ಬಾಸ್ ಮಾಡಿದ್ದೇ ಸರಿ !
ಅನುಭವಾಮೃತ
ಜಯಪ್ರಕಾಶ್ ಪುತ್ತೂರು
ಚಲಾವಣೆಯಲ್ಲಿರುವ ‘ಬಾಸ್ ಇಸ್ ಆಲ್ವೇಸ್ ರೈಟ್’ ಎಂಬ ಮಾತು ಆಡಳಿತ ಶಾಸದಲ್ಲಿರುವುದನ್ನು ಗಮನಿಸಬಹುದು. ಇಂದಿನ ದಿನಗಳಲ್ಲಿ ಇದರ ಒಳಮರ್ಮ ಅರಿತುಕೊಳ್ಳುವ ಅನಿವಾರ್ಯ ಇದೆ. ನಿಜವಾದ ನಾಯಕತ್ವದ ಅರಿವು ಇಲ್ಲದ ಹೆಚ್ಚಿನ ಬಾಸ್ ಗಳಲ್ಲಿ ಕಾಣಬರುವ ‘ನಾನು ಮಾಡಿದ್ದೇ ಸರಿ’ ಎಂಬ ಮನೋಭಾವ ಹಾಗೂ ಅಧಿಕಾರದ ಅಹಂಕಾರ ಹಲವಾರು ಸಂಸ್ಥೆಗಳಲ್ಲಿ ಮೆರೆಯುವುದನ್ನು ಕಾಣುತ್ತೇವೆ.
ವಾಸ್ತವವಾಗಿ ಬಾಸ್ ಎನಿಸಿಕೊಂಡವರು ಸಹೋದ್ಯೋಗಿಗಳಿಗೆ ಮಾರ್ಗದರ್ಶನ, ಕರ್ತವ್ಯ ನಿರ್ವಹಿಸುವ ಸ್ವಾತಂತ್ರ್ಯ ಮತ್ತು ಸ್ನೇಹಮಯ ವಾತಾವರಣವನ್ನು ಒದಗಿಸಬೇಕು. ಹಾಗಾದಾಗ ಮಾತ್ರವೇ ಅವರು ಸಹೋದ್ಯೋಗಿಗಳ ಪಾಲಿಗೆ ಆದರ್ಶಪ್ರಾಯರಾಗುತ್ತಾರೆ, ಅವರಿಂದಸ್ಮರಿಸಲ್ಪಡುತ್ತಾರೆ. ಕರ್ತವ್ಯ ಎಂದರೇನು ಎಂಬುದನ್ನು ಅರಿತುಕೊಳ್ಳುವುದರ ಜತೆಗೆ ಒಂದಷ್ಟು ಗಟ್ಟಿ ಅನುಭವವನ್ನೂ ಹೊಂದಿದ್ದರೆ ಇದುಸಾಕಾರವಾಗಬಲ್ಲದು. ಪ್ರತಿಯೊಬ್ಬ ಉದ್ಯೋಗಿಯ ಜೀವನದಲ್ಲೂ ಇಂಥ ಅನುಭವಿ ಬಾಸ್ ಗಳು ಬಂದುಹೋಗುತ್ತಾರೆ; ಆದರೆ ಮಾನವೀಯತೆಯ ನೆಲೆಯಲ್ಲಿ ಉತ್ತಮ ಮನುಷ್ಯನಾಗಿ ನಡೆದುಕೊಳ್ಳುವವರು ತೀರಾ ವಿರಳವೆನ್ನಬೇಕು.
ಎಲ್ಲದಕ್ಕೂ ಅನುಭವವೇ ಮೂಲಾಧಾರವೆಂದು ಭಾವಿಸುವುದೂ ಸರಿಯಲ್ಲ. ನಾಯಕತ್ವದ ಲಕ್ಷಣಗಳು ಮತ್ತು ಅರ್ಹತೆ ಕೂಡ ಇಲ್ಲಿ ಮುಖ್ಯವಾಗು ತ್ತವೆ. ಇವು ಖಂಡಿತ ಯಾರ ಜನ್ಮಸಿದ್ಧ ಹಕ್ಕೂ ಅಲ್ಲ. ‘ಬಾಸ್’ ಎಂದು ಕರೆಸಿಕೊಳ್ಳುವವರು ತಮ್ಮ ನಡವಳಿಕೆ ಮತ್ತು ಪರಿಶ್ರಮಗಳ ಸಮ್ಮಿಲನದಿಂದ ರೂಪುಗೊಳ್ಳುವಂತಾಗಬೇಕು. ಹಾಗಿದ್ದಾಗ ಮಾತ್ರವೇ ಅದು ಸಹೋದ್ಯೋಗಿಗಳಿಗೆ ಮಾತ್ರವಲ್ಲದೆ ಆಯಾ ಸಂಸ್ಥೆಗೂ ಪ್ರಯೋಜನಕಾರಿಯಾಗಿ ಪರಿಣಮಿಸುತ್ತದೆ. ಕಾಯಕ ಎಂದ ಮೇಲೆ ಜವಾಬ್ದಾರಿಯ ಜತೆಜತೆಗೆ ಒತ್ತಡಗಳೂ ಹೆಗಲೇರುವುದು ಸಹಜ.
ಹಾಗಂತ ಸಹೋದ್ಯೋಗಿಗಳ ಮೇಲೆ ವೃಥಾ ಸಿಡುಕುವುದು, ವಿನಾಕಾರಣ ತಪ್ಪು ಹುಡುಕುವುದು, ತೃಪ್ತಿ-ಅಸಹನೆಯಿಂದ ನಡೆದುಕೊಳ್ಳುವುದು ‘ಬಾಸ್’ ಎನಿಸಿಕೊಂಡವರಿಗೆ ಭೂಷಣವಲ್ಲ. ಇಂದಿನ ಹೆಚ್ಚಿನ ಸಂಖ್ಯೆಯ ಬಾಸ್‌ಗಳಲ್ಲಿ ಮಾನವೀಯತೆ ಕೂಡ ಮರೀಚಿಕೆಯಾಗಿದೆ. ಈ ನಿಟ್ಟಿನಲ್ಲಿ, ನನ್ನ ವೃತ್ತಿಜೀವನದ ಅನುಭವಗಳ ಪೈಕಿ ಕೆಲವನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತ ವಾದೀತು. ಹಿಂದೊಮ್ಮೆ ನಾನು ಕಾರ್ಯನಿರ್ವಹಿಸುತ್ತಿದ್ದ ಬ್ಯಾಂಕಿನ ಓರ್ವ ಉಪಮಹಾ ಪ್ರಬಂಧಕರಿಗೆ (ಎಜಿಎಂ) ಸಹೋದ್ಯೋಗಿಗಳ ಎಲ್ಲ ಕಾರ್ಯಗಳಿಗೆ ಟೀಕೆ-ಟಿಪ್ಪಣಿ ಹಾಕುತ್ತಾ ತಿದ್ದುಪಡಿ ಮಾಡುವ ಚಟವಿತ್ತು. ಸಂಶಯ ಎಂಬುದೇ ಅವರ ಉಸಿರಾದಂತಿತ್ತು. ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುವ ವೇಳೆ ಸುದ್ದಿಸಂಪಾದಕರೊಬ್ಬರಿಗೆ ತಮ್ಮ ಕೆಳಗಿನವರನ್ನು ಎಂದೂ ಉನ್ನತಿಗೇರಲು ಬಿಡಬಾರದೆಂಬ ಕೆಟ್ಟ ಹಠವಿತ್ತು.
ಎಲ್‌ಐಸಿ ಸಂಸ್ಥೆಯ ವಿಭಾಗೀಯ ವ್ಯವಸ್ಥಾಪಕ ರೊಬ್ಬರಿಗೆ ವ್ಯವಹಾರ ಸಮೀಕ್ಷೆಯ ನೆಪದಲ್ಲಿ ದಿನವೂ ದೂಷಣೆ-ನಿಂದನೆಗಳಿಂದ ಕಿರುಕುಳನೀಡುವುದು ಅಭ್ಯಾಸವಾಗಿಹೋಗಿತ್ತು. ಇನ್ನು, ವಿಜ್ಞಾನಿಗಳು ಮತ್ತು ಮಿಲಿಟರಿ ಅಧಿಕಾರಿಗಳು ತುಂಬಿರುವ ರಕ್ಷಣಾ ಸಂಶೋಧನಾಲಯ ಮತ್ತು ಉತ್ಪಾದನಾ ಕೇಂದ್ರದಲ್ಲಿ ಕೆಲ ಬಾಸ್‌ಗಳಿಗೆ ತಾವೊಬ್ಬ ಸರ್ವಜ್ಞ ಎಂಬ ದುರಹಂಕಾರ ಇದ್ದುದನ್ನು ಕಂಡಿದ್ದೇವೆ. ವೈಮಾನಿಕ ಕ್ಷೇತ್ರದ ವಿಜ್ಞಾನಿಯೊಬ್ಬರು ಆಡಳಿತ ವ್ಯವಸ್ಥೆಯ ನಿರ್ದೇಶಕರ ಜವಾಬ್ದಾರಿಯನ್ನೂ ತಮ್ಮ ಮೇಲೆಳೆದುಕೊಂಡು ಎಲ್ಲರಿಗೂ ಉಸಿರುಕಟ್ಟಿಸುತ್ತಿದ್ದುದೂ ಇದೆ. ನಿಜ ಹೇಳಬೇಕೆಂದರೆ, ಹಣಕಾಸು ವಿಭಾಗ, ಆಡಳಿತ ನಿರ್ವಹಣೆ, ಮಾನವ ಸಂಪನ್ಮೂಲ, ಸಿಬ್ಬಂದಿ ಕಲ್ಯಾಣ ಮತ್ತು ಸಾರ್ವಜನಿಕ ಸಂಪರ್ಕ ಮುಂತಾದವಿಭಾಗಗಳಲ್ಲಿ ವೃತ್ತಿಪರ ಅಽಕಾರಿಗಳಿದ್ದರೆ ಮಾತ್ರವೇ ಎಲ್ಲರಿಗೂ ಕ್ಷೇಮವೆಂಬುದನ್ನು ಅಲ್ಲಗಳೆಯುವಂತಿಲ್ಲ.
ಕೆಲಸವೊಂದರ ಹೊಣೆಹೊತ್ತ ಮೇಲೆ ಪಾರದರ್ಶಕತೆಯನ್ನು ಪ್ರತಿಬಿಂಬಿಸಲು ಮೊದಲ ಆದ್ಯತೆ ಕೊಡುವವರೂ ಇದ್ದಾರೆ; ಆದರೆ ಮೇಲಧಿಕಾರಿ ಗಳೆಂಬ ಬಾಸ್‌ಗಳೇ ಅವರಿಗೆ ತಡೆಯಾಗಿ ಚಿಗುರಿನಲ್ಲೇ ಅವರ ಬೆಳವಣಿಗೆಯನ್ನು ಚಿವುಟಿಹಾಕಲು ಮುಂದಾದಾಗ ಉತ್ಸಾಹಭರಿತ ಕರ್ತವ್ಯ ನಿರ್ವಹಣೆಗೆ ಅಡಚಣೆಯಾಗುತ್ತದೆ. ಬಾಸ್‌ಗಳ ಮನಸ್ಸಿಗೆ ಅಧಿಕಾರದ ಮದ ನಾಟಿದರೆ ಬೇರೇನು ತಾನೇ ನಿರೀಕ್ಷಿಸಲಾದೀತು? ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುವಾಗ ಸಂಘರ್ಷ, ವೈಮನಸ್ಸು ಹಾಗೂ ವಿರೋಧಾಭಾಸ ಆಗಾಗ ಇಣುಕುವುದು ಸಹಜವಾದರೂ, ಎಲ್ಲದಕ್ಕೂ ಒಂದು ‘ಮಿತಿ’ ಎಂಬುದಿದೆ. ಇಂಥ ವರ್ತನೆಗಳು ಬೆಳೆಯುತ್ತಾ ಹೋಗಿಬಿಟ್ಟರೆ ವೈಯಕ್ತಿಕ ದ್ವೇಷಕ್ಕೆ ಕಾರಣವಾಗುವುದರಲ್ಲಿ ಸಂದೇಹವಿಲ್ಲ. ಹಾಗಾಗದಿರಲಿ!
(ಲೇಖಕರು ಮಾಜಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ಡಿಆರ್‌ಡಿಒ)