ಇದು ಗುಪ್ತಚರ ವೈಫಲ್ಯವೇ ?
ಯಕ್ಷ ಪ್ರಶ್ನೆ
ಗಣೇಶ್ ಪ್ರಸಾದ್
ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿಮಾಡಿ ಸಾಕಷ್ಟು ದಿನಗಳಾಗಿವೆ. ಲಭ್ಯ ಮಾಹಿತಿಯ ಪ್ರಕಾರ, ಈ ದಾಳಿಯಿಂದಾಗಿ ಗಣನೀಯ ಸಂಖ್ಯೆಯ ಇಸ್ರೇಲಿಗರ ಪ್ರಾಣ ಹರಣವಾಗಿದೆ. ಇದಕ್ಕೆ ಇಸ್ರೇಲ್ ನಡೆಸಿದ ಪ್ರತಿದಾಳಿಯಿಂದಲೂ ಸಾಕಷ್ಟು ಉಗ್ರರು ಹತರಾಗಿದ್ದಾರೆ. ಬಲಾಢ್ಯ ಮಿಲಿಟರಿ ದೇಶವೆನಿಸಿಕೊಂಡಿರುವ ಇಸ್ರೇಲ್‌ನ ಕಳೆದ ೫೦ ವರ್ಷಗಳ ಇತಿಹಾಸದಲ್ಲೇ ಕಂಡು ಕೇಳರಿಯದ ಇಂಥ ದುಷ್ಕೃತ್ಯ ನಡೆದಿದ್ದಾದರೂ ಹೇಗೆ ಎಂಬುದನ್ನು ಅರಿಯಲು ಇಸ್ರೇಲಿನ ಗುಪ್ತಚರ ವ್ಯವಸ್ಥೆ ಎಲ್ಲಿ ಮತ್ತು ಹೇಗೆ ವಿಫಲವಾಯಿತು ಎಂಬುದನ್ನು ಕೊಂಚ ವಿಶ್ಲೇಷಿಸಬೇಕು.
ಇಸ್ರೇಲಿನ ಮೇಲೆ ಹಮಾಸ್ ದಾಳಿ ಹೊಸದೇನಲ್ಲ, ಇದಕ್ಕೆ ಹಲವಾರು ವರ್ಷಗಳ ಇತಿಹಾಸವಿದೆ. ಇದಕ್ಕೆ ಕಾರಣ, ಇಸ್ರೇಲಿನ ರಕ್ಷಣಾ ಪಡೆಯು (ಐಡಿಎಫ್) ‘ಇಸ್ರೇಲಿ ಮಿಲಿಟರಿ ಇಂಟೆಲಿಜೆನ್ಸ್’ (ಐಎಂಐ) ಮತ್ತು ‘ಇಸ್ರೇಲ್ ಸೆಕ್ಯುರಿಟಿ ಏಜೆನ್ಸಿ’ (ಐಎಸ್‌ಎ) ಎಂಬ ಎರಡು ವಿಭಾಗಗಳನ್ನು ರಚಿಸಿ, ಹಮಾಸ್‌ನ ಚಟುವಟಿಕೆಗಳ ಮೇಲೆ ನಿಗಾ ಇರಿಸುತ್ತಾ ಬಂದಿರುವುದು. ಈ ೨ ಏಜೆನ್ಸಿಗಳು ಅಕ್ಟೋಬರ್ ೭ರ ದಾಳಿಯ ೨ ವಾರ ಮೊದಲು, ಹಮಾಸ್‌ನ ಚಟುವಟಿಕೆಗಳ ಮೌಲ್ಯಮಾಪನ ನಡೆಸಿದವು. ಅದರನ್ವಯ ಅವರು ಯಾವುದೇ ದಾಳಿಮಾಡುವ ಮತ್ತು ಕದನವಿರಾಮ ಉಲ್ಲಂಘಿಸುವ ಲಕ್ಷಣಗಳಿಲ್ಲ ಎಂದು ತಿಳಿದುಬಂತು.
ಈ ಮಾಹಿತಿಯನ್ನು ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ರಕ್ಷಣಾ ಸಚಿವರಿಗೆ ತಿಳಿಸಲಾಗಿತ್ತು. ಆದರೆ ಅಕ್ಟೋಬರ್ ೭ರಂದು ಘಟಿಸಿದದುರ್ಘಟನೆಯು ಈ ೨ ಏಜೆನ್ಸಿಗಳ ಗುಪ್ತಚಾರಿಕೆ ಸರಿಯಾಗಿರಲಿಲ್ಲ ಎಂಬುದರ ದ್ಯೋತಕವಾಗಿದೆ. ಈಜಿಪ್ಟ್ ಜನರಲ್ ಇಂಟೆಲಿಜೆನ್ಸ್ ಡೈರೆಕ್ಟರೇಟ್‌ನ ನಿರ್ದೇಶಕ ಅಬ್ಬಾಸ್ ಕಮೆಲ್ ಅವರು ಹಮಾಸ್ ದಾಳಿಗೆ ಕೆಲವು ದಿನಗಳ ಮೊದಲು ಇಂಥದೊಂದು ಸಂಭಾವ್ಯತೆಯ ಬಗ್ಗೆ ಇಸ್ರೇಲ್‌ಗೆ ಎಚ್ಚರಿಸಿದ್ದರು ಎನ್ನಲಾಗಿದೆ. ‘ಗಾಜಾದ ದಿಕ್ಕಿನಿಂದ ಒಂದು ಅಸಾಮಾನ್ಯ, ಭಯಾನಕ ಕಾರ್ಯಾಚರಣೆ ನಡೆಯಲಿದೆ’ ಎಂಬ ಸೂಚ್ಯರ್ಥವಿದ್ದ ಈ ಎಚ್ಚರಿಕೆಯ ಸಂದೇಶವನ್ನು ಪ್ರಧಾನಿ ನೆತನ್ಯಾಹು ಅವರ ಕಚೇರಿಗೆ ರವಾನಿಸಲಾಗಿತ್ತು.
ಇದಕ್ಕೆ ‘ನಾವು ವೆಸ್ಟ್‌ಬ್ಯಾಂಕ್ ಪ್ರದೇಶದಲ್ಲಿ ಭಯೋತ್ಪಾದಕ ದಾಳಿಯನ್ನು ತಡೆಯುವತ್ತ ಗಮನ ಹರಿಸಿದ್ದೇವೆ’ ಎಂದು ಇಸ್ರೇಲ್ ಕಡೆಯಿಂದ ಕಮೆಲ್‌ಗೆ ಪ್ರತಿಕ್ರಿಯೆ ರವಾನೆಯಾಗಿತ್ತು. ಇದನ್ನು ಇಸ್ರೇಲಿ ಪತ್ರಿಕೆಯೊಂದು ವರದಿ ಕೂಡ ಮಾಡಿತ್ತು. ಆದರೆ ಅಕ್ಟೋಬರ್ ೭ರ ದಾಳಿಯ ನಂತರ ನೆತನ್ಯಾಹು ಮಾಡಿದ ಭಾಷಣದಲ್ಲಿ, ಈಜಿಪ್ಟ್ ಕೊಟ್ಟ ಎಚ್ಚರಿಕೆಯ ಸಂದೇಶವನ್ನು ನಿರಾಕರಿಸಿ, ಅದು ಕೇವಲ ಸುಳ್ಳುಸುದ್ದಿ ಎಂದು ಪ್ರತಿಪಾದಿಸಿದ್ದಾರೆ. ಆದರೆ ಅಮೆರಿಕದ ‘ಹೌಸ್ ಆಫ್ ಫಾರಿನ್ ಅಫರ್ಸ್ ಕಮಿಟಿ’ಯ ಅಧ್ಯಕ್ಷ ಮೈಕೆಲ್ ಮೆಕ್‌ಕಾಲ್, ‘ಈಜಿಪ್ಟ್ ಎಚ್ಚರಿಕೆಯ ಸಂದೇಶವನ್ನು ಕೊಟ್ಟಿದ್ದು ಹೌದು’ ಎಂದಿದ್ದಾರೆ.
ಅಲ್ಲಿಗೆ ಇಸ್ರೇಲ್ ಈ ಮಾಹಿತಿಯನ್ನು ಕಡೆಗಣಿಸಿದಂತೆ ತೋರುತ್ತದೆ. ಅಕ್ಟೋಬರ್ ೧೧ರಂದು ಇಸ್ರೇಲ್‌ನ ರಕ್ಷಣಾ ಪಡೆಯ ವಕ್ತಾರರು, ದಾಳಿಯ ಹಿಂದಿನ ಸಂಜೆ ಇಸ್ರೇಲ್‌ನಿಂದ ಗಾಜಾವನ್ನು ಬೇರ್ಪಡಿಸುವ ಪರಿಧಿಯ ಬೇಲಿಯ ಬಳಿ ಹಮಾಸ್ ಕಾರ್ಯಕರ್ತರ ಅನುಮಾನಾಸ್ಪದ ಚಲನೆಗಳು ಪತ್ತೆಯಾಗಿದ್ದವುಎಂದು ಒಪ್ಪಿಕೊಂಡಿದ್ದಾರೆ. ಆದಾಗ್ಯೂ, ಈ ಘಟನೆಗೆ ಗುಪ್ತಚರ ನೆಲೆಗಟ್ಟಿನ ಯಾವುದೇ ಎಚ್ಚರಿಕೆ ಕೊಟ್ಟಿರಲಿಲ್ಲ ಎಂದು ಹೇಳಿದ್ದಾರೆ. ದಾಳಿಯ ಕೆಲವು ಗಂಟೆಗಳ ಮೊದಲು ಹಮಾಸ್‌ನ ಸಂವಹನ ಚಾನಲ್‌ಗಳಲ್ಲಿ ಅನುಮಾನಾಸ್ಪದ ಮಾತುಕತೆ, ವಟಗುಟ್ಟುವಿಕೆ ಇತ್ತು ಎಂದು ನಂತರ ತಿಳಿದುಬಂದಿದೆ. ಅಂದು ಸಂಜೆ ಐಡಿಎಫ್ ನಲ್ಲಿ ಸಾಕಷ್ಟು ಚರ್ಚೆಗಳಾಗಿದ್ದರೂ, ಇಸ್ರೇಲ್ ವಿರುದ್ಧ ಹಮಾಸ್ ದಾಳಿಯ ಸಿದ್ಧತೆಯನ್ನು ಮಾಡುತ್ತಿದೆ ಎನ್ನುವುದರ ಯಾವುದೇ ಕುರುಹುಗಳು ಐಡಿಎಫ್ ಅಧಿಕಾರಿಗಳಿಗೆ ಸಿಗಲಿಲ್ಲ.
ಆದಕಾರಣ ದಕ್ಷಿಣ ಇಸ್ರೇಲ್‌ನಲ್ಲಿ ಐಡಿಎಫ್ ತನ್ನ ಎಚ್ಚರಿಕೆಯ/ಸುರಕ್ಷತೆಯ ಮಟ್ಟವನ್ನು ಹೆಚ್ಚಿಸಲಿಲ್ಲ ಹಾಗೂ ಹಮಾಸ್‌ನ ಅನುಮಾನಾಸ್ಪದ ಮಾತುಕತೆಯ ಬಗ್ಗೆ ಹಿರಿಯ ಅಧಿಕಾರಿಗಳಿಗೆ ತಿಳಿಸಲಿಲ್ಲ. ಚಾಣಾಕ್ಷತೆಗೆ ಹೆಸರಾಗಿರುವ ಇಸ್ರೇಲ್‌ನ ಗುಪ್ತಚರ ವಿಭಾಗವು, ಇಸ್ರೇಲ್‌ನ ಮೇಲೆ ಇಷ್ಟು ದೀರ್ಘಕಾಲ ದಾಳಿಮಾಡುವ ಹಮಾಸ್ ನ ಉದ್ದೇಶದ ಬಗ್ಗೆ ಸೂಕ್ತ ಮಾಹಿತಿ ಸಂಗ್ರಹಿಸುವಲ್ಲಿ ವಿಫಲವಾಗಿದ್ದು ಹೇಗೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಗಾಜಾಪಟ್ಟಿಯಿಂದ ಹೊರಹೊಮ್ಮುವ ಎಲ್ಲ ರೀತಿಯ ಬೆದರಿಕೆಗಳ ಮೇಲೆ ಗುಪ್ತಚರ ಮಾಹಿತಿ ಕಲೆಹಾಕುವ ಹೊಣೆಗಾರಿಕೆಯನ್ನು ತನ್ನ ಎರಡುವಿಭಾಗಗಳಿಗೆ ವಹಿಸಿಕೊಟ್ಟಿದೆ ಐಡಿಎಫ್.
ಅದರಂತೆ, ಸಿಗ್ನಲ್ಸ್ ಮತ್ತು ವಿಷುವಲ್ ಇಂಟೆಲಿಜೆನ್ಸ್ ಮೂಲಕ ಬರುವ ಯಾವುದೇ ಮಾಹಿತಿ ಸಂಗ್ರಹಿಸುವುದು ಐಎಂಎ ವಿಭಾಗದ ಹೊಣೆಯಾಗಿದ್ದರೆ,ಮಾನವ ಬೇಹುಗಾರಿಕೆ ಮೂಲಕ ಮಾಹಿತಿ ಸಂಗ್ರಹಿಸುವುದು ಐಎಸ್‌ಎ ಘಟಕದ ಜವಾಬ್ದಾರಿಯಾಗಿದೆ. ಮಾತ್ರವಲ್ಲದೆ, ಪ್ಯಾಲೆಸ್ತೀನಿಯನ್ ಉಗ್ರಗಾಮಿ ಗುಂಪುಗಳ ಒಳಗೆ ಹಾಗೂ ಲೆಬನಾನ್, ಸಿರಿಯಾ ಮತ್ತು ಇತರೆಡೆಗಳಲ್ಲಿ ಇಸ್ರೇಲ್ ತನ್ನ ಬೇಹುಗಾರಿಕೆ ಮಾಹಿತಿದಾರರು ಮತ್ತು ಏಜೆಂಟ್‌ಗಳನ್ನು ಹೊಂದಿದೆ. ಹಮಾಸ್‌ನ ಮಿಲಿಟರಿ ವಿಭಾಗದ ನಾಯಕರಿಗೆ ಇಸ್ರೇಲ್‌ನ ಈ ಗುಪ್ತಚರ ಸಾಮರ್ಥ್ಯದ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಅದಕ್ಕಾಗಿಯೇ ಅವರುತಮ್ಮ ದಾಳಿಯನ್ನು ಸಂಘಟಿಸಲು ಡಿಜಿಟಲ್ ಸಂವಹನ ಚಾನಲ್ ಗಳನ್ನು ಬಳಸುವುದನ್ನು ತಪ್ಪಿಸಿದ್ದರು. ಹೀಗಾಗಿ ಅಮೂಲ್ಯ ಗುಪ್ತಚರ ಮಾಹಿತಿ ಸಂಗ್ರಹಿಸಲು ಇಸ್ರೇಲ್‌ಗೆ ಕಷ್ಟವಾಗಿತ್ತು.
‘ಐರನ್ ವಾಲ್’ ಎಂದು ಕರೆಯಲ್ಪಡುವ, ಇಸ್ರೇಲ್‌ನಿಂದ ಗಾಜಾಪಟ್ಟಿಯನ್ನು ಬೇರ್ಪಡಿಸುವ ೪೦ ಮೈಲುದ್ದದ ಭದ್ರತಾ ತಡೆಗೋಡೆಯು ೧.೧ ಶತಕೋಟಿ ಡಾಲರ್ ವೆಚ್ಚದಲ್ಲಿ ೨೦೨೧ರಲ್ಲಿ ಪೂರ್ಣಗೊಂಡಿತ್ತು. ೨೦ ಅಡಿ ಎತ್ತರವಿರುವ ಇದು ನೂರಾರು ಕ್ಯಾಮರಾ ಮತ್ತು ಸೆನ್ಸರ್‌ಗಳನ್ನು ಹೊಂದಿದ್ದು, ಯಾವುದೇ ಅಪಾಯದ ಮುನ್ಸೂಚನೆ ಕಂಡುಬಂದಲ್ಲಿ ಸ್ವಯಂಚಾಲಿತ ಮಷಿನ್‌ಗನ್‌ಗಳ ಮೂಲಕ ಅದು ಗುಂಡು ಹಾರಿಸುತ್ತದೆ. ಆದರೆ ಹಮಾಸ್‌ನ ಅನಿರೀಕ್ಷಿತ ದಾಳಿಯ ವಿರುದ್ಧ ಈ ಗೋಡೆಯೂ ಪರಿಣಾಮಕಾರಿಯಾಗಿರಲಿಲ್ಲ; ಅನೇಕ ಸ್ಥಳಗಳಲ್ಲಿ ಈ ತಡೆಗೋಡೆಯನ್ನು ಭೇದಿಸಿದ ಹಮಾಸ್, ಹೆಚ್ಚಿನ ಆರಂಭಿಕ ಪ್ರತಿರೋಧವಿಲ್ಲದೆ ದಾಳಿ ನಡೆಸಿತ್ತು.
‘ಐರನ್ ಡೋಮ್’ ಎಂದು ಕರೆಯಲ್ಪಡುವ ವಾಯದಾಳಿ ರಕ್ಷಣಾ ವ್ಯವಸ್ಥೆಯನ್ನು, ಗಾಜಾದಿಂದ ಹೊಮ್ಮುವ ಕ್ಷಿಪಣಿ ದಾಳಿಯಿಂದ ತನ್ನ ನಾಗರಿಕರನ್ನು ರಕ್ಷಿಸಲು ಇಸ್ರೇಲ್ ವಿನ್ಯಾಸಗೊಳಿಸಿತ್ತು. ಅಭಿವೃದ್ಧಿ ಮತ್ತು ನಿರ್ವಹಣೆಗೆ ಸುಮಾರು ೩ ಶತಕೋಟಿ ಡಾಲರ್ ವೆಚ್ಚವಾದ ಈ ವ್ಯವಸ್ಥೆಯ ನಿರ್ಮಾಣ೨೦೧೧ರಲ್ಲಿ ಪೂರ್ಣಗೊಂಡಿತ್ತು. ಅಕ್ಟೋಬರ್ ೭ರ ಘಟನೆಗಿಂತ ಮುಂಚೆ ಶತ್ರುಪಾಳಯದ ಕ್ಷಿಪಣಿಗಳನ್ನು ಹೊಡೆದುರುಳಿಸುವಲ್ಲಿ ಇದು ಶೇ.೯೦-೯೭ರಷ್ಟು ಯಶಸ್ವಿಯಾಗಿತ್ತು. ಆದರೆ ಶನಿವಾರದ ಹಮಾಸ್ ದಾಳಿಯ ವಿರುದ್ಧ ಇದು ಕಡಿಮೆ ಪರಿಣಾಮಕಾರಿಯಾಗಿತ್ತು. ಉಗ್ರರು ಕೇವಲ ೨೦ ನಿಮಿಷಗಳಲ್ಲಿ ಸಾವಿರಾರು ಕ್ಷಿಪಣಿಗಳನ್ನು ಇಸ್ರೇಲ್‌ನೆಡೆಗೆ ಉಡಾಯಿಸಿದಾಗ ಈ ವ್ಯವಸ್ಥೆ ಅವನ್ನು ಹೊಡೆದುರಳಿಸುವಲ್ಲಿ ವಿಫಲವಾಯಿತು.
ಒಟ್ಟಾರೆಯಾಗಿ, ಹಮಾಸ್‌ನ ಆಂತರಿಕ ವಲಯವನ್ನು ಭೇದಿಸಲು ಐಎಸ್‌ಎ ವಿಫಲವಾಗಿದ್ದರಿಂದಲೇ ಅಕ್ಟೋಬರ್ ೭ರ ದಾಳಿಯ ಮುನ್ಸೂಚನೆಯನ್ನು ತನ್ನ ನಾಗರಿಕರಿಗೆ ನೀಡಲು ಇಸ್ರೇಲ್ ವಿಫಲವಾಗಿತ್ತು ಎಂಬುದೀಗ ಸ್ಪಷ್ಟವಾಗಿದೆ. ಅಲ್ಲದೆ ಈ ದಾಳಿಗಾಗಿ ಹಮಾಸ್ ಅತ್ಯಂತ ಕಟ್ಟುನಿಟ್ಟಿನ ವಿಭಾಗೀ ಕರಣ ವ್ಯವಸ್ಥೆಯನ್ನು ಬಳಸಿತ್ತು. ಈ ದಾಳಿಯ ಉದ್ದೇಶಗಳು ಮತ್ತು ಪೂರ್ಣಯೋಜನೆಯ ಚಿತ್ರಣವು ಕೆಲವರಿಗಷ್ಟೇ ಲಭ್ಯವಿತ್ತು. ಈಗ ಇಸ್ರೇಲ್ ವಶದಲ್ಲಿರುವ ಹಮಾಸ್‌ಗಳ ವಿಚಾರಣೆಯಿಂದ ತಿಳಿದುಬಂದಿರುವುದೇನೆಂದರೆ, ಈ ದಾಳಿಗೆಂದು ಹಮಾಸ್ ಹಲವು ತಿಂಗಳ ಕಾಲ ತಯಾರಿ-ತರಬೇತಿ ಯನ್ನು ಕೈಗೊಂಡಿತ್ತು. ಆದರೆ, ದಾಳಿಯನ್ನು ಎಲ್ಲಿ, ಯಾವಾಗ, ಹೇಗೆ ಮಾಡಬೇಕೆನ್ನುವುದು ಹಮಾಸ್‌ನ ಮಿಲಿಟರಿ ವಿಭಾಗದ ಮುಖ್ಯಸ್ಥರಿಗಷ್ಟೇ ತಿಳಿದಿತ್ತು.
ತನ್ನ ಗುಪ್ತಚರ ವ್ಯವಸ್ಥೆಯ ವೈಫಲ್ಯದ ಬಗ್ಗೆ ತನಿಖೆ ಮಾಡುವುದಾಗಿ ಇಸ್ರೇಲ್ ಸರಕಾರ ಈಗಾಗಲೇ ಘೋಷಿಸಿದೆ. ಪ್ರಸಕ್ತ ಯುದ್ಧವು ಕೊನೆಗೊಂಡ ಬಳಿಕ ಈ ವೈಫಲ್ಯದ ಹಿಂದಿರುವ ಕಾರಣಗಳು ಗೊತ್ತಾಗಬಹುದು.
(ಲೇಖಕರು ಹವ್ಯಾಸಿ ಬರಹಗಾರರು)