ಹೊಸ ಅಧ್ಯಕ್ಷರ ಹಾದಿ ತಿಳಿದಷ್ಟು ಸುಗಮವಲ್ಲ
ವಿಶ್ಲೇಷಣೆ
ರಮಾನಂದ ಶರ್ಮಾ
ಹಿರಿಯ ರಾಜಕಾರಣಿ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟಂತೆ, ಅಂತೂ ಇಂತೂ, ಎಳೆದು ಜಗ್ಗಾಡಿ ಬಿಜೆಪಿಗೆ ಹೊಸ ಅಧ್ಯಕ್ಷರ ನೇಮಕವಾಗಿದೆ. ಈ ಪ್ರಹಸನಕ್ಕೆ ೬ ತಿಂಗಳ ಕಾಲ ಬೇಕಾಗಿದ್ದು ಮಾತ್ರ ಚಿದಂಬರ ರಹಸ್ಯವಾಗಿಯೇ ಉಳಿದಿದೆ. ಕಂಡು ಕೇಳರಿಯದ ಯಾವುದೋ ಒಂದು ಹೊಸಮುಖವನ್ನು ಈ ಹುದ್ದೆಯಲ್ಲಿ ಕೂರಿಸಿದ್ದಿದ್ದರೆ ಆ ಮಾತು ಬೇರೆ. ಇದ್ದ ೪-೫ ಜನರಲ್ಲಿ ಒಬ್ಬರನ್ನು ಆಯ್ಕೆಮಾಡಲು ಆಡಿದ ಈ ನಾಟಕ, ಅದಕ್ಕಾಗಿ ವ್ಯಕ್ತವಾದ ಕಾಯುವಿಕೆ-ಕುತೂಹಲ ರಾಜಕೀಯ ವೀಕ್ಷಕರನ್ನು ಅಚ್ಚರಿಗೊಳಿಸಿವೆ.
ಅದರಲ್ಲೂ, ‘ವರಿಷ್ಠರು ಹೇಳಿದ ಯಾವುದೇ ವ್ಯಕ್ತಿಯನ್ನು ತಮ್ಮ ಅಧ್ಯಕ್ಷರನ್ನಾಗಿ ಸ್ವೀಕರಿಸಲು’ ರಾಜ್ಯ ಘಟಕವು ತುದಿಗಾಲಿನಲ್ಲಿ ಕಾಯುತ್ತಿದ್ದಾಗ, ಈವಿಳಂಬ ನೇಮಕಾತಿಯ ಹಿಂದಿನ ಅರ್ಥ ತಿಳಿಯದಾಗಿದೆ. ಅಳೆದು ತೂಗಿ, ಸಾಧ್ಯಾಸಾಧ್ಯತೆಗಳನ್ನು ಲೆಕ್ಕಿಸಿ, ಮುಂದಿನ ಲೋಕಸಭಾ ಚುನಾವಣಾ ಪರಿಣಾಮದ ದೃಷ್ಟಿಯಲ್ಲಿ ಸಮೀಕರಣವನ್ನು ವಿಶ್ಲೇಷಿಸಿ, ಗಜಪ್ರಸವದಂತೆ ಸುದೀರ್ಘ ಪ್ರಹಸನದ ನಂತರ ಈ ಅಧ್ಯಕ್ಷರ ಆಯ್ಕೆಯಾಗಿದೆ. ಆದರೂಪಕ್ಷದಲ್ಲಿ ಯಾಕೋ ಅಂಥ ಲವಲವಿಕೆ, ಉತ್ಸಾಹ ಮತ್ತು ಸಂಚಲನ ಕಾಣುತ್ತಿಲ್ಲ.
ಹೊಸ ಅಧ್ಯಕ್ಷರಿಗೆ ಮೇಲ್ನೋಟಕ್ಕೆ ಶುಭಾಶಯಗಳ ರವಾನೆಯಾದರೂ ಅದರಲ್ಲಿ ಔಪಚಾರಿಕತೆ ಕಂಡಿತೇ ವಿನಾ, ಇಂಥ ಸಂದರ್ಭಗಳಲ್ಲಿ ಹಿಂದೆ ಕಾಣುತ್ತಿದ್ದ ಸಂಭ್ರಮ-ಸಂತಸದ ಮಿಡಿತ ನಿರೀಕ್ಷೆಯಷ್ಟು ಕಾಣಲಿಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಮತ. ಕೆಲವರು ಟ್ವೀಟ್ ಮಾಡಿ ಹೊಸ ಅಧ್ಯಕ್ಷ ವಿಜಯೇಂದ್ರರಿಗೆ ಶುಭಾಶಯ ಕೋರಿದ್ದಾರೆ. ಆದರೆ ಈ ಪದವಿಯ ಪ್ರಬಲ ಆಕಾಂಕ್ಷಿಗಳಾಗಿದ್ದ ‘ಪ್ರತಿಷ್ಠಿತರು’ ತುಟಿ ಬಿಚ್ಚದಿರುವುದು ಹಲವರ ಹುಬ್ಬೇರಿಸಿದೆ ಮತ್ತು ನಾನಾ ಅರ್ಥಕ್ಕೆ ಅನುವು ಮಾಡಿಕೊಟ್ಟಿದೆ.
ಔಪಚಾರಿಕತೆ ಕಾಯ್ದುಕೊಳ್ಳಲಾದರೂ ಕನಿಷ್ಠ ಒಂದು ಸಾಲಿನ ಟ್ವೀಟ್ ಇಂಥವರಿಂದ ಹೊಮ್ಮಲಿಲ್ಲ ಎನ್ನಲಾಗುತ್ತದೆ. ಹೀಗಾಗಿ, ಮೇಲ್ನೋಟಕ್ಕೆ ಎಲ್ಲವೂ ಸರಿ ಯಾಗಿದೆ ಎನಿಸಿದರೂ, ವಿಜಯೇಂದ್ರರು ‘ಹೆದ್ದಾರಿ’ ಎಂದು ಭಾವಿಸಿದ್ದ ಹಾದಿಯಲ್ಲಿ ದಿನಗಳೆದಂತೆ ಕಲ್ಲು-ಮುಳ್ಳು, ಹಳ್ಳ-ಹಂಪ್ ಅವರಿಗೆ ಗೋಚರಿಸುವ ಸಾಧ್ಯತೆಗಳಿವೆ. ಪಕ್ಷವನ್ನು ಸಂಘಟಿಸಿ ಕಟ್ಟಿ ಲೋಕಸಭಾ ಚುನಾವಣೆಗೆ ಅಣಿಗೊಳಿಸುವ ಕಾರ್ಯ ನೇಪಥ್ಯಕ್ಕೆ ಸರಿದು, ಅಸಮಾಧಾನ ವನ್ನು ಶಮನಮಾಡುವ ಕಾರ್ಯವನ್ನೇ ಯುದ್ಧೋಪಾದಿಯಲ್ಲಿ ಮಾಡಬೇಕಾಗುತ್ತದೇನೋ ಅನಿಸುತ್ತಿದೆ.
ಪಕ್ಷದ ಶಿಸ್ತಿನ ಹೆಸರಿನಲ್ಲಿ ಯಾರೂ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿಲ್ಲ. ಅಷ್ಟರ ಮಟ್ಟಿಗೆ ಪಕ್ಷದಲ್ಲಿ ನೆಮ್ಮದಿ ಕಾಣುತ್ತಿದೆ. ಆದರೆ ಪರಿಸ್ಥಿತಿ ಬೂದಿಮುಚ್ಚಿದ ಕೆಂಡವಾಗಿದೆ. ವಿಜಯೇಂದ್ರರ ಪದಗ್ರಹಣ ಸಮಾರಂಭಕ್ಕೆ ಸಿ.ಟಿ.ರವಿ ಗೈರುಹಾಜರಾಗಿದ್ದು ಗೊತ್ತಿರುವ ಸಂಗತಿಯೇ; ಮಧ್ಯಪ್ರದೇಶದ ವಿಧಾನಸಭಾ ಚುನಾವಣಾ ನಿರ್ವಹಣೆಯ ಹೊಣೆಯನ್ನು ಪಕ್ಷ ಅವರಿಗೆ ನೀಡಿದ್ದು ಹೊರರಾಜ್ಯದಲ್ಲಿರುವ ಕಾರಣ ಸಮಾರಂಭಕ್ಕೆ ರವಿಬರಲಾಗಿಲ್ಲ ಎಂಬ ಸಮಜಾಯಿಷಿ ಹೊಮ್ಮಿದೆಯಾದರೂ ಅದನ್ನು ಯಾರೂ ಸ್ವೀಕರಿಸುತ್ತಿಲ್ಲ, ಅದು ಬೇರೆ ವಿಚಾರ.
ತಮ್ಮ ಹಿರಿತನವನ್ನು ಗೌರವಿಸಿ ಅಧ್ಯಕ್ಷ ಪದವಿಗೆ ಪರಿಗಣಿಸಬಹುದು ಎಂದು ಈಶ್ವರಪ್ಪ, ಯತ್ನಾಳ್, ಸೋಮಣ್ಣ, ಸಿ.ಟಿ.ರವಿ ಮುಂತಾದವರು ಅತ್ಯುತ್ಸಾಹದಲ್ಲಿದ್ದರು. ಈ ಇಚ್ಛೆಯನ್ನು ಅವರು ಟಾಂ-ಟಾಂ ಮಾಡದಿದ್ದರೂ ತಮ್ಮ ಆಪ್ತರ ಮುಂದೆ ವ್ಯಕ್ತಪಡಿಸಿದ್ದರು ಎನ್ನಲಾಗಿದೆ ಮತ್ತು ಅವರ ನಡವಳಿಕೆಗಳಿಂದಲೂ ಇದು ಗೊತ್ತಾಗುತ್ತಿತ್ತು. ‘ದಶಕಗಳಿಂದ ಪಕ್ಷಕ್ಕೆ ಮಣ್ಣು ಹೊತ್ತಿರುವ ತಾವು, ಕೇವಲ ಒಂದೇ ಬಾರಿ ಶಾಸಕರಾಗಿರುವ ೪೭ ವರ್ಷದ ವಿಜಯೇಂದ್ರರಿಂದ ನಿರ್ದೇಶನ ಪಡೆಯಬೇಕೇ? ಎಂಬುದು ಈ ಹಿರಿಯರ ವ್ಯಥೆ’ ಅಂತ ರಾಜಕೀಯ ವಿಶ್ಲೇಷಕರು ಭಾಷ್ಯ ಬರೆಯುತ್ತಿದ್ದಾರೆ.
‘ರಾಜಕಾರಣಿಗಳು ಇಂದಿನ ಬಗೆಗಷ್ಟೇ ಅಲ್ಲದೆ, ನಾಳಿನ ಮತ್ತು ಅದರಾಚೆಯ ದಿನಗಳ ಬಗೆಗೂ ಆಲೋಚಿಸುತ್ತಾರೆ; ಈಗ ರಾಜ್ಯಾಧ್ಯಕ್ಷರಾಗಿರುವವಿಜಯೇಂದ್ರ ೨೦೨೮ರಲ್ಲಿ ಮುಖ್ಯಮಂತ್ರಿ ಗಾದಿಗೆ ಟವೆಲ್ ಹಾಕುವ ಸಾಧ್ಯತೆಯನ್ನು ಅವರು ಕಲ್ಪಿಸಿಕೊಂಡು ಈಗಾಗಲೇ ಮುನ್ನೆಚ್ಚರಿಕೆಯ ಮೋಡ್‌ ನಲ್ಲಿದ್ದಾರೆ’ ಎಂದಿದ್ದಾರೆ ಹಿರಿಯ ರಾಜಕೀಯ ಪಂಡಿತರೊಬ್ಬರು. ಈ ತರ್ಕದಲ್ಲೂ ಅರ್ಥ ಕಾಣುತ್ತದೆ. ಯಡಿಯೂರಪ್ಪನವರ ನಿಷ್ಠಾವಂತ ಅನುಯಾಯಿ ಗಳಲ್ಲಿ ಒಬ್ಬರ ಆಯ್ಕೆಯಾಗಿದ್ದರೆ ಇಷ್ಟೊಂದು ಸಂಚಲನ ಸೃಷ್ಟಿಯಾಗುತ್ತಿರಲಿಲ್ಲ. ಆದರೆ ಅವರ ಮಗನ ಆಯ್ಕೆಯಾಗಿದ್ದು ಹಲವರ ಹುಬ್ಬೇರಿಸಿದೆ. ಇದು ಕೆಟ್ಟ ನಿದರ್ಶನವನ್ನು ಸೃಷ್ಟಿಸಿದೆ ಎಂದು ಅವರು ಹೇಳುತ್ತಿದ್ದಾರಂತೆ.
ಕಾಂಗ್ರೆಸ್‌ನ ಹಾಗೂ ಇತರ ಕೆಲವು ಪ್ರಾದೇಶಿಕ ಪಕ್ಷಗಳ ಕುಟುಂಬ ರಾಜಕಾರಣವನ್ನು ಸದಾ ಟೀಕಿಸುವ ಬಿಜೆಪಿಯು ರಾಜ್ಯ ಘಟಕದ ಅಧ್ಯಕ್ಷರ ಆಯ್ಕೆ ಯಲ್ಲಿ ಕುಟುಂಬ ರಾಜಕಾರಣಕ್ಕೇ ಜೋತುಬಿದ್ದಿರುವುದನ್ನು ಹಲವರು ಪರೋಕ್ಷವಾಗಿ ಟೀಕಿಸುತ್ತಿದ್ದಾರಂತೆ ಮತ್ತು ಈ ನಿಟ್ಟಿನಲ್ಲಿ ಇತರ ಪಕ್ಷಗಳ ಟೀಕೆಯನ್ನು ಎದುರಿಸುವುದು ಹೇಗೆ? ಎಂದು ಪ್ರಶ್ನಿಸುತ್ತಿದ್ದಾರಂತೆ. ರಾಜ್ಯ ಘಟಕದ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸುವಲ್ಲಿನ ವಿಜಯೇಂದ್ರರ ಅರ್ಹತೆಯನ್ನು ಯಾರೂ ಪ್ರಶ್ನಿಸುವು ದಿಲ್ಲ; ಅವರ ತಾಕತ್ತು-ತಂತ್ರಗಾರಿಕೆ-ಕೌಶಲಗಳ ಬಗ್ಗೆ ಎರಡು ಮಾತಿಲ್ಲ. ಈಗಾಗಲೇ ಒಂದೆರಡು ಉಪಚುನಾವಣೆ ಗಳನ್ನು ಗೆಲ್ಲಿಸಿಕೊಟ್ಟು ವರಿಷ್ಠರಿಗೆ ತಮ್ಮ ಶಕ್ತಿಯನ್ನು ಮನವರಿಕೆ ಮಾಡಿಕೊಟ್ಟಿರುವ ನಾಯಕ ಅವರು. ಆದರೆ, ‘ಈ ದೇಶದಲ್ಲಿ ಮೊದಲು ನಾಯಕ ರನ್ನು ಆಯ್ಕೆಮಾಡಿ, ನಂತರ ನಾಯಕತ್ವದ ಎಲ್ಲಾ ಗುಣ-ಲಕ್ಷಣಗಳನ್ನೂ ಅವರಿಗೆ ಮೆತ್ತಲಾಗುತ್ತದೆ’ ಎಂಬ ಜಾರ್ಜ್ ಫೆರ್ನಾಂಡಿಸ್‌ರ ಅಭಿಪ್ರಾಯವನ್ನು ಹಲವರು ನೆನಪಿಸಿಕೊಳ್ಳುತ್ತಾರೆ. ‘ಅವರ ಅನುಭವದ ಮೂಸೆಯಲ್ಲಿ ಇವರು ಮುಂದುವರಿಸಿಕೊಂಡು ಹೋಗುತ್ತಾರೆ’ ಎಂಬುದು ಚಾಲ್ತಿಯಲ್ಲಿರುವ ಇನ್ನೊಂದು ವಿಶೇಷಣ.
ಇನ್ನು, ಬಸನಗೌಡ ಪಾಟೀಲ್ ಯತ್ನಾಳರು ಬಹಿರಂಗವಾಗಿ ಹೇಳದಿದ್ದರೂ ಅಧ್ಯಕ್ಷ ಪದವಿ ಮೇಲೆ ಕಣ್ಣಿಟ್ಟಿದ್ದು ಹೌದು. ಈಗದು ಅವರ ಕೈತಪ್ಪಿದೆ. ವಿರೋಧ ಪಕ್ಷದ ನಾಯಕತ್ವವು, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹಾಗೂ ಜಾತಿ ಲೆಕ್ಕಾಚಾರದಲ್ಲಿ ಅವರಿಗೆ ದೊರಕುವುದು ದೃಢವಾಗಿ ಕಾಣು ತ್ತಿಲ್ಲ. ಅಧ್ಯಕ್ಷಗಾದಿ ಕೈತಪ್ಪಿದ ಮೇಲೆ ಬಹಿರಂಗವಾಗಿ ಭಿನ್ನಮತದ ಬಾವುಟ ಹಾರಿಸದಿದ್ದರೂ, ಅವರು ಸಾರ್ವಜನಿಕ ಸಭೆಗಳಲ್ಲಿ ಹೆಚ್ಚಾಗಿ ಕಾಣದಿರು ವುದು ಒಂದಷ್ಟು ವದಂತಿಗಳಿಗೆ ರೆಕ್ಕೆಪುಕ್ಕ ನೀಡಿದೆ. ಸೋಮಣ್ಣ ನವರು ಅಧ್ಯಕ್ಷ ಪದವಿಯ ಆಕಾಂಕ್ಷಿಯಾಗಿದ್ದರೂ ಅದಕ್ಕಾಗಿ ಅವರು ಅಷ್ಟೊಂದು ಲಾಬಿ ಮಾಡಿದಂತೆ ಕಾಣುವುದಿಲ್ಲ. ಅವರನ್ನು ರಾಜಕೀಯ ವಿಶ್ಲೇಷಕರು ‘ಬೇಲಿ ಮೇಲೆ ಕುಳಿತವರು’ ಎಂದು ಸಂಶಯಿಸುತ್ತಿದ್ದಾರೆ, ಜತೆಗೆ ‘ಚುನಾವಣೆ ಯಲ್ಲಿ ಸೋತವರು’ ಎಂಬ ಬಾಲಂಗೋಚಿಯೂ ಇದೆ.
ಅವರು ಭಿನ್ನಮತದ ಬಾವುಟ ಹಾರಿಸಿದ್ದಾರೆ ಎನ್ನಲಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗುವಗುಸುಗುಸು ಕೇಳುತ್ತಿದೆ. ಸಿ.ಟಿ.ರವಿಯವರೂ ‘ಚುನಾವಣೆಯಲ್ಲಿ ಸೋತವರು’ ಎನ್ನುವ ಲಿಸ್ಟ್‌ನಲ್ಲಿದ್ದಾರೆ. ಈಶ್ವರಪ್ಪನವರನ್ನು ಚುನಾವಣಾ ರಾಜಕೀಯ ದಿಂದ ಬಹುತೇಕ ದೂರಗೊಳಿಸಿದಂತೆ ಕಾಣುತ್ತದೆ. ಪ್ರಹ್ಲಾದ್ ಜೋಶಿಯವರು ವಿಜಯೇಂದ್ರರನ್ನು ಬೆಂಬಲಿಸಿದ್ದಾರೆ. ಸದಾನಂದ ಗೌಡರ ನಿವೃತ್ತಿ ವಿವಾದದಲ್ಲಿಯೇ ಇದ್ದು, ಮುಂದಿನ ದಿನಗಳಲ್ಲಿ ಅವರು ಶೆಟ್ಟರ್ ಮತ್ತು ಸವದಿ ಅವರ ಹಾದಿಹಿಡಿಯಬಹುದು ಎಂಬ ವದಂತಿಗಳು ಕೇಳಿಬರುತ್ತಿವೆ. ಅವರ ಸಮ್ಮುಖದಲ್ಲಿ ರಾಜ್ಯಪಾಲರ ಹುದ್ದೆಯ ಆಯ್ಕೆಯನ್ನು ಇಡಲಾಗಿದ್ದು, ಅದಾಗದಿದ್ದರೆ ಅವರು ತಮ್ಮ ಹಾದಿ ಹಿಡಿಯಬಹುದು.
‘ವರಿಷ್ಠರ ಸೂಚನೆಯ ಮೇರೆಗೆ ಗೌಡರು ನಿವೃತ್ತಿಯಾಗಿದ್ದಾರೆ’ ಎಂದು ಒಬ್ಬರು ಹೇಳಿದರೆ, ‘ಸ್ವ ಇಚ್ಛೆಯಿಂದ ವಿದಾಯ ಹೇಳಿದ್ದೇನೆ’ ಎನ್ನುತ್ತಿದ್ದಾರೆ ಗೌಡರು. ಈ ನಿಟ್ಟಿನಲ್ಲಿ ಯಡಿಯೂರಪ್ಪ ಮತ್ತು ಗೌಡರ ಮಧ್ಯೆ ಶೀತಲಸಮರ ನಡೆಯುತ್ತಿದೆಯಂತೆ. ಮಾತುಕತೆಗಾಗಿ ಗೌಡರನ್ನು ದೆಹಲಿಗೆ ಕರೆಸಿಕೊಂಡು ಮೂರು ದಿನ ಕಾಯಿಸಿ, ಭೇಟಿಗೆ ಅವಕಾಶ ನೀಡದೆ ಅವರನ್ನು ವಾಪಸ್ ಕಳಿಸಿದ್ದು ಬಹುಜನರಿಗೆ ಅಪಥ್ಯವಾಗಿದೆ; ಇದು ಒಬ್ಬ ಹಿರಿಯ ನಾಯಕರನ್ನು ನಡೆಸಿಕೊಳ್ಳುವ ಪರಿಯಲ್ಲ ಎಂಬ ಭಾವನೆ ಹಲವರಲ್ಲಿದೆ. ಭೇಟಿಯಾಗದೆ ತಮ್ಮನ್ನು ವಾಪಸ್ ಕಳಿಸಿದಾಗಲೇ ಗೌಡರಿಗೆ ವರಿಷ್ಠರ ಮುಂದಿನ ನಡೆ ತಿಳಿದಿತ್ತು, ಅಂತೆಯೇ ವರಿಷ್ಠರಿಂದ ಹೇಳಿಸಿಕೊಳ್ಳುವ ಮೊದಲೇ ಗೌಡರು ನಿವೃತ್ತಿಯ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತದೆ.
ಯಡಿಯೂರಪ್ಪನವರನ್ನು ಕಾರಣವಿಲ್ಲದೆ ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಿ ಸೈಡ್‌ಲೈನ್ ಮಾಡಿ, ತನ್ಮೂಲಕ ಒಂದು ಬಲಿಷ್ಠ ಸಮುದಾಯದ ಬೆಂಬಲವನ್ನು ಕಳೆದುಕೊಂಡು ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಬೇಕಾಯಿತು ಎಂದು ಮನಗಂಡಿರುವ ವರಿಷ್ಠರು ವಿಜಯೇಂದ್ರರ ನೇಮಕದ ಮೂಲಕ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಯಾಕೋ ಏನೋ, ಅವರು ಮಾಡಿದ ಕರೆಕ್ಷನ್ ಸದ್ಯ ‘ಬ್ಯಾಕ್-ರ್’ ಮಾಡುವಂತೆ ಕಾಣುತ್ತಿದೆ.
ವರಿಷ್ಠರ ಎಚ್ಚರಿಕೆಯಿಂದಾಗಿ ತತ್ಕಾಲಕ್ಕೆ ಪಕ್ಷದಲ್ಲಿ ಮೌನವ್ರತ ಕಾಣುತ್ತಿದ್ದರೂ ಇದು ಎಷ್ಟು ದಿನ ನಡೆದೀತು ಎಂಬ ಪ್ರಶ್ನೆಯೂ ಕಾಡುತ್ತಿದೆ. ಪಕ್ಷದಲ್ಲಿಹೊಸ ನಾಯಕರನ್ನು ಪರಿಚಯಿಸಬೇಕು, ಯುವಕರಿಗೆ ಆದ್ಯತೆ ನೀಡಬೇಕು, ಸುದೀರ್ಘಕಾಲ ಅಧಿಕಾರ ಅನುಭವಿಸಿದವರನ್ನು ಹಾಗೂ ವಯಸ್ಸಾ ದವರನ್ನು ನಿವೃತ್ತಿಗೊಳಿಸಬೇಕು ಎಂಬ ಚಿಂತನೆಯನ್ನು ಬದಿಗೊತ್ತಿ, ಎಪ್ಪತ್ತು ತುಂಬಿದವರನ್ನು ಕರೆದು ಮಧ್ಯಪ್ರದೇಶದಲ್ಲಿ ಟಿಕೆಟ್ ಕೊಟ್ಟಿರುವಾಗ, ಇಂಥ ಮಾನದಂಡವನ್ನು ಕರ್ನಾಟಕದಲ್ಲೂ ಯಾಕೆ ಬಳಸಲಿಲ್ಲ ಎಂಬ ಪ್ರಶ್ನೆ ಅಲ್ಲಲ್ಲಿ ಕೇಳಿಬರುತ್ತಿದೆ.
ಅಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರರನ್ನು ನೇಮಿಸಿದ್ದರಿಂದಾಗಿ, ‘ಜನತಾದಳದಂತೆ ಬಿಜೆಪಿಯೂ ಅಪ್ಪ-ಮಕ್ಕಳ ಪಕ್ಷ’ ಎಂದು ಲೇವಡಿ ಮಾಡಲು ಕಾಂಗ್ರೆಸ್‌ಗೆ ಅವಕಾಶ ಸಿಕ್ಕಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ. ಹಾಗೆಯೇ, ಕರ್ನಾಟಕ ಬಿಜೆಪಿಗೆ ಈವರೆಗೆ ೧೪ ಮಂದಿ ಅಧ್ಯಕ್ಷರಾಗಿದ್ದು, ಶಿವಮೊಗ್ಗ ಜಿಲ್ಲೆಯವರೇ ಆರು ಬಾರಿ ಈ ಹುದ್ದೆಯನ್ನು ಅಲಂಕರಿಸಿದ್ದಾರೆ. ಹೀಗಾಗಿ, ‘ಶಿವಮೊಗ್ಗ ಜಿಲ್ಲೆಯಷ್ಟೇ ಬಿಜೆಪಿಯ ಶಕ್ತಿಕೇಂದ್ರವೇ?’ ಎಂದು ಕೆಲವರು ಪಿಸುಗುಡುತ್ತಿದ್ದಾರೆ; ಉತ್ತರ ಕರ್ನಾಟಕಕ್ಕೆ ೨ ಬಾರಿ, ಹೈದ್ರಾಬಾದ್ ಕರ್ನಾಟಕಕ್ಕೆ ಒಂದು ಬಾರಿ ಮಾತ್ರ ಅಧ್ಯಕ್ಷಗಿರಿ ದಕ್ಕಿರುವುದನ್ನು ಇಂಥವರು ಇದಕ್ಕೆ ಪೂರಕವಾಗಿ ತೋರಿಸುತ್ತಿದ್ದಾರೆ.
ಹೊಸ ಅಧ್ಯಕ್ಷರ ಪದಗ್ರಹಣ ಸಮಾರಂಭವೇನೋ ವಿಜೃಂಭಣೆಯಿಂದ ನಡೆಯಿತು; ಆದರೆ ಘಟಾನುಘಟಿ ಹಿರಿಯ ನಾಯಕರ ಅನುಪಸ್ಥಿತಿ ಅಲ್ಲಿಎದ್ದು ಕಾಣುತ್ತಿತ್ತು. ಎಲ್ಲೋ ಏನೋ ಎಡವಟ್ಟಾಗಿದೆ ಎಂಬುದಕ್ಕೆ ಈ ಬೆಳವಣಿಗೆ ಸಾಕ್ಷಿಯಾಗಿದೆ. ಪಕ್ಷದ ಆಂತರಿಕ ಗೊಂದಲಗಳು ಮತ್ತು ರಾಜಕೀಯಸಮೀಕರಣಗಳು ಏನೇ ಇರಲಿ, ಬಿಜೆಪಿಯ ವರಿಷ್ಠರು ಪಕ್ಷದ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು, ಈ ಹೊಣೆಯನ್ನು ನಿರ್ವಹಿಸಲು ಅರ್ಹರಾದವ ರನ್ನೇ ಅಧ್ಯಕ್ಷ ಪದವಿಗೆ ಆಯ್ಕೆಮಾಡಿದ್ದಾರೆ ಎನ್ನಬಹುದು. ಎಲ್ಲರನ್ನೂ ಎಲ್ಲಾ ಕಾಲಕ್ಕೂ ತೃಪ್ತಿಪಡಿಸಲು ಸಾಧ್ಯವಿಲ್ಲ. ಹೆಚ್ಚು ಜನರನ್ನುಗಮನದಲ್ಲಿರಿಸಿಕೊಳ್ಳುವುದು ಲಾಗಾಯ್ತಿನಿಂದ ಬಂದ ನೀತಿಪಾಠ. ಅದನ್ನೇ ಈಗ ಅನುಸರಿಸಿದ್ದಾರೆ ವರಿಷ್ಠರು.
(ಲೇಖಕರು ಬ್ಯಾಂಕಿಂಗ್ ಕ್ಷೇತ್ರದ ಪರಿಣತರು)