ಏಕಕಾಲಿಕ ಚುನಾವಣೆ ಸುತ್ತ
ವಿಶ್ಲೇಷಣೆ
ರಮಾನಂದ ಶರ್ಮಾ
ಚುನಾವಣೆಗಳು ನಿಗದಿಯಂತೆ ನಡೆದಾಗಲೇ ಪ್ರಜಾಪ್ರಭುತ್ವದ ನೈಜಸತ್ವ ಮತ್ತು ಅರ್ಥ ತಿಳಿಯುತ್ತವೆ. ಶಾಲಾ- ಕಾಲೇಜುಗಳಲ್ಲಿ ರಾಜಕೀಯ ಶಾಸ್ತ್ರವನ್ನು ಬೋಧಿಸುವಾಗ, ‘ಚುನಾ ವಣೆಗಳು ಪ್ರತಿ ೫ ವರ್ಷಕ್ಕೊಮ್ಮೆ ನಡೆಯುತ್ತವೆ’ ಎಂದು ತಿಳಿಹೇಳಲಾಗುತ್ತದೆ.
ಆದರೆ, ಇಂದು ಚುನಾವಣೆಗಳು ನಿರಂತರ ಪ್ರಕ್ರಿಯೆಯಾಗಿದ್ದು, ಗ್ರಾಮ ಮತ್ತು ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ, ಮಹಾನಗರಪಾಲಿಕೆ, ವಿಧಾನಸಭೆ, ಲೋಕಸಭೆ ಹೆಸರಿನಲ್ಲಿ ಬರುತ್ತಲೇ ಇರುತ್ತವೆ. ಇದಕ್ಕೆ ಹೊರತಾಗಿ, ಜನಪ್ರತಿನಿಧಿಗಳು ರಾಜೀನಾಮೆ ನೀಡಿದಾಗ, ನಿಧನರಾದಾಗ ಅಥವಾ ಯಾವುದೋ ರಾಜಕೀಯ ಕುತಂತ್ರದಿಂದಾಗಿ ಚುನಾವಣೆಗಳು ಧುತ್ತನೆ ಎರಗುತ್ತವೆ. ಇದರಿಂದಾಗಿ ಮತದಾರರು ಮತದಾನವನ್ನು ನಿಕೃಷ್ಟವಾಗಿ ನೋಡಿಕಾಟಾಚಾರಕ್ಕೆ ಮತ ಚಲಾಯಿಸುವ ಸ್ಥಿತಿಗೆ ಬಂದಿದ್ದಾರೆ. ಇದೊಂದು ಪವಿತ್ರ ಕಾರ್ಯ ಎನ್ನುವು ದರ ಬದಲಿಗೆ ‘ಅನಿ ವಾರ್ಯ ಕರ್ಮ’ ಎಂಬ ಚಿತ್ತಸ್ಥಿತಿಗೆ ಶರಣಾಗಿ ದ್ದಾರೆ. ಇತ್ತೀಚಿನ ದಿನ ಗಳಲ್ಲಿ ಮತದಾನದ ಪ್ರಮಾಣ ತಗ್ಗಲು ಇದೂ ಕಾರಣವಿರಬಹುದು.
ನಿರಂತರ ನಡೆಯುವ ಚುನಾವಣೆಯಿಂದ ಆಡಳಿತದ ಮೇಲಾಗುವ ದುಷ್ಪರಿಣಾಮ, ಜನರಿಗಾಗುವ ಅನಾನುಕೂಲ, ದೇಶದ ಆರ್ಥಿಕತೆಯ ಮೇಲಾಗುವ ಹೊರೆ ಇತ್ಯಾದಿಗಳನ್ನು ನೋಡಿ ಸರಕಾರವು ‘ಒಂದು ದೇಶ, ಒಂದು ಚುನಾವಣೆ’ ಎಂಬ ಪ್ರಸ್ತಾವ ವನ್ನು ಮುಂದುಮಾಡಿ ಇದರ ಸಾಧಕ-ಬಾಧಕಗಳ  ಪರಿಶೀಲನೆಗೆ ಸಮಿತಿಯೊಂದನ್ನು ನೇಮಿಸಿದೆ. ಸಮಿತಿ ಈಗಾಗಲೇ ಕಾರ್ಯ ನಿರತವಾಗಿದ್ದರೂ, ಇದರಲ್ಲಿ ಸರಕಾರದ ಅಗೋಚರ ಅಜೆಂಡಾ ಇರಬಹು ದೆಂದು ಸಂಶಯಿಸಿ ಕೆಲ ವಿಪಕ್ಷಗಳು ಈ ಪ್ರಸ್ತಾವಕ್ಕೆ ಕೈಜೋಡಿಸುತ್ತಿಲ್ಲ.
ವಾಸ್ತವವಾಗಿ ಇದೇನೂ ಹೊಸ ಪರಿಕಲ್ಪನೆಯಲ್ಲ; ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ, ಇಟಲಿ, ಸ್ವೀಡನ್ ಮತ್ತು ಬೆಲ್ಜಿಯಂನಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಭಾರತದಲ್ಲಿ ೧೯೫೨ ರಲ್ಲಿ ಚುನಾವಣಾ ಪ್ರಕ್ರಿಯೆ ಶುರುವಾಗಿದ್ದು, ೧೯೫೭, ೧೯೬೨ ಮತ್ತು ೧೯೬೭ರಲ್ಲಿ ಎಲ್ಲಾ ಚುನಾವಣೆಗಳು ಒಟ್ಟಿಗೆನಡೆದಿದ್ದವು. ೧೯೬೭ ರಲ್ಲಿ ಮಧ್ಯಪ್ರದೇಶ ದಲ್ಲಿ ಜಿ.ಎನ್.ಸಿಂಗ್ ‘ಆಯಾ ರಾಂ ಗಯಾ ರಾಂ’ ಮೂಲಕ ಚುನಾಯಿತ ಸರಕಾರವನ್ನು ಉರುಳಿಸಿ ಗದ್ದುಗೆ ಹಿಡಿಯುವ ವರಸೆ ಶುರುಮಾಡಿದ ಮೇಲೆ ಈ ವ್ಯವಸ್ಥೆ ಹಳಿತಪ್ಪಿತು.
ದೇಶದ ಯಾವುದಾದರೊಂದು ಭಾಗದಲ್ಲಿ ಚುನಾವಣೆಗಳು ನಡೆಯುತ್ತಲೇ ಇದ್ದರೆ ಚುನಾವಣಾ ಆಯೋಗವು ವರ್ಷಪೂರ್ತಿ ಅದರಲ್ಲೇ ವ್ಯಸ್ತವಾಗಿರ ಬೇಕಾಗುತ್ತದೆ. ಜತೆಗೆ ಇಂಥ ಪರಿಪಾಠವು ಸರಕಾರದ ಬೊಕ್ಕಸಕ್ಕೆ ಭಾರಿ ಹೊರೆಯಾಗುತ್ತದೆ. ಚುನಾವಣೆಯ ನೆಪದಲ್ಲಾಗುವ ಈ ರೀತಿಯ ಹಣದ ಹರಿವು ಹಣದುಬ್ಬರವನ್ನು ಏರಿಸುತ್ತಿದ್ದು, ಅದರಿಂದ ಜನಸಾಮಾನ್ಯರ ಬದುಕು ಹೈರಾಣಾಗುತ್ತದೆ. ಇದನ್ನು ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ಮತ್ತು ಹಣಕಾಸು ಮಂತ್ರಾಲಯಗಳು ಹೆಣಗಾಡಬೇಕಾಗುತ್ತದೆ. ಬದುಕು ದುಬಾರಿ ಯಾದರೆ ಜನರು ಪ್ರಶ್ನಿಸುವುದು ಈ ಎರಡು ವ್ಯವಸ್ಥೆಗಳನ್ನು ತಾನೇ?ಮಾತ್ರವಲ್ಲ, ನಮ್ಮ ದೇಶದಲ್ಲಿ ಸದ್ಯ ಇರುವ ಚುನಾವಣಾ ನೀತಿ ಸಂಹಿತೆಯಿಂದಾಗಿ, ಚುನಾವಣಾ ಪ್ರಕ್ರಿಯೆ ಆರಂಭವಾಗಿ, ಆಯ್ಕೆಯಾಗಿ ದಡ ಸೇರಿದವರು ಅಧಿಕಾರದ ಗದ್ದುಗೆ ಏರುವವರೆಗೆ ಆಡಳಿತ ಯಂತ್ರ ಸ್ತಬ್ಧವಾಗುತ್ತದೆ. ಕಾರಣ, ಈ ಅವಧಿಯಲ್ಲಿ ನೀತಿಸಂಹಿತೆ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ತಾತ್ಕಾಲಿಕ ಬ್ರೇಕ್ ಬೀಳುತ್ತದೆ. ಹೊಸ ಯೋಜನೆ ಮತ್ತು ಕಾರ್ಯಕ್ರಮಗಳಿಗೆ ಅನುಮತಿ ಇರುವುದಿಲ್ಲ, ಬಳಕೆಗೆ ಸಿದ್ಧವಾಗಿರುವ ಯೋಜನೆಗಳಿಗೆ ಉದ್ಘಾಟನೆಯ ಭಾಗ್ಯವಿರುವುದಿಲ್ಲ.
ಅಡಿಗಲ್ಲು ಸಮಾರಂಭವಿರುವುದಿಲ್ಲ, ಜಾರಿಯಲ್ಲಿರುವ ಯೋಜನೆಗಳಿಗೆ ಅಗತ್ಯ ಹಣಕಾಸು ಹರಿಯುವುದಿಲ್ಲ. ಚುನಾವಣಾ ಸೇವೆಗಾಗಿ ಎರವಲು ಸಿಬ್ಬಂದಿಯ ನಿಯೋಜನೆ ಯಾಗುವುದರಿಂದ ಸರಕಾರಿ ಕಚೇರಿಗಳಲ್ಲಿ ಕಾರ್ಯ ಸ್ತಬ್ಧವಾಗುತ್ತದೆ. ಸಾಕಷ್ಟು ತಿಂಗಳ ಮೊದಲೇ ಈ ಪ್ರಕ್ರಿಯೆ ಆರಂಭ ವಾಗುವುದರಿಂದ, ಅಗತ್ಯ ತರಬೇತಿಯ ಹೆಸರಿನಲ್ಲಿ ಸರಕಾರಿ ಕಚೇರಿಗಳು ಭಣಗುಡುತ್ತವೆ.
೨೦೧೪ರಲ್ಲಿ ಮೋದಿಯವರು ಮೊದಲ ಬಾರಿಗೆ ಏಕಕಾಲಿಕ ಚುನಾವಣೆಯ ಪ್ರಸ್ತಾಪ ಮಾಡಿದಾಗ ಅಂದಿನ ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರು ‘ಇದು ಪ್ರಜಾಪ್ರಭುತ್ವದ ಮೇಲಿನ ಹಲ್ಲೆ’ ಎಂದು ಹೇಳಿ ತಿರಸ್ಕರಿಸಿದ್ದರು. ತರುವಾಯ ಹಲವು ರಾಜಕೀಯ ಪಕ್ಷಗಳು ಈ ಪ್ರಸ್ತಾವವನ್ನು ವಿರೋಧಿಸಿ ದ್ದಲ್ಲದೆ, ಈ ನಿಟ್ಟಿನಲ್ಲಿ ಆಳವಾಗಿ ಅಭ್ಯಸಿಸಲು ಸರಕಾರವು ೨೦೧೯ರಲ್ಲಿ ಕರೆದಿದ್ದ ಸರ್ವಪಕ್ಷಗಳ ಸಭೆಯನ್ನೂ  ಬಹಿಷ್ಕರಿಸಿದವು. ದೇಶದ ಭೌಗೋಳಿಕ ವಿಸ್ತಾರ, ಜನಸಂಖ್ಯೆ, ಮತಯಂತ್ರ ಮತ್ತು ವಿವಿ ಪ್ಯಾಟ್‌ಗಳ ಲಭ್ಯತೆ, ಮಾನವ ಸಂಪನ್ಮೂಲದ ಕೊರತೆ, ಭದ್ರತೆ, ಚುನಾವಣೆಗಾಗಿ ಸರಕಾರದ ಅವಧಿ ಯನ್ನು ವಿಸ್ತರಿಸುವ ಅಥವಾ ಮೊಟಕುಗೊಳಿಸುವಲ್ಲಿನ ಸಾಂವಿಧಾನಿಕ ಅಡಚಣೆಗಳು ಹೀಗೆ ಸಾಕಷ್ಟು ಅಂಶಗಳು ಏಕಕಾಲಿಕ ಚುನಾವಣೆಗೆಅಡ್ಡಿಯಾಗುವ ಸಾಧ್ಯತೆಯಿದೆ.
ವಿವಿಧ ರಾಜಕೀಯ ಸಿದ್ಧಾಂತಗಳು, ಅಜೆಂಡಾಗಳನ್ನು ಹೊಂದಿರುವ ವಿಪಕ್ಷಗಳು ಈ ಪ್ರಸ್ತಾವವನ್ನು ಬೆಂಬಲಿಸುವುದು ಸಂದೇಹಾಸ್ಪದ. ಹಾಗೆಯೇ ಇದಕ್ಕೆ ಸಂವಿಧಾನ ತಿದ್ದುಪಡಿ ಅವಶ್ಯವಿದ್ದು, ಅದು ನಿರೀಕ್ಷಿಸಿದಷ್ಟು ಸುಲಭವಾಗಿ ಫಲಿಸದು. ಸರಕಾರವೊಂದು (ಉದಾಹರಣೆಗೆ ಸದ್ಯ ಅಲ್ಲಾಡುತ್ತಿರುವ ಮಹಾರಾಷ್ಟ್ರ ಸರಕಾರ) ಅವಧಿಯ ಮೊದಲೇ ಬಿದ್ದು, ಮತ್ತೊಂದರ ರಚನೆಯಾಗುವುದು ದುಸ್ತರವಾದಾಗ ಚುನಾವಣೆ ನಡೆಸಬೇಕೇ ಅಥವಾ ಇನ್ನಿತರ ರಾಜ್ಯಗಳ ಸಂಗಡ ಏಕಕಾಲಿಕ ಚುನಾವಣೆಗಾಗಿ ಸುದೀರ್ಘ ಅವಧಿವರೆಗೆ ಕಾಯಬೇಕೇ? ಎಂಬ ಜಟಿಲ ಪ್ರಶ್ನೆ ಎದುರಾಗಿದೆ.
ಹಾಗೆಯೇ ಜನ ಪ್ರತಿನಿಧಿಯೊಬ್ಬ ರಾಜೀನಾಮೆ ನೀಡಿದರೆ ಅಥವಾ ನಿಧನರಾದರೆ, ತಕ್ಷಣವೇ ಚುನಾವಣೆ ನಡೆಸಬೇಕೇ ಅಥವಾ ಮುಂದಿನ ಚುನಾವಣೆಯವರೆಗೆ ಕಾಯಬೇಕೇ? ಎಂಬ ಪ್ರಶ್ನೆಯೂ ಇದೆ. ‘ಇಂಥ ಅನಿವಾರ್ಯ ಸಂದರ್ಭದಲ್ಲಿ, ಆತನ ಮತಕ್ಷೇತ್ರದಲ್ಲಿ ೨ನೇ ಸ್ಥಾನದಲ್ಲಿದ್ದ ಅಭ್ಯರ್ಥಿಯನ್ನು ಜನಪ್ರತಿನಿಧಿಯಾಗಿ ಘೋಷಿಸಿ ಚುನಾವಣೆಯನ್ನು ತಪ್ಪಿಸಬೇಕು’ ಎಂದು ಸಂಬಂಧಿತ ಚಿಂತನ-ಮಂಥನದಲ್ಲಿ ತಜ್ಞರೊಬ್ಬರು ಸಲಹೆಯಿತ್ತಾಗ, ‘ಇದು ಜನಪ್ರತಿನಿಧಿಗಳ ಸಾವಿನ ಸಂಖ್ಯೆಯನ್ನು ಹೆಚ್ಚಿಸಬಹುದು’ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದರಂತೆ.
ಇತರ ಕೆಲ ದೇಶಗಳಿಗಿಂತ ಭಿನ್ನವಾಗಿರುವುದು ನಮ್ಮ ಚುನಾವಣೆಯ ವಿಶೇಷ. ಚುನಾವಣಾ ಪ್ರಕ್ರಿಯೆಯ ೩-೪ ತಿಂಗಳಲ್ಲಿ ಇದು ಲಕ್ಷಾಂತರ ತಾತ್ಕಾಲಿಕ ಉದ್ಯೋಗಗಳನ್ನು ಸೃಷ್ಟಿಸುತ್ತದೆ- ರ‍್ಯಾಲಿ/ ರೋಡ್ ಷೋ ಆಯೋಜನೆ, ಕೇಟರಿಂಗ್, ಜನರ ಸಾಗಣೆ, ಧ್ವನಿ ವರ್ಧಕ, ಕರಪತ್ರ, ಬ್ಯಾನರ್-ಬಂಟಿಂಗ್ಸ್ ತಯಾರಿಕೆ ಇತ್ಯಾದಿ. ಚುನಾವಣೆಗಳು ಕಡಿಮೆಯಾದರೆ ಇವರ ಬದುಕಿನ ಬಂಡಿಯ ಚಕ್ರ ಹೂತು ಹೋಗುವುದನ್ನು ಅಲ್ಲಗಳೆಯಲಾಗದು. ರಾಜಕೀಯಎಂಬುದು ಹಲವು ರಾಷ್ಟ್ರಗಳಲ್ಲಿ ಒಂದು ಹವ್ಯಾಸವಾಗಿದ್ದು ಅರೆಕಾಲಿಕ ಮತ್ತು ಅಲ್ಪಕಾಲಿಕ ಉದ್ಯೋಗವಾಗಿದ್ದರೆ ನಮ್ಮಲ್ಲಿದು ಬಹುತೇಕರ ಪಾಲಿಗೆ ಪೂರ್ಣಾವಽ ವೃತ್ತಿ. ಹೀಗಾಗಿ ಚುನಾವಣೆಗಳ ಸಂಖ್ಯೆಯನ್ನು ಕಡಿಮೆಗೊಳಿಸುವ ಪ್ರಯತ್ನ ಮುಗ್ಗರಿಸುವ ಸಾಧ್ಯತೆ ಹೆಚ್ಚು.
ನಮ್ಮ ಪುಢಾರಿಗಳು ಒಂದು ಚುನಾವಣೆಯಲ್ಲಿ ಸೋತರೆ ಇನ್ನೊಂದು ಚುನಾವಣೆಗಾಗಿ ೫ ವರ್ಷ ಕಾಯುವರೇ? ಚುನಾವಣೆಗಾಗಿನ ಅವರ ಹಪಾಹಪಿ ಈ ಕಾಯುವಿಕೆಗೆ ಸೈ ಎನ್ನಬಹುದೇ? ಪದೇಪದೆ ಚುನಾವಣೆಗಳು ಬರುವುದಕ್ಕೆ ಮುಖ್ಯಕಾರಣ ಪಕ್ಷಾಂತರ ಮತ್ತು ಅದರಿಂದ ಅನಿವಾರ್ಯವಾಗುವ ಹೊಸ ಜನಾದೇಶ. ಹೀಗಾಗಿ ಇನ್ನೊಂದು ಸಮರ್ಥ ಕಾನೂನಿನಿಂದ ಪಕ್ಷಾಂತರವನ್ನು ತಡೆಯದಿದ್ದರೆ ‘ಏಕಕಾಲಿಕ ಚುನಾವಣೆ’ ನಿರೀಕ್ಷಿತ ಫಲ ನೀಡದು.
ಬಹುತೇಕ ಸಂದರ್ಭಗಳಲ್ಲಿ ಚುನಾವಣೆಯೆಂಬುದು ರಾಜಕೀಯ ಅಸ್ಥಿರತೆಯ ಒಂದು ಉತ್ಪನ್ನವಾಗಿರುತ್ತದೆ ಮತ್ತು ರಾಜಕೀಯ ಅಸ್ಥಿರತೆಯು ಪಕ್ಷಾಂತ ರದ ಕೂಸಾಗಿರುತ್ತದೆ. ಈ ಎರಡು ಪಿಡುಗು ಗಳನ್ನು ಯಶಸ್ವಿಯಾಗಿ ತಡೆಗಟ್ಟಿದರೆ, ಶಾಲೆಗಳಲ್ಲಿ ಬೋಧಿಸಿದಂತೆ, ‘ಚುನಾವಣೆಯೆಂಬುದು ಐದು ವರ್ಷ ಕ್ಕೊಮ್ಮೆ ಸುಗಮ ಆಡಳಿತಕ್ಕಾಗಿ ನೀಡುವ ಜನಾದೇಶ’ ಎಂಬ ವ್ಯಾಖ್ಯೆಗೆ ಸಾರ್ಥಕತೆ ಸಿಗುತ್ತದೆ.
(ಲೇಖಕರು ಬ್ಯಾಂಕಿಂಗ್ ಕ್ಷೇತ್ರದ ಪರಿಣತರು)