ಅಲ್ಲಿದೆ ಹ್ಯಾಲೋವೀನ್, ಇಲ್ಲಿದೆ ಪಿತೃಪಕ್ಷ
ಅನುಸಂಧಾನ
ಎಸ್‌.ಜಿ.ಹೆಗಡೆ
ಹ್ಯಾಲೋವೀನ್ ಅಂದರೆ, ಅಳಿದವರು ಉಳಿದ ಹತ್ತಿರದವರನ್ನು ಕಾಣಲು ಬರುವರೆಂದು ತಿಳಿಯಲಾದ ದಿನ. ಮೃತರ ನೆನಪಿನ ಪ್ರತಿಮೆಗಳು ಈಗಾಗಲೇ ಮನೆಯ ಮುಂದೆ ಕಾಣಿಸಲಾರಂಭಿಸಿವೆ. ಅಳಿದವರ ರೂಪಿನಲ್ಲಿನ ಮನುಷ್ಯಾಕಾರಕ್ಕೆ ವಿವಿಧ ಪೋಷಾಕು ತೊಡಿಸಿ ಮನೆಯೆದುರಿನ ಮರಕ್ಕೆ ನೇತುಬಿಡಲಾಗಿದೆ, ಜೋಕಾಲಿ ಕಟ್ಟಿ ಕೂರಿಸಲಾಗಿದೆ.
ಅಕ್ಟೋಬರ್ ೩೧ರ ದಿನವನ್ನು ಅಮೆರಿಕದಲ್ಲಿ ‘ಅಳಿದವರು ಮರಳುವ ದಿನ’ ಎಂದು ಆಚರಿಸಲಾಗುತ್ತದೆ. ಈ ದಿನಕ್ಕೆ ‘ಹ್ಯಾಲೋವೀನ್’ ಎನ್ನಲಾಗುತ್ತದೆ. ಇದೊಂದು ‘ಹ್ಯಾಲೋ ಡೇ’, ಅಂದರೆ ಪವಿತ್ರ ದಿನ ಅಥವಾ ಆಶೀರ್ವಾದ ಪಡೆಯುವ ದಿನ. ಅಂದು, ಅಳಿದವರ ಮತ್ತು ಉಳಿದವರ ಜಗತ್ತಿನ ನಡುವಿನ ಅಂತರ ತಗ್ಗಿಬಿಡುತ್ತದೆ ಎಂಬ ನಂಬಿಕೆಯಿದೆ. ಎರಡೂ ಜಗತ್ತಿನ ಆತ್ಮೀಯರು, ಮನೆಯ ಪೂರ್ವಜರು ಅಂದು ಮತ್ತೆ ಜತೆಯಾಗುತ್ತಾರೆ ಎಂಬುದುಇದರರ್ಥ. ಅಕ್ಟೋಬರ್ ೩೧ರಿಂದ ಇಲ್ಲಿನ ಭಾಗದಲ್ಲಿ ಬೇಸಿಗೆ, ಬೆಳೆಯ ಕಾಲ ಮುಗಿದು ಕರಾಳ ಚಳಿಗಾಲಕ್ಕೆ ಜಾರುವ ಕಾಲ ಸನ್ನಿಹಿತವಾಗುವುದರ ಅಂಚಿನಲ್ಲಿ ಹ್ಯಾಲೋವೀನ್ ಅನ್ನು ಆಚರಿಸಲಾಗುತ್ತದೆ.
ಹ್ಯಾಲೋವೀನ್ ಸಂದರ್ಭದಲ್ಲಿ ಅಮೆರಿಕದ ಮಳಿಗೆಗಳಲ್ಲಿ ದೊಡ್ಡಗಾತ್ರದ ಕಿತ್ತಳೆ ಬಣ್ಣದ ಕುಂಬಳಕಾಯಿಯದ್ದೇ ವಿಶೇಷ ಆಕರ್ಷಣೆ. ‘ಅದನ್ನು ಮನೆಗೆ ತಂದರೆ ಪದಾರ್ಥ ಮಾಡಿ ಮುಗಿಸುವುದು ಹೇಗೆ?’ ಎಂಬುದಾಗಿ ಯೋಚಿಸುವಷ್ಟು ದೊಡ್ಡಗಾತ್ರದ ಕುಂಬಳಕಾಯಿಗಳು ಅವು! ಆದರೆ ಜನರು ಅವನ್ನು ಮನೆಗೊಯ್ಯುವ ದೃಶ್ಯ ಇಲ್ಲಿ ಸಾಮಾನ್ಯ. ಹಾಗೆ ತಂದ ಕುಂಬಳಕಾಯಿಗಳನ್ನು ಮನೆಯ ದ್ವಾರದಲ್ಲಿ ಮತ್ತು ಹೊರಗಿನ ಲಾನ್ ನಲ್ಲಿಯೂ ಇಡಲಾಗು ತ್ತದೆ. ಸಂಭ್ರಮವು ಈಗಾಗಲೇ ಆರಂಭವಾಗಿದೆ.
ಕುಂಬಳಕಾಯಿಗಳಷ್ಟೇ ಅಲ್ಲ, ಅದರಲ್ಲಿ ಕೊರೆದು ರೂಪಿಸಿದ ಮುಖಗಳು ಮನೆಯ ಹೊರಗೆ ಅದಾಗಲೇ ರಾರಾಜಿಸುತ್ತಿವೆ. ಕಾಯಿಯ ಚೊಟ್ಟಿನ ಭಾಗ ಕತ್ತರಿಸಿ ಒಳತಿರುಳನ್ನು ತೆಗೆದ ನಂತರ ಉಳಿಯುವ ಹೊರಕವಚವನ್ನು ಬೇರೆ ಬೇರೆ ರೀತಿಯ ಮನುಷ್ಯರೂಪಿ ಅಭಿವ್ಯಕ್ತಿ ಮೂಡುವಂತೆ ಕೊರೆದು, ಅದರೊಳಗೆ ಬೆಳಕು ನೀಡಲು ಕಂದೀಲು ರೂಪು ನೀಡಲಾಗಿದೆ. ಕುಂಬಳ ಕಾಯಿಯಿಂದ ತಯಾರಾದ ಮುಖವನ್ನು ಮನುಷ್ಯರೂಪಿ ಬೆಚ್ಚಿನ ದೇಹಕ್ಕೆ ಜೋಡಿಸಿ ವಿವಿಧ ಭಂಗಿಯಲ್ಲಿ ನಿಲ್ಲಿಸಲಾಗಿದೆ. ಇದು ಹ್ಯಾಲೋವಿನ್ ಹಬ್ಬದ ಸಲುವಾಗಿನ ಪೂರ್ವಸಿದ್ಧತೆ.
ಹ್ಯಾಲೋವಿನ್ ಅಂದರೆ ‘ಅಳಿದವರ ದಿನ’ ಅಥವಾ ಅಳಿದವರು ಉಳಿದ ಹತ್ತಿರದವರನ್ನು ಕಾಣಲು ಬರುವರೆಂದು ತಿಳಿಯಲಾದ ದಿನ. ಇಲ್ಲಿ ಅದು ಸಂಭ್ರಮದ ದಿನ. ಮೃತರ ನೆನಪಿನ ಪ್ರತಿಮೆಗಳು ಈಗಾಗಲೇ ಮನೆಯ ಮುಂದೆ ಕಾಣಿಸಲಾರಂಭಿಸಿವೆ. ಸತ್ತುಹೋದವರ ರೂಪಿನಲ್ಲಿನ ಮನುಷ್ಯಾಕಾರಕ್ಕೆ ವಿವಿಧ ಪೋಷಾಕು ತೊಡಿಸಿ ಮನೆಯೆದುರಿನ ಮರಕ್ಕೆ ನೇತುಬಿಡಲಾಗಿದೆ, ಜೋಕಾಲಿ ಕಟ್ಟಿ ಕೂರಿಸಲಾಗಿದೆ. ಬಾಗಿಲ ಹೊರಗೆ ಎರಡೂ ಕಡೆಯಲ್ಲಿ ಅಂಥ ಪ್ರತಿಮೆಗಳು ಕಾಣ ಸಿಗುತ್ತಿದ್ದು, ಈ ದೃಶ್ಯವು ಮನತಟ್ಟುವಂತಿದೆ.
ಹ್ಯಾಲೋವೀನ್ ದಿನದಂದು ಜನರೂ ಚಿತ್ರವಿಚಿತ್ರ ಪೋಷಾಕು ಧರಿಸಿ ಹಿಂದಿನವರೊಂದಿಗೆ ಒಂದಾಗಿ ಭಾವುಕರಾಗುತ್ತಾರೆ. ವಿಶೇಷ ತಿಂಡಿ-ತೀರ್ಥದವ್ಯವಸ್ಥೆ, ಬಟ್ಟೆ ಮತ್ತು ಇತರ ವಸ್ತುಗಳ ದಾನವೂ ಅಂದಿನ ಉತ್ಸವದ ಭಾಗವಾಗುತ್ತದೆ. ಹೀಗೆ, ಅಳಿದವರು ಅಂದು ಮತ್ತೆ ಮರಳಿ ತಮ್ಮವರ ಜತೆ ಸೇರುವುದು, ಎರಡು ಜಗತ್ತಿನ ನಡುವಿನ ಪರದೆಯು ಶಿಥಿಲವಾಗುತ್ತದೆ ಎಂದು ಭಾವಿಸಲಾಗುವ ಹ್ಯಾಲೋವೀನ್ ದಿನದಂದು! ಇಲ್ಲಿ ಕುಂಬಳ ಕಾಯಿಯ ಪಾತ್ರ ಕುತೂಹಲ ಕಾರಿ. ಇದರ ಬಳಕೆ ಸಾಮಾನ್ಯವಿದ್ದರೂ ಅದರ ಹಿಂದಿನ ಕಲ್ಪನೆಯಲ್ಲಿ ಇಬ್ಬಗೆಯಿದೆ.
ನಮ್ಮಲ್ಲಾದರೆ ಅಳಿದವರ ದಿನದಂದು ಕುಂಬಳಕಾಯಿಯನ್ನು ಕಡಿದು ಬಲಿನೀಡುವ ರಿವಾಜಿದೆ ಹಾಗೂ ಇದನ್ನು ಪ್ರಾಣಿಬಲಿಗೆ ಪರ್ಯಾಯವಾದ ನೆಲೆಯಲ್ಲಿ ಬಳಸಲಾಗುತ್ತದೆ. ಅನೇಕ ಮನೆಗಳ ಬಾಗಿಲಲ್ಲಿ ಕುಂಬಳಕಾಯಿಯನ್ನು ನೇರುಬಿಡುವುದನ್ನೂ ಕಾಣುತ್ತೇವೆ. ಕೆಟ್ಟದೃಷ್ಟಿಯನ್ನು ಹೀರಿ ಮನೆಯನ್ನು ರಕ್ಷಿಸುವ ಶಕ್ತಿ ಕುಂಬಳ ಕಾಯಿಗಿದೆ ಎಂಬುದು ಇದರ ಹಿಂದಿರುವ ನಂಬಿಕೆ. ಐರಿಷ್ ಜನಗಳಲ್ಲಿ ‘ಎಲ್ಲ ಸಂತರ ದಿನ’ದಂದು ಕುಂಬಳ ಕಾಯಿಯ ಬದಲಿಗೆ ನವಿಲುಕೋಸನ್ನು ಕೊರೆದು ಮುಖ ಗಳನ್ನು ರೂಪಿಸುವ ಪದ್ಧತಿಯಿದೆ.
ಭಾರತದಲ್ಲಿ ಅಕ್ಟೋಬರ್ ೧೫ಕ್ಕೆ ಪಿತೃಪಕ್ಷದ ಮುಕ್ತಾಯವಾಗಿದೆ. ಸೆಪ್ಟೆಂಬರ್ ೨೯ರ ಶನಿವಾರದಿಂದ ಆರಂಭವಾದ ೧೬ ದಿನಗಳನ್ನು, ಪೂರ್ವಿಕರದಿನಗಳ ಅರ್ಥದಲ್ಲಿ ಆಚರಿಸಲಾಗಿದೆ. ಜೀವಕಳೆದು ನಿರ್ಗಮಿಸಿದ ಹಿರೀಕರು ಈ ಅವಧಿಯಲ್ಲಿ ಮರಳುತ್ತಾರೆಂಬ ಭಾವನೆ ನಮ್ಮಲ್ಲಿದೆ. ಭಾದ್ರಪದಹುಣ್ಣಿಮೆಯ ನಂತರ ಮುಂದಿನ ಅಮಾವಾಸ್ಯೆಯ ತನಕದ ಅವಧಿಯು ಪಿತೃಪಕ್ಷ. ಉತ್ತರ ಭೂಭಾಗದಿಂದ ದಕ್ಷಿಣಾರ್ಧ ಭಾಗಕ್ಕೆ ಸೂರ್ಯನ ಚಲನದಸಮಯವಿದು. ೧೬ ದಿನಗಳ ಪಿತೃಪಕ್ಷದ ಕಾಲದಲ್ಲಿ ಜನರು ಮೃತರನ್ನು ಸ್ಮರಿಸಿಕೊಂಡು ತರ್ಪಣ ನೀಡುವ ವಾಡಿಕೆಯಿದೆ.
ಲಕ್ಷಗಟ್ಟಲೆ ಜನರು ಗಂಗಾ ತಟದಲ್ಲಿ ಶ್ರಾದ್ಧ ನೆರವೇರಿಸಿ ಪೂರ್ವಿಕರಿಗೆ ಮುಕ್ತಿ ಕೋರುವುದಿದೆ. ಆಳಿದವರು ಇಹಜಗತ್ತಿಗೆ ಅಂದು ಆಹಾರ ಸ್ವೀಕರಿಸಲು ಕಾಗೆಯ ರೂಪದಲ್ಲಿ ಬರುವರೆಂದು ಭಾವಿಸಿ, ಕಾಗೆ ಕರೆದು ಪಿಂಡ-ಬಾಳೆಯನ್ನು ಅರ್ಪಿಸುವ ರಿವಾಜಿರುವುದೂ ತಿಳಿದಿರುವ ವಿಚಾರವೇ. ಮೃತರು ಮರಳಿ ಬರುವರೆಂಬ ನಂಬಿಕೆಯಿಂದ ಹಿಂದಿನ ಪೀಳಿಗೆಯವರನ್ನು, ಅಳಿದುಹೋದ ಆತ್ಮೀಯರನ್ನು ಆದರಿಸುವ, ಸತ್ಕರಿಸುವ, ಸ್ಮರಿಸುವ ಪದ್ಧತಿ ಜಗತ್ತಿನ ಹಲವೆಡೆ ಇದೆ. ಇದೊಂದು ಕುಲೀನವಾದ ಸಂಗತಿ. ಒಂದು ವಂಶ ಅಥವಾ ಪೀಳಿಗೆಯನ್ನು ಸೃಷ್ಟಿಸಿ ಬೆಳೆಸುವುದು ಒಂದು ಜೈವಿಕ ಪ್ರಕ್ರಿಯೆಯಾದ್ದರಿಂದ ಪೀಳಿಗೆಯಲ್ಲಿ ಆಗಿಹೋದ ಪ್ರತಿಯೊಬ್ಬರೂ ಅಷ್ಟೇ ಮಹತ್ವದವರಾಗುತ್ತಾರೆ, ಮಹಾಂತರಾಗುತ್ತಾರೆ.
ಪೀಳಿಗೆಯ ವೃದ್ಧಿಯಲ್ಲಿ ಎಂದೂ ಮುಗಿಯದ ತನ್ನತನದ ಅಂಶವನ್ನು ಜೀನ್ಸ್ ಮೂಲಕ ಹಿಂದಿನವರು ಬಿಟ್ಟುಹೋಗಿರುತ್ತಾರೆ. ಹಿಂದಿನವರ ನೆನಪು ಕೃತಕ ಬದುಕಿನ ಭಾಗ ಕ್ಕಷ್ಟೇ ಸೀಮಿತವಾಗಿ ಇರದಿರುವುದ ರಿಂದ, ಅವರ ಮರಳಿ ಬರುವಿಕೆಯ ಕಲ್ಪನೆ ಉದಾತ್ತವಾಗುವುದು. ಆಳಿದ ಕುಟುಂಬಸ್ಥರ ವಿಷಯದಲ್ಲಿ ಇಂಡೋನೇಷ್ಯಾದಲ್ಲಿ ನಡೆದುಬಂದ ಕುತೂಹಲಕಾರಿ ಪರಂಪರೆಯನ್ನು ಇಲ್ಲಿ ಹೇಳಬೇಕು. ಇದು ಅಲ್ಲಿನ ತಾನಾ ಎಂಬ ಪ್ರದೇಶದ ಕುರಿತಾದದ್ದು. ಅಲ್ಲಿನ ವಾಸಿಗಳನ್ನು ‘ತೋರಜಾ ’ಎಂದು ಕರೆಯುತ್ತಾರೆ.
ಅಲ್ಲಿನ ಭಾಷೆಯಲ್ಲಿ -- ಅಂದರೆ ಗುಡ್ಡಗಾಡಿನ ಜನರೆಂದರ್ಥ. ದ್ವೀಪದ ಹಲವು ಭಾಗಗಳಲ್ಲಿರುವ ತೋರಜಾ ಸಮುದಾಯದ ಜನರು ಭೂಮಿ ಯಡಿ ಭದ್ರವಾದ ವ್ಯವಸ್ಥೆಯಲ್ಲಿ ಸುರಕ್ಷಿತ ವಾಗಿ ಹುಗಿದಿಟ್ಟ ಮೃತರ ದೇಹವನ್ನು ವರ್ಷಕ್ಕೊಮ್ಮೆ ಹೊರತೆಗೆದು ಸಂಭ್ರಮಿಸುತ್ತಾರೆ. ಮೃತರನ್ನು ಹಾಗೆ ಮರಳಿ ಪಡೆದು, ದೇಹವನ್ನು ಚೊಕ್ಕವಾಗಿಸಿ, ಹೊಸ ಉಡುಗೆ ತೊಡುಗೆಗಳಿಂದ ಅಲಂಕರಿಸಿ ಊರೆಲ್ಲ ಮೆರವಣಿಗೆ ಮಾಡುತ್ತಾರೆ. ಹಿಂದಿನವರ ನೆನಪಿ ನಲ್ಲಿ, ಅವರು ಬದುಕಿದ್ದಾಗ ಸಾಧಿಸಿದ್ದ ಅಚ್ಚು ಮೆಚ್ಚಿನ ಹವ್ಯಾಸವನ್ನೂ ಪ್ರದರ್ಶಿಸುವುದಿದೆ.
ಮರಳಿಬಂದ ದೇಹಗಳನ್ನು ನಿಜಜೀವವೆಂದು ತಿಳಿದು ಸಿಗರೇಟು ಸೇದಿಸುವುದಿದೆ. ಅವರವರ ಬದುಕಿನ ಸಾಧನೆಯ ನೆನಪಲ್ಲಿ ಮೃತದೇಹಗಳಿಗೆಪುರಸ್ಕಾರ ನೀಡುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳುವುದಿದೆ. ವಾಚು, ಆಭರಣ, ಕಪ್ಪು ಕನ್ನಡಕ ಮುಂತಾದ ವಸ್ತುಗಳನ್ನು ಉಡುಗೊರೆಯೆಂದುಮೃತದೇಹಕ್ಕೆ ನೀಡಲಾಗುತ್ತದೆ! ಅಲ್ಲಿ ಇದೊಂದು ಅತ್ಯಂತ ಸಂಭ್ರಮದ ಸಂದರ್ಭವಾಗಿದ್ದು ಒಟ್ಟಾರೆ ಕಾರ್ಯಕ್ರಮವನ್ನು ಊರವರೆಲ್ಲ ಸೇರಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಮರಳಿದ ಮೃತರನ್ನು ಸೇರುವ ಸಲುವಾಗಿ ಬಹುದೂರದಿಂದಲೂ ಸಂಬಂಧಿಗಳು ಬರುತ್ತಾರೆ.
ಮರಳಿ ಬಂದವರ ಪ್ರೀತ್ಯರ್ಥ ಅವರ ನೆಚ್ಚಿನ ತಿಂಡಿ-ತಿನಿಸು ತಯಾರಿಸಿ ತಿನ್ನಿಸುತ್ತಾರೆ. ಅಲಂಕರಿಸಿದ ಆಳಿದ ಶವವನ್ನು ಜತೆಗೆ ನಿಲ್ಲಿಸಿಕೊಂಡುಫೋಟೋ ಕ್ಲಿಕ್ಕ್ಕಿಸುತ್ತಾರೆ. ಜಗತ್ತಿನ ವಿವಿಧ ಭಾಗಗಳ ಚಿತ್ರಕಾರರು ಅಲ್ಲಿಗೆ ಭೇಟಿ ನೀಡಿ ಅತ್ಯಂತ ಕುತೂಹಲಕಾರಿ ಸಂಗತಿಗಳ ಚಿತ್ರಣ ಪಡೆಯುತ್ತಾರೆ. ಆಳಿದ ಹಿಂದಿನವರನ್ನು ಸಂತೃಪ್ತಿ ಪಡಿಸುವ, ಸತ್ಕರಿಸುವ ಸಮೃದ್ಧಿಯ ಸಮಯವದು. ಆಳಿದ ವಂಶಜರನ್ನು ಮರಳಿ ಕರೆದು ಸತ್ಕರಿಸಿ ಮತ್ತೆ ಭೂಮಿಯ ಅಡಿಯಲ್ಲಿ ಅವರನ್ನು ಭದ್ರವಾಗಿಡುವ ಸಂದರ್ಭವು ಹರ್ಷೋಲ್ಲಾಸದ ಹಬ್ಬವಾಗುತ್ತದೆ. ಈ ಹಬ್ಬವು ‘ ’ ಎಂಬ ಹೆಸರಲ್ಲಿ ಜನಪ್ರಿಯವಾಗಿದೆ.
ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ, ಸಾವು ಸಂಭವಿಸಿದಾಗ ಕಳೇಬರವನ್ನು ಅಲ್ಲಿ ಕೂಡಲೇ ಹುಗಿಯುವ ಅಂತ್ಯಕ್ರಿಯೆಯಲ್ಲಿ ತೊಡಗಿಸುವುದಿಲ್ಲ! ಅದು ಕೊಳೆಯದಂತೆ ಫಾರ್ಮಾಲಿನ್ ಸಂರಕ್ಷಕ ರಾಸಾಯನಿಕವನ್ನು ಸಿಂಪಡಿಸಿ, ಇಂಜೆಕ್ಷನ್ ನೀಡಿ ಶವಪೆಟ್ಟಿಗೆಯಲ್ಲಿ ತಿಂಗಳುಗಟ್ಟಲೆ ಇಟ್ಟುಕೊಳ್ಳುತ್ತಾರೆ. ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಜನರು ಅದೇ ಕಾಲದಲ್ಲಿ ಮೃತರಾದ ಸಂದರ್ಭದಲ್ಲಿ ಎಲ್ಲರ ಮೃತದೇಹವನ್ನೂ ಪ್ರತ್ಯೇಕ ಕೊಠಡಿಯೊಂದರಲ್ಲಿ ಕಾಪಿಟ್ಟಿರುತ್ತಾರೆ. ಮೃತದೇಹವನ್ನು ಅಂತ್ಯಕ್ರಿಯೆಯಲ್ಲಿ ಅರ್ಪಿಸುವ ಅಥವಾ ಸುರಕ್ಷಿತವಾಗಿ ಹುಗಿದಿಡುವ ಕಾರ್ಯಕ್ರಮಕ್ಕೆ ಅಲ್ಲಿಬಹಳಷ್ಟು ಖರ್ಚು ತಗಲುತ್ತದೆ. ಅನೇಕ ಎಮ್ಮೆ, ಹಂದಿಗಳನ್ನು ಬಲಿಯಾಗಿಸುವ ಆಚರಣೆ ಜಾರಿಯಲ್ಲಿದೆ.
ಅಲ್ಲದೆ ಹಲವೆಂಟು ರೀತಿಯ ದಾನ- ಧರ್ಮವನ್ನು ಆಗ ನೀಡಬೇಕಾಗುತ್ತದೆ. ಹೀಗಾಗಿ, ಹಣ ಸಂಗ್ರಹಿಸಿದ ನಂತರವೇ ಶವಸಂಸ್ಕಾರಕ್ಕೆ ಮುಂದಾಗುತ್ತಾರೆ. ಅಂತ್ಯಸಂಸ್ಕಾರವನ್ನು ಮುಗಿಸುವ ಮೊದಲು, ಕಾಪಿಟ್ಟ ಮೃತದೇಹಕ್ಕೆ ಕಾಲ್ಪನಿಕ ತಿಂಡಿ-ತಿನಿಸು ಉಣಿಸುವ, ಮಲಮೂತ್ರದ ಕಾಲ್ಪನಿಕ ವಿಸರ್ಜನೆಗೆ ಶೌಚಾಲಯ ನೀಡುವ ಪದ್ಧತಿಯೂ ರೂಢಿಯಲ್ಲಿದೆ! ಶವವನ್ನು ಬಹುಕಾಲ ಇರಿಸಿಕೊಂಡು ಪ್ರೀತಿ, ಆತ್ಮೀಯತೆ ಮತ್ತು ಗೌರವದಿಂದ ಆದರಿಸುವ ಅಲ್ಲಿನ ಬಹುಭಾಗದಲ್ಲಿ ಸಾವಿನ ನಂತರದ ಮತ್ತು ನಿಜ ಬದುಕಿನ ನಡುವಿನ ರೇಖೆಯು ಶಿಥಿಲವೆಂದು ತಿಳಿಯಲಾಗಿದೆ.
ಬಹುತೇಕ ದಕ್ಷಿಣ ಏಷ್ಯಾದ ಭಾಗದಲ್ಲಿ ಸಾವಿನ ನಂತರದ ಪ್ರಯಾಣವು ಬದುಕಿನ ಮುಂದಿನ ಆತ್ಮಸಂಬಂಧಿ ಅಧ್ಯಾಯವೆಂಬ ನಂಬಿಕೆಯಿದೆ. ಮೃತ ದೇಹಗಳನ್ನು ಭದ್ರವಾಗಿ, ಹಾಳಾಗದಂತೆ ಅದೇ ರೂಪಿನಲ್ಲಿ ಸುರಕ್ಷಿತವಾಗಿ ಸಮಾಧಿಯಾಗಿರಿಸುವ ವಾಡಿಕೆಯು ಇಂಗ್ಲೆಂಡ್, ಅಮೆರಿಕ, ಆಸ್ಟ್ರೇಲಿಯ, ನ್ಯೂಜಿಲೆಂಡ್ ಮತ್ತಿತರ ದೇಶಗಳಲ್ಲೂ ಇದೆ. ಮೆಕ್ಸಿಕೋದಲ್ಲಿ ಪ್ರತಿವರ್ಷ ನವೆಂಬರ್‌ನ ಮೊದಲೆರಡು ದಿನಗಳನ್ನು, ಸತ್ತು ಹೋದವರು ಮರಳುವ ಸಂದರ್ಭವೆಂದು ವಿಜೃಂಭಿಸುತ್ತಾರೆ.
ಮೊದಲಿನ ದಿನವನ್ನು ಮಕ್ಕಳ ದಿನವೆಂದೂ, ಎರಡನೇ ದಿನವನ್ನು ಎಲ್ಲ ಮೃತರ ದಿನವೆಂದೂ ಆಚರಿಸಲಾಗುತ್ತದೆ. ಈ ದಿನಗಳನ್ನು ದುಃಖದ ದಿನ ಗಳೆಂದು ತಿಳಿಯದೇ ಸಂತಸದ ದಿನವಾಗಿ ಆಚರಿಸುವುದು ವಿಶೇಷ. ಅಂದು ನೃತ್ಯ, ಗಾಯನ ಮತ್ತು ವಿಶೇಷ ಮನರಂಜನೆಗಳ ಮೂಲಕ ಜನರುನಲಿಯುತ್ತಾರೆ. ಸಮಾಧಿ ಸ್ಥಳದಲ್ಲಿ ಮ್ಯಾರಿಗೋಲ್ಡ್ ಹೂಗುಚ್ಛ ಮತ್ತು ಸಕ್ಕರೆಯಿಂದ ಮಾಡಿದ ತಲೆಬುರುಡೆಗಳನ್ನು ಸಮರ್ಪಿಸುವುದಿದೆ. ಈ ದಿನಗಳು, ಮೆಕ್ಸಿಕೋದಲ್ಲಿ ರಾಷ್ಟ್ರೀಯ ರಜಾದಿನಗಳೂ ಹೌದು.
ಸತ್ತವರು ಮರಳಿ ಬರುವರೆಂಬ ಆಳವಾದ ನಂಬಿಕೆಯು ಹೀಗೆ ಜಗತ್ತಿನೆಲ್ಲೆಡೆ ಇದೆ. ಮರಳುವರೆಂದು ತಿಳಿಯಲಾದ ವಿಚಾರವು ಎಲ್ಲೆಡೆ ಅಧ್ಯಾತ್ಮಿಕಮತ್ತು ಪಾರಮಾರ್ಥಿಕ ಅರ್ಥ ಪಡೆದಿದೆ. ಆಚರಣೆಯು ಬೇರೆ ಬೇರೆ ಪ್ರದೇಶದಲ್ಲಿ ಪ್ರತ್ಯೇಕ ರೂಪು ಪಡೆದಿದ್ದು ಅರ್ಥಗರ್ಭಿತವಾಗಿದೆ. ಅಷ್ಟೇ ಮಾರ್ಮಿಕ ವಾಗಿದೆ.
(ಲೇಖಕರು ಮುಂಬೈನ ಲಾಸಾಸೂಪರ್ ಜೆನರಿಕ್ಸ್‌ನ ನಿರ್ದೇಶಕರು)