ವಿಶ್ವಶಾಂತಿಯ ಸ್ಥಾಪನೆ ಇಂದಿನ ತುರ್ತು
ಸದಾಶಯ
ರವೀಂದ್ರ ಸಿಂಗ್ ಕೋಲಾರ
ಚಂದ್ರನಲ್ಲಿ ಧುಮುಕುವ ತವಕವಿರುವ ಇಂದಿನ ವಿಜ್ಞಾನ ಯುಗದಲ್ಲಿ, ಭೂಮಿಯ ಮೇಲೆಯೇ ಶಾಂತಿ ಸ್ಥಾಪಿಸಲು ಆಗುತ್ತಿಲ್ಲವಲ್ಲಾ, ಇದಕ್ಕೆ ಯಾರನ್ನು ಹೊಣೆಮಾಡಬೇಕು, ಯಾವ ತಂತ್ರ ರೂಪಿಸಬೇಕು? ಇದನ್ನು ವಿಜ್ಞಾನಿಗಳು ಹೇಳಲು ಸಾಧ್ಯವಾದರೆ ಅದಕ್ಕಿಂತ ದೊಡ್ಡ ಆವಿಷ್ಕಾರವಿಲ್ಲ.
ಭಕ್ತಿಯಿಂದಲೋ, ಮನಸ್ಸಿನ ನೆಮ್ಮದಿಗಾಗಿಯೋ ನಾವು ದೇವಸ್ಥಾನಕ್ಕೆ ಹೋಗುವುದು ಸಹಜ. ವಿಚಿತ್ರವೆಂದರೆ, ನಾವು ಯಾರ ದರ್ಶನ ಮಾಡಬೇಕೆಂದು ಹೋಗುತ್ತೇವೋ ಅಂಥ ಮೂಲರೂಪ ಅಲ್ಲಿ ಗೋಚರಿಸುವುದು ವಿರಳವೇ. ಅಂದರೆ ಆಡಂಬರದ ಅಲಂಕಾರದಲ್ಲಿ ದೇವರ ಮೂರ್ತಿ ಮುಳುಗಿರುತ್ತದೆ, ಮಣಭಾರದ ಹೂವನ್ನು ಹೊತ್ತುಕೊಂಡಿರುತ್ತದೆ. ಹೀಗಾಗಿ ಗರ್ಭಗುಡಿಯಲ್ಲಿ ದೇವರನ್ನು ನೋಡಲು ಕಣ್ಣುಗಳು ಹುಡುಕಾಡುವಂತಾಗುತ್ತದೆ.
ಇದು ಸಾರ್ವಜನಿಕ ಬದುಕಿಗೂ ಅನ್ವಯವಾಗುವ ಮಾತು ಮತ್ತು ಹೋಲಿಕೆ. ‘ಮೂಗಿಗಿಂತ ಮೂಗುತಿಯೇ ಭಾರ’ ಎನ್ನುವಂತೆ ಇಂದಿನ ಸಾರ್ವಜನಿಕ ಬದುಕಿನಲ್ಲೂ ಮೂಲ ಅಸ್ತಿತ್ವಕ್ಕಿಂತ ಹೊರಾವರಣದ ಆಡಂಬರವೇ ಹೆಚ್ಚಾಗಿಬಿಟ್ಟಿದೆ. ಹೀಗಾಗಿ ಅಸಲಿಯತ್ತು ಎಂಬುದು ನಮಗೆ ಗೊತ್ತಿಲ್ಲದಂತೆ ಕಳೆದುಹೋಗುತ್ತಿದೆ. ಅಸಲಿಯತ್ತು ಎಂದರೆ ನಮ್ಮ ಅರಿವಿಗೆ ಬರುವಂಥದ್ದು, ಗಟ್ಟಿಯಾಗಿರುವಂಥದ್ದು, ಸ್ವಚ್ಛವಾಗಿರುವಂಥದ್ದು, ಸತ್ಯವೂ  ಮೌಲ್ಯ ಯುತವೂ ಆಗಿರುವಂಥದ್ದು. ಆದರೆ ತತ್ತ್ವವೇತ್ತರ ನುಡಿಗಳಾಗಲೀ ಆದರ್ಶಗಳಾಗಲೀ ಇಂದಿನ ಡಿಜಿಟಲ್ ಯುಗಕ್ಕೆ ಬಹುದೂರ.
ಹೀಗಾಗಿ ನಮ್ಮತನವನ್ನು ಬಿಂಬಿಸಿಕೊಳ್ಳಲು, ಯಂತ್ರದಿಂದ ತಯಾರಾದ ಬಣ್ಣಬಣ್ಣದ ಚಿತ್ರಪಟಗಳನ್ನು ಹಿಡಿದುಕೊಂಡು ಹೋರಾಡುತ್ತಿದ್ದೇವೆ. ಮಾನವೀಯತೆಗಿಂತ ಜಾತಿ-ಧರ್ಮಗಳು ನಮ್ಮನ್ನು ಆಳಲು ಪ್ರಾರಂಭಿಸಿವೆ. ರಾಜಕೀಯದ ಮೇಲಾಟದಲ್ಲಿ ಸ್ನೇಹ-ಸಂಬಂಧಗಳು ಸಡಿಲಗೊಂಡಿವೆ. ಸಮಾಜದ ಆರೋಗ್ಯವನ್ನು ಕಾಪಾಡಬೇಕಿದ್ದ ಭಾವೈಕ್ಯತೆಯು ಶಿಥಿಲಗೊಂಡು, ಬದುಕನ್ನು ನಮಗರಿವಿಲ್ಲದಂತೆ ದಿನೇ ದಿನೆ ಅಪಾಯದ ಅಂಚಿಗೆನೂಕುತ್ತಿದೆ. ಹೀಗಾಗಿ ವ್ಯವಸ್ಥೆಯನ್ನು ಸುಧಾರಿಸಲು ಇಷ್ಟಪಡುವವರನ್ನೂ ನಾವು ಅನುಮಾನದ ದೃಷ್ಟಿಯಲ್ಲಿ ನೋಡುವಂಥ ವಾತಾವರಣಸೃಷ್ಟಿಯಾಗಿದೆ.
ಇದಕ್ಕೆ ಪೂರಕವಾಗಿ ಕಥೆಯೊಂದನ್ನು ಉದಾಹರಿಸಬಹುದು: ಒಮ್ಮೆ ಗುರುಗಳು ತಮ್ಮ ಶಿಷ್ಯರೊಡಗೂಡಿ ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿರ ಬೇಕಾದರೆ, ದಾರಿಗೆ ಮುಳ್ಳಿನ ಪೊದೆಯೊಂದು ಅಡ್ಡವಾಗುತ್ತದೆ. ಶಿಷ್ಯರೆಲ್ಲ ಬರಿಗಾಲಲ್ಲಿ ಬಂದವರು, ಗುರುಗಳು ಮಾತ್ರವೇ ಅಲ್ಲಿ ಪಾದರಕ್ಷೆಧರಿಸಿದ್ದವರು. ಹೀಗಾಗಿ ಅವರು ಮಾತ್ರವೇ ಆ ಪೊದೆಯನ್ನು ಅನಾಯಾಸವಾಗಿ ದಾಟುತ್ತಾರೆ, ಶಿಷ್ಯರು ನಿಂತಲ್ಲಿಯೇ ಉಳಿಯುತ್ತಾರೆ. ಸಂಸ್ಕಾರ, ಕರುಣೆ, ಸಮಭಾವ ಮತ್ತು ಸಹಾಯಪ್ರವೃತ್ತಿಯಂಥ ಗುಣಗಳ ಆಗರವೇ ಆಗಿದ್ದ ಗುರುಗಳು ಸ್ವಲ್ಪ ಯೋಚಿಸಿ, ‘ಒಬ್ಬೊಬ್ಬರಾಗಿ ಇದನ್ನು ಧರಿಸಿಕೊಂಡು ಮುಳ್ಳಿನ ಪೊದೆಯನ್ನು ದಾಟಿಕೊಂಡು ಬನ್ನಿ’ ಎಂದು ಹೇಳಿ ತಾವು ಧರಿಸಿದ್ದ ಪಾದರಕ್ಷೆಗಳನ್ನು ಶಿಷ್ಯರಿದ್ದಲ್ಲಿಗೆ ಎಸೆಯುತ್ತಾರೆ. ಆದರೆ ಅವರಲ್ಲಿ ಬಹುತೇಕರು, ‘ಗುರುಗಳ ಪಾದರಕ್ಷೆಗಳನ್ನು ಹೇಗೆ ಧರಿಸುವುದು? ಪಾಪ ಬರುವುದಿಲ್ಲವೇ?’ ಎಂದು ಅನುಮಾನ ವ್ಯಕ್ತಪಡಿಸಿ ಹಿಂದೆ ಸರಿಯುತ್ತಾರೆ. ಆದರೆ ಅವರಲ್ಲೊಬ್ಬ ವಿಚಾರವಂತ ಶಿಷ್ಯನು ಮಾತ್ರ ಆ ಪಾದರಕ್ಷೆಗಳನ್ನು ಧರಿಸಿ ಮುಳ್ಳಿನ ಪೊದೆಯನ್ನು ದಾಟಿಬರುತ್ತಾನೆ.
ಅಗತ್ಯವಾದವು-ಅವಶ್ಯವಾದವುಗಳಿಗಿಂತ ಅನುಮಾನಗಳೇ ನಮ್ಮಲ್ಲಿ ಹೆಚ್ಚು. ಹೀಗಾಗಿ, ಸಾಕಷ್ಟು ಅನುಕೂಲಗಳಿದ್ದರೂ ನಮ್ಮ ಮನಸ್ಸಿನ ಜಾಡ್ಯ ಮತ್ತುಕಲ್ಮಶಗಳಿಂದಾಗಿ ಆ ಕೂಪದಿಂದ ಹೊರಬರಲು ಆಗುತ್ತಿಲ್ಲ. ಮೇಲಿನ ಪುಟ್ಟಕಥೆಯಲ್ಲಿ ಉಲ್ಲೇಖಿಸಿರುವ ಗುರುವಿನಂತೆ ದಾರಿತೋರುವ ಮಹಾತ್ಮರು ನಮ್ಮಲ್ಲಿ ಸಾಕಷ್ಟಿದ್ದರೂ, ಅವರ ಮಹಾನ್ ಬೋಧೆಗಳು ನಮ್ಮನ್ನು ಮುಟ್ಟಲು ಸಾಧ್ಯವಾಗುತ್ತಿಲ್ಲ. ಆದರೆ, ಸಮಾಜದ ಶಾಂತಿ-ಸೌಹಾರ್ದಗಳಿಗೆ ಧಕ್ಕೆಯುಂಟುಮಾಡಬಲ್ಲ ಭಾಷಣಗಳಿಗೆ ನಮ್ಮ ಕಿವಿಗಳು ಸದಾ ತೆರೆದುಕೊಂಡು ಕಾದಿರುತ್ತವೆ. ಸತ್ಯಾನ್ವೇಷಣೆಯ ಪ್ರಜ್ಞೆ ನಮ್ಮಲ್ಲಿ ಸುರಿಸದಿದ್ದರೆ ಅಸಲಿತನ ವನ್ನು ಉಳಿಸಿಕೊಳ್ಳುವುದು ಹೇಗೆ ತಾನೇ ಸಾಧ್ಯ? ಕಾಡುಪ್ರಾಣಿಗಳು ಆಹಾರಕ್ಕಾಗಿ ಮಾತ್ರ ಬೇಟೆಯಾಡುತ್ತವೆ, ತನ್ಮೂಲಕ ರಕ್ತದ ರುಚಿ ನೋಡುತ್ತವೆ ಎಂದು ನಾವೆಲ್ಲ ತಿಳಿದುಕೊಂಡಿದ್ದೆವು. ಆದರೆ ಈಗ ಮನುಷ್ಯನು ಎಲ್ಲ ಸೌಲಭ್ಯ-ಸವಲತ್ತುಗಳು ಇದ್ದರೂ, ಕ್ರೂರಮೃಗಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ವಿಶ್ವದ ಶಾಂತಿ ಕದಡಲು ಹಪಹಪಿಸುತ್ತಿದ್ದಾನೆ.
ಆಂತರಿಕ ಕಲಹಗಳು, ಜಾತಿ ವೈಷಮ್ಯಗಳು, ರಾಜಕೀಯ ಕಚ್ಚಾಟಗಳು ಮತ್ತು ದೇಶ-ದೇಶಗಳ ನಡುವಿನ ಯುದ್ಧಗಳಿಂದಾಗಿ ನೆಮ್ಮದಿಯಿಂದ ಬದುಕಲು ಹೆಣಗಾಡುವಂತಾಗಿದೆ. ಉಕ್ರೇನ್ -ರಷ್ಯಾ ಮತ್ತು ಇಸ್ರೇಲ್-ಹಮಾಸ್ ನಡುವಿನ ಯುದ್ಧಗಳು ಇದಕ್ಕೆ ಇತ್ತೀಚಿನ ಸಾಕ್ಷಿ; ಇಂಥ ನೆಲೆಗಳಿಗೆ ಉದ್ಯೋಗ ಅರಸಿವಲಸೆ ಹೋಗಿದ್ದ ವಿದ್ಯಾವಂತರು-ಬುದ್ಧಿವಂತರು ಅಲ್ಲಿ ಪ್ರಾಣಭಯದಿಂದಲೇ ದಿನದೂಡುವಂತಾಗಿದ್ದನ್ನು ಕಂಡಿದ್ದೇವೆ. ತಮ್ಮ ಎದುರಿರುವವರು ಹೆಂಗಸರೇ, ಮಕ್ಕಳೇ, ವಯಸ್ಸಾದವರೇ ಎಂದು ತಲೆಕೆಡಿಸಿಕೊಳ್ಳದೆ ಅಮಾನವೀಯ ಕೃತ್ಯಗಳನ್ನು ಎಸಗುತ್ತಿರುವ ದುಷ್ಟರು ಈ ಮೂಲಕ ಏನನ್ನುಸಾಽಸಲು ಹೊರಟಿದ್ದಾರೆ? ಏನನ್ನು ಪಡೆಯಲೆಂದು ಅವರು ಕೋವಿಗಳಿಂದ ಗುಂಡು ಹಾರಿಸುತ್ತಿದ್ದಾರೆ, ಬಾಂಬುಗಳನ್ನುಸ್ಫೋಟಿಸುತ್ತಿದ್ದಾರೆ? ಹೀಗೆ ಆತಂಕದ ಪರಿಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವಾಗ, ‘ವಿಶ್ವ ಸೋದರ-ಸೋದರಿ ಯರ ದಿನ’ ಸೇರಿದಂತೆ ಭಾವೈಕ್ಯ ಸಂಬಂಧಿತ ದಿನಗಳನ್ನು ಆಚರಿಸಿ ಕೊಳ್ಳುವುದಕ್ಕೆ ಏನಾದರೂ ಅರ್ಥವಿದೆಯೇ? ಚಂದ್ರನಲ್ಲಿ ಧುಮುಕುವ ತವಕವಿರುವ ಇಂದಿನ ವಿಜ್ಞಾನ ಯುಗದಲ್ಲಿ, ಭೂಮಿಯ ಮೇಲೆಯೇ ಶಾಂತಿ ಯನ್ನು ಸ್ಥಾಪಿಸಲು ಆಗುತ್ತಿಲ್ಲವಲ್ಲಾ? ಇದಕ್ಕೆ ಯಾರನ್ನು ಹೊಣೆಮಾಡಬೇಕು ಮತ್ತು ಯಾವ ತಂತ್ರವನ್ನು ರೂಪಿಸಬೇಕು? ಇದನ್ನು ವಿಜ್ಞಾನಿಗಳು ಹೇಳಲು ಸಾಧ್ಯವಾದರೆ ಅದಕ್ಕಿಂತ ದೊಡ್ಡ ಆವಿಷ್ಕಾರವಿಲ್ಲ ಎಂದು ಭಾವಿಸಲು ಯಾವ ಅವಮಾನವಿಲ್ಲ, ಅನುಮಾನವೂ ಇಲ್ಲ.
ಈ ಸಂದರ್ಭದಲ್ಲಿ ವಿಜ್ಞಾನ ನಮಗೆ ನೆನಪಾಗುವುದೇಕೆಂದರೆ, ವಿಜ್ಞಾನದಿಂದ ಉಗಮವಾದ ಯಾವ ವಸ್ತು ಮನುಷ್ಯನ ಹಿತವನ್ನು ಕಾಪಾಡುತ್ತದೆ ಎಂದು ಭಾವಿಸಿದ್ದೆವೋ ಅದೇ ಈಗ ವಿಷಾನಿಲದ ರೂಪದಲ್ಲಿ, ಯುದ್ಧದ ಶಸಾಸಗಳ ರೂಪದಲ್ಲಿ ಮನುಷ್ಯನನ್ನು ಯಮನಾಗಿ ಕಾಡುತ್ತಿವೆ. ಭೂಮಿಯಮೇಲೆ ಜೀವಿಗಳೇ ಇಲ್ಲದ ಮೇಲೆ ಅಂಥ ಭೂಮಿ ಯಾಕಾಗಿ ಬೇಕು? ಒಂದೇ ಗಾಳಿಯನ್ನು ಉಸಿರಾಡುತ್ತಿರುವ ನಾವು, ನಮ್ಮ ಸುತ್ತಮುತ್ತಲ ಜೀವಗಳಿಗೂ ಬೆಲೆ ನೀಡಿ ಬದುಕಿದರೆ ಮಾತ್ರವೇ ನಮ್ಮ ಇರುವಿಕೆಯನ್ನೂ ಪ್ರಕಟಪಡಿಸಲು ಸಾಧ್ಯವಾಗುತ್ತದೆ. ಅದೇ ಬದುಕಿನ ಸಾರ್ಥಕತೆ ಎನಿಸಿಕೊಳ್ಳುತ್ತದೆ.
(ಲೇಖಕರು ಹವ್ಯಾಸಿ ಬರಹಗಾರರು)