ದೇವಪ್ರಭುತ್ವ ಸ್ಥಾಪನೆಗೆ ಹಗಲುಗನಸು
ಸಂಗತ
ವಿಜಯ್ ದರಡಾ
ಭಯೋತ್ಪಾದಕರ ಗುಂಪೊಂದು ಏಕಾಏಕಿ ಒಂದು ದೇಶದ ಮೇಲೆ ಕ್ಷಿಪಣಿ ದಾಳಿ ನಡೆಸಿ, ಗಡಿಯೊಳಗೆ ನುಗ್ಗಿ, ಸಂಗೀತ ಕಾರ್ಯಕ್ರಮದಲ್ಲಿ ಮೈಮರೆತಿದ್ದಜನರನ್ನು ಕೊಚ್ಚಿಹಾಕಿ, ಮಕ್ಕಳು-ಮುದುಕರೆಂದು ನೋಡದೆ ಸಿಕ್ಕಸಿಕ್ಕವರನ್ನೆಲ್ಲ ಕೊಂದು, ಹೆಂಗಸರನ್ನು ನಗ್ನವಾಗಿ ಮೆರವಣಿಗೆ ಮಾಡಿ ಬಳಿಕ ಹೊತ್ತೊಯ್ದರೆ ಆ ದೇಶ ಏನು ಮಾಡಬೇಕು? ಇಸ್ರೇಲ್ ಈಗ ಅನಿವಾರ್ಯವಾಗಿ ಮಾಡುತ್ತಿರುವುದನ್ನೇ ಯಾವ ದೇಶವಾದರೂ ಮಾಡುತ್ತದೆ.
ಇದರರ್ಥ, ಈ ಹಂತದಲ್ಲಿ ಇಸ್ರೇಲನ್ನು ಟೀಕಿಸುವ ಹಕ್ಕು ಯಾರಿಗೂ ಇಲ್ಲ. ಇಷ್ಟಕ್ಕೂ ಈಗಿನ ಬಿಕ್ಕಟ್ಟು ಯೆಹೂದಿಗಳು ಹಾಗೂ ಮುಸ್ಲಿಮರ ನಡುವಿ ನದ್ದಲ್ಲ. ಇದು ಹಮಾಸ್ ಎಂಬ ಉಗ್ರರ ಪಡೆಯು ಧೈರ್ಯಶಾಲಿ ಇಸ್ರೇಲಿಗರ ಮೇಲೆ ನಡೆಸಿದ ದಾಳಿಗೆ ಸಂಬಂಧಿಸಿದ್ದು. ಆದ್ದರಿಂದ ಇಸ್ರೇಲ್ ಮತ್ತು ಗಾಜಾಪಟ್ಟಿ ನಡುವಿನ ಪ್ರಸಕ್ತ ಬಿಕ್ಕಟ್ಟನ್ನು ಈ ಹಿನ್ನೆಲೆಯಲ್ಲಷ್ಟೇ ನೋಡಬೇಕು. ಹಮಾಸ್ ಉಗ್ರರು ಪ್ಯಾಲೆಸ್ತೀನ್‌ಗೂ ಶತ್ರುಗಳೇ ಎಂಬುದು ಈ ಹಿಂದೆಯೇ ಸಾಬೀತಾಗಿದೆ. ಹೀಗಾಗಿ ಪ್ಯಾಲೆಸ್ತೀನ್‌ನ ಬೇಡಿಕೆಗಳನ್ನು ಕೂಡ ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ ದಾಳಿಯು ದುರ್ಬಲ ಗೊಳಿಸಿದೆ.
ಹಮಾಸ್ ಉಗ್ರರು ಗಾಜಾಪಟ್ಟಿಯನ್ನು ಪ್ಯಾಲೆಸ್ತೀನ್ ನಿಂದಲೇ ಬಲವಂತವಾಗಿ ವಶಕ್ಕೆ ಪಡೆದುಕೊಂಡಿದ್ದಾರೆ ಗೊತ್ತೇ? ಗಾಜಾಪಟ್ಟಿಯೊಂದನ್ನು ಬಿಟ್ಟು ಇಡೀ ಪ್ಯಾಲೆಸ್ತೀ ನನ್ನು ‘ಪ್ಯಾಲೆಸ್ತೀನ್ ಅಥಾರಿಟಿ’ (ಪಿಎ) ಹೆಸರಿನಲ್ಲಿ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್ ಆಳುತ್ತಿದ್ದಾರೆ. ಆದರೆ ಪ್ಯಾಲೆಸ್ತೀನ್ ನದ್ದೇ ಭಾಗವಾಗಿರುವ ಗಾಜಾಪಟ್ಟಿಯನ್ನು ಮಾತ್ರ ಹಮಾಸ್ ಆಳುತ್ತಿದೆ. ೧೩೨ ಸದಸ್ಯರ ಪ್ಯಾಲೆಸ್ತೀನ್ ಶಾಸನ ಮಂಡಳಿಯನ್ನು ವೆಸ್ಟ್ ಬ್ಯಾಂಕ್, ಗಾಜಾಪಟ್ಟಿ ಹಾಗೂ ಜೆರುಸಲೇಂ ಅನ್ನು ಒಳಗೊಂಡ ಪ್ಯಾಲೆಸ್ತೀನ್ ದೇಶದ ನಾಗರಿಕರು ಆಯ್ಕೆ ಮಾಡುತ್ತಾರೆ. ಓಸ್ಲೋದಲ್ಲಿ ೧೯೯೪ರಲ್ಲಿ ‘ಪ್ಯಾಲೆಸ್ತೀನ್ ಲಿಬರೇಷನ್ ಆರ್ಗನೈಸೇಷನ್’ (ಪಿಎಲ್‌ಒ) ಮತ್ತು ಇಸ್ರೇಲ್ ನಡುವೆ ಒಂದು ಒಪ್ಪಂದವಾಗಿತ್ತು. ಇದಕ್ಕನುಗುಣವಾಗಿಯೇ ಪ್ಯಾಲೆಸ್ತೀನ್ ಅಥಾರಿಟಿ ಎಂಬ ಮಧ್ಯಂತರ ಪ್ಯಾಲೆಸ್ತೀನ್ ಸರಕಾರ ರಚನೆಯಾಗಿದೆ.
ಭಾರತ ಬಹಳ ಹಿಂದೆ ಪ್ಯಾಲೆಸ್ತೀನನ್ನು ಬೆಂಬಲಿಸಿತ್ತು. ಯಾಸಿರ್ ಅರಾಫತ್‌ರ ‘ಪಿಎಲ್‌ಒ’ ಅನ್ನು ಬೆಂಬಲಿಸಿದ ಮೊದಲ ಮುಸ್ಲಿಮೇತರ ದೇಶವಾದ ಭಾರತ ೧೯೮೮ರಲ್ಲಿ ಪ್ಯಾಲೆಸ್ತೀನನ್ನು ಒಂದು ದೇಶವಾಗಿ ಗುರುತಿಸಿತು. ೨೦೧೭ರಲ್ಲಿ ಅದರ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್ ಭಾರತಕ್ಕೆ ಭೇಟಿಯನ್ನೂ ನೀಡಿದ್ದರು. ಪ್ಯಾಲೆಸ್ತೀನ್‌ಗೆ ಯುನೆಸ್ಕೋದ ಪೂರ್ಣಾವಧಿ ಸದಸ್ಯತ್ವ ನೀಡುವುದನ್ನು ಬೆಂಬಲಿಸಿ ಭಾರತ ವಿಶ್ವಸಂಸ್ಥೆಯಲ್ಲಿ ಮತದಾನ ಮಾಡಿತ್ತು, ೨೦೧೫ರಲ್ಲಿ ವಿಶ್ವ ಸಂಸ್ಥೆಯ ಕಟ್ಟಡದಲ್ಲಿ ಪ್ಯಾಲೆಸ್ತೀನ್‌ನ ಧ್ವಜವನ್ನು ಅಳವಡಿಸುವುದಕ್ಕೂ ಬೆಂಬಲಿಸಿತ್ತು.
ಭಾರತವಷ್ಟೇ ಅಲ್ಲ, ವಿಶ್ವದ ಅನೇಕ ದೇಶಗಳು ಪ್ಯಾಲೆಸ್ತೀನ್‌ಗೆ ಅನುಕಂಪ ತೋರಿವೆ. ಈ ವಿಷಯದಲ್ಲಿ, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಯಾವಾಗಲೂಶಾಂತಿಯಿಂದ ಇರಬೇಕೆಂಬುದೇ ಭಾರತದ ಅಧಿಕೃತ ವಿದೇಶಾಂಗ ನೀತಿ. ಆದರೆ ಪ್ಯಾಲೆಸ್ತೀನ್‌ನ ಭವಿಷ್ಯಕ್ಕೆ ಹಮಾಸ್ ಉಗ್ರರು ಕಲ್ಲುಹಾಕುತ್ತಿದ್ದಾರೆ. ಸದಾ ಪ್ಯಾಲೆಸ್ತೀನನ್ನು ಬೆಂಬಲಿಸುತ್ತಿದ್ದವರೂ ಇಂದು ಹಮಾಸ್‌ನ ಅಮಾನವೀಯ ದಾಳಿಗೆ ಬೇಸತ್ತು ಇಸ್ರೇಲನ್ನು ಬೆಂಬಲಿಸತೊಡಗಿದ್ದಾರೆ. ಪ್ರಧಾನಿಮೋದಿ ಕೂಡ ‘ಭಾರತ ಈ ಸಂಕಷ್ಟದ ವೇಳೆ ಇಸ್ರೇಲ್‌ನ ಜತೆಗೆ ನಿಲ್ಲುತ್ತದೆ’ ಎಂದಿದ್ದಾರೆ.
ನಿಮಗೊಂದು ಸಂಗತಿಯನ್ನು ನೆನಪಿಸಬೇಕು. ೨೦೧೮ರಲ್ಲಿ ಮೋದಿ ಪ್ಯಾಲೆಸ್ತೀನ್‌ಗೆ ಭೇಟಿ ನೀಡಿದ್ದರು. ಆಗ ಅವರಿಗೆ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್ಪ್ಯಾಲೆಸ್ತೀನ್‌ನ ಅತ್ಯುಚ್ಚ ನಾಗರಿಕ ಗೌರವವಾದ ‘ಗ್ರ್ಯಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಫ್ ಪ್ಯಾಲೆಸ್ತೀನ್’ ಪ್ರಶಸ್ತಿಯನ್ನು ಪ್ರದಾನಿಸಿದ್ದರು. ನಾವು ಪ್ಯಾಲೆ ಸ್ತೀನ್ ಮತ್ತು ಇಸ್ರೇಲ್ ಎರಡರ ಜತೆಗೂ ಉತ್ತಮ ಬಾಂಧವ್ಯ ಹೊಂದಿರುವುದರ ದ್ಯೋತಕವಿದು. ಹೀಗಿರುವಾಗ, ಇತ್ತೀಚೆಗೆ ಇಸ್ರೇಲ್ ಮೇಲೆ ಎರಗಿದಹಮಾಸ್ ಉಗ್ರರು ನಡೆಸಿದ್ದು ಪೈಶಾಚಿಕ ಕೃತ್ಯವೇ ಸರಿ.
ಪುಟ್ಟ ಮಕ್ಕಳ ತಲೆಕಡಿದು ಎಸೆಯುವಷ್ಟು ಕ್ರೌರ‍್ಯವನ್ನು ಯಾರು ತಾನೇ ಮೆರೆಯಲು ಸಾಧ್ಯ! ಮಹಿಳೆಯರನ್ನು ನಗ್ನವಾಗಿ ಮೆರವಣಿಗೆ ಮಾಡಿ ಬಳಿಕ ಹೊತ್ತೊಯ್ದಿದ್ದು ಪೈಶಾಚಿಕತನವಲ್ಲವೇ? ಹಮಾಸ್ ಉಗ್ರರ ಅಂಥ ಕೃತ್ಯಗಳನ್ನು ನೋಡಿದರೆ ಅವರು ಯಾರನ್ನು ಬೇಕಾದರೂ ಭಯದಿಂದ ನಡುಗು ವಂತೆ ಮಾಡಬಲ್ಲರು ಎಂಬುದು ಸಾಬೀತಾಗುತ್ತದೆ! ಆದರೆ, ಅವರು ಆ ಪ್ರಮಾಣದ ಭೀಕರ ದಾಳಿ ನಡೆಸುವ ವಿಷಯ ಜಗತ್ತಿನ ಅತ್ಯಂತ ದಕ್ಷ ಗುಪ್ತಚರ ಸಂಸ್ಥೆಯಾಗಿರುವ ಇಸ್ರೇಲ್‌ನ ‘ಮೊಸಾದ್’ಗೆ ಹೇಗೆ ತಿಳಿಯಲಿಲ್ಲ? ಇಸ್ರೇಲ್‌ನ ರಕ್ಷಣಾ ವ್ಯವಸ್ಥೆ ವಿಫಲ ವಾಗಿದ್ದು ಹೇಗೆ? ಹಮಾಸ್ ಕೊಲೆಗಡುಕರು ಇಸ್ರೇಲ್ ಒಳಗೆ ನುಸುಳಿ ಆ ಪರಿ ಹಿಂಸಾಚಾರ ನಡೆಸಲು ಸಾಧ್ಯವಾಗಿದ್ದು ಹೇಗೆ? ಎಂಬುದು ಅರ್ಥವಾಗುತ್ತಿಲ್ಲ.
ನಾನು ಇಸ್ರೇಲ್-ಪ್ಯಾಲೆಸ್ತೀನ್ ಮಾತ್ರವಲ್ಲದೆ, ಜೆರುಸಲೇಂನ ಧಾರ್ಮಿಕ ಸ್ಥಳಗಳನ್ನೂ ಸಂದರ್ಶಿಸಿದ್ದೇನೆ. ಅಲ್ಲಿನ ಜನರು ತುಂಬಾ ಒಳ್ಳೆಯವರು. ಇಷ್ಟಕ್ಕೂ ಶಾಂತಿ- ಸಹಬಾಳ್ವೆಯ ಬದುಕು ಯಾರಿಗೆ ತಾನೇ ಇಷ್ಟವಿಲ್ಲ? ಹೀಗಾಗಿ ಈಗಿನ ಬಿಕ್ಕಟ್ಟನ್ನು ಉಭಯ ದೇಶಗಳು ಶಾಂತಿಯುತವಾಗಿ ಬಗೆಹರಿಸಿ ಕೊಳ್ಳಬೇಕು. ಜಗತ್ತು ಕೂಡ ಇದೇ ದಿಸೆಯಲ್ಲಿ ಸಾಗುತ್ತಿದೆ. ಇಸ್ರೇಲ್ ಹಾಗೂ ಯುಎಇ ನಡುವಿನ ಸಂಬಂಧ ಸುಧಾರಿಸಿದೆ. ಇಸ್ರೇಲ್ ಹಾಗೂ ಸೌದಿ ಅರೇಬಿಯಾ ನಡುವಿನ ಸಂಬಂಧ ಕೂಡ ಸುಧಾರಣೆಯ ಹಾದಿಯಲ್ಲಿದೆ. ಮಧ್ಯ ಪ್ರಾಚ್ಯದ ಎಲ್ಲಾ ದೇಶಗಳು ಶಾಂತಿಗೆ ಒತ್ತುನೀಡಿದರೆ ಅವೆಲ್ಲವೂ ಅಭಿವೃದ್ಧಿ ಹೊಂದುತ್ತವೆ ಎಂಬ ಭಾವನೆ ಅಲ್ಲಿದೆ.
ಆದರೂ ಹಮಾಸ್ ಇಂಥ ಅಮಾನವೀಯ ದಾಳಿ ನಡೆಸಿತು. ಅದರ ಉದ್ದೇಶವೇ ಈ ಶಾಂತಿ ಮಾತುಕತೆಯ ಹಳಿ ತಪ್ಪಿಸುವುದು. ಆಂತರಿಕ ರಾಜಕೀಯ ತುಮುಲಗಳಿಂದಾಗಿ ಇಸ್ರೇಲ್ ದುರ್ಬಲವಾಗಿದೆ ಎಂದು ಹಮಾಸ್ ತಪ್ಪು ತಿಳಿದುಕೊಂಡಿತ್ತು. ಇರಾನ್ ಅಥವಾ ಇನ್ನಾವುದೇ ದೇಶ ಈ ದಾಳಿ ನಡೆಸಲುಹಮಾಸ್‌ಗೆ ಬೆಂಬಲಿಸಿದೆಯಾ, ಶಸಾಸಗಳನ್ನು ಪೂರೈಸಿದೆಯಾ ಎಂಬ ಚರ್ಚೆಗೆ ನಾನು ಕೈಹಾಕುವುದಿಲ್ಲ. ಆದರೆ ಈ ದಾಳಿ ನಡೆಸಿದವರು ಪ್ಯಾಲೆಸ್ತೀನ್‌ನ ಭವಿಷ್ಯಕ್ಕೆ ಗಂಭೀರವಾಗಿ ಘಾಸಿಯುಂಟುಮಾಡಿದ್ದಾರೆ ಎಂಬುದಂತೂ ಸತ್ಯ.
ಇಸ್ರೇಲ್ ಏನು ಮಾಡುತ್ತಿದೆ ಎಂಬುದು ಜಗತ್ತಿಗೇ ಗೊತ್ತಿದೆ. ಇಸ್ರೇಲ್‌ನಲ್ಲಿ ಯಾರು ಸರಕಾರ ನಡೆಸುತ್ತಿದ್ದರೂ ಸರಿ, ಅವರು ಪಾಲಿಸಿಕೊಂಡು ಬಂದಿರುವ ನೀತಿಯೆಂದರೆ ಶತ್ರುಗಳು ಒಬ್ಬ ಇಸ್ರೇಲಿಯನ್ನು ಕೊಂದರೆ ತಾವು ೧೦ ಮಂದಿ ಯನ್ನು ಕೊಲ್ಲಬೇಕು ಎಂಬುದು! ಈಗ ನಡೆದಿರುವುದು ಇಸ್ರೇಲ್‌ನ ಇತಿಹಾಸದಲ್ಲೇ ಅತಿದೊಡ್ಡ ಭಯೋತ್ಪಾದಕ ದಾಳಿ. ಹೀಗಾಗಿ ಇಸ್ರೇಲ್ ಇದನ್ನು ಹಗುರವಾಗಿ ಪರಿಗಣಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹಮಾಸ್ ಉಗ್ರರಿಗೆ ಪಾಠ ಕಲಿಸಲು ಇಸ್ರೇಲಿನಲ್ಲಿರುವ ಜನಸಾಮಾನ್ಯರು ಮಾತ್ರವಲ್ಲ, ಬೇರೆ ಬೇರೆ ದೇಶಗಳಲ್ಲಿ ನೆಲೆಸಿರುವ ಇಸ್ರೇಲಿಗರು ಕೂಡ ತಾಯ್ನಾಡಿಗೆ ಮರಳಿ ಸೇನೆಗೆ ಸೇರಲು ಮುಂದಾಗುತ್ತಿದ್ದಾರೆ.
ಅವರಿಗೆ ದೇಶಭಕ್ತಿ ಎಷ್ಟಿದೆ ಎಂಬುದಕ್ಕೆ ಒಂದು ಉದಾಹರಣೆ ನೀಡುತ್ತೇನೆ. ನನ್ನ ಸ್ನೇಹಿತನೊಬ್ಬ ಇಸ್ರೇಲ್‌ನಲ್ಲಿ ನೆಲೆಸಿದ್ದಾನೆ. ಅವನು ಮೂಲತಃ ಭಾರತೀಯ. ಅಲ್ಲಿ ಪ್ರತಿ ಯೊಬ್ಬ ಯುವಕನಿಗೂ ೩೨ ತಿಂಗಳ ಹಾಗೂ ಪ್ರತಿಯೊಬ್ಬ ಯುವತಿಗೂ ೨೪ ತಿಂಗಳ ಮಿಲಿಟರಿ ತರಬೇತಿ ಕಡ್ಡಾಯ. ತರಬೇತಿಯ ನಂತರ ಅವರ ಹೆಸರನ್ನು ಮೀಸಲು ಮಿಲಿಟರಿ ಪಡೆಗೆ ನೋಂದಾಯಿಸಲಾಗುತ್ತದೆ. ತನ್ನ ಮಗಳನ್ನು ಸೇನೆಗೆ ಕಳುಹಿಸಲು ಇಷ್ಟವಿರದ ನನ್ನ ಸ್ನೇಹಿತ ಅವಳನ್ನು ವಿದ್ಯಾಭ್ಯಾಸ ಕ್ಕಾಗಿ ವಿದೇಶಕ್ಕೆ ಕಳುಹಿಸಲು ನಿರ್ಧರಿಸಿದ. ಆದರೆ ಮಗಳು ಅವನ ಮಾತು ಕೇಳಲಿಲ್ಲ. ಸೇನೆಯಲ್ಲಿ ಸೇವೆ ಸಲ್ಲಿಸಿದನಂತರವೇ ವಿದೇಶಕ್ಕೆ ಹೋಗುವುದಾಗಿ ಖಂಡತುಂಡವಾಗಿ ಹೇಳಿಬಿಟ್ಟಳು. ಅದಲ್ಲವೇ ದೇಶಭಕ್ತಿ!
ತನ್ನ ನೆಲದಲ್ಲಿ ಕಾಲಿಟ್ಟ ಎಲ್ಲರಿಗೂ ಅಂಥದ್ದೊಂದು ಸ್ಪೂರ್ತಿ ತುಂಬುವುದು ಇಸ್ರೇಲ್‌ನ ಹುಟ್ಟುಗುಣ. ಹೀಗಿರುವಾಗ ಆ ದೇಶವು ಹಮಾಸ್ ಉಗ್ರರನ್ನು ನಾಮಾವಶೇಷ ಮಾಡಲು ನಿರ್ಧರಿಸಿದರೆ ಅಂತಿಮ ಫಲಿತಾಂಶವನ್ನು ಯಾರೂ ಬದಲಿಸಲು ಸಾಧ್ಯವಿಲ್ಲ. ಆದರೆ, ಬೇಸರದ ಸಂಗತಿಯೆಂದರೆ, ಈಯುದ್ಧದಲ್ಲಿ ಮುಗ್ಧ ಪ್ಯಾಲೆಸ್ತೀನಿ ಜನರು ಕೂಡ ಸಾಯುತ್ತಾರೆ. ಗಾಜಾಪಟ್ಟಿಯಲ್ಲಿ ಬದುಕು ಕಟ್ಟಿಕೊಂಡಿರುವ ಲಕ್ಷಾಂತರ ಜನಸಾಮಾನ್ಯರು ಎಲ್ಲಿಗೆ ಹೋಗಬೇಕು? ಇಸ್ರೇಲ್ ಸದ್ಯಕ್ಕೆ ವಾಯುದಾಳಿಯನ್ನಷ್ಟೇ ನಡೆಸುತ್ತಿದೆ.
-ಸರಸ್ಬಾಂಬ್‌ಗಳ ಅಟಾಟೋಪವನ್ನು ನಾವು ನೋಡುತ್ತಿದ್ದೇವೆ. ಇಂದಲ್ಲ ನಾಳೆ ಇಸ್ರೇಲಿ ಯೋಧರು ಗಾಜಾಪಟ್ಟಿಯೊಳಗೆ ನುಗ್ಗಿ ಹೊಡೆಯುತ್ತಾರೆ. ಅದು ಪ್ಯಾಲೆಸ್ತೀನ್‌ಗೆ ನಿಜವಾಗಿಯೂ ವಿನಾಶದ ಯುಗವಾಗಿ ಪರಿಣಮಿಸಲಿದೆ. ಇದಕ್ಕೆ ಕಾರಣ ಯಾರು? ಹಮಾಸ್, ಹಿಜ್ಬುಲ್ಲಾ, ಐಎಸ್, ಅಲ್‌ಖೈದಾ, ಬೋಕೋ ಹರಾಂ ಅಥವಾ ತಾಲಿಬಾನ್‌ನಂಥ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವವರೇ ಇದಕ್ಕೆಲ್ಲ ಕಾರಣ. ಇಡೀ ಜಗತ್ತನ್ನು ಧರ್ಮದ ಹೆಸರಿನಲ್ಲಿ ಗೆಲ್ಲುವ ಹಗಲುಗನಸು ಕಾಣುವ ಮನಸ್ಥಿತಿಯೇ ಇದಕ್ಕೆಕಾರಣ. ಹಮಾಸ್ ಮುಖ್ಯಸ್ಥ ತಾನು ಇಡೀ ಜಗತ್ತನ್ನು ಆಳುತ್ತೇನೆ ಎನ್ನುತ್ತಿದ್ದಾನೆ. ಅಮೆರಿಕ, ಚೀನಾದಂಥ ದೇಶಕ್ಕೇ ಜಗತ್ತನ್ನು ಆಳಲು ಸಾಧ್ಯವಾಗುತ್ತಿಲ್ಲದಿರುವಾಗ ಹಮಾಸ್ ಅದರ ಬಗ್ಗೆ ಯೋಚನೆ ಕೂಡ ಮಾಡುವುದು ನನ್ನ ಪ್ರಕಾರಅಪರಾಧ! ಈ ಭಯೋತ್ಪಾದಕರು ಈಗಾಗಲೇ ಅಫ್ಗಾನಿಸ್ತಾನ, ಪಾಕಿಸ್ತಾನ, ಇರಾಕ್, ಇರಾನ್, ಈಜಿಪ್ಟ್, ಸೊಮಾಲಿಯಾ ಹೀಗೆ ಸಾಕಷ್ಟು ದೇಶಗಳನ್ನು ಧರ್ಮದ ಹೆಸರಿನಲ್ಲಿ ಹಾಳುಗೆಡವಿದ್ದಾರೆ.
ಹೀಗಾಗಿ ಅವರ ಸಂಘಟನೆಗಳನ್ನು ಹೊಸಕಿ ಹಾಕಲೇಬೇಕು! ಅಷ್ಟೇಕೆ, ಹಣ ಹಾಗೂ ಗನ್‌ಗಳನ್ನು ನೀಡುವ ಮೂಲಕ ಭಯೋತ್ಪಾದಕ ಸಂಘಟನೆಗಳಿಗೆ ನೆರವು ನೀಡುತ್ತಿರುವವರನ್ನು ಕೂಡ ಬೇಟೆಯಾಡಬೇಕು. ಭಯೋತ್ಪಾದನೆಯ ವಿರುದ್ಧ ಇಡೀ ಜಗತ್ತು ಒಗ್ಗಟ್ಟಿನಿಂದ ಎದ್ದುನಿಲ್ಲಬೇಕು!
(ಲೇಖಕರು ಹಿರಿಯ ಪತ್ರಕರ್ತರು, ರಾಜ್ಯಸಭಾ ಸದಸ್ಯರು)