ಹೆದ್ದಾರಿ ಚಿತ್ರ ಬದಲಾಯಿಸುತ್ತಿರುವ ಎಕ್ಸ್’ಪ್ರೆಸ್ ಹೈವೇ
ಪ್ರಕಾಶಪಥ
ಪ್ರಕಾಶ್ ಶೇಷರಾಘವಾಚಾರ‍್
೨೦೦೪ರಿಂದ ೨೦೧೪ರ ತನಕದ ಯುಪಿಎ ಸರಕಾರವು ಕೇವಲ ೧೬,೦೦೦ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿತ್ತು. ಬಿಜೆಪಿಯೇತರ ಸರಕಾರ ಗಳು ತಮ್ಮ ೬೦ ವರ್ಷದ ಆಡಳಿತದಲ್ಲಿ ಒಟ್ಟು ೭೦,೦೦೦ ಕಿ.ಮೀ. ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಿದ್ದರೆ ಬಿಜೆಪಿ ತನ್ನ ೧೫ ವರ್ಷದ ಆಡಳಿತ ದಲ್ಲಿ ಒಟ್ಟು ೭೫,೦೦೦ ಕಿ.ಮೀ. ಹೆದ್ದಾರಿಯನ್ನು ನಿರ್ಮಿಸಿದೆ.
ರಸ್ತೆಗಳ ನಿರ್ಮಾಣವು ಕೇವಲ ವಾಹನ ಸಂಚಾರಕ್ಕೆ ಮೀಸಲಾದ ವಿಷಯವಲ್ಲ. ಅದನ್ನು ಮೀರಿ ಇತರ ವಲಯಗಳ ಮೇಲೆ ಆರ್ಥಿಕವಾಗಿ ಸಾಮಾಜಿಕವಾಗಿ ಅದು ಪರಿಣಾಮ ಬೀರುತ್ತದೆ. ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೈಗಾರಿಕಾ ಚಟುವಟಿಕೆಗಳು ಗರಿಗೆದರುತ್ತವೆ. ಲಾಜಿಸ್ಟಿಕ್ ವಲಯವು ಬೆಳೆಯುವುದು. ಸುತ್ತಮುತ್ತಲಿನ ಪ್ರದೇಶದ ಭೂಮಿಗೆ ಚಿನ್ನದ ಬೆಲೆ ಬಂದು ರಿಯಲ್ ಎಸ್ಟೇಟ್ ವಹಿವಾಟು ಜೋರಾಗುವುದು. ಅನೇಕ ವಾಣಿಜ್ಯ ಚಟುವಟಿಕೆಗಳಿಗೆ ಬಾಗಿಲು ತೆರೆದುಕೊಂಡು ಸ್ಥಳೀಯ ಆರ್ಥಿಕ ಅಭಿವೃದ್ಧಿಗೆ ಸಹಾಯಕವಾಗುವುದು.
ರಸ್ತೆ ನಿರ್ಮಾಣಕ್ಕೆ ಹೂಡುವ ಬಂಡವಾಳದಿಂದ ಸಿಮೆಂಟ್, ಸ್ಟೀಲ್, ರಸ್ತೆ ನಿರ್ಮಾಣದ ಉಪಕರಣಗಳ ಬೇಡಿಕೆ ಹೆಚ್ಚಾಗಿ ಉದ್ಯೋಗ ಸೃಷ್ಟಿಗೆ ಸಹಾಯಕವಾಗುವುದು. ಕೃಷಿ ಉತ್ಪನ್ನಗಳನ್ನು ತ್ವರಿತವಾಗಿ ಮಾರುಕಟ್ಟೆಗೆ ಸಾಗಣೆ ಮಾಡಲು ಉತ್ತಮ ರಸ್ತೆಯು ಸಹಾಯಕವಾಗುತ್ತದೆ. ಸಾಗಣೆಯ ವೆಚ್ಚದಲ್ಲಿ ಉಳಿತಾಯವಾಗಿ ಅವರ ಆದಾಯದಲ್ಲಿಯೂ ಹೆಚ್ಚಳವಾಗುವುದು. ಹೆದ್ದಾರಿಗಳು ಹಾದು ಹೋಗುವ ಮಾರ್ಗದಲ್ಲಿ ಇಕನಾಮಿಕ್ ಕಾರಿಡಾರ್, ಡಿಫೆನ್ಸ್ ಕಾರಿಡಾರ್ ಮತ್ತು ಇಂಡಸ್ಟ್ರಿಯಲ್ ಕಾರಿಡಾರ್ ಗಳನ್ನು ಆರಂಭಿಸುವ ಕಾರಣ ಕೈಗಾರಿಕೆಗಳು ಸ್ಥಾಪನೆಯಾಗಿ ಉದ್ಯೋಗ ಸೃಷ್ಟಿಗೆ ದಾರಿಯಾಗುತ್ತದೆ.
ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಹೊಸ ಇತಿಹಾಸವನ್ನು ಬರೆದಿದ್ದು ಅಟಲ್ ಬಿಹಾರಿ ವಾಜಪೇಯಿಯವರು. ೧೯೯೯ರಲ್ಲಿ ಅವರು ಆರಂಭಿಸಿದ ಸುವರ್ಣ ಚತುಷ್ಪಥ ಹೆದ್ದಾರಿ ಯೋಜನೆಯು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಹೊಸ ಆಯಾಮ ವನ್ನೇ ನೀಡಿತು. ಭಾರತದಲ್ಲಿಯೂ ವಿಶ್ವದರ್ಜೆಯ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ಅವರು ತೋರಿಸಿಕೊಟ್ಟರು. ವಾಜಪೇಯಿಯವರು ೨೦೦೧ರಲ್ಲಿ ಆರಂಭಿಸಿದ ಸುವರ್ಣ ಚತುಷ್ಪಥ ರಸ್ತೆಯು ದೆಹಲಿ-ಮುಂಬಯಿ – ಚೆನ್ನೈ-ಕೋಲ್ಕತ್ತಾ ನಗರಗಳನ್ನು ಸಂಪರ್ಕಿಸುವ ೫,೮೪೬ ಕಿ.ಮೀ. ಉದ್ದದ ಯೋಜನೆಯಾಗಿತ್ತು.
ಹಾಗೆಯೇ ಉತ್ತರ ಮತ್ತು ದಕ್ಷಿಣ ಕಾರಿಡಾರ್ ಯೋಜನೆಯಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರವನ್ನು ಸಂಪರ್ಕಿಸುವ ಆರು ಪಥದ ರಸ್ತೆಯನಿರ್ಮಾಣವನ್ನು ಕೈಗೊಳ್ಳುವ ಮೂಲಕ ಅವರು ೨೫ ವರ್ಷದ ಕೆಳಗೇ ಗುಣಮಟ್ಟದ ವಿಶಾಲವಾದ ರಾಷ್ಟ್ರೀಯ ಹೆದ್ದಾರಿಯ ಅವಶ್ಯಕತೆಯನ್ನು ಮನಗಂಡಿದ್ದರು. ೨೦೦೪ರಲ್ಲಿ ವಾಜಪೇಯಿ ಸರಕಾರ ಅಧಿಕಾರ ಕಳೆದುಕೊಂಡು ಯುಪಿಎ ಸರಕಾರವು ರಚನೆಯಾದ ಮೇಲೆ ಮಾಡಿದ ಮೊದಲ ಘನಕಾರ್ಯವೆಂದರೆ ಹೆದ್ದಾರಿಯ ಬದಿಯಲ್ಲಿದ್ದ ವಾಜಪೇಯಿ ಭಾವಚಿತ್ರವಿರುವ ಸೂಚನಾ ಫಲಕಗಳನ್ನು ತೆರವುಗೊಳಿಸಿದ್ದು. ಸರಕಾರ ಬದಲಾದ ಹಾಗೆಯೋಜನೆಯ ಅನುಷ್ಠಾನದ ವೇಗವು ಬದಲಾಗಿ ೨೦೦೬ರಲ್ಲಿ ಮುಗಿಯಬೇಕಿದ್ದ ಯೋಜನೆಯು ೨೦೧೨ರಲ್ಲಿ ಮುಗಿಯಿತು.
೨೦೦೪ರಿಂದ ೨೦೧೪ರ ತನಕದ ಯುಪಿಎ ಸರಕಾರವು ಕೇವಲ ೧೬,೦೦೦ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿತ್ತು. ಬಿಜೆಪಿಯೇತರಸರಕಾರಗಳು ತಮ್ಮ ೬೦ ವರ್ಷದ ಆಡಳಿತದಲ್ಲಿ ಒಟ್ಟು ೭೦,೦೦೦ ಕಿ.ಮೀ. ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣ ಮಾಡಿದ್ದರೆ ಬಿಜೆಪಿ ತನ್ನ ೧೫ ವರ್ಷದ ಆಡಳಿತದಲ್ಲಿ ಒಟ್ಟು ೭೫,೦೦೦ ಕಿ.ಮೀ. ಹೆದ್ದಾರಿ ಯನ್ನು ನಿರ್ಮಿಸಿದೆ. ಈಗ ದೇಶದಲ್ಲಿ ಹೆದ್ದಾರಿ ನಿರ್ಮಾಣದ ವೇಗವು ಹೇಗಿದೆಯೆಂದರೆ ೨೦೧೪-೧೫ ರಲ್ಲಿ ದಿನಕ್ಕೆ ೧೨.೧ ಕಿ.ಮೀ. ರಸ್ತೆಗಳನ್ನು ನಿರ್ಮಿಸಿದರೆ, ೨೦೨೧-೨೨ರಲ್ಲಿ ಪ್ರತಿದಿನ ೨೮.೬ ಕಿ.ಮೀ. ರಸ್ತೆ ನಿರ್ಮಾಣವಾಗುತ್ತಿದೆ ಎಂದು ಅಧಿಕೃತ ಅಂಕಿ- ಅಂಶಗಳು ತಿಳಿಸುತ್ತದೆ.
ದೇಶದಲ್ಲಿ ಒಟ್ಟು ೧,೪೫,೦೦೦ ಕಿ.ಮೀ. ರಾಷ್ಟ್ರೀಯ ಹೆದ್ದಾರಿಯು ನಿರ್ಮಾಣವಾಗಿದೆ. ಪ್ರತಿವರ್ಷ ೧೨ ಸಾವಿರಕ್ಕೂ ಹೆಚ್ಚು ಕಿ.ಮೀ. ಹೆದ್ದಾರಿ ಹೊಸದಾಗಿ ಸೇರ್ಪಡೆಯಾಗುತ್ತಿದೆ. ಮತ್ತೊಂದೆಡೆ ದೇಶದಲ್ಲಿ ಶೇ.೭೧ರಷ್ಟು ಗ್ರಾಮೀಣ ರಸ್ತೆಗಳಿವೆ. ಒಟ್ಟು ೬೭,೦೦,೦೦೦ ಕಿ.ಮೀ. ರಸ್ತೆಯನ್ನು ಹೊಂದಿರುವ ಭಾರತವು ಈಗ ಚೀನಾವನ್ನು ಹಿಂದಿಕ್ಕಿ ವಿಶ್ವದಲ್ಲಿ ಎರಡನೇ ಅತಿ ಹೆಚ್ಚು ರಸ್ತೆ ಸಂಪರ್ಕವಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಹಿಂದಿನ ಸರಕಾರಗಳಿಗೆ ‘ಎಕ್ಸ್‌ಪ್ರೆಸ್ ವೇ’ ನಿರ್ಮಾಣ ಮೊದಲ ಆದ್ಯತೆ ಆಗಿರಲಿಲ್ಲ ಮತ್ತು ಇದು ಅಂದು ಅಷ್ಟಾಗಿ ಜನಪ್ರಿಯತೆಯನ್ನು ಗಳಿಸಿ ರಲಿಲ್ಲ. ಸಹಜವಾಗಿ ಸರಕಾರಗಳು ಕೇವಲ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದತ್ತ ಗಮನ ಹರಿಸಿದ್ದವು. ೨೧ನೇ ಶತಮಾನದಲ್ಲಿ ಅಗಾಧವಾಗಿ ಹೆಚ್ಚಿರುವ ಜನಸಂಖ್ಯೆ, ಅದಕ್ಕೆ ಅನುಗುಣವಾಗಿ ಹೆಚ್ಚಿರುವ ವಾಹನಗಳ ಸಂಖ್ಯೆಯಿಂದಾಗಿ ಹೆದ್ದಾರಿ ನಿರ್ಮಾಣದಲ್ಲಿ ಬದಲಾವಣೆ ಮತ್ತು ವಿಸ್ತರಣೆಅನಿವಾರ್ಯವಾಗಿವೆ. ರಾಷ್ಟ್ರೀಯ ಹೆದ್ದಾರಿಗಳು ಈಗ ಒಂದು ರೀತಿ ಅಂಬಾಸಡರ್ ಕಾರಿನ ರೀತಿ ಆಗುತ್ತಿವೆ.
‘ಎಕ್ಸ್‌ಪ್ರೆಸ್ ವೇ’ ಎಂಬುದು ಈಗ ಬರುತ್ತಿರುವ ‘ಹೈಬ್ರಿಡ್’ ವಾಹನದ ರೀತಿ ಎಂದು ಹೇಳಬಹುದು. ಬದಲಾವಣೆಯು ಸಮಯಕ್ಕೆ ತಕ್ಕ ಹಾಗೆ ಆಗಬೇಕಾಗಿದೆ. ಈ ಹಿನ್ನಲೆಯಲ್ಲಿ ಹೆದ್ದಾರಿಗಳು ಎಕ್ಸ್‌ಪ್ರೆಸ್ ವೇಗಳಿಗೆ ಪರಿವರ್ತನೆಯಾಗುವುದು ಇಂದಿನ ಅಗತ್ಯವಾಗಿದೆ. ರಾಷ್ಟ್ರೀಯ ಹೆದ್ದಾರಿಗೂ ‘ಎಕ್ಸ್‌ಪ್ರೆಸ್ ವೇ’ಗೂ ಇರುವ ವ್ಯತ್ಯಾಸವನ್ನು ನೋಡುವುದಾದರೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆಗಳ ವಿಲೀನವಿರುತ್ತದೆ ಮತ್ತು ಕೆಲವು ಹೆದ್ದಾರಿಗಳು ಇಂಟರ್‌ಚೇಂಜ್ ವ್ಯವಸ್ಥೆ ಹೊಂದಿರುತ್ತವೆ. ಹೀಗಾಗಿ ಪ್ರವೇಶ ನಿಯಂತ್ರಣವಿರುವುದಿಲ್ಲ.
ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳಿಗೆ ವೇಗದ ಮಿತಿಯು ೧೦೦ ಕಿ.ಮೀ. ಪ್ರಮಾಣದಲ್ಲಿ ನಿಗದಿಯಾಗಿರುತ್ತದೆ ಮತ್ತು ಎಲ್ಲ ಬಗೆಯ ವಾಹನಗಳಿಗೂ ಸಂಚರಿಸಲು ಆಸ್ಪದ ವಿರುತ್ತದೆ. ಎಕ್ಸ್‌ಪ್ರೆಸ್ ವೇಗಳು ಸಂಪೂರ್ಣವಾಗಿ ಪ್ರವೇಶ ಮತ್ತು ನಿಗರ್ಮನ ನಿಯಂತ್ರಿತವಾಗಿರುತ್ತವೆ. ಪ್ರವೇಶ ಮತ್ತು ನಿರ್ಗಮನವು ಇಂಟರ್ ಚೇಂಜ್, ಟ್ರಂಪೆಟ್ ಅಥವಾ ಕ್ಲೋವರ್ ಲೀಫ್ ಮಾರ್ಗದ ಮೂಲಕ ಮಾತ್ರ ಸಾಧ್ಯ. ಈ ರಸ್ತೆಗಳು ಆರು ಪಥವನ್ನು ಹೊಂದಿರುತ್ತವೆ ಮತ್ತು ಅದನ್ನು ಎಂಟು ಪಥಕ್ಕೆ ವಿಸ್ತರಿಸಲು ಅವಕಾಶವಿರುತ್ತದೆ.
ಇದರ ವಿನ್ಯಾಸದಲ್ಲಿ ವಾಹನಗಳು ೧೨೦ ಕಿ.ಮೀ. ವೇಗದಲ್ಲಿ ಸಂಚರಿಸಲು ಅವಕಾಶವಿರುತ್ತದೆ. ದ್ವಿಚಕ್ರ ವಾಹನ, ಆಟೋ, ಟ್ರಾಕ್ಟರ್ ಮುಂತಾದ ವಾಹನ ಗಳನ್ನು ಎಕ್ಸ್‌ಪ್ರೆಸ್ ವೇಯಲ್ಲಿ ನಿರ್ಬಂಧಿಸಲಾಗುತ್ತದೆ. ಎಕ್ಸ್ ಪ್ರೆಸ್ ವೇಯಲ್ಲಿ ಗ್ರೀನ್‌ಫೀಲ್ಡ್ ಮತ್ತು ಬ್ರೌನ್‌ಫೀಲ್ಡ್ ಹೈವೇ ಎಂದು ೨ ಮಾದರಿ ಗಳಿವೆ. ಸಂಪೂರ್ಣ ಹೊಸದಾಗಿ ನಿರ್ಮಿಸುವ ರಸ್ತೆಗೆ ಗ್ರೀನ್ ಫೀಲ್ಡ್ ಎಂದು ಕರೆಯುತ್ತಾರೆ. ಹಾಲಿ ರಸ್ತೆಯನ್ನು ಎಕ್ಸ್‌ಪ್ರೆಸ್ ವೇಯಾಗಿ ಬದಲಾಯಿಸು ವುದಕ್ಕೆ ಬ್ರೌನ್ ಫೀಲ್ಡ್ ರಸ್ತೆ ಎನ್ನುತ್ತಾರೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಶೇ.೬೦ರಷ್ಟು ಬ್ರೌನ್‌ಫೀಲ್ಡ್ ಮತ್ತು ಶೇ.೪೦ರಷ್ಟು ಗ್ರೀನ್‌ಫೀಲ್ಡ್ ಹೈವೇಯ ಮಿಶ್ರಣವಾಗಿದೆ.
ವಾಸ್ತವವಾಗಿ ಎಕ್ಸ್‌ಪ್ರೆಸ್ ವೇಗಳು ಸಂಚಾರಕ್ಕೆ ಹೆಚ್ಚು ಸುರಕ್ಷಿತ. ಆದರೆ ನಮ್ಮಲ್ಲಿ ವಾಹನ ಚಲಾಯಿಸುವವರು ಅತಿ ವೇಗವಾಗಿ, ಅಜಾಗರೂಕತೆಯಿಂದ ಚಾಲನೆ ಮಾಡುವುದು, ಚಾಲನೆಯ ವೇಳೆ ಮೊಬೈಲ್‌ನಲ್ಲಿ ಮಾತನಾಡುವುದು ಮತ್ತು ಲೇನ್ ಶಿಸ್ತು ಪಾಲಿಸದ ಕಾರಣ ಅಪಘಾತಗಳುಹೆಚ್ಚಾಗುತ್ತಿವೆ. ೨೦೧೪ರ ಮುನ್ನ ದೇಶದಲ್ಲಿ ಕೇವಲ ೧,೦೨೧ ಕಿ.ಮೀ. ಎಕ್ಸ್‌ಪ್ರೆಸ್ ವೇ ನಿರ್ಮಿಸಲಾಗಿತ್ತು. ೨೦೧೪ ರಿಂದ ದೇಶದಲ್ಲಿ ಎಕ್ಸ್‌ಪ್ರೆಸ್ ವೇ ನಿರ್ಮಾಣದಲ್ಲಿ ಹೊಸ ಅಧ್ಯಾಯ ಆರಂಭವಾಯಿತು. ಪ್ರಸಕ್ತ ನಿರ್ಮಾಣದಲ್ಲಿರುವ ೪೭ ಎಕ್ಸ್‌ಪ್ರೆಸ್ ವೇನಲ್ಲಿ ೪,೭೧೯ ಕಿ.ಮೀ. ಮಾರ್ಗವು ಸಂಚಾರಕ್ಕೆ ಮುಕ್ತವಾಗಿ ೮,೯೫೧ ಕಿ.ಮೀ. ಮಾರ್ಗದ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ೨೦೨೫ರೊಳಗೆ ೧೮,೬೩೭ ಕಿ.ಮೀ. ನಿರ್ಮಾಣ ಮಾಡಲು ಯೋಜನೆ ಸಿದ್ಧವಾಗಿದೆ. ಈ ಬಾರಿಯ ಮುಂಗಡ ಪತ್ರದಲ್ಲಿ ಹೈವೇ ನಿರ್ಮಾಣಕ್ಕೆ ೨,೭೦,೦೦೦ ಕೋಟಿ ರು. ಹಣವನ್ನು ನೀಡಿರುವುದರಿಂದ ರಸ್ತೆ ನಿರ್ಮಾಣದ ಯೋಜನೆಗಳ ಅನುಷ್ಠಾನಕ್ಕೆ ಸಂಪನ್ಮೂಲ ಕೊರತೆ ಉಂಟಾಗುವುದಿಲ್ಲ.
೨೦೧೪ರ ನಂತರ ಭಾರತಮಾಲಾ ಪರಿಯೋಜನೆ ಅಡಿಯಲ್ಲಿ ಅನೇಕ ಎಕ್ಸ್‌ಪ್ರೆಸ್ ವೇಗಳ ನಿರ್ಮಾಣವಾಗಿದೆ. ಪೂರ್ವಾಂಚಲ ಎಕ್ಸ್‌ಪ್ರೆಸ್ ವೇ, ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ, ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್ ವೇಗಳು ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಿವೆ. ದೇಶದ ಅತಿ ಉದ್ದದ ಎಕ್ಸ್‌ಪ್ರೆಸ್ ವೇಯನ್ನು ದೆಹಲಿ ಮತ್ತು ಮುಂಬಯಿ ನಡುವೆ ಒಂದು ಲಕ್ಷ ಕೋಟಿ ರು. ವೆಚ್ಚದಲ್ಲಿ ನಿರ್ಮಿಸ ಲಾಗುತ್ತಿದೆ.೧,೩೦೦ ಕಿ.ಮೀ. ಎಕ್ಸ್‌ಪ್ರೆಸ್ ವೇಯಲ್ಲಿ ಈಗಾಗಲೇ ಭಾಗಶಃ ಸಂಚಾರ ಆರಂಭವಾಗಿದೆ. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಕಾಮಗಾರಿ ಭರದಿಂದ ಸಾಗಿದ್ದು ಡಿಸೆಂಬರ್ ೨೦೨೫ರಲ್ಲಿ ಇದನ್ನು ಪೂರ್ಣಗೊಳಿಸುವ ಗುರಿಯನ್ನು ಹೆದ್ದಾರಿ ಪ್ರಾಧಿಕಾರ ಹೊಂದಿದೆ.
೯೬ ಕಿ.ಮೀ. ದೆಹಲಿ- ಮೀರತ್ ಎಕ್ಸ್‌ಪ್ರೆಸ್ ವೇ ದೇಶದ ಮೊಟ್ಟ ಮೊದಲ ೧೪ ಪಥಗಳ ಹೈವೇ ಆಗಿದೆ. ನಿತಿನ್ ಗಡ್ಕರಿಯವರು ಮೋದಿಯವರ ಸಂಪುಟ ದಲ್ಲಿ ಕಳೆದ ೯ ವರ್ಷದಿಂದ ಖಾತೆ ಬದಲಾವಣೆ ಯಾಗದ ಏಕೈಕ ಸಚಿವರು. ರಸ್ತೆ ನಿರ್ಮಾಣದಲ್ಲಿ ಅವರಿಗೆ ಇರುವ ಅಪಾರ ಅನುಭವ ಮತ್ತು ಬದ್ಧತೆಯ ಕಾರಣದಿಂದಾಗಿ ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಯಾವುದೇ ವಿವಾದ ಮತ್ತು ಹಗರಣಗಳಿಗೆ ಆಸ್ಪದವಿಲ್ಲದಾಗಿದೆ. ವಾಜಪೇಯಿ ಯವರು ಪ್ರಧಾನಿಯಾಗಿದ್ದಾಗ ಕೇಂದ್ರ ಸರಕಾರವು ಗಡ್ಕರಿಯವರನ್ನು ರಾಷ್ಟ್ರೀಯ ಗ್ರಾಮೀಣ ರಸ್ತೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದಾಗ ಅವರು ನೀಡಿದ ವರದಿಯ ಫಲವಾಗಿ ಮಹತ್ವಾಕಾಂಕ್ಷೆಯ ೬೦೦ ಶತಕೋಟಿ ರು. ಮೌಲ್ಯದ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆ ‘ಪ್ರಧಾನ ಮಂತ್ರಿ ಗ್ರಾಮ ಸಡಕ್’ ಯೋಜನೆ ಪ್ರಾರಂಭ ವಾಯಿತು.
ಹೆಚ್ಚುತ್ತಿರುವ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವು ತಡವಾಗಿ ವಾಹನ ಚಾಲಕರಿಗೆ ತಲೆಬೇನೆ ಯಾಗಿತ್ತು. ಈ ಸಮಸ್ಯೆಗೆ ಪರಿಹಾರವಾಗಿ ಗಡ್ಕರಿಯವರು ‘-ಸ್‌ಟ್ಯಾಗ್’ ಮೂಲಕ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯನ್ನು ಜಾರಿಗೆ ತಂದು ಟೋಲ್ ಸಂಗ್ರಹವನ್ನು ಸುಲಭಗೊಳಿಸಿದ್ದಾರೆ.-ಸ್‌ಟ್ಯಾಗ್ಅಳವಡಿಕೆಯಿಂದ ಟೋಲ್ ಸಂಗ್ರಹ ಶೇ.೪೬ರಷ್ಟು ಹೆಚ್ಚಾಗಿ ೨೦೨೨ರಲ್ಲಿ ೫೦,೦೦೦ ಕೋಟಿ ರು. ಸಂಗ್ರಹ ವಾಗಿದೆ. ೨೦೨೫ರಲ್ಲಿ ಭಾರತವು ೫ ಟ್ರಿಲಿಯನ್ ಆರ್ಥಿಕತೆ ಸಾಧಿಸಲು ಉತ್ತಮ ಹೆದ್ದಾರಿಗಳ ನಿರ್ಮಾಣವು ಬಹುಮುಖ್ಯ ಭೂಮಿಕೆಯನ್ನು ನಿರ್ವಹಿಸುತ್ತದೆ.
ಮೋದಿಯವರ ದೂರದೃಷ್ಟಿ ನಾಯಕತ್ವವು ಗುಣಮಟ್ಟದ ಹೈವೇ ನಿರ್ಮಾಣಕ್ಕೆ ಅತಿಹೆಚ್ಚಿನ ಆದ್ಯತೆ ನೀಡಿರುವ ಫಲವಾಗಿ ಭಾರತದ ರಸ್ತೆಗಳಚಿತ್ರಣವು ಆಮೂಲಾಗ್ರವಾಗಿ ಬದಲಾಗುತ್ತಿದೆ.
(ಲೇಖಕರು ಬಿಜೆಪಿಯ ಮಾಜಿಮಾಧ್ಯಮ ಸಂಚಾಲಕರು)