೆ. ಅದರನ್ವಯ, ಅಮೆರಿಕ, ರಷ್ಯಾ, ಜಪಾನ್‌ಗಳ ಜಿಡಿಪಿ ಶೇ.೨ರ ಮಟ್ಟದಲ್ಲಿ ಇರಲಿದ್ದರೆ, ಜರ್ಮನಿಯದ್ದು ಶೇ.-೦.೫ಕ್ಕೆ ಕುಸಿಯಬಹುದು ಎನ್ನಲಾಗಿದೆ. ಫ್ರಾನ್ಸ್, ಇಟಲಿ, ಕೆನಡಾ, ಸೌದಿ ಅರೇಬಿಯಾ, ಆಫ್ರಿಕಾಗಳ ಜಿಡಿಪಿ ಶೇ.೨ಕ್ಕಿಂತ ಕೆಳಮಟ್ಟಕ್ಕೆ ಜಾರಲಿವೆ. ಆದರೆ ಭಾರತಕ್ಕೆ ಸಂಬಂಧಿಸಿ ಶೇ.೬.೩ರ ಮುನ್ನೋಟವನ್ನು ಪ್ರಕಟಿಸಲಾಗಿದೆ. ಭಾರತದ ೨ನೇ ತ್ರೈಮಾಸಿಕ ವರಮಾನ, ಕಚ್ಚಾತೈಲ ಪೂರೈಕೆ, ಮಧ್ಯ ಪ್ರಾಚ್ಯದ ಅನಿಶ್ಚಿತ ಸ್ಥಿತಿಯು ದೇಶಿ ಮಾರುಕಟ್ಟೆಯ ವಹಿವಾಟಿನ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ ತಜ್ಞರು.
ಅಮೆರಿಕದ ಬಾಂಡ್ ಲಾಭದಲ್ಲಿ, ಬಡ್ಡಿದರಗಳಲ್ಲಿ ಆಗಿರುವ ಹೆಚ್ಚಳ ಮತ್ತು ಇಸ್ರೇಲ್-ಹಮಾಸ್ ಸಂಘರ್ಷ ದಿಂದ ವಿದೇಶಿ ಹೂಡಿಕೆದಾರರು ದೇಶದಲ್ಲಿನ ಹೂಡಿಕೆಯನ್ನು ಹಿಂಪಡೆಯುತ್ತಿರುವುದು ಇನ್ನೊಂದು ಪ್ರಮುಖ ಕಳವಳಕ್ಕೆ ಕಾರಣವಾಗಿದೆ. ೨೦೨೩ರ ಲೆಕ್ಕಾಚಾರದಲ್ಲಿ ಅಮೆರಿಕದ ಜಿಡಿಪಿ೨೫ ಟ್ರಿಲಿಯನ್ ಡಾಲರ್ ಇದ್ದರೆ, ಎರಡನೆಯ ಸ್ಥಾನದಲ್ಲಿರುವ ಚೀನಾದ ಜಿಡಿಪಿ ೧೯.೩ ಲಕ್ಷ ಕೋಟಿ ಡಾಲರ್, ನಂತರ ಜಪಾನ್ ೪.೪ ಲಕ್ಷ ಕೋಟಿ ಡಾಲರ್, ಜರ್ಮನಿ ೪.೩ ಲಕ್ಷ ಕೋಟಿ ಡಾಲರ್ ಹಾಗೂ ಭಾರತದ್ದು ೩.೬ ಲಕ್ಷ ಕೋಟಿ ಡಾಲರ್‌ನಷ್ಟಿದೆ. ಭಾರತದ ಸದ್ಯದ ಆರ್ಥಿಕತೆಯನ್ನು ಗಮನಿಸಿದರೆ ಅದು ಕೆಲವೇ ವರ್ಷಗಳಲ್ಲಿ ವಿಶ್ವದ ಮೂರನೆಯ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮುವ ಸಾಧ್ಯತೆಗಳಿವೆ.
೨೦೨೩-೨೪ನೇ ಸಾಲಿನಲ್ಲಿ ನಾಲ್ಕನೆಯ ಬಾರಿಗೆ ಜಿಎಸ್‌ಟಿ ಸಂಗ್ರಹ ೧.೬೦ ಲಕ್ಷ ಕೋಟಿ ರು. ದಾಟಿದೆ. ೨೦೨೩-೨೪ರಲ್ಲಿ ಸರಾಸರಿ ಮಾಸಿಕ ಸಂಗ್ರಹವು೧.೬೫ ಲಕ್ಷ ಕೋಟಿ ರು.ಗಳಷ್ಟಿದೆ. ಹೆಚ್ಚುತ್ತಿರುವ ಜಿಎಸ್‌ಟಿ ಸಂಗ್ರಹವು ಆರ್ಥಿಕತೆಯು ಪ್ರಗತಿಯ ಮತ್ತು ಸ್ಥಿರ ಬೆಳವ ಣಿಗೆಯ ಪಥದಲ್ಲಿ ಮುಂದುವರಿಯುತ್ತಿದೆ ಎಂಬುದನ್ನು ಸೂಚಿಸುತ್ತದೆ. ಜಿಎಸ್‌ಟಿಯು ಪಾರದರ್ಶಕವಾಗುತ್ತಾ ಸಾಗಿದ್ದು ಭವಿಷ್ಯದಲ್ಲಿ ತೆರಿಗೆ ದರ ಇಳಿಕೆಯಾಗಿ ದೇಶದ ಜಿಡಿಪಿ ಏರಿಕೆಯಾಗುತ್ತದೆ. ಇದರಿಂದ ಸರಕಾರಕ್ಕೆ ಮೂಲ ಸೌಕರ್ಯ, ಸಾಮಾಜಿಕ ಕಲ್ಯಾಣ ಯೋಜನೆ ಮುಂತಾದವುಗಳಿಗೆ ಬೇಕಿರುವ ಬಂಡವಾಳ ಕ್ರೋಡೀಕರಣ ಸಾಧ್ಯವಾಗುತ್ತದೆ.
ಪಾಶ್ಚಾತ್ಯ ರಾಷ್ಟ್ರಗಳು ಕೋವಿಡ್ ಸಮಸ್ಯೆಯ ನಂತರ ಚೀನಾದ ಮೇಲಿನ ನಂಬಿಕೆ ಮತ್ತು ಭರವಸೆಯನ್ನು ಕಳೆದು ಕೊಂಡು, ಚೀನಾಕ್ಕೊಂದು ಪರ್ಯಾಯ ಶಕ್ತಿಯನ್ನು ಹುಡುಕುವ ನಿಟ್ಟಿನಲ್ಲಿ ಭಾರತದತ್ತ ಮುಖಮಾಡಿವೆ. ಭಾರತದಲ್ಲಿ ಹೆಚ್ಚಿನ ಯುವಶಕ್ತಿಯಿದೆ, ಸಂಪನ್ಮೂಲಗಳಿವೆ ಹಾಗೂ ಇಲ್ಲಿನ ಕಾರ್ಮಿಕ ಶಕ್ತಿಯೂಗಣನೀಯವಾಗಿ ರುವುದು ಪಾಶ್ವಾತ್ಯರ ಗಮನದಲ್ಲಿದೆ. ಹೀಗಾಗಿ ಭಾರತಕ್ಕೆ ಸಾಕಷ್ಟು ವಿದೇಶಿ ಬಂಡವಾಳ ಹರಿದುಬರಲಿದೆ. ಅದರಲ್ಲೂ, ಜಿ-೨೦ ರಾಷ್ಟ್ರಗಳೊಡನೆ ಹೊಂದಿರುವ ಒಪ್ಪಂದ ಗಳ ಮೂಲಕ ದೇಶೀಯ ತಯಾರಿಕಾ ಕ್ಷೇತ್ರದ ವಹಿವಾಟು ೨೦೩೦ರ ಹೊತ್ತಿಗೆ ೧೦ ಲಕ್ಷಕೋಟಿ ಡಾಲರ್‌ಗೆ ಮುಟ್ಟುವ ಹಾದಿ ಸುಗಮ ವಾಗಲಿದೆ.
ಚೀನಾದ ಆರ್ಥಿಕತೆಯ ಬಗ್ಗೆ ಹೇಳುವುದಾದರೆ, ಅದು ಒಂದು ವಿಸ್ಮಯ ಘಟನೆಯಂತೆ ಅಭಿವೃದ್ಧಿ ಹೊಂದಿತ್ತು. ಕಳೆದ ೧೦ ವರ್ಷಗಳಲ್ಲಿ ಅದರ ಜಿಡಿಪಿ ಶೇ.೧೦೦ರಷ್ಟು ಹೆಚ್ಚಾಗಿದ್ದು ಒಂದು ಜಾಗತಿಕ ದಾಖಲೆ. ಅದಲ್ಲದೆ ತನ್ನ ಜನಸಂಖ್ಯೆಯ ದೊಡ್ಡಭಾಗವನ್ನು ಬಡತನ ರೇಖೆಯಿಂದ ಮೇಲಕ್ಕೆತ್ತಿ ಕಳೆದ ೩-೪ ದಶಕಗಳಿಂದ ಸತತವಾಗಿ ಬೆಳೆದ ಈ ದೇಶದ ಆರ್ಥಿಕತೆಯು, ಅನೇಕ ಸಣ್ಣಪುಟ್ಟ ದೇಶಗಳಿಗೆ ಸಾಲದ ನೆರವು ನೀಡುತ್ತಾ ಅಮೆರಿಕಕ್ಕೆ ಸೆಡ್ಡು ಹೊಡೆಯುವಂತೆ ಬೆಳೆಯಿತು. ಆದರೆ ಇತ್ತೀಚಿನ ಸುದ್ದಿಗಳು ಚೀನಾಕ್ಕೆ ಆತಂಕವನ್ನು ಹುಟ್ಟಿಸಿವೆ.
ಕೋವಿಡ್ ತರುವಾಯದ ಚೀನಿ ಆರ್ಥಿಕತೆಯು ತೀವ್ರ ಬಿಕ್ಕಟ್ಟಿನಲ್ಲಿದ್ದು, ಚಿಲ್ಲರೆ ವ್ಯಾಪಾರವು ಶೇ.೧೨.೭ ರಿಂದ ಶೇ.೩.೩ಕ್ಕೆ ಕುಸಿದಿದೆ, ಒಟ್ಟಾರೆ ಉತ್ಪಾದನಾಕ್ಷೇತ್ರವು ಸಂಕುಚಿತವಾಗಿದೆ. ಚೀನಾದ ರಾಷ್ಟ್ರೀಯ ಬ್ಯಾಂಕು ಬಡ್ಡಿದರವನ್ನು ತಗ್ಗಿಸಿ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಯತ್ನಿಸಿದ್ದರೂ ಅದರಿಂದ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ವಿದೇಶಿ ಹೂಡಿಕೆದಾರರು ಚೀನಾದಿಂದ ಕಾಲ್ತೆಗೆಯುತ್ತಿರುವುದು ಅದಕ್ಕೆ ನಕಾರಾತ್ಮಕ ಅಂಶವಾಗಿದೆ. ಆದರೆ ಚೀನಾ ಮುಳುಗುವಾಗ ತನ್ನೊಂದಿಗೆ ಇಡೀ ಜಗತ್ತನ್ನು ಆಳಕ್ಕೆ ಕೊಂಡೊಯ್ಯುವುದು ಆಘಾತಕಾರಿ ವಾಸ್ತವಿಕತೆ. ಚೀನಾದ ಮೇಲೆ ಭರವಸೆಯಿಟ್ಟಿದ್ದ ರಾಷ್ಟ್ರಗಳುಹೂಡಿಕೆಗೆ ಭಾರತದತ್ತ ಮುಖಮಾಡುತ್ತಿರುವುದು ಭಾರತದ ಆರ್ಥಿಕಾಭಿವೃದ್ಧಿಗೆ ಪೂರಕ ವಾಗಲಿದೆ.
ಆದರೆ ಜಾಗತಿಕ ಆರ್ಥಿಕ ವಿದ್ಯಮಾನಗಳು ಭಾರತಕ್ಕೆ ಹಲವು ಸ್ತರಗಳಲ್ಲಿ ತಲೆನೋವಾಗಿದ್ದು, ಹಣದುಬ್ಬರವು ಆತಂಕವನ್ನುಂಟುಮಾಡಿದೆ. ಪ್ರಸಕ್ತ ಹಣದುಬ್ಬರ ಶೇ.೫.೦೨ಕ್ಕೆ ಇಳಿಕೆ ಕಂಡರೂ ಇದು ತಾತ್ಕಾಲಿಕ. ಇಸ್ರೇಲ್- ಹಮಾಸ್ ಯುದ್ಧದಿಂದಾಗಿ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಯಾಗುವ ಅಪಾಯವಿದ್ದು, ಬ್ಯಾರಲ್‌ಗೆ ೯೦ ಡಾಲರ್ ದಾಟಿ ಮುನ್ನುಗ್ಗುವ ಸಂಭವವಿದೆ. ಇದು ಹಣದುಬ್ಬರವನ್ನು ಹೆಚ್ಚಿಸುವ ಸಾಧ್ಯತೆ ಗಳಿವೆ. ಒಂದೊಮ್ಮೆ ಯುದ್ಧವು ಗಲ್ಫ್ ದೇಶ ಗಳಿಗೂ ವಿಸ್ತರಿಸಿದರೆ, ತೈಲಬೆಲೆ ಮಿತಿಮೀರಿ ಹಣದುಬ್ಬರ ಹೆಚ್ಚಾಗಲಿದೆ.
ಹಣದುಬ್ಬರದ ಆತಂಕ ಮತ್ತು ಜಾಗತಿಕ ವಿದ್ಯಮಾನ ಗಳಿಂದಾಗಿ, ಆರ್‌ಬಿಐ ಇತ್ತೀಚಿನ ದ್ವೈಮಾಸಿಕ ಹಣಕಾಸು ಪರಾಮರ್ಶೆಯ ಸಭೆಯಲ್ಲಿ ರೆಪೋ ದರವನ್ನು ಶೇ.೬.೫ ರಲ್ಲಿಯೇ ಉಳಿಸಿಕೊಂಡಿದೆ. ಹಣದುಬ್ಬರ ಮಿತಿಮೀರ ದಂತೆ ಆರ್‌ಬಿಐ ಒಂದು ಚೌಕಟ್ಟನ್ನು ನಿರ್ಮಿಸಿರುತ್ತದೆ. ಹಣದುಬ್ಬರ ಅಥವಾ ಬೆಲೆ ಯೇರಿಕೆಯು ವಾರ್ಷಿಕ ಆಧಾರದಲ್ಲಿ ಶೇ.೪ ರಿಂದ ೬ರ ಮಧ್ಯೆ ಇರಬೇಕೆಂಬುದೇ ಈ ಚೌಕಟ್ಟು. ಹಣದ ಹರಿವನ್ನು ನಿಯಂತ್ರಿಸುವ ಮೂಲಕ ಬೆಲೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾಮಾನ್ಯವಾಗಿ ಆರ್‌ಬಿಐ ರೆಪೋ ದರವನ್ನು ಏರಿಸುತ್ತದೆ ಮತ್ತು ತನ್ನ ದ್ವೈಮಾಸಿಕ ವಿತ್ತೀಯ ನೀತಿಯ ನಿರ್ಧಾರದ ವಿಷಯದಲ್ಲಿ ಮುಖ್ಯವಾಗಿ ಚಿಲ್ಲರೆ ಹಣದುಬ್ಬರವನ್ನು ಪರಿಗಣಿಸುತ್ತದೆ.
ಹಣದುಬ್ಬರ ಏರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಆರ್‌ಬಿಐ ಹಣದುಬ್ಬರ ದರವನ್ನು ಏರಿಕೆ ಮಾಡುತ್ತಾ ಬಂದಿತ್ತು. ಆರ್ ಬಿಐನ ಸದ್ಯದ ಬಡ್ಡಿದರದಲ್ಲಿ ಬದಲಾವಣೆಯಿಲ್ಲದಿದ್ದರೂ, ೨೦೨೨ರ ಏಪ್ರಿಲ್ ಬಳಿಕ ಸತತ ೬ ಬಾರಿ ರೆಪೋ ದರ ದಲ್ಲಿ ಶೇ.೨.೫ರಷ್ಟು ಏರಿಕೆ ಮಾಡಿದ್ದು, ಹಿಂದಿನ ವರ್ಷ ಗಳಿಗೆ ಹೋಲಿಸಿದರೆ ಇದು ಹೆಚ್ಚಿನ ಪ್ರಮಾಣದಲ್ಲಿಯೇ ಮುಂದುವರಿದಿದೆ. ಇದೀಗ ಆರ್‌ಬಿಐ ಬಡ್ಡಿದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿರುವುದರಂದ ಸದ್ಯಕ್ಕೆ ಸಾಲ ಮತ್ತು ಠೇವಣಿಗಳ ಬಡ್ಡಿ ಬದಲಾಗ ಲಾರದು. ಆದರೆ ಬಡ್ಡಿದರ ಇಳಿಕೆಯ ನಿರೀಕ್ಷೆಯಲ್ಲಿದ್ದ ಸಾಲಗಾರರಿಗೆ ನಿರಾಸೆಯಾಗಿದೆ.
ಹಣದುಬ್ಬರವು ಇನ್ನೂ ಅಪಾಯಕಾರಿ ಸ್ಥಿತಿಯಲ್ಲೇ ಇರುವುದರಿಂದ, ಹಣದುಬ್ಬರ ನಿಯಂತ್ರಣದ ಕ್ರಮವಾಗಿ ಮಾರುಕಟ್ಟೆಯಲ್ಲಿನ ಹೆಚ್ಚುವರಿ ಹಣವನ್ನು ಹಿಂಪಡೆ ಯಲು ಬಾಂಡ್ ಗಳ ಮಾರಾಟ ಮಾಡಲು ಆರ್‌ಬಿಐ ತೀರ್ಮಾನಿಸಿದೆ. ತನ್ಮೂಲಕ ಲಿಕ್ವಿಡಿಟಿಯನ್ನು (ಅಂದರೆ ದ್ರವ್ಯತೆಯನ್ನು) ಇನ್ನಷ್ಟು ಬಿಗಿಗೊಳಿಸುವುದು ಅದರ ಆಶಯ. ಪ್ರಸಕ್ತ ವರ್ಷದ ಹಣದುಬ್ಬರ ವನ್ನು ಆರ್‌ಬಿಐ ಶೇ.೫.೪ಕ್ಕೆ ನಿಗದಿಪಡಿಸಿದೆ. ಆದರೆ ಜಾಗತಿಕ ವಿದ್ಯಮಾನ ಗಳ ದೆಸೆಯಿಂದಾಗಿ ಅದು ಬದಲಾಗಲೂಬಹುದು.
ಸೆಪ್ಟೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರವು ಮೂರು ತಿಂಗಳ ಕನಿಷ್ಠ ಮಟ್ಟವಾದ ಶೇ.೫.೦೨ಕ್ಕೆ ಇಳಿದಿದೆ. ಪ್ರಸಕ್ತ ವರ್ಷದ ಜೂನ್‌ನಲ್ಲಿ ಅದು ಶೇ.೪.೮೭ಕ್ಕೆ ಇಳಿದಿದ್ದು ಹಣದುಬ್ಬರದ ಬಳಿಕ ಏರುಗತಿಗೆ ಮರಳಿತ್ತು. ಜುಲೈನಲ್ಲಿ ಅದು ಶೇ.೭.೪೪ ಮತ್ತು ಆಗಸ್ಟ್‌ನಲ್ಲಿ ಶೇ.೬.೮೩ರಷ್ಟಿತ್ತು. ಇದೀಗ ತರಕಾರಿ ಬೆಲೆಗಳ ಇಳಿಕೆ ಕಂಡುಬಂದಿದ್ದು ಹಣ ದುಬ್ಬರ ತಗ್ಗಲು ಕಾರಣವಾಗಿದೆ. ಆದರೆ ಆರ್‌ಬಿಐನ ಮೂಲ ಹಣದುಬ್ಬರ ಮಿತಿ ಶೇ.೪ ಆಗಿದ್ದು ಇದಕ್ಕಾಗಿ ಆರ್‌ಬಿಐ ಪ್ರಯತ್ನಿಸುತ್ತಿದೆ. ಪ್ರಸ್ತುತ ಆಹಾರ ಮತ್ತು ಇಂಧನ ವನ್ನು ಹೊರತು ಪಡಿಸಿದರೆ ಉಳಿದ ಚಿಲ್ಲರೆ ಹಣದುಬ್ಬರವು ಶೇ.೫ ಕ್ಕಿಂತ ಕಡಿಮೆಯಾಗಲಿದೆ ಎಂಬುದು ಒಳ್ಳೆಯ ಸುದ್ದಿ.
ಆದರೆ ಹವಾಮಾನ ವೈಪರೀತ್ಯದಿಂದಾಗಿ ಮುಂಗಾರು ಬೆಳೆ ಗಳ ಉತ್ಪಾದನೆ ಕುಸಿಯಲಿದೆ ಮತ್ತು ಇದು ಮಾರುಕಟ್ಟೆಯ ಮೇಲೆ ಪರಿಣಾಮ ಬೀರದೇ ಇರಲಾರದು. ಆದುದರಿಂದ ಹಣದುಬ್ಬರದ ಮುನ್ನೋಟವು ಅನಿಶ್ಚಿತತೆಗಳಿಂದ ಕೂಡಿದೆ. ಆಹಾರ ಮತ್ತು ಇಂಧನ ಬೆಲೆಗಳಲ್ಲಿನ ಏರಿಳಿತ ಗಳು ಕೂಡಾ ಆರ್ಥಿಕವಾಗಿ ಮತ್ತು ಹಣದುಬ್ಬರದ ಮೇಲೆ ಪರಿಣಾಮ ಬೀರಲಿವೆ. ಆದ್ದರಿಂದ, ಮುಂದಿನ ಆರ್ಥಿಕ ವರ್ಷದ ತನಕ ಹಣದುಬ್ಬರದ ನಿಯಂತ್ರಣದ ನಿಟ್ಟಿನಲ್ಲಿ ಬಡ್ಡಿದರಗಳನ್ನು ಆರ್‌ಬಿಐ ಯಥಾಸ್ಥಿತಿಯಲ್ಲಿ ಇಡಲಿದೆ ಎಂದು ಭಾವಿಸಬಹುದು.
(ಲೇಖಕರು ವಿಜಯ ಬ್ಯಾಂಕ್‌ನನಿವೃತ್ತ ಮುಖ್ಯ ಪ್ರಬಂಧಕರು)