ಸ್ವಪ್ರತಿಷ್ಠೆಯವರಿಗೆ ಜ್ಞಾನೋದಯವೆಲ್ಲಿ ?
ಪ್ರತಿಸ್ಪಂದನ
ಲೀನಾ ಜೋಶಿ ಕಾಮತ್
ಮಠದ ಸ್ವಾಮಿಗಳೆಲ್ಲ ಸೇರಿ “ನಾವೆಲ್ಲಾ ಒಂದು, ಭಾರತದ ಜನರ ಸುಖ-ಶಾಂತಿ-ಅಭಿವೃದ್ಧಿಯೇ ನಮ್ಮ ಆಸೆ. ‘ವಸುಧೈವ ಕುಟುಂಬಕಂ’ ಎಂಬುದೇ ಈನೆಲದ ಮೂಲಮಂತ್ರ” ಎಂದು ಸಾರಿ ಹೇಳಬಹುದು. ಆದರೆ ಸ್ವಪ್ರತಿಷ್ಠೆ, ಸ್ವಜನಪಕ್ಷಪಾತದಲ್ಲೇ ಮುಳುಗಿರುವವರಿಗೆ ಜ್ಞಾನೋದಯವಾಗುವುದೆಲ್ಲಿ?
‘ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ | ವಿಚಾರವಿಲ್ಲದೆ ಪರರ ದೂಷಿಸುವುದಕೆ ಚಾಚಿಕೊಂಡಿರುವಂಥ ನಾಲಿಗೆ’ ಎಂದಿದ್ದಾರೆ ಪುರಂದರದಾಸರು. ‘ಮುಂಗೈಯ ಕಂಕಣಕ್ಕೆ ಕನ್ನಡಿಯ ತೋರುವಂತೆ ಎನ್ನ ಮನವು ನಿಧಾನವನೊಲ್ಲದೆ ಜಲಗ ಮುಚ್ಚಿತ್ತು ನೋಡಾ, ನಾಯಿಗೆನಾರಿವಾಣವಕ್ಕುವುದೆ ಕೂಡಲಸಂಗಮದೇವಾ’ ಎಂದಿದ್ದಾರೆ ಬಸವಣ್ಣನವರು.
ಇತಿಹಾಸದಿಂದ ಪಾಠ ಕಲಿತಿರುವವನು, ಇತಿಹಾಸ ಪುನರಾವರ್ತನೆಯಾಗಲು ಬಿಡಲಾರ. ಕಾವಿ ಧರಿಸಿರುವವರು ಎಂದೂ ಬಾಯಿತಪ್ಪಿಯೂ ಅಸಂಬದ್ಧ ಮಾತನಾಡುವುದಿಲ್ಲ. ಜ್ಞಾನ ಸಂಪಾದನೆ ಮಾಡಿ, ಸನ್ಮಾರ್ಗದಲ್ಲಿ ನಡೆಯುತ್ತಿರುವವನೆಂದಿಗೂ ಬೇರೆಯವರಿಗೆ ದುರುದ್ದೇಶಪೂರಿತವಾದ ಮಾತು ಗಳಿಂದ ನೋವನ್ನುಂಟುಮಾಡಲಾರ. ಭಾರತಕ್ಕೆ ಜಗತ್ತಿನಲ್ಲಿ ತನ್ನದೇ ಆದ ಉನ್ನತ ಸ್ಥಾನವಿರುವುದು, ಜಗತ್ತಿಗೆ ಅಧ್ಯಾತ್ಮಿಕ ಜ್ಞಾನವನ್ನು ಕೊಟ್ಟಿರುವು ದರಿಂದ. ಮಾನಸಿಕ ಶಾಂತಿಗಾಗಿ, ಅಧ್ಯಾತ್ಮಿಕ ಜ್ಞಾನಕ್ಕಾಗಿ ಪಾಶ್ಚಾತ್ಯರು ಇಂದಿಗೂ ತಿರುಗಿ ನೋಡುವುದು ಭಾರತವನ್ನೇ! ಆಪಲ್ ಕಂಪ್ಯೂಟರ್ ಸಂಸ್ಥೆಯ ಸ್ಥಾಪಕ ಸ್ಟೀವ್ ಜಾಬ್ಸ್, ಫೇಸ್‌ಬುಕ್ ಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಜೀವನದಲ್ಲಿ ಸೋಲುಂಡಾಗ ಮಾರ್ಗದರ್ಶನಕ್ಕಾಗಿ ಮುಖಮಾಡಿದ್ದು ಅಧ್ಯಾತ್ಮಿಕ ಜಗತ್ತಿನ ಕೇಂದ್ರಬಿಂದು ಭಾರತದೆಡೆಗೆ. ಅವರ‍್ಯಾರೂ ಮನಶ್ಶಾಂತಿ ಅರಸಿ ಚೀನಾ, ಜಪಾನ್, ಸೌದಿ ಅರೇಬಿಯಾಗೆ ಹೋಗಲಿಲ್ಲ.
ಹಾಲಿವುಡ್‌ನ ಖ್ಯಾತ ನಟ-ನಟಿಯರು ಜೀವನದಲ್ಲಿ ಖಿನ್ನತೆಯು ಸಹಿಸಲಸಾಧ್ಯವಾದಾಗ ಅರಸಿ ಬಂದಿದ್ದು ಭಾರತವನ್ನು. ಸ್ವಾತಂತ್ರ್ಯಪೂರ್ವದಲ್ಲಿ ಭಾರತದಲ್ಲಿ ಬಡತನ ತಾಂಡವವಾಡುತ್ತಿತ್ತು. ರೋಗ-ರುಜಿನಗಳ ತವರೂರಾಗಿದ್ದ ಈ ನೆಲದಲ್ಲಿ ಕ್ಷಾಮಗಳು ಸಾಮಾನ್ಯವಾಗಿದ್ದವು. ಜಗತ್ತು ಭಾರತ ವನ್ನು ನಿಕೃಷ್ಟವಾಗಿ ನೋಡುವ ಕಾಲವೊಂದಿತ್ತು. ಇವೆಲ್ಲವನ್ನೂ ಮೀರಿ ಭಾರತಕ್ಕೆ ಅಧ್ಯಾತ್ಮಿಕವಾಗಿ ಉನ್ನತ ಸ್ಥಾನಮಾನ ತಂದುಕೊಟ್ಟಿದ್ದು ಒಬ್ಬ ಕಾವಿಧಾರಿ ಸ್ವಾಮಿ ವಿವೇಕಾನಂದರು. ಮನೆಯಲ್ಲಿ ಐಶ್ವರ್ಯವಿದ್ದರೂ, ಮನಸ್ಸಿನಲ್ಲಿ ಶಾಂತಿಯಿಲ್ಲದ ಪಾಶ್ಚಾತ್ಯರು ಅದನ್ನರಸಿ ಮೊರೆಹೋಗಿದ್ದುಭಾರತ ದೇಶವನ್ನು! ಅಂದಿನ ಕಾವಿಧಾರಿ ಗಳೆಂದೂ ಭಾರತದ ಸಂಸ್ಕೃತಿಯ ಬಗ್ಗೆ ಅಪಪ್ರಚಾರ ಮಾಡಲಿಲ್ಲ. ಕಾಲಕಾಲಕ್ಕೆ ಅವಶ್ಯಕವಾದ ಸುಧಾರಣೆಗಳಿಗೆ, ಪ್ರತ್ಯಕ್ಷ-ಪರೋಕ್ಷ ಬೆಂಬಲ ನೀಡಿದರು. ಸನಾತನ ಧರ್ಮವು ಕಾಲಕ್ಕೆ ತಕ್ಕಂತೆ ಬದಲಾಗಿರುವುದು ಕಾವಿ ಧರಿಸುವವರಿಂದಲೇ.
ಶರಣರು ವಚನಗಳಲ್ಲಿ ಬರೆದಿರುವುದನ್ನೆಲ್ಲಾ ಸಾಣೇಹಳ್ಳಿ ಶ್ರೀಗಳು ಪಾಲಿಸುತ್ತಿದ್ದಾರೆಯೇ? ಗಣಪತಿ ನಮ್ಮ ಸಂಸ್ಕೃತಿಯಲ್ಲ ಎಂದು ಬಸವಣ್ಣ ಬೋಧಿಸಿದರೇ? ಅಲ್ಲಮಪ್ರಭು, ಅಕ್ಕಮಹಾದೇವಿ ಹೇಳಿದರೇ? ಕ್ರೈಸ್ತ ಮಿಷನರಿಗಳು ತಮ್ಮ ಧರ್ಮಪ್ರಚಾರಕ್ಕಾಗಿ ಯೇಸುವಿಗೆ ಕುಂಕುಮ ಇಡುತ್ತಾರೆ. ಬಾಲ ಯೇಸು, ಕಾವಿ ತೊಟ್ಟಿರುವ ಯೇಸು, ಹೀಗೆ ಯಾವ ಮಾರ್ಗದಿಂದಾದರೂ ಸರಿ, ಹೇಗಾದರೂ ಮಾಡಿ ‘ಯೇಸು ನಿಮ್ಮವನೇ’ ಎಂದು ಮನಸ್ಸಿಗೆ ನಾಟುವಂತೆ ಧರ್ಮಪ್ರಚಾರ ಮಾಡುತ್ತಾರೆ. ಆದರೆ ನಮ್ಮ ಭಾರತದ ಜಾತಿವಾದಿ ಸ್ವಾಮಿಗಳಿಗೇನಾಗಿದೆ? ಈಗಿರುವ ಜಾತಿವ್ಯವಸ್ಥೆ, ಜಾತಿಗೊಂದು-ಊರಿಗೊಂದು ಮಠ ಸಾಲದೇ? ಕೇವಲ ಪ್ರಚಾರಕ್ಕಾಗಿ ಜನರ ಭಾವನೆಗಳಿಗೆ ಧಕ್ಕೆ ತಂದು ಸಾಧಿಸುವುದೇನಿದೆ? ಈ ಪರಿಯ ತೆವಲು ಕಾವಿಧಾರಿಗಳಿಗೆ ಶೋಭೆ ತರುವುದೇ? ಮನಸ್ಸು ಮಾಡಿದರೆ ಮಠದ ಸ್ವಾಮಿಗಳೆಲ್ಲ ಸೇರಿ “ನಾವೆಲ್ಲಾ ಒಂದು, ಭಾರತದ ಜನರ ಸುಖ-ಶಾಂತಿ- ಅಭಿವೃದ್ಧಿಯೇ ನಮ್ಮ ಆಸೆ.
‘ವಸುಧೈವ ಕುಟುಂಬಕಂ’ ಎಂಬುದೇ ಈ ನೆಲದ ಮೂಲಮಂತ್ರ” ಎಂದು ನಮ್ಮ ಏಕತೆಯನ್ನು ಜಗತ್ತಿಗೇ ಸಾರಿ ಹೇಳಬಹುದು. ಆದರೆ ಸ್ವಪ್ರತಿಷ್ಠೆ, ಸ್ವಜನಪಕ್ಷಪಾತದಲ್ಲೇ ಮುಳುಗಿರುವವರಿಗೆ ಜ್ಞಾನೋದಯವಾಗುವುದೆಲ್ಲಿ? ಇವರಿಗೆ ಮಠದಲ್ಲಿ ಎಲ್ಲಾ ಆಧುನಿಕ ಸೌಲಭ್ಯ ಇರಬೇಕು, ಓಡಾಡಲು ಲೇಟೆಸ್ಟ್ ಮಾಡೆಲ್ ಕಾರೇ ಬೇಕು. ‘ಮೊಬೈಲ್, ಟಿವಿ, ಕಾರು ನಮ್ಮ ಸಂಸ್ಕೃತಿಯಲ್ಲ; ನಮ್ಮದು ವಚನ ಸಂಸ್ಕೃತಿ. ವಚನಗಳಲ್ಲಿ ಮೊಬೈಲ್, ಕಾರು ಇತ್ಯಾದಿಗಳ ಉಲ್ಲೇಖವಿಲ್ಲ. ಆದ್ದರಿಂದ ಲಿಂಗಾಯತರು ಇವ್ಯಾವುದನ್ನೂ ಉಪಯೋಗಿಸುವಂತಿಲ್ಲ’ ಎಂದು ಹೇಳಲಿ ಸಾಣೇಹಳ್ಳಿ ಶ್ರೀಗಳು!
ತಾವೇ ಮೊದಲು ಇವನ್ನೆಲ್ಲಾ ತ್ಯಾಗಮಾಡಿ ಭಕ್ತರಿಗೆ ಆದರ್ಶಪ್ರಾಯರಾಗಲಿ. ವಿವಾದಾತ್ಮಕನಲ್ಲದ ‘ಗಣಪತಿ’ಯನ್ನು ಎಳೆತಂದು ಬಿಟ್ಟಿಪ್ರಚಾರ ಪಡೆಯುವುದಕ್ಕಿಂತ ಸರ್ವಸಂಗ ಪರಿತ್ಯಾಗಿಯಾಗಿ ಜೀವನ ನಡೆಸಿದರೆ ಸಾಣೇಹಳ್ಳಿ ಶ್ರೀಗಳು ಸಮಾಜಕ್ಕೊಂದು ಮಾದರಿಯಾಗಬಹುದು. ಪ್ರಚಾರಪ್ರಿಯ ಶ್ರೀಗಳಿಗೆ ಒಂದಂತೂ ಸ್ಪಷ್ಟವಾಗಿ ಗೊತ್ತು. ಚಲಾವಣೆಯಲ್ಲಿ ಇರಬೇಕೆಂದರೆ ಹಿಂದೂ ದೇವರುಗಳನ್ನು ಟಾರ್ಗೆಟ್ ಮಾಡಬೇಕು. ನ್ಯೂಸ್ ಚಾನೆಲ್‌ ನವರು ದಿನವಿಡೀ ಅವರ ಹಿಂದೆ-ಮುಂದೆ ಅಡ್ಡಾಡಿ ‘ಬೈಟ್ಸ್’  ತೆಗೆದುಕೊಳ್ಳಬೇಕು.
ವಾರವಿಡೀ ಬ್ರೇಕಿಂಗ್ ನ್ಯೂಸ್‌ನಲ್ಲಿ ಮಿಂಚಬೇಕು. ಮೊದಲು ನೀಡಿರೋ ಹೇಳಿಕೆಗೆ ಮತ್ತೊಂದಿಷ್ಟು ಮಸಾಲೆ ಹಾಕಬೇಕು. ಅದನ್ನು ಮರುಪ್ರಸಾರಮಾಡುತ್ತಲೇ ಇರಬೇಕು. ಟಿವಿಯಲ್ಲಿ ನ್ಯೂಸ್ ನೋಡಿದಾಗಲೆಲ್ಲಾ ಅದರ ಪರದೆಯ ತುಂಬಾ ಮಿಂಚಬೇಕು. ಎಂತೆಂಥಾ ಆಸೆಗಳು! ಮನೆ, ತೋಟ, ಮಠ ತ್ಯಾಗ ಮಾಡಿ ಸನ್ಯಾಸ ಸ್ವೀಕರಿಸಿದವರಿಗೆ ಇಂಥ ಆಸೆಗಳು ಇರುತ್ತವಾ? ಇದು ಶರಣರ ಪಥವಾ, ಬಸವಣ್ಣನವರ ನಿಜ ಅನುಯಾಯಿಗಳ ಬದುಕಾ? ಗಣೇಶ ಬಿಡಿ, ನಿಮ್ಮ ‘ಶಿವ’ ಮೆಚ್ಚುತ್ತಾನಾ ಈ ಥರದ ಡಂಭಾಚಾರವನ್ನು? ಪೂಜೆ ಮಾಡಿದರೆ ಪುಣ್ಯ ಎಲ್ಲಿ ಸಿಗುತ್ತೆ? ‘ದೇವರು ಈವರೆಗೆ ಯಾರಿಗೂ ವರ, ಶಾಪನೀಡಿಲ್ಲ; ದೇವಸ್ಥಾನ ನಿರ್ಮಿಸಿದರೆ ಜನ ಅಲ್ಲಿ ಸುತ್ತುವರಿಯುತ್ತಾರೆ’ ಎನ್ನುವ ಶ್ರೀಗಳು ‘ಕಾಡಿನಲ್ಲಿ’ ಜೀವನ ಸಾಗಿಸುತ್ತಿದ್ದಾರಾ? ಅಲ್ಲಮಪ್ರಭು, ಅಕ್ಕಮಹಾದೇವಿ ಕಾರಿನಲ್ಲಿ ಓಡಾಡಿಕೊಂಡಿದ್ದರಾ? ವಚನಗಳಲ್ಲಿ ಪೀಠಾರೋಹಣ, ಪಾದಪೂಜೆ ಮಾಡಿಸಿಕೊಳ್ಳಿ ಅಂತ ಬರೆದಿದ್ದಾರಾ? ಇವೆಲ್ಲಾ ಪ್ರಶ್ನೆಗಳಿಗೂ ಶ್ರೀಗಳು ಉತ್ತರಿಸಲಿ!
(ಲೇಖಕಿ ಹವ್ಯಾಸಿ ಬರಹಗಾರ್ತಿ)