ಸಾಹಿರ್‌: ಶ್ರೀಮಂತ ಅಪ್ಪನ ಬಂಡಾಯಗಾರ ಮಗ !
ಸಂಗತ
ಡಾ.ವಿಜಯ್ ದರಡಾ
ನಾನು ಮುಂಬೈನಲ್ಲಿ ಕಾಲೇಜಿಗೆ ಹೋಗುತ್ತಿದ್ದಾಗ ಮೊದಲ ಬಾರಿ ಸಾಹಿರ್ ಅವರನ್ನು ಭೇಟಿಯಾಗಿದ್ದೆ. ಸಂಗೀತ ನಿರ್ದೇಶಕ ಜಯದೇವ್ ನನ್ನ ಮನೆಯ ಕೆಳಗೇ ವಾಸಿಸುತ್ತಿದ್ದರು. ಆ ಸಮಯದಲ್ಲಿ ಅವರು ‘ಹಮ್ ದೋನೋ’ ಸಿನಿಮಾದ ಪ್ರಸಿದ್ಧ ‘ಮೇ ಜಿಂದಗೀ ಕಾ ಸಾಥ್ ನಿಭಾತಾ ಚಲಾ ಗಯಾ, ಹರ್ ಫಿಕರ್ ಕೋ ಧೂಯೇ ಮೇ ಉಡಾತಾ ಚಲಾ ಗಯಾ’ ಹಾಡಿಗೆ ಸಂಗೀತ ಸಂಯೋಜಿಸುತ್ತಿದ್ದರು. ಅಲ್ಲಿಗೆ ಸಾಹಿರ್ ಬಂದಿದ್ದರು. ಆ ಭೇಟಿ ಸಂಗೀತ ಹಾಗೂ ಸಾಹಿತ್ಯದ ಬಗ್ಗೆ ನನಗಿದ್ದ ಪ್ರೀತಿಯನ್ನು ಇನ್ನಷ್ಟು ಹೆಚ್ಚಿಸಿತ್ತು. ಇವತ್ತಿಗೂ ಮನಸ್ಸಿನಲ್ಲಿ ಹಸಿರಾಗಿರುವ ಭೇಟಿಯದು.
ಸಾಹಿರ್ ಎಂಥಾ ವಿಶೇಷ ವ್ಯಕ್ತಿಯೆಂದರೆ, ಜಗತ್ತು ಅವರನ್ನು ಯಾವತ್ತೂ ಮರೆಯಲು ಸಾಧ್ಯವೇ ಇಲ್ಲ. ಪ್ರೀತಿಯ ಸಾಗರದಲ್ಲಿ ಮುಳುಗೆದ್ದು, ಬೇಸರದ ಅಂಗಳದಲ್ಲಿ ಕುಳಿತು, ದುಃಖದ ಭಾವನೆಗಳನ್ನು ಅವರು ಯಾವ ಪರಿ ತೀವ್ರವಾಗಿ ಕಟ್ಟಿಕೊಟ್ಟಿದ್ದರೆಂದರೆ ಅದು ಅವರ ಹೃದಯವನ್ನೇ ಛಿದ್ರಗೊಳಿಸಿತ್ತು.ಸಾಹಿರ್ ಮಾನವೀಯತೆಯಿಂದ ತುಂಬಿ ತುಳುಕುತ್ತಿದ್ದ ಮನುಷ್ಯ. ಯಾವತ್ತೂ ಮದುವೆಯಾಗದ ಅವರು ತಂದೆಯೊಬ್ಬನ ಪ್ರೀತಿ ಹಾಗೂ ಆಶೀರ್ವಾದ ವನ್ನು ಅಭಿವ್ಯಕ್ತಿಸುವ ವಿಶಿಷ್ಟ ಪದಪುಂಜಗಳ ಗೀತಸಾಹಿತ್ಯವನ್ನು ಬರೆದಿದ್ದರು.
‘ಬಾಬುಲ್ ಕಿ ದುವಾಯೇ ಲೇತಿ ಜಾ, ಜಾ ತುಜಕೋ ಸುಖಿ ಸಂಸಾರ್ ಮಿಲೇ’ ಎಂದು ಬರೆದರು. ‘ತು ಹಿಂದು ಬನೇಗಾ ನ ಮುಸಲ್ಮಾನ್ ಬನೇಗಾ, ಇನ್ಸಾನ್ ಕಿ ಔಲಾದ್ ಹೈ ಇನ್ಸಾನ್ ಬನೇಗಾ’ ಹಾಗೂ ‘ಅಲ್ಲಾ ತೇರೋ ನಾಮ್, ಈಶ್ವರ್ ತೇರೋ ನಾಮ್’ ಎಂದು ಅವರು ಜಗತ್ತಿಗೆ ನೀಡಿದ ಸಂದೇಶವಂತೂಯಾವತ್ತೂ ಅಳಿಯದು.
ಅಬ್ದುಲ್ ಹಯೀ ಸಾಹಿರ್ ಅವರ ಮೂಲ ಹೆಸರು. ಸಾಹಿರ್ ಲೂಧಿಯಾನ್ವಿ ಎಂದೇ ಪ್ರಸಿದ್ಧರಾದವರು. ಹುಟ್ಟಿದ್ದು ಲೂಧಿಯಾನಾದಲ್ಲಿ, ೧೯೨೧ರ ಮಾರ್ಚ್ ೮ರಂದು. ಮೃತಪಟ್ಟಿದ್ದು ಮುಂಬೈನಲ್ಲಿ, ೧೯೮೦ರ ಅಕ್ಟೋಬರ್ ೨೫ರಂದು. ಈ ನಡುವಿನ ೬೦ ವರ್ಷಗಳ ಬದುಕಿನಲ್ಲಿ ತಮ್ಮದೇ ಜೀವನದಅನೇಕ ದಂತಕತೆಗಳ ಜತೆಗೆ ಸಾಕಷ್ಟು ಸುಂದರ ಕವಿತೆ ಹಾಗೂ ಸಂಗೀತವನ್ನು ನಮಗಾಗಿ ಬಿಟ್ಟುಹೋದರು. ನಿಜಕ್ಕೂ ಅವರೊಬ್ಬ ಅದ್ಭುತ ಕವಿ. ಸಂಗೀತದ ಸಾಗರಕ್ಕೆ ಸಾಹಿರ್ ಧುಮುಕಿದಾಗ ಅದಾಗಲೇ ಅಲ್ಲಿ ಫೈಜ್ ಅಹ್ಮದ್ ಫೈಜ್, ಫಿರಾಕ್ ಗೋರಖಪುರಿ ಹಾಗೂ ಇಕ್ಬಾಲ್ ಮುಂತಾದ ಘಟಾನು ಘಟಿಗಳಿದ್ದರು. ಹೀಗಾಗಿ ಅವರ ನಡುವೆ ಯಾರಿಗೇ ಆದರೂ ತಮ್ಮದೊಂದು ಹೆಜ್ಜೆಗುರುತು ಮೂಡಿಸುವುದು ಸುಲಭವಿರಲಿಲ್ಲ!
ಹಾಗಂತ ಸಾಹಿರ್ ಅದನ್ನು ಮಾಡಲು ಪ್ರಯತ್ನ ಕೂಡ ಪಡಲಿಲ್ಲ! ಆದರೆ ಅವರ ಹೃದಯದಿಂದ ಬಂದ ಧ್ವನಿಯು ಜನರ ಹೃದಯವನ್ನು ತಟ್ಟಿತು. ಹೀಗಾಗಿ ಸಾಹಿರ್ ಬಹಳ ಬೇಗ ಸಂಗೀತ ಲೋಕದ ಚಕ್ರವರ್ತಿಯಾಗಿಬಿಟ್ಟರು. ೧೯೪೩ರಲ್ಲಿ ಅವರ ಮೊದಲ ಪುಸ್ತಕ ‘ತಲ್ಖಿಯಾ’ ಪ್ರಕಟವಾಯಿತು. ಅಲ್ಲಿಂದ ನಂತರ ಬದುಕಿನ ಕೊನೆಯುಸಿರಿನವರೆಗೂ ಅವರು ಕವಿತೆಗಳ ಸಹವಾಸ ಬಿಡಲಿಲ್ಲ ಅಥವಾ ಕವಿತೆಗಳು ಅವರ ಸಹವಾಸ ಬಿಡಲಿಲ್ಲ. ಅವರು ಬರೆದ ಕವಿತೆಗಳು, ಹಾಡುಗಳು ಶಾಶ್ವತ ವಾದವು. ತನ್ಮೂಲಕ ಸ್ವತಃ ಅವರೇ ಶಾಶ್ವತರಾದರು!
ಬದುಕಿನ ಪ್ರತಿಯೊಂದು ತತ್ತ್ವವನ್ನೂ ಸಾಹಿರ್ ಲೂಧಿಯಾನ್ವಿ ಬಹಳ ಹತ್ತಿರದಿಂದ ಅನುಭವಿಸಿದ್ದರು. ಅವರ ತಂದೆ ಒಬ್ಬ ಶ್ರೀಮಂತ ಜಮೀನ್ದಾರ. ಆತನಿಗೆ ಸಾಕಷ್ಟು ಹೆಂಡತಿಯರಿದ್ದರು. ಸಾಹಿರ್‌ನ ತಾಯಿಗೆ ಅವರು ಯಾವಾಗಲೂ ತುಂಬಾ ಕಿರುಕುಳ ನೀಡುತ್ತಿದ್ದರು. ಅದು ಸಾಹಿರ್‌ಗೆ ನೋವುಂಟು ಮಾಡಿತ್ತು. ಕೊನೆಗೆ ಕಿರುಕುಳ ತಾಳಲಾಗದೆ ಅವರ ತಾಯಿ ಗಂಡನನ್ನು ತೊರೆದಾಗ ಸಾಹಿರ್ ಕೂಡ ತಂದೆ ಹಾಗೂ ಅವರ ಆಸ್ತಿಯನ್ನು ತೊರೆದರು. ಬಹುಶಃ ಹೀಗೆಲ್ಲ ಆಗಬೇಕು ಎಂದು ವಿಽಯೇ ಹಣೆಯಲ್ಲಿ ಬರೆದಿತ್ತೇನೋ.
ಏಕೆಂದರೆ ಸಾಹಿರ್‌ನ ಬದುಕಿಗೆ ಬಡತನ ಪ್ರವೇಶ ಮಾಡದೆ ಇದ್ದಿದ್ದರೆ ಸಮಾಜದಲ್ಲಿರುವ ಶೂನ್ಯವನ್ನು ಅವರು ಅರ್ಥ ಮಾಡಿಕೊಳ್ಳುವುದಕ್ಕಾದರೂ ಹೇಗೆ ಸಾಧ್ಯವಾಗುತ್ತಿತ್ತು? ತಂದೆಯ ದಬ್ಬಾಳಿಕೆಯನ್ನು ಅನುಭವಿಸದೇ ಇದ್ದಿದ್ದರೆ ಅವರ ಬದುಕಿನಲ್ಲಿ ಬಂಡಾಯದ ಪ್ರವೃತ್ತಿಯಾದರೂ ಹೇಗೆ ಬರುತ್ತಿತ್ತು? ಸಾಹಿರ್ ಗೆ ಹೆಸರು ತಂದುಕೊಟ್ಟಿದ್ದೇ ಈ ಬಂಡಾಯ. ‘ಜಿನ್ಹೇ ನಾಜ್ ಹೈ ಹಿಂದ್ ಪರ್ ವೋ ಕಹಾ ಹೈ? ಯೇ ಪರ್ಪಂಚ್ ಗಾಲಿಯಾಂ,ಯೇ ಬಾದಾಮ್ ಬಜಾರ್, ಯೇ ಗುಮ್ನಾಮ್ ರಹಿ, ಯೇ ಸಿಕ್ಕೋಂ ಕಿ ಝನ್‌ಕಾರ್, ಯೇ ಇಸ್ಮತ್ ಕೇ ಸೌದೇ, ಯೇ ಸೌದೋಂ ಪೇ ತಕರಾರ್, ಜಿನ್ಹೇ ನಾಜ್ ಹೈ ಹಿಂದ್ ಪರ್ ವೋ ಕಹಾ ಹೈ’ ಎಂದು ‘ಪ್ಯಾಸಾ’ ಸಿನಿಮಾಕ್ಕೆ ಸಾಹಿರ್ ಗೀತೆ ಬರೆದಾಗ ಸಂಸತ್ತಿನಲ್ಲಿ ದೊಡ್ಡ ಗದ್ದಲವಾಗಿತ್ತು.
ರೆಡ್ ಲೈಟ್ ಏರಿಯಾದ ನೋವಿನ ಕಟು ವಾಸ್ತವಗಳನ್ನು ಈ ಕವಿತೆಯು ನಾಗರಿಕ ಸಮಾಜದ ಮುಂದೆ ತೆರೆದಿಟ್ಟಿತ್ತು. ಅದು ಆಡಳಿತಗಾರರಿಗೆ ಕನ್ನಡಿ ಹಿಡಿದಿತ್ತು. ಒಂದು ಸಿನಿಮಾದ ಗೀತೆಯಿಂದಾಗಿ ಸಂಸತ್ತಿನಲ್ಲಿ ಗದ್ದಲ ಉಂಟಾಗಿದ್ದು ಬಹುಶಃ ಅದೇ ಮೊದಲು. ಸಾಹಿರ್ ಕ್ರಾಂತಿಕಾರಿ ಕವಿಯಾಗಿದ್ದರೂ ಅವರ ಕವಿತೆಗಳಲ್ಲಿ ಪ್ರೇಮದ ಭಾವಾಭಿವ್ಯಕ್ತಿಯೇ ಪ್ರಧಾನವಾಗಿತ್ತು. ಏಕೆಂದರೆ ಅವರು ಆ ಭಾವನೆಗಳಲ್ಲೇ ಸಂಪೂರ್ಣ ಮುಳುಗಿ ತಮ್ಮ ಬದುಕನ್ನು ನಡೆಸುತ್ತಿದ್ದರು. ಆದರೆ ವಿಧಿ ಅದನ್ನು ಒಪ್ಪಿಕೊಳ್ಳಲಿಲ್ಲ. ೧೬ ವರ್ಷಕ್ಕೇ ಮದುವೆಯಾಗಿದ್ದ ಹುಡುಗಿಯ ಜತೆ ಅವರು ಪ್ರೀತಿಯಲ್ಲಿ ಬಿದ್ದರು. ಆಕೆ ಅಮೃತಾ ಪ್ರೀತಂ.
ಮದುವೆಯಾದ ಪುಟ್ಟ ಹುಡುಗಿಯ ಜತೆ ಪ್ರೀತಿಯಲ್ಲಿ ಬೀಳು ವುದು ಆ ಕಾಲದಲ್ಲಿ ಎಂಥಾ ಕ್ರಾಂತಿಕಾರಿ ಸಂಗತಿಯಾಗಿತ್ತೆಂದು ಒಮ್ಮೆ ಯೋಚಿಸಿ. ವಾಸ್ತವ ವಾಗಿ ಅಮೃತಾ ಕೂಡ ಇವರ ಪ್ರೀತಿಯಲ್ಲಿ ಬಿದ್ದಿದ್ದರು. ಆದರೆ ಈ ಅಫರ್ ಬಹಳ ಕಾಲ ನಡೆಯಲಿಲ್ಲ. ಏಕೆಂದರೆ ಸಾಹಿರ್ ಅವರು ಅಬ್ದುಲ್ ಆಗಿದ್ದರು. ಅಮೃತಾಳ ತಂದೆ ಇದಕ್ಕೆ ಬಿಲ್‌ಕುಲ್ ಒಪ್ಪಲಿಲ್ಲ. ಇನ್ನು ಅಮೃತಾಳ ಗಂಡ ಸಿಟ್ಟಿಗೇಳುವುದಂತೂ ಸಹಜವಾಗಿತ್ತು. ಸಾಕಷ್ಟು ಮಾತುಕತೆ ಹಾಗೂ ಪತ್ರ ವ್ಯವಹಾರಗಳ ಬಳಿಕ ಅವರಿಬ್ಬರೂ ಬೇರೆ ಬೇರೆ ವಾಸಿಸಲು ನಿರ್ಧರಿಸಿದರು. ಅಮೃತಾ ದೆಹಲಿಯಲ್ಲಿದ್ದರೆ, ಸಾಹಿರ್ ಮುಂಬೈನಲ್ಲಿ ವಾಸಿಸ ತೊಡಗಿದರು.
ಆದರೆ ಪ್ರೀತಿ ಸಾಯಲು ಸಾಧ್ಯವೇ? ನಾನಿಲ್ಲಿ ಅಮೃತಾ ಪ್ರೀತಂ ಬಗ್ಗೆಯೂ ಕೊಂಚ ಬರೆಯುತ್ತಿದ್ದೇನೆ ಏಕೆಂದರೆ ಆಕೆಯನ್ನು ಹೊರತು ಪಡಿಸಿ ಸಾಹಿರ್‌ ನನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಅಮೃತಾ ಮತ್ತು ಸಾಹಿರ್‌ಗೆ ಇಮ್ರೋಜ್ ಎಂಬ ಕಾಮನ್ ಫ್ರೆಂಡ್ ಒಬ್ಬನಿದ್ದ. ಅಮೃತಾಳಿಗಾಗಿ ಬರೆದ ಎಲ್ಲಾ ಹಾಡುಗಳನ್ನೂ ಸಾಹಿರ್ ಮೊದಲಿಗೆ ಇಮ್ರೋಜ್ ಬಳಿ ಓದುತ್ತಿದ್ದ. ವಿಚಿತ್ರವೆಂದರೆ ಇಮ್ರೋಜ್ ಕೂಡ ರಹಸ್ಯವಾಗಿ ಅಮೃತಾಳನ್ನು ಪ್ರೀತಿಸುತ್ತಿದ್ದ. ಕೊನೆಗೆ ಅವನು ಅಮೃತಾ ಜತೆಗೇ ಜೀವನ ಪೂರ್ತಿ ಬದುಕಿದ! ಅವನ ಜತೆಗೆ ಅಮೃತಾ ಸ್ಕೂಟರ್‌ನಲ್ಲಿ ಹೋಗುವಾಗ ಬೆನ್ನಿನ ಮೇಲೆ ತನ್ನ ಬೆರಳುಗಳಿಂದ ‘ಸಾಹಿರ್ ಸಾಹಿರ್ ಸಾಹಿರ್’ ಎಂದು ಬರೆಯುತ್ತಿದ್ದಳು!
ಅಮೃತಾ ಏನು ಬರೆಯುತ್ತಿದ್ದಾಳೆ, ಅವಳಿಗೆ ಸಾಹಿರ್ ಮೇಲೆ ಎಷ್ಟು ಪ್ರೀತಿಯಿದೆ ಎಂಬುದು ಇಮ್ರೋಜ್‌ಗೆ ತಿಳಿಯುತ್ತಿತ್ತು. ಅವನು ಯಾವತ್ತೂ ಅವರಿಬ್ಬರ ಪ್ರೀತಿಗೆ ಅಡ್ಡಿಯಾಗಲಿಲ್ಲ. ಅದಲ್ಲವೇ ನಿಜವಾದ ಪ್ರೀತಿಯೆಂದರೆ! ಕೊನೆಯವರೆಗೂ ತಮ್ಮತಮ್ಮ ಭಾವನೆಗಳಿಗೆ ಅಮೃತಾ-ಇಮ್ರೋಜ್ ಇಬ್ಬರೂ ನಿಷ್ಠ ರಾಗಿಯೇ ಉಳಿದರು! ಅಮೃತಾ ಪ್ರೀತಂ ಬಹಳ ಪ್ರಸಿದ್ಧ ಲೇಖಕಿ. ತಮ್ಮ ಆತ್ಮಕತೆ ‘ರಸೀದಿ ಟಿಕೆಟ್’ನಲ್ಲಿ ಆಕೆ ಸಾಹಿರ್ ಬಗ್ಗೆ ಬರೆಯುವಾಗ ‘ಸಾಹಿರ್‌ ಗೆ ತನ್ನ ಮುಖ ಹಾಗೂ ದೇಹದ ಬಗ್ಗೆ ತುಂಬಾ ಕೀಳರಿಮೆಯಿತ್ತು, ಹೀಗಾಗಿ ಯಾವತ್ತೂ ಅವರು ತಮ್ಮ ಕವಿತ್ವದ ಘನತೆಗೆ ತಕ್ಕುದಾದ ಆತ್ಮ ವಿಶ್ವಾಸವನ್ನು ಬೆಳೆಸಿಕೊಳ್ಳಲು ಸಾಧ್ಯವೇ ಆಗಲಿಲ್ಲ’ ಎಂದು ಬರೆದಿದ್ದಾರೆ.
‘ನಾನು ಸಾಹಿರ್ ಜತೆ ಒಡನಾಡಿದ್ದೇನೆ, ಅವರ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇನೆ, ಅವರನ್ನು ಸಾಕಷ್ಟು ಓದಿಕೊಂಡಿದ್ದೇನೆ. ಅವರು ದೇಹದಇಂಚಿಂಚನ್ನೂ ಕೊಯ್ದು ಶೋಧಿಸುವ ನುರಿತ ಸರ್ಜನ್ ಥರ ನನಗೆ ಕಂಡಿದ್ದಾರೆ’ ಎಂದು ಅಮೃತಾ ಬರೆದಿದ್ದಾರೆ. ‘ಸವೇರಾ’ ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನವೊಂದರ ಸಲುವಾಗಿ ಸಾಹಿರ್ ವಿರುದ್ಧ ಪಾಕಿಸ್ತಾನದಲ್ಲಿ ಬಂಧನದ ವಾರಂಟ್ ಜಾರಿಗೊಳಿಸಿದ್ದನ್ನು ಯಾರಾದರೂ ಮರೆಯಲುಸಾಧ್ಯವೇ? ಕೊನೆಗೆ ಸಾಹಿರ್ ಪಾಕಿಸ್ತಾನವನ್ನೇ ತೊರೆಯಬೇಕಾಯಿತು. ದೆಹಲಿ ಮೂಲಕ ಅವರು ಮುಂಬೈಗೆ ಬಂದರು.
ಅಲ್ಲಿ ಅವರ ಕವಿತೆಗಳು ಸುದ್ದಿ ಮಾಡಲು ಆರಂಭಿಸಿದವು. ಅವರ ಪ್ರಸಿದ್ಧಿ ಎಲ್ಲಿಗೆ ಹೋಗಿ ತಲುಪಿತು ಅಂದರೆ, ಲತಾ ಮಂಗೇಷ್ಕರ್ ಹಾಡಲು ಪಡೆದು ಕೊಳ್ಳುತ್ತಿದ್ದ ಸಂಭಾವನೆಗಿಂತ ಒಂದು ರುಪಾಯಿ ಹೆಚ್ಚು ಸಂಭಾವನೆಯನ್ನು ಸಾಹಿರ್ ಆ ಗೀತೆ ಬರೆಯಲು ಪಡೆಯುತ್ತಿದ್ದರು. ರಾಜ್ಯಸಭೆಯಲ್ಲಿ ನನ್ನ ಜತೆ ಜಾವೇದ್ ಅಖ್ತರ್ ಇದ್ದರು. ಅವರೊಮ್ಮೆ ಸಾಹಿರ್ ಕುರಿತಾದ ದಂತಕತೆಯೊಂದನ್ನು ಹೇಳಿದ್ದರು. ಒಂದು ದಿನ ಜಾವೇದ್ ಭಾಯಿ ಸಾಹಿರ್ ಮನೆಗೆ ಹೋದರಂತೆ. ಅವರನ್ನು ನೋಡಿ ಸಾಹಿರ್ ‘ಯಾಕೆ ಇಷ್ಟೊಂದು ಬೇಸರದಲ್ಲಿದ್ದೀಯಾ ಯಂಗ್ ಮ್ಯಾನ್?’ ಎಂದು ಕೇಳಿದರಂತೆ.
‘ಕೈಯಲ್ಲಿ ಹಣವಿಲ್ಲ, ಜೀವನ ನಡೆಸುವುದೇ ಕಷ್ಟವಾಗಿದೆ. ಏನಾದರೂ ಕೆಲಸ ಇದ್ದರೆ ಕೊಡುತ್ತೀರಾ?’ ಎಂದು ಜಾವೇದ್ ಕೇಳಿದರಂತೆ. ಸಾಹಿರ್ ಮರು ಮಾತಾಡದೆ, ಕಣ್ಣಲ್ಲಿ ಕಣ್ಣಿಟ್ಟು ಕೂಡ ನೋಡದೆ, ಅಲ್ಲೇ ಟೇಬಲ್ ಮೇಲಿದ್ದ ೨೦೦ ರು. ನೋಟು ತೋರಿಸಿ ಅದನ್ನು ತೆಗೆದುಕೊಳ್ಳಲು ಹೇಳಿದರಂತೆ. ‘ಮುಂದೆ ನನಗೆ ಯಾವತ್ತಾದರೂ ಅಗತ್ಯವಿದ್ದಾಗ ಸಹಾಯ ಮಾಡಬೇಕು’ ಎಂದು ಭರವಸೆ ಪಡೆದುಕೊಂಡರಂತೆ. ಕಾಲ ಕಳೆಯಿತು. ಜಾವೇದ್ ಅಖ್ತರ್‌ಗೆ ಹಣಕಾಸಿನ ತೊಂದರೆಗಳೆಲ್ಲ ಕಳೆದುಹೋದವು. ಆದರೂ, ಸಾಹಿರ್ ಜತೆ ಜಾವೇದ್ ಅಖ್ತರ್ ಕುಳಿತುಕೊಂಡಾಗಲೆಲ್ಲ ‘ನಾನು ನಿಮಗೆ ೨೦೦ ರು. ಕೊಡೋದು ಬಾಕಿಯಿದೆ. ಆದರೆ ನಾನದನ್ನು ಕೊಡೋದಿಲ್ಲ’ ಎನ್ನುತ್ತಿದ್ದರು.
‘ಏಕೆ ಹಣ ವಾಪಸ್ ಕೊಡೋದಿಲ್ಲ’ ಎಂದು ಜನರು ಕೇಳಿದರೆ, ‘ನೀವು ಸಾಹಿರ್ ಸಾಹೇಬರನ್ನೇ ಕೇಳಿ’ ಎನ್ನುತ್ತಿದ್ದರು. ನಂತರ ೧೯೮೦ರ ಅಕ್ಟೋಬರ್ ೨೫ರಂದು ಸಾಹಿರ್ ತೀರಿಕೊಂಡರು. ಜುಹು ಸ್ಮಶಾನದಲ್ಲಿ ಅವರನ್ನು ಹೂಳಲಾಯಿತು. ಅಂತ್ಯ ಸಂಸ್ಕಾರದ ಬಳಿಕ ಎಲ್ಲರೂ ಅಲ್ಲಿಂದ ಹೋದರೂ ಜಾವೇದ್ ಅಖ್ತರ್ ಮಾತ್ರ ಬಹಳ ಹೊತ್ತು ಅಲ್ಲೇ ಇದ್ದರು. ಕೊನೆಗೆ ಅವರು ಕಾರು ಹತ್ತಿ ಹೊರಡಬೇಕು ಎನ್ನುವಷ್ಟರಲ್ಲಿ ಸಾಹಿರ್ ಅವರ ಸ್ನೇಹಿತ ಅಶಾಕ್ ಓಡುತ್ತಾ ಬಂದು, ‘ಗೋರಿ ತೋಡಿದವನಿಗೆ ಕೊಡೋದಕ್ಕೆ ನಿಮ್ಮಲ್ಲಿ ಸ್ವಲ್ಪ ಹಣ ಇದೆಯಾ?’ ಎಂದು ಕೇಳಿದರು.
‘ಎಷ್ಟು ಬೇಕು?’ ಎಂದು ಜಾವೇದ್ ಕೇಳಿದಾಗ, ‘೨೦೦ ರುಪಾಯಿ’ ಎಂದು ಅಶಾಕ್ ಹೇಳಿದರು! ಎಂಥಾ ವಿಚಿತ್ರ ಕಾಕತಾಳೀಯ ಅಲ್ಲವೇ! ಸಾಹಿರ್ ಲೂಧಿಯಾನ್ವಿಯ ಕವಿತೆಗಳಲ್ಲಿ ಬದುಕಿನ ಪ್ರತಿಯೊಂದು ಸೂಕ್ಷ್ಮ ಸಂಗತಿಗಳೂ ಅಡಗಿವೆ. ‘ಮೇ ಪಲ್ ದೋ ಪಲ್ ಕಾ ಶಾಯರ್ ಹೂ, ಪಲ್ ದೋ ಪಲ್ ಮೇರಿ ಕಹಾನಿ ಹೈ!’ ಎಂದು ಅವರೇ ಬರೆದಿದ್ದಾರಾದರೂ ಅವರ ಕತೆ ಮಾತ್ರ ಶಾಶ್ವತವಾಗಿದೆ. ನಾವು ಬದುಕಿರುವವರೆಗೂ ಅವರ ಕವಿತೆಗಳನ್ನು ಗುನುಗು ತ್ತಲೇ ಇರುತ್ತೇವೆ!
(ಲೇಖಕರು ಹಿರಿಯ ಪತ್ರಕರ್ತರು, ರಾಜ್ಯಸಭಾ ಸದಸ್ಯರು)