ಕರ್ನಾಟಕ 50ರ ಸಂಭ್ರಮಕ್ಕಿವೆ ಹಲವು ಗರಿಗಳು
ಪ್ರಸ್ತುತ
ಡಾ.ಶಾಲಿನಿ ರಜನೀಶ್
ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು ಕರ್ನಾಟಕವಿದುವೆ ನೃತ್ಯ, ಶಿಲ್ಪ ಕಲೆಯ ಬೀಡಿದು ಎಂಬ ಹಾಡು ಕರ್ನಾಟಕದ ವೈಭವವನ್ನು ಎತ್ತಿತೋರಿಸುತ್ತದೆ. ಹೌದು! ಕರ್ನಾಟಕಕ್ಕೆ ೫೦ರ ಸಂಭ್ರಮ. ಮೈಸೂರು ರಾಜ್ಯ ಕರ್ನಾಟಕ ಎಂದು ಮರುನಾಮಕರಣಗೊಂಡು ಈ ವರ್ಷದ ನ. ೧ಕ್ಕೆ ೫೦ ವರ್ಷಗಳಾಗಿವೆ.
ಹಾಗಾಗಿ ಕರ್ನಾಟಕ ಇಂದು ಈ ಸಂಭ್ರಮವನ್ನು ವೈಭವದಿಂದ ಆಚರಿಸುತ್ತದೆ. ಕರ್ನಾಟಕದ ಈ ಸಂಭ್ರಮವನ್ನು ಆಚರಿಸುವ ಹೊತ್ತಿನಲ್ಲಿ, ಬಹಳಷ್ಟು ಮಂದಿ, ಕರ್ನಾಟಕದ ಇತಿಹಾಸ, ಕರ್ನಾಟಕ ಬೆಳೆದು ಬಂದ ರೀತಿಯನ್ನು ಈಗಾಗಲೇ ವಿಶ್ಲೇಷಿಸಿzರೆ. ಹಾಗಾಗಿ ನಾನು ಈ ಕುರಿತು ಮತ್ತೊಮ್ಮೆ ಬರೆಯು ವುದು ಅಪ್ರಸ್ತುತ. ಕರ್ನಾಟಕ ೫೦ರ ಸಂಭ್ರಮದಲ್ಲಿರುವಾಗ ನಾವು ಸಂಭ್ರಮಿಸಬೇಕಾದ ಹಲವು ಅಭಿವೃದ್ಧಿಯ ಆಯಾಮಗಳನ್ನು ನೋಡುವುದು ಬಹಳಪ್ರಸ್ತುತವೆನ್ನಿಸಿತು. ನಾವು ಹೇಗಿzವು ಎನ್ನುವುದು ಇತಿಹಾಸ ಆದರೆ ಹೇಗಿದ್ದೇವೆ ಎನ್ನುವುದು ವಾಸ್ತವ. ಇಂದು ಕೆಲವನ್ನಾದರೂ ನಾವು ಮೆಲುಕು ಹಾಕಬೇಕಾದ ಅವಶ್ಯಕತೆ ಖಂಡಿತಾ ಇದೆ. ಕರ್ನಾಟಕ ೫೦ ವರ್ಷದಲ್ಲಿ ಏನಾಗಿದೆ ಎನ್ನುವವರಿಗೊಂದು ಉತ್ತರವೂ ಆಗಬಹುದು.
ಕರ್ನಾಟಕ ಇಂದು ಹಲವು ಕ್ಷೇತ್ರಗಳಲ್ಲಿ ಉತ್ತುಂಗಸ್ಥಾಯಿ ಯಲ್ಲಿರುವುದು ನಮ್ಮ ಹೆಮ್ಮೆ. ಐವತ್ತರ ಸಂಭ್ರಮದಲ್ಲಿರುವ ನಾವು ಇದನ್ನು ತಿಳಿದುಕೊಳ್ಳಲೇ ಬೇಕು. ನಾವು ಮಾಹಿತಿ ಮತ್ತು ತಂತ್ರeನದಲ್ಲಿ ದೇಶಕ್ಕೆ ಮೊದಲಿಗರಾಗಿದ್ದೇವೆ. ಆವಿಷ್ಕಾರದಲ್ಲಿ ನಾವೇ ನಂಬರ್ ಒನ್. ಹಾಲು ಉತ್ಪಾದನೆಯಲ್ಲಿ ನಾವು ಎರಡನೇ ಸ್ಥಾನದಲ್ಲಿದ್ದೇವೆ. ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ನಾವು ಮೂರನೇ ಸ್ಥಾನದಲ್ಲಿದ್ದೇವೆ. ರಾಷ್ಟ್ರೀಯ ಜಿಡಿಪಿಗೆ ಕರ್ನಾಟಕವು ೮ ಶೇಕಡಾ ಕೊಡುಗೆ ನೀಡುತ್ತಿದೆ.
ಸಂಭ್ರಮಕ್ಕೆ ಮಿತಿ ಎಲ್ಲಿದೆ? ೫೦ ವರ್ಷಗಳಲ್ಲಿ ಕರ್ನಾಟಕ ಎಷ್ಟೊಂದು ಅಭಿವೃದ್ಧಿಯಾಗಿದೆ ಎಂಬುದನ್ನು ವಿಶ್ಲೇಷಿಸಿದರೆ ಯಾರಾದರೂ ದಂಗಾಗಬಹುದು. ಹೌದು ಕರ್ನಾಟಕ ಸಂಭ್ರಮವನ್ನು ಆಚರಿಸಲು ಹಲವು ಕಾರಣಗಳಿವೆ. ಹಲವರು ಕಾರಣರಾಗಿದ್ದಾರೆ ಕೂಡ. ಹೇಳುತ್ತಾ ಹೋದರೆ.. ಅದೊಂದು ಪುಸ್ತಕವೇ ಆಗಬಹುದು. ಹಾಗಾಗಿ ಕರ್ನಾಟಕ ಸಂಭ್ರಮಿಸಬೇಕಾದ ಕೆಲವೊಂದು ವಿಚಾರಗಳನ್ನಷ್ಟೇ ನಾನಿಲ್ಲಿ ಪ್ರಸ್ತುತಪಡಿಸಲು ಇಚ್ಚಿಸು ತ್ತೇನೆ.
ಕರ್ನಾಟಕದ ಜನಸಂಖ್ಯೆಯನ್ನು ನೋಡುವುದಾದರೆ, ಸುಮಾರು ೩ ಕೋಟಿ ಜನಸಂಖ್ಯೆಯಿಂದ ಇಂದು ೭ ಕೋಟಿಗೂ ಅಧಿಕ ಜನಸಂಖ್ಯೆ ಬೆಳೆದಿದೆ. ಜನಸಂಖ್ಯೆಯ ಅವಶ್ಯಕತೆಗಳನ್ನು ಪೂರೈಸಲು ಜನಸಂಖ್ಯೆ ಬೆಳೆದಂತೆ ಅಭಿವೃದ್ಧಿಯೂ ಹೆಚ್ಚಾಗಿರುವುದು ಸಂತಸದ ವಿಚಾರ. ಇಂದು ಕರ್ನಾಟಕದ ಒಟ್ಟು ದೆಶಿಯ ಉತ್ಪನ್ನ(ಜಿಡಿಪಿ) ವನ್ನು ನೋಡಿದರೆ, ೨೫೦ ಬಿಲಿಯನ್ ಡಾಲರ್‌ಗಳು ಮಾತ್ರವಲ್ಲ ತಲಾ ಆದಾಯ ರೂ.೩.೧೬ ಲಕ್ಷವಿದೆ.
ಆಡಳಿತ ವಿಕೇಂದೀಕರಣ:ಕರ್ನಾಟಕದ ಜಿಲ್ಲೆಗಳನ್ನು ನೋಡುವುದಾದರೆ, ೧೯೭೩ರಲ್ಲಿ ಕೇವಲ ೧೯ ಜಿಗಳಿದ್ದು, ಇಂದು ೩೧ ಜಿಲ್ಲೆಗಳಾಗಿವೆ. ೧೭೫ ತಾಲೂಕುಗಳಿಂದ ೨೩೫ ತಾಲೂಕುಗಳಾಗಿವೆ. ನಗರಗಳು ಹೆಚ್ಚಾಗಿವೆ. ೫೯೫೩ ಗ್ರಾಮ ಪಂಚಾಯಿತಿಗಳಾಗಿವೆ. ಇದು ವಿಕೇಂದ್ರೀಕರಣ ಆಡಳಿತಕ್ಕೆ ಹಿಡಿದ ಕೈಗನ್ನಡಿಯೆಂದೇ ಹೇಳಬಹುದು. ಅದರಲ್ಲೂ ೧೯೯೩ ಸಂವಿಧಾನದ ತಿದ್ದು ಪಡಿಯ ನಂತರ ಗ್ರಾಮ ಪಂಚಾಯತಿಗಳಲ್ಲಿ ೩೩% ಮಹಿಳಾ ಮೀಸಲಾತಿ ನೀಡಿರುವುದು ಮಾತ್ರವಲ್ಲ, ಮುಂದಿನ ಹಂತದಲ್ಲಿ ೫೦ ಶೇಕಡ ಮಹಿಳಾ ಮೀಸಲಾತಿ ಯನ್ನು ಹೆಚ್ಚಿಸಿ ಕರ್ನಾಟಕ ಸ್ಥಳೀಯ ಸರಕಾರಗಳಲ್ಲಿ ಲಿಂಗಸಮಾನತೆಯನ್ನು ತರುವಲ್ಲಿ ಯಶಸ್ಸು ಕಂಡಿರುವುದು, ಕರ್ನಾಟಕದ ಗರಿಮೆಗೆ ಸಾಕ್ಷಿಎಂದೇ ಹೇಳಬಹುದು.
ಸಾಕ್ಷರತೆ ಮತ್ತು ಶಿಕ್ಷಣ:೧೯೭೩ರಲ್ಲಿ ಸುಮಾರು ೩೬.೮೩ ಇದ್ದ ಸಾಕ್ಷರತೆ ಇಂದು ೭೭.೨ ಶೇಕಡಾವಾಗಿದೆ. ಇಂದು ನೂರಕ್ಕೆ ನೂರು ಶೇಕಡ ಮಕ್ಕಳು ಪ್ರಾಥಮಿಕ ಶಾಲೆಯಲ್ಲಿ ದಾಖಲಾಗುತ್ತಿರುವುದು ಕರ್ನಾಟಕದ ಹೆಮ್ಮೆ. ಅಂತೆಯೇ ಸುಮಾರು ೮೫% ಮಕ್ಕಳು ಪ್ರೌಢಶಿಕ್ಷಣ ಹಂತದ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಕಾರಣ ಕರ್ನಾಟಕದಲ್ಲಿ ೧,೭೦,೪೮೨ ದಷ್ಟು ಶಿಕ್ಷಕರು ಸರಕಾರಿ ಶಾಲೆಗಳಲ್ಲಿ ಉದ್ಯೋಗ ಮಾಡಿಕೊಂಡಿರುವುದು ಶಿಕ್ಷಣ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಉದ್ಯೋಗವನ್ನು ಹೆಚ್ಚಿಸಲು ಕಾರಣವಾಗಿದೆ. ಕರ್ನಾಟಕದಲ್ಲಿ ಇಂದು ಖಾಸಗಿ ಸಂಸ್ಥೆಗಳನ್ನು ಒಳಪಡಿಸಿಕೊಂಡು, ಸುಮಾರು ೩೫೨೫ ಕಾಲೇಜುಗಳಿವೆ. ೬೩ ವಿಶ್ವ ವಿದ್ಯಾಲಯ ಗಳಿವೆ. ೨೧೨ ಎಂಜಿನಿಯರಿಂಗ್ ಕಾಲೇಜುಗಳಿವೆ ೨೮೮ ಪಾಲಿಟೆಕ್ನಿಕ್‌ಗಳಿವೆ.
ಹೀಗಿರುವಾಗ ಉನ್ನತ ಶಿಕ್ಷಣಕ್ಕೆ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಸಾಗುತ್ತಿರುವುದು ಕರ್ನಾಟಕದ ಸಂಭ್ರಮ ವನ್ನು ಹೆಚ್ಚಿಸಿದೆ ಎಂದೇ ಹೇಳಬಹುದು. ಐವತ್ತು ವರ್ಷ ಗಳಲ್ಲಿ ಕರ್ನಾಟಕದ ಬಡತನವನ್ನು ಶೇ. ೧೦ಕ್ಕಿಂತಲೂ ಕಡಿಮೆ ಮಾಡುವಲ್ಲಿ ಕರ್ನಾಟಕ ಯಶಸ್ಸು ಕಂಡಿದೆ. ವಿಶ್ವಸಂಸ್ಥೆಯ ವರದಿಯ ಪ್ರಕಾರ ೧೯೭೩-೭೪ರಲ್ಲಿ ಕರ್ನಾಟಕದಲ್ಲಿ ಸುಮಾರು ೫೫ ಶೇಕಡಾ ಬಡತನವಿತ್ತು. ಆದರೆ ಇಂದು ನಾವು ಬಹು ಆಯಾಮದ ಬಡತನದಲ್ಲಿ ನಾವು ೭.೫೮ಶೇಕಡಾವಿರುವುದು ಕರ್ನಾಟಕ ಬಡತನ ಮುಕ್ತ ರಾಜ್ಯಕ್ಕೆ ಇನ್ನೂ ಕೆಲವೇ ದೂರದಲ್ಲಿದೆ. ೫೫ ಶೇಕಡಾ ಬಡತನವನ್ನು ಕಡಿಮೆಗೊಳಿಸುವಲ್ಲಿ ಕಡಿಮೆಗೊಳಿಸಲು ರಾಜ್ಯ ಪರಿಚಯಿಸಿದ ಹಲವು ಯೋಜನೆಗಳು ಇಂದು ಕರ್ನಾಟಕವನ್ನು ಎಲ್ಲರೂ ತಿರುಗಿ ನೋಡುವತ್ತ ಮಾಡಿದೆ ಎಂಬುದರಲ್ಲಿ ಸಂಶಯವಿಲ್ಲ. ಇದಕ್ಕೆಲ್ಲ ಕಾರಣ, ಕರ್ನಾ ಟಕದ ಶಿಕ್ಷಣ ಹಾಗೂ ಉದ್ಯೋಗ ವ್ಯವಸ್ಥೆ ಎಂದರೂ ತಪ್ಪಲ್ಲ.
ಹೆಣ್ಣು ಮಕ್ಕಳ ಅಭಿವೃದ್ಧಿ:ಹೆಣ್ಣು ಮಗುವೇ ಬೇಡ ಎಂಬ ಕಾಲವೊಂದಿತ್ತು. ೧೯೭೩ ರಲ್ಲಿ ಸಾವಿರ ಗಂಡು ಮಕ್ಕಳಿಗೆ ಕೇವಲ ೯೫೭ ಹೆಣ್ಣುಮಕ್ಕಳು ಜನಿಸುತ್ತಿದ್ದರು. ಆದರೆ ಇಂದು ಒಂದು ಸಾವಿರ ಗಂಡು ಮಕ್ಕಳಿಗೆ ೧,೦೩೪ ಹೆಣ್ಣು ಮಕ್ಕಳು ಜನಿಸುತ್ತಿರುವುದು ಹೆಣ್ಣು ಮಕ್ಕಳ ಬಗ್ಗೆ ಇರುವ ಬಹಳಷ್ಟು ಕಳಂಕ ಮತ್ತು ತಾರತಮ್ಯ ವನ್ನು ದೂರಗೊಳಿಸಿದೆ ಎಂದೇ ಹೇಳಬಹುದು. ಹೆಣ್ಣು ಮಗುವನ್ನು ಸಂಭ್ರಮಿಸುವಲ್ಲಿ ಕರ್ನಾಟಕದ ಕುಟುಂಬ ಗಳು ಬಹಳಮುಂದಿವೆ ಎಂದರೂ ತಪ್ಪಿಲ್ಲ. ಅಲ್ಲದೆ ಹೆಣ್ಣು ಮಕ್ಕಳು ಶಿಕ್ಷಣ ಉದ್ಯೋಗ, ಉದ್ಯಮಗಳಲ್ಲಿ ಹೆಚ್ಚಳವಾಗುತ್ತಿರುವುದು ಮಹಿಳಾ ಅಭಿವೃದ್ಧಿಗೆ ಸಾಕ್ಷಿ ಯೆಂದೇ ಹೇಳ ಬಹುದು.
ಆರೋಗ್ಯ:೧೯೯೦-೯೧ರಲ್ಲಿ ಸಾವಿರ ಶಿಶುಗಳಿಗೆ ೭೭ ಶಿಶು ಮರಣ ಪ್ರಮಾಣವಿದ್ದು ಹಲವು ಉಪಕ್ರಮಗಳಿಂದ ಇಂದು ೨೧ ಕ್ಕೆ ಇಳಿಸಲು ಸಾಧ್ಯವಾಗಿದೆ. ೯೯ ಶೇಕಡಾದಷ್ಟು ಸಾಂಸ್ಥಿಕ ಹೆರಿಗೆಗಳಾಗುತ್ತಿರುವುದು ತಾಯಿ ಮತ್ತು ಮಗುವಿನ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಕೂಡ ಸಾಧ್ಯ ವಾಗಿರುವುದು ಕರ್ನಾಟಕದ ಅಭಿವೃದ್ಧಿಗೆ ಸಾಕ್ಷಿ. ಒಟ್ಟಾರೆ -ಲವತ್ತತೆ ದರವನ್ನು ನೋಡಿದಾಗ ೫ ಇದ್ದ ಫಲವತ್ತತೆ ದರ ಕರ್ನಾಟಕದಲ್ಲಿ ಸುಮಾರು ೨ ಕ್ಕಿಂತಲೂ ಕಡಿಮೆಯಾಗಿರು ವುದು ಜನಸಂಖ್ಯೆಯನ್ನು ನಿಯಂತ್ರಣ ದಲ್ಲಿಡಲು ಸಾಧ್ಯ ವಾಗಿದೆ. ಸುಮಾರು ಆರೋಗ್ಯ ಉಪ ಕ್ರಮಗಳಿಂದ ಜೀವಿ ತಾವಧಿಯು ೫೫ ವಯಸ್ಸಿನಿಂದ ಸುಮಾರು ೬೯ಕ್ಕೆ ಏರಿರು ವುದು ಜನರಲ್ಲಿ ಬದುಕಿನ ಉತ್ಸಾಹವನ್ನು ಮೂಡಿಸಿದೆ.
ಮೂಲಭೂತ ಸೌಕರ್ಯ:ಹಿಂದೆ ಒಂದು ಮಾತಿತ್ತು. ಊಟ, ವಸತಿ ಮತ್ತು ವಸದ ಅವಶ್ಯಕತೆ ಜನರಿಗೆ ಮೂಲಭೂತ ಅವಶ್ಯಕತೆಯಾಗಿತ್ತು. ಏಕೆಂದರೆ, ಜನರಿಗೆ ಉಳಿದು ಕೊಳ್ಳಲು ಪಕ್ಕಾ ಮನೆಗಳಿರಲಿಲ್ಲ. ಊಟಕ್ಕೆ ಹಲವು ತೊಂದರೆಗಳಿದ್ದವು. ಕಾರಣ ಬಡತನ. ಹಾಗಾಗಿ ಶಾಲೆಗಳಲ್ಲಿ ವಿದೇಶಗಳಿಂದ ಬರುತ್ತಿದ್ದ ಗೋಧಿಯನ್ನು ಮಧ್ಯಾಹ್ನದ ಬಿಸಿಯೂಟದಂತೆ ನೀಡುತ್ತಿದ್ದರು. ಆದರೆ ಇಂದು ಕರ್ನಾಟಕದಲ್ಲಿ ೯೮ ಶೇಕಡ ಕುಟುಂಬಗಳಿಗೆ ವಾಸಿಸಲುಪಕ್ಕಾ ಮನೆಯಿದೆ. ೧೦೦ ಶೇಕಡ ಮನೆಗಳಿಗೆ ವಿದ್ಯುತ್ ಇದೆ. ೧೦೦ ಶೇಕಡ ಗ್ರಾಮೀಣ ಜನಸಂಖ್ಯೆ ಸುಧಾರಿತ ಕುಡಿಯುವ ನೀರಿನ ಮೂಲವನ್ನು ಹೊಂದಿzರೆ. ೬೦% ಶೇಕಡಾ ಗ್ರಾಮೀಣ ಜನರಿಗೆ ಮನೆಬಾಗಿಲಿಗೆ ನೀರಿನ ಸರಬರಾಜು ಆಗುತ್ತಿದೆ. ನಗರದಲ್ಲಂತೂ ಎಲ್ಲರಿಗೂ ಮನೆಬಾಗಿಲಲ್ಲಿನೀರಿನ ಸೌಲಭ್ಯವಿದೆ. ಕರ್ನಾಟಕದ ಸಂಭ್ರಮಕ್ಕೆ ಇವೆಲ್ಲವೂ ಮುಕುಟವಿಟ್ಟಂತೆ ಸರಿ.
ಕೃಷಿ:ಈ ಐವತ್ತು ವರ್ಷಗಳಲ್ಲಿ ಕೃಷಿಯಲ್ಲಿ ಹಲವು ಬದಲಾವಣೆಗಳಾಗಿವೆ. ಸಾಂಪ್ರದಾಯಿಕ ಕೃಷಿ ವ್ಯವಸ್ಥೆಯಿಂದ ಆಧುನಿಕ ಕೃಷಿಯತ್ತ ಬದಲಾವಣೆ ಯಾಗಿದೆ. ನೀರು ಹಾಗೂ ಮಣ್ಣಿನ ಸಂರಕ್ಷಣೆಗಾಗಿ ಹಲವು ವಿಧಾನ ಗಳನ್ನು ಪರಿಚಯಿಸಿದೆ. ಉದಾಹರಣೆಗೆ ಸೂಕ್ಷ್ಮ ನೀರಾವರಿ, ಗ್ರೀನ್ ಹೌಸ್, ಪಾಲಿ ಹೌಸ್ ಕೃಷಿ ಮಾದರಿಗಳು ಚಾಲ್ತಿಗೆ ಬಂದಿವೆ. ಕಡಿಮೆ ಭೂಮಿಯಲ್ಲಿ ಹೆಚ್ಚು ಉತ್ಪಾದನೆಯನ್ನು ಮಾಡುವ ಹಲವು ಬೀಜಗಳನ್ನು ಪರಿಚಯಿಸಿದೆ. ಅಲ್ಲದೆ, ಗಾರ್ಡನ್ ನಂತಹ ವಿಧಾನಗಳನ್ನು ಅಳವಡಿಸುವ ಮೂಲಕ ಗ್ರಾಮೀಣ ಮಾತ್ರವಲ್ಲ ನಗರ ಪ್ರದೇಶಗಳಲ್ಲೂ ಕೃಷಿಯನ್ನು ಮಾಡುವಲ್ಲಿ ಜನರು ಆಸಕ್ತರಾಗಿರುವುದು ಉತ್ತಮ ಬೆಳವಣಿಗೆ ಯೆಂದೇ ಹೇಳಬಹುದು. ಹಿಂದೆ ಕೇವಲ ೨ ಕೃಷಿ ವಿದ್ಯಾಲಯಗಳಿದ್ದು ಇಂದು ನಾಲ್ಕು ಕೃಷಿ ವಿದ್ಯಾಲಯಗಳಿವೆ ಮಾತ್ರವಲ್ಲ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ ಹೀಗೆ ವಿವಿಧ ವಿಷಯಾಧಾರಿತ ವಿಶ್ವ ವಿದ್ಯಾಲಯಗಳು ಕರ್ನಾಟಕಲ್ಲಿ ಇರುವುದು, ವಿದ್ಯಾರ್ಥಿ ಗಳಿಗೆ ತಮ್ಮ ಆಸಕ್ತದಾಯಕ ವಿಷಯದ ಕುರಿತು ಅಧ್ಯಯನ ಮಾಡಲು ಸಾಧ್ಯವಾಗಿದೆ.
ರಸ್ತೆ ಹಾಗೂ ಸಾರಿಗೆ:ಪ್ರತಿ ಗ್ರಾಮ ಗ್ರಾಮಗಳಿಗೂ ರಸ್ತೆ ಗಳಾಗಿರುವುದು ಮಾತ್ರವಲ್ಲ ಕರ್ನಾಟಕದ ಸಾರಿಗೆ ವ್ಯವಸ್ಥೆಯನ್ನು ದೇಶ-ವಿದೇಶಗಳ ಮಂದಿ ಪ್ರಶಂಸಿಸುತ್ತಾರೆ. ಕರ್ನಾಟಕದಲ್ಲಿ ಎಲ್ಲಾ ಸಾರಿಗೆ ನಿಗಮಗಳ ಮೂಲಕ ಸುಮಾರು ೨೩,೯೦೯ ಬಸ್ಸುಗಳು ಇದ್ದು ಪ್ರತಿ ದಿನ ಸರಾಸರಿ ೭೯.೭೧ ಲಕ್ಷ ಜನರು ಪ್ರಯಾಣ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿ. ಇದು ವ್ಯಾಪಾರ-ವಹಿವಾಟು ಮಾತ್ರವಲ್ಲ ಉದ್ಯೋಗ-ಉದ್ಯಮವನ್ನು ಬೆಳೆಸುವಲ್ಲಿ ಸಾಕಷ್ಟು ಕೊಡುಗೆ ನೀಡಿದೆ ಎಂದೇ ಹೇಳಬಹುದು.
ಮಾಹಿತಿ ಮತ್ತು ತಂತ್ರಜ್ಞಾನ, ಇ-ಆಡಳಿತ:ಮಾಹಿತಿ ಮತ್ತು ತಂತ್ರಜ್ಞಾನದಲ್ಲಿ ದೇಶದಲ್ಲಿ ನಾವೇ ಮೊದಲಿಗರೆಂದು ನಾನು ಈಗಾಗಲೇ ಹೇಳಿದ್ದೇನೆ. ಸುಮಾರು ೪೦ ಶೇಕಡಾ ದಷ್ಟು ಮಾಹಿತಿ ಮತ್ತು ತಂತ್ರಜ್ಞಾನದ ರಫ್ತನ್ನು ಕರ್ನಾಟಕ ಒಂದೇ ಮಾಡುತ್ತಿದೆ ಎಂದರೆ ನಿಜವಾಗಿಯೂ ಹೆಮ್ಮೆಪಡಬೇಕಲ್ಲವೆ? ತಂತ್ರಜ್ಞಾನ ಎಷ್ಟೊಂದು ಕರ್ನಾಟಕದ ಭಾಗವಾಗಿದೆಯೆಂದರೆ ಕರ್ನಾಟಕದ ಸಮಗ್ರ ಆಡಳಿತವು ಗ್ರಾಮದಿಂದ ರಾಜ್ಯದ ವರೆಗೂ ತಂತ್ರಜ್ಞಾನದ ಮೂಲಕವೇ ನಡೆಯುತ್ತದೆ ಎನ್ನುವುದೇ ಕರ್ನಾಟಕದ ಹೆಮ್ಮೆ. ಕರ್ನಾಟಕದ ಪ್ರತಿ ಅಭಿವೃದ್ಧಿಯ ಮೇಲ್ವಿಚಾರಣೆ ಕೂಡ ಮಾಹಿತಿ ಹಾಗೂ ತಂತ್ರಜ್ಞಾನದ ಮೂಲಕ ಆಗುತ್ತಿರುವುದು ಕರ್ನಾಟಕ ಸಂಭ್ರಮಕ್ಕೆ ಇನ್ನೊಂದು ಕಾರಣವೆಂದೇ ಹೇಳಬಹುದು. ಸುಮಾರು ೭೦ ಶೇಕಡದಷ್ಟು ಜನರು ಇಂದು ಇಂಟರ್‌ನೆಟನ್ನು ಬಳಸುತ್ತಿದ್ದಾರೆ ಎಂದರೆ, ಕರ್ನಾಟಕದ ಸಂಭ್ರಮವನ್ನು ಹೆಚ್ಚಿಸುತ್ತಿದೆ ಎಂದೇ ಹೇಳಬಹುದು. ಕನ್ನಡದ ದೀಪವನ್ನು ಎಡೆ ಹಚ್ಚೋಣ! ಮನೆ ಮನ ಗಳನ್ನು ಬೆಳಗೋಣ.