ಒಳಿತಿನ ಹಣತೆ ಹಚ್ಚೋಣ
ಸದಾಶಯ
ಅಜಯ್ ಅಂಗಡಿ
ದೀಪಾವಳಿ ದೀಪಗಳ ಹಬ್ಬ. ಸಾಲು ಸಾಲಾಗಿ ಹಣತೆ ಹಚ್ಚಿ ಕತ್ತಲ ನಡುವೆ ಬೆಳಕಿನ ಬಳ್ಳಿಯನ್ನು ಹಬ್ಬಿಸುವ ಸಂಭ್ರಮದ ಕ್ಷಣ. ಬಣ್ಣ ಬಣ್ಣದ ಆಕಾಶಬುಟ್ಟಿಗಳನ್ನು ಮನೆಯ ಮುಂಭಾಗದ ಕೆನಾಪಿಗೆ ಕಟ್ಟಿ, ರಂಗು ರಂಗಿನ ಪಟಾಕಿಗಳನ್ನು ಸಿಡಿಸಿ ಖುಷಿ ಪಡುವ ವರುಷದ ಉತ್ಸವವಿದು. ಪಟಾಕಿ ಈಗ ದೀಪಾವಳಿಗಷ್ಟೆ ಸೀಮಿತವಾಗಿಲ್ಲ! ಅದು ಬೇರೆ ಮಾತು.
ಭಾರತೀಯ ಪರಂಪರೆಯಲ್ಲಿ ಪ್ರತಿಯೊಂದು ಹಬ್ಬವನ್ನೂ ವಿಶಿಷ್ಟವಾಗಿ ಆಚರಿಸುವುದು ವಾಡಿಕೆ. ಎಲ್ಲ ಹಬ್ಬಗಳ ಹಾಗೆ ದೀಪಾವಳಿಯೂ ಐತಿಹ್ಯ ಮತ್ತುಪುರಾಣಗಳಿಂದ ಹೊರತಲ್ಲ. ದೀಪಾವಳಿಯನ್ನು ಕರ್ನಾಟಕದ ಹಲವು ಪ್ರಾಂತ್ಯಗಳಲ್ಲಿ ವಿಭಿನ್ನ ರೀತಿಗಳಲ್ಲಿ ಆಚರಿಸುತ್ತಾರೆ. ಆಯಾ ರೀತಿ ರಿವಾಜುಗಳಿಗೆ ತಕ್ಕಂತೆ ಅಲ್ಲಿನ ಜನಪದರಲ್ಲಿ ನಂಬಿಕೆಗಳು ಇರುತ್ತವೆ. ಶ್ರೀ ಕೃಷ್ಣನು ನರಕಾಸುರನನ್ನು ಸಂಹರಿಸಿದ ದಿನವನ್ನು ನರಕ ಚತುರ್ದಶಿ ಯೆಂದೂ, ವಿಷ್ಣುವು ವಾಮನಾವತಾರದಲ್ಲಿ ಬಂದು ಬಲಿ ಚಕ್ರವರ್ತಿಯ ಬಳಿ ಮೂರು ಹೆಜ್ಜೆಯಷ್ಟು ಜಾಗ ಕೇಳಿ ಪಡೆದು ಅವನನ್ನು ಪಾತಾಳಕ್ಕೆ ಅದುಮಿದ ದಿನವನ್ನು ಬಲಿ ಪ್ರತಿಪದ ಎಂದೂ ಆಚರಿಸುವುದು ಪ್ರತೀತಿ.
ಕರ್ನಾಟಕವಲ್ಲದೆ ಭಾರತದ ಬೇರೆ ಬೇರೆ ರಾಜ್ಯಗಳಲ್ಲೂ ವೈವಿಧ್ಯಮಯ ಆಚರಣೆಗಳ ಮೂಲಕ ದೀಪಾವಳಿ ಜನಮನಗಳಲ್ಲಿ ಮಿಳಿತವಾಗಿದೆ. ಅಂಧಕಾರವನ್ನು ಹೊಡೆದೋಡಿ ಸುವ ಯತ್ನದಲ್ಲಿ ಈಗಲೂ ದೀಪಾವಳಿಯೇ ಪ್ರಮುಖ ನಿದರ್ಶನ ವಾಗಿದೆ. ದೀಪಾವಳಿಯೆಂದ ಮೇಲೆ ಒಂದಷ್ಟು ಪಟಾಕಿ ಸಿಡಿಸದಿದ್ದರೆ ಹಬ್ಬ ಹೇಗೆ ಸಂಪನ್ನವಾದೀತು? ಬಹಳಷ್ಟಲ್ಲದಿದ್ದರೂ ಕೊಂಚವಾದರೂ ಪಟಾಕಿಗಳ ಸದ್ದು ಕಿವಿಗೆ ಬೀಳಲೇಬೇಕು. ಹೂ ಕುಂಡಗಳಿಂದ ಬೆಳಕು ಕಾರಂಜಿಯಂತೆ ಚಿಮ್ಮಬೇಕು. ಭೂಚಕ್ರ ಗಿರಗಿರನೆ ತಿರುಗುತ್ತಾ ನಮ್ಮನ್ನು ತನ್ನ ಸುತ್ತ ಸುತ್ತುವಂತೆ ಮಾಡಬೇಕು. ಸರಪಟಾಕಿಯ ಕಿವಿಗಡಚಿಕ್ಕುವ ನಿರಂತರ ಸದ್ದಿಗೆ ಭಯ ಮಿಶ್ರಿತ ಆನಂದ ಅನುಭವಿಸಿ ಖುಷಿ ಪಡಬೇಕು. ಇವಿಷ್ಟೂ ದೀಪದ ಸಾಲುಗಳ ಹಿನ್ನೆಲೆಯ ಮುಂದೆ ನಡೆಯಲೇಬೇಕು. ಆಗಲೇ ಹಬ್ಬಕ್ಕೊಂದು ಕಳೆ.
ಆದರೆ, ನಾವು ಜಾಗರೂಕತೆಯಿಂದ ಇರಬೇಕಷ್ಟೆ. ಅಗತ್ಯ ಸುರಕ್ಷಿತ ವಲಯದಲ್ಲಿ ಇದ್ದುಕೊಂಡು ಪಟಾಕಿಯನ್ನು ಸುಡುವುದು ನಮಗೇ ಕ್ಷೇಮ.ಅದರೊಟ್ಟಿಗೆ ಪ್ರಕೃತಿಯ ಬಗ್ಗೆಯೂ ಯೋಚಿಸಬೇಕಲ್ಲವೆ? ನಮ್ಮ ಈ ಆಚರಣೆ ಪರಿಸರ ಮಾಲಿನ್ಯಕ್ಕೆ ಕಾರಣವಾಗಬಾರದು. ಹಾಗಂತ ಆಚರಣೆ ನಿಲ್ಲಿಸೋದಾ? ಖಂಡಿತ ನಿಲ್ಲಿಸಬಾರದು. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವುದೇ ಇದಕ್ಕೆ ದಾರಿ. ಪರಿಸರಕ್ಕೂ ಹಾನಿಯಾಗದಂತೆ, ನಮ್ಮ ಆಸೆಗಳೂ ಪೂರೈಸುವಂತೆ ಯೋಚಿಸಿ ಆಚರಿಸಬೇಕಷ್ಟೆ. ಪರಿಸರಸ್ನೇಹಿ ಪಟಾಕಿಗಳ ಉಪಯೋಗದಿಂದ ಈ ಅಪಾಯವನ್ನು ಕೊಂಚ ತಗ್ಗಿಸುವ ಪ್ರಯತ್ನ ಮಾಡಬೇಕು.
ಪರಿಸರವನ್ನು ಕಾಪಾಡುವುದೂ ನಮ್ಮದೇ ಕರ್ತವ್ಯ ಆಲ್ಲವೇ? ಪ್ರಸಕ್ತ ಕಾಲಘಟ್ಟದಲ್ಲಿ ಸಮಾಜದಲ್ಲಿ ಬರೀ ಕೆಟ್ಟ ಮನಸ್ಥಿತಿಗಳೇ ತುಂಬಿರುವುದನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಅದರಲ್ಲೂ ನಮ್ಮ ನೆಲದ ಸಂಸ್ಕೃತಿಯನ್ನು ವಿರೋಽಸುವ, ನಮ್ಮ ಭಾರತೀಯ ಪರಂಪರೆಯನ್ನು ಅವಹೇಳನ ಮಾಡುವ ಮನಸ್ಥಿತಿಗಳು ಮತ್ತು ವ್ಯವಸ್ಥೆಗಳು ನಮ್ಮ ಆಸುಪಾಸಿನಲ್ಲಿ ಇರುವುದೇ ವಿಷಾದನೀಯ. ಹಾಗಾಗಿ ಈ ಸಮಯದಲ್ಲಿ ಅಂಥ ಹೀನ ಮನಸ್ಥಿತಿಗಳನ್ನು ದಹಿಸುವ ಪ್ರಾರ್ಥನೆ ನಮ್ಮದಾಗಬೇಕು. ಕೆಟ್ಟದ್ದನ್ನು ಸುಡೋಣ, ಒಳಿತಿನ ಹಣತೆ ಹಚ್ಚುತಾ ಕತ್ತಲ ಸೀಳಿ ಬೆಳಕಿನ ಕಿರಣವೊಂದು ಮೂಡುವ ಹಾಗೆ ಮಾಡೋಣ.