ಕುರುಡು ಕಾಂಚಾಣದ ಕರಾಳ ನರ್ತನ
ಭಾಸ್ಕರಾಯಣ
ಎಂ.ಕೆ.ಭಾಸ್ಕರ ರಾವ್
ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಹಾಗೂ ಮಿಜೋರಾಂ ರಾಜ್ಯ ವಿಧಾನಸಭೆಗಳಿಗೆ ಚುನಾವಣೆ ಘೋಷಣೆಯಾಗಿದೆ. ಇವುಗಳ ವೆಚ್ಚಭರಿಸಲು ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಪಕ್ಷ/ಸರಕಾರ ಹಣ ಸಂಗ್ರಹಿಸಿ ರವಾನೆ ಮಾಡುವ ಮೊದಲೇ ಸಿಕ್ಕುಬಿದ್ದಿದೆ ಎನ್ನುವುದು ಬಿಜೆಪಿ ಆರೋಪ.
‘ಕುರುಡು ಕಾಂಚಾಣ ಕುಣಿಯುತಲಿತ್ತು, ಕಾಲಿಗೆ ಬಿದ್ದವರ ತುಳಿಯುತಲಿತ್ತು…’ ಹೀಗೆ ಶುರುವಾಗುವ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಕವನಕ್ಕೆ ಸಾಮಾಜಿಕ, ಆರ್ಥಿಕ, ರಾಜಕೀಯ ವಿಕೃತಿಗೆ ಕಾರಣವಾಗಿರುವ ಈ ಹೊತ್ತಿನ ಸರಿಯಾಗಿ ಲೆಕ್ಕ ಕೊಡಲಾಗದ ‘ಕಳ್ಳ’ ಹಣದ ನಗ್ನನೃತ್ಯದ ಬೆಳವಣಿಗೆಗಳು ಖಂಡಿತವಾಗಿಯೂ ಸ್ಪೂರ್ತಿ ಆಗಿರಲಿಕ್ಕಿಲ್ಲ. ಆದರೆ ‘ರವಿ ಕಾಣದ್ದನ್ನು ಕವಿ ಕಂಡ’ ಎಂಬ ಮಾತೇ ಇದೆಯಲ್ಲ. ಕಲ್ಪನಾ ವಿಲಾಸ ಎನ್ನುವುದು ಗೊತ್ತಿಲ್ಲದ್ದನ್ನು ಮಾತ್ರವಲ್ಲ ಗೊತ್ತು ಗುರಿಯೇ ಇಲ್ಲದ ವಿಳಾಸವನ್ನು ಅರಸಿ ಹೋಗುತ್ತದೆ. ಬೇಂದ್ರೆ ಪದ್ಯ ಈಗ ನೆನಪಾಗಲು ಕಾರಣ ಕರ್ನಾಟಕದಲ್ಲಿ ಆದಾಯ ತೆರಿಗೆ ಇಲಾಖೆ ವಶಕ್ಕೆ ತೆಗೆದುಕೊಂಡಿರುವ ಅಗಾಧ ಎನ್ನಬಹುದಾದ ನೂರು ಕೋಟಿ ರುಪಾಯಿ.
ಗುತ್ತಿಗೆದಾರರೊಬ್ಬರಿಗೆ ಸಂಬಂಧಿಸಿದ್ದು ಇದೆಂದು ಮೊದಲಿಗೆ ಹೇಳಲಾಯಿತಾದರೂ ಈಗ ಅದಕ್ಕೆ ರಾಜಕೀಯ ಮೆತ್ತಿಕೊಂಡಿದೆ. ಗುತ್ತಿಗೆದಾರರೊಬ್ಬರ ನಿವಾಸದ ಮಂಚದ ಕೆಳಗೆ ಕಬ್ಬಿಣದ ಟ್ರಂಕುಗಳಲ್ಲಿ ಭದ್ರವಾಗಿಟ್ಟಿದ್ದ ೪೨ ಕೋಟಿ ರುಪಾಯಿ ಹಣ ಮೊದಲಿಗೆ ಪತ್ತೆಯಾದಾಗ ಅದರ ಆಳ ಅಗಲ ಇಷ್ಟೇ ಆಗಿರಲಾರದು ಎಂಬ ಗುಮಾನಿ ಇತ್ತು. ಇದೀಗ ಆ ಅನುಮಾನ ನಿಜಗೊಂಡು ೧೦೦ ಕೋಟಿಯ ಆಜೂಬಾಜಿನಲ್ಲಿ ನಿಂತಿದೆ. ದಾಳಿ ಮುಂದುವರಿದಂತೆಲ್ಲ ಹಣದ ಕಪ್ಪುಬಣ್ಣ ಇನ್ನಷ್ಟು ಬಯಲಾಗಲಿದೆ.
ಮೊದಲಿಗೆ ಈ ಸುದ್ದಿ ಬಂದಾಗ ಇದು ಕಾಂಗ್ರೆಸ್ಸಿಗರಿಗೆ ಸೇರಿದ ಹಣವೆಂಬ ಆರೋಪವನ್ನು ಬಿಜೆಪಿ ಮಾಡಿತು. ಒಂದೆರಡು ದಿನದಲ್ಲಿ, ‘ಅಲ್ಲ ಅಲ್ಲ ಈಹಣ ನಮ್ಮದಲ್ಲ, ಇದು ಬಿಜೆಪಿಗರಿಗೆ ಸೇರಿದ್ದು’ ಎಂಬ ವಿವರಣೆ ಕಾಂಗ್ರೆಸ್ ಪಾಳಯದಿಂದ ಕೇಳಿ ಬಂತು. ಈ ಎರಡೂ ಪಕ್ಷಗಳದು ಪರಸ್ಪರ ಆರೋಪವೇ ಹೊರತು ಸತ್ಯವಲ್ಲ ಎನ್ನುವುದು ಜನರಿಗೆ ಮನವರಿಕೆಯಾಗಿದೆ. ಅದೇ ಕಾಲಕ್ಕೆ ಈ ಎರಡು ಪಕ್ಷಗಳ ಪೈಕಿ ಒಂದಲ್ಲ ಒಂದಕ್ಕೆ ಸೇರಿದ ಪಾಪದಹಣ ಇದು ಎನ್ನುವುದಂತೂ ಖಚಿತವಾಗಿದೆ.
ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಹಾಗೂ ಮಿಜೋರಾಂ ಈ ಐದು ರಾಜ್ಯ ವಿಧಾನಸಭೆಗಳಿಗೆ ಚುನಾವಣೆ ಘೋಷಣೆಯಾಗಿದೆ. ಈ ಚುನಾವಣಾ ವೆಚ್ಚ ಭರಿಸಲು ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಪಕ್ಷ/ ಸರಕಾರ ಹಣವನ್ನು ಸಂಗ್ರಹಿಸಿ ರವಾನೆ ಮಾಡುವ ಮೊದಲೇ ಸಿಕ್ಕುಬಿದ್ದಿದೆ ಎನ್ನುವುದು ಬಿಜೆಪಿ ಆರೋಪ. ಆರೋಪವನ್ನು ಅಷ್ಟೆಲ್ಲ ಸುಲಭದಲ್ಲಿ ಒಪ್ಪಿಕೊಳ್ಳುವುದು ಕಷ್ಟ, ಅಷ್ಟು ಸುಲಭದಲ್ಲಿ ನಿರಾಕರಿಸುವುದೂ ಕಷ್ಟವೇ. ಇನ್ನೇನು ಚುನಾವಣೆ ಘೋಷಣೆಯಾಗಲಿದೆ ಎಂಬ ಹಂತದಲ್ಲಿ ತೆಲಂಗಾಣ ಚುನಾವಣೆಯ ಜವಾಬ್ದಾರಿಯನ್ನು ಕಾಂಗ್ರೆಸ್ ಪಕ್ಷವು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ವಹಿಸಿರುವ ಸುದ್ದಿ ಈ ಮಾತಿಗೆ ಒಂದಿಷ್ಟು ಬೆಂಬಲ ಕೊಡುವ ಬೆಳವಣಿಗೆ. ದೇಶದ ಅತ್ಯಂತಶ್ರೀಮಂತ ಶಾಸಕ ಸ್ಥಾನದಲ್ಲಿರುವವರು ಡಿಕೆಶಿ. ಅವರಲ್ಲಿರುವ ಅಗಾಧ ಹಣದ ಮೂಲ ಯಾವುದೆ ನ್ನುವುದರ ಬಗ್ಗೆ ನಡೆದಿರುವ ತನಿಖೆ ಪ್ರಗತಿಯಲ್ಲಿದೆಎಂಬುದು ದೇಶವಾಸಿಗಳ ಭಾವನೆ. ಒಂದು ಹೊಣೆಗಾರಿಕೆ ಒಪ್ಪಿಸಿದರೆ ಅದನ್ನು ಶತಾಯಗತಾಯ ಕೈಗೂಡುವಂತೆ ಮಾಡಲು ಎಷ್ಟು ಬೇಕೋ ಅದಕ್ಕಿಂತ ಹೆಚ್ಚು ಹಣ ಚೆಲ್ಲಲು ಹಿಂದೆ ಮುಂದೆ ನೋಡುವ ಜಾಯಮಾನ ಶಿವಕುಮಾರ್ ಅವರದಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ನಂಬಿರುವಂತೆ ಇತರ ಪಕ್ಷಗಳ ರಾಜಕಾರಣಿಗಳೂ ನಂಬಿದ್ದಾರೆ.
ಈ ನಂಬಿಕೆಯನ್ನು ಆಧರಿಸಿ ಆರೋಪ ಮಾಡುತ್ತಿರುವ ಬಿಜೆಪಿ, ಎಐಸಿಸಿ ಪಾಲಿಗೆ ಕರ್ನಾಟಕ ಎಟಿಎಂ (ಆಲ್ ಟೈಂ ಮನಿ) ಆಗಿದೆ ಎಂಬ ನಿರಂತರ ಆರೋಪ ಮಾಡುತ್ತಿದೆ. ಈ ಹಣ ಮಂಕು ಕವಿದಿದ್ದ ಬಿಜೆಪಿಗೆ ಒಂದು ಆಶಾಕಿರಣದಂತೆ ಕಂಡಿದ್ದರೆ ಕಾಂಗ್ರೆಸ್ಸು ತನ್ನ ವರ್ಚಸ್ಸಿಗೆ ಗ್ರಹಣ ಒಕ್ಕರಿಸಿದ ಮನಃಸ್ಥಿತಿಯಲ್ಲಿದೆ. ರಾಜ್ಯದಲ್ಲಿ ಇಷ್ಟೆಲ್ಲ ಹಣ ಪತ್ತೆಯಾದ ಸುದ್ದಿ ಬಂದ ಮರು ಬೆಳಗ್ಗೆಯೇ ಬೆಂಗಳೂರಿನಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಸದಾಶಿವನಗರದ ನಿವಾಸದಲ್ಲಿ ಗುಪ್ತ್‌ಗುಪ್ತ್ ಸಭೆಯೊಂದು ನಡೆಯಿತು. ಖರ್ಗೆಯವರ ಜತೆ ಆ ಸಭೆಯಲ್ಲಿ ಪಾಲ್ಗೊಂಡವರು ಕರ್ನಾಟಕ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೆವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಮತ್ತು ಡಿಸಿಎಂಡಿ.ಕೆ.ಶಿವಕುಮಾರ್. ಈ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಹ್ವಾನ ಇರಲಿಲ್ಲ ಎನ್ನುವುದು ಕೇವಲ ಕಾಕತಾಳೀಯ ಆಗಿರಲಾರದು.
ದೆಹಲಿಯಿಂದ ಮೂವರು ಬಂದು ಡಿಕೆಶಿ ಜತೆ ಮಾತಾಡುವುದಕ್ಕೆ ಕಾರಣವಿದೆ. ಫೋನಿನಲ್ಲಿ ಮಾತಾಡಿದರೆ ಕದ್ದಾಲಿಕೆಯ ಅಪಾಯವಿದೆಯೆಂದೇ ಇಲ್ಲಿ ಸಭೆ ನಡೆಯಿತು ಎನ್ನುವುದು ಕಾಂಗ್ರೆಸ್ ಮೂಲಗಳ ಮಾಹಿತಿ. ಕಾಂಗ್ರೆಸ್ ಪಕ್ಷದ ಭಿನ್ನಮತೀಯರು ಹೇಳುವಂತೆ ಈ ಸಭೆ ‘ಡ್ಯಾಮೇಜ್ ಕಂಟ್ರೋಲ್’ಉದ್ದೇಶದ್ದು. ಸಭೆಯಲ್ಲಿ ಏನೆಲ್ಲ ಮಾತುಕತೆ ನಡೆಯಿತೆಂಬ ಬಗ್ಗೆ ಅಧಿಕೃತವಾಗಿ ಯಾರೂ ಏನನ್ನೂ ಹೇಳಿಲ್ಲ. ಇಲ್ಲಸಲ್ಲದ ಊಹಾಪೋಹಕ್ಕೆ ಇದು ಎಡೆಕಲ್ಪಿಸಿದೆ. ಹಣದ ವಿಚಾರದಲ್ಲಿ ತನಿಖೆ ಮುಂದು ವರಿದಿರುವುದರಿಂದ ಫಲಿತಾಂಶಕ್ಕೆ ಕಾಯಬೇಕಲ್ಲದೆ ಬೇರೆ ಮಾರ್ಗವಿಲ್ಲ. ಆದರೆ ಚುನಾವಣೆ ಬಂದಾಕ್ಷಣ ಕುರುಡು ಕಾಂಚಾಣ ಕುಣಿಯುವುದರ ಮರ್ಮ ಗೊತ್ತಿಲ್ಲದ್ದೇನೂ ಅಲ್ಲ. ೨೦೧೪ರ ಸಾರ್ವತ್ರಿಕ ಚುನಾವಣೆ ಸಮಯದಲ್ಲಿ ಚುನಾವಣಾ ಆಯೋಗ ಅಭ್ಯರ್ಥಿಗಳಿಂದ ಮತ್ತು ಅವರ ಬೆಂಬಲಿಗರಿಂದ ಅದಿಕೃತವಾಗಿ ಜಫ್ತಿ ಮಾಡಿಕೊಂಡ ಹಣ ೨೧೭ ಕೋಟಿ ರುಪಾಯಿ.
ಆಂಧ್ರ ಪ್ರದೇಶವೊಂದರಲ್ಲೇ ೧೧೮ ಕೋಟಿ ರು. ಹಣ ವಶಪಡಿಸಿ ಕೊಳ್ಳಲಾಗಿತ್ತು. ತಮಿಳುನಾಡಿನಲ್ಲಿ ೧೮.೩೧ ಕೋಟಿ, ಮಹಾರಾಷ್ಟ್ರದಲ್ಲಿ ೧೪.೪೦ ಕೋಟಿ, ಉತ್ತರ ಪ್ರದೇಶ ದಲ್ಲಿ ೧೦.೪೬ ಕೋಟಿ, ಪಂಜಾಬ್‌ನಲ್ಲಿ ೪ ಕೋಟಿ ರು. ವಶಕ್ಕೆ ಪಡೆಯಲಾಯಿತು ಎನ್ನುತ್ತದೆ ಚುನಾವಣಾ ಆಯೋಗ. ಇದಕ್ಕೆ ಹೋಲಿಸಿ ನೋಡಿದರೆ ೨೦೧೯ರ ಚುನಾವಣೆಯಲ್ಲಿ ವಶಕ್ಕೆ ಪಡೆದ ಮೊತ್ತ ಸಾವಿರಾರು ಪಟ್ಟು ಅಧಿಕ. ಚುನಾವಣೆ ಘೋಷಣೆ ಆದಂದಿನಿಂದ ಮತದಾನ ಪ್ರಕ್ರಿಯೆ ಪೂರೈಸುವ ವರೆಗೆ ದಿನಕ್ಕೆ ಒಂದು ನೂರು ಕೋಟಿಯಂತೆ ಜಫ್ತಿ ಮಾಡಲಾಯಿತು!
ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ ೭೦ ಲಕ್ಷ ಮತ್ತು ವಿಧಾನಸಭಾ ಚುನಾವಣಾ ಅಭ್ಯರ್ಥಿ ೨೮ ಲಕ್ಷದವರೆಗೆ ವೆಚ್ಚ ಮಾಡಲು ಮಾತ್ರವೇ ಅವಕಾಶವಿದೆ. ಆದರೆ ನಮ್ಮ ದೇಶದಲ್ಲಿ ಗ್ರಾಮ ಪಂಚಾಯತಿ ಅಭ್ಯರ್ಥಿಗಳು ಇದಕ್ಕಿಂತ ಹೆಚ್ಚಿನ ಮೊತ್ತವನ್ನು ವೆಚ್ಚ ಮಾಡುವುದು ಹಗಲಿನಷ್ಟೇ ಸ್ಪಷ್ಟ. ಇಂತಿರುವಾಗ ಶಾಸಕ ಅಥವಾ ಸಂಸದ ಸ್ಥಾನ ಕೈವಶ ಮಾಡಿಕೊಳ್ಳಲು ಹೊರಟವರು ಕೋಟಿ ಕೋಟಿ ವೆಚ್ಚದಲ್ಲಿ ಹಣ ಹೂಡುವುದು ಜನ ಬಲ್ಲಸಂಗತಿ. ಹೂಡಿದ ಹಣವನ್ನು ಹಿಂಪಡೆಯುವುದು ಹೇಗೆ…? ಹೇಗೆ ಬಂಡವಾಳ ಹತ್ತು ಪಟ್ಟು ಮೀರಿ ಪಡೆಯಬೇಕೆನ್ನುವುದು ಶಾಸಕರು ಸಂಸದರಿಗೆಗೊತ್ತಿರುತ್ತದೆ. ಚುನಾಯಿತ ಪ್ರತಿನಿಽಗಳು ಹೇಗೆಲ್ಲ ಹಣ ಲೂಟಿ ಮಾಡುತ್ತಾರೆ ಎನ್ನುವುದನ್ನು ಬಲ್ಲವರು ಬಹಳ, ಪ್ರತಿಕ್ರಿಯಿಸುವವರು ಮಾತ್ರ ವಿರಳ.
ಅಭ್ಯರ್ಥಿಗಳು ಮಾಡಿದ ವೆಚ್ಚ ೨೦೧೪ರ ಲೋಕಸಭಾ ಚುನಾವಣೆಯನ್ನು ಅತ್ಯಂತ ದುಬಾರಿ ಚುನಾವಣೆಯನ್ನಾಗಿಸಿತು ಎನ್ನುವುದು ಚುನಾವಣಾ ಆಯೋಗದ ವಿವರಣೆ. ಆ ವರ್ಷ ಒಟ್ಟಾರೆ ಯಾಗಿ ತಗುಲಿದ ವೆಚ್ಚ ೩೦ ಸಾವಿರ ಕೋಟಿ ರೂಪಾಯಿಗೂ ಅಧಿಕವಂತೆ. ಗಮನಿಸಬೇಕಾದ ಅಂಶವೆಂದರೆ ಮುಂದಿನ ಐದೇ ವರ್ಷದಲ್ಲಿ ೨೦೧೯ ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗೆ ತಗುಲಿದ ವೆಚ್ಚ ೫೫ರಿಂದ ೬೦ ಸಾವಿರ ಕೋಟಿ ರುಪಾಯಿ!
ಚುನಾವಣಾ ಪ್ರಕ್ರಿಯೆಗೆ ಸರಕಾರಗಳು, ಆಯೋಗ ಮಾಡಿರುವ ಅಧಿಕೃತ ವೆಚ್ಚ ಅಬ್ಬಬ್ಬಾ ಎಂದರೆ ಎಂಟರಿಂದ ಹತ್ತು ಸಾವಿರ ಕೋಟಿ ಮಾತ್ರ. ಉಳಿದಅಷ್ಟೂ ಕೋಟಿ ಕೋಟಿ ಹಣ ವೆಚ್ಚವಾಗಿದ್ದು ಅಭ್ಯರ್ಥಿಗಳ ಕಡೆಯಿಂದ. ವೋಟಿಗೆ ನೋಟು, ಕುಕ್ಕರ್, ಟಿವಿ, ಇಸಿ ಪೆಟ್ಟಿಗೆ, ಮೊಬೈಲು, ಸೀರೆ, ಉಂಗುರ, ಬಾಟಲಿ, ಬಾಡೂಟ, ಮತದಾನದ ಮುನ್ನಾ ದಿವಸ ಹಂಚುವ ಕೊನೆಗಳಿಗೆಯ ಭಕ್ಷೀಸು, ಗೋಚರ ಅಗೋಚರ ಆಮಿಷ ಇತ್ಯಾದಿ ಇತ್ಯಾದಿ ಕಾನೂನು ಬಾಹಿರ ಚಟುವಟಿಕೆಗಳು ಅಗಾಧ ವೆಚ್ಚಕ್ಕೆ ಕಾರಣವಾಗಿರುವ ಅಂಶಗಳು.
ಭಾರತೀಯ ಜನತಾ ಪಾರ್ಟಿ ಜಗತ್ತಿನಲ್ಲಿ ಅತ್ಯಂತ ದೊಡ್ಡ ಪಕ್ಷವೆನಿಸಿದೆ. ಅದರ ಸಕ್ರಿಯ ಸದಸ್ಯಬಲ ಹತ್ತು ಕೋಟಿಗೂ ಅಧಿಕ. ದೊಡ್ಡ ಪಕ್ಷಕ್ಕೆದೊಡ್ಡ ದೊಡ್ಡ ಉದ್ಯಮಪತಿಗಳಿಂದ ದೊಡ್ಡ ದೊಡ್ಡ ಮೊತ್ತವೇ ಚುನಾವಣಾ ನಿಧಿ ರೂಪದಲ್ಲಿ ಹರಿದುಬರುತ್ತದೆ. ಹಾಗಾಗಿ ಬಿಜೆಪಿ ದೊಡ್ಡ ಪಕ್ಷಮಾತ್ರವೇ ಅಲ್ಲ ಅತ್ಯಂತ ಶ್ರೀಮಂತ ಪಕ್ಷವೂ ಹೌದಾಗಿದೆ. ೨೦೧೯ರ ಸಾರ್ವತ್ರಿಕ ಚುನಾವಣೆಯಲ್ಲಿ ಆಗಿರುವ ವೆಚ್ಚದಲ್ಲಿ ಪ್ರತಿಶತ ೪೫ ಭಾಗದವೆಚ್ಚ ಆಗಿರುವುದು ಬಿಜೆಪಿಯಿಂದ ಎನ್ನುವುದು ಆಯೋಗದ ಹೇಳಿಕೆ. ಚುನಾವಣಾ ವೆಚ್ಚಕ್ಕೆ ಕಡಿವಾಣ ಹಾಕುವ ಮಾತನ್ನು ಆಡುವ ರಾಜಕೀಯಪಕ್ಷಗಳು ಅದಕ್ಕೆ ಅಗತ್ಯವಿರುವ ಕಾಯ್ದೆ ರೂಪಿಸು ವುದಕ್ಕೆ ಮನಸ್ಸು ಮಾಡುವುದಿಲ್ಲ ಎನ್ನುವುದಕ್ಕೆ ಸಾವಿರ ಉದಾಹರಣೆಗಳಿವೆ.
ಸೇರು ಕೊಳಗ ಬೀಜವನ್ನು ಬಿತ್ತಿ ಅದರಿಂದ ಕ್ವಿಂಟಾಲುಗಟ್ಟಳೆ, ಮೂಟೆಮೂಟೆಗಟ್ಟಳೆ ಬೆಳೆ ಹೊರತೆಗೆಯುವ ಕಲೆಯಂತೆ ಲಕ್ಷ ಹಣ ಹೂಡಿ ಕೋಟಿ ಕೋಟಿ ಗಳಿಸುವ ಕಲೆಯನ್ನು ಕರತಲಾಮಲಕ ಮಾಡಿಕೊಂಡಿರುವ ನಮ್ಮ ರಾಜಕಾರಣಕ್ಕೆ ಚುನಾವಣೆ ಸಮಯದಲ್ಲಿ ಹಣಬೇಕು. ಅದು ಎಲ್ಲಿಂದ ಬಂದರೂ ಆದೀತು, ಹೇಗೆ ಬಂದರೂ ಆದೀತು ಎನ್ನುವುದನ್ನು ನೆನೆದಾಗ ಬೆಂಗಳೂರಲ್ಲಿ ಸಿಕ್ಕಿರುವ ನೂರು ಕೋಟಿ ಹಣ ಏನೇನೂ ಅಲ್ಲ.
‘ಒಂದು ದೇಶ ಒಂದು ಚುನಾವಣೆ’ ನಿಯಮ ಜಾರಿಗೆ ಬಂದರೆ ಚುನಾವಣಾ ವೆಚ್ಚವನ್ನು ತಗ್ಗಿಸ ಬಹುದೆಂಬ ವಾದವಿದೆ. ಪ್ರಸಕ್ತ ಕೇಂದ್ರ ಸರಕಾರಈ ನಿಟ್ಟಿನಲ್ಲಿ ದೃಢಮನಸ್ಸು ಮಾಡಿರುವಂತಿದೆ. ಭಾರತದಂಥ ಬೃಹತ್ ರಾಷ್ಟ್ರದಲ್ಲಿ, ಸಾವಿರಾರು ರಾಜಕೀಯ ಪಕ್ಷಗಳಿರುವ ನಾಡಿನಲ್ಲಿ, ರಾಷ್ಟ್ರೀಯಪಕ್ಷಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಹಲವಾರು ಪ್ರಾದೇಶಿಕ ಪಕ್ಷಗಳು ಬೆಳೆಯುತ್ತಿರುವಲ್ಲಿ ‘ಒಂದು ದೇಶ ಒಂದು ಚುನಾವಣೆ’ಯು ಕಲ್ಪನೆ ಹಂತದಲ್ಲೇ ಉಳಿಯುವ ಸಂಭವ ಹೆಚ್ಚು.
ಇಷ್ಟಕ್ಕೂ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಮತದಾರರನ್ನು ಓಲೈಸಿಕೊಳ್ಳಲು ಮಾಡುವ ಅನಧಿಕೃತ ವೆಚ್ಚಕ್ಕೆ ಈ ನಿಯಮ ಹೇಗೆ ಕಡಿವಾಣಹಾಕುತ್ತದೆಂಬುದು ಸ್ಪಷ್ಟವಾಗಿಲ್ಲ. ಚುನಾವಣಾ ಆಯೋಗ ಅಥವಾ ಸರಕಾರ ಮಾಡುವ ವೆಚ್ಚ ತಹಬಂದಿಗೆ ಬರಬಹುದು ಎನ್ನುವುದನ್ನು ಬಿಟ್ಟರೆಅನಽಕೃತ ವೆಚ್ಚಕ್ಕೆ ಲಗಾಮು ಹಾಕುವುದು ಸಾಧ್ಯವೇ ಇಲ್ಲ. ಅಂಥದೊಂದು ಕಲ್ಪನೆ ಸಾಕಾರ ವಾಗುವುದಿದ್ದರೂ ಅಲ್ಲೀವರೆಗೆ ಕುರುಡು ಕಾಂಚಾಣ ಕುಣಿಯುತ್ತಲೇ ಇರುತ್ತದೆ.