ಬದಲಾಗದಿದ್ದರೆ ಉಳಿಗಾಲವಿಲ್ಲ
ರಾಜಬೀದಿ
ರಮಾನಂದ ಶರ್ಮಾ
ಇಸ್ರೇಲ್-ಹಮಾಸ್ ಯುದ್ಧದ ವಿಷಯದಲ್ಲಿ, ಪ್ಯಾಲೆಸ್ತೀನ್ ಪರವಾದ ಮತ್ತು ಹಮಾಸ್ ದಾಳಿಯನ್ನು ನೇರವಾಗಿ ಖಂಡಿಸದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ನಿಲುವಿನಿಂದಾಗಿ ಈ ದೇಶದ ಪ್ರಜ್ಞಾವಂತರಿಗೆ ದಿಗ್ಭ್ರಮೆಯಾಗಿದೆ. ಬಿಜೆಪಿಯ ಮತೀಯ ಭಾವನೆ, ಎನ್‌ಡಿಎ ಸರಕಾರದ ನಿಲುವುಗಳನ್ನು ಕಟುವಾಗಿ ಟೀಕಿಸುವ ಪತ್ರಕರ್ತ ರಾಜದೀಪ್ ಸರದೇಸಾಯಿಯವರು ತಮ್ಮ ವಿಡಿಯೋ ಕ್ಲಿಪಿಂಗ್ ಒಂದರಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿಯ ನಿಲುವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇಸ್ರೇಲ್ ಪರ ಬೆಂಬಲ ವ್ಯಕ್ತಪಡಿಸಿರುವ ಮೋದಿ ಸರಕಾರ/ಬಿಜೆಪಿ, ಕಾಂಗ್ರೆಸ್‌ನ ಈ ನಿಲುವನ್ನು ವಿರೋಧಿಸುವುದು ಸ್ವಾಭಾವಿಕ. ಆದರೆ, ಕಾಂಗ್ರೆಸ್‌ನ ಕೆಲನಾಯಕರೂ ಪಕ್ಷದ ಈ ನಿಲುವಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ರಾಜ್‌ದೀಪ್ ಹೇಳುತ್ತಾರೆ. ನಿರ್ಣಯದಲ್ಲಿನ ಕೊನೆಯ ಪ್ಯಾರಾ ಕುರಿತುಕಾಂಗ್ರೆಸ್‌ನ ಕೆಲ ನಾಯಕರಿಗೆ ಅಸಮಾಧಾನವಿದೆ ಎಂದು ಇಂಗ್ಲಿಷ್ ದೈನಿಕವೊಂದು ವರದಿ ಮಾಡಿದೆಯಂತೆ. ಇದು ಪರೋಕ್ಷವಾಗಿ ಹಮಾಸ್ ದಾಳಿ ಯನ್ನು ಬೆಂಬಲಿಸಿದಂತೆ ಆಗುತ್ತಿದೆ ಎನ್ನುತ್ತಿದ್ದಾರಂತೆ ಕೆಲವರು. ನಿರ್ಣಯದಲ್ಲಿ ‘ಉಗ್ರಗಾಮಿ’ ಪದ ಬಳಸದಿರುವುದಕ್ಕೆ ಕೆಲವರು ಆಕ್ಷೇಪಿಸಿ, ಇದು ಕಸಿವಿಸಿ ಉಂಟುಮಾಡುತ್ತಿದೆಯೆಂದು ಕೆಲವರು ಅಲವತ್ತುಕೊಂಡಿ ದ್ದಾರಂತೆ. ಕಾಂಗ್ರೆಸ್ ಪರ ಮೃದು ಧೋರಣೆ ಹೊಂದಿದ್ದಾರೆ ಎನ್ನಲಾಗುವ ರಾಜದೀಪ್ ಅವರ ಈ ಬಿಚ್ಚು ಮನಸ್ಸಿನ ಅಭಿಪ್ರಾಯ ಚಿಂತನಾರ್ಹವಾಗಿದೆ.
ಪ್ಯಾಲೆಸ್ತೀನ್-ಇಸ್ರೇಲ್ ನಡುವಿನ ಈ ಘರ್ಷಣೆ ಯನ್ನು ಧರ್ಮದ ಆಧಾರದಲ್ಲಿ ನೋಡದೆ, ಮಾನವೀಯತೆ ಮತ್ತು ಮುಗ್ಧಜೀವಿಗಳ ಮೇಲಾದ ಅಮಾ ನುಷ ಕೃತ್ಯವೆಂದು ಜಗತ್ತು ಭಾವಿಸಿದೆ ಹಾಗೂ ಈ ನಿಟ್ಟಿನಲ್ಲಿ ಇಸ್ರೇಲನ್ನು ಬೆಂಬಲಿಸುವ/ ತಟಸ್ಥವಾಗಿರುವ ನಿಲುವನ್ನು ಜಗತ್ತಿನ ಬಹುತೇಕ ರಾಷ್ಟ್ರಗಳು ತಳೆದಿವೆ. ಒಂದೆರಡನ್ನು ಬಿಟ್ಟು ನೆರೆಯ ಇಸ್ಲಾಮಿಕ್ ರಾಷ್ಟ್ರಗಳು ಕೂಡ ಈ ವಿಷಯದಲ್ಲಿ ತಮ್ಮ ನಿಲುವನ್ನು ಹೊರ ಹಾಕದಿರುವಾಗ, ಕಾಂಗ್ರೆಸ್ ಅವಸರ ದಲ್ಲಿ ಚರ್ಚಿಸಿ ಹೇಳಿಕೆ ನೀಡುವಂಥ ತುರ್ತು ಏನಿತ್ತು? ಎಂಬ ರಾಜಕೀಯ ಚಿಂತಕರ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.
ಇಂಥ ಅವಸರದ ಬದಲಿಗೆ ಕಾಂಗ್ರೆಸ್, ರಾಜಕೀಯದಲ್ಲಿ ತೀರಾ ಮಾಮೂಲಾಗಿರುವ ‘ಕಾದುನೋಡುವ’ ತಂತ್ರವನ್ನದರೂ ಬಳಸಬಹುದಿತ್ತು ಅಥವಾ ‘ಎರಡೂ ಪಕ್ಷಗಳು ಮಾತುಕತೆಯಿಂದ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು’ ಎಂದು ಬುದ್ಧಿಜೀವಿಗಳ ಪೋಸ್ ಕೊಡಬಹುದಿತ್ತು. ಪ್ಯಾಲೆಸ್ತೀನ್ ಪರ ಒಲವು ತೋರಿಸುವಾಗ, ಹಮಾಸ್ ದಾಳಿಯಲ್ಲಿ ಅಸುನೀಗಿದವರಿಗೆ ಅನುಕಂಪವನ್ನಾದರೂ ತೋರಿಸಿದ್ದಿದ್ದರೆ ಜನರು ಕಾಂಗ್ರೆಸ್ಸನ್ನು ನೋಡುವ ದೃಷ್ಟಿ ಬದಲಾಗುತ್ತಿತ್ತು. ಬಹುತ್ವವಿರುವ ದೇಶಗಳಲ್ಲಿ, ವಿವಿಧ ಜಾತಿ-ಧರ್ಮಗಳು ಸಮಾನಾವಕಾಶಕ್ಕಾಗಿ ಒತ್ತಾಯಿಸುವಾಗ, ಜಾತ್ಯತೀತ ಪರಿಕಲ್ಪನೆಗೆ ವಿಶೇಷ ಮಹತ್ವವಿದೆ.
ಅಂತೆಯೇ ಅದು ನಮ್ಮ ಸಂವಿಧಾನದಲ್ಲಿ ಅಳವಡಿಲ್ಪಟ್ಟಿದ್ದರೂ, ಕೆಲವರ ಮತಬ್ಯಾಂಕ್ ತಂತ್ರಗಾರಿಕೆಗೆ ಸಿಲುಕಿ ಅದು ತನ್ನ ಅರ್ಥ ಮತ್ತು ಉದ್ದೇಶ ವನ್ನು ಕಳೆದುಕೊಂಡಿದೆ. ಅಲ್ಪಸಂಖ್ಯಾತರ ತುಷ್ಟೀಕರಣದ ಸಾಧನ ಎಂಬ ಆರೋಪ ಎದುರಿಸುತ್ತಿರುವ ಈ ಪರಿಕಲ್ಪನೆಯನ್ನೇ ನೆಚ್ಚಿಕೊಂಡುಚುನಾವಣೆ ಗೆಲ್ಲುತ್ತಿದ್ದ ಕಾಂಗ್ರೆಸ್ ನೆಲಕಚ್ಚಿದ್ದು ಈಗ ಇತಿಹಾಸವಾದರೂ, ಅಲ್ಪಸಂಖ್ಯಾತರ ಓಲೈಕೆಯಲ್ಲೇ ಅದು ರಾಜಕಾರಣವನ್ನು ಮುಂದುವರಿಸಿರುವುದು ಮಾತ್ರ ಅಚ್ಚರಿಯ ಸಂಗತಿ! ಕೋಮು ವಿಷಯಗಳು ಬಂದಾಗ ಕಾಂಗ್ರೆಸ್ ಮುಖ್ಯವಾಹಿನಿಯಲ್ಲಿ ಬೆರೆಯದೇ ಸದಾ ಅಲ್ಪಸಂಖ್ಯಾತರ ಪರವಾ ಗಿರುತ್ತದೆ ಎಂಬ ಆರೋಪ ಲಾಗಾಯ್ತಿನದ್ದು.
೧೯೮೫ರಲ್ಲಿ ಶಾ ಬಾನೋ ಪ್ರಕರಣದಲ್ಲಿ, ವಿಚ್ಛೇದಿತ ಮುಸ್ಲಿಂ ಮಹಿಳೆಗೆ ಜೀವನಾಂಶವನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪಿತ್ತಿದ್ದರೂ ಕಾಂಗ್ರೆಸ್ ವ್ಯತಿರಿಕ್ತ ನಿಲುವು ಹೊಂದಿತ್ತು. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ೩೭೦ನೇ ವಿಧಿಯನ್ನು ೨೦೧೯ ರಲ್ಲಿ ಮೋದಿ ಸರಕಾರವು ರದ್ದುಮಾಡಿ, ಆ ರಾಜ್ಯವನ್ನು ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿ ತಂದಾಗ, ತಾವು ಪುನಃ ಅಧಿಕಾರಕ್ಕೆ ಮರಳಿದರೆ, ಆ ವಿಧಿಯ ಮರುಸ್ಥಾಪನೆ ಮಾಡುವುದಾಗಿ ಹಿರಿಯ ಕಾಂಗ್ರೆಸ್ಸಿಗ ದಿಗ್ವಿಜಯ್ ಸಿಂಗ್ ಹೇಳಿ ವಿವಾದ ಸೃಷ್ಟಿಸಿದ್ದರಂತೆ. ಕಾಂಗ್ರೆಸ್ಸಿಗರು ಪಾಕಿಸ್ತಾನ/ಇಸ್ಲಾಂ ಪರ ಹೀಗೆ ಹೇಳಿಕೆನೀಡಿ ಬಹುಸಂಖ್ಯಾತ ಹಿಂದೂಗಳ ಮನನೋಯಿಸಿದ ಉದಾಹರಣೆಗಳು ಸಾಕಷ್ಟಿವೆ.
ಹಾಗೆಯೇ, ಇಡೀ ದೇಶವೇ ಮೆಚ್ಚಿದ ತ್ರಿವಳಿ ತಲಾಕ್ ರದ್ದತಿ ವಿಷಯದಲ್ಲೂ ಅಪಸ್ವರವೆತ್ತಿ, ವಿರೋಧಿಸಿ ಕಾಂಗ್ರೆಸ್ ಶ್ರೀಸಾಮಾನ್ಯರ ವಿಶ್ವಾಸ ಕಳೆದು ಕೊಂಡಿರುವುದು ಬೇರೆ ಮಾತು. ಇಂದು ಕಾಶ್ಮೀರ ಶಾಂತವಾಗಿದ್ದರೆ, ೩೭೦ನೇ ವಿಧಿಯ ರದ್ದತಿಯೇ ಅದಕ್ಕೆ ಕಾರಣ. ಕಾಂಗ್ರೆಸ್ ಸಹಭಾಗಿಯಾಗಿರುವ ವಿಪಕ್ಷಗಳ ‘ಇಂಡಿಯ’ ಒಕ್ಕೂಟದಲ್ಲಿರುವ ಡಿಎಂಕೆಯ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಟೀಕಿಸಿದಾಗ ಇಡೀ ದೇಶ ಅದನ್ನು ಒಕ್ಕೊರಲಿ ನಿಂದ ಖಂಡಿಸಿದರೂ, ಈ ನಿಟ್ಟಿನಲ್ಲಿ ದೃಢ ಹೇಳಿಕೆ ನೀಡಲು ಕಾಂಗ್ರೆಸ್ ಹಿಂಜರಿ ಯಿತು. ಬುದ್ಧಿಜೀವಿಗಳು- ಚಿಂತ ಕರು ಎಂಬ ಹಣೆಪಟ್ಟಿಯ ಕೆಲವರು ರಾಜ್ಯದಲ್ಲಿ ಹಿಂದೂಗಳನ್ನು, ಮುಖ್ಯವಾಗಿ ಬ್ರಾಹ್ಮಣರನ್ನು ಸದಾ ಟೀಕಿಸು ವಾಗ ಕಾಂಗ್ರೆಸ್ ಯಾವುದೇ ನಿಲುವನ್ನು ಪ್ರದರ್ಶಿಸದೆ ಜಾಣಮೌನ ವಹಿಸಿತು.
ಕಳೆದ ೯ ವರ್ಷಗಳಲ್ಲಿ ಯಾವುದೇ ವಿಚಾರದಲ್ಲಿ ಸರಕಾರ ದೊಂದಿಗೆ ಸಹಮತ ವ್ಯಕ್ತಪಡಿಸದ ಕಾಂಗ್ರೆಸ್, ರಾಜಕೀಯದಲ್ಲಿ ಮರು ಜೀವ ಪಡೆಯುವುದಕ್ಕೆ ಸಂಘರ್ಷ ವನ್ನೇ ಹಾದಿಯಾಗಿಸಿಕೊಂಡಿರುವುದು ದುರಂತ. ದಶಕಗಳಷ್ಟು ಅನುಭವ ವಿರುವ ನಾಯಕರಿಂದ ತುಂಬಿರುವ ಈ ಪಕ್ಷವು ರಾಜಕೀಯದಲ್ಲಿಉಳಿಯುವ-ಎದ್ದೇಳುವ ಸೂತ್ರಗಳನ್ನು ತಿಳಿಯ ದಿರುವುದು ಶೋಚನೀಯ ಸಂಗತಿ. ಯಾಸಿರ್ ಅರಾಫತ್ ಪ್ಯಾಲೆಸ್ತೀನ್ ದೇಶವನ್ನು ಘೋಷಿಸಿದಾಗ, ಆ ಹೊಸದೇಶವನ್ನು ಮಾನ್ಯಮಾಡುವಲ್ಲಿ ಭಾರತವೇ ಮೊದಲಿಗನಾಗಿತ್ತಂತೆ ಮತ್ತು ಅವರಿಗೆ ಇಂದಿರಾ ಗಾಂಧಿಯವರು ‘ನೆಹರು ಶಾಂತಿ ಪ್ರಶಸ್ತಿ’ ನೀಡಿಸನ್ಮಾನಿಸಿದ್ದರಂತೆ.
ನಂತರ ರಾಜೀವ್ ಗಾಂಧಿಯವರು ಅವರಿಗೆ ‘ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ಪ್ರಶಸ್ತಿ’ ನೀಡಿ ಗೌರವಿಸಿದ್ದಲ್ಲದೆ, ವಿಶ್ವಾದ್ಯಂತ ಓಡಾಡಲು ಅವರಿ ಗೊಂದು ಬೋಯಿಂಗ್ ವಿಮಾನವನ್ನು ಕೊಡುಗೆಯಾಗಿ ನೀಡಿದ್ದರಂತೆ. ಆದರೆ ಯಾಸಿರ್ ಅರಾಫತ್ ಇವೆಲ್ಲವನ್ನೂ ಮರೆತು, ‘ಕಾಶ್ಮೀರವು ಪಾಕಿಸ್ತಾನದ ಅವಿಭಾಜ್ಯ ಅಂಗ’ ಎಂದು ಇಸ್ಲಾಮಿಕ್ ದೇಶಗಳ ಕೂಟದಲ್ಲಿ ಘೋಷಿಸಿದ್ದಲ್ಲದೆ, ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ತಮ್ಮ ಹೋರಾಟಗಾರರನ್ನು ಕಳಿಸಲು ಸಿದ್ಧವೆಂದು ಹೇಳಿದ್ದರಂತೆ! ಪ್ಯಾಲೆಸ್ತೀನ್ ಪರ ಮಾತಾಡುವ ಮೊದಲು ಕಾಂಗ್ರೆಸ್ ಇದನ್ನೊಮ್ಮೆ ತಿಳಿಯಲು ಯತ್ನಿಸಬಹುದಾಗಿತ್ತು. ಪರಸ್ಪರ ನೆರವಾ ಗುವುದರಲ್ಲಿ ಅರ್ಥವಿದೆ, ಆದರೆ ಅದರಲ್ಲಿ ಕೃತಜ್ಞತಾ ಭಾವನೆ ಇರಬೇಕಲ್ಲವೇ? ‘ಲೀಟರ್ ಪೆಟ್ರೋಲ್‌ಗೆ ೨೦೦ ರು. ಆದರೂ ಪರವಾಗಿಲ್ಲ, ಮೋದಿಗೆ ಜೈ ಎನ್ನುತ್ತೇವೆ’ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಸಂದೇಶಗಳನ್ನು ಓದಿಯಾದರೂ ಕಾಂಗ್ರೆಸ್ ತನ್ನ ಕಾರ್ಯತಂತ್ರಗಳನ್ನುಬದಲಿಸಿಕೊಳ್ಳಬೇಕು.
ಒಂದು ಕಾಲಘಟ್ಟದಲ್ಲಿ ಕಾಂಗ್ರೆಸ್‌ನ ತತ್ತ್ವಾದರ್ಶ ಗಳು ಜನಮೆಚ್ಚುಗೆ ಪಡೆದಿದ್ದವು; ಆದರೆ ಬದುಕು ಬದಲಾದಂತೆ ಕೆಲವು ಹಳೆಯ ಮೌಲ್ಯಗಳನ್ನು ನಿರ್ದಾಕ್ಷಿಣ್ಯವಾಗಿ ಕೈಬಿಡಬೇಕಾಗುತ್ತದೆ. ಮತದಾರರ ನಾಡಿಮಿಡಿತದ ಮೇಲೆ ಸದಾ ಕಣ್ಣಿರಿಸಬೇಕಾಗುತ್ತದೆ. ಏಕೆಂದರೆ ಇಲ್ಲಿ ಮುಖ್ಯವಾಗುವುದು ಮತದಾರರಿಗೆ ಏನು ಬೇಕು ಎಂಬುದೇ ವಿನಾ ಪಕ್ಷಕ್ಕೇನು ಬೇಕು ಎಂಬುದಲ್ಲ. ಕಾಂಗ್ರೆಸ್‌ನ ಕೆಲ ಧುರೀಣರ ಅತಿಯಾದ ಪಾಕಿಸ್ತಾನ ವ್ಯಾಮೋಹ ಮತ್ತು ಸೂಕ್ಷ್ಮ ವಿಷಯಗಳಲ್ಲಿ ನಿರ್ದಿಷ್ಟ ಕೋಮನ್ನು ಬೆಂಬಲಿಸುವ ಅವರ ನಿಲುವಿನಿಂದಾಗಿ ಪಕ್ಷವು ಜನಸಾಮಾನ್ಯ ರಿಂದ ದೂರ ಸರಿಯುವಂತಾಗಿದೆ. ಇಂಥ ವಿಷಯಗಳಲ್ಲಿ ದೇಶದ ಜನರು ಒಂದಾಗಿದ್ದಾರೆ ಎಂಬ ಸತ್ಯವನ್ನು ಅರಿಯಲು ಕಾಂಗ್ರೆಸ್ ಯತ್ನಿಸುತ್ತಿಲ್ಲ.
ಕಾಲಘಟ್ಟದಲ್ಲಿ ‘ಔಟ್‌ಡೇಟೆಡ್’ ಆಗಿ ಚಲಾವಣೆ ಕಳೆದುಕೊಂಡರೂ, ಅಜ್ಜ ನೆಟ್ಟ ಆಲದಮರಕ್ಕೇ ಅದು ಜೋತುಬೀಳುತ್ತಿದೆ. ಕೆಲವು ರಾಜ್ಯಗಳಲ್ಲಂತೂ‘ಕಾಂಗ್ರೆಸ್’ ಎಂದರೆ ‘ಹಾಗಂದ್ರೇನು?’ ಎಂದು ಕೇಳುವ ಪರಿಸ್ಥಿತಿಯಿದೆ. ಇಂಥ ನಿರ್ಣಾಯಕ ಘಟ್ಟಗಳಲ್ಲಿ ಪಕ್ಷ ತನ್ನ ದೃಷ್ಟಿಕೋನವನ್ನು ಬದಲಿಸಿಮುನ್ನಡೆಯಬೇಕಿದೆ; ಬದಲಾವಣೆಗೆ ಹೊಂದಿಕೊಳ್ಳದಿದ್ದರೆ ಮತದಾರರು ಯಾವ ‘ಗ್ಯಾರಂಟಿ’ಯನ್ನೂ ಲೆಕ್ಕಿಸದೆ ಬದಿಗೆ ಸರಿಸುತ್ತಾರೆ.
(ಲೇಖಕರು ಬ್ಯಾಂಕಿಂಗ್ ಕ್ಷೇತ್ರದ ಪರಿಣತರು)