ಊಟೋಪಚಾರ ನೀಡದ ಆತಿಥೇಯರು
ಅಂತರಾಳ
ಜಯಪ್ರಕಾಶ್ ಪುತ್ತೂರು
ನಾವು ಆಮಂತ್ರಿಸಿ ಉಪಚರಿಸುವ ಎಲ್ಲಾ ರೀತಿಯ ಭೋಜನಕೂಟ ಮತ್ತು ಸತ್ಕಾರ ಸಮಾರಂಭಗಳಲ್ಲಿ ‘ಮೆನು’ ತಯಾರಿ ಬಹುಮುಖ್ಯ  ಅಂಶ ವಾಗಿರುತ್ತದೆ. ಒಂದೊಮ್ಮೆ ಇದು ರಕ್ಷಣಾ ಸಂಸ್ಥೆಗಳು ಮತ್ತು ಸಶಸ್ತ್ರ ಪಡೆಗಳ ಅಧಿಕೃತ ಭೋಜನ ಕೂಟವಾದರೆ, ಕಟ್ಟುನಿಟ್ಟಿನದೇ ಪಾರಮ್ಯ. ಇಲ್ಲಿ ಮೆನು ನೀಡುವ ಕ್ರಮವಲ್ಲದೆ ಅದರ ನಿರ್ವಹಣೆ ಮತ್ತು ಅಧಿಕೃತ ಕಲಾಪಗಳು ತುಂಬಾ ಶಿಸ್ತುಬದ್ಧವಾಗಿರುತ್ತವೆ. ಭೋಜನಕೂಟದ ಖಾದ್ಯಗಳ ಪಟ್ಟಿ ಮಾಡುವಲ್ಲಿ ಸಸ್ಯಾಹಾರ ಅಥವಾ ಮಾಂಸಾಹಾರ ಎಂಬ ವರ್ಗೀಕರಣ ವಲ್ಲದೆ ಖಾದ್ಯಗಳನ್ನು ಹೇಗೆಲ್ಲಾ ಅನುಕ್ರಮವಾಗಿ ಸೇರಿಸಬೇಕು ಎಂಬ ವಿಚಾ ರವೂ ಮುಖ್ಯವಾಗಿರುತ್ತದೆ.
ಏಕೆಂದರೆ, ಭೋಜನಕೂಟದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಅತಿಥಿಯ ರುಚಿಗಳ ಆಯ್ಕೆ ಅಥವಾ ಬಯಸುವ ಆಹಾರ ಪದ್ಧತಿ ಕೂಡ ವಿಭಿನ್ನ ವಾಗಿರುತ್ತವೆ. ಆದರೆ ಅದನ್ನು ಯಾರೂ ಅಷ್ಟೊಂದು ಗಮನಿಸುವ ಗೋಜಿಗೆ ಹೋಗುವುದಿಲ್ಲ ಎಂಬುದು ಬೇಸರದ ವಿಷಯ. ನಮ್ಮ ದೇಶದ ಹಲವಾರು ರಾಜ್ಯಗಳಲ್ಲಿ ಭಿನ್ನ ಧರ್ಮಗಳು, ಆಚರಣೆಗಳು, ಸಂಪ್ರದಾಯಗಳು ಹಾಸುಹೊಕ್ಕಾಗಿವೆ. ಹಾಗಾಗಿ ವಿಶ್ವದ ಬೇರೆಲ್ಲಿಯೂ ಕಾಣದಷ್ಟು ಪ್ರಮಾಣ ದಲ್ಲಿ ನಮ್ಮಲ್ಲಿ ವೈವಿಧ್ಯಗಳನ್ನು ಕಾಣಬಹುದು. ಆಹಾರ ಪದ್ಧತಿಯಲ್ಲಿಯೂ ನಾವು ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಶೈಲಿ ಎಂದು ವರ್ಗೀಕರಣ ಮಾಡಬಹುದು.
ಅದರೊಂದಿಗೆ ಚೈನೀಸ್, ಥಾಯ್, ಕಾಂಟಿನೆಂಟಲ್ ಹೀಗೆ ಹಲವಾರು ಪ್ರಭೇದಗಳಿವೆ. ಮೆನು ನೀಡಿಕೆಯಲ್ಲಿ ಯಾವತ್ತೂ, ಈ ಭೋಜನ ಕೂಟದಲ್ಲಿ ಭಾಗವಹಿಸುವ ಜನರ ಗುಂಪು ಹೇಗಿದೆ ಮತ್ತು ಅವರ ಇಷ್ಟವಾದ ಆಯ್ಕೆ ಏನು ಎಂಬುದನ್ನು ನಮಗೆ ಅನುಭವದ ಪಾಠವೇ ಹೇಳಿಕೊಡುತ್ತದೆ. ಆದರೆ ಉತ್ತರ ಭಾರತದವರು ಯಾವತ್ತೂ ತಮ್ಮ ಪ್ರದೇಶದ ಖಾದ್ಯಗಳನ್ನಷ್ಟೇ ಬಯಸುತ್ತಾರೆ. ಏಕೆಂದರೆ, ಅವರಿಗೆ ತಮ್ಮ ಪ್ರದೇಶದ ಆಹಾರ ಯಾವತ್ತೂ ಸಿಗದಿರುವ ಕಾರಣ; ಆದರೂ ಅವರ ಬಾಯಿ ಚಪಲ ದಕ್ಷಿಣ ಭಾರತದ ಗಮನಾರ್ಹ ಖಾದ್ಯಗಳ ಮೇಲಿರ ಬಹುದು. ಆದ್ದರಿಂದ ದಕ್ಷಿಣದ ಇಡ್ಲಿ-ವಡೆ ಸಾಂಬಾರ್, ದೋಸೆ ಇವು ಇಂದು ಇಡೀ ದೇಶದಲ್ಲಿ ಜನಪ್ರಿಯವಾಗಿವೆ.
ಇವೆಲ್ಲವುಗಳಿಗಿಂತ ಮಿಗಿಲಾಗಿ ಉತ್ತರ ಭಾರತದ ಚಪಾತಿ, ರೊಟ್ಟಿ, ಪರೋಟ ಮತ್ತು ಅದರ ಸೇವನೆಗೆ ಸಂಬಂಧಿಸಿದ ಪದಾರ್ಥಗಳು ದಕ್ಷಿಣ ಭಾರತದ ಭೋಜನ ವ್ಯವಸ್ಥೆಯಲ್ಲಿ ಕಾಯಂ ಆಗಿಬಿಟ್ಟಿವೆ. ಮಾತ್ರವಲ್ಲ, ಪಾಲ್ಗೊಳ್ಳುವ ಗುಂಪುಗಳಲ್ಲಿ ಆಹಾರ ವೈವಿಧ್ಯಗಳ ಆಯ್ಕೆಯ ವಿಚಾರದ ನಿರ್ವಹಣೆಯು ತುಂಬಾ ಜಟಿಲವಾಗಿರುತ್ತದೆ. ಅಂದರೆ, ಒಂದು ಭೋಜನಕೂಟದ ಖಾದ್ಯಗಳು ಸಾಧ್ಯವಾದಷ್ಟರ ಮಟ್ಟಿಗೆ ಎಲ್ಲರನ್ನೂ ಖುಷಿಪಡಿಸುವ ಹಾಗಿರಬೇಕು. ‘ನಮಗೆ ಉತ್ತರ ಭಾರತದ ಊಟ ಯಾವಾಗಲೂ ಸಿಗುವ ಕಾರಣ, ನೀವು ನಮಗೆ ಖುಷಿ ಮಾಡಲು ಹೋಗಿ ಇಲ್ಲಿ ಕೆಟ್ಟದ್ದಾಗಿ ಮಾಡಿ ಬಡಿಸುವ ಬದಲು ನಿಮ್ಮ ಕಡೆಯ ಖಾದ್ಯಗಳ ವೈವಿಧ್ಯಗಳನ್ನು ನಮಗೆ ಉಣಬಡಿಸಿ’ ಎಂದು ಹೊರಗಿನ ಹಲವಾರು ಗಣ್ಯರು ಹೇಳಿದ್ದೂ ಇದೆ. ಏಕೆಂದರೆ, ಹೆಚ್ಚಾಗಿ ಕ್ಯಾಂಟೀನ್ ಅಥವಾ ಅತಿಥಿ ಗೃಹಗಳಲ್ಲಿ ಬೇರೆ ಪ್ರದೇಶದ ಜನಪ್ರಿಯ ಖಾದ್ಯಗಳನ್ನು ರುಚಿಕ್ಕಟ್ಟಾಗಿ ಮಾಡಲು ಸಾಧ್ಯವಾಗದ ಪ್ರಸಂಗಗಳು ಜಾಸ್ತಿ.
ಅಂದರೆ, ಅದು ಅವರ ಪ್ರಥಮ ಪ್ರಯೋಗವಾದರೆ ಮುಗಿದೇ ಹೋಯಿತು. ಅಂತೂ ಈ ಪ್ರಯೋಗ ಒಂದು ವೇಳೆ ಎಡವಟ್ಟಾದರೆ ಭೋಜನ ಕೂಟದ ನಿರ್ವಹಣೆಕಾರರು ಎಲ್ಲರ ಟೀಕೆ-ಛೂಬಾಣಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ವಿವಿಧ ಗಣ್ಯರನ್ನು ತೃಪ್ತಿಪಡಿಸುವುದು ಅಷ್ಟು ಸುಲಭದ ಮಾತಲ್ಲ. ಈ ಮೆನು ಆಯೆಯಿಂದಾಗಿ ಹೊಮ್ಮುವ ವಿರುದ್ಧ ಪ್ರತಿಕ್ರಿಯೆಗಳನ್ನು ನಾವು ಮದುವೆ, ಸತ್ಕಾರ ಸಮಾರಂಭ ಗಳಲ್ಲಿ, ಭೋಜನ ಕೂಟಗಳಲ್ಲಿ ನಿತ್ಯವೂ ನೋಡುತ್ತಿರುತ್ತೇವೆ. ಇನ್ನೊಂದು ಮುಖ್ಯವಾದ ವಿಚಾರವನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತ.
ಅತಿಥಿಗಳ ವಯಸ್ಸು ಮತ್ತು ಆರೋಗ್ಯವನ್ನು ಪರಿಗಣಿಸುವುದು ಇಂದಿನ ದಿನಗಳಲ್ಲಿ ಅತ್ಯವಶ್ಯ. ಹೆಚ್ಚಿನ ಜನರಲ್ಲಿ ರಕ್ತದೊತ್ತಡ, ಮಧುಮೇಹ ಹಾಗೂ ಇನ್ನಿತರ ಕಾಯಿಲೆಗಳ ತೊಂದರೆ ಇರಬಹುದಾದ ಕಾರಣ, ನಾವು ಪ್ರಸ್ತುತಪಡಿಸುವ ಖಾದ್ಯಗಳಲ್ಲಿ ಎಣ್ಣೆ, ಉಪ್ಪು, ಖಾರ, ಸಿಹಿ ಉಂಟುಮಾಡುವ ಅಂಶ ಗಳತ್ತ ಯಾವಾಗಲೂ ಗಮನ ಹರಿಸಬೇಕು. ಪ್ರಾರಂಭದಲ್ಲಿ ಸ್ವಾಗತದೊಂದಿಗೆ ನೀಡುವ ಲಘು ಪಾನೀಯ, ಕಾಫಿ, ಚಹಾಗಳಲ್ಲಿ ಕೂಡಾ ಇದೇ ರೀತಿಯ ಎಚ್ಚರವಹಿಸಬೇಕಾಗಿದೆ. ಹೆಚ್ಚಿನ ಸಭೆ-ಸಮಾರಂಭಗಳಲ್ಲಿ ನೀಡುವ ರಾಗಿಮಾಲ್ಟ್ ಅಥವಾ ಇತರ ಜ್ಯೂಸ್‌ಗಳಲ್ಲಿ ಗರಿಷ್ಠ ಪ್ರಮಾಣದ ಸಕ್ಕರೆ ಇರುವು ದನ್ನು ಕಾಣಬಹುದು. ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತೀಯರ ಭೋಜನಕೂಟ, ಸತ್ಕಾರಗಳಲ್ಲಿ ಪ್ರತ್ಯಕ್ಷವಾಗುವ ಉತ್ತರ ಭಾರತದ ಖಾದ್ಯಗಳಲ್ಲಿ ಕೂಡಾ ಇಂಥ ಅಭ್ಯಾಸಗಳನ್ನು ಕಾಣುತ್ತಿದ್ದೇವೆ. ಈ ಭೋಜನ ಕೂಟಗಳ ಆಯೋಜನೆಯನ್ನು ಕೇಟರರ್‌ಗಳಿಗೆ ಕೊಡುವ ಕಾರಣ, ಹೆಚ್ಚಾಗಿ ಎಲ್ಲರೂ ಬೆಲೆ ಅಥವಾ ಮೌಲ್ಯದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆಯೇ ವಿನಾ ಮೆನು ನೀಡಿಕೆಯಲ್ಲಿ ಇಲ್ಲಿ ಪ್ರಸ್ತಾಪಿಸಿದ ಯಾವುದೇ ಎಚ್ಚರಿಕೆಯ ಅಂಶಗಳ ಬಗ್ಗೆ ಗಮನ ಹರಿಸುವ ಪ್ರವೃತ್ತಿ ಕಾಣಲಾರೆವು.
ಹೀಗಾಗಿ ಅದೆಷ್ಟೋ ವೇಳೆ ಹಲವು ವಿಧದ ಖಾದ್ಯಗಳಿದ್ದರೂ ವಯಸ್ಕರು ಅಲ್ಲಿ ಏನನ್ನೂ ತಿನ್ನಲಾಗದೆ ಪರಿತಪಿಸುವ ಪ್ರಸಂಗಗಳನ್ನು ನೋಡಬಹುದು.ಹೀಗಾಗಿ ಈ ನಿರ್ವಹಣೆ ಕಾರ್ಯದಲ್ಲಿ ಎಲ್ಲಾ ರೀತಿಯ ಎಚ್ಚರಿಕೆ ಹಾಗೂ ಸಮಗ್ರತೆಯನ್ನು ಕಾಪಿಡುವ ಅವಶ್ಯಕತೆ ಇದೆಯೆಂಬುದು ಎಲ್ಲರೂ ಗಮನಿಸ ಬೇಕಾದ ವಿಚಾರವಾಗಿದೆ. ಈಗೀಗ ದಕ್ಷಿಣ ಭಾರತದ ಎಲ್ಲಾ ಭೋಜನ ಕೂಟಗಳಲ್ಲಿ ಹೆಚ್ಚಾಗಿ ಉತ್ತರ ಭಾರತದ ಖಾದ್ಯಗಳೇ ಇರುವುದರಿಂದ ಖಾದ್ಯ ನೀಡಿಕೆಯ ಕೊನೆಗೆ ಲಭಿಸುವುದು ಒಂದು ತಿಳಿಸಾರು ಮಾತ್ರ ಆಗಿದ್ದು, ದಕ್ಷಿಣದ ಖಾದ್ಯ ನೀಡಿಕೆ ಕಾಟಾಚಾರವಾಗಿ ಉಳಿಯುತ್ತದೆ. ಇದರೊಂದಿಗೆ ದೋಸೆ, ಮಸಾಲೆದೋಸೆ, ಇಡ್ಲಿ ಮುಂತಾದ ತಿಂಡಿಗಳ ಕೌಂಟರ್‌ಗಳು ಪ್ರಾರಂಭ ಆಗಿರುವುದು ನಮ್ಮ ಪುಣ್ಯ.
ಜತೆಗೆ ವಿವಿಧ ರೀತಿಯ ಚಾಟ್‌ಮಸಾಲೆ ಗಳ ಕೌಂಟರ್‌ಗಳು ಕೂಡಾ ಈಗ ಸತ್ಕಾರ ಕೂಟಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವುದು ನಿಜ. ಇಂದಿನ ದಿನಗ ಳಲ್ಲಿ ಆತಿಥೇಯರು ‘ಭೋಜನ ಹೇಗಿತ್ತು?’ ಎಂದು ವಿಚಾರಿಸಿಕೊಳ್ಳುವುದು ಅಥವಾ ಅತಿಥಿಗಳು, ‘ಇಂದು ಭೋಜನ ಹಾಗಿತ್ತು’ ಎಂಬ ವಿಚಾರವನ್ನು ಪ್ರಸ್ತಾಪಿಸುವುದು ಇಲ್ಲವಾಗಿದೆ ಎಂಬುದು ಕಟುಸತ್ಯ. ಹಾಗಾದರೆ ಅಂದು ಅಲ್ಲಿ ಖುಷಿಯಲ್ಲಿ ಹೇಳಿಕೊಳ್ಳಲು ಏನೂ ಉಳಿದಿಲ್ಲ ಎಂದಲ್ಲವೇ? ಆತಿಥೇ ಯರು ಒಂದು ವೇಳೆ ಕಾಟಾಚಾರಕ್ಕಾದರೂ ‘ಹೇಗಿತ್ತು?’ ಎಂದರೆ ‘ಓ, ಚೆನ್ನಾಗಿತ್ತು!’ ಎಂಬ ನಾಟಕೀಯ ಮಾತನ್ನಾಡುತ್ತಾರೆ. ಅಲ್ಲಿ ಭೋಜನ ಮಾಡ ಲಾಗದೆ, ಮನೆ ಯಲ್ಲಿ ಹಾಲು-ಹಣ್ಣು ತಿನ್ನುವ ಪ್ರಮೇಯಗಳೂ ಖಂಡಿತಾ ಇವೆ.
ಭೋಜನಕೂಟದಲ್ಲಿ ಎಷ್ಟು ಬಗೆಯ ಖಾದ್ಯಗಳನ್ನು ಮಾಡಿದ್ದಾರೆ ಎಂಬ ಒಣಪ್ರತಿಷ್ಠೆಯಲ್ಲಿ ನಿಜವಾಗಿಯೂ ಹೊಟ್ಟೆಗೆ ಸೌಖ್ಯ ತರುವಂಥ ಒಂದು ಐಟಮ್ ಆದರೂ ಇತ್ತೇ? ಎಂಬುದು ಯಕ್ಷಪ್ರಶ್ನೆ. ಇನ್ನು ಸ್ವಾಗತ ಬಯಸಲು ನಿಂತವರು ಕೇವಲ ಆರಂಭಿಕ ಕ್ಷಣಗಳಲ್ಲಿ ಮಾತ್ರ ಇರುತ್ತಾರೆ. ನಂತರ ಅವರೆಲ್ಲರೂ ಒಂದೆಡೆ ನಿಂತು ಅಥವಾ ಕುಳಿತು ಒಂದೇ ಸಮನೆ ತಲೆ ತಗ್ಗಿಸಿ ಮೊಬೈಲ್ ನೋಡುತ್ತಾ ಕಾಲಹರಣ ಮಾಡುತ್ತಿರುತ್ತಾರೆ. ಒಳಗೆ ಹೊಕ್ಕವರಿಗೆ ಆತ್ಮೀಯ ವಾಗಿ ಸ್ವಾಗತಿಸುವವರಿಲ್ಲದೆ, ತಮ್ಮ ಗುರುತು-ಪರಿಚಯದ ಕಣ್ಣುಗಳಿಗಾಗಿ ತಡಕಾಡುವ ಪ್ರಸಂಗ ತೀರಾ ಸಾಮಾನ್ಯವಾದ ಅನುಭವ.
ಒಟ್ಟಿನಲ್ಲಿ ಇದು, ನಮ್ಮ ಸಾಮಾಜಿಕ ಜೀವನದಲ್ಲಿ ಎಲ್ಲರೂ ‘ಏನೂ ತೊಂದರೆ ಆಗಿಲ್ಲ’ ಎನ್ನುತ್ತಲೇ ಯಾತನೆ ಪಡುವ ಪರಿ. ಹಾ! ಕೊನೆಗೆ ಬೀಳ್ಕೊಡುವ ಕ್ಷಣಗಳಲ್ಲಿ ಅಲ್ಲಿ ಯಾರೂ ಇಲ್ಲ. ಮೊದಲು ಊಟದ ತಟ್ಟೆ, ಬಫೆ ಕೌಂಟರ್‌ಗಳತ್ತ ಮುಗಿಬಿದ್ದು ತಿನ್ನುವ ತವಕ. ಆ ಬಳಿಕ ಅಲ್ಲಲ್ಲಿ ಅಡ್ಡಡ್ಡಕ್ಕೆ ನಿಂತು ಮೊಬೈಲ್ -ಟೋ ತೆಗೆಯುವ ಭರಾಟೆ. ಕೊನೆಗೆ ಪಾರ್ಕಿಂಗ್ ಏರಿಯಾಕ್ಕೆ ಧಾವಿಸಿ ತಮ್ಮ ವಾಹನಗಳನ್ನು ಸೇರಿಕೊಳ್ಳಲು ಕಷ್ಟಪಟ್ಟು ಸಾಗಿ, ಮನೆ ದಾರಿ ಹಿಡಿಯುವಲ್ಲಿ ಎಲ್ಲರಿಗೂ ಮನಸ್ಸಿನಲ್ಲಿ ಹಿಡಿಶಾಪ. ಹೀಗಿದೆ ಅಲ್ಲವೇ ನಮ್ಮ ಸತ್ಕಾರ ಕೂಟ ಹಾಗೂ ಭೋಜನ ಕೂಟಗಳು?!
(ಲೇಖಕರು ಡಿಆರ್‌ಡಿಒ ಮಾಜಿ ಅಧಿಕಾರಿ)