ಸಮಕಾಲೀನ ಆತಂಕಗಳು, ನಮ್ಮ ಜವಾಬ್ದಾರಿ
ಮನಮಂಥನ
ಮಹಾದೇವ ಬಸರಕೋಡ
ವೈಜ್ಞಾನಿಕವಾಗಿ ಸಾಕಷ್ಟು ಮುಂದುವರಿದ ಕಾಲಘಟ್ಟದಲ್ಲಿ ಬದುಕುತ್ತಿರುವ ನಾವೆಲ್ಲರೂ ಏಕಕಾಲಕ್ಕೆ ಸಾರ್ವತ್ರಿಕವಾದ ಹತ್ತು ಹಲವು ಸಮಸ್ಯೆಗಳನ್ನು ಮಾತ್ರವಲ್ಲದೇ ವೈಯಕ್ತಿಕ ಸಮಸ್ಯೆಗಳನ್ನು ಕೂಡ ಎದುರಿಸುತ್ತಿದ್ದೇವೆ. ಸಮಕಾಲೀನ ಜಗತ್ತು ಅತ್ಯಂತ ಕುರೂಪವೂ, ಅವೈಚಾರಿಕವೂ ಆಗಿ ರೂಪಗೊಳ್ಳುತ್ತಿದೆ.ತೀರ ಅಸ್ವಸ್ಥ ಪರಿಸ್ಥಿತಿಯಲ್ಲಿ ನಮ್ಮೆಲ್ಲರ ಬದುಕು ಸಾಗುತ್ತಿದೆ.
ದಾರಿದ್ರ್ಯ, ಭಯೋತ್ಪಾದನೆ, ಭ್ರಷ್ಟಾಚಾರ, ಪರಿಸರ ಮಾಲಿನ್ಯದ ಸಮಸ್ಯೆಗಳ ಕಬಂಧ ಬಾಹುಗಳ ಹಿಡಿತ ನೀರಿಕ್ಷೆಗೂ ಮೀರಿ ಬಿಗಿಗೊಳ್ಳುತ್ತಿದೆ. ಧಾರ್ಮಿಕಮೂಲಭೂತವಾದಿಗಳ ಅಬ್ಬರ ಸಹಬಾಳ್ವೆಯ ಕನಸಿಗೆ ಕೊಳ್ಳಿ ಇಡುತ್ತಿದೆ. ಪಟ್ಟಭದ್ರ ಹಿತಾಸಕ್ತಿಗಳ ಪಿತೂರಿಗಳು ಸ್ವಸ್ಥ ಸಮಾಜ ಮತ್ತು ಉತ್ತಮ ಬದುಕಿನ ನಿರ್ಮಾಣಕ್ಕೆ ತಳಹದಿಯಾಗಿದ್ದ ಸಾರ್ವತ್ರಿಕವಾದ ನಾಗರಿಕತೆಯ ಮೌಲ್ಯಗಳೆಲ್ಲವನ್ನು ಸಡಿಲಗೊಳಿಸುತ್ತಿವೆ. ಬಂಡವಾಳಶಾಹಿಗಳ ಒಳಸಂಚುಗಳು ಜನಸಾಮಾನ್ಯರ ನಿದ್ದೆಯನ್ನೇ ಕಸಿದುಕೊಂಡಿವೆ.
ಸಾಕ್ಷರತೆಯ ಪ್ರಮಾಣ ಹೆಚ್ಚಿದಂತೆ ತೋರಿದರೂ ವಾಸ್ತವದಲ್ಲಿ ಅನಕ್ಷರತೆಯ ಸಮಸ್ಯೆಯೂ ನಮ್ಮನ್ನು ಬೆಂಬಿಡದೇ ಕಾಡುತ್ತಿದೆ. ಮಹಿಳೆಯ ಮೇಲಿನ ಅತ್ಯಾಚಾರ, ಅನಾಚಾರಗಳಿಗೆ ಕೊನೆಯೆ ಇಲ್ಲದಂತಾಗಿದೆ. ಒಂದೊಮ್ಮೆ ನಮ್ಮೆಲ್ಲರನ್ನೂ ಹಿಡಿದು ಕೂಡಿಸುವ ಸಂಯೋಜಕ ಶಕ್ತಿಯ ಪ್ರತೀಕವಾಗಿದ್ದ ದೇವರು,ಧರ್ಮಗಳು, ನಮ್ಮ ನಡುವೆ ದೊಡ್ಡದಾದ ಕಂದಕವನ್ನು ನಿರ್ಮಾಣ ಮಾಡುತ್ತಿವೆ. ತರುಣ ಜನಾಂಗ ಶಕ್ತಿ ನಿಶ್ಚಿತವಾದ ಪ್ರಜ್ಞೆಯಲ್ಲಿ ಬೇರೂರದೇ ಹಲವು ಹತ್ತುಪ್ರಭಾವಗಳಿಗೆ ಒಳಗಾಗಿ ಅತ್ಯಂತ ಅಪಾಯಕಾರಿಯಾದಸ್ಪೋಟಕವಾಗಿ ಪರಿವರ್ತಿತವಾಗುತ್ತಿದೆ. ಶೈಕ್ಷಣಿಕ ವ್ಯವಸ್ಥೆ ಇನ್ನಿಲ್ಲದಂತೆ ವ್ಯಾಪಾರೀಕರಣಗೊಂಡಿದೆ. ಹಣ ಸಂಪಾದನೆಯೇ ಶಿಕ್ಷಣದ ಪರಮಾರ್ಥ ಎನ್ನುವ ನಿಲುವಿನಲ್ಲಿ ಬಂಧಿಯಾಗಿದೆ.
ವಾಣಿಜ್ಯ ಮಾಧ್ಯಮಗಳು ಕೂಡ ತಮ್ಮ ಮೂಲ ಧ್ಯೇಯದಿಂದ ಕೊಂಚ ಹಿಂದಕ್ಕೆ ಸರಿದು ರೋಚಕ ಸಂಗತಿಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತಿವೆ. ಮಹತ್ತರವಾದ ಸಾಮಾಜಿಕ ಪರಿವರ್ತನೆಯನ್ನು ತರಬಲ್ಲ ಅವುಗಳು ಕೇವಲ ಮನರಂಜನಾಸಂಸ್ಕೃತಿಯನ್ನು ಬಿತ್ತಿ ಬೆಳೆಯುತ್ತಿವೆ. ಇದರಿಂದಾಗಿ ನೈತಿಕತೆ ಅಧಃಪಥನಕ್ಕೆ ಜಾರುತ್ತಿದೆ. ಇಂತಹ ವೈಪರಿತ್ಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದರೂ ನಾವು ಮಾತ್ರ ಕಾಲ ಕೆಟ್ಟು ಹೋಗಿದೆ, ಏನೂ ಮಾಡಲು ಸಾಧ್ಯ, ಕಾಲಾಯತಸ್ಮಯೇ ನಮಃ ಎನ್ನುತ್ತ ನಮ್ಮ ಬೇಜವಾಬ್ದಾರಿಯನ್ನು ಪ್ರದರ್ಶಿಸುತ್ತಿದ್ದೇವೆ.
ನಿಜ ಅರ್ಥದಲ್ಲಿ ನಾವು ಬದಲಾಗದೇ ಕಾಲ ಕೆಟ್ಟು ಹೋಗಿದೆ, ನಾವು ಏನು ಮಾಡಲು ಸಾಧ್ಯ? ಎಂದು ಭಾವಿಸುವುದು. ನಾವು ಒಬ್ಬೊಬ್ಬರೂ ಕೂಡ ಪ್ರಸ್ತುತಕಾಲಘಟ್ಟದ ಭಾಗವೇ ಎಂಬ ಅರಿವು ನಮ್ಮಲ್ಲಿ ಜಾಗೃತಗೊಳ್ಳದಿರುವುದು. ಇವೆಲ್ಲ ವೈಪರೀತ್ಯಗಳಿಗೆ ಬಹುಮುಖ್ಯ ನಾವೂ ಕೂಡ ಕಾರಣ ಎನ್ನುವ ಪಾಪಪ್ರಜ್ಞೆಕಾಡದಿರುವುದು ಇವೆಲ್ಲ ಸಮಸ್ಯೆಗಳಿಗೆ ಬಹುದೊಡ್ಡ ಕಾರಣವಾಗಿದೆ. ಇಂತಹ ಸಲ್ಲದ ಅಸಂಗತ ನಿಲುವುಗಳಿಂದಾಗಿಯೇ ನಾವೆಲ್ಲ ಸಮಸ್ಯೆಗಳ ಸೀಗಿಮಳೆಯಲ್ಲಿಸ್ಥಗಿತಗೊಂಡಿದ್ದೇವೆ. ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲು ಮತ್ತೆ ಮತ್ತೆ ನಾವೇ ಕಾರಣರಾಗುತ್ತಲೇ ಇದ್ದೇವೆ. ಇದಕ್ಕೆ ಸಮಾನಾಂತರದಲ್ಲಿ ಇದನ್ನೆಲ್ಲ ಅರಿತು ಕೊಂಡರೂ ಅದೇ ಅಹಿತಕರ ವಿಚಾರಗಳನ್ನು ಬಾರಿ ಬಾರಿ ನೆನಪಿಸಿಕೊಳ್ಳುತ್ತಿರುವುದು, ಮತ್ತು ಉದಾಸೀನತೆ ತೋರುತ್ತಿರುವುದು ಕೂಡ ಮತ್ತೊಂದು ಬಹುಮುಖ್ಯ ಸಂಗತಿಯಾಗಿದೆ.
ಸಂತರೊಬ್ಬರು ತಮ್ಮ ವೃದ್ಯಾಪ್ಯದ ದಿನಗಳಲ್ಲಿದ್ದರು. ಅವರ ಸಾವು ಇನ್ನೇನು ಕೆಲವೇ ದಿನಗಳು ಉಳಿದಿವೆ ಎಂಬ ಭಾವ ಮೂಡಿತು. ಅವರು ತಮ್ಮ ಶಿಷ್ಯಬಳಗವನ್ನೆಲ್ಲ ಕರೆದರು. ಅವರನ್ನೆಲ್ಲ ಕುರಿತು ಸಂತರು ನಾನು ಇನ್ನೇನು ಕೆಲವೇ ದಿನಗಳಲ್ಲಿ ಇಹಲೋಕ ಬಿಟ್ಟು ತೆರಳಲಿದ್ದೇನೆ. ನನ್ನ ಬದುಕಿನ ಕೊನೆಯ ಕ್ಷಣಗಳಲ್ಲಿ ನಾನು ಕಂಡುಕೊಂಡ ಬಹುದೊಡ್ಡ ಸತ್ಯವನ್ನು ತಮ್ಮೆದುರು ಬಿಚ್ಚಿಡಬೇಕೆಂಬ ಬಯಕೆಯಾಗುತ್ತಿದೆ. ಅದನ್ನು ಹೇಳದೇ ಹೋದರೆ ನನ್ನ ಬದುಕು ಅಪೂರ್ಣ ಎಂಬ ಕೊರಗು ಕಾಡುತ್ತಿದ್ದೆ ಎಂದರು. ಸರಿ, ಅದೇನು ಹೇಳಿ ಗುರುಗಳೇ ಎಂದರು ಶಿಷ್ಯರು ಭಾರವಾದ ಹೃದಯದಿಂದ. ನಾನು ಯುವಕನಾಗಿದ್ದಾಗ ಬಹುದೊಡ್ಡ ಕ್ರಾಂತಿಕಾರನಾಗಿದ್ದೆ.
ನನ್ನ ಯೋಚನೆಗೆ ತಕ್ಕಂತೆ ಜಗತ್ತನ್ನೆ ಬದಲಾಯಿಸಬೇಕೆಂದು ಕೊಂಡಿದ್ದೆ. ಅದಕ್ಕಾಗಿ ಏನೆಲ್ಲ ಪ್ರಯತ್ನ ಮಾಡುತ್ತಿದ್ದೆ. ದೇವರನ್ನು ಪ್ರಾರ್ಥಿಸುತ್ತಿದ್ದೆ. ಮಧ್ಯವಯಸ್ಕ  ದಾಗ ನನ್ನ ತಪ್ಪಿನ ಅರಿವಾಗಿತ್ತು. ಒಬ್ಬನನ್ನೂ ಬದಲಾಯಿಸಲು ವಿಫಲನಾಗಿದ್ದನ್ನು ನಾನು ಕಂಡುಕೊಂಡೆ. ನಂತರ ನಾನು ನನ್ನ ಸಹವಾಸ ಮಾಡುವಕೆಲವರನ್ನಾದರೂ ಬದಲಾಯಿಸಬೇಕೆಂದು ಕೊಂಡು ಮತ್ತೆ ನನ್ನ ಪ್ರಯತ್ನಗಳನ್ನು ಪ್ರಾರಂಭಿಸಿದೆ. ದೇವರನ್ನು ಪ್ರಾರ್ಥಿಸುತ್ತಿದ್ದೆ. ಅದು ವಿಫಲವಾಗುತ್ತಿದೆ ಎನ್ನುವ ಅರಿವುಮೂಡತೊಡಗಿದಾಗ ನನ್ನ ಕುಟುಂಬದ ಸದಸ್ಯರನ್ನು, ನನ್ನ ಸ್ನೇಹಿತರನ್ನಾದರೂ ಬದಲಾಯಿಸಿದರೆ ನನ್ನ ಜೀವನ ಸಾರ್ಥಕ ಎಂದುಕೊಂಡೆ. ಆದರೆ ಅದಾವುದು ನನ್ನಿಂದ ಸಾಧ್ಯವಾಗಲೇ ಇಲ್ಲ. ನನ್ನ ಕೊನೆಯ ದಿನಗಳನ್ನು ಎಣಿಸುವ ಇಂತಹ ಸಂದರ್ಭದಲ್ಲಿ ನಾನು ಬದಲಾವಣೆಯಾಬೇಕೆಂದು ನಿರ್ಧರಿಸಿದೆ.
ದೇವರನ್ನು ನನ್ನನ್ನು ನಾನು ಬದಲಾಗುವಂತೆ ಅನುಗ್ರಹಿಸು ಎಂದು ಪ್ರಾರ್ಥಿಸುತ್ತಿದ್ದೇನೆ. ನನಗೆ ನಾನು ಬದಲಾದರೆ ಜಗತ್ತೆ ಬದಲಾಗಬಲ್ಲದು ಎಂಬ ಸತ್ಯ ಈಗ ಅರಿವಾಗಿದೆ. ನನ್ನ ಜೀವನವನ್ನು ವ್ಯರ್ಥಮಾಡಿಕೊಂಡೆ ಎಂಬ ತಪ್ಪಿತಸ್ಥ ಭಾವ ಕಾಡುತ್ತಿದ್ದೆ. ಜೀವನದ ಬಹುದೊಡ್ಡ ಸಾರ್ಥಕತೆ ನನ್ನನ್ನು ನಾನು ಬದಲಾಯಿಸು ಕೊಳ್ಳುವುದಾಗಿದೆ ಎಂದರು. ಬಹುಮುಖ್ಯವಾಗಿ ನಾನೊಬ್ಬ ಬದಲಾದರೆ ಅದೆಂತು ಸಾಧ್ಯ ಎಂಬ ನಕಾರಾತ್ಮಕತೆಯಿಂದ ನಾವು ಹೊರಬೇಕಾದ ತುರ್ತಿದೆ. ನಾವು ಮೊದಲು ಬದಲಾಗಬೇಕು ಎಂಬ ಭಾವ ನಮ್ಮನ್ನು ಕಾಡಬೇಕು. ಅದು ಬಹುತೇಕ ಮಟ್ಟಿಗೆ ವ್ಯವಸ್ಥೆಯನ್ನು ಸುಧಾರಿಸಲು ಖಂಡಿತವಾಗಿಯೂ ರಹದಾರಿಯನ್ನು ಒದಗಿಸುತ್ತದೆ.
ಒಬ್ಬ ವ್ಯಕ್ತಿ ಸಂತರೊಬ್ಬರ ಹತ್ತಿರಕ್ಕೆ ಬಂದು ಕೇಳಿದ. ಸಂತರೆ, ಮಹಾವೀರರು ರಸ್ತೆಯಲ್ಲಿ ಹಾದು ಹೋಗುವಾಗ ಮುಳ್ಳುಗಳೇನಾದರೂ ನೇರವಾಗಿ ನಿಂತಿದ್ದರೆ,ಅವುಗಳು ಅವರು ಬಂದಾಗ ಮುದುಡಿಬಿಡುತ್ತಿದ್ದವಂತೆ, ಕ್ರಮೇಣ ಹೂವುಗಳಾಗಿ ಪರಿವರ್ತನೆಯಾಗುತ್ತಿದ್ದವಂತೆ. ಇದು ಹೇಗೆ ಸಾಧ್ಯ. ಮುಳ್ಳುಗಳಿಗೆ ದಾರಿಯಲ್ಲಿ ಬರುತ್ತಿರುವುದು iಹಾವೀರನೆಂದು ಗುರುತಿಸಲು ಅದು ಹೇಗೆ ಸಾಧ್ಯ? ಅಂತಹ ಪವಾಡ ಸದೃಶ್ಯ ಘಟನೆ ಜರುಗಬಹುದೇ? ಇದು ತೀರ ಅವೈಜ್ಞಾನಿಕ ಸಂಗತಿಯಾಗಿದೆ.
ಇದು ನಿಜಕ್ಕೂ ಸತ್ಯವಾದ ಸಂಗತಿಯೇ ಎಂದು ಕೇಳಿದನಂತೆ. ಸಂತರು ಇವನ ಮಾತು ಕೇಳಿ ಒಂದಷ್ಟು ನಕ್ಕು, ನೀನು ಕೇಳಿದ್ದು ಸತ್ಯವೇ ಆಗಿದೆ. ಈ ಮಾತಿನಲ್ಲಿಒಂದಷ್ಟು ಉತ್ಪ್ರೇಕ್ಷೆ ಇದೆ ಎಂದು ಮೇಲ್ನೋಟಕ್ಕೆ ಕಂಡರೂ ನಿಜ ಅರ್ಥದಲ್ಲಿ ಯಾರ ಹೃದಯದಲ್ಲಿ ಯಾವುದೇ ರೀತಿಯ ಮುಳ್ಳುಗಳು ಇರುವುದಿಲ್ಲವೋ ಅಂತಹ ವ್ಯಕ್ತಿಗೆ ಬುದಕಿನಲ್ಲಿ ಮುಳ್ಳುಗಳು ಮುದುಡುವುದು, ಹೂವಾಗಿ ಅರಳುವುದು ಸಹಜ ಅಲ್ಲವೇ ಎಂದರಂತೆ. ವಾಸ್ತವದಲ್ಲಿ ನಾವು ಅಹಿತಕರ ಘಟನೆಗಳನ್ನು ಮತ್ತೆಮತ್ತೆ ನೆನಪಿಗೆ ತಂದುಕೊಂಡಷ್ಟು ಅವುಗಳು ಘಟಿಸುವ ಸಾಧ್ಯತೆಗಳು ವಿಸ್ತರಿಸುತ್ತಲೇ ಹೋಗುತ್ತವೆ. ಉದಾಸೀನತೆ ತೋರಿದಷ್ಟು ಅದು ಪುನರಾವರ್ತನೆಗೊಳ್ಳುತ್ತದೆ.
ಸಲ್ಲದ ಇಂತಹ ಭಾವನೆಗಳು ನಿಧಾನವಾಗಿ ಬೇರೂರಿ ಆಳವಾಗಿ ಮನದಾಳಕ್ಕೆ ಇಳಿದು ನಮ್ಮಲ್ಲಿ ಕೊನೆಗೊಮ್ಮೆ ಸ್ಥಾಯಿಯಾಗಿ ಬಿಡುತ್ತದೆ. ನಾವು ಬೇಡವಾದ ಅಸಂಗತ, ಸಹ್ಯ ವಲ್ಲದ ವಿಚಾರಗಳ ಕುರಿತು ಯೋಚಿಸುವುದರ ಬದಲಾಗಿ ಒಳ್ಳೆಯದರ ಕುರಿತಾಗಿ ಯೋಚಿಸುವುದನ್ನು ರೂಢಿಸಿಕೊಳ್ಳಬೇಕು. ಹಾಗೆ ಮಾಡಿದಾಗ ಒಳ್ಳೆಯ ವಿಚಾರಗಳು ನಮ್ಮನ್ನು ಸುತ್ತುವರೆಯುತ್ತವೆ. ಕ್ರಮೇಣವಾಗಿ ಇಂತಹ ಒಳ್ಳೆಯ ಘಟನೆಗಳೇ ಆಗಾಗ ಘಟಿಸಲು ಪ್ರಾರಂಭಿಸುತ್ತವೆ. ನಾವು ಒಳ್ಳೆಯವರಾಗಲು ಪ್ರಾರಂಭಿಸಿದ ಕ್ಷಣದಿಂದಲೇ ಜಗತ್ತು ಕೂಡ ಒಳ್ಳೆಯದಾಗಿ ಪರಿವರ್ತನೆಯಾಗಲು ಪ್ರಾರಂಭಿಸುತ್ತದೆ.
ದುಃಖ, ದ್ವೇಷ, ಹಿಂಸೆಗಳನ್ನು ದೂರಕ್ಕೆ ಸರಿಸಿಬಿಡಬೇಕು. ಯಾವ ರೀತಿಯಲ್ಲಿ ಒಣಗಿದ ಎಲೆಗಳು ಮರದಿಂದ ಕೆಳಗೆ ಉರುಳಿ ಬಿಡುತ್ತವೆಯೋ ಹಾಗೆ ವ್ಯರ್ಥವಾದವುಗಳನ್ನು ನಿರ್ದಾಕ್ಷಿಣ್ಯವಾಗಿ ಕಿತ್ತೆಸೆದು ಬಿಡಬೇಕು ನಮ್ಮ ಡೊಂಕುಗಳನ್ನು ತಿದ್ದಿಕೊಳ್ಳುತ್ತ ಗಮನ ಹರಿಸಬೇಕು. ನಮ್ಮಲ್ಲಿ ಸಾಮಾಜಿಕ ಪ್ರeಯನ್ನು,ವೈಚಾರಿಕತೆಯನ್ನು, ವೈಜ್ಞಾನಿಕ ಮನೋಧರ್ಮವನ್ನು,ಮಾತ್ರವಲ್ಲದೇ ಸೇವಾ ಮನೋಧರ್ಮಗಳನ್ನು ಎಚ್ಚರಿಸುವ ಅಗತ್ಯವಿದೆ. ಸ್ವಾರ್ಥಮೂಲ ಪ್ರವೃತ್ತಿಯನ್ನುದೂರಕ್ಕೆ ಕಿತ್ತೆಸೆದು ನಮ್ಮ ಹೃದಯದಲ್ಲಿ ಮಾನವೀಯ ಗುಣಗಳನ್ನು ಪ್ರತಿಷ್ಠಾಪಿಸಿಕೊಳ್ಳಬೇಕು ಜಿ.ಎಸ್.ಶಿವರುದ್ರಪ್ಪ ಅವರ ಮಾತಿನಂತೆ ಇಲ್ಲದ ದೇವರುಗಳನ್ನುಎಲ್ಲಲ್ಲೋ ಕಲ್ಲು ಮಣ್ಣುಗಳ ಗುಡಿಯೊಳಗೆ ಹುಡುಕುವ ವ್ಯರ್ಥ ಪ್ರಯತ್ನವನ್ನು ಬಿಟ್ಟು ಇಲ್ಲಿಯೇ ಇರುವ ಪ್ರೀತಿ ಸ್ನೇಹಗಳಲ್ಲಿ ಗುರುತಿಸಬೇಕು. ನಮ್ಮ ಸುತ್ತಣಪರಿಸರದೊಂದಿಗೆ ಅಂತಃಕರುಣ ಅನುರಣಿಸುವಂತೆ ಮಾಡಬೇಕು. ನಾವು ಹೃದಯವಂತ ಮನುಷ್ಯರಾದರೆ ಖಂಡಿತವಾಗಿಯೂ ಸಮಕಾಲೀನ ಸಮಸ್ಯೆ ಗಳೆಲ್ಲವೂ ಕ್ರಮೇಣವಾಗಿ ಇಲ್ಲವಾಗುತ್ತವೆ. ಸ್ವಸ್ಥ, ಸಮೃದ್ಧ ಸಮಾಜ ನಿರ್ಮಾಣಗೊಳ್ಳುತ್ತದೆ.
(ಲೇಖಕರು ಹವ್ಯಾಸಿ ಬರಹಗಾರರು)