ಶಾಲೆಗಳು ಬೌದ್ದಿಕವಾಗಿ ಅಭಿವೃದ್ದಿಯಾಗಬೇಕಿದೆ
ವಿಚಾರ ಮಂಟಪ
ಕುಮಾರಸ್ವಾಮಿ ವಿರಕ್ತಮಠ
ಭಾರತದಲ್ಲಿ ಜನರು ನೆಲ, ಜಲ, ಭಾಷೆ, ಜಾತಿ, ಧರ್ಮ, ಆಚರಣೆಗಳ ವಿಷಯದಲ್ಲಿ ಭಾವನಾತ್ಮಕವಾಗಿ ಸ್ಪಂದಿಸುತ್ತಾರೆ. ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿಯೂ ಮತದಾರರನ್ನು ಸೆಳೆಯಲು ರಾಜಕಾರಣಿಗಳ ಪಾಲಿಗೆ ಇವೆಲ್ಲ ‘ಗುಪ್ತ ಕಾರ್ಯಸೂಚಿ’ಗಳಾಗಿದ್ದವು. ಚುನಾವಣೆ ಮುಗಿದು ಹಳೆಯ ಸರಕಾರ ಹೋಗಿ ಹೊಸದು ಬಂತು, ಹಿಂದಿನ ಸರಕಾರದ ಅವಽಯಲ್ಲಿದ್ದ ಪಠ್ಯಪುಸ್ತಕಗಳ ಪರಿಷ್ಕರಣೆಯೂ ಆಯಿತು.
ರಾಷ್ಟ್ರೀಯ ಶಿಕ್ಷಣ ನೀತಿಯ ಪರ-ವಿರೋಧವಾಗಿ ಚರ್ಚೆಗಳು ನಡೆದವು. ಆದರೆ ನಮ್ಮವರು ಶಿಕ್ಷಣ ಕ್ಷೇತ್ರದ ಮೂಲಸಮಸ್ಯೆಗಳನ್ನು ಗುರುತಿಸಲು ವಿಫಲವಾಗು ತ್ತಿರುವುದು ಖೇದವೆನಿಸುತ್ತದೆ. ಇತ್ತೀಚೆಗೆ ರಾಜ್ಯ ಶಿಕ್ಷಣ ಸಚಿವರು ಕೆಲವು ಸರಕಾರಿ ಶಾಲೆಗಳಲ್ಲಿ ಕಾನ್ವೆಂಟ್ ಪದ್ಧತಿಯ ವ್ಯಾಸಂಗಕ್ರಮ ಶುರುಮಾಡುವಕುರಿತು ಹೇಳಿದ್ದಾರೆ, ‘ಕರ್ನಾಟಕ ಪಬ್ಲಿಕ್ ಶಾಲೆ’ಗಳನ್ನು ಪ್ರಾಯೋಗಿಕವಾಗಿ ಆರಂಭಿಸುವ ಮಾತಾಡಿದ್ದಾರೆ. ಇದು ಸ್ವಾಗತಾರ್ಹ ವಿಷಯವೇ. ಆದರೆ ಸರಕಾರಿ ಶಾಲೆಗಳ ಬಗ್ಗೆ ಆಲೋಚಿಸಬೇಕಾದ ವಿಷಯಗಳು ಸಾಕಷ್ಟಿವೆ.
ಜನಪ್ರತಿನಿಧಿಗಳಿಗೆ ಸರಕಾರದ ಮೇಲೆ, ಅಧಿಕಾರದ ಮೇಲೆ ಇರುವಷ್ಟು ಪ್ರೇಮವು ನಮ್ಮ ಸರಕಾರಿ ಕನ್ನಡ ಶಾಲೆಗಳ ಮೇಲೂ ಇದ್ದಿದ್ದರೆ ಕನ್ನಡಿಗರ ಪರಿಸ್ಥಿತಿ ಎಷ್ಟೋ ಉತ್ತಮವಾಗಿರುತ್ತಿತ್ತು ಎನಿಸುತ್ತದೆ. ನಮ್ಮ ಅಕ್ಕಪಕ್ಕದ ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ಜನರಿಗೆ ಇರುವ ಭಾಷಾಪ್ರೇಮ ಕೊಂಚ ಹೆಚ್ಚಿನದೇ ಎನ್ನಬೇಕು. ಕಾರಣ, ನೆಲ, ಜಲ, ಭಾಷೆಯ ವಿಚಾರದಲ್ಲಿ ಅವರು ಎಂದಿಗೂ ರಾಜಿಯಾಗುವುದಿಲ್ಲ. ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಽಸಿದ ಇತ್ತೀಚಿನ ಹಗ್ಗಜಗ್ಗಾಟವೇ ಇದಕ್ಕೆ ಸಾಕ್ಷಿ. ಹಾಗೆಂದು ಕನ್ನಡಿಗರೇನೂ ಕಡಿಮೆ ಇಲ್ಲ.
ಆದರೆ ನಮ್ಮಲ್ಲಿ ಈ ವಿಷಯಗಳಿಗೆ ಸಂಬಂಧಿಸಿದಂತೆ ಇಚ್ಛಾಶಕ್ತಿಯ ಕೊರತೆಯಿದೆಯೇ? ಸಮರ್ಥನೆಯ ಶಕ್ತಿ ಕುಸಿದುಹೋಗಿದೆಯೇ? ಇವೆಲ್ಲ ಕೇವಲ ರಾಜಕೀಯದೊಂಬರಾಟದ ಸರಕುಗಳಾಗಿ ಉಳಿದುಬಿಟ್ಟಿವೆಯೇ? ಎಂಬ ಪ್ರಶ್ನೆಗಳು ಪ್ರತಿಯೊಬ್ಬರನ್ನೂ ಕಾಡತೊಡಗಿದೆ. ಬ್ರಿಟಿಷರ ಕಾಲದಿಂದಲೂ ಸರಕಾರಿ ಕನ್ನಡ ಶಾಲೆಗಳಿಗೆ ಕಂಟಕ ಇದ್ದೇ ಇದೆ. ಇವು ಆಂಗ್ಲಭಾಷಾ ಶಾಲೆಗಳ ಹೊಡೆತಕ್ಕೆ ಸಿಲುಕಿ ನರಳಿ ನರಳಿ ಬದುಕುತ್ತಿವೆ. ಮೊನ್ನೆ ಊರಿಗೆ ಹೋದಾಗ ಸಿಕ್ಕಿದ ನಿವೃತ್ತ ಹಿರಿಯ ಶಿಕ್ಷಕರೊಬ್ಬರು ಈಗಿನ ಕನ್ನಡ ಶಾಲೆಯ ಪರಿಸ್ಥಿತಿಯ ಬಗ್ಗೆ ಬಹಳ ಬೇಸರ ವ್ಯಕ್ತಪಡಿಸಿದರು. ನಮ್ಮೂರಲ್ಲಿ ಕನ್ನಡಶಾಲೆ ಕಟ್ಟಿ ಬೆಳೆಸಿ ಬೋಧಿಸಿದ ನಿವೃತ್ತ ಶಿಕ್ಷಕರ ಒಂದು ದಂಡೇ ಇದೆ. ಇವರು ಕೇವಲ ಪಠ್ಯಪುಸ್ತಕದಲ್ಲಿರುವ ಪಾಠವನ್ನಷ್ಟೇ ಮಾಡಲಿಲ್ಲ; ಜೀವನದ ಪಾಠವನ್ನು ಹೇಳಿಕೊಟ್ಟು ನಮ್ಮೂರಿನ ಎಷ್ಟೋಜನರ ಬದುಕು ರೂಪಿಸಿದರು. ಇವರೆಲ್ಲ ವಾರಾನ್ನದ ಮನೆಗಳಲ್ಲಿ ಉಂಡು ಬೆಳೆದವರು.
ಇನ್ನೊಬ್ಬರ ಆಶ್ರಯ ಪಡೆದು, ಆಗಿನ ಕಾಲದಲ್ಲೇ ಬಾಹ್ಯ ಅಭ್ಯರ್ಥಿಗಳಾಗಿ ಪದವಿ ಪಡೆದು ಶಿಕ್ಷಕರಾಗಿ ಊರಿನ ಮಕ್ಕಳಿಗೆಲ್ಲ ಪಾಠ ಹೇಳಿಕೊಟ್ಟವರು. ಈಗಿನಂತೆ ಆಗ ಕನ್ನಡ ಶಾಲೆಗಳಿಗೆ ಕಟ್ಟಡ ಗಳೇ ಇರಲಿಲ್ಲ; ಊರಿನ ಗುಡಿ-ಗುಂಡಾರಗಳೇ ಶಾಲಾ ಕೊಠಡಿಗಳಾಗಿದ್ದವು. ವಿದ್ಯಾರ್ಥಿಗಳನ್ನು ಸೇರಿಸಿ ಪಾಠ ಹೇಳುವುದು ಅಂದು ಸುಲಭದ ಮಾತಾಗಿರಲಿಲ್ಲ; ಕೃಷಿ ಯನ್ನೇ ಆಧಾರವಾಗಿಟ್ಟುಕೊಂಡ ಹಳ್ಳಿಯ ವಾತಾವರಣ ದಲ್ಲಿ ಬೆಳೆದವರಿಗೆ ಮಕ್ಕಳನ್ನು ಶಾಲೆಗೆ ಕಳಿಸುವುದೆಂದರೆ ಸ್ವಲ್ಪ ಕಷ್ಟದ ಕೆಲಸವೇ ಎನಿಸಿತ್ತು. ‘ಹೊಲದಲ್ಲಿ ಮಾಡಲು ಸಾಕಷ್ಟು ಕೆಲಸಗಳಿವೆ, ಶಾಲೆಗೆ ಹೋಗಿ ನೀನೇನು ಮಾಡುತ್ತೀಯ? ರೈತನ ಮಗ ರೈತನೇ ಆಗಬೇಕು’ ಎಂದು ಅವರು ಹೇಳುತ್ತಿದ್ದ ಕಾಲವದು.
ಅಂಥದ್ದರಲ್ಲಿ, ಅಂಥ ಪೋಷಕರ ಮನವೊಲಿಸಿ, ಬುದ್ಧಿಹೇಳಿ ತಾವೇ ಹೋಗಿ ಮಕ್ಕಳನ್ನು ಶಾಲೆಗೆ ಕರೆತಂದು ಕಲಿಸುತ್ತಿದ್ದರಂತೆ ನಮ್ಮೂರಲ್ಲಿನ ಶಿಕ್ಷಕರು. ಕರ್ನಾಟಕದ ಬಹುತೇಕ ಪ್ರತಿ ಹಳ್ಳಿಯ ಲ್ಲಿಯೂ ಇಂಥ ಸರಕಾರಿ ಶಾಲೆಗಳ ಉದಾಹರಣೆಗಳು ಸಿಗುತ್ತವೆ. ಕುವೆಂ ಪು ಜನ್ಮ ಶತಮಾನೋತ್ಸವದ ಸವಿನೆನಪಿ ಗೆಂದು ಸರಕಾರವು ಕುವೆಂಪುರವರ ಹೆಸರಿನಲ್ಲಿ ಜಿಲ್ಲೆಗೊಂದು ಸರಕಾರಿ ಶಾಲೆಗೆ ವಿಶೇಷ ಅನುದಾನ ನೀಡಿ, ‘ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಶಾಲೆ’ ಎಂದು ಮರುನಾಮಕರಣಗೊಳಿಸಿತು. ಅದರಲ್ಲಿ ನಮ್ಮೂರ ಶಾಲೆಯೂ ಒಂದಾಯಿತು. ಅಲ್ಲಿ ನಾನು ಸಹ ಒಂದು ಕಾಲಕ್ಕೆ ವಿದ್ಯಾರ್ಥಿಯಾಗಿದ್ದವನೇ. ಮಳೆ ಬಂದರೆ ಸೋರುತ್ತಿದ್ದ ಹೆಂಚಿನ ಚಾವಣಿಯ ಶಾಲಾಕಟ್ಟಡದ ಜಾಗದಲ್ಲಿ ತಾರಸಿಯ ಬೃಹತ್ ಕಟ್ಟಡ ನಿರ್ಮಾಣವಾಯಿತು.
ನಾವೆಂದೂ ನೋಡಿರದ ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ಕಂಪ್ಯೂಟರ್‌ಗಳೆಲ್ಲ ಬಂದವು. ಖೋಖೋ, ಕಬಡ್ಡಿ ಮಾತ್ರವೇ ಆಟವಾಗಿದ್ದ ನಮ್ಮೂರ ಶಾಲೆಯಲ್ಲಿ ಬಾಸ್ಕೆಟ್ ಬಾಲ್ ಮೈದಾನ ಸಜ್ಜಾಯಿತು. ಮತ್ತಿತರ ಸೌಕರ್ಯಗಳೂ ಶಾಲೆಗೆ ದೊರೆತವು. ಆದರೆ ಅವನ್ನು ಬಳಸುವುದು ಹೇಗೆಂಬುದರ ಬಗ್ಗೆ ಸೂಕ್ತ ಮಾರ್ಗಸೂಚಿ ಗಳು ಸಿಗಲಿಲ್ಲ. ಅವುಗಳ ಕುರಿತು ಹೇಳಿಕೊಡುವವರೂ ಬರಲಿಲ್ಲ. ಇಂದಿಗೂ ನಮ್ಮೂರಿನ ಪ್ರಾಥಮಿಕ, ಪ್ರೌಢಶಾಲೆ ಗಳು ಮತ್ತು ಕಾಲೇಜಿನ ಲ್ಯಾಬ್‌ಗಳಲ್ಲಿ ಕಂಪ್ಯೂಟರ್‌ಗಳು ಧೂಳು ತಿನ್ನುತ್ತಿವೆ. ದಶಕ ಕಳೆದರೂ ಇಂದಿಗೂ ಈ ಶಾಲೆ ಭೌತಿಕವಾಗಿ ಅಭಿವೃದ್ಧಿಯಾಗಿದೆಯೇ ಹೊರತು, ಬೌದ್ಧಿಕವಾಗಿ ಹೇಳಿಕೊಳ್ಳುವಂಥ ಸಾಧನೆಯನ್ನು ಮಾಡಲು ಅದಕ್ಕಾಗಿಲ್ಲ.
ಇಂಥ ಸ್ಥಿತಿ ಸೃಷ್ಟಿಯಾಗಿರುವುದಕ್ಕೆ ನಮ್ಮ ಆಳುಗ ವ್ಯವಸ್ಥೆಯ ಕಡೆಗೇ ಬೆರಳುಮಾಡಿ ತೋರಿಸಬೇಕಾಗುತ್ತದೆ. ಸರಕಾರಗಳು ಕನ್ನಡ ಶಾಲೆಗಳ ಅಭಿವೃದ್ಧಿಗೆ ಭೌತಿಕ ಕೊಡುಗೆಗಳನ್ನು ನೀಡುತ್ತಾ ಬಂದಿವೆಯೇ ಹೊರತು, ಬೌದ್ಧಿಕ ಸಂಪನ್ಮೂಲಗಳನ್ನು ನೀಡುವಲ್ಲಿ ಅಂದರೆ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಹಿಂದೆ ಬೀಳುತ್ತಿವೆ ಎನಿಸುತ್ತದೆ. ಕಾನ್ವೆಂಟ್ ಮಾದರಿಯ ಶಾಲೆಯನ್ನು ಆರಂಭಿಸುವುದು ಒಳ್ಳೆಯದೇ; ಇಂದು ಇಂಗ್ಲಿಷ್ ಇಲ್ಲದಿದ್ದರೆ ಜೀವನವೇ ಇಲ್ಲ ಎನ್ನುವಂತಾಗಿದೆ. ಅಂದು ನಮಗೆ ಸರಿಯಾಗಿ ಇಂಗ್ಲಿಷ್ ಹೇಳಿಕೊಡಲೂ ಇಲ್ಲ, ನಾವು ಸರಿಯಾಗಿ ಕಲಿಯಲೂ ಇಲ್ಲ. ಹೀಗಾಗಿ ಅದರ ಮೇಲಿನ ಭಯ ದೂರ ವಾಗದೆ ಅದು ಕಬ್ಬಿಣದ ಕಡಲೆಯಾಗಿಯೇ ಉಳಿಯಿತು.
ಉದ್ಯೋಗ ಅರಸಿ ಹೋದಾಗಲಷ್ಟೇ ಇಂಗ್ಲಿಷ್‌ನ ಮಹತ್ವ ಅರಿವಿಗೆ ಬಂತು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳೆಂದು ವಿಶ್ವವಿದ್ಯಾಲಯಗಳಲ್ಲಿ ಕೀಳಾಗಿ ಕಂಡಿದ್ದೂ ಉಂಟು. ಇನ್ನು ಉದ್ಯೋಗ ನೀಡುವಲ್ಲಿಯೂ ಕನ್ನಡ ಮಾಧ್ಯಮದ ವರಿಗೆ ನಂತರದ ಪ್ರಾಶಸ್ತ್ಯ. ಹೀಗೆ, ಸರಿಯಾಗಿ ಇಂಗ್ಲಿಷ್ ಕಲಿಯದ್ದಕ್ಕೆ ಒದಗಿದ ಸ್ಥಿತಿ ಮತ್ತು ಅದರ ಕೊರಗು ಇಂದಿಗೂ ಅನೇಕರನ್ನು ಕಾಡುತ್ತಿದೆ. ಲಭ್ಯ ಅಂಕಿ-ಅಂಶಗಳು ಹೇಳುವಂತೆ, ಕಳೆದ ೫ ವರ್ಷ ಗಳಲ್ಲಿ ೫೩ ಸಾವಿರ ವಿದ್ಯಾರ್ಥಿಗಳು ಸರಕಾರಿ ಶಾಲೆ ತೊರೆದು ಖಾಸಗಿ ಶಾಲೆಗಳನ್ನು ಸೇರಿಕೊಂಡಿದ್ದಾರೆ. ಇದು ನಮ್ಮ ಸರಕಾರಿ ಶಾಲೆಗಳ ಗುಣಮಟ್ಟವನ್ನು ಪ್ರಶ್ನಿಸುವಂತಿದೆ. ನಮ್ಮ ಜನರೂ ಬಹಳ ಮಟ್ಟಿಗೆ ಬದಲಾಗಿದ್ದಾರೆ ಎನ್ನಿ!
ಲಕ್ಷ ಲಕ್ಷ ರುಪಾಯಿ ತೆತ್ತರೂ ಪರವಾಗಿಲ್ಲ, ತಮ್ಮ ಮಕ್ಕಳು ನಗರಗಳ ಪ್ರತಿಷ್ಠಿತ ಆಂಗ್ಲಮಾಧ್ಯಮ ಶಾಲೆಯಲ್ಲೇ ಓದಬೇಕು ಎನ್ನುವಷ್ಟರ ಮಟ್ಟಿಗೆ ಪೋಷಕರ ಚಿತ್ತಸ್ಥಿತಿ ಬದಲಾಗಿದೆ. ತಾವು ಅನುಭವಿಸಿದ ಅವಮಾನವನ್ನು ತಮ್ಮ ಮಕ್ಕಳು ಅನುಭವಿಸಬಾರದು ಎಂಬ ಚಿಂತನೆಯೇ ಇದಕ್ಕೆ ಕಾರಣ. ಜತೆಗೆ ನಮ್ಮ ಸಮಾಜವೂ ಇಂಗ್ಲಿಷ್‌ಗೆ ಮತ್ತು ಅದನ್ನು ಬಲ್ಲವರಿಗೆ ಇನ್ನಿಲ್ಲದ ಮಹತ್ವವನ್ನು ನೀಡುತ್ತಿದೆ. ಹೀಗಾಗಿ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಇಂದು ಬೆಲೆ ಇಲ್ಲವೇ ಇಲ್ಲ. ಆದ್ದರಿಂದ ಸರಕಾರವು ಶಾಲೆಗಳಿಗೆ ದೊಡ್ಡ ದೊಡ್ಡ ಕಟ್ಟಡ, ಪೀಠೋಪಕರಣಗಳು, ಶಿಕ್ಷಣ ಸಾಮಗ್ರಿ ಗಳನ್ನು ನೀಡಿಬಿಟ್ಟರೆ ಸಾಲದು; ಅವನ್ನು ಸಮರ್ಥವಾಗಿಬಳಸಿಕೊಂಡು ಸೂಕ್ತ ಮಾರ್ಗದರ್ಶನ ನೀಡಿ ವಿದ್ಯಾರ್ಥಿ ಗಳನ್ನು ಮಾಹಿತಿವಂತರನ್ನಾಗಿ ಜ್ಞಾನವಂತರನ್ನಾಗಿ ಸಜ್ಜು ಗೊಳಿಸುವ ಶಿಕ್ಷಕರನ್ನೂ ಅದು ಒದಗಿಸಬೇಕಿದೆ.
ಇದು ಸಾಕಾರಗೊಳ್ಳಲು ಶಿಕ್ಷಕರಿಗೆ ಸೂಕ್ತ ತರಬೇತಿಯನ್ನು ನೀಡ ಬೇಕಿದೆ. ಇವೆಲ್ಲವನ್ನೂ ಕಾಟಾಚಾರಕ್ಕೆ ಮಾಡಿದರೆ ಪ್ರಯಜನವಿಲ್ಲ. ಅವೆಲ್ಲದರ ಸ್ಥಿತಿಗತಿಗಳನ್ನು, ಸಾಧಕ-ಬಾಧಕ ಗಳನ್ನು ಕಾಲಾನುಕಾಲಕ್ಕೆ ಅವಲೋಕಿಸುತ್ತಿರಬೇಕು. ೫೩ ಸಾವಿರ ಶಿಕ್ಷಕರ ಅಗತ್ಯವಿರುವ ಸರಕಾರಿ ಶಾಲೆಗಳಿಗೆ ಸರಕಾರ ಈಗ ಹದಿಮೂರುವರೆ ಸಾವಿರ ಶಿಕ್ಷಕರನ್ನು ನೇಮಿಸಿ ಕೊಂಡಿದೆ. ಇದು ಬಹಳ ದಿನಗಳ ನಂತರ ಆಗಿರುವ ದೊಡ್ಡ ನೇಮಕಾತಿಯೇ ಸರಿ. ಇವರೆಲ್ಲರೂ ಹೊಸಪೀಳಿಗೆಯ ಶಿಕ್ಷಕರು, ಹೊಸಹೊಸ ವಿಚಾರವುಳ್ಳ ವರು. ಬೋಧನೆಗೆ ಸಂಬಂಽಸಿದ ವಿನೂತನ ಶೈಲಿಯ ಪಟ್ಟುಗಳನ್ನು ಬಲ್ಲವರು ಆಗಿರುತ್ತಾರೆ. ಆದರೆ ಸರಕಾರ ಅವರಿಗೆ ಸೂಕ್ತವಾದ ತರಬೇತಿಯನ್ನು ನೀಡಬೇಕು. ಸರಕಾರಿ ಶಾಲೆಗಳಲ್ಲಿ ಕೊಳೆಯುತ್ತ ಬಿದ್ದಿರುವ ಶಿಕ್ಷಣ ಸಾಮಗ್ರಿಗಳು, ಕ್ರೀಡೋಪಕರಣಗಳ ಸದುಪಯೋಗವಾಗ ಬೇಕು.
ಪಿಯುಸಿ ಹಂತದಲ್ಲಿ ನಡೆಯುವ ವಿಜ್ಞಾನದ ಪ್ರಯೋಗಗಳು ಪ್ರಾಥಮಿಕ- ಮಾಧ್ಯಮಿಕ ಶಾಲಾ ಹಂತ ದಲ್ಲೇ ನಡೆಯಬೇಕು. ಗ್ರಂಥಾಲಯದ ಕಪಾಟಿನಲ್ಲಿರುವ ಪುಸ್ತಕಗಳು ಹೊರಬರ ಬೇಕು. ಹಳ್ಳಿಯ ಮಕ್ಕಳೂ ಅರಳು ಹುರಿದಂತೆ ಇಂಗ್ಲಿಷ್ ನಲ್ಲಿ ಮಾತಾಡುವಂತಾಗಬೇಕು. ಆದ್ದ ರಿಂದ, ಸರಕಾರವು ಪ್ರಸ್ತುತ ಹೈಟೆಕ್ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆದರಷ್ಟೇ ಸಾಲದು, ಮಿಕ್ಕ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನೂ ಬೌದ್ಧಿಕ ನೆಲೆಗಟ್ಟಿನಲ್ಲಿ ಅದು ಸದೃಢಗೊಳಿಸಬೇಕಿದೆ. ಇಲ್ಲದಿದ್ದರೆ ಭವಿಷ್ಯತ್ತಿನಲ್ಲಿ ಕನ್ನಡದ ಶಾಲೆಗಳು ಕಣ್ಮರೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ನಾಲ್ಕು ಜನರಿಗೆ ಜ್ಞಾನದೀವಿಗೆಯಾಗಬೇಕಿದ್ದ ಶಿಕ್ಷಣವು ಇಂದು ವ್ಯಾಪಾರದ ಸರಕಾಗಿಬಿಟ್ಟಿದೆ. ಪೋಷಕರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದ ಶಾಲೆಗಳಿಗೆ ಕಳುಹಿಸಲು ನಿರಾಸಕ್ತಿ ತೋರುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಪರಿಣಾಮವಾಗಿ ಒಂದೊಂದಾಗಿ ಕನ್ನಡ ಶಾಲೆಗಳು ಮುಚ್ಚುತ್ತಾ ಬರುತ್ತಿವೆ. ಪ್ರಸ್ತುತ ದೊಡ್ಡ ಹುದ್ದೆ ಯಲ್ಲಿದ್ದು ನಿವೃತ್ತಿಯ ಅಂಚಿಗೆ ತಲುಪಿರುವ ಅಧಿಕಾರಿಗಳಲ್ಲಿ ಬಹುತೇಕರು ಕನ್ನಡ ಮಾಧ್ಯಮದಲ್ಲಿ ಓದಿದವರು ಎಂಬ ಹೆಮ್ಮೆಯೊಂದೇ ಇನ್ನು ಮುಂದೆ ಕನ್ನಡ ಶಾಲೆಗಳಿಗೆ ಉಳಿಯುತ್ತದೆಯೇನೋ ಎನಿಸುತ್ತಿದೆ.
ಆರ್ಥಿಕವಾಗಿ ಸಬಲರಾದವರು ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗಳಿಗೆ ಸೇರಿಸಬಹುದು; ಆದರೆ ಕೂಲಿಕಾರರು, ಸಣ್ಣಮಟ್ಟದ ಕೃಷಿಕಾರರ ಮಕ್ಕಳಿಗೆ ಇದು ಗಗನಕುಸುಮವೇ ಸರಿ. ಜತೆಗೆ ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮದ ಶಾಲೆಗಳು ಮಕ್ಕಳ ನಡುವೆ ಕೀಳರಿಮೆಯನ್ನು ಮೂಡಿಸಿ ಮಾನಸಿಕ ಯಾತನೆಯನ್ನು ಉಂಟುಮಾಡುತ್ತವೆ. ಆದ್ದರಿಂದ ಸರಕಾರಿ ಶಾಲೆಗಳನ್ನು ಬೌದ್ಧಿಕವಾಗಿ ಹೇಗೆ ಅಭಿವೃದ್ಧಿಪಡಿಸಬೇಕು ಎಂಬುದರ ಬಗ್ಗೆ ಸರಕಾರ ಅಧ್ಯಯನ ಮಾಡಬೇಕಿದೆ. ಅದುಆರಂಭಿಸಲಿರುವ ಪಬ್ಲಿಕ್ ಶಾಲೆಗಳು ಕೂಡ ‘ನಾಮ್ -ಕೇ-ವಾಸ್ತೆ’ಯಂತೆ ಆಗದಿರಲಿ.
(ಲೇಖಕರು ಹವ್ಯಾಸಿ ಬರಹಗಾರರು)