ಎಲ್ಲ ಕ್ರೀಡೆಗಳಿಗೂ ಪ್ರೋತ್ಸಾಹ ಸಿಗುವಂತಾಗಬೇಕು
ಕ್ರೀಡಾಸಿರಿ
ಪ್ರಸಾದ್ ಜಿ.ಎಂ
ಸಾಮಾನ್ಯವಾಗಿ ನಮ್ಮಲ್ಲಿ ಪೋಷಕರು ತಮ್ಮ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಲು ಉತ್ತೇಜಿಸುತ್ತಾರೆ, ಅದಕ್ಕೆ ಸಂಬಂಧಿಸಿ ಸಾಕಷ್ಟು ಹಣವನ್ನು ವಿನಿಯೋಗಿಸುತ್ತಾರೆ. ಆದರೆ ಕ್ರೀಡೆ, ಸಂಗೀತದಂಥ ಮಿಕ್ಕ ಕ್ಷೇತ್ರಗಳ ಕುರಿತು ಇಂಥ ವರ್ತನೆ ಹೊಮ್ಮುವುದು ವಿರಳವೇ. ಇಂದಿಗೂ ಗ್ರಾಮೀಣ ಭಾಗದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಆದರೆ ವ್ಯವಸ್ಥೆಯ ನಿರ್ಲಕ್ಷ್ಯದಿಂದ ಅವರು ಮುಖ್ಯವಾಹಿಗೆ ಬರಲಾಗುತ್ತಿಲ್ಲ.
ಇತ್ತೀಚೆಗೆ ಚೀನಾದ ಹಾಂಗ್‌ಝೌ ನಗರದಲ್ಲಿ ಪ್ರತಿಷ್ಠಿತ ೧೯ನೇ ಏಷ್ಯನ್ ಕ್ರೀಡಾಕೂಟ ಮುಕ್ತಾಯವಾಯಿತು. ‘ಇಸ್ ಬಾರ್ ಸೌ ಪಾರ್’ (ಈ ಸಲ ನೂರರ ಆಚೆ) ಎಂಬ ಘೋಷವಾಕ್ಯದೊಂದಿಗೆ ತೆರಳಿದ ಭಾರತದ ೬೫೫ ಕ್ರೀಡಾಪಟುಗಳು ಈ ಘೋಷವಾಕ್ಯವನ್ನು ಹುಸಿಗೊಳಿಸಲಿಲ್ಲ. ೨೦೧೮ರಲ್ಲಿ ಇಂಡೋ ನೇಷ್ಯಾದ ಜಕಾರ್ತಾ ಮತ್ತು ಪಾಲೆಂಬಾಂಗ್ ನಗರಗಳಲ್ಲಿ ಜರುಗಿದ ೧೮ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ೫೭೨ ಕ್ರೀಡಾಪಟುಗಳು ಭಾಗವಹಿಸಿದ್ದರು; ಭಾರತ ೭೦ಪದಕಗಳನ್ನು ಜಯಿಸುವಲ್ಲಿ ಶಕ್ತವಾಗಿತ್ತು ಮತ್ತು ಅದು ಅಲ್ಲಿಯವರೆಗಿನ ಉತ್ತಮ ಸಾಧನೆಯಾಗಿತ್ತು. ಆದರೆ ಈ ಬಾರಿಹಿಂದೆಂದಿಗಿಂತಲೂ ಉತ್ತಮ ಸಾಧನೆ ಮಾಡಿದ ಭಾರತ ಇದೇ ಮೊದಲ ಬಾರಿಗೆ ಶತಕ ಬಾರಿಸಿ ೧೦೭ ಪದಕಗಳನ್ನು ಜಯಿಸಲು ಸಫಲವಾಯಿತು ಮತ್ತು ಪದಕ ಪಟ್ಟಿಯಲ್ಲಿ ೪ನೇ ಸ್ಥಾನ ಪಡೆಯಿತು. ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾ ಕ್ರಮವಾಗಿ ಮೊದಲ ೩ ಸ್ಥಾನಗಳನ್ನು ಪಡೆದವು.
ಭಾರತ ಮತ್ತು ಏಷ್ಯನ್ ಕ್ರೀಡಾಕೂಟ:ಏಷ್ಯನ್ ಕ್ರೀಡಾಕೂಟವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ೪ ವರ್ಷಕ್ಕೊಮ್ಮೆ ಆಯೋಜಿಸುತ್ತದೆ. ಈ ಕಾರಣದಿಂದಾಗಿ ಏಷ್ಯನ್ ಕ್ರೀಡಾಕೂಟಕ್ಕೆ ಒಲಿಂಪಿಕ್ಸ್ ಕ್ರೀಡಾಕೂಟದಷ್ಟೇ ಮಹತ್ವ ಇದೆ. ೧೯೫೧ರಲ್ಲಿ ಮೊದಲ ಬಾರಿಗೆ ನವದೆಹಲಿಯಲ್ಲಿ ಏಷ್ಯನ್ಕ್ರೀಡಾಕೂಟ ನಡೆಯಿತು. ಆಗ ಭಾರತದ ೧೫೧ ಕ್ರೀಡಾಪಟುಗಳು ಭಾಗವಹಿಸಿ ೫೧ ಪದಕಗಳನ್ನು ಗೆಲ್ಲುವ ಮೂಲಕ ದೇಶ ೨ನೇ ಸ್ಥಾನ ಪಡೆದಿತ್ತು. ನಂತರದ ಏಷ್ಯನ್ ಕ್ರೀಡಾಕೂಟಗಳಲ್ಲಿ ಭಾರತದ ಸಾಧನೆ ಸಾಕಷ್ಟು ಏರಿಳಿತಗಳನ್ನು ಕಂಡಿತು.
ಮತ್ತೆ ಎರಡನೆಯ ಬಾರಿಗೆ ೧೯೮೨ರಲ್ಲಿ ೯ನೇ ಏಷ್ಯನ್ ಕ್ರೀಡಾಕೂಟದ ಆತಿಥ್ಯ ವಹಿಸಿದ ಭಾರತ ೫೭ ಪದಕಗಳನ್ನು ಜಯಿಸುವ ಮೂಲಕ ೫ನೇ ಸ್ಥಾನ ಪಡೆದಿತ್ತು. ೧೯೫೧-೧೯೭೮ ರವರೆಗಿನ ಕ್ರೀಡಾಕೂಟಗಳಲ್ಲಿ ಜಪಾನ್ ಪಾರುಪತ್ಯ ಸಾಽಸಿತ್ತು. ೧೯೬೬ರಲ್ಲಿ ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ನಡೆದ ೫ನೇ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ನೆರೆಯ ಚೀನಾ ಭಾಗವಹಿಸಿತ್ತು. ಒಟ್ಟು ೩೦೬ ಕ್ರೀಡಾಪಟುಗಳನ್ನೊಳಗೊಂಡ ಚೀನಾ ತಂಡವು ೧೯ ಪದಕಗಳನ್ನು ಜಯಿಸುವ ಮೂಲಕ ೮ನೇ ಸ್ಥಾನ ಪಡೆಯಿತು. ೧೯೬೬ರಿಂದ ಒಂದೊಂದೇ ಹೆಜ್ಜೆ ಇಟ್ಟ ಚೀನಾ ೧೯೭೮ರಲ್ಲಿ ನಡೆದ ೮ನೇ ಕ್ರೀಡಾಕೂಟದಲ್ಲಿ ೨ನೇಸ್ಥಾನ ಪಡೆಯಿತು.
೧೯೮೨ರಲ್ಲಿ ನವದೆಹಲಿಯಲ್ಲಿ ಜರುಗಿದ ೯ನೇ ಕ್ರೀಡಾಕೂಟದಿಂದ ಇತ್ತೀಚೆಗೆ ಮುಕ್ತಾಯಗೊಂಡ ೧೯ನೇ ಕ್ರೀಡಾಕೂಟದವರೆಗೂ ಚೀನಾ ಪದಕ  ಗಳಿಕೆ ಯಲ್ಲಿ ಪಾರುಪತ್ಯ ಸಾಧಿಸುತ್ತಲೇ ಬರುತ್ತಿದೆ.
ಸಾಧನೆಗೆ ಪ್ರೋತ್ಸಾಹ ಅಗತ್ಯ:ಈ ಬಾರಿಯ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿದ ಪುರುಷರ ಹಾಕಿ ತಂಡ ಚಿನ್ನದ ಪದಕ ಗೆದ್ದ ಸಂದರ್ಭದಲ್ಲಿ ಒಡಿಶಾ ಸರಕಾರ ಪ್ರತಿ ಆಟಗಾರನಿಗೆ ೫ ಲಕ್ಷ ರು. ನೀಡಿ ಗೌರವಿಸಿದೆ. ಜಾಗತಿಕ ಮಟ್ಟದ ಪ್ರಮುಖ ಕ್ರೀಡಾಕೂಟಗಳಲ್ಲಿ ಪದಕ ಜಯಿಸಿ ಸಾಧನೆ ಮಾಡಿದವ ರಿಗೆ ಒಡಿಶಾ ಸರಕಾರ ಈ ರೀತಿ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿರುವುದು ಮಾದರಿ ನಡೆ. ಇಂಥ ಪ್ರೋತ್ಸಾಹದಿಂದ ಆಟಗಾರರ ಆತ್ಮಸ್ಥೈರ್ಯ ಹೆಚ್ಚುತ್ತದೆ ಹಾಗೂ ಇನ್ನಷ್ಟು ಸಾಧನೆ ಮಾಡಲು ಪ್ರೇರಣೆ ಸಿಗುತ್ತದೆ. ಜಾಗತಿಕ ಮಟ್ಟದ ಕ್ರೀಡಾಕೂಟಗಳಲ್ಲಿ ಕರ್ನಾಟಕದ ಕ್ರೀಡಾಪಟು ಗಳ ಪ್ರಾತಿನಿಧ್ಯ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆಯೇ. ಇಂಥ ಸಂದರ್ಭದಲ್ಲಿ, ಹಂಗರಿಯ ಬುಡಾಪೆಸ್ಟ್‌ನಲ್ಲಿ ಜರುಗಿದ ೨೦೨೩ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ ಷಿಪ್ಸ್‌ನ ಜಾವೆಲಿನ್ ಎಸೆತ ಸ್ಪರ್ಧೆಯ ಫೈನಲ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಭಾರತದ ನೀರಜ್ ಚೋಪ್ರಾ, ಕಿಶೋರ್ ಕುಮಾರ್ ಜೆನಾ ಹಾಗೂ ಕರ್ನಾಟಕ ದ ಹಾಸನದ ಹುಡುಗ ಡಿ.ಪಿ. ಮನು ಭಾಗವಹಿಸಿ, ಮೂವರೂ ಅಗ್ರ ಆರರಲ್ಲಿ ಸ್ಥಾನ ಪಡೆದರು.
ಭಾರತದ ಪಾಲಿಗೆ ಈ ಸಾಧನೆ ವಿಶೇಷ ಎನ್ನಬಹುದು. ಆದರೆ ಕರ್ನಾಟಕದವರಾದ ಡಿ.ಪಿ. ಮನು ಅವರನ್ನು ಸನ್ಮಾನಿಸುವುದಾಗಲಿ, ಕನಿಷ್ಠ ಪಕ್ಷ ವೈಯುಕ್ತಿಕವಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ತಿಳಿಸುವಷ್ಟು ಪುರುಸೊತ್ತು ನಮ್ಮ ಆಳುಗರಿಗೆ ಇರಲಿಲ್ಲ ಎಂಬುದು ದುರ್ದೈವದ ಸಂಗತಿ. ಒಡಿಶಾ, ಪಂಜಾಬ್, ಹರಿಯಾಣ ಸೇರಿ ಬೆರಳೆಣಿಕೆಯ ರಾಜ್ಯಗಳು ಜಾಗತಿಕ ಮಟ್ಟದ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳನ್ನುಪ್ರೋತ್ಸಾಹಿಸಿ, ಸನ್ಮಾನಿಸುತ್ತವೆ. ಕ್ರೀಡಾಪಟುಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಇನ್ನಷ್ಟು ಪ್ರೋತ್ಸಾಹಿಸಿದರೆ, ಸಾಧನೆ ಮಾಡಲು ಅವರಿಗೆ ಇನ್ನಷ್ಟು ಉತ್ತೇಜನ ಸಿಗುತ್ತದೆ, ಅಲ್ಲವೇ? ಕೇಂದ್ರ ಸರಕಾರವು ಕ್ರೀಡೆಗಳ ಮತ್ತು ಕ್ರೀಡಾಪಟುಗಳ ಸಾಮರ್ಥ್ಯ ವರ್ಧನೆಗೆ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟುಯೋಜನೆಗಳನ್ನು ಪರಿಚಯಿಸಿದೆ.
ಕೇಂದ್ರ ಸರಕಾರದ ಯುವಜನ ಸಬಲೀಕರಣ ಮತ್ತು ಕ್ರೀಡಾ ಮಂತ್ರಾಲಯದಡಿ ಕಾರ್ಯನಿರ್ವಹಿಸುವ ಭಾರತ ಕ್ರೀಡಾ ಪ್ರಾಧಿಕಾರ ದೇಶದಾದ್ಯಂತ ೨೭೩ಕೇಂದ್ರಗಳನ್ನು ತೆರೆದು ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ನೀಡುತ್ತಿದೆ. ಆದರೆ ಗುಣಮಟ್ಟದ ಇನ್ನಷ್ಟು ತರಬೇತಿ ಕೇಂದ್ರ ಗಳನ್ನು ತೆರೆಯಬೇಕು. ಪ್ರಮುಖ ಕ್ರೀಡಾ ಯೋಜನೆಗಳಾದ ರಾಷ್ಟ್ರೀಯ ಕ್ರೀಡಾ ಪ್ರತಿಭಾ ಸ್ಪರ್ಧೆ ಯೋಜನೆ, ಫಿಟ್ ಇಂಡಿಯಾ ಮೂವ್‌ಮೆಂಟ್, ಖೇಲೋ ಇಂಡಿಯಾ ಸ್ಪೆಷಲ್ ಏರಿಯಾ ಗೇಮ್ ಸ್ಕೀಮ್ ಮತ್ತು ಟಾರ್ಗೆಟ್ ಒಲಿಂಪಿಕ್ ಪೋಡಿಯಮ್ ಸ್ಕೀಮ್ (ಟಾಪ್ಸ್) ನಿಂದಾಗಿ ನಮ್ಮ ಕ್ರೀಡಾಪಟುಗಳು ಎಲ್ಲಾ ಅಡೆ-ತಡೆಗಳನ್ನು ಮೀರಿ ನಿಂತು ಉತ್ತಮ ಸಾಧನೆ ಮಾಡುತ್ತಿದ್ದಾರೆ.
೨೦೨೩-೨೪ರ ಕೇಂದ್ರ ಹಾಗೂ ರಾಜ್ಯ ಸರರ್ಕಾರಗಳ ಆಯವ್ಯಯದ ಒಟ್ಟು ಗಾತ್ರ ಕ್ರಮವಾಗಿ ೪೩,೦೩,೦೯೭ ಕೋಟಿ ರು. ಮತ್ತು ೩,೦೫,೩೦೬ ಕೋಟಿ ರು. ಇವೆ. ಆದರೆ ಇವೆರಡೂ, ಕ್ರೀಡಾಕ್ಷೇತ್ರ ಹಾಗೂ ಕ್ರೀಡಾಪಟುಗಳನ್ನು ಉತ್ತೇಜಿಸಲು ಮೀಸಲಿರಿಸಿದ ಮೊತ್ತ ಕ್ರಮವಾಗಿ ೩,೩೯೭.೩೨ ಕೋಟಿ (ಶೇ.೦.೦೭ರಷ್ಟು) ಹಾಗೂ ೧೨೮ ಕೋಟಿ ರು.ಗಳು (ಶೇ. ೦.೦೪ರಷ್ಟು). ನೆರೆಯ ಚೀನಾ, ಅಮೆರಿಕ, ಐರೋಪ್ಯ ಒಕ್ಕೂಟ ಸೇರಿದಂತೆ ಹಲವು ದೇಶಗಳಲ್ಲಿ ಕ್ರೀಡೆಗಳಿಗೆ, ಕ್ರೀಡಾಪಟುಗಳಿಗೆ ಉತ್ತೇಜನ ನೀಡಿ ಸಾಮರ್ಥ್ಯ ವೃದ್ಧಿಸಲು ಗಣನೀಯ ಪಾಲನ್ನು ಮೀಸಲಿಡಲಾಗುತ್ತದೆ ಮತ್ತು ಉತ್ತಮ ಮೂಲಸೌಕರ್ಯ, ತರಬೇತಿ ನೀಡಲಾಗುತ್ತದೆ. ಇಂಥದೇ ಕೆಲಸಗಳು ನಮ್ಮಲ್ಲೂ ಆಗಬೇಕು.
ಸಾಮಾನ್ಯವಾಗಿ ನಮ್ಮಲ್ಲಿ ಪೋಷಕರು ತಮ್ಮ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಲು, ನೆಲೆಯೂರಲು ಉತ್ತೇಜಿಸುತ್ತಾರೆ ಮತ್ತು ಅದಕ್ಕೆ ಸಂಬಂಧಿಸಿ ಸಾಕಷ್ಟು ಆರ್ಥಿಕ ಮೂಲವನ್ನು ವಿನಿಯೋಗಿಸುತ್ತಾರೆ; ಆದರೆ ಕ್ರೀಡೆ, ಸಂಗೀತ ಅಥವಾ ಇನ್ಯಾವುದೇ ಕ್ಷೇತ್ರದಲ್ಲಿ ಮಕ್ಕಳು ಸಾಧನೆ ಮಾಡಲಿ ಎಂದು ಅವರು ಸಂಕಲ್ಪಿಸುವುದಿಲ್ಲ. ಇಂದಿಗೂ ಗ್ರಾಮೀಣ ಭಾಗದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಆದರೆ ವ್ಯವಸ್ಥೆಯ ನಿರ್ಲಕ್ಷ್ಯದಿಂದ ಆ ಪ್ರತಿಭೆಗಳು ಮುಖ್ಯವಾಹಿಗೆ ಬರಲಾಗುತ್ತಿಲ್ಲ.
ಭಾರತವು ಒಕ್ಕೂಟ ವ್ಯವಸ್ಥೆಯ ದೇಶವಾದ್ದರಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕ್ರೀಡಾಕ್ಷೇತ್ರವನ್ನು ಇನ್ನಷ್ಟು ಪ್ರೋತ್ಸಾಹಿಸಬೇಕು. ಪ್ರತಿಭೆಗಳನ್ನು ಶೋಧಿಸಬೇಕು. ಕನಿಷ್ಠ ಪಕ್ಷ ಜಿಲ್ಲಾ ಕೇಂದ್ರಗಳಲ್ಲಿ ಸುಸಜ್ಜಿತ ಕ್ರೀಡಾಂಗಣ, ಕ್ರೀಡಾಪರಿಕರಗಳು, ಮೂಲಭೂತ ಸೌಲಭ್ಯ, ತರಬೇತುದಾರರನ್ನು ಒದಗಿಸಬೇಕು. ಇಂದಿಗೂ ಎಷ್ಟೋ ಪ್ರತಿಭೆಗಳು ಸೂಕ್ತ ಸೌಲಭ್ಯ, ತರಬೇತಿಯಿಲ್ಲದೆ ನೇಪಥ್ಯಕ್ಕೆ ಸರಿದಿದ್ದಾರೆ.
ಎಲ್ಲೆ ಮೀರಿದರೆ ಸಾಧನೆ:ತಮಿಳುನಾಡಿನ ಗ್ರ್ಯಾಂಡ್ ಮಾಸ್ಟರ್ ೧೮ ವರ್ಷದ ಆರ್ .ಪ್ರಜ್ಞಾನಂದ ಎಲ್ಲಾ ಅಡೆತಡೆಗಳನ್ನು ಮೀರಿ ನಿಂತು ಭಾರತ ಚೆಸ್ ನ ಯುವಪ್ರತಿಭೆಯಾಗಿ ಮೂಡಿಬಂದಿದ್ದಾರೆ. ಅತಿಕಿರಿಯ ವಯಸ್ಸಿಗೆ ಗ್ರ್ಯಾಂಡ್ ಮಾಸ್ಟರ್ ಆದ ವಿಶ್ವದ ೨ನೇ ಪ್ರತಿಭೆ ಇವರು. ೫ ಬಾರಿಯ ವಿಶ್ವ ಚಾಂಪಿಯನ್ ನಾರ್ವೆಯ ಗ್ರ್ಯಾಂಡ್ ಮಾಸ್ಟರ್ ಮ್ಯಾಗ್ನಸ್ ಕಾರ್ಲ್‌ಸನ್ ಸೇರಿದಂತೆ ವಿಶ್ವ ಚೆಸ್‌ನ ಪ್ರಮುಖ ಆಟಗಾರರನ್ನು ಸೋಲಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅದಕ್ಕೆಸಹಕಾರ ನೀಡಿದ್ದು ಅವರ ತಾಯಿ ನಾಗಲಕ್ಷ್ಮಿ. ಮಗನ ಚೆಸ್ ಪಯಣ ಎಲ್ಲೇ ಇದ್ದರೂ ಪ್ರಜ್ಞಾನಂದರ ಜತೆ ತಾಯಿ ಇದ್ದೇ ಇರುತ್ತಾರೆ.
ಉತ್ತರ ಪ್ರದೇಶದ ಬಡ ಕುಟುಂಬದಿಂದ ಮೂಡಿಬಂದ ಪ್ರತಿಭೆ ಯಶಸ್ವಿ ಜೈಸ್ವಾಲ್. ಕ್ರಿಕೆಟ್ ಆಟವನ್ನೇ ತನ್ನ ಉಸಿರಾಗಿಸಿಕೊಂಡಿದ್ದ ವರು ೧೦ರ ಹರೆಯದಲ್ಲೇ ಕ್ರಿಕೆಟ್ ತರಬೇತಿ ಪಡೆಯಲು ಮುಂಬೈನ ದಾದರ್‌ನಲ್ಲಿರುವ ಅಜಾದ್ ಮೈದಾನಕ್ಕೆ ಬಂದರು. ಬದುಕಿನ ಬಂಡಿ ಸಾಗಿಸಲು ಡೈರಿ ಶಾಪ್‌ನಲ್ಲಿ ಕೆಲಸಕ್ಕೂ ಸೇರಿಕೊಂಡರು. ಆದರೆ ಕ್ರಿಕೆಟ್ ಅಭ್ಯಾಸಕ್ಕೆ ಒತ್ತುನೀಡಿದ ಫಲವಾಗಿ ಸರಿಯಾಗಿ ಕೆಲಸ ಮಾಡಲಾಗುತ್ತಿರಲಿಲ್ಲ. ಅದೇ ಸಂದರ್ಭದಲ್ಲಿ ಡೈರಿ ಶಾಪ್‌ನ ಮಾಲೀಕ ಅವರನ್ನು ಕೆಲಸದಿಂದ ತೆಗೆದುಹಾಕಿ ದರು. ಈ ವೇಳೆ ಉಳಿದುಕೊಳ್ಳಲು ಆಸರೆಯೂ ಇಲ್ಲದೆ,ಬದುPವ ಅನಿವಾರ್ಯಕ್ಕಾಗಿ ಅಜಾದ್ ಮೈದಾನದ ಟೆಂಟ್ ಗಳಲ್ಲಿ ಮಲಗುತ್ತಾ, ಹೊಟ್ಟೆಪಾಡಿಗಾಗಿ ಪಾನಿಪುರಿ ಮಾರಿ ಜೀವನ ಸಾಗಿಸಿದವರು ಯಶಸ್ವಿ ಜೈಸ್ವಾಲ್. ಇಂದು ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದಾರೆ ಈತ. ಸಾಧನೆ ಮಾಡಲು ಸಂಕಲ್ಪವೊಂದಿದ್ದರೆ ಸಾಕು ಎಂದು ತೋರಿಸಿಕೊಟ್ಟು ಉದಾಹರಣೆಯಾಗಿ ನಿಂತವರು ಈ ಎರಡು ಪ್ರತಿಭೆಗಳು.
ಮುಂದಿನ ದಾರಿ:ನಮ್ಮ ದೇಶದಲ್ಲಿ ಕ್ರೀಡಾಭಿಮಾನಿಗಳು ಕ್ರಿಕೆಟ್‌ಗೆ ಕೊಟ್ಟ ಪ್ರಾಮುಖ್ಯ, ಕ್ರಿಕೆಟ್ ಆಟಗಾರರಿಗೆ ತೋರಿದ ಅಭಿಮಾನವನ್ನು ಇನ್ನಾವುದೇ ಕ್ರೀಡೆಗಳಿಗೆ, ಕ್ರೀಡಾಪಟುಗಳಿಗೆ ತೋರಿಸಿದ ಉದಾಹರಣೆ ಇಲ್ಲ. ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ, ಒಲಿಪಿಂಕ್ಸ್‌ನ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಬಾರಿಗೆ ಚಿನ್ನದ ಪದಕ ತಂದುಕೊಟ್ಟ ನೀರಜ್ ಚೋಪ್ರಾ, ಕಿಶೋರ್ ಕುಮಾರ್ ಜೆನಾ, ಕರ್ನಾಟಕದ ಡಿ.ಪಿ. ಮನು, ೪೩ನೇ ವಯಸ್ಸಿನಲ್ಲೂ ಏಷ್ಯನ್ಗೇಮ್ಸ್‌ನ ಟೆನಿಸ್ ವಿಭಾಗದ ಮಿಶ್ರ ಡಬಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ರೋಹನ್ ಬೋಪಣ್ಣ, ಗಾಲ್‌ನಲ್ಲಿ ರಜತ ಪದಕ ಜಯಿಸಿದ ಕರ್ನಾಟಕದ ಅದಿತಿ ಅಶೋಕ್, ಕೋವಿಡ್ ಸಮಯದಲ್ಲಿ ಪತಿಯನ್ನು ಕಳೆದುಕೊಂಡರೂ ಧೃತಿಗೆಡದೆ ಭಾರತ ಮಹಿಳಾ ಕಬ್ಬಡಿ ತಂಡಕ್ಕೆ ಮಾರ್ಗದರ್ಶನ ನೀಡಿ ಈ ಬಾರಿ ಏಷ್ಯನ್ ಗೇಮ್ಸ್ ನಲ್ಲಿ ತಂಡವು ಚಿನ್ನದ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ತೇಜಸ್ವಿನಿ ಬಾಯಿ ಸೇರಿದಂತೆ ಅಸಂಖ್ಯಾತ ಕ್ರೀಡಾತಾರೆಗಳುನಮ್ಮ ದೇಶದ ಎಷ್ಟೋ ಮಂದಿ ಕ್ರೀಡಾಭಿಮಾನಿಗಳಿಗೆ ಕಾಣಿಸುವುದಿಲ್ಲ.
ಇನ್ನಾದರೂ ಅವರು ಎಲ್ಲಾ ಕ್ರೀಡೆಗಳಿಗೆ ಅಭಿಮಾನ ತೋರುವಂತಾಗಲಿ, ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿನ ಭಾರತದ ಸಾಧನೆಯು ೨೦೨೪ರಲ್ಲಿ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಇನ್ನಷ್ಟು ಸಾಧನೆ ಮಾಡಲು ಉತ್ತೇಜನ ನೀಡಲಿ. ಮುಂದಿನ ಹಲವು ವರ್ಷಗಳಲ್ಲಿ ನಮ್ಮ ದೇಶವು ಜಗತ್ತಿನ ಶ್ರೇಷ್ಠ ಕ್ರೀಡಾಪಟುಗಳನ್ನು ಹೊಂಡುವಂತಾಗಲಿ ಎಂದು ಆಶಿಸೋಣ.
(ಲೇಖಕರು ಜೆಎಸ್‌ಎಸ್ ಮಹಾವಿದ್ಯಾಪೀಠದಲ್ಲಿ ಪ್ರೂಫ್ರೀಡರ್)