ನೊಬೆಲ್ ಪುರಸ್ಕೃತ ಫಾಸಿ ಮತ್ತು ಕಾರಂತರ ಸಾಹಿತ್ಯ
ವಿಚಾರ ವಿಜ್ಞಾನ
ಎಸ್.ಜಿ.ಹೆಗಡೆ
೨೦೨೩ನೇ ವರ್ಷದ ಸಾಹಿತ್ಯ ನೊಬೆಲ್ ಪುರಸ್ಕಾರವು ನಾರ್ವೆಯ ಬರಹಗಾರ ಜಾನ್ ಫಾಸಿಗೆ ಲಭಿಸಿದೆ. ಫಾಸಿ ನೀಡಿದ ಸಮಗ್ರ ಸಾಹಿತ್ಯ ಕೊಡುಗೆಯನ್ನುಪರಿಗಣಿಸಿ ಆಯ್ಕೆಯ ಪರಿಗಣನೆಯಾಯಿತೆಂದು ನೋಬಲ್ ಆಯ್ಕೆ ಮಾಡುವ ಮಂಡಳಿ ಹೇಳಿದೆ. ನಾರ್ವೆಯ ಬರಹಗಾರ ಫಾಸಿಗೆ ನೋಬಲ್ ದೊರೆತಿರುವುದು ಜಾಗತಿಕವಾಗಿ ಆದರಲ್ಲಿಯೂ ವಿಶೇಷವಾಗಿ ಉನ್ನತ ಸಾಹಿತ್ಯ ವಲಯದಲ್ಲಿ ಅನಿರೀಕ್ಷಿತವೇನೂ ಅಲ್ಲ.
ಜಾಗತಿಕವಾಗಿ ಅಷ್ಟೆಲ್ಲ ಪ್ರಚಾರದಲ್ಲಿ ಇರದಿದ್ದರೂ ಕಟ್ಟಾ ಸಾಹಿತ್ಯ ವಲಯದಲ್ಲಿ ಫಾಸಿಗೆ ನೋಬಲ್ ಸಿಗುವ ಕುರಿತು ಕಳೆದ ಕೆಲವು ವರ್ಷಗಳಿಂದ ಅಪೇಕ್ಷಿಸಲಾಗಿತ್ತು. ಫಾಸಿಯ ಆಯ್ಕೆಯನ್ನು ಘೋಷಿಸುವಾಗ ನೊಬೆಲ್ ಅಕಾಡೆಮಿಯು ಫಾಸಿ ಬರಹವು ದನಿ ಇಲ್ಲದವರಿಗೆ ದನಿ ನೀಡಿರುವ’ ಕುರಿತು ಹೇಳಿದೆ. ಫಾಸಿಗೆ ನೊಬೆಲ್ ನೀಡುವುದರಿಂದ ಫಾಸಿ ಬರಹವನ್ನು ಹೆಚ್ಚಿನ ಜನರು ಓದುವಂತಾಗಿ ದನಿಯಿಲ್ಲದವರ ದನಿಗೆ ಇನ್ನೂ ಹೆಚ್ಚಿನ ಆಲಿಕೆ ಸಿಗಬಹುದೆಂದು ಆಶಿಸಲಾಗಿದೆ. ಭಾರತೀಯ ಮೂಲದ ಬರಹಗಾರ ಸಲ್ಮಾನ್ ರಶ್ದಿ ಕೂಡ ಸಂಭಾವ್ಯರ ಪಟ್ಟಿಯಲ್ಲಿ ಈ ಸಲ ಪ್ರಮುಖರಾಗಿದ್ದರೂ ಅಂತಿಮ ತೀರ್ಮಾನದಲ್ಲಿಫಾಸಿ ಆಯ್ಕೆಯಾದರು.
ಫಾಸಿಗೆ ದಕ್ಕಿದ ಪುರಸ್ಕಾರವು ನಾರ್ವೆಗೆ ಮೊದಲನೆಯದೇನೂ ಅಲ್ಲ. ನಾರ್ವೆಗೆ ಸಿಕ್ಕಿದ ನಾಲ್ಕನೇ ನೋಬಲ್ ಮತ್ತು ಪ್ರಸ್ತುತ ಶತಮಾನದಲ್ಲಿ ನಾರ್ವೆಗೆ ಸಿಕ್ಕ ಮೊದಲನೇ ಸಾಹಿತ್ಯ ನೊಬೆಲ್. ಹಲವು ವರ್ಷಗಳಿಂದ ಫಾಸಿ ನೊಬೆಲ್ ಪುರಸ್ಕಾರದ ಸ್ಪರ್ಧಿ ಯಾದಿಯಲ್ಲಿದ್ದವರೆ. ಕಳೆದ ವರ್ಷವಷ್ಟೇ   ಇಂಗ್ಲೀಷಿಗೆ ಅನುವಾದಿಸಿದ ಫಾಸಿಯ ಕಾದಂಬರಿ ಸೆಪ್ಟಾಲೊಜಿ ೬ಮತ್ತು ೭ನೇ ಗ್ರಂಥವು ನ್ಯಾಷನಲ್ ಬುಕ್ ಅವಾರ್ಡಿಗೆ ಪರಿಗಣಿಸಲ್ಪಟ್ಟಾಗ ಫಾಸಿಗೆನೊಬೆಲ್ ಸಿಗುವ ನಿರೀಕ್ಷೆ ಇನ್ನೂ ದಟ್ಟವಾಗಿತ್ತು.
‘ನಾನು ಬದುಕಿನಿಂದ ಅರಿತ ಅತ್ಯಮೂಲ್ಯ ಪಾಠವೆಂದರೆ ನನ್ನೊಳಗಿನ ದನಿಯನ್ನು ನಾನು ಕೇಳಬೇಕೆಂಬುದು, ಏನಾಗಬಹುದು ಅನ್ನುವುದಕ್ಕಿಂತ ನನ್ನನಿದೆಯೋ ಅದಕ್ಕೆ ನಾ ಅಂಟಿರಬೇಕು. ನಿನಗೆ ನೀ ಆಪ್ತನಾಗಿರು ನಿನ್ನೊಳಗಿನ ದನಿ ಆಲಿಸಿ ನೀನು ಕಂಡ ದರ್ಶನದ ಆದಿಯಲ್ಲಿ ನಿನ್ನ ಬರಹವಿರಲಿ’. ಒಬ್ಬ ಅಪ್ರತಿಮ ಬರಹಗಾರನಾಗಿ ರೂಪುಗೊಂಡ ಮೂಲ ತತ್ವವನ್ನು ಫಾಸಿ ಹಾಗೆ ಹೇಳಿಕೊಂಡಿದ್ದು. ಫಾಸಿಯ ಮೊದಲನೆಯ ಕಾದಂಬರಿ ಪ್ರಕಟವಾದಾಗ ಅಷ್ಟೇನೂ ಒಳ್ಳೆಯ ರಿವ್ಯೂ ಇರಲಿಲ್ಲ. ಅದು ಫಾಸಿಯನ್ನು ಸಾಕಷ್ಟು ಕಾಡಿತ್ತು. ಆಗ ಧೃತಿಗೆಟ್ಟಿದ್ದರೆ ಫಾಸಿ ಮುಂದೆ ಬರೆಯುತ್ತಿರಲಿಲ್ಲ. ನಂತರದ ಬರಹಗಳು ಅದ್ಭುತ ಯಶಸ್ಸು ಕಂಡು ಅನೇಕ ಪ್ರತಿಷ್ಠಿತ ಯೂರೋಪಿಯನ್ ಪುರಸ್ಕಾರಕ್ಕೆ ಕಾರಣವಾದವು.
ತನಗೆ ಅತ್ಯಂತ ಜಪಾಪ್ರಿಯತೆಗೆ ಕಾರಣವಾದ ನಾಟಕಗಳ ಬರೆಯುವಿಕೆಯನ್ನು ಫಾಸಿ ಒಮ್ಮೆಗೇ ನಡುವೆ ನಿಲ್ಲಿಸಿಬಿಟ್ಟು ಕಾದಂಬರಿ ಮತ್ತು ಕವಿತೆಗಳ ಕಡೆ ಧ್ಯಾನ ನೀಡಿದ್ದರು. ಪ್ರತಿಕ್ರಿಯೆಯ ಕಾರಣದಿಂದ ದಿಶೆಯ ಬಗೆಯನ್ನು ನಿರ್ಧರಿಸದೆ, ಬದಲಿಸದೇ, ತನಗೆ ಸರಿ ಎನ್ನಿಸಿದ ಬರಹದ ದಾರಿ ತುಳಿಯುವ ಪ್ರಾಮುಖ್ಯತೆಯ ಕುರಿತು ಫಾಸಿ ಹೇಳಿದ್ದಿದೆ. ಒಬ್ಬ ಪ್ರತಿಷ್ಠಿತ ಬರಹಗಾರನಾಗಿ ಸಾಹಿತ್ಯ ಲೋಕಕ್ಕೆ ಅದು ಫಾಸಿಯ ಪ್ರಮುಖ ಸಂದೇಶವೆನ್ನಬಹುದು.
ಫಾಸಿ ಬರಹವು ದನಿಯಿಲ್ಲದವರಿಗೆ ದನಿಯಾದ ಕುರಿತು ನೊಬೆಲ್ ಪ್ರಶಸ್ತಿಯ ಘೋಷಣೆಯ ಸಮಯದಲ್ಲಿ ನೊಬಲ್ ಅಕಾಡೆಮಿಯ ಪರ ಹೇಳಿರುವುದು ಫಾಸಿಬರಹದ ಬಗ್ಗೆ ನೀಡಲಾದ ಸುಲಭ ಸರಳ ವ್ಯಾಖ್ಯಾನ. ಹಾಗೆ ಹೇಳಿದ್ದು ನಿಜಾರ್ಥದಲ್ಲಿ ಒಂದು ಸೂಕ್ತವಾದ ಆರಂಭಿಕ ಸೂಟಿಯೆನ್ನಬಹುದಷ್ಟೆ. ಸರಳಬರೆವಿಯುವಿಕೆಯಲ್ಲಿ ಫಾಸಿ ಅದೆಷ್ಟೋ ಕಾಲ್ಪನಿಕ ಪದರುಗಳನ್ನು ನಿರ್ಮಿಸುತ್ತಾರೆ. ದನಿಯಿಲ್ಲದಿರುವುದು ಫಾಸಿಯ ಪ್ರಕಾರ ಒಂದು ಮುನುಷ್ಯಾವಸ್ಥೆ. ಬರಹದಮೂಲಕ ನಿರ್ಮಾಣವಾಗುವ ಪದರುಗಳಲ್ಲಿ ಪಾತ್ರಗಳು ಭೂತ, ವರ್ತಮಾನ ಮತ್ತು ಭವಿಷ್ಯಗಳ ಬಗ್ಗೆ ಚಿಂತಿಸುತ್ತ ಪ್ರೀತಿ,ಅಳಿವು ಮತ್ತು ದುಃಖಗಳ ಭಾವನೆಯ ಪದರುಗಳ ಮೂಲಕ ಅಮರ ಶಾಂತಿಯನ್ನು ಅರಸುವುದಿದೆ.
ನಾರ್ವೆ ಭಾಷೆಯಲ್ಲಿ ಫಾಸಿ ಅಂದರೆ ‘ಜಲಪಾತ’. ಶಾಂತವಾಗಿ ಹರಿಯುವ ನೀರು ಒಮ್ಮೆಗೇ ಕಂತ ಕಂಡು ಧುಮುಕು ಬಿಡುವ ರೀತಿಯಲ್ಲಿ ಫಾಸಿ ಬರಹವು ಧುಮುಕುವ ಬಗೆಯು ಓದುಗರನ್ನು ಭಾವುಕ ಮತ್ತು ವೈಚಾರಿಕ ಒತ್ತಡಕ್ಕೆ ಏರಿಸಿಬಿಡುತ್ತದೆ. ಫಾಸಿ ಸಾಹಿತ್ಯವು ಸಾಕ್ಷಿಯಾಗಿ ನಿಂತು ಬಿಡುವುದಕ್ಕಿಂತ ಹೆಚ್ಚು ತೆರೆದುಕೊಳ್ಳುವಿಕೆ ಮತ್ತು ಸಂಚಯ ನದಲ್ಲಿ ಒಂದಾಗುವುದರ ಕುರಿತು ವಿಮರ್ಶೆಯಲ್ಲಿ ಹೇಳಲಾಗಿದೆ. ತನಗೆ ಅನಿಸಿದಂತೆ ಬರೆಯುವಿಕೆಯು ಒಂದು ಕೇಳುವ ಪ್ರಕ್ರಿಯೆ, ನೋಡುವುದಲ್ಲ ಎಂದು ಫಾಸಿ ಒಂದು ಸಂದರ್ಶನದಲ್ಲಿ ಹೇಳಿದ್ದಿದೆ.
೬೪ ವಯಸ್ಸಿನ ಫಾಸಿ ರಚಿಸಿದ ನಾಟಕಗಳು ಬರೀ ನಾರ್ವೆಯ ರಂಗಮಂದಿರಗಳಲ್ಲಷ್ಟೇ ಅಲ್ಲದೇ ೬೦ಕ್ಕೂ ಹೆಚ್ಚಿನ ಭಾಷೆಯಲ್ಲಿ ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡು ಸಾಕಷ್ಟು ಜನಪ್ರಿಯವಾಗಿವೆ. ೭೦ಕ್ಕೂ ಹೆಚ್ಚು ಕಾದಂಬರಿಗಳು ಐವತ್ತಕ್ಕೂ ಹೆಚ್ಚು ಭಾಷೆಗೆ  ಷಾಂತರವಾಗಿವೆ. ಪ್ರಮುಖ ನಾಟಕಕಾರನಾಗಿ,ಕಾದಂಬರಿಕಾರ ನಾಗಿ, ಕವಿತೆ , ಮಕ್ಕಳ ಕಥೆ, ಸಣ್ಣ ಕಥೆಗಳು, ಪ್ರಬಂಧಗಳೆಲ್ಲ ಪ್ರಕಾರಗಳಲ್ಲಿ ಹಲವಾರು ಶ್ರೇಷ್ಠ ಬರಹಗಳನ್ನು ಸೃಷ್ಟಿಸಿ ಮೆರೆದಿರುವ ಫಾಸಿಯನ್ನು ಆತನ ದೇಶ ನಾರ್ವೆಯು ಅತಿ ಎತ್ತರದ ಮಟ್ಟದಲ್ಲಿ ಆಗಲೇ ನೋಡಿತ್ತು.
ಫಾಸಿ ಬರಹವು ನಾರ್ವೆಯ ಮುಖ್ಯ ಎರಡು ಭಾಷೆಗಳಲ್ಲಿ ಕಡಿಮೆ ಮಾತಾಡುವ  ಎಂಬ ಭಾಷೆಯಲ್ಲಿದೆ. ನಾರ್ವೇಜಿಯನ್ ಸಾಹಿತ್ಯ ಮತ್ತು ಸಂಸ್ಕೃತಿಯ ಅತ್ಯುನ್ನತ ಸಾಧಕನಿಗೆ ನೀಡುವ ರಾಯಲ್ ಪ್ಯಾಲೇಸ್ ಆವರಣದಲ್ಲಿನ ಮನೆಯನ್ನು ನೀಡಿ ಫಾಸಿಯನ್ನು ಆದರಿಸಲಾಗಿದೆ. ಟಾಪ್ ಲಿವಿಂಗ್ಜೀನಿಯಸ್ ಜಾಗತಿಕ ಪಟ್ಟಿಯಲ್ಲಿ ಫಾಸಿಯನ್ನು   ಹೆಸರಿಸಿದೆ. ಫಾಸಿಗೆ ದೊರೆತ ನೊಬಲ್, ಬಹು ಕಾಲದಿಂದ ನಿರೀಕ್ಷಿತವಿದ್ದು ಅಚ್ಚರಿಯಾಗ ದಿರುವುದೇ ಪುರಸ್ಕಾರದ ಖ್ಯಾತಿಯ ಪ್ರತೀಕ.
ಹಾಗೆಂದು ನೊಬೆಲ್ ಪುರಸ್ಕಾರವು ಒಟ್ಟಾರೆ ವಿವಾದದ ಹೊರತಾಗಿಲ್ಲ. ನೊಬೆಲ್ ಆಯ್ಕೆಯಲ್ಲಿ ಇಂಗ್ಲೀಷ್ ಮತ್ತು ಯೂರೋಪಿಯನ್ ಬರಹಾಗಾರರನ್ನು ಹೆಚ್ಚುಗಮನದಲ್ಲಿ ತೆಗೆದುಕೊಳ್ಳುವ ಕುರಿತು ಆಗಾಗ ಟೀಕೆ ಕೇಳಿ ಬಂದಿದೆ . ಕಳೆದ ೨೦ ವರ್ಷಗಳಲ್ಲಿ ೫ ಸಾರಿ ಅಷ್ಟೇ ಉಳಿದ ವರ್ಣೀಯರನ್ನು ಸಾಹಿತ್ಯ ನೊಬೆಲ್ ಪ್ರಶಸ್ತಿಗೆ ಪರಿಗಣಿಸಿರುವ ಬಗ್ಗೆ ಟಿಪ್ಪಣಿಯಿದೆ. ಹೆಚ್ಚಿನ ನೊಬೆಲ್ ಅಮೆರಿಕ, ಯುರೋಪ್ ಮತ್ತು ಇಂಗ್ಲೆಂಡಿಗೆ ಸಂದಿರಲು ಕಾರಣಗಳಿಲ್ಲದೇ ಇಲ್ಲ. ಸರಳವಾದ ಕಾರಣವೆಂದರೆ ಸಂಶೋಧನೆಯಲ್ಲಿರುವ ತಾಕತ್ತು ಮತ್ತು ತೊಡಗಿಕೊಳ್ಳುವವರ ಸಂಖ್ಯೆ ಅಲ್ಲದೇ ಸಾಹಿತ್ಯಿಕ ವಿಚಾರದಲ್ಲಿ ಭಾಷಾಂತರದ ಕೊರತೆ.
ನೇಚರ್ ಮ್ಯಾಗಜಿನ್ ಹೇಳಿದ್ದ ಅಂಕೆ ಸಂಖ್ಯೆಯ ಪ್ರಕಾರ ಸಂಶೋಧಕ ಮತ್ತು ಕೆಲಸಗಾರರ ಅನುಪಾತವು ಭಾರತದಲ್ಲಿ ೪/೧೦೦೦೦, ಚೀನಾದಲ್ಲಿ೧೮/೧೦೦೦೦ ಇದ್ದರೆ ಅಮೆರಿಕಾ ಮತ್ತು ಇಂಗ್ಲೆಂಡಿನಲ್ಲಿ ೭೯/೧೦೦೦೦ ಇದೆ. ಮೂಲಭೂತ ಸಂಶೋಧನೆಯ ಮಟ್ಟದಲ್ಲಿ ಇರುವ ಕೊರತೆಗಳು ಮತ್ತೊಂದು ವಿಚಾರ. ಭಾರತಕ್ಕೆ ಸಂದಿರುವ ಇಲ್ಲಿನ ತನಕದ ಒಟ್ಟಾರೆ ೧೨ ನೊಬೆಲ್ಗಳಲ್ಲಿ ೫ ಭಾರತೀಯರು ಮತ್ತು ೭ ಭಾರತೀಯ ಮೂಲದವರು. ರಬಿಂದ್ರನಾಥ್ಠಾಗೋರ್ ಒಬ್ಬರೇ ಸಾಹಿತ್ಯ ನೊಬೆಲ್ ಪುರಸ್ಕೃತರು.
ಆರೋಬಿಂದೊ ಮತ್ತು ಮಹಾತ್ಮಾ ಗಾಂಽ ನೊಬೆಲ್ಲಿಗೆ ನಾಮಾಂಕಿತರಾಗಿದ್ದರೂ ಅವರಿಗೆ ಪ್ರಶಸ್ತಿ ಸಿಗದಾಯಿತು. ಜಾನ್ ಫಾಸಿಗೆ ನೊಬೆಲ್ ಸಿಕ್ಕ ವಿಚಾರದಲ್ಲಿಬರೆಯುವಾಗ ನಮ್ಮೆದುರು ದಿಟ್ಟವಾಗಿ ಬಂದು ನಿಲ್ಲುವವರು ಕನ್ನಡದ ದಿಗ್ಗಜ ಬರಹಗಾರ ಕೋಟ ಶಿವರಾಮ ಕಾರಂತರು. ಕಡಲ ತೀರದ ಭಾರ್ಗವ. ಕಾರಂತರು ಸೃಷ್ಟಿಸಿದ ಸಮಗ್ರ ಸಾಹಿತ್ಯವು ಎಷ್ಟು ಆಳವಾದದದ್ದು, ವಿಶಾಲವಾದದ್ದು ಎಂದು ಎಲ್ಲರಿಗೆ ತಿಳಿದೇ ಇದೆ. ಅವರು ಹುಟ್ಟಿದ್ದು ೧೨೧ ವರ್ಷಗಳ ಹಿಂದೆ. ಅಕ್ಟೋಬರ್ ತಿಂಗಳಲ್ಲಿಯೇ. ಕಾರಂತರು ಕಂಡ, ಪ್ರಸ್ತಾಪಿಸಿದ, ಸಂಶೋಽಸಿದ ಸಾಮಾಜಿಕ ಭಾಗವು ತೀವ್ರವಾದ ಆವಿಷ್ಕಾರದಲ್ಲಿ ತೊಡಗಿಕೊಂಡಿದ್ದು. ಅಪ್ಪಟ ಬಡತನ ಅಶಿಕ್ಷಿತ ಮತ್ತು ಅಸ್ವತಂತ್ರ ಸಮಾಜವು ಪರಿವರ್ತನೆಗೊಳಗಾದ ಪರ್ವ ಕಾಲದ್ದು. ಕಾರಂತರ ಸಾಹಿತ್ಯವು ಚಲಿಸಿದ ದಾರಿಯು ಅಷ್ಟು ಸಂಕೀರ್ಣವಾದದ್ದುಮತ್ತು ಸಂಶೋಧಕವಾಗಿದ್ದು.
ಆಡು ಮುಟ್ಟದ ಗಿಡವಿಲ್ಲ ಎಂದಂತೆ ಕಾರಂತರು ತೊಡಗಿಕೊಳ್ಳದ ಸಾಹಿತ್ಯದ ಪ್ರಕಾರಗಳಿಲ್ಲ. ಕಾರಂತರ ಮೊದಲ ಕೃತಿಯು ಕವನ ಸಂಕಲನ. ಸ್ವದೇಶಿ ಚಳವಳಿಯಲ್ಲಿ ಭಾಗಿಯಾದವರು. ಕಾರಂತರು ಬರೆದ ಸಮಗ್ರ ಸಾಹಿತ್ಯವೂ ಅನೇಕ ಪ್ರಕಾರಗಳಿಂದ ಶ್ರೀಮಂತವಾದದ್ದು. ಕಾರಂತರ ಹಾಗೆ ವೈವಿಧ್ಯಮಯ ಕೃತಿಗಳನ್ನು ರಚಿಸಿದವರು ವಿರಳ ಅನ್ನಬೇಕು.೧೪ ನಾಟಕಗಳು, ೪೫ಕ್ಕೂ ಹೆಚ್ಚು ಕಾದಂಬರಿಗಳು,೨೦೦ಕ್ಕೂ ಮಿಕ್ಕಿ ಮಕ್ಕಳ ಪುಸ್ತಕಗಳು,೯ ಆತ್ಮಕಥೆಗಳು, ಕನ್ನಡ ಶಬ್ದಕೋಶ ಅಲ್ಲದೆ ೨೦ ವೈಜ್ಞಾನಿಕ ಪುಸ್ತಕಗಳು,೩ ಕಥಾ ಸಂಕಲನಗಳು ಸಮಗ್ರತೆಯ ಭಾಗವಾಗಿವೆ. ಕಾರಂತರು ಬರೆದ ನಾಟಕಗಳು ರಂಗಮಂದಿರವನ್ನು ಶೋಭಿಸಿದ್ದಲ್ಲದೆ ಚೋಮನದುಡಿ ಕಾದಂಬರಿಯು ಚಲನ ಚಿತ್ರವಾಗಿ ಪ್ರಸಿದ್ಧಿ ಪಡೆಯಿತು.
ಚೋಮನ ದುಡಿಗೆ ರಾಷ್ಟ್ರ ಪ್ರಶಸ್ತಿ ಬಂತು. ಜಾನಪದ ಸಾಹಿತ್ಯದ ಪ್ರಕಾರವಾದ ಯಕ್ಷಗಾನವನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಒಯ್ದವರು. ಕಾರಂತರ ಬರಹಗಳು ಪೀಳಿಗೆಯಿಂದ ಪೀಳಿಗೆ ಸಾಗುವ ಅನಂತ ಭಂಡಾರ. ಕಲಾ ಕ್ಷೇತ್ರದಲ್ಲಿ ಕಾರಂತರ ನೋಟ ಅನನ್ಯವಾದದ್ದು. ಹಲವು ಪುಸ್ತಕಗಳನ್ನು ಈ ಕುರಿತು ಬರೆದಿದ್ದಲ್ಲದೆ ಚಾಲುಕ್ಯ ಶಿಲ್ಪಕಲೆಯ ಕುರಿತು ಬರೆದ ಕೃತಿ ಪ್ರಚಲಿತವಿದೆ. ಮರಳಿ ಮಣ್ಣಿಗೆ, ಬೆಟ್ಟದ ಜೀವ, ಆಳಿದ ಮೇಲೆ, ಹುಚ್ಚು ಮನಸ್ಸಿನ ಹತ್ತು ಮುಖಗಳು, ಚೋಮನ ದುಡಿ ಮುಂತಾದ ಕಾದಂಬರಿಗಳು ಎಂದೆಂದಿಗೂ ಜನಪ್ರಿಯತೆಯಲ್ಲಿರುವ ಕೃತಿಗಳು.
ಹಲವೆಂಟು ಪ್ರತಿಷ್ಠಿತ ಪುರಸ್ಕಾರಗಳು ಕಾರಂತರನ್ನು ಅರಸಿ ಬಂದಿದ್ದು ಮೂಕಜ್ಜಿಯ ಕನಸುಗಳು ಕಾದಂಬರಿಗೆ ಜ್ಞಾನಪೀಠ ದೊರಕಿರುವ ಕುರಿತು ಮತ್ತೆ ಹೇಳಬೇಕಿಲ್ಲ. ಸಾಮಾಜಿಕ, ಆರ್ಥಿಕ ಮತ್ತು ಶೆಕ್ಷಣಿಕ ಬದಲಾವಣೆಯ ಪರ್ವದಲ್ಲಿನ ಕೃತಿಗಳು ಶಾಶ್ವತ ಸಂದೇಶದ ಮತ್ತು ನೀತಿ ಕಥೆಗಳಾಗುತ್ತವೆ. ಸಾಹಿತ್ಯ ಲೋಕದ ಹೆಮ್ಮರವಾಗಿದ್ದ ದಿಗ್ಗಜ ಕಾರಂತರ ಕುರಿತು ಏನು ಹೇಳಿದರೂ ಅಸಹಜವಾದೀತು. ಅಸಭ್ಯತೆಯಾದೀತು.
ನೊಬೆಲ್ ಪುರಸ್ಕಾರದ ಕುರಿತು ಬರೆಯುವಾಗ ಇಲ್ಲಿ ಕೆಲವು ಸಂಗತಿಗಳನ್ನು ಸಂದರ್ಭಕ್ಕೆ ತಕ್ಕದಾಗಿ ಹೇಳಬೇಕಾಗಿದೆ. ಕಾರಂತರ ಕಾದಂಬರಿಗಳು ಸಾಹಿತ್ಯ ಲೋಕದ ಶ್ರೇಷ್ಠ ಬರಹಗಳೆಂದು,ಕಾಲದ ಮಿತಿ ಮೀರಿದ ಸಂಪೂರ್ಣ ಸಂಪನ್ನತೆ ಪಡೆದವೆಂದು ಹೇಳಲಾಗಿದ್ದು ಕಾರಂತರ ಸಮಗ್ರ ಸಾಹಿತ್ಯ ಸಾಧನೆಯನ್ನು ಭಾರತೀಯ ನೊಬೆಲ್ ಪುರಸ್ಕ್ರತ ಠಾರ್ಗೋ ಎತ್ತರಕ್ಕೆ ಕಾಣಲಾಗಿದೆ. ಜಾನ್ ಫಾಸಿಗೆ ಇತ್ತೀಚೆಗೆ ನೊಬೆಲ್ ಸಿಕ್ಕ ಸಂದರ್ಭದಲ್ಲಿ ನಮ್ಮ ಶಿವರಾಮ ಕಾರಂತರ ಸಮಗ್ರ ಸಾಹಿತ್ಯದ ಕುರಿತು ಉಖಿಸುವುದು ನೊಬೆಲ್ ದೃಷ್ಟಿಯಿಂದ ಸಮಯೋಚಿತ ಮತ್ತು ಸೂಕ್ತವಲ್ಲವೇ?
(ಲೇಖಕರು ಹವ್ಯಾಸಿ ಬರಹಗಾರರು)