ಬೀಡಿ ಕಟ್ಟುವವರ ಬವಣೆ ಕೇಳುವವರಿಲ್ಲ
ಭಾಸ್ಕರಾಯಣ
ಎಂ.ಕೆ.ಭಾಸ್ಕರ ರಾವ್
ತಂಬಾಕು ಮಿಶ್ರಿತ ಗುಟ್ಕಾ, ಪಾನ್ ಮಸಾಲಾ ಮುಂತಾದವು ಯುವಕರ ಆಸಕ್ತಿ ಕೆರಳಿಸಿವೆ. ಕಾನೂನು ಪ್ರಕಾರ ಗುಟ್ಕಾ ನಿಷೇಧಿತ ಸರಕು. ಆದರೆ ರಂಗೋಲಿ ಕೆಳಗೆ ನುಸುಳುವ ಉದ್ಯಮಗಳು ನಿಷೇಧವನ್ನು ಪ್ರಹಸನದ ಮಟ್ಟಕ್ಕೆ ತಂದಿದ್ದು ಸರಕಾರದ ಕಾನೂನು ಜಾರಿ ದಳ ಅಸಹಾ ಯಕತೆ ಯಲ್ಲಿ ಕೈಕಟ್ಟಿ ಕೂರುವಂತಾಗಿದೆ.
ದೆಹಲಿ ನಾಗರಿಕರನ್ನು ಅಟ್ಟಾಡಿಸುತ್ತಿರುವ ವಾಯುಮಾಲಿನ್ಯದ ಸುದ್ದಿ ಬೆಚ್ಚಿ ಬೀಳಿಸುತ್ತಿದೆ. ಉಸಿರುಗಟ್ಟಿಸುವ ವಾತಾವರಣದಲ್ಲಿ ದೆಹಲಿ ನಾಗರಿಕರು ಬದುಕು ನಡೆಸಿದ್ದಾರೆ. ರಾಜಧಾನಿ ನಗರದ ಹತ್ತರಲ್ಲಿ ಮೂವರು ವಾಯುಮಾಲಿನ್ಯದ ಪರಿಣಾಮವಾಗಿ ಆಸ್ತಮಾ ಮುಂತಾದ ಉಸಿರಾಟ ಸಂಬಂಧಿ/ಶ್ವಾಸಕೋಶದ ಸಮಸ್ಯೆಗಳಿಂದ ನರಳುತ್ತಿದ್ದಾರೆಂಬುದು ಆಘಾತಕಾರಿ ವರದಿ.
ವಾಯುಮಾಲಿನ್ಯ ನಗರದ ಪರಿಸರವನ್ನು ಈಪಾಟಿ ಪ್ರಮಾಣದಲ್ಲಿ ಮಲಿನಗೊಳಿಸಿರುವುದಕ್ಕೆ ಪಂಜಾಬ್‌ನ ಲಕ್ಷಾಂತರ ಹೆಕ್ಟೇರ್ ಹೊಲದಲ್ಲಿ ಗೋಧಿ ದಂಟನ್ನು ಸುಡುವುದೇ ಕಾರಣವೆಂದೂ, ಆ ಭಾಗದಿಂದ ಬೀಸುವ ಗಾಳಿ ಹೊತ್ತೊಯ್ದು ತರುವ ಹೊಗೆಯು ದೆಹಲಿ ಮಾಲಿನ್ಯಕ್ಕೆ ಮುಖ್ಯ ಕಾರಣವೆಂದೂ ಹೇಳಲಾಗುತ್ತಿದೆ. ಪಂಜಾಬ್‌ನಲ್ಲಿ ರೈತರು ಗೋಧಿ ದಂಟಿಗೆ ಬೆಂಕಿ ಹಾಕಿ ಸುಡುವುದು ಹೊಸ ಬೆಳವಣಿಗೆಯೇನೂ ಅಲ್ಲ. ಹಸಿರು ಕ್ರಾಂತಿಯಾದ ಕಾಲ ದಿಂದಲೂ ಒಕ್ಕಲುತನದ ಕಸುಬಾಗಿ ಇದು ನಡೆದುಕೊಂಡು ಬಂದಿದೆ.
ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ದೆಹಲಿ ಮಾಲಿನ್ಯಕ್ಕೆ ಇದೊಂದೇ ಕಾರಣವೆಂಬಂತೆ, ದೆಹಲಿ ನಗರ ಮತ್ತು ಸುತ್ತಲಿನ ಭಾರಿ ಉದ್ದಿಮೆ/ ಕೈಗಾರಿಕೆ ಗಳದು ಇದರಲ್ಲಿ ತಪ್ಪಿನ ಪಾತ್ರ ಇಲ್ಲವೇ ಇಲ್ಲ ಎಂಬಂತೆ ಬಿಂಬಿಸುವ ಕೆಲಸ ನಡೆದಿದ್ದು ಈ ಅನಾಹುತಕ್ಕೆ ಪಂಜಾಬ್ ರೈತರು ಮಾತ್ರವೇ ಕಾರಣವೆಂಬ ಖೊಟ್ಟಿ ಚಿತ್ರವನ್ನು ಮುಂದೆ ತರಲಾಗಿದೆ.
‘ಎಲ್ಲ ಅನಿಷ್ಟಕ್ಕೂ ಶನಿಯೇ ಕಾರಣ’ ಎಂಬ ಮಾತಿದೆ. ದೇಶದಲ್ಲಿ ಏನೇ ಅನಾಹುತ ಘಟಿಸಿದರೂ ನೇರವಾಗಿ ಸಂಬಂಧವೇ ಇಲ್ಲದವರನ್ನು ಅದರಲ್ಲಿ ಸಿಕ್ಕು ಹಾಕಿಸುವ ತಂತ್ರಗಾರಿಕೆ ನಮ್ಮ ವಿಶೇಷಗಳಲ್ಲಿ ವಿಶೇಷವಾದುದು. ದೆಹಲಿ ವಿಧಾನಸಭೆಯಲ್ಲಿ, ಸಂಸತ್‌ನಲ್ಲಿ ದೆಹಲಿ ವಾಯುಮಾಲಿನ್ಯ ಕುರಿತು ಸಾಕಷ್ಟು ಚರ್ಚೆಯಾಗಿದೆ. ಪ್ರಶ್ನೋತ್ತರ ನಡೆದಿದೆ. ದಶಕಗಳಿಂದೀಚೆಗೆ ದೆಹಲಿ ವಾಯುಮಾಲಿನ್ಯ ಆತಂಕಕಾರಿಯಾಗಿದೆ. ಇದಕ್ಕೆ ಪೂರ್ವದಲ್ಲಿ ಪಂಜಾಬ್ ರೈತರು ಗೋಧಿ ದಂಟಿನ ವಿಲೇವಾರಿಗೆ ಏನು ಮಾಡುತ್ತಿದ್ದರು? ಆಗಲೂ ಸುಡುತ್ತಿದ್ದರೆ ಅದರ ಅಡ್ಡ ಪರಿಣಾಮ ದೆಹಲಿ ಮೇಲೆ ಆಗುತ್ತಿರಲಿಲ್ಲವೇಕೆ? ಎಂಬ ಪ್ರಶ್ನೆಯನ್ನು ಜನ ಪ್ರತಿನಿಧಿಗಳು ಕೇಳಿದ್ದಾಗಲೀ ಸರಕಾರ ನಡೆಸುವವರು ಅದಕ್ಕೆ ಸಮಾಧಾನಕರ ಉತ್ತರ ಕೊಟ್ಟಿದ್ದಾಗಲೀ ವರದಿಯಾಗಿಲ್ಲ.
ಇದು ದೆಹಲಿಯ ಕಥೆ ಯೊಂದೇ ಅಲ್ಲ, ಸಣ್ಣದೊಡ್ಡ ಪ್ರಮಾಣದಲ್ಲಿ ಇಂಥ ವಾಯುಮಾಲಿನ್ಯ, ಪರಿಸರ ಮಾಲಿನ್ಯ ಬೇರೆ ಬೇರೆ ರೂಪದಲ್ಲಿ ಸಮಾಜದ ಆರೋಗ್ಯಕ್ಕೆ ಕುತ್ತು ತರುವ ಕೆಲಸ ಮಾಡುತ್ತಿದೆ. ಅಂಥ ಒಂದು ಉದಾಹರಣೆ ಎಂದರೆ ಬೀಡಿ ಸುತ್ತುವ ಕಾರ್ಮಿಕರ ಬದುಕಿನ ಪಾಡು ಪಡಿಪಾಟಲು.ದೆಹಲಿ ವಾಯುಮಾಲಿನ್ಯದ ಸುದ್ದಿ ಬಿತ್ತರಿಸುವ ಟಿವಿಗಳು, ವಾಯುಮಾಲಿನ್ಯದ ಸೂಚ್ಯಂಕ ಉದ್ಧರಿಸಿ ‘ಈ ಪ್ರದೇಶದಲ್ಲಿ ಉಸಿರಾಡಿದರೆ ತಾಸಿಗೆಹತ್ತು ಸಿಗರೇಟು, ಇಂಥ ಬಡಾವಣೆಯಲ್ಲಿ ಓಡಾಡಿದರೆ ಗಂಟೆಗೆ ಇಂತಿಷ್ಟು ಸಿಗರೇಟು ಸೇದಿದಷ್ಟು ಅಡ್ಡ ಪರಿಣಾಮವಾಗುತ್ತಿದೆ’ ಎಂದು ಜನರನ್ನುಎಚ್ಚರಿಸುತ್ತಿವೆ. ಒಣಗಿಸಿ ಪುಡಿ ಮಾಡಿದ ತಂಬಾಕಿನ ಘಾಟನ್ನು ೧೦-೧೨ ತಾಸು ಉಸಿರಾಡುತ್ತ ನಾಲ್ಕು ಕಾಸು ಸಂಪಾದಿಸುವ ಆಸೆಯಲ್ಲಿ ಬೀಡಿ ಸುತ್ತುವವರ ಶ್ವಾಸಕೋಶ ಎಂಥ ಬರ್ಬರ ಅನಾಹುತಕ್ಕೆ ಈಡಾಗುತ್ತಿರಬೇಡ? ದಿನಕ್ಕೆ ೧೦-೨೦ ಬೀಡಿ ಎಳೆಯುವವರ ಆರೋಗ್ಯ ಹದಗೆಡುವಷ್ಟೇ ಪ್ರಮಾಣದಲ್ಲಿ ಅಥವಾ ಇನ್ನಷ್ಟು ಹೆಚ್ಚು ಪ್ರಮಾಣದಲ್ಲಿ, ಬೀಡಿ ಸೇದದ ಕಾರ್ಮಿಕರ ಆರೋಗ್ಯ ಹಾಳಾಗುತ್ತಿದೆ.
ಬೀಡಿ ಎಳೆದು ಹೊರಕ್ಕೆ ಉಗುಳುವ ಹೊಗೆಯಲ್ಲಿ ಆನಂದಿಸುವವರು ಇದನ್ನು ಗಮನಕ್ಕೆ ತೆಗೆದುಕೊಂಡಿದ್ದು ಕಡಿಮೆ. ಬೀಡಿ ತೆರಿಗೆಯನ್ನು ತನ್ನ ಮುಖ್ಯ ಸಂಪನ್ಮೂಲಗಳಲ್ಲಿ ಒಂದು ಎಂದು ಪರಿಗಣಿಸಿರುವ ಸರಕಾರಗಳೂ ಜನಾರೋಗ್ಯದತ್ತ ಕಾಳಜಿ ತೋರಿದ್ದು ಕಡಿಮೆ. ದೇಶದಲ್ಲಿ ನೋಂದಾಯಿತ ಬೀಡಿ ಕಾರ್ಮಿಕರ ಸಂಖ್ಯೆ ೫೦ ಲಕ್ಷ ಎನ್ನುವುದು ಅಧಿಕೃತ ಮಾಹಿತಿ. ಬೀಡಿ ಕಾರ್ಮಿಕ ಸಂಘಟನೆಗಳ ಪ್ರಕಾರ ಈ ಸಂಖ್ಯೆ ೭೦ ಲಕ್ಷಕ್ಕೂ ಅಧಿಕ. ದೇಶದಲ್ಲಿ ಬಹಳದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಿರುವ ಉದ್ಯಮ ಇದು ಎನ್ನುವುದರಲ್ಲಿ ಎರಡಭಿಪ್ರಾಯಲ್ಲ.
ಆದರೆ ಅದರಿಂದ ಆ ಕಾರ್ಮಿಕರ ಆರೋಗ್ಯದ ಮೇಲೆ ಆಗಿರುವ ಆಗುತ್ತಿರುವ ಅಡ್ಡ ಪರಿಣಾಮ ಏನು ಮತ್ತು ಎಷ್ಟು ಎಂಬುದರ ಬಗ್ಗೆ ಮಾತ್ರ ಎರಡೇ ಎರಡು ಮಾತೂ ಇಲ್ಲ. ಶತಮಾನ ಗಳಷ್ಟು ಪುರಾತನವಾದ ಬೀಡಿ ಉದ್ಯಮದ ರಥವನ್ನು ಎಳೆಯುತ್ತಿರುವವರಲ್ಲಿ ಮಹಿಳೆಯರದೇ ದೊಡ್ಡ ಪಾತ್ರ. ಈಗಿನ ಐಟಿ ಉದ್ಯಮದಲ್ಲಿ ‘ವರ್ಕ್ ಫ್ರಂ ಹೋಂ’ ಎಂಬುದು ಸರ್ವೇ ಸಾಮಾನ್ಯವಾಗಿದೆ. ಶತಮಾನಗಳ ಹಿಂದೆಯೇ ‘ಮನೆಯಿಂದಲೇ ಕೆಲಸ’ ಎಂಬ ಪರಿಕಲ್ಪನೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದು ಬೀಡಿ ಉದ್ಯಮ.
ಅನಕ್ಷರಸ್ಥ, ಬೇರೆ ಕುಶಲ ಕೆಲಸದಲ್ಲಿ ತೊಡಗಿಸಿಕೊಳ್ಳಲಾಗದ, ಕೌಟುಂಬಿಕ, ಧಾರ್ಮಿಕ, ಅಸ್ಪೃಶ್ಯತೆಯೇ ಮುಂತಾದ ಕಾರಣಕ್ಕಾಗಿ ನಾಲ್ಕು ಗೋಡೆ ನಡುವೆಯೇ ಇರಬೇಕಾದ ಹೆಣ್ಣು ಮಕ್ಕಳು ಮನೆಯಲ್ಲೇ ಕುಳಿತು ಮನೆಗೆಲಸದ ಜತೆ ಜತೆಗೆ ಬೀಡಿ ಹೊಸೆಯುತ್ತ ನಾಲ್ಕು ಕಾಸು ಮಾಡಿಕೊಳ್ಳುವ ಉದ್ಯಮ ದಲ್ಲಿ ಆರೋಗ್ಯವನ್ನು ಬಲಿ ಕೊಡುತ್ತಿರುವ ವಿಪರ್ಯಾಸ ತೆರೆಮರೆಗೆ ಸರಿದಿದೆ. ಬೀಡಿ ಕಟ್ಟುವ ಕಾರ್ಮಿಕರ ಪ್ರಕಾರ ಉತ್ತಮ, ಅತ್ಯುತ್ತಮ ದರ್ಜೆಯ ತಂಬಾಕು ಸಿಗರೇಟು ಮತ್ತು ಚುಟ್ಟಾಕ್ಕೆ ಬಳಕೆಯಾಗುತ್ತದೆ. ಉಳಿದುದು ಬೀಡಿಗೆ. ಈ ಹೊಗೆಸೊಪ್ಪಿನ ಘಾಟನ್ನು ಉಸಿರಾಡುತ್ತ ೧೦-೧೨ ತಾಸು ಬೀಡಿ ಕಟ್ಟುವವರಲ್ಲಿ ಉಸಿರಾಟದ ತೊಂದರೆ ಮಾಮೂಲು.
ಇತ್ತೀಚಿನ ವರದಿಯೊಂದರ ಪ್ರಕಾರ ಬೀಡಿ ಕಟ್ಟುವ ಹೆಣ್ಣು ಮಕ್ಕಳಲ್ಲಿ ಬಂಜೆತನ ಸಾಮಾನ್ಯವಾಗುತ್ತಿದೆ. ‘ದಿ ಜಾರ್ಜ್ ಇನ್‌ಸ್ಟಿಟ್ಯೂಟ್ ಫಾರ್ ಗ್ಲೋಬಲ್ಹೆಲ್ತ್’ ಸಂಸ್ಥೆ ಬಿಡುಗಡೆ ಮಾಡಿರುವ ಸಂಶೋಧನಾ ವರದಿಯ ಪ್ರಕಾರ, ಒಂದು ವೇಳೆ ಅವರು ಗರ್ಭಿಣಿಯರಾದರೂ ಗರ್ಭಪಾತದ ಪ್ರಮಾಣ ದಿನೇ ದಿನೆ ಹೆಚ್ಚುತ್ತಿದೆ. ದಿನವಿಡೀ ಬೀಡಿ ಸುತ್ತಿದರೆ ನೂರರಿಂದ ನೂರೈವತ್ತು ರುಪಾಯಿ ದುಡಿಯುವ ಈ ಕಾರ್ಮಿಕರು, ದುಡಿಮೆಯ ಸಿಂಹಪಾಲು ಹಣವನ್ನು ಚಿಕಿತ್ಸೆಗೆ, ಔಷಧಿಗೆಂದು ಖರ್ಚು ಮಾಡಬೇಕಾಗಿದೆ.
ಕಾರ್ಮಿಕರಲ್ಲಿ ಪ್ರತಿಶತ ೬೯ ಮಹಿಳೆಯರು ಅನಕ್ಷರಸ್ಥರು. ಶೇ.೧೦ರಷ್ಟು ಮಂದಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದರೆ ಶೇ.೧೨ರಷ್ಟು ಮಹಿಳೆಯರು ಮಾಧ್ಯ ಮಿಕ ಶಿಕ್ಷಣದ ನಂತರ ಶಾಲೆಗೆ ಬೆನ್ನು ಹಾಕಿರುವವರು. ಉದ್ಯಮದಲ್ಲಿರುವವರಲ್ಲಿ ಶೇ.೬೫ರಷ್ಟು ಮಹಿಳೆಯರು ಹಿಂದೂಗಳು. ಅವರಲ್ಲಿ ಶೇ.೮೭ರಷ್ಟು ಮಂದಿ ಪರಿಶಿಷ್ಟ ಜಾತಿಗೆ ಸೇರಿದ್ದರೆ ಉಳಿದವರು ಹಿಂದುಳಿದ, ಅತಿ ಹಿಂದುಳಿದ ವರ್ಗಕ್ಕೆ ಸೇರಿದವರು. ಉಳಿದ ಶೇ. ೩೫ರಷ್ಟು ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಗಣೇಶ ಬೀಡಿ, ದಿನೇಶ್ ಬೀಡಿ, ೩೦ ನಂಬರ್ ಬೀಡಿ ಹೀಗೆ ಬ್ರಾಂಡೆಡ್ ಹೆಸರಿನ ೩೦೦ಕ್ಕೂ ಅಧಿಕ ಕಂಪನಿಗಳು ದೇಶದಲ್ಲಿವೆ.
ಇನ್ನು ಹೆಸರೇ ಇಲ್ಲದ ಕೈಬೀಡಿ ತಯಾರಿಸುವ ಸಂಸ್ಥೆಗಳು ಲೆಕ್ಕವಿಲ್ಲದಷ್ಟು. ಈ ಉದ್ಯಮದಲ್ಲಿರುವ ಕಾರ್ಮಿಕರ ಆರೋಗ್ಯ ಕಾಯುವುದಕ್ಕೆ ರಾಜ್ಯ ಸರಕಾರಗಳು ಸಾಕಷ್ಟು ಕಾಯ್ದೆ ಕಾನೂನು ರೂಪಿಸಿವೆ. ಆದರೆ ಅನಕ್ಷರತೆ, ಅರಿವಿನ ಕೊರತೆ, ಸಂಘಟನೆಯ ಸಮಸ್ಯೆ ಮುಂತಾದ ಕಾರಣಕ್ಕಾಗಿ ಕಾನೂನು ಕೆಲಸಕ್ಕೆ ಬಾರದಂತಾಗಿದೆ. ಈಗೀಗ ಬೀಡಿ, ಸಿಗರೇಟು ಬದಲಿಗೆ ಬೇರೆ ಬೇರೆ ಸ್ವರೂಪದ ತಂಬಾಕು ಶೋಕಿಯೂ ಹೆಚ್ಚುತ್ತಿದೆ. ತಂಬಾಕು ಮಿಶ್ರಿತ ಗುಟ್ಕಾ, ಪಾನ್ ಮಸಾಲಾ ಮುಂತಾದವು ಯುವಕರ ಆಸಕ್ತಿ ಕೆರಳಿಸಿವೆ.
ಕಾನೂನು ಪ್ರಕಾರ ಗುಟ್ಕಾ ನಿಷೇಧಿತ ಸರಕು. ಆದರೆ ರಂಗೋಲಿ ಕೆಳಗೆ ನುಸುಳುವ ಉದ್ಯಮಗಳು ನಿಷೇಧವನ್ನು ಪ್ರಹಸನದ ಮಟ್ಟಕ್ಕೆ ತಂದಿದ್ದು ಸರಕಾ ರದ ಕಾನೂನು ಜಾರಿ ದಳ ಅಸಹಾಯಕತೆಯಲ್ಲಿ ಕೈಕಟ್ಟಿ ಕೂರುವಂತಾಗಿದೆ. ಹೀಗೆಂದ ಮಾತ್ರಕ್ಕೆ ಬೀಡಿ ಮಾರುಕಟ್ಟೆ ಕುಸಿದಿದೆ ಎಂದು ಅರ್ಥವಲ್ಲ. ಹತ್ತಾರು ದೇಶಗಳಿಗೆ ರಫ್ತಾಗುವ ಭಾರತೀಯ ಉತ್ಪನ್ನಗಳಲ್ಲಿ ಬೀಡಿಯೂ ಒಂದು!
ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್ ಮತ್ತು ಕರ್ನಾಟಕದಲ್ಲಿ ಬೀಡಿ ಉದ್ಯಮ ಜೋರಾಗಿದೆ. ದೇಶದ ಅಜಮಾಸು ೭೦ ಲಕ್ಷ ಬೀಡಿ ಕಾರ್ಮಿಕರಲ್ಲಿ ಹತ್ತಿರ ಹತ್ತಿರ ಆರೇಳು ಲಕ್ಷ ಕಾರ್ಮಿಕರು ಕರ್ನಾಟಕದಲ್ಲೇ ಇದ್ದಾರೆ. ಉತ್ತರ ಕರ್ನಾಟಕ, ಮುಂಬೈ ಕರ್ನಾಟಕ ಪ್ರದೇಶದಲ್ಲಿ ಈ ಉದ್ಯಮ ಇದೆ ಯಾದರೂ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಒಳಗೊಂಡ ಕರಾವಳಿಯಲ್ಲಿ ಅತ್ಯಧಿಕ ಜನ ಇದರಲ್ಲಿದ್ದಾರೆ. ಈ ಪ್ರದೇಶದ ಬಡವರ ನಾಲ್ಕು ಕಾಸು ಸಂಪಾದನೆಯ ದೊಡ್ಡ ಮಾರ್ಗ ಬೀಡಿ ಕಟ್ಟುವುದೇ ಆಗಿದೆ. ಹಿಂದೆಲ್ಲ ನಿಪ್ಪಾಣಿ ತಂಬಾಕು ಎನ್ನುವುದು ಕರ್ನಾಟಕದಲ್ಲಿ ಮನೆಮಾತಾಗಿತ್ತು.
ಈ ಹೊತ್ತು ತಂಬಾಕು ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕ ಒಂದೆನಿಸಿದೆ. ದೇಶದ ಒಟ್ಟಾರೆ ತಂಬಾಕು ಉತ್ಪನ್ನದ ಶೇ.೭೦ರಷ್ಟು ಭಾಗ ಬರುವುದು ಕರ್ನಾಟಕ, ಆಂಧ್ರಪ್ರದೇಶ ಹಾಗೂ ಗುಜರಾತ್‌ನಿಂದ. ತಂಬಾಕು ಬೆಳೆಯುವವರ ಆರ್ಥಿಕ ಬಲ ಹೆಚ್ಚಿಸಿರುವ, ತಂಬಾಕಿನ ಬೇರೆ ಬೇರೆ ಉತ್ಪನ್ನಗಳ ಮೂಲಕ ಹಣವಂತರಾಗಿರು ವವರ ನಡುವೆ ಉಸಿರಾಡಲಾಗದ, ಎದ್ದರೆ ಕೂರ ಲಾಗದ, ಕೂತರೆ ಏಳಲಾಗದ, ಹೊಟ್ಟೆಯಲ್ಲಿರುವ ಭ್ರೂಣಜೀವಂತ ಹೊರಕ್ಕೆ ಬಂದೀತೆಂಬ ಬಗ್ಗೆ ವಿಶ್ವಾಸವೇ ಇಲ್ಲದ ಲಕ್ಷ ಲಕ್ಷ ಹೆಂಗಳೆಯರತ್ತ ಲಕ್ಷ್ಯ ವಹಿಸಬೇಕಿರುವ ಕಾಲಘಟ್ಟದಲ್ಲಿ ಸಮಾಜ, ಸರಕಾರಗಳಿವೆ. ಸಾಮಾಜಿಕ ಹೊಣೆಗಾರಿಕೆ ಎನ್ನು ವುದು ಸರಕಾರ ನಡೆಸುವವರ ಬದ್ಧತೆ ಆಗಿದ್ದಲ್ಲಿ ಸಮಸ್ಯೆಗೆ ಮದ್ದನ್ನರೆಯುವುದು ದೊಡ್ಡದೇನೂ ಅಲ್ಲ.