ಏಕವಚನ ಪ್ರಯೋಗದಿಂದ ಯಾರೂ ದೊಡ್ಡವರೆನಿಸಿಕೊಳ್ಳುವುದಿಲ್ಲ !
ವಿಚಾರ ವೇದಿಕೆ
ರಾಕೇಶ್ ಕುಮಾರ್‌ ಕಮ್ಮಜೆ
ಜನನಾಯಕರು ಯಾವುದೋ ಸರಕಾರಿ ಕಚೇರಿಗೆ ದಿಢೀರ್ ಭೇಟಿಕೊಟ್ಟಾಗ ಅಲ್ಲಿ ಅವ್ಯವಸ್ಥೆಯಿರುವುದು ಕಂಡುಬಂದರೆ ತೀವ್ರವಾಗಿ ಗದರುವುದೆಲ್ಲ ಅಗತ್ಯವೇ. ಆದರೆ ಆ ಸಂದರ್ಭಗಳಲ್ಲಿ ಏಕವಚನ ಪ್ರಯೋಗ ಯಾಕೆ ಆಗುತ್ತದೆ ಎಂಬುದು ಪ್ರಶ್ನೆ. ಗೌರವಯುತವಾಗಿಯೇ ಟೀಕಿಸಿದರೆ, ಬಹುವಚನ ದಲ್ಲೇ ವಿಚಾರಿಸಿದರೆ, ಮಾರ್ಗದರ್ಶನ ನೀಡಿದರೆ ಜನನಾಯಕರು ಕಳೆದುಕೊಳ್ಳುವಂಥದ್ದೇನಿದೆ? ಸಚಿವರು, ಶಾಸಕರು, ಸಂಸದರನ್ನೊಳ ಗೊಂಡಂತೆ ಜನಪ್ರತಿನಿಧಿಗಳೆನಿಸಿಕೊಂಡವರು ತಮ್ಮೆದುರಿನ ಕೆಲ ವ್ಯಕ್ತಿಗಳನ್ನು, ಅದರಲ್ಲೂ ಸರಕಾರಿ ಅಧಿಕಾರಿಗಳನ್ನು ತುಂಬಿದ ಸಭೆಯಲ್ಲೂ, ಜನನಿಬಿಡ ಪ್ರದೇಶ ದಲ್ಲೂ ಏಕವಚನದಲ್ಲಿ ಮಾತನಾಡಿಸುವುದು ಅತ್ಯಂತ ಸಹಜವೆಂಬಂತೆ ನಡೆದುಬರುತ್ತಿದೆ.
ಸರಕಾರದ ಮರ್ಜಿ ಯಲ್ಲಿ ಮುನ್ನಡೆಯಬೇಕಾದ ಅನಿವಾರ್ಯತೆ ಇರುವ ಸರಕಾರಿ ಉದ್ಯೋಗಿಗಳು ಇಂಥ ವೇಳೆ ವ್ಯಕ್ತಿ ಗೌರವಕ್ಕೆ ಧಕ್ಕೆಯಾಗು ತ್ತಿದ್ದರೂ ಮೌನವಾಗಿ ಸಹಿಸಿಕೊಳ್ಳುವುದೂ ಕಂಡುಬರುತ್ತಿದೆ. ಆದರೆ ಅವರು ಸಹಿಸಿಕೊಳ್ಳುತ್ತಿದ್ದಾರೆ ಎಂದಮಾತ್ರಕ್ಕೆ ಏಕವಚನ ಪ್ರಯೋಗ ಸರಿ ಎಂದರ್ಥವಲ್ಲ! ವ್ಯಕ್ತಿಯೊಬ್ಬರನ್ನು ಖಾಸಗಿಯಾಗಿ ಅಥವಾ ಸಾರ್ವ ಜನಿಕವಾಗಿ ಮಾತನಾಡಿಸುವಾಗ ಬಹುವಚನ ಪ್ರಯೋಗ ಅತ್ಯಂತ ಅಗತ್ಯ. ಅಽಕಾರ ಇದೆ ಎಂದ ಮಾತ್ರಕ್ಕೆ ಯಾರೂ ಧರೆಗಿಳಿದವರಲ್ಲ. ಏಕವಚನದಲ್ಲಿ ಮಾತನಾಡಿಸುವುದರಿಂದ ಆ ಕ್ಷಣಕ್ಕೆ ತಮ್ಮ ಸುತ್ತ ಮುತ್ತಲಿನ ಹೊಗಳುಭಟರ ಮಧ್ಯೆ ದೊಡ್ಡಸ್ತಿಕೆ ಮೆರೆಯ ಬಹುದೇ ವಿನಾ ನಿಜವಾಗಿಯೂ ದೊಡ್ಡವರೆನಿಸುವುದಿಲ್ಲ.
ಮತ್ತೊಬ್ಬರಿಗೆ ಕೊಡುವ ಗೌರವ ನಮ್ಮ ವ್ಯಕ್ತಿತ್ವದ ಅನಾವರಣ ಎಂಬುದನ್ನು ಮರೆಯಬಾರದು. ಅಕಸ್ಮಾತ್ ಮಂತ್ರಿಗಳೋ, ಶಾಸಕರೋ ಒಬ್ಬ ವ್ಯಕ್ತಿಯನ್ನು ಏಕ ವಚನದಲ್ಲಿ ಮಾತನಾಡಿಸುವಾಗ ಅವರೂ ತಿರುಗಿ ಏಕವಚನವನ್ನೇ ಬಳಸಿದರೆ ಇವರು ಸಹಿಸಿಕೊಳ್ಳು ತ್ತಾರೆಯೇ? ಹಾಗಾದರೆ ಇವರಿಗೆ ಇರುವ ವ್ಯಕ್ತಿಗೌರವ ಅವರಿಗೆ ಇಲ್ಲ ಎಂದು ನಿರ್ಣಯಿಸಿದವರು ಯಾರು? ಒಂದು ರಾಜ್ಯವನ್ನು, ಕ್ಷೇತ್ರವನ್ನು ಮುನ್ನಡೆಸುವ ನಿಟ್ಟಿ ನಲ್ಲಿ ರಾಜಕೀಯ ನೇತಾರರು ಶಿಸ್ತನ್ನು ಪಾಲಿಸ ಬೇಕಾದದ್ದು, ಅಽಕಾರಿ ವರ್ಗ ಕೆಲಸ ಮಾಡದಿದ್ದಾಗ ಗದರಬೇಕಾದದ್ದು, ಅಗತ್ಯ ಬಿದ್ದರೆ ಶಿಸ್ತುಕ್ರಮ ಕೈಗೊಳ್ಳ ಬೇಕಾದದ್ದು ಇವೆಲ್ಲವೂ ಅನಿವಾರ್ಯವಾದ ವಿಚಾರ ಗಳೇ. ಈ ನೆಲೆಯಲ್ಲಿ ಮುಖ್ಯಮಂತ್ರಿಗಳಾದಿಯಾಗಿ ಅನೇಕ ಸಚಿವರು, ಶಾಸಕರು ಕಾರ್ಯನಿರ್ವಹಿಸುತ್ತಲೂ ಇದ್ದಾರೆ. ಅವರ ಕಾರ್ಯವೈಖರಿಯ ಬಗೆಗೆ ಆಕ್ಷೇಪ ವೇನೂ ಇಲ್ಲ.
ಖಂಡಿತಕ್ಕೂ ಯಾವುದೇ ಪ್ರಗತಿ ಪರಿಶೀ ಲನಾ ಸಭೆ, ವಿಶ್ಲೇಷಣಾ ಸಭೆ, ಪೂರ್ವಭಾವಿ ಸಭೆಗಳು ಗಂಭೀರವಾಗಿಯೇ ನಡೆಯಬೇಕಾದದ್ದು ಸತ್ಯವೇ. ಹಲವು ಸಂದರ್ಭಗಳಲ್ಲಿ ಯಾವುದೋ ಕಚೇರಿಗೆ ಜನ ನಾಯಕರಾದವರು ದಿಢೀರ್ ಭೇಟಿಕೊಡುವುದು, ಅಲ್ಲಿ ಅವ್ಯವಸ್ಥೆಯೋ, ಬೇಜವಾಬ್ದಾರಿಯೋ ಆಗಿರುವುದು ಕಂಡುಬಂದಾಗ ತೀವ್ರವಾಗಿ ಗದರುವುದೆಲ್ಲ ಅಗತ್ಯವೇ. ಆ ಯಾವ ಚಟುವಟಿಕೆಗಳನ್ನೂ ಯಾರೂ ಆಕ್ಷೇಪಿಸು ವಂತಿಲ್ಲ. ಆದರೆ ಪ್ರಶ್ನೆ ಇರುವುದು ಆ ಸಂದರ್ಭಗಳಲ್ಲಿ ಏಕವಚನ ಪ್ರಯೋಗ ಯಾಕೆ ಬರುತ್ತಿದೆ ಎಂಬುದು ಮಾತ್ರ. ಗೌರವಯುತವಾಗಿಯೇ ಟೀಕಿಸಿದರೆ, ಬಹು ವಚನದಲ್ಲೇ ವಿಚಾರಿಸಿದರೆ, ಮಾರ್ಗದರ್ಶನ ನೀಡಿದರೆ ಜನನಾಯಕರೆನಿಸಿಕೊಂಡವರು ಕಳೆದುಕೊಳ್ಳು ವಂಥದ್ದೇನಿದೆ? ತಾವು ವಯಸ್ಸಿನಲ್ಲಿ ಹಿರಿಯರು ಎಂಬ ಏಕೈಕ ಕಾರಣವನ್ನಿಟ್ಟುಕೊಂಡು ಎದುರಿರುವವರಿಗೆ ಏಕವಚನ ಪ್ರಯೋಗಿಸುವುದೂ ಒಪ್ಪತಕ್ಕ ವಿಚಾರವಲ್ಲ.
ಹಾಗಾದರೆ ವಯಸ್ಸಿನಲ್ಲಿ ಕಿರಿಯರಿರುವ ಜನಪ್ರತಿನಿಽಗಳನ್ನು ಅಽಕಾರಿ ವರ್ಗ, ಸಾಮಾನ್ಯ ವರ್ಗ ಏಕವಚನದಲ್ಲಿ ಮಾತನಾಡಿಸುವುದು ಸ್ವೀಕಾರಾ ರ್ಹವಾಗುತ್ತದೆಯೇ? ವಯಸ್ಸಿನ ಕಾರಣದಿಂದ ಬಹುವಚನ, ಏಕವಚನ ನಿರ್ಣಯವಾಗುವುದು ರಕ್ತಸಂಬಂಧದಲ್ಲೇ ವಿನಾ ಸರಕಾರಿ ಸಂಬಂಧದಲ್ಲಲ್ಲ! ಅಂತೆಯೇ ವಯಸ್ಸು, ಅಂತಸ್ತು, ಸ್ಥಾನಮಾನವನ್ನೂ ಮೀರಿ ವಚನಪ್ರಯೋಗ ಸೃಷ್ಟಿಯಾಗುವುದು ಸ್ನೇಹಸಂಬಂಧದಲ್ಲೇ ವಿನಾ ರಾಜಕಾರಣಿ-ಅಧಿಕಾರಿ ಸಂಬಂಧದಲ್ಲಲ್ಲ! ಒಬ್ಬ ಮಂತ್ರಿ, ಜನಪ್ರತಿನಿಽಯ ನಡವಳಿಕೆಯನ್ನು ಅನೇಕ ಮಂದಿ ಗಮನಿಸುತ್ತಾರೆ.
ಅವರನ್ನು ಆದರ್ಶವಾಗಿ ಸ್ವೀಕರಿಸುತ್ತಾರೆ. ಹೀಗಿರುವಾಗ ಈ ಏಕವಚನ ಪ್ರಯೋಗ ಯಾವ ಸಂಸ್ಕಾರವನ್ನು ಜನರಿಗೆ ಮಾದರಿಯಾಗಿ ಕಾಣಿಸುತ್ತದೆ? ಅನೇಕ ಸಂದರ್ಭಗಳಲ್ಲಿ ನಾವು ಏನು ಹೇಳಿದ್ದೇವೆ ಅನ್ನುವುದಕ್ಕಿಂತ ಹೇಗೆ ಹೇಳಿದ್ದೇವೆ ಅನ್ನುವುದೇ ಮುಖ್ಯ. ವ್ಯಕ್ತಿಗತವಾದ ಅವಮಾನವನ್ನು ಮಾಡಿ ದಕ್ಷತೆಯಿಂದ ಕಾರ್ಯನಿರ್ವಹಿಸುವ ಪಾಠ ಮಾಡಿದರೆ ಅದು ಪರಿಣಾಮಕಾರಿ ಎನಿಸಲಾರದು. ಅಂಥ ಸಂದರ್ಭ ಬಂದಾಗ ಹೇಳಿದ್ದನ್ನು ಮಾಡದೇ ಇರುವುದಕ್ಕೆ ‘ಥಿಯ ರೆಟಿಕಲಿ ಕರೆಕ್ಟ್’ ಎನಿಸುವ ಮಾರ್ಗವನ್ನು ಹುಡುಕು ತ್ತಾರೆಯೇ ವಿನಾ ಅಂತರಂಗದಿಂದ ಪ್ರಾಮಾಣಿಕವಾಗಿ, ಹೇಳಿದ್ದನ್ನು ಜಾರಿ ಗೊಳಿಸುವ ಪ್ರಯತ್ನ ಮಾಡುವುದಿಲ್ಲ. ಇಂದು ಸಾಮಾಜಿಕ ಮಾಧ್ಯಮಗಳ ಕಾಲಘಟ್ಟದಲ್ಲಿದ್ದೇವೆ.
ಎಲ್ಲೋ, ಯಾರೋ, ಯಾರನ್ನೋ ಏಕವಚನ ದಲ್ಲಿ ಮಾತನಾಡಿಸಿದ ಸಂಗತಿ ಆ ಪ್ರದೇಶಕ್ಕಷ್ಟೇ ಸೀಮಿತ ವಾಗದೆ ರಾಜ್ಯ, ರಾಷ್ಟ್ರ ಮೀರಿಯೂ ವೈರಲ್ ಆಗುವು ದಿದೆ. ಸಂಸ್ಕಾರಯುತ ಸಮಾಜದಲ್ಲಿ ಅನೇಕರಿಗೆ ತಮ್ಮನ್ನು ಯಾರೋ ನಿಂದಿಸುವುದು ಬದಿಗಿರಲಿ, ಏಕವಚನದಲ್ಲಿ ಮಾತನಾಡಿಸಿ ದರೆ ಸಾಕು, ಅದು ಬಹುದೊಡ್ಡ ಅವಮಾನ ವೆನಿಸುತ್ತದೆ ಎಂಬುದು ಅಽಕಾರ ಇರುವವರಿಗೆ, ಸ್ಥಾನಮಾನ ಹೊಂದಿರುವವರಿಗೆ ನೆನಪಿರಬೇಕು! ಹೀಗಿ ರುವಾಗ ಏಕವಚನದಲ್ಲಿ ಮಾತನಾಡಿಸಿಕೊಂಡ ವ್ಯಕ್ತಿಗೆ ತನ್ನ ಊರಿನ ಜನರ ಮುಂದೆ, ತನ್ನ ಕುಟುಂಬ ವರ್ಗದ ಎದುರು ಎಷ್ಟು ಮಾನನಷ್ಟದ ಭಾವ ಕಾಡಲಿಕ್ಕಿಲ್ಲ ಎಂಬುದನ್ನು ನೇತಾರರು ಅರ್ಥ ಮಾಡಿಕೊಳ್ಳಬೇಕಿದೆ.
ಇಂದು ಐಎಎಸ್, ಐಪಿಎಸ್‌ನಿಂದ ತೊಡಗಿ ನಾನಾ ಸ್ತರದ ಅಽಕಾರಿ ವರ್ಗಗಳು, ರಾಜಕೀಯದ ಮಂದಿ ತಮ್ಮನ್ನು ಏಕವಚನದಲ್ಲಿ ಮಾತನಾಡಿಸು ವಾಗ, ನೇತಾರ ರನ್ನು ಎದುರು ಹಾಕಿಕೊಂಡರೆ ತಮಗಾಗಬಹುದಾದ ಹಾನಿಯನ್ನು ಊಹಿಸಿಕೊಂಡು ಸಹಿಸಿಕೊಳ್ಳುತ್ತಿದ್ದಾ ರೆಯೇ ವಿನಾ ಒಪ್ಪಿಕೊಳ್ಳು ತ್ತಿರುವುದಲ್ಲ. ಯಾರೂ ವ್ಯಕ್ತಿಗತ ಅವಮಾನವನ್ನು ಸಹಿಸಿಕೊಳ್ಳುವುದೂ ಇಲ್ಲ. ಈಚೆಗಿನ ದಿನಗಳಲ್ಲಿ ರಾಜಕಾರಣಿಗಳೂ ಪರಸ್ಪರ ಏಕ ವಚನದಲ್ಲಿ ನಿಂದಿಸುವುದು ಅವ್ಯಾಹತವಾಗಿ ಮುಂದು ವರಿಯುತ್ತಿದೆ. ಇವೆಲ್ಲ ಆಯಾ ರಾಜಕೀಯ ನೇತಾರರ ಕಳಪೆ ಸಂಸ್ಕಾರದ ಅನಾವರಣವೇ ವಿನಾ ವ್ಯಕ್ತಿತ್ವ ಅರಳುತ್ತಿರುವ ಪ್ರಕ್ರಿಯೆಗಳಲ್ಲ. ಹಾಗಂತ ಈ ‘ಏಕವಚನ-ಪ್ರಯೋಗ ಪರಿಣತಮತಿ ಗಳು’ ಕೇವಲ ರಾಜಕಾರಣದಲ್ಲಷ್ಟೇ ಇರುವುದು ಅಂತಲ್ಲ. ಅನೇಕ ಕಡೆಗಳಲ್ಲಿದ್ದಾರೆ. ಕೆಲವೊಂದು ಇಲಾಖೆ ಗಳಲ್ಲೂ, ಅಽಕಾರಿ ವರ್ಗದಲ್ಲೂ ಇದ್ದಾರೆ.
ಪೊಲೀಸ್ ವ್ಯವಸ್ಥೆಯಲ್ಲಂತೂ ಇದು ತೀವ್ರತರವಾಗಿದೆ. ಹಲವು ಮೇಲಽಕಾರಿಗಳು ತಮ್ಮ ಕೈ ಕೆಳಗಿನ ಉದ್ಯೋಗಿಗಳನ್ನು ಏಕವಚನದಲ್ಲೇ ಮಾತ ನಾಡಿಸುವುದು, ನಿಂದಿಸುವುದು ನಿರಂತರವಾಗಿ ಜಾರಿಯಲ್ಲಿದೆ. ಹಾಗಾದರೆ ಆ ಕೆಳಗಿನ ಹಂತದ ಪೊಲೀಸ್ ಸಿಬ್ಬಂದಿಗೆ ಮಾನ-ಮರ್ಯಾದೆ ಎಂಬುದು ಇಲ್ಲವೇ? ಅವೆಲ್ಲ ಮೇಲಽಕಾರಿಗಳ ಕಾಲ ಬುಡದಲ್ಲಷ್ಟೇ ಅಮರಿಕೊಂಡಿವೆಯೇ? ಇನ್ನು ಜನಸಾಮಾನ್ಯರನ್ನು ಮಾತನಾಡಿಸುವಾಗಲೂ ಏಕವಚನ ಬಳಕೆ ಆ ಇಲಾಖೆಯಲ್ಲಿ ದಟ್ಟವಾಗಿದೆ. ಸಜ್ಜನರಿಗೆ ಪೊಲೀಸರು ಹಾಗೂ ಪೊಲೀಸ್ ಸ್ಟೇಷನ್ ‘ಭಯಾನಕ’ ಅನಿಸುವುದಕ್ಕೆ ಇದೂ ಒಂದು ಕಾರಣ. ಜನಸ್ನೇಹಿ ಪೊಲೀಸ್ ಸ್ಟೇಷನ್ ಮಾಡುತ್ತೇವೆಂದು ಅನೇಕ ಮೇಲಧಿಕಾರಿಗಳು ಹೇಳಿಕೆ ಕೊಡುವುದಿದೆ.
ಆದರೆ ಮೂಲ ಸಂಸ್ಕಾರದ ಪಾಠ ಹೇಳಿಸಿಕೊಳ್ಳದ ಮಂದಿಯೇ ಎಲ್ಲೆಡೆ ಇರುವಾಗ ಜನಸ್ನೇಹಿ ಆಗುವುದಾದರೂ ಹೇಗೆ? ಹಾಗಂತ ಗೌರವ ನೀಡಿ ಗೌರವ ಪಡೆಯುವ ಕೆಲವಾರು ಮಂದಿ ಆ ಇಲಾಖೆಯಲ್ಲೂ ಇದ್ದಾರೆ, ಆದರೆ ಅವರು ಅದೇ ಇಲಾಖೆಯಲ್ಲಿನ ಇತರರಿಗೆ ಆದರ್ಶ ಎನಿಸದಿರು ವುದು ಮಾತ್ರ ವಿಷಾದನೀಯ. ಪೊಲೀಸ್ ಇಲಾಖೆ ಎಂಬುದು ಒಂದು ಉದಾಹರಣೆ ಅಷ್ಟೆ, ಇಂಥ ‘ಏಕವಚನ-ಪ್ರಯೋಗ ನಿಪುಣರು’ ಅಲ್ಲಲ್ಲಿ ನೆಲೆ ಯೂರಿದ್ದಾರೆ. ಇಂಥವರೆಲ್ಲ, ಮತ್ತೊಬ್ಬರನ್ನು ಏಕವಚನ ದಲ್ಲಿ ಮಾತನಾಡಿಸಿಯೂ ತಾವು ಬಹುವಚನ ಪಡೆದು ಕೊಳ್ಳುವುದು ತಮ್ಮಲ್ಲಿರುವ ಅಽಕಾರದ ಬಲ ದಿಂದಾಗಿಯೇ ವಿನಾ ವ್ಯಕ್ತಿತ್ವದ ಕಾರಣಕ್ಕಾಗಿ ಅಲ್ಲ ಎಂಬುದನ್ನು ಬ್ರಾಹ್ಮೀಮುಹೂರ್ತದಲ್ಲಿ ಎದ್ದು ನೆನಪಿಸಿ ಕೊಳ್ಳಬೇಕು! ನಿಜ, ಆಯಾ ಪ್ರದೇಶಕ್ಕನುಗುಣವಾಗಿ ಭಾಷೆಯ ಅಭಿವ್ಯಕ್ತಿ ನಾನಾ ತೆರನಾಗಿರುತ್ತದೆ.
ಕರ್ನಾಟಕದ ಕೆಲವು ಭಾಗಗಳಲ್ಲಿ ವ್ಯಕ್ತಿ, ವಯಸ್ಸು, ಯೋಗ್ಯತೆ, ಸಾಧನೆ ಗಳನ್ನೂ ಮೀರಿ ಏಕವಚನ ಪ್ರಯೋಗ ಅತ್ಯಂತ ಸಹಜ ಎಂಬಂತೆ ಬಳಕೆಯಾಗುತ್ತಿರುವುದೂ ಸತ್ಯ. ಹಾಗೆಂದು ರಾಜಕೀಯದಂಥ ಮಹತ್ವಪೂರ್ಣ ವ್ಯವಸ್ಥೆಗೆ ಬಂದಾಗ, ಸರಕಾರಿ ಉದ್ಯೋಗದಂಥ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡಾಗ ತಾವು ಬೆಳೆದ ಪರಿಸರ ಒಪ್ಪುವ ಸಂಸ್ಕಾರಕ್ಕಿಂತ, ರಾಜ್ಯ ಒಪ್ಪುವ ಸಂಸ್ಕಾರ ಬೆಳೆಸಿಕೊಳ್ಳ ಬೇಕಾದದ್ದು ಪ್ರತಿಯೊಬ್ಬನ ಜವಾಬ್ದಾರಿ. ಅದಲ್ಲವಾದರೆ ತನ್ನನ್ನೂ ಇತರರು ಏಕವಚನದಲ್ಲೇ ಕರೆದರೆ ಬೇಸರ ಮಾಡಿಕೊಳ್ಳಬಾರದು!
ಹಾಗಾಗಿ ತನಗೆ ಅದರಿಂದ ನೋವಾಗುತ್ತದೆಯಾದರೆ ಇತರರಿಗೂ ಆಗುತ್ತದೆ ಎಂಬ ಪ್ರe ಸದಾ ಜಾಗೃತವಾಗಿರಬೇಕು. ಹಿರಿಯರಿಂದ ಕಿರಿಯರಿಗೆ ಸಂಸ್ಕಾರ ಹರಿದುಬರ ಬೇಕು. ಉನ್ನತ ಶ್ರೇಣಿಯಲ್ಲಿರುವ ಮಂದಿಯಿಂದ ಕೆಳಗಿನ ಹಂತದವರೆಗೆ ಕಂಡುಬರಬೇಕು. ವ್ಯಕ್ತಿ ವ್ಯಕ್ತಿಗಳ ನಡುವಣ ಗೌರವಾದರಗಳಿಗೆ ಧಕ್ಕೆಯಾಗದಂತೆ ವ್ಯವಹರಿಸುವ ಕಲೆ ಪ್ರತಿಯೊಬ್ಬರಿಗೂ ತಿಳಿದಿರಬೇಕು. ಅದರಲ್ಲೂ ರಾಜಕಾರಣಕ್ಕೆ, ಸರಕಾರಿ ಉದ್ಯೋಗಕ್ಕೆ ಅಡಿಯಿಡು ವವರಿಗೆ ಈ ಸಂಸ್ಕಾರದ ಪಾಠ ಮೊದಲು ನಡೆಯಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ಅದಾಗಲೇ ಈ ರಂಗಗಳಲ್ಲಿ ಹಿರಿಯರಾಗಿರುವವರು ತಮ್ಮ ಸಂಸ್ಕಾರದ ಹಿರಿತನವನ್ನು ಮತ್ತೆ ಮತ್ತೆ ವಾಸ್ತವದಲ್ಲಿ ಕಾಣಿಸುತ್ತಿರಬೇಕು. ನಡೆ – ನುಡಿಯಲ್ಲಿ ಅಧಿಕಾರದ ದರ್ಪದ ಬದಲು ಸಂಸ್ಕಾರದ ಪಾಠ ಕಾಣಿಸಲಾರಂಭಿಸಿದಾಗ ಅನೇಕ ಸಮಸ್ಯೆಗಳು, ಸವಾಲುಗಳು ತನ್ನಿಂದತಾನೇ ಪರಿಹರಿಸಲ್ಪಡುತ್ತವೆ!
(ಲೇಖಕರು ಪ್ರಾಂಶುಪಾಲರು)