ಘೋರಿಯನ್ನು ಗೆದ್ದ ಧೀಮಂತ ರಾಣಿ
ಉತ್ಖನನ
ಡಾ.ಜಗದೀಶ್ ಮಾನೆ
ಘೋರಿಯ ಸೇನಾಬಲವನ್ನು ಚೆನ್ನಾಗಿ ಅರಿತಿದ್ದ ರಾಣಿ ನಾಯಿಕಾದೇವಿ ಅವನನ್ನು ಹಿಮ್ಮೆಟ್ಟಿಸುವ ಯುದ್ಧತಂತ್ರ ರೂಪಿಸಿ ತನ್ನ ಸೈನ್ಯವನ್ನು ಅವನೆದುರುನಿಲ್ಲಿಸುತ್ತಾಳೆ. ಗೆರಿಲ್ಲಾ ಮಾದರಿಯ ಸಮರತಂತ್ರದ ಮೂಲಕ ಅವನಿಗೆ ಮಣ್ಣು ಮುಕ್ಕಿಸಿ ಸೋಲಿಸಿ, ತರುವಾಯ ಪ್ರಾಣಭಿಕ್ಷೆಯನ್ನೂ ನೀಡುತ್ತಾಳೆ.
ಭಾರತದ ಮೇಲೆ ಬಹಳ ಹಿಂದೆ ಮತ್ತೆ ಮತ್ತೆ ನಡೆದಂಥ ಪರಕೀಯರ ಆಕ್ರಮಣಗಳ ಇತಿಹಾಸ ಎಲ್ಲರಿಗೂ ಗೊತ್ತಿರುವಂಥದ್ದೇ. ಇಂಥ ಯುದ್ಧಗಳಲ್ಲಿ ಭಾರತೀಯ ಸಾಮ್ರಾಟರ ಸೋಲಿಗೆ ಮೋಸ-ವಂಚನೆಗಳು ಮಾತ್ರವಲ್ಲದೆ ಅವರವರ ಒಳಗಿನ ಒಣಪ್ರತಿಷ್ಠೆಗಳು, ಕಿತ್ತಾಟಗಳೂ ಕಾರಣವಾಗಿದ್ದವು. ಶತ್ರುಗಳ ಆಗಮನ-ಆಕ್ರಮಣಕ್ಕೆ ಎಡೆಮಾಡಿಕೊಟ್ಟಿದ್ದು ಇವೇ ಅಂಶಗಳು. ಪರಾಕ್ರಮಿ ರಾಜ ಪೃಥ್ವೀರಾಜ್ ಚೌಹಾಣನ ಹೆಸರು ಕೇಳಿದಾಗಲೆಲ್ಲ ನಮಗೆ ನೆನಪಾಗೋದು, ಎರಡನೇತರೈನ್ ಯುದ್ಧದಲ್ಲಿ ಆತನನ್ನು ಮೋಸದಿಂದ ಸೋಲಿಸಿದ ಮತಾಂಧ ಮೊಹಮ್ಮದ್ ಘೋರಿ ಮಾತ್ರ!
ಆದರೆ ಈ ಯುದ್ಧ ನಡೆಯುವುದಕ್ಕೂ ೧೫ ವರ್ಷಗಳ ಹಿಂದೆ ಇದೇ ಮೊಹಮ್ಮದ್ ಘೋರಿ ಹೀನಾಯವಾಗಿ ಸೋತು ರಣರಂಗದಿಂದ ಕಾಲು ಕೀಳುವಂತೆ ಮಾಡಿದ್ದ ವೀರರಾಣಿಯೊಬ್ಬಳ ಬಗ್ಗೆ ನಮಗೆಷ್ಟು ಗೊತ್ತಿದೆ? ನಮ್ಮ ಇತಿಹಾಸದ ಪುಟಗಳನ್ನು ತಿರುವಿಹಾಕಿದಾಗ, ದೇಶದ ರಕ್ಷಣೆಗೋಸ್ಕರ ಪುರುಷರಷ್ಟೇ ಹೋರಾಟ ಮಾಡಿಲ್ಲ ಎಂಬ ಸತ್ಯದ ಅರಿವಾಗುತ್ತದೆ. ಈ ನಾಡಿನ ರಕ್ಷಣೆಗಾಗಿ ವೀರಗಚ್ಚೆ ಹಾಕಿ ರಣಖಡ್ಗಗಳಿಗೆ ರಕ್ತದೌತಣ ನೀಡಿದ ಇಂಥ ಅನೇಕ ವೀರನಾರಿಯರ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ಇರುವವಳೇ ರಾಣಿ ನಾಯಿಕಾದೇವಿ. ಅಂದು ಬಾದಾಮಿ ಚಾಲುಕ್ಯರ ಪ್ರಭಾವದಿಂದ ಕದಂಬರ ಪ್ರಾಬಲ್ಯ ಕಡಿಮೆಯಾಗಿತ್ತು.
ತದನಂತರ ರಾಷ್ಟ್ರಕೂಟರು ಮತ್ತು ಕಲ್ಯಾಣಿ ಚಾಲುಕ್ಯರ ಸಾಮಂತರಾಗಿದ್ದ ಕದಂಬರ ವಂಶಕ್ಕೆ ಸೇರಿದ್ದ ಒಂದು ಉಪಶಾಖೆಯು ರಾಷ್ಟ್ರಕೂಟರ ಪತನವಾದ ಬಳಿಕ ಗೋವಾದಲ್ಲಿ ಸ್ವತಂತ್ರ ರಾಜ್ಯವನ್ನು ಸ್ಥಾಪನೆ ಮಾಡಿತ್ತು. ಆದ್ದರಿಂದ ಅವರನ್ನು ಗೋವಾದ ಕದಂಬರು ಅಂತಲೇ ಗುರುತಿಸಲಾಗಿತ್ತು. ಇವರ ಅರಸನಾಗಿದ್ದ ರಾಜಾ ಶಿವಚಿತ್ತ ಪರಮಾಧಿ ದೇವನ ಮಗಳೇ ರಾಣಿ ನಾಯಿಕಾದೇವಿ. ಬಾಲ್ಯದಿಂದಲೇ ಕತ್ತಿವರಸೆ, ಕುದುರೆ ಸವಾರಿ, ಗೂಢಚಾರಿಕೆ, ಯುದ್ಧದ ತಂತ್ರ-ಪ್ರತಿತಂತ್ರಗಳು ಮತ್ತು ರಾಜ ತಾಂತ್ರಿಕತೆ ಹೀಗೆ ಸಕಲವಿದ್ಯೆಗಳಲ್ಲಿ ಪಾರಂಗತಳಾಗಿದ್ದ ಆಕೆ ಹಿರಿಯರ ನಿಶ್ಚಯದಂತೆ ರಾಜ ಅಜಯಪಾಲನನ್ನು ವರಿಸುತ್ತಾಳೆ. ಆತನೂ ಅಷ್ಟೇ ಶೂರನಾಗಿದ್ದ. ಅದೇನು ವಿಧಿಯಾಟವೋ, ಕೆಲವೇ ವರ್ಷಗಳಲ್ಲಿ ಆತ ಅಸುನೀಗುತ್ತಾನೆ.
ಮಗ ಆಗಿನ್ನೂ ಅಪ್ರಾಪ್ತ. ಹೀಗಾಗಿ ನಾಯಿಕಾದೇವಿಯೇ ಸಿಂಹಾಸನವನ್ನೇರುತ್ತಾಳೆ. ಈಕೆಯ ದಕ್ಷ ಆಡಳಿತಾವಧಿಯಲ್ಲಿ ಅನ್ಹಿಲ್ವಾರ್ ಪಟಾನ್ ಸಾಮ್ರಾಜ್ಯ ಅತ್ಯಂತ ಸಮೃದ್ಧಿಯಿಂದ ಕೂಡಿತ್ತು. ಆದರೆ ರಾಜನಿಲ್ಲದ ಈ ಸಾಮ್ರಾಜ್ಯದ ಸಂಪತ್ತಿನ ಮೇಲೆ ಮೊಹಮ್ಮದ್ ಘೋರಿಯ ವಕ್ರದೃಷ್ಟಿ ಬೀಳುತ್ತದೆ. ಅದು ಕ್ರಿ.ಶ. ೧೧೭೫ರ ಸಮಯ. ಅಫ್ಘಾನಿಸ್ತಾನದ ಪ್ರದೇಶವನ್ನಾಳುತ್ತಿದ್ದ ಮೊಹಮ್ಮದ್ ಘೋರಿ ಸಾಮ್ರಾಜ್ಯ ವಿಸ್ತರಣೆಯ ಆಸೆಯೊಂದಿಗೆ ಪೂರ್ವಭಾಗಕ್ಕೆ ದಂಡೆತ್ತಿ ಬಂದು ಈಗಿನ ಪಾಕಿಸ್ತಾನದ ಮುಲ್ತಾನ್ ಮತ್ತು ಸಿಂಧೂನದಿಯ ತಟದಲ್ಲಿದ್ದ ವೂಚ್ ಪ್ರದೇಶವನ್ನು ವಶಪಡಿಸಿಕೊಂಡಿದ್ದ. ಬಳಿಕ ಗುಜರಾತನ್ನು ಪ್ರವೇಶಿಸಿದ ಘೋರಿ, ಚಾಲುಕ್ಯರ ರಾಜಧಾನಿ ಅನ್ಹಿಲ್ವಾರ್ ನಗರದ ಮೇಲೆ ಆಕ್ರಮಣ ಮಾಡಲು ಆಲೋಚಿಸುತ್ತಾನೆ. ಕಾರಣ ಅದು ಅತ್ಯಂತ ಶ್ರೀಮಂತವಾಗಿತ್ತು.
ರಾಜನಿಲ್ಲದ ರಾಜ್ಯವನ್ನು ಆಳುತ್ತಿರುವ ಕೇವಲ ಒಬ್ಬಳು ಹೆಣ್ಣು ನನ್ನನ್ನೇನು ಮಾಡಲು ಸಾಧ್ಯವಿದೆ ಎಂಬ ಗ್ರಹಿಕೆಯೊಂದಿಗೆ ಘೋರಿ ೧೧೭೮ರ ಸುಮಾರಿನಲ್ಲಿ ರಾಜಸ್ಥಾನದ ಮರುಭೂಮಿ ದಾಟಿ ಮೌಂಟ್ ಅಬು ಬಳಿಯ ಕೆದಾರ್ ಪ್ರದೇಶದಲ್ಲಿ ಬೀಡುಬಿಟ್ಟಿದ್ದ. ಬಳಿಕ ರಾಣಿಯ ಆಸ್ಥಾನಕ್ಕೆ ತನ್ನ ದೂತನನ್ನು ಕಳಿಸಿ, ‘ರಾಣಿಯು ತನ್ನ ಮಕ್ಕಳೊಂದಿಗೆ ನನಗೆ ಶರಣಾಗಿ, ತನ್ನ ಸಾಮ್ರಾಜ್ಯ ಹಾಗೂ ಎಲ್ಲಾ ಸಂಪತ್ತನ್ನು ಒಪ್ಪಿಸಿದರೆ ನಾನು ಯುದ್ಧ ಮಾಡುವುದಿಲ್ಲ’ ಎಂಬರ್ಥದ ಸಂದೇಶವನ್ನುಅರುಹಿದ. ಅದರಂತೆಯೇ ರಾಣಿ ನಡೆದುಕೊಳ್ಳುತ್ತಾಳೆ ಎಂದೇ ಆತ ಭಾವಿಸಿದ್ದ. ಆದರೆ ರಾಣಿ ನಾಯಿಕಾದೇವಿ ಅದನ್ನು ಧಿಕ್ಕರಿಸಿ ಯುದ್ಧಕ್ಕೆ ಸನ್ನದ್ಧಳಾಗುತ್ತಾಳೆ. ಜತೆಗೆ ಅಕ್ಕ ಪಕ್ಕದ ರಾಜರ ಸಹಾಯವನ್ನೂ ಕೇಳುತ್ತಾಳೆ. ಆದರೆ ಪರಸ್ಪರರಿಗೆ ನೆರವಾಗುವ ಮನಸ್ಥಿತಿ ಅಂದು ನಮ್ಮ ರಾಜರಲ್ಲಿರಲಿಲ್ಲ. ಇದರಿಂದಾಗಿ ರಾಣಿ ಕಿಂಚಿತ್ತೂ ಧೃತಿಗೆಡಲಿಲ್ಲ.
ತನ್ನ ಸಾಮಂತ ರಾಜರನ್ನು ಒಗ್ಗೂಡಿಸಿ ಘೋರಿಯ ಭಾರಿ ಸೈನ್ಯಕ್ಕೆ ಹೊಡೆತ ಕೊಡಲು ಅದ್ಭುತ ರಣತಂತ್ರವನ್ನು ರೂಪಿಸುತ್ತಾಳೆ. ತನ್ನ ಸೇನೆಯನ್ನು ಎರಡು ಭಾಗಗಳಾಗಿ ವಿಂಗಡಿಸಿ, ಒಂದು ತುಕಡಿಯನ್ನು ಕೋಟೆ ಹಾಗೂ ನಗರದ ಕಾವಲಿಗೆ ನಿಲ್ಲಿಸಿ, ಮತ್ತೊಂದು ತುಕಡಿಯೊಂದಿಗೆ ಶತ್ರುವನ್ನು ಎದುರಿಸಲು ಸಜ್ಜಾಗುತ್ತಾಳೆ. ಘೋರಿಯ ಸೇನಾಬಲವನ್ನು ಚೆನ್ನಾಗಿ ಅರಿತಿದ್ದ ರಾಣಿ ಆಯಕಟ್ಟಿನ ಪ್ರದೇಶವನ್ನೇ ಚಾಣಾಕ್ಷತನದಿಂದ ಯುದ್ಧಕ್ಕೆ ಆಯ್ಕೆಮಾಡಿಕೊಳ್ಳುತ್ತಾಳೆ.ಮೌಂಟ್ ಅಬು ಬಳಿಯ ಕಿರಿದಾದ ಬೆಟ್ಟಗಳ ಇಳಿಜಾರಿನ ಪ್ರದೇಶದಲ್ಲಿ, ಅಲ್ಲಿನ ವಾತಾವರಣಕ್ಕೆ ತಕ್ಕಂತೆ ಘೋರಿಯನ್ನು ಹಿಮ್ಮೆಟ್ಟಿಸುವ ಯುದ್ಧತಂತ್ರವನ್ನು ರೂಪಿಸಿ ತನ್ನ ಸೈನ್ಯವನ್ನು ನಿಲ್ಲಿಸುತ್ತಾಳೆ. ಗೆರಿಲ್ಲಾ ಮಾದರಿಯ ಯುದ್ಧ ತಂತ್ರದ ಮೂಲಕ ಯುದ್ಧಕ್ಕೆ ಸನ್ನದ್ಧಳಾಗುತ್ತಾಳೆ.
ಎರಡು ಬೆಟ್ಟಗಳ ನಡುವಿನ ಇಕ್ಕಟ್ಟಾದ ಜಾಗದಲ್ಲಿ ಘೋರಿಯ ಸೈನ್ಯ ತೂರಿ ಬರುತ್ತಿದ್ದಂತೆ, ರಾಣಿಯ ಸೇನೆ ಅದರ ಮೇಲೆ ಎರಗುತ್ತದೆ. ಬಿಲ್ಲಾಳುಗಳ ಮೊನಚಾದಬಾಣಗಳು ಘೋರಿಯ ಸೈನಿಕರನ್ನು ಹೆಣವಾಗಿಸುತ್ತವೆ. ರಾಣಿಯ ಅಶ್ವದಳ, ಗಜಪಡೆಗಳ ಅಬ್ಬರಕ್ಕೆ ಘೋರಿಯ ಸೇನೆ ದಿಕ್ಕಾಪಾಲಾಗುತ್ತದೆ. ತನ್ನ ಮಗುವನ್ನು ಮಡಿಲಲ್ಲಿ ಕಟ್ಟಿ ಕೊಂಡು ಕುದುರೆಯೇರಿ ಕಾದಾಡಿದ ರಾಣಿ ನಾಯಿಕಾದೇವಿ ತನ್ನ ಸೇನೆಯನ್ನು ಹುರಿದುಂಬಿಸುತ್ತಾ, ಸಾಕ್ಷಾತ್ ರಣ ಚಂಡಿಯಂತೆ ಕಾದಾಡುತ್ತಾಳೆ. ತನ್ಮೂಲಕ ಆ ಕಣಿವೆಯ ನೆಲದ ರಕ್ತದಾಹವನ್ನು ಇಂಗಿಸುತ್ತಾಳೆ. ರಾಣಿಯ ಹೊಡೆತಕ್ಕೆ ಆಘಾತಗೊಳ್ಳುವ ಘೋರಿ ತನ್ನ ಪ್ರಾಣವುಳಿಸಿಕೊಳ್ಳಲು ಅಂಗರಕ್ಷಕರೊಂದಿಗೆ ಅಲ್ಲಿಂದ ಪಲಾಯನ ಮಾಡಲೆತ್ನಿಸುತ್ತಾನೆ.
ಬೆನ್ನಟ್ಟಿದ ರಾಣಿ ಅವನನ್ನು ಅಟ್ಟಾಡಿಸಿ ಹೊಡೆಯುತ್ತಾಳೆ. ಕುದುರೆಯ ಮೇಲಿಂದ ನೆಲಕ್ಕುರುಳಿದ ಘೋರಿಯ ಎದೆ ಮೇಲೆ ಕತ್ತಿಯಿಟ್ಟ ರಾಣಿ, ‘ಈಗ ನಾನು ನಿನ್ನನ್ನು ಕೊಲ್ಲುವುದಿಲ್ಲ. ಬದಲಿಗೆ ನೀನು, ಒಬ್ಬ ಭಾರತೀಯ ಸ್ತ್ರೀ ಕೈಯಲ್ಲಿ ಸೋತು ಪ್ರಾಣಭಿಕ್ಷೆ ಪಡೆದುಕೊಂಡು ಉಳಿದೆನಲ್ಲಾ ಎಂದು ಜೀವಮಾನದುದ್ದಕ್ಕೂ ನರಳಿ ನರಳಿ ಸಾಯಬೇಕು’ ಎಂದು ಹೇಳಿ ಅವನಿಗೆ ಪ್ರಾಣಭಿಕ್ಷೆ ನೀಡುತ್ತಾಳೆ. ಬಳಿಕ ಮೊಹಮ್ಮದ್ ಘೋರಿ ಗುಜರಾತಿನ ಕಡೆಗೆ ಕಣ್ಣೆತ್ತಿಯೂ ನೋಡುವುದಿಲ್ಲ. ರಾಣಿ ನಾಯಿಕಾದೇವಿಯ ಕೈಯಲ್ಲಿ ಹೀನಾಯವಾಗಿ ಸೋತ ಘೋರಿಯ ಬಗ್ಗೆ ಗುಜರಾತಿನ ಕವಿ ಸೋಮೇಶ್ವರ, ಜೈನಸಾಹಿತಿ ಮೇರುತುಂಗರು ತಮ್ಮ ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ.
೧೩ನೇ ಶತಮಾನದ ಪರ್ಷಿಯನ್ ಸಾಹಿತಿ ಮಿನ್ಹಾಜ್ -ಎ-ಸಿರಾಜ್ ಅವರು ತಮ್ಮ ‘ಘೋರಿಡ್ ಸಾಮ್ರಾಜ್’ ಎಂಬ ಕೃತಿಯಲ್ಲಿಯೂ ಘೋರಿ ಸೋತು ಪಲಾಯನಮಾಡಿದ್ದನ್ನು ಉಲ್ಲೇಖಿಸಿದ್ದಾರೆ. ೧೬ನೇ ಶತಮಾನದ ಇತಿಹಾಸಕಾರರಾದ ಅಬ್ದುಲ್ ಖಾದರ್ ಬದೌನಿ ಅವರು ತಮ್ಮ ಕೃತಿಯಲ್ಲಿ, ‘ಘೋರಿ ಮೊಹಮ್ಮದ್ ಅತ್ಯಂತ ಪ್ರಯಾಸದಿಂದ ತನ್ನ ತಾಯ್ನೆಲಕ್ಕೆ ಹಿಂದಿರುಗಿದ. ಈ ಕದನದಲ್ಲಿ ಆತನ ಜೀವ ಉಳಿದಿದ್ದೇ ಹೆಚ್ಚು’ ಎಂದು ಬರೆದಿದ್ದಾರೆ. ಹೀಗೆ ಪರ್ಷಿಯನ್ ಇತಿಹಾಸಕಾರರಿಂದಲೂ ಪ್ರಶಂಸೆಗೆ ಪಾತ್ರಳಾದ ಹೆಗ್ಗಳಿಕೆ ರಾಣಿ ನಾಯಿಕಾದೇವಿಯದ್ದು. ಇಂಥ ವೀರವನಿತೆಯರನ್ನು ಹಾಗೂ ತಾಯ್ನಾಡಿನ ರಕ್ಷಣೆಗಾಗಿ ಅವರು ಮಾಡಿದ ಹೋರಾಟವನ್ನು ನಾವು ಅನು ದಿನವೂ ನೆನೆಯಬೇಕು.
(ಲೇಖಕರು ರಾಜ್ಯಶಾಸ್ತ್ರದ ಅಧ್ಯಾಪಕರು)