ಟಾಟಾ ಸಮೂಹಕ್ಕೆ ದಕ್ಕಿದ ಗೆಲುವು
ಉದ್ಯಮಪಥ
ಶಶಿಕುಮಾರ್‌ ಕೆ.
‘ಟಾಟಾ’ ಉದ್ಯಮ ಸಮೂಹವು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಖ್ಯಾತಿ ಪಡೆದಿದೆ. ಇಂದು ಅಂಬಾನಿ- ಅದಾನಿ ಮುಂತಾದ ಉದ್ಯಮಿ ಗಳನ್ನು ಹಲವು ಕಾರಣಗಳಿಗಾಗಿ ಟೀಕಿಸಲಾಗುತ್ತದೆ; ಆದರೆ ಟಾಟಾ ಸಮೂಹದೆಡೆಗೆ ಯಾರೂ ಬೆರಳೆತ್ತಿ ತೋರಿಸುವುದಿಲ್ಲ. ಅಂಥ ಚಾರಿತ್ರ್ಯವಿರುವಕಂಪನಿಯಿದು.
ಟಾಟಾ ಗ್ರೂಪ್‌ನ ಚೇರ್ಮನ್ ಆಗಿದ್ದ ರತನ್ ಟಾಟಾ ಅವರು, ಶ್ರೀಸಾಮಾನ್ಯರಿಗೂ ಕಡಿಮೆ ಬೆಲೆಯಲ್ಲಿ ಕಾರು ಲಭಿಸುವಂತಾಗಬೇಕೆಂದು ‘ನ್ಯಾನೊ’ ಕಾರುಗಳ ಉತ್ಪಾದನೆಗೆ ತೀರ್ಮಾನಿಸಿದರು. ಇದರ ಉತ್ಪಾದನಾ ಘಟಕವನ್ನು ಸ್ಥಾಪಿಸಲು ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಟಾಟಾ ಕಂಪನಿ ಭೂಮಿಯ ಹುಡುಕಾಟ ಆರಂಭಿಸಿತು. ಆಗ ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟ್ ಸರಕಾರ ಅಸ್ತಿತ್ವದಲ್ಲಿದ್ದು ಬುದ್ಧದೇವ ಭಟ್ಟಾಚಾರ್ಯ ಮುಖ್ಯಮಂತ್ರಿಯಾಗಿದ್ದರು.
ಕಮ್ಯುನಿಸ್ಟರು ಪ್ರಾರಂಭದಿಂದಲೂ ಬಂಡವಾಳಶಾಹಿಗಳ ವಿರೋಧಿಗಳಾಗಿರುವುದರಿಂದ, ಪಶ್ಚಿಮ ಬಂಗಾಳದಲ್ಲಿ ಹೂಡಿಕೆ ಮಾಡಲು ಉದ್ಯಮಿಗಳು ಹಿಂದೇಟು ಹಾಕುತ್ತಿದ್ದರು. ಇದರಿಂದಾಗಿ ರಾಜ್ಯವು ಬಹಳ ಹಿಂದುಳಿದಿತ್ತು. ಇದನ್ನು ಮನಗಂಡ ಬುದ್ಧದೇವ ಭಟ್ಟಾಚಾರ್ಯ ಅವರು ಟಾಟಾ ಕಂಪನಿಯ ಜತೆ ಒಪ್ಪಂದ ಮಾಡಿಕೊಂಡು ರಾಜ್ಯದ ಸಿಂಗೂರಿನಲ್ಲಿ ನ್ಯಾನೊ ಕಾರುಗಳ ಉತ್ಪಾದನಾ ಘಟಕಕ್ಕೆ ಅಗತ್ಯ ಭೂಮಿ ಒದಗಿಸಿದರು. ೨೦೦೬ರಲ್ಲಿ ಘಟಕದ ನಿರ್ಮಾಣ ಕಾಮಗಾರಿಯನ್ನು ಆರಂಭಿಸಿದ ಟಾಟಾ ಕಂಪನಿಯು ಇದಕ್ಕೆಂದೇ ಬರೋಬ್ಬರಿ ೧,೦೦೦ ಕೋಟಿ ರು. ಖರ್ಚುಮಾಡಿ ಕೆಲಸದ ವೇಗವನ್ನು ಹೆಚ್ಚಿಸಿತ್ತು.
ಆ ಕಾಲಘಟ್ಟದಲ್ಲಿ ಪಶ್ಚಿಮ ಬಂಗಾಳದಲ್ಲಿ ವಿರೋಧ ಪಕ್ಷದ ಸ್ಥಾನವನ್ನು ಅಲಂಕರಿಸಿದ್ದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷ. ನ್ಯಾನೊ ಘಟಕದ ವಿರುದ್ಧ ಹೋರಾಟ ನಡೆಸಿದರೆ ತನಗೇನಾದರೂ ರಾಜಕೀಯ ಪ್ರಯೋಜನ ಸಿಗಬಹುದೆಂದು ಆಲೋಚಿಸಿ ಸಿಂಗೂರಿನ ರೈತರನ್ನು ಎತ್ತಿಕಟ್ಟಿದ ಟಿಎಂಸಿ, ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಬೃಹತ್ ಹೋರಾಟ ನಡೆಸಿತು. ಈ ಹೋರಾಟದ ರೂಪುರೇಷೆಗಳನ್ನು  ಸಿದ್ಧಪಡಿಸಿದ್ದು ಸುಬೇಂದು ಅಧಿಕಾರಿ (ಪ್ರಸ್ತುತ ಇವರು ಬಿಜೆಪಿಯಲ್ಲಿದ್ದಾರೆ). ಸಿಂಗೂರಿನ ಸುತ್ತಮುತ್ತಲ ರೈತರನ್ನು ಸಂಘಟಿಸಿದ ಮಮತಾ ಬ್ಯಾನರ್ಜಿ ಇಡೀ ದೇಶದಲ್ಲೇ ‘ನ್ಯಾನೊ’ ಸದ್ದು ಮಾಡುವಂಥ ಹೋರಾಟ ನಡೆಸಿದರು. ಬರುಬರುತ್ತಾ ಈ ಹೋರಾಟವು ಹಿಂಸಾರೂಪಕ್ಕೆ ತಿರುಗಿತು.
ಇದನ್ನೆಲ್ಲಾ ಗಮನಿಸಿದ ರತನ್ ಟಾಟಾ, ಇಲ್ಲೇ ಇದ್ದರೆ ಗುರಿಮುಟ್ಟಲು ಸಾಧ್ಯವಾಗದೆ ತಮ್ಮ ಯೋಜನೆಯು ಹಳ್ಳ ಹಿಡಿಯುತ್ತದೆ ಎಂದು ಆಲೋಚಿಸಿ, ನ್ಯಾನೊ ಘಟಕವನ್ನು ಸಿಂಗೂರಿನಿಂದ ಸ್ಥಳಾಂತರಿಸುವುದಾಗಿ ೨೦೦೮ರಲ್ಲಿ ಘೋಷಿಸಿದರು. ಮಜವಾಗಿರುವ ಆ ಸನ್ನಿವೇಶದ ಕುರಿತು ರತನ್ ಟಾಟಾಕೂಡ ಹೇಳಿಕೊಂಡಿದ್ದಾರೆ. ನ್ಯಾನೊ ಘಟಕದ ಸ್ಥಳಾಂತರದ ವಿಷಯವನ್ನು ಅವರು ಮಾಧ್ಯಮದವರ ಮುಂದೆ ಹೇಳಿದ ಸಂದರ್ಭದಲ್ಲಿ ಗುಜರಾತಿನಲ್ಲಿ ನರೇಂದ್ರ ಮೋದಿಯವರು ಮುಖ್ಯಮಂತ್ರಿಯಾಗಿದ್ದರು. ಟಿವಿಯಲ್ಲಿ ರತನ್ ಅವರ ಮಾತನ್ನು ಕೇಳಿದಾಕ್ಷಣ ಮೋದಿಯವರು, ‘ಗುಜರಾತಿಗೆ ಬನ್ನಿ. ನಿಮ್ಮ ನ್ಯಾನೊ ಘಟಕದ ಆರಂಭಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನೂ ಮಾಡಿಕೊಡುತ್ತೇನೆ’ ಎಂದು ಮೊಬೈಲ್‌ನಲ್ಲಿ ಟಾಟಾರಿಗೆ ಸಂದೇಶ ಕಳಿಸಿದರಂತೆ.
ಅದನ್ನು ನೋಡಿದಾಕ್ಷಣ ರತನ್ ಟಾಟಾರವರು, ‘ಒನ್ ಎಂ ಈಸ್ ಗುಡ್, ಅನದರ್ ಎಂ ಈಸ್ ಬ್ಯಾಡ್’ ಎಂದು ಉತ್ತರಿಸಿದರಂತೆ. ಕೊಟ್ಟ ಮಾತಿನಂತೆ ಗುಜರಾತಿನ ಸಾನಂದ್ ಎಂಬಲ್ಲಿ ಟಾಟಾ ಕಂಪನಿಗೆ ಬೇಕಾದ ಭೂಮಿಯನ್ನು ಮೋದಿ ಒದಗಿಸಿಕೊಟ್ಟರು. ನೋಡನೋಡುತ್ತಲೇ ನ್ಯಾನೊ ಘಟಕ ತಲೆಯೆತ್ತಿ ಸಾವಿರಾರು ಜನರಿಗೆ ಉದ್ಯೋಗಗಳು ದೊರೆತವು. ಘಟಕ ನಿರ್ಮಾಣಕ್ಕೆ ಭೂಮಿ ಕೊಟ್ಟ ಕುಟುಂಬಗಳಿಗೆಲ್ಲ ಉದ್ಯೋಗಾವಕಾಶ ನೀಡಲಾಯಿತು.
ಟಾಟಾ ಕಂಪನಿಯು ಈ ವಿಷಯವನ್ನು ಇಲ್ಲಿಗೇ ಬಿಡಲಿಲ್ಲ; ಸಿಂಗೂರಿನ ಉತ್ಪಾದನಾ ಘಟಕಕ್ಕಾದ ತೊಂದರೆಯ ವಿಚಾರವನ್ನು ಒಂದು ಪ್ರತಿಷ್ಠೆಯಾಗಿ ಸ್ವೀಕರಿಸಿ ಪಶ್ಚಿಮ ಬಂಗಾಳ ಸರಕಾರದ ವಿರುದ್ಧ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿತು. ೧೫ ವರ್ಷಗಳ ವಿಚಾರಣೆಯ ನಂತರ ಮೊನ್ನೆ ಅಕ್ಟೋಬರ್ ೩೧ರಂದು ತೀರ್ಪು ಪ್ರಕಟಿಸಿದ ನ್ಯಾಯಾಲಯ, ಟಾಟಾ ಕಂಪನಿಗೆ ೭೬೬ ಕೋಟಿ ರುಪಾಯಿ ನಷ್ಟ ಪರಿಹಾರ ಕಟ್ಟಿಕೊಡಬೇಕೆಂದು ಪಶ್ಚಿಮ ಬಂಗಾಳದ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ಆದೇಶಿಸಿತು. ಅಂದು ವಿಪಕ್ಷದಲ್ಲಿದ್ದ ಮಮತಾ ಬ್ಯಾನರ್ಜಿ ಇಂದು ರಾಜ್ಯದ ಸಿಎಂ ಆಗಿದ್ದು, ಟಾಟಾ ಕಂಪನಿಗೆ ನಷ್ಟ ಕಟ್ಟಿಕೊಡಬೇಕಾಗಿದೆ. ಅಂದು ದೇಶಾದ್ಯಂತ ಚರ್ಚೆ ಯಲ್ಲಿದ್ದ ಸಿಂಗೂರಿನ ಸ್ಥಿತಿಯು ಟಾಟಾ ಸಮೂಹ ಅಲ್ಲಿಂದ ನಿರ್ಗಮಿಸಿದ ನಂತರ ಚಿಂತಾಜನಕವಾಗಿದೆ.
ಏಕೆಂದರೆ, ಅಲ್ಲಿನ ಕೃಷಿಭೂಮಿಯಲ್ಲಿ ನಿರ್ಮಾಣ ಕಾರ್ಯ ನಡೆದಿದ್ದರಿಂದ ರೈತರು ವ್ಯವಸಾಯ ಮಾಡಲಾಗದೆ ಅದು ಬಂಜರು ಭೂಮಿಯಾಗಿದೆ. ಬೇರೆ ಕಂಪನಿಗಳೂ ಸಿಂಗೂರಿನಲ್ಲಿ ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿವೆ. ಅಲ್ಲಿನ ಜನರು ಇತ್ತ ವ್ಯವಸಾಯವನ್ನೂ ಮಾಡಲಾಗದೆ, ಅತ್ತ ಕೈಯಲ್ಲಿಉದ್ಯೋಗವೂ ಇಲ್ಲದೆ ಹೊಟ್ಟೆಪಾಡಿಗಾಗಿ ಬೇರೆ ಬೇರೆ ಪ್ರಾಂತ್ಯಗಳಿಗೆ ಗುಳೆಹೋಗುತ್ತಿದ್ದಾರೆ. ತಾವು ರೈತರ ಪರವೆಂದು ಹೋರಾಟ ಮಾಡಿ ರಾಜಕೀಯ ಲಾಭ ಪಡೆದ ಮಮತಾ ಬ್ಯಾನರ್ಜಿ ೨೦೧೧ರ ವಿಧಾನಸಭಾ ಚುನಾವಣೆಯಲ್ಲಿ ಕಮ್ಯುನಿಸ್ಟರನ್ನು ಸೋಲಿಸಿ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿ ಯಾದರೇ ಹೊರತು ಸಿಂಗೂರಿನ ಸಮಸ್ಯೆಗಳತ್ತ ಗಮನಹರಿಸಲಿಲ್ಲ.
ಟಾಟಾ ಕಂಪನಿಯ ಹೆಸರು ಕೇಳದ ಭಾರತೀಯರಿಲ್ಲ. ‘ಪಿನ್’ನಿಂದ ಮೊದಲ್ಗೊಂಡು ‘ಪ್ಲೇನ್’ವರೆಗಿನ ಹಲವಾರು ಕಾರ್ಯಕ್ಷೇತ್ರಗಳಲ್ಲಿ ಇದರ ಹೆಜ್ಜೆಗುರುತಿದೆ. ೧೮೬೮ರಲ್ಲಿ ಜಮ್‌ಷೆಡ್‌ಜೀ ಟಾಟಾರಿಂದ ಸ್ಥಾಪನೆಯಾದ ಕಂಪನಿಯಿದು. ೧೮೭೦ರಲ್ಲಿ ಅವರು ಎಣ್ಣೆ ಗಿರಣಿಯೊಂದನ್ನು ಖರೀದಿಸಿ ಹತ್ತಿನ ಗಿರಣಿಯಾಗಿ ಪರಿವರ್ತಿಸಿದರು. ಅಲ್ಲಿಂದ ಕಂಪನಿಯ ವಾಣಿಜ್ಯಿಕ ಪಯಣ ಶುರುವಾಯಿತು. ಜಮ್‌ಷೆಡ್‌ಜೀ ಅವರಿಗೆ, ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಒಂದು ದೊಡ್ಡ ಹೋಟೆಲ್, ವಿಶ್ವದರ್ಜೆಯ ಕಲಿಕಾ ಸಂಸ್ಥೆ ಹಾಗೂ ಜಲವಿದ್ಯುತ್ ಉತ್ಪಾದನಾ ಘಟಕ- ಈ ನಾಲ್ಕನ್ನು ಹುಟ್ಟುಹಾಕಬೇಕೆಂಬ ಕನಸಿತ್ತು. ೧೯೦೩ರಲ್ಲಿ ಮುಂಬೈನಲ್ಲಿ ತಾಜ್ ಹೋಟೆಲ್ ಸ್ಥಾಪನೆಯಾಗುವುದರೊಂದಿಗೆ ಬದುಕಿರುವಾಗಲೇ ಇವರ ಒಂದು ಕನಸು ಸಾಕಾರಗೊಂಡಿತು.೧೯೦೪ರಲ್ಲಿ ಇವರು ನಿಧನರಾದರು.
೧೯೯೧ರಲ್ಲಿ ಸಮೂಹದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ರತನ್ ಟಾಟಾ, ವಿವಿಧ ಕವಲುಗಳಾಗಿ ಹಂಚಿಹೋಗಿದ್ದ ಟಾಟಾ ಲಾಂಛನದ ಉದ್ಯಮಗಳನ್ನು ‘ಟಾಟಾ ಸನ್ಸ್’ ಎಂಬ ಒಂದೇ ಚಾವಣಿಯಡಿ ತರುವ ಹೊಣೆ ಹೊತ್ತು ಯಶಸ್ವಿಯಾಗಿ ಅದನ್ನು ನಿರ್ವಹಿಸಿದರು. ಜತೆಗೆ ಪ್ರಮುಖ ವಿದೇಶಿ ಕಂಪನಿಗಳನ್ನೂ ಖರೀದಿಸಿದರು. ಉಕ್ಕು, ವಾಹನ, ವಿದ್ಯುತ್, ರಾಸಾಯನಿಕ ತಯಾರಿಕೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ವಹಿವಾಟು ದಾಖಲಿಸಿದ ಟಾಟಾ ಸಮೂಹವು ಮಾಹಿತಿ ತಂತ್ರಜ್ಞಾನ ಯುಗದ ಪ್ರಭಾವಕ್ಕೂ ಒಳಪಟ್ಟಿತು. ಏರ್‌ಕಂಡೀಷನರ್, ಚಿನ್ನಾಭರಣ, ಕೈಗಡಿಯಾರ, ಸಿದ್ಧ ಉಡುಪು ಕ್ಷೇತ್ರಗಳಲ್ಲೂ ಛಾಪು ಮೂಡಿಸಿರುವ ಈ ಸಮೂಹ ಜಾಗತಿಕ ಮಟ್ಟಕ್ಕೆ ಸಾಮ್ರಾಜ್ಯ ವಿಸ್ತರಿಸಿಕೊಂಡು ನಿಜಾರ್ಥದಲ್ಲಿ ಬಹುರಾಷ್ಟ್ರೀಯ ಕಂಪನಿಎನಿಸಿಕೊಂಡಿದೆ. ಪ್ರಸ್ತುತ ಸಮೂಹದ ಒಟ್ಟು ೩೧ ಕಂಪನಿಗಳು ವಿವಿಧ ಷೇರುಪೇಟೆಗಳಲ್ಲಿ ನೋಂದಾಯಿತವಾಗಿವೆ.
ಇಂಥ ಅನುಪಮ ಕೀರ್ತಿ ಹೊಂದಿರುವ ಟಾಟಾ ಸಮೂಹವು ಲೋಕೋಪಕಾರಿ ಚಟುವಟಿಕೆಗಳಲ್ಲೂ ‘ಎತ್ತಿದ ಕೈ’ ಎನಿಸಿಕೊಂಡಿದೆ. ಪಶ್ಚಿಮ ಬಂಗಾಳದ ಸಿಂಗೂರು ಪ್ರಕರಣದಲ್ಲಾದ ಹಿನ್ನಡೆಯನ್ನು ಸ್ವೀಕರಿಸಿ ಸುಮ್ಮನೆ ಕೂರದ ಟಾಟಾ ಸಮೂಹವು ೧೫ ವರ್ಷಗಳ ಹೋರಾಟ ನಡೆಸಿದ್ದಕ್ಕೆ ‘ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ’ ಎಂಬ ಮಾತಿನಂತೆ ಕೊನೆಗೂ ಅದಕ್ಕೆ ಜಯ ಸಿಕ್ಕಿದೆ. ಈ ಕಂಪನಿಗೆ ನಷ್ಟಭರ್ತಿ ಮಾಡಿಕೊಡಬೇಕೆಂಬ ನ್ಯಾಯಾಲಯದ  ಆದೇಶದೊಂದಿಗೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಯವರಿಗೆ ಹಿನ್ನಡೆ ಆದಂತಾಗಿದೆ.
(ಲೇಖಕರು ಹವ್ಯಾಸಿ ಬರಹಗಾರರು)