ಮತ್ತೆ ದೀಪ ಹಚ್ಚೋಣ, ಪ್ರೀತಿಯ ಗೀತೆ ಹಾಡೋಣ !
ಸಂಗತ
ಡಾ.ವಿಜಯ್ ದರಡಾ
ದೀಪಾವಳಿಯೆಂದರೆ ಕೇವಲ ನಮ್ಮ ಬದುಕಿನಲ್ಲಿ ಬೆಳಕು ಹಚ್ಚುವ ಹಬ್ಬವಲ್ಲ, ಅದು ಬೇರೆಯವರ ಬದುಕಿನಲ್ಲೂ ನಾವು ಬೆಳಕು ಹಚ್ಚಬೇಕಾದ ಹಬ್ಬ. ನಾವು ಹಚ್ಚುವ ಬೆಳಕು ನಮಗಾಗಿ ಮಾತ್ರ ಅಲ್ಲ, ಅದು ಬೇರೆಯವರ ಬದುಕನ್ನೂ ಬೆಳಗಬೇಕು. ಇದು ನಮ್ಮ ಸಂಸ್ಕೃತಿಯಲ್ಲಿ ಅಡಗಿರುವ ಉದಾತ್ತ ಸಂದೇಶವಾಗಿದೆ. ಭಾರತೀಯ ಸಂಸ್ಕೃತಿಯಲ್ಲಿರುವ ಈ ವಿಶೇಷತೆಯೇ ನಮ್ಮನ್ನು ಜಗತ್ತಿನ ಅತ್ಯಂತ ವಿಶಿಷ್ಟ ಜನಸಂಸ್ಕೃತಿಯಾಗಿ ಹೊರಹೊಮ್ಮಿಸಿದೆ.
‘ಭಾರಿ ದುಪಹರಿ ಮೇ ಆಂಧಿಯಾರಾ, ಸೂರಜ್ ಪರಛಾಯಿ ಸೇ ಹರಾ, ಅಂತರ್ತಮ ಕಾ ನೇ ನಿಚೋಡೇ, ಬುಝಿ ಹುಯಿ ಬತ್ತಿ ಸುಲಗಾಯೇ, ಆವೋ ಫಿರ್ ಸೇ ದಿಯಾ ಜಲಾಯೇ!’ (ಮಟಮಟ ಮಧ್ಯಾಹ್ನ ಗಾಢ ಕತ್ತಲೆ, ಮೋಡದೆದುರು ಸೋತಿದ್ದಾನೆ ಸೂರ್ಯ, ಅಂತರಂಗದ ಪ್ರೀತಿಯೂ ಬತ್ತಿಹೋಗಿದೆ, ಆರಿದ ಬತ್ತಿಯನ್ನು ಮತ್ತೆ ಹಚ್ಚಬೇಕಿದೆ, ಬನ್ನಿ, ಮತ್ತೆ ದೀಪ ಬೆಳಗೋಣ!). ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರುಬರೆದ ಕವಿತೆಯಿದು. ಬಹುಶಃ ನೀವೂ ಕೇಳಿರುತ್ತೀರಿ. ನನ್ನ ಪುಣ್ಯ, ನಾನು ಈ ಪದ್ಯವನ್ನು ಅಟಲ್‌ಜೀ ಅವರ ಬಾಯಿಯಿಂದಲೇ ಕೇಳಿದ್ದೆ.
ಆಗ ‘ದೀಪವನ್ನು ಮತ್ತೆ ಹಚ್ಚೋದು ಅಂದರೇನು?’ ಎಂದು ಪ್ರಶ್ನೆ ಮಾಡಿದ್ದೆ. ಅದಕ್ಕವರು ತಮ್ಮ ಎಂದಿನ ಟಿಪಿಕಲ್ ಶೈಲಿಯಲ್ಲಿ ನನ್ನನ್ನೊಮ್ಮೆ ನೋಡಿ ಇದೇ ಪದ್ಯದ ಮುಂದಿನ ಸಾಲುಗಳನ್ನು ಹೇಳಿದ್ದರು: ‘ಹಮ್ ಪಡಾವ್ ಕೋ ಸಮಝೇ ಮಂಜಿಲ್, ಲಕ್ಷ್ಯ ಹುವಾ ಆಂಖೋ ಸೇ ಓಝಲ್, ವರ್ತಮಾನ್ ಕೇ ಮೊಹ ಜಲ್ ಮೆ, ಆನೇ ವಾಲಾ ಕಲ್ ನ ಭುಲಾಯೇಂ, ಆವೋ ಫಿರ್ ಸೇ ದಿಯಾ ಜಲಾಯೇ!’ (ನಾವು ನಿಲ್ದಾಣವನ್ನೇ ಗಮ್ಯವೆಂದು ಕೊಂಡಿದ್ದೇವೆ, ಹೀಗಾಗಿ ಗುರಿಯು ಕಣ್ಣಿಂದ ದೂರವಾಗಿದೆ, ವರ್ತಮಾನದ ಜಂಜಡಗಳಲ್ಲಿ, ಮುಂದೆ ಬರುವ ನಾಳೆಯನ್ನು ಮರೆಯದಿರೋಣ, ಬನ್ನಿ, ಮತ್ತೆ ದೀಪ ಹಚ್ಚೋಣ!).
ಇವತ್ತು ಅಟಲ್‌ಜೀ ನಮ್ಮೊಂದಿಗಿಲ್ಲ. ಆದರೆ ಅವರ ಕಾಲಾತೀತ ಪದ್ಯಗಳು ನಮ್ಮೊಂದಿಗೆ ಬದುಕುತ್ತಿವೆ. ಅಟಲ್ ಜೀಯವರ ಪದ್ಯಗಳನ್ನು ಯಾವಾಗ ಬೇಕಾದರೂ ಓದಬಹುದು. ಯಾವಾಗ ಓದಿದರೂ ಅವು ಹೊಸ ಹೊಳಹು ಗಳನ್ನು ಸುರಿಸುತ್ತವೆ. ಅವರ ಕವಿತ್ವವು ದೀಪದಂತೆ ನಮ್ಮಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ. ಎಷ್ಟೇ ಕತ್ತಲು ಇದ್ದರೂ, ಬದುಕಿನಲ್ಲಿ ಏನೇ ಕಷ್ಟಗಳು ಇದ್ದರೂ, ಅವರ ಕವಿತೆಗಳು ಸಣ್ಣದೊಂದು ದೀಪದೊಂದಿಗೆ ನಮಗೆ ಮುನ್ನಡೆಯಲು ದಾರಿ ತೋರಿಸುತ್ತವೆ. ಅಟಲ್‌ಜೀ ಮಾತ್ರವಲ್ಲ, ಹರಿವಂಶ ರಾಯ್ ಬಚ್ಚನ್ ಅವರು ದೀಪಗಳ ಬಗ್ಗೆ ಬರೆದಿರುವ ಕವಿತೆಗಳನ್ನು ಕೂಡ ನಾವು ಓದಬೇಕು.
ಅವು ಬಹಳ ಅದ್ಭುತ ವಾಗಿವೆ: ‘ಆಜ್ ಫಿರ್ ಸೇ ತುಮ್ ಬುಝಾ ದೀಪಕ್ ಜಲಾವೋ, ರಾಗಿಣಿ, ತುಮ್ ಆಜ್ ದೀಪಕ್ ರಾಗ್ ಗಾವೋ, ಆಜ್ ಫಿರ್ಸೇ ತುಮ್ ಬುಝಾ ದೀಪಕ್ ಜಲಾವೋ, ಆಜ್ ತುಮ್ ಮುಝಕೋ ಜಗಾಕರ್ ಜಗಮಗಾವೋ, ಆಜ್ ಫಿರ್ ಸೇ ತುಮ್ ಬುಝಾ ದೀಪಕ್ ಜಲಾವೋ!’ (ಆರಿಹೋದ ದೀಪವನ್ನಿವತ್ತು ಮತ್ತೆ ನೀನು ಹಚ್ಚು, ರಾಗಿಣಿ, ನೀನಿವತ್ತು ದೀಪಕ ರಾಗವನ್ನು ಹಾಡು, ಆರಿಹೋದ ದೀಪವನ್ನಿವತ್ತುಮತ್ತೆ ನೀನು ಹಚ್ಚು, ನನ್ನನ್ನು ಎಬ್ಬಿಸಿ ಮತ್ತೆ ಜಗಮಗಿಸುವಂತೆ ಮಾಡು, ಆರಿಹೋದ ದೀಪವನ್ನಿವತ್ತು ಮತ್ತೆ ನೀನು ಹಚ್ಚು!).
ಇಲ್ಲೊಂದು ಪ್ರಶ್ನೆ. ನಾವು ನಿಜ ವಾಗಿಯೂ ನಮ್ಮೊಳಗೆ ಆರಿಹೋಗಿರುವ ದೀಪವನ್ನು ಮತ್ತೆ ಬೆಳಗಲು ಪ್ರಯತ್ನಿಸುತ್ತೇವೆಯೇ? ಹೌದು ಹೌದು, ದೀಪಾವಳಿ ಆಚರಿಸುವಾಗ ಜೋರುಗಾಳಿ ಬಂದು ದೀಪ ಆರಿಹೋದರೆ ತಕ್ಷಣ ನಾನು ಮತ್ತೆ ಅದನ್ನು ಹಚ್ಚುತ್ತೇನೆ ಎಂದು ನೀವು ಹೇಳಬಹುದು.ಆದರೆ ಅದು ಹಬ್ಬದಲ್ಲಿ ಹಚ್ಚುವ ದೀಪದ ಕಥೆಯಾಯಿತು. ನಿಜ ಜೀವನದಲ್ಲಿ ನಾವು ಆರಿಹೋದ ದೀಪವನ್ನು ಯಾವತ್ತಾದರೂ ಮತ್ತೆ ಹಚ್ಚಲು ಪ್ರಯತ್ನಿಸುತ್ತೇವೆಯೆ? ಇಷ್ಟಕ್ಕೂ ದೀಪ ಹಚ್ಚುವುದು ಅಂದರೆ ಏನು? ಇಲ್ಲಿ ದೀಪವೆಂದರೆ ಭೌತಿಕ ದೀಪವಲ್ಲ. ದೀಪವೆಂದರೆ ಅದೊಂದು ಸಂಕೇತ. ಭಾರತೀಯ ಸಂಸ್ಕೃತಿಯಲ್ಲಿ ಹಾಗೂ ಬೇರೆ ಬೇರೆ ದೇಶಗಳ ಅಧ್ಯಾತ್ಮಿಕ ಚಿಂತನೆಯಲ್ಲಿ ದೀಪವು ಜ್ಞಾನದ ಸಂಕೇತವಾಗಿದೆ.
ದೀಪದ ಜ್ವಾಲೆಯು ಎಷ್ಟೊಂದು ಅಮೂಲ್ಯವೆಂದರೆ, ಆರತಿಯ ನಂತರ ನಾವು ದೀಪಕ್ಕೆ ನಮ್ಮ ಅಂಗೈಗಳನ್ನು ಹಿಡಿದು, ನಂತರ ಅದನ್ನು ಹಣೆಗೆ ಒತ್ತಿಕೊಳ್ಳು ತ್ತೇವೆ. ಅದರರ್ಥ ಏನೆಂದರೆ, ಈ ಭೌತಿಕ ಜಗತ್ತಿನಲ್ಲಿ ಜ್ಞಾನ ಕ್ಕಿಂತಲೂ ಮಿಗಿಲಾದುದು ಬೇರೆ ಯಾವುದೂ ಇಲ್ಲ. ನೀವು ನಿಮ್ಮನ್ನು ಜ್ಞಾನದ ಬೆಳಕಿನಿಂದ ತುಂಬಿದಷ್ಟೂ ನಿಮ್ಮ ಆಂತರ್ಯ ಇನ್ನಷ್ಟು ಜ್ವಾಜಲ್ಯಮಾನವಾಗಿ ಬೆಳಗುತ್ತಾ ಹೋಗುತ್ತದೆ. ಮನಸ್ಸು ಸ್ವಚ್ಛವಾಗಿದ್ದರೆ ನಮ್ಮ ಬದುಕಿಗೂ ಒಂದು ಪರಿಶುದ್ಧತೆ ಬರುತ್ತದೆ. ಬದುಕಿಗೆ ಪರಿಶುದ್ಧತೆ ಬಂದಾಗ ಹಿಂದೆ ಆಗಿಹೋದ ಹಾಗೂ ಮುಂಬರುವ ಕಹಿಗಳೆಲ್ಲ ನಗಣ್ಯವಾಗುತ್ತಾ ಹೋಗುತ್ತವೆ. ಆಗ ನೀವು ಪಾಪರಹಿತ ಪರಿಶುದ್ಧ ಆತ್ಮವಾಗುತ್ತೀರಿ.
ಭಗವಾನ್ ಮಹಾ ವೀರ, ಭಗವಾನ್ ಬುದ್ಧನಿಂದ ಹಿಡಿದು ನಮ್ಮೆಲ್ಲಾ ಸಾಧು ಸಂತರು, ಧಾರ್ಮಿಕ ಮುಖಂಡರು ಹಾಗೂ ಋಷಿ ಮುನಿಗಳು ಇದೇ ಸಂದೇಶವನ್ನೇ ನಮಗೆ ಕೊಟ್ಟಿದ್ದಾರೆ. ಆದರೆ ನಾವು ಬದುಕಿರುವುದು ದುರಿತ ಕಾಲದಲ್ಲಿ. ನಾವಿಲ್ಲಿ ಮನಸ್ಸಿನ ಬೆಳಕು ಹಾಗೂ ಆಂತರಿಕ ಪರಿಶುದ್ಧತೆಯನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಇಡೀ ಪರಿಸರವನ್ನೇ ನಮ್ಮೊಳಗಿನ ಅಂಧಕಾರವು ಹಾಳುಗೆಡವುತ್ತಿದೆ. ಎಲ್ಲೆಡೆ ದ್ವೇಷದ ಬಿರುಗಾಳಿ ಬೀಸುತ್ತಿದೆ. ಅದು ಎಷ್ಟು ಜೋರಾಗಿ ಬೀಸುತ್ತಿದೆಯೆಂದರೆ, ಬಹಳ ಕಡಿಮೆ ಸಮಯದಲ್ಲಿ ಇಡೀ ವಿಶ್ವವನ್ನು ಆವರಿಸಿಕೊಳ್ಳುತ್ತಿದೆ. ನಮ್ಮ ಅಕ್ಕಪಕ್ಕ ಮಾತ್ರ ಅಲ್ಲ, ಅದು ಇಡೀ ಭೂಮಿಯಲ್ಲಿ ಪಸರಿಸುತ್ತಿದೆ.
ದ್ವೇಷದ ಈ ಜಂಝಾವಾತವು ಇಡೀ ಮಾನವ ಕುಲವನ್ನೇ ಒಂದು ದಿನ ಬೇರುಸಮೇತ ಕಿತ್ತೊಗೆಯುವುದಕ್ಕಾಗಿ ಎದ್ದಿದೆ ಎಂದು ಹೇಳಿದರೆ ಅಲ್ಲ ಎನ್ನುವವರಾರು? ಹಾಗೆ ನೋಡಿದರೆ, ಎಷ್ಟು ಜನರು ಇದರ ಬಗ್ಗೆ ಚಿಂತಿತರಾಗಿದ್ದಾರೆ ಎಂಬ ಪ್ರಶ್ನೆಯೂ ಇದೆ. ಅಯ್ಯೋ, ದೀಪಾವಳಿ ಹಬ್ಬದ ಈ ಸಂತಸದ ಸಮಯದಲ್ಲಿ ಈತ ಇದೇನು ಹೇಳುತ್ತಿದ್ದಾನೆಂದು ನಿಮಗೆ ಆಶ್ಚರ್ಯವಾಗುತ್ತಿರಬಹುದು! ಆದರೆ ಸತ್ಯ ಏನು ಗೊತ್ತಾ? ಈ ವಿಷಯಮಾತನಾಡುವುದಕ್ಕೆ ಇದಕ್ಕಿಂತ ಪ್ರಶಸ್ತವಾದ ಸಮಯ ಬೇರೆ ಇಲ್ಲ. ದೀಪಾವಳಿಯೆಂಬುದು ಸಂತೋಷವನ್ನು ಹಂಚುವ ಹಬ್ಬ. ಇಂಥ ಶುಭ ಸಂದರ್ಭದಲ್ಲಿ ಜಗತ್ತಿನ ಯಾವುದೇ ಒಂದು ಭಾಗ ದುಃಖದಲ್ಲಿ ಮುಳುಗಿದ್ದರೂ ಅದರ ಬಗ್ಗೆ ನಾವು ಕಳವಳಗೊಳ್ಳಲೇಬೇಕು. ದೀಪಾವಳಿಯೆಂದರೆ ಕೇವಲ ನಮ್ಮ ಬದುಕಿನಲ್ಲಿ ಬೆಳಕು ಹಚ್ಚುವ ಹಬ್ಬವಲ್ಲ, ಅದು ಬೇರೆಯವರ ಬದುಕಿನಲ್ಲೂ ನಾವು ಬೆಳಕು ಹಚ್ಚಬೇಕಾದ ಹಬ್ಬ. ನಾವು ಹಚ್ಚುವ ಬೆಳಕು ನಮಗಾಗಿ ಮಾತ್ರ ಅಲ್ಲ, ಅದು ಬೇರೆಯವರ ಬದುಕನ್ನೂ ಬೆಳಗಬೇಕು. ಇದು ನಮ್ಮ ಸಂಸ್ಕೃತಿಯಲ್ಲಿ ಅಡಗಿರುವ ಉದಾತ್ತ ಸಂದೇಶವಾಗಿದೆ. ಭಾರತೀಯ ಸಂಸ್ಕೃತಿ ಯಲ್ಲಿರುವ ಈ ವಿಶೇಷತೆಯೇ ನಮ್ಮನ್ನು ಜಗತ್ತಿನ ಅತ್ಯಂತ ವಿಶಿಷ್ಟ ಜನಸಂಸ್ಕೃತಿಯಾಗಿ ಹೊರಹೊಮ್ಮಿಸಿದೆ.
ಅತ್ಯಂತ ಶ್ರೇಷ್ಠವಾದ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಹೊಂದಿರುವ ವಿಶಾಲಹೃದಯಿ ಭಾರತೀಯರೇ ಬೇರೆಯವರ ಬದುಕಿನಲ್ಲಿ ದೀಪ ಹಚ್ಚುವ ಕೆಲಸ ಮಾಡದಿದ್ದರೆ ಇನ್ನಾರು ಮಾಡುತ್ತಾರೆ? ನಮ್ಮ ಈ ನೆಲದಲ್ಲಿ ತಾನ್‌ಸೇನನಂಥ ಪರಮಾದ್ಭುತ ಗಾಯಕರು ಆಗಿಹೋಗಿದ್ದಾರೆ. ತಾನ್‌ಸೇನನು ಮೇಘ ಮಲ್ಹಾರ ಹಾಗೂ ದೀಪಕ ರಾಗವನ್ನು ಹಾಡಿದಾಗ ಮಳೆ ಬರುತ್ತಿತ್ತು ಮತ್ತು ದೀಪಗಳು ಹೊತ್ತಿಕೊಳ್ಳುತ್ತಿದ್ದವು ಎಂಬ ದಂತಕಥೆಯಿದೆ. ಅದು ನಿಮಗೆ ಗೊತ್ತಿರಬಹುದು. ಒಮ್ಮೆ ಅಕ್ಬರ್ ಚಕ್ರವರ್ತಿಯು ತಾನ್‌ಸೇನ್‌ನನ್ನು ತನ್ನ ಆಸ್ಥಾನಕ್ಕೆ ಕರೆಸುತ್ತಾನೆ.
ಅದಕ್ಕೂ ಮುನ್ನ ತಾನು ದೀಪಕ ರಾಗವನ್ನು ತಾನ್‌ಸೇನನಿಂದ ಮಾತ್ರ ಕೇಳುತ್ತೇನೆ ಎಂದು ಶಪಥ ಮಾಡಿರುತ್ತಾನೆ. ಎಷ್ಟೆಂದರೂ ಅವನು ಚಕ್ರವರ್ತಿಯಲ್ಲವೇ. ಹೀಗಾಗಿ ತಾನ್‌ಸೇನನು ಅಕ್ಬರನ ಮುಂದೆ ದೀಪಕ ರಾಗ ಹಾಡಲೇಬೇಕಾಯಿತು. ಅರೆ ಏನಾಶ್ಚರ್ಯ! ಆಸ್ಥಾನದಲ್ಲಿದ್ದ ದೀಪಗಳೆಲ್ಲ ಒಂದೊಂದಾಗಿ ಝಗ್ಗೆಂದು ಹೊತ್ತಿಕೊಂಡವು. ಆದರೆ ಕ್ರಮೇಣ ಅಲ್ಲಿನ ವಾತಾವರಣ ಬಿಸಿಯಾಗುತ್ತಾ ಹೋಯಿತು. ಎಷ್ಟು ಬಿಸಿಯಾಯಿತು ಅಂದರೆ ಅಕ್ಬರನೂ ಸೇರಿದಂತೆ ಎಲ್ಲರೂ ಯದ್ವಾತದ್ವಾ ಬೆವರತೊಡಗಿದರು. ಕೊನೆ ಕೊನೆಗೆ ಬಿಸಿ ತಾಳಲಾಗದೆ ಎಲ್ಲರೂ ಜೀವ ಉಳಿಸಿಕೊಳ್ಳಲು ಆಸ್ಥಾನದಿಂದ ಹೊರಗೆ ಓಡಿಬಿಟ್ಟರು. ಆದರೆ ತಾನ್‌ಸೇನ್ ಮಾತ್ರ ಮೈಮರೆತು ದೀಪಕ ರಾಗ ಹಾಡುತ್ತಲೇ ಇದ್ದ. ಅವನಿಗೆ ಮೈ ಬಿಸಿಯಾಗಿ ಉರಿಯುತ್ತಿರುವುದು ಕೂಡ ಅರಿವಿಗೆ ಬರಲಿಲ್ಲ. ಅಷ್ಟೊಂದು ತನ್ಮಯನಾಗಿದ್ದ.
ಪರಿಣಾಮ, ಅವನು ಅಲ್ಲೇ ಬೆಂದು ಸತ್ತುಹೋದ! ಇದು ಎಷ್ಟು ನಿಜವಾದ ಕಥೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಈ ಕಥೆಯ ನೀತಿಯೇನು ಅಂದರೆ, ನೀವು ಬೆಳಕನ್ನು ಹರಡಬೇಕು ಅಂತಿದ್ದರೆ ದೀಪ ಹಚ್ಚಬೇಕು ಮತ್ತು ಅಗತ್ಯಬಿದ್ದರೆ ನಿಮ್ಮನ್ನೇ ನೀವು ತ್ಯಾಗ ಮಾಡುವುದಕ್ಕೂ ಸಿದ್ಧರಿರಬೇಕು. ಆದ್ದರಿಂದಲೇ ಅಟಲ್‌ಜೀ ಹೀಗೆ ಬರೆದಿದ್ದಾರೆ: ‘ಆಹುತಿ ಬಾಕಿ ಯಜ್ಞಾ ಅಧೂರಾ, ಅಪ್ರೋಂ ಕೇ ವಿಘ್ನೋಂ ನೇ ಘೇರಾ, ಅಂತಿಮ ಜಯ ಕಾ ವಜ್ರ ಬನಾನೇ, ನವ ದಽಚಿ ಹಡ್ಡಿಯಾಂ ಗಲಾಯೇ, ಆವೋ ಫಿರ್ ಸೇ ದಿಯಾ ಜಲಾಯೇ!’ (ಆಹುತಿಯಿನ್ನೂ ಬಾಕಿಯಿದೆ, ಯಜ್ಞ ಮುಗಿದಿಲ್ಲ, ನಮ್ಮವರ ವಿಘ್ನಗಳೇ ನಮ್ಮನ್ನು ತಡೆದಿವೆ, ಆದರೂ ಅಂತಿಮ ಜಯದ ಗುರಿ ಮುಟ್ಟಬೇಕಲ್ಲವೇ, ಮೂಳೆ ಗಳನ್ನೇ ಕರಗಿಸಿ ಹೊಸ ದೀಪ ಹಚ್ಚೋಣ, ಬನ್ನಿ, ಮತ್ತೆ ದೀಪ ಬೆಳಗೋಣ!). ಹಾಗಾಗಿ ಈ ದೀಪಾವಳಿಗೆ ನನ್ನ ಪ್ರಾರ್ಥಯಿಷ್ಟೆ.
ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಒಟ್ಟಾಗಿ ಮುನ್ನಡೆಯುತ್ತಾ ಕತ್ತಲ ದಾರಿಯಲ್ಲಿ ಬೆಳಕು ಚೆಲ್ಲೋಣ. ಜಾತಿ, ಮತ, ಪಂಥ, ಧರ್ಮಗಳನ್ನು ಮೀರಿ ದೀಪಗಳನ್ನು ಹಚ್ಚುತ್ತಾ ಹೋಗೋಣ. ನಿಮಗೆಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! ಎಲ್ಲಕ್ಕಿಂತ ಹೆಚ್ಚಾಗಿ ನಾನು ಈಶುಭ ಸಂದರ್ಭದಲ್ಲಿ ನಮ್ಮ ಅನ್ನದಾತ ರೈತರಿಗೆ, ನಮಗಾಗಿ ಬೆವರು ಹರಿಸಿ ಕೆಲಸ ಮಾಡುವ ಕಾರ್ಮಿಕರಿಗೆ, ಗಡಿಯಲ್ಲಿ ನುಸುಳಿ ಬರುವ ‘ವಿಶೇಷ ಅತಿಥಿಗಳನ್ನು’ ದೂರ ಓಡಿಸುತ್ತಾ ನಮ್ಮನ್ನು ಸುರಕ್ಷಿತವಾಗಿ ಇರಿಸಿರುವ ಸೈನಿಕರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಹೃದಯಾಂತರಾಳದಿಂದ ದೀಪಾ ವಳಿಯ ಶುಭಾಶಯ ಹೇಳುತ್ತೇನೆ.
‘ಹಮ್ ದೀಪ್ ಸೇ ದೀಪ್ ಜಲಾಯೇ, ಪ್ಯಾರ್ ಕೆ ಗೀತ್ ಗಾಯೇ, ಜಿಸೇ ಜೋ ಮಿಲ್ ಗಯಾ, ಯಾ ಜಿಸೇ ಜೋ ನ ಮಿಲಾ, ಉನ್ಕೇ ಘರ್ ಭೀದೀಪ್ ಜಲಾಯೇ, ಹಮ್ ದೀಪ್ ಸೇ ದೀಪ್ ಜಲಾಯೇ!’ (ನಾವು ದೀಪದಿಂದ ದೀಪ ಹಚ್ಚೋಣ, ಪ್ರೀತಿಯ ಗೀತೆ ಹಾಡೋಣ, ಯಾರಿಗೆ ಏನು ಸಿಕ್ಕಿದೆಯೋ, ಯಾರಿಗೆ ಏನು ಸಿಕ್ಕಿಲ್ಲವೋ, ಅವರ ಮನೆ ಯಲ್ಲೂ ದೀಪ ಹಚ್ಚೋಣ, ನಾವು ದೀಪದಿಂದ ದೀಪ ಬೆಳಗೋಣ!).
(ಲೇಖಕರು ಹಿರಿಯ ಪತ್ರಕರ್ತರುಮತ್ತು ರಾಜ್ಯಸಭಾ ಸದಸ್ಯರು)