ಜಾತಿಗಣತಿಯ ಸುತ್ತಮುತ್ತ
ವಿಚಾರ ವೇದಿಕೆ
ಮಂಜುನಾಥ ಅಜ್ಜಂಪುರ
ಹಿಂದೊಮ್ಮೆ ಪ್ರವಾಸಕ್ಕೆ ತೆರಳಿದ್ದಾಗ ಪರಿಚಯವಾದ ಹೊಸಬರೊಬ್ಬರು ಪ್ರಾಸಂಗಿಕವಾಗಿ ತಾವು ಶ್ರೀವೈಷ್ಣವ ಪಂಥದವರೆಂದರು. ಜತೆಗೆ, ತಮ್ಮದು ಕನ್ನಡ ಮಾತೃಭಾಷೆಯೆಂದೂ, ರಾಮಾನುಜಾಚಾರ್ಯರು ಕರ್ನಾಟಕಕ್ಕೆ ಬಂದಾಗ ತಮ್ಮ ಪೂರ್ವಿಕರು ವೈಷ್ಣವ ದೀಕ್ಷೆ ಪಡೆದರೆಂದೂ, ತಾವ್ಯಾರೂ ರಾಮಾನುಜಾಚಾರ್ಯರೊಂದಿಗೆ ತಮಿಳುನಾಡಿನಿಂದ ವಲಸೆ ಬಂದ ತಮಿಳುಭಾಷಿಕರಲ್ಲವೆಂದೂ ವಿವರಿಸಿದಾಗ ಸೋಜಿಗವಾಯಿತು.
ವಿಶಾಲ ಭಾರತವಿರಲಿ, ಕರ್ನಾಟಕದ ಕೆಲ ಜಿಲ್ಲೆಗಳ ಸಾಮಾಜಿಕ ಅಧ್ಯಯನ ನಡೆಸಿದರೆ ಸಾಕು, ಇಂಥ ವಲಸೆ/ದೀಕ್ಷೆಯ ಸ್ವಾರಸ್ಯಪೂರ್ಣ ವಿವರಗಳು ಸಾಕಷ್ಟು ಸಿಗುತ್ತವೆ. ವೀರಶೈವರೆನ್ನಿ, ಲಿಂಗಾಯತರೆನ್ನಿ ಅಲ್ಲಿಯೂ ದೀಕ್ಷೆ ಪಡೆದ ಹಿಂದೂ ಸಮಾಜದ ನೂರೆಂಟು ಜಾತಿಯ ಜನ ಕಾಣಸಿಗುತ್ತಾರೆ. ಇದೆಷ್ಟು ಸಂಕೀರ್ಣವೆಂದರೆ, ತಿರುಪತಿ ತಿಮ್ಮಪ್ಪ-ಸತ್ಯನಾರಾಯಣ-ಶ್ರೀರಾಮನ ಭಕ್ತರು (ಒಕ್ಕಲು) ಕೂಡ ಲಿಂಗಾಯತ ಸಮುದಾಯದಲ್ಲಿ ಸಿಗುತ್ತಾರೆ.
ಹೀಗೆ ದೇಶಾದ್ಯಂತ ವೈವಿಧ್ಯಮಯ ಜಾತಿ-ಸಮುದಾಯ, ಸಂಪ್ರದಾಯ, ಆರಾಧನಾ ಪದ್ಧತಿಗಳನ್ನು ಕಾಣಬಹುದು. ಭಾರತದಲ್ಲಿ ವಿವಿಧ ಮತ-ಪಂಥಗಳು ಬೇರೆ ಬೇರೆ ದೇವರುಗಳನ್ನು ಆರಾಽಸುತ್ತವೆ. ಹೀಗಾಗಿ ದೇವರುಗಳ ವಿಷಯ ಎತ್ತಿಕೊಂಡರೆ ಸಾಕು ಒಂದೇ ಒಂದು ಮತ/ಧರ್ಮ ಇಲ್ಲಿ ಇರಲೇ ಇಲ್ಲ ಎಂಬುದು (ರಿಲಿಜನ್ನಿನ ದೃಷ್ಟಿಯಲ್ಲಿ) ಸಾಽತವಾಗಿಬಿಡುತ್ತದೆ. ಅನೇಕ ದೇವರನ್ನು ಆರಾಧಿಸುವುದೇ ಭಾರತೀಯ ಧರ್ಮದ ಆಧಾರವಾಗಿರ ಬಹುದಲ್ಲ? ಇದನ್ನು ಕೆಲವರು ಪರಾಮರ್ಶಿಸುವುದೇ ಇಲ್ಲ!
ನೇಷನ್-ರಾಷ್ಟ್ರ-ದೇಶ-ಧರ್ಮ-ಮತ-ರಿಲಿಜನ್ ಎಲ್ಲ ಪರಿಕಲ್ಪನೆಗಳನ್ನು ಪಶ್ಚಿಮದ ಕಣ್ಣಿನಿಂದಲೇ ನೋಡುವ ಕೆಲ ರಾಜಕಾರಣಿಗಳು ಮತ್ತು ಭಾರತ –ದ್ವೇಷಿ ಅಕಾಡೆಮಿಷಿಯನ್ನರು ಎಂದಿಗೂ ಮುಗಿಯದ ಗೊಂದಲವನ್ನು ಸೃಷ್ಟಿಸಿ ಬಿಟ್ಟಿದ್ದಾರೆ. ನಮ್ಮ ಪರಂಪರೆಯಲ್ಲಿ ವಿಗ್ರಹಗಳು ಸಂಕೇತಗಳೇ ಹೊರತು ಅವೇ ದೇವರಲ್ಲ. ಮಾತ್ರವಲ್ಲ, ಗಿಡ, ಮರ, ನದಿ, ಬೆಟ್ಟ, ಸೂರ್ಯ, ಚಂದ್ರ, ನಕ್ಷತ್ರ ಎಲ್ಲವೂ ದೇವರೇ. ದೇವರು, ಗಾಡ್, ಅಲ್ಲಾ ಎಂಬೆಲ್ಲ ಪರಿಕಲ್ಪನೆಗಳು ಬೇರೆಯೇ; ಪದ-ಸಮೀಕರಣವಾಗಲೀ ಸಾಮಾನ್ಯೀಕರಣವಾಗಲೀ ತಪ್ಪಾಗುತ್ತದೆ.
ಅಷ್ಟೇಕೆ, ರಿಲಿಜನ್ ಮತ್ತು ಧರ್ಮ ಈ ಎರಡರ ಪರಿಕಲ್ಪನೆಗಳೇ ಬೇರೆ. ಭಾರತೀಯ ಪರಂಪರೆಯ ಧರ್ಮದ ವ್ಯಾಖ್ಯೆಯೇ ಬೇರೆ ಎಂದು ವಿವಿಧಸಂದರ್ಭಗಳಲ್ಲಿ ನ್ಯಾಯಾಲಯಗಳೇ ತಮ್ಮ ತೀರ್ಪುಗಳಲ್ಲಿ ಹೇಳಿವೆ. ಕುರಾನ್, ಹದೀಸ್ ಮತ್ತು ಇಸ್ಲಾಮಿ ಇತಿಹಾಸಗಳನ್ನು ವಿಮರ್ಶಾತ್ಮಕವಾಗಿ ಅಧ್ಯಯನ ಮಾಡಿದವರಿಗಷ್ಟೇ ಅಲ್ಲಾಹು/ಇಸ್ಲಾಮಿನ ಬಗೆಗೆ ಸ್ಪಷ್ಟಚಿತ್ರ ಸಿಗುತ್ತದೆ. ಅಂತೆಯೇ ಬೈಬಲ್ ಮತ್ತು ಕ್ರೈಸ್ತ ಮಿಷನರಿಗಳ ಇತಿಹಾಸವನ್ನು ಸರಿಯಾಗಿ ಅರ್ಥೈಸಿಕೊಂಡವರಿಗೆ ಗಾಡ್/ಕ್ರಿಶ್ಚಿಯಾನಿಟಿ ಬಗ್ಗೆ ಸರಿಯಾದ ಪರಿಕಲ್ಪನೆಯಿರುತ್ತದೆ. ಇಲ್ಲವಾದರೆ, ‘ಎಲ್ಲ ಧರ್ಮಗಳು ಹೇಳುವುದು ಒಂದನ್ನೇ; ಗಾಡ್ -ಅಲ್ಲಾ-ದೇವರುಗಳಲ್ಲಿ ವ್ಯತ್ಯಾಸವಿಲ್ಲ’ ಎಂಬ ಅತಿರೇಕದ ಮುಗ್ಧತೆಯ ಹೇಳಿಕೆ ಹೊಮ್ಮುತ್ತದೆ.
ಇದನ್ನು ಸಮರ್ಥವಾಗಿ ಗ್ರಹಿಸಲು ೨,೦೦೦ ವರ್ಷಗಳ ನೈಜ ಇತಿಹಾಸದ ದಾಖಲೆಗಳನ್ನೇ ಪರಿಶೀಲಿಸಬೇಕಾಗುತ್ತದೆ. ಬ್ರಿಟಿಷರ ಕುತಂತ್ರದಂದ ಪ್ರಾರಂಭವಾದ ಇಂಗ್ಲಿಷ್ ಶಿಕ್ಷಣ/ಮಾಧ್ಯಮಗಳ ಕಾರಣದಿಂದಾಗಿ ಕಳೆದ ೨ ಶತಮಾನಗಳಲ್ಲಿ ನಮ್ಮೆಲ್ಲರ ಚಿಂತನೆ-ಅನುಸಂಧಾನ ಗಳು ಇಂಗ್ಲಿಷ್‌ನಲ್ಲೇ ನಡೆದಿವೆ. ಅದೆಂಥ ದುರಂತವೆಂದರೆ, ಯುರೋಪಿನ ಸೋಷಿಯಾಲಜಿ, ಪೊಲಿಟಿಕಲ್ ಸೈನ್ಸ್ ಪುಸ್ತಕಗಳು ಭಾರತೀಯ ಭಾಷೆಗಳಿಗೆ ಕೆಟ್ಟದಾಗಿ ಅನುವಾದವಾಗಿವೆ ಮತ್ತು ಅವೇ ಇಲ್ಲಿ ಪಠ್ಯಗಳಾಗಿ ಭಾರತದ ಪರಂಪರೆ, ಸಮಾಜಗಳಿಗೆ ಏನೇನೂ ಸಂಬಂಧವಿಲ್ಲದ ಸಂಗತಿಗಳನ್ನೇ ಎಲ್ಲರೂ ಓದುವಂತಾಗಿದೆ. ಶಾಲಾಕಾಲೇಜುಗಳ ಇತಿಹಾಸ ಪಠ್ಯವಂತೂ ಸುಳ್ಳಿನ ಕಂತೆಯಾಗಿದ್ದು, ತಿರುಚಿದ ಭಾರತ-ವಿರೋಽ ಸಂಗತಿಗಳ ಪ್ರಸ್ತುತಿಯಾಗಿಹೋಗಿದೆ.
ಹೀಗಾಗಿ, ಆಕ್ರಮಣಕಾರಿಗಳಾಗಿ, ವಸಾಹತುವಾದಿಗಳಾಗಿ ಇಲ್ಲಿಗೆ ಬಂದವರೇ (ಸಹಸ್ರಾರು ವರ್ಷಗಳ ವಿಶ್ವಪ್ರಸಿದ್ಧ ಆರ್ಥಿಕ ವ್ಯವಸ್ಥೆಯ, ಕೃಷಿ ಸಮೃದ್ಧಿಯ) ಭಾರತದಲ್ಲಿ ಆಡಳಿತ-ಸಾಮಾಜಿಕ ವ್ಯವಸ್ಥೆ, ಶಿಕ್ಷಣ, ಆಸ್ಪತ್ರೆ, ಹೆದ್ದಾರಿ ಇತ್ಯಾದಿಗಳನ್ನು ಪರಿಚಯಿಸಿದ್ದಾರೆ ಎಂಬ ಮಿಥ್ಯಾ-ಪ್ರಥೆ ನಮ್ಮೆಲ್ಲರತಲೆಯಲ್ಲೂ ಕೂತುಬಿಟ್ಟಿದೆ. ನಮ್ಮ ಸಂವಿಧಾನ ರೂಪುಗೊಂಡದ್ದು ಇಂಗ್ಲಿಷ್ ಭಾಷೆ ಮತ್ತು ರೋಮನ್ ಲಿಪಿಯಲ್ಲಿ. ಇಂದಿಗೂ ಇದು ಪೂರ್ಣವಾಗಿಯಾವುದೇ ಭಾರತೀಯ ಭಾಷೆಯಲ್ಲಿ ಲಭ್ಯವಿಲ್ಲ; ಸ್ಪಷ್ಟತೆಗೆ ಇಂಗ್ಲಿಷ್ ಆವೃತ್ತಿಯನ್ನೇ ಅಧಿಕೃತವೆಂದು ಪರಿಗಣಿಸುವಂತೆ ಸರ್ವೋಚ್ಚ ನ್ಯಾಯಾಲಯವೇಅಭಿಪ್ರಾಯಪಟ್ಟಿದೆ.
ಈ ಗೊಂದಲದಲ್ಲಿ ಸ್ವಾತಂತ್ರ್ಯೋತ್ತರ ಅವಧಿಯಲ್ಲಿ, ಹೋಲಿಕೆಯೇ ಇರದ, ಧರ್ಮ ಮತ್ತು ರಿಲಿಜನ್ನುಗಳು ಒಂದೇ ಎಂದು ಕಾನೂನು ಪಂಡಿತರೂ ತಪ್ಪಾಗಿ ವ್ಯಾಖ್ಯಾನಿಸುವಂತಾಗಿದೆ. ಬ್ರಿಟಿಷರು ಮತ್ತು ಮೆಕಾಲೆವಾದಿಗಳ ಕುತಂತ್ರದಿಂದಾಗಿ ಸನಾತನ ಧರ್ಮ ವೆಂದರೆ ಕೇವಲ ಅಸ್ಪೃಶ್ಯತೆ, ಜಾತೀಯತೆ, ಸ್ತ್ರೀ ಅಸಮಾನತೆ, ಸತಿಸಹಗಮನ ಪದ್ಧತಿ ಮಾತ್ರವೇ ಎನ್ನುವಂತಾಗಿಹೋಗಿದೆ. ಹಿಂದೂ ಸಮುದಾಯವೆಂದರೆ ಹತ್ತಾರು ಸಾವಿರ ವರ್ಷಗಳಿಂದ ಭಾರತದಲ್ಲಿರುವ ಸಮುದಾಯ. ಅಂದರೆ ಸಹಜವಾಗಿ ಇಸ್ಲಾಂಪೂರ್ವ ಮತ್ತು ಕ್ರೈಸ್ತಮತಪೂರ್ವ ಅವಧಿಗಳಿಗೆ ಅನ್ವಯವಾಗುತ್ತದೆ.
ಇಂತಿಂಥವರು ಹಿಂದೂಗಳಲ್ಲ ಎನ್ನುವ ಪ್ರಶ್ನೆಯೇ ಉದ್ಭವಿಸು ವುದಿಲ್ಲ. ಶೈವ, ವೈಷ್ಣವ, ಶಾಕ್ತ, ಜೈನ, ಬೌದ್ಧ ಮತ್ತು ಇತ್ತೀಚಿನ ಲಿಂಗಾಯತ – ಸಿಖ್ ಪಂಥಗಳು, ಎಲ್ಲ ಪ್ರಬೇಧಗಳು ಭಾರತೀಯ ಸಮಾಜದ ಅಂದರೆ ಹಿಂದೂ ಸಮಾಜದ ಭಾಗವೇ ಆಗಿರುವಂಥವು. ಕೆಲ ವರ್ಷಗಳಿಂದ, ವೀರಶೈವ – ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ರಿಲಿಜನ್ನಿನ ಸ್ಥಾನಮಾನ ಬೇಕು ಎಂಬ ಹಕ್ಕೊತ್ತಾಯವಿದೆ. ನಮ್ಮ ಸಂವಿಧಾನದಲ್ಲಿ ಒಂದು ಹೊಸ ರಿಲಿಜನ್ನನ್ನುಗುರುತಿಸಲು, ಪರಿಗಣಿಸಲು ಅವಕಾಶವಿದೆಯೇ, ವಿಧಾನಸಭೆ/ಸಂಸತ್ತಿಗೆ ಅಂಥ ಪರಿಗಣನೆ ಮಾಡಲು ಅವಕಾಶವಿದೆಯೇ ಎಂಬ ಕಾನೂನಾತ್ಮಕ-ತಾಂತ್ರಿಕ ಅಂಶ ಯಾರಿಗೂ ಬೇಕಾಗಿಲ್ಲ. ರಾಜಕೀಯ ಲಾಭ ಪಡೆಯುವ ಹುನ್ನಾರವಷ್ಟೇ ಕಾಣುತ್ತದೆ.
ಅಬ್ರಹಾಮಿಕ್ ರಿಲಿಜನ್ನುಗಳಂತೆ ಒಬ್ಬ ಪ್ರವಾದಿ, ಒಂದು ಮತಗ್ರಂಥ (ಧರ್ಮಗ್ರಂಥ ಎಂಬ ಪದಬಳಕೆ ಸರಿಯಾಗದು), ಒಂದು ನಿರ್ದಿಷ್ಟ ಚೌಕಟ್ಟು ಎನ್ನುವುದಾದರೆ ಅವುಗಳ ನಿರ್ಧಾರ ಹೇಗೆ ಮತ್ತು ಕಾನೂನು ವ್ಯಾಪ್ತಿಯಲ್ಲಿ ಪರಿಹಾರ ಹೇಗೆ ಸಾಧ್ಯ? ಹೊಸ ರಿಲಿಜನ್ನಿನ ರೂಪುರೇಷೆಗಳನ್ನು ನಿರ್ಧರಿಸುವವರು, ಇಡೀ ವೀರಶೈವ-ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸಿ ವಿವಾದರಹಿತ ಪ್ರಸ್ತಾವ ಸಲ್ಲಿಸುವವರು ಯರು? ಅಂಥ ಸಮಿತಿಗೆ ಹಾಗೆಅಧಿಕಾರ ನೀಡುವವರಾರು? ೧೯೩೦ರಲ್ಲಾದ ಜಾತಿಗಣತಿಯ ಬಗೆಗೆ ಅನೇಕ ಬಾರಿ ಉಲ್ಲೇಖವಾಗುತ್ತಲೇ ಇರುತ್ತದೆ.
ಬ್ರಿಟಿಷರು ಬೇಕೆಂದೇ ಜೈನ-ಬೌದ್ಧ-ಸಿಖ್ ಪಂಥಗಳನ್ನು, ವನವಾಸಿಗಳನ್ನು, ಪೂರ್ವಭಾರತದವರನ್ನು, ಪರಿಶಿಷ್ಟ ವರ್ಗ-ಬುಡಕಟ್ಟುಗಳಿಗೆ ಸೇರಿದವರನ್ನು ಬೇರೆ ಬೇರೆ ಎಂಬಂತೆ ವಿಭಜಿಸಿ, ಎಲ್ಲವೂ ಬೇರೆ ಬೇರೆ ರಿಲಿಜನ್ನುಗಳು ಎಂಬ ಗೊಂದಲ ಮೂಡಿಸಿದರು. ಭಾರತೀಯ ಸಮಾಜದ ಸರ್ವನಾಶವೇಅವರ ಉದ್ದೇಶವಾಗಿತ್ತು. ಇಲ್ಲಿನ ಸಮೃದ್ಧ ಕೃಷಿ, ಆರ್ಥಿಕ, ಶಿಕ್ಷಣ, ಔದ್ಯಮಿಕ ವ್ಯವಸ್ಥೆಗಳನ್ನು ನಾಶಗೈದು ಭಾರತವನ್ನು ದರಿದ್ರರ, ನಿರಕ್ಷರಿಗಳ ದೇಶವನ್ನಾಗಿಸಿದ ಬ್ರಿಟಿಷರು, ನಮ್ಮ ಸಮಾಜದ ಕೆಲ ಸಮುದಾಯಗಳನ್ನು ಶೋಷಕವರ್ಗದಂತೆ ಚಿತ್ರಿಸಿದರು. ದುಸ್ಥಿತಿಯಲ್ಲಿದ್ದ ಪರಿಶಿಷ್ಟ ವರ್ಗಕ್ಕೆ ಸಂವಿಧಾನ ಕರ್ತೃಗಳು ಮೀಸಲಾತಿ ನೀಡಿ ಸಾಮಾಜಿಕ ನ್ಯಾಯಕ್ಕೆ ಅಡಿಪಾಯ ಹಾಕಿದರು. ಆದರೆ ಮೀಸಲಾತಿಯೀಗ ಸಂಕೀರ್ಣ ವಿಷಯವಾಗಿದ್ದು, ಈ ಕುರಿತ ಯಾವುದೇ ಚಿಂತನೆ, ವಿಶ್ಲೇಷಣೆಗಳು ಯಾರಿಗೂ ಬೇಕಿಲ್ಲ. ಭಾರತಕ್ಕೆ ಕೇಡುಬಗೆದ ಬ್ರಿಟಿಷರೇ ನಮ್ಮೆಲ್ಲರ ಕಣ್ಣಿನಲ್ಲಿ ಉದ್ಧಾರಕರಾಗಿಬಿಟ್ಟರು; ಈಗ ಇಡೀ ಮೀಸಲಾತಿಯ ಆಯಾಮವು ಜಾತಿ ಜಾತಿಗಳ ನಡುವಿನ ದ್ವೇಷ, ಸ್ಪರ್ಧೆಗಳಿಗೆ ಕಾರಣವಾಗಿದೆ.
ಸಾಮಾಜಿಕ-ಆರ್ಥಿಕ ಅಸಮಾನತೆಗೆ ಅವರು ಕಾರಣವೆಂದು ಇವರೂ, ಇವರು ಕಾರಣವೆಂದು ಅವರೂ ಹೊಡೆದಾಡುವಂತಾಗಿದೆ. ಉಚ್ಚ-ಸರ್ವೋಚ್ಚನ್ಯಾಯಾಲಯಗಳ ಮಾರ್ಗದರ್ಶನ, ನಿರ್ಬಂಧಗಳನ್ನೂ ಕಡೆಗಣಿಸಿ ಮೀಸಲಾತಿಯು ಅನ್ವಯವಾಗುವ ಜಾತಿಗಳನ್ನು ಮತ್ತು ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸುವ ಕೆಟ್ಟ ರಾಜಕೀಯ ಇಂದಿನದಾಗಿದೆ. ಬಿಹಾರದ ಸಿಎಂ ಇತ್ತೀಚೆಗೆ ‘ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ’ ಎಂಬ ಹೇಳಿಕೆಯಿತ್ತರು. ಶೋಷಿತ ಜಾತಿ, ವರ್ಗಗಳಿಗೆ ನ್ಯಾಯ ಒದಗಿಸಲು ಮೀಸಲಾತಿ ಎಂಬುದು ಸಂವಿಧಾನದ ಮೂಲ ಆಶಯವಾಗಿರುವಾಗ, ಜನ ಸಂಖ್ಯೆಗನುಗುಣವಾಗಿ ಮೀಸಲಾತಿ ಎಂಬ ಚಿಂತನೆಯೇ ಸಾಮಾಜಿಕ ನ್ಯಾಯದ ವಂಚನೆಯಾಗುತ್ತದೆಯಲ್ಲವೇ? ರಾಜಕೀಯ ದುಷ್ಪ್ರೇರಿತ ಅವೈಜ್ಞಾನಿಕ ಜಾತಿ ಗಣತಿಗಳು ಅವಕಾಶವಂಚಿತ ನತದೃಷ್ಟ ಸಮುದಾಯಗಳಿಗೆ ನ್ಯಾಯ ಒದಗಿಸ ಬಲ್ಲವೇ? ಎಲ್ಲರೂ ಒಪ್ಪುವಂಥ ನ್ಯಾಯೋಚಿತ ಮೀಸಲಾತಿ ಸೌಲಭ್ಯಗಳು ರೂಪುಗೊಳ್ಳುವಂಥ ಸಾಮಾಜಿಕ-ರಾಜಕೀಯ ಸನ್ನಿವೇಶ ನಮ್ಮೆದುರಿಗಿದೆಯೇ? ಭಾರತದಲ್ಲಿ ಸಾವಿರಾರು ಜಾತಿ-ಉಪಜಾತಿಗಳಿದ್ದು ಅವುಗಳ ಭಾಷೆ, ವಲಸೆ, ಸ್ವರೂಪ, ಆರ್ಥಿಕ-ಸಾಮಾಜಿಕ ಸ್ಥಿತಿಗತಿಗಳು ಕೇವಲ ಸಮಾಜಶಾಸ್ತ್ರಜ್ಞರ ವಿಶ್ಲೇಷಣೆಗಳಿಗೆ ವಸ್ತುಗಳಾಗಬೇಕಲ್ಲವೇ? ಹೀಗಿರುವಾಗ, ಭಾರತೀಯಸಮಾಜದ ಈ ಸಂಕೀರ್ಣ ಜಾತಿ-ಉಪಜಾತಿಗಳ ಗಣತಿಗೆ ನಿರ್ದಿಷ್ಟ ಮಾನದಂಡಗಳನ್ನು ಯಾರು ರೂಪಿಸುತ್ತಾರೆ, ಹೇಗೆ ನಿರ್ದೇಶಿಸುತ್ತಾರೆ? ಮೀಸಲಾತಿಯಾಗಲೀ ಅದರ ಪರಿಮಾಣವಾಗಲೀ, ಉಚಿತ ಕೊಡುಗೆಗಳಾಗಲೀ ಯಾರೇ ಪ್ರಾರಂಭಿಸಲಿ/ಹೆಚ್ಚು ಮಾಡಲಿ, ಮುಂದೆ ಅಧಿಕಾರಕ್ಕೆ ಬರುವವರು ಅದನ್ನು ಕಡಿಮೆ ಮಾಡಲು ಅಥವಾ ಅವನ್ನು ನಿಲ್ಲಿಸಿ ಬದುಕುಳಿಯಲು ಸಾಧ್ಯವೇ? ಈ ನಿಟ್ಟಿನಲ್ಲಿ ಚಿಂತನೆ ಸಾಗಬೇಕಿದೆ.
(ಲೇಖಕರು ‘ವಾಯ್ಸ್ ಆಫ್ಇಂಡಿಯಾ’ ಕನ್ನಡ ಸರಣಿ ಸಂಪಾದಕರು)