ಅರಿವಿನ ಬೆಳಕಿನಲ್ಲಿ ಸಾಗಲಿ ಬದುಕು…
ಹಿತೋಪದೇಶ
ಮಹಾದೇವ ಬಸರಕೋಡ
ಆಸೆಯು ಮನುಷ್ಯನ ಸಹಜಗುಣ, ಆದರೆ ವ್ಯಾಮೋಹ ಎಂಬುದು ಚಟ. ತೀವ್ರ ವ್ಯಾಮೋಹದಿಂದ ಬಿಡಿಸಿಕೊಳ್ಳದೆ ಹೋದರೆ ಅದು ನಮ್ಮ ಅಂತಃಶಕ್ತಿಯಅನಾವರಣಕ್ಕೂ ಕಲೆಗಾರಿಕೆಯ ಅಭಿವ್ಯಕ್ತಿಗೂ ತಡೆಗೋಡೆಯಾಗಿ ನಿಲ್ಲುತ್ತದೆ. ಆದ್ದರಿಂದ ಅತಿರೇಕದ ವ್ಯಾಮೋಹದಿಂದ ಮುಕ್ತರಾಗುವೆಡೆಗೆ ಆದ್ಯತೆ ನೀಡಬೇಕು.
ಪ್ರಸ್ತುತ ನಮ್ಮಲ್ಲಿ ಬಹುತೇಕರದ್ದು ಧಾವಂತದ ಬದುಕು. ಎಲ್ಲದರಲ್ಲೂ ದುಡುಕುವುದು, ಆತುರ ತೋರುವುದು ನಮ್ಮ ಪ್ರವೃತ್ತಿಯಾಗಿಬಿಟ್ಟಿದೆ.ಇದನ್ನು ಜಗತ್ತೂ ಒಪ್ಪಿಕೊಂಡಂತಾಗಿದೆ. ಎಲ್ಲವೂ ಬದಲಾಗುತ್ತಿದೆ. ‘ಬದಲಾವಣೆ ಜಗದ ನಿಯಮವಲ್ಲವೇ? ಹೀಗಾಗಿ ಅದನ್ನು ಒಪ್ಪಿಕೊಳ್ಳದಿದ್ದರೆ ನಮಗೆ ಉಳಿಗಾಲವಿಲ್ಲ’ ಎಂಬ ಸಮಜಾಯಿಷಿ ಕೊಡುವುದೂ ನಮಗೆ ರೂಢಿಯಾಗಿದೆ.
ಬರದಿರುವ ನಾಳೆಯ ಕುರಿತು ಆತಂಕಪಡುವ, ಬಂದುಹೋದ ನಿನ್ನೆಗಾಗಿ ಹಳಹಳಿಸುವ ಪ್ರವೃತ್ತಿಯೇ ಬದುಕಿನ ಪರಮ ಧ್ಯೇಯವಾಗಿದೆ. ಹೀಗಾಗಿ ನಮ್ಮ ವರ್ತಮಾನವನ್ನು ನಾವೇ ಹಾಳುಮಾಡಿಕೊಳ್ಳುತ್ತಿದ್ದೇವೆ. ಆಧುನಿಕತೆಯ ನೆಪವನ್ನು ಮುಂದುಮಾಡಿ, ಮೌನ, ತಾಳ್ಮೆ, ಕೇಳಿಸಿಕೊಳ್ಳುವಿಕೆಯಂಥಸದ್ವರ್ತನೆಗಳನ್ನು ನಮ್ಮಿಂದ ದೂರವಾಗಿಸುತ್ತಿದ್ದೇವೆ. ನಮ್ಮ ಮನಸ್ಸಿಗೆ ಬೇಕೆನಿಸುವ/ಇಷ್ಟವೆನಿಸುವ ಸಂಗತಿಗಳನ್ನಷ್ಟೇ ಎದುರುಗೊಳ್ಳಲು  ಹವಣಿಸು ವುದು ನಮ್ಮ ಅಭ್ಯಾಸವಾಗಿ ಬಿಟ್ಟಿದೆ.
ವಾಸ್ತವದಲ್ಲಿ ಇದು ತೀರಾ ಅಸಾಧ್ಯವೇ ಸರಿ; ಏಕೆಂದರೆ ಬದುಕಿನ ಬಹುತೇಕ ಸಂದರ್ಭಗಳಲ್ಲಿ ನಮಗಿಷ್ಟ ವಾಗದ ಸಂಗತಿಗಳು ಘಟಿಸುತ್ತಿರುತ್ತವೆ. ಅವನ್ನು ತಡೆಯುವುದಾಗಲೀ ಪರಿವರ್ತಿಸುವುದಾಗಲೀ ಕೆಲವೊಮ್ಮೆ ಅಸಾಧ್ಯವಾಗಿರುತ್ತದೆ. ಅನೇಕ ಸಲ ಅವು ನಮ್ಮ ಹತೋಟಿಗೆ ಸಿಗುವುದೇ ಇಲ್ಲ. ಹೀಗೆ ದಕ್ಕುವ ಮತ್ತು ದಕ್ಕದಿರುವ ಸಂಗತಿಗಳ ನಡುವಿನ ಸೂಕ್ಷ್ಮತೆಗಳನ್ನು ಅರಿಯುವಲ್ಲಿ ನಾವು ಸೋಲುವುದಿದೆ. ಹೀಗಾದಾಗ ಮನಸ್ಸು ವಿಚಲಿತಗೊಳ್ಳುತ್ತದೆ, ಕೋಪ-ಉದ್ವೇಗ -ಆವೇಶ-ಅಳುವಿಗೆ ಕಾರಣವಾಗುತ್ತದೆ. ಸಲ್ಲದ ಕ್ಷುಲ್ಲಕ ಸಂಗತಿಗಳಿಂದಾಗಿ ಮನಸ್ಸು ಇನ್ನಷ್ಟು ಪ್ರಕ್ಷುಬ್ಧಗೊಳ್ಳುತ್ತದೆ.
ಜೀವವಿಜ್ಞಾನದ ನೆಲೆಗಟ್ಟಿನಲ್ಲಿ ಹೇಳುವುದಾದರೆ, ಒತ್ತಡದ ಪರಿಸ್ಥಿತಿಯಲ್ಲಿ ನಮ್ಮ ದೇಹದಲ್ಲಿ ಕಾರ್ಟಿಸಾಲ್ ಎಂಬ ಹಾರ್ಮೋನ್ ಬಿಡುಗಡೆ ಯಾಗುತ್ತದೆ. ಇದು ತಕ್ಷಣಕ್ಕೆ ಪ್ರತಿಕ್ರಿಯಿಸುವಂತೆ ನಮ್ಮನ್ನು ಪ್ರಚೋದಿಸುತ್ತದೆ, ಒತ್ತಾಯಿಸುತ್ತದೆ. ತೀರಾ ನಿರ್ಲಕ್ಷಿಸಬಹುದಾದ ಸನ್ನಿವೇಶಗಳಲ್ಲೂನಾವು ಒತ್ತಡಕ್ಕೆ ಒಳಗಾದಾಗ ಕಾರ್ಟಿಸಾಲ್ ಬಿಡುಗಡೆಗೊಳ್ಳುತ್ತ ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತದೆ ಹಾಗೂ ಮತ್ತದೇ ಅವಘಡಗಳಿಗೆ ಕಾರಣವಾಗು ತ್ತದೆ. ಹಾಗಾಗಿ ಒತ್ತಡದ ಸನ್ನಿವೇಶಗಳಲ್ಲಿ ಒಂದಷ್ಟು ತಾಳ್ಮೆ ಹಾಗೂ ಮೌನವನ್ನು ಕಾಯ್ದುಕೊಂಡರೆ ತುಂಬಾ ಒಳ್ಳೆಯದು. ಇದರ ಅನುಸರಣೆಯಲ್ಲಿ ಸಫಲರಾದರೆ, ನಮ್ಮ ಬದುಕು ಆಶಾದಾಯಕವಾಗಿ ಪರಿವರ್ತನೆಗೊಳ್ಳಲು ಸಾಧ್ಯವಿದೆ. ಎಂಥದೇ ದುರ್ಭರ ಸನ್ನಿವೇಶದಲ್ಲೂ ಆತುರ ತೋರದೆ, ಕ್ಷಿಪ್ರವಾಗಿ ಮತ್ತು ಅತಿರೇಕವಾಗಿ ಪ್ರತಿಕ್ರಿಯಿಸದೆ ಸಮಚಿತ್ತದಿಂದ ವರ್ತಿಸುವುದರಿಂದ ನಮಗೆ ಸಿಗುವ ಲಾಭಗಳು ಹೇಳತೀರದಷ್ಟು.
ನಮ್ಮ ಮನಸ್ಸು ತುಂಬಾ ಸೂಕ್ಷ್ಮ, ಬಾಹ್ಯ ಪ್ರಭಾವಕ್ಕೆ ಅದು ಬಹುಬೇಗ ಒಳಗಾಗಬಲ್ಲದು. ಅದರಲ್ಲೂ ವಿಕೃತ ಸಂಗತಿಗಳು ಎದುರಾದಾಗ ನಾವು ಎಷ್ಟು ಹುಷಾರಿನಲ್ಲಿದ್ದರೂ ಕಮ್ಮಿಯೇ. ನಮ್ಮ ಮನದಂಗಳವನ್ನು ಆವರಿಸಿಕೊಂಡಿರುವ ಸಲ್ಲದ ಸಂಗತಿಗಳು ಹಾಗೂ ಅತಾರ್ಕಿಕ ವಿಷಯಗಳಂಥ ಹಾವಸೆ ಯನ್ನು ಕಿತ್ತುಹಾಕಬೇಕು. ನಮ್ಮ ಮನಸ್ಸನ್ನು ಅಸ್ತವ್ಯಸ್ತಗೊಳಿಸುವ ಸಂಗತಿಗಳನ್ನು ಸಾರಾಸಗಟಾಗಿ ಅಥವಾ ಕುರುಡಾಗಿ ಸ್ವೀಕರಿಸದೆ ಅವನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸುವುದು ನಮ್ಮ ನಡೆಯಾಗಬೇಕು. ತರುವಾಯ ಅವನ್ನು ಪ್ರಜ್ಞಾವಂತಿಕೆಯೆಂಬ ಕುಲುಮೆಯೊಳಗೆ ಹಾಯಿಸಿ ಪರಿಶುದ್ಧಗೊಳಿಸಬೇಕು ಹಾಗೂ ಪುಟಕ್ಕಿಟ್ಟ ಚಿನ್ನವಾಗಿಸಬೇಕು.
ಎಂಥದೇ ಸಂಕಷ್ಟ, ಸಂದಿಗ್ಧತೆ ಎದುರಾದರೂ ಆತ್ಮವಿಶ್ವಾಸದಿಂದ ಎದುರಿಸುವ ಎದೆಗಾರಿಕೆ ಆಗ ನಮ್ಮದಾಗುತ್ತದೆ. ಮುಖ್ಯವಾಗಿ ಸಮಸ್ಯೆ-ಸವಾಲುಗಳು ಎದುರಾದಾಗ ಕ್ಷಿಪ್ರವಾಗಿ ಮತ್ತು ಅತಿರೇಕವೆಂಬಂತೆ ಪ್ರತಿಕ್ರಿಯಿಸುವ ಪ್ರವೃತ್ತಿಯನ್ನು ಮೊದಲು ಕೈಬಿಡಬೇಕು. ನಮ್ಮ ಯಾವುದೇ ಮಾತು ಅಥವಾ ವರ್ತನೆಯ ಕಾರಣದಿಂದಾಗಿ ಮುಂದೆ ಒದಗಬಹುದಾದ ವ್ಯತಿರಿಕ್ತ ಪರಿಣಾಮಗಳ ಕುರಿತಾಗಿ ಇಲ್ಲಸಲ್ಲದ ಭಯಗಳನ್ನು ಸೃಜಿಸಿಕೊಳ್ಳುವುದಾಗಲೀ, ಆತಂಕಿತರಾಗುವುದಾಗಲೀ ತರವಲ್ಲ. ಆಸೆಯೆಂಬುದು ಮನುಷ್ಯನ ಸಹಜ ಗುಣ, ಆದರೆ ವ್ಯಾಮೋಹ ಎಂಬುದು ಚಟ. ಗೀಳಿನಿಂದ ಅಥವಾ ತೀವ್ರವಾದ ವ್ಯಾಮೋಹದಿಂದ ಬಿಡಿಸಿಕೊಳ್ಳದೆ ಹೋದರೆ ಅದು ನಮ್ಮ ಅಂತಃಶಕ್ತಿಯ ಅನಾವರಣಕ್ಕೂ ಕಲೆಗಾರಿಕೆಯ ಅಭಿವ್ಯಕ್ತಿಗೂ ತಡೆಗೋಡೆಯಾಗಿ ನಿಲ್ಲುವುದು ಕಟ್ಟಿಟ್ಟಬುತ್ತಿ.
ಆದ್ದರಿಂದ ಅತಿರೇಕದ ವ್ಯಾಮೋಹದಿಂದ ಮುಕ್ತರಾಗುವುದು ನಮ್ಮ ಆದ್ಯಕರ್ತವ್ಯವಾಗಬೇಕು. ಯಾವುದಾದರೊಂದು ವಿಷಯ ಮನದಾಳವನ್ನು ಹೊಕ್ಕಿ ತೆಂದರೆ ಸುಮ್ಮನಿರುವುದಿಲ್ಲ, ಗುಂಗೆಹುಳುವಿನಂತೆ ನಿರಂತರ ಕೊರೆಯುತ್ತಲೇ ಇರುತ್ತದೆ. ಇದು ಕ್ರಮೇಣ ಚಡಪಡಿಕೆಗೆ ಕಾರಣವಾಗುತ್ತದೆ. ಹೀಗೆ ನಿರ್ದಿಷ್ಟ ವಿಷಯದ ನೆಪದಲ್ಲಿ ಸದಾಕಾಲ ಚಡಪಡಿಸುವುದನ್ನು ತೊರೆದು ಶಾಂತಚಿತ್ತವನ್ನು ಕಾಯ್ದುಕೊಳ್ಳುವ ಪ್ರಯತ್ನ ನಮ್ಮದಾಗಬೇಕು. ಇದುನಮ್ಮೊಳಗಿನ ಚೈತನ್ಯದೊಂದಿಗೆ ನಮ್ಮನ್ನು ಸಮೀಕರಿಸುತ್ತದೆ. ಆಗ ನಮ್ಮ ಅಂತರಂಗದ ಪಿಸುದನಿಗೆ ಕಿವಿಗೊಡುವುದು ಸಾಧ್ಯವಾಗುತ್ತದೆ. ಇನ್ನೇನು ಪರಿಸ್ಥಿತಿ ಹದಗೆಡುತ್ತಿದೆ, ತಾಳ್ಮೆ ಯೆಂಬುದು ಕುಸಿದುಹೋಗುತ್ತಿದೆ ಎಂದಾದಾಗ, ನಮ್ಮ ಮನಸ್ಸನ್ನು ಬೇರೆ ಸಂಗತಿಗಳತ್ತ ತಿರುಗಿಸಿಬಿಡಬೇಕು ಹಾಗೂಒಂದಷ್ಟು ವಿಳಂಬನೀತಿಯನ್ನು ಅನುಸರಿಸಬೇಕು.
‘ತಾಳುವಿಕೆಗಿಂತ ಅನ್ಯ ತಪವಿಲ್ಲ’ ಎಂದಿದ್ದಾರೆ ದಾಸವರೇಣ್ಯರೊಬ್ಬರು. ‘ತಾಳ್ಮೆಯೆಂಬುದು ಅತ್ಯಂತ ಶ್ರೇಷ್ಠ ಪ್ರಾರ್ಥನೆ’ ಎಂಬ ಅನುಭವದ ಮತ್ತು ಅನುಭಾವದ ಮಾತು ಸತ್ಯವೇ ಆಗಿದೆ. ಅಂತೆಯೇ ಎಂಥದೇ ವಿಷಮ ಪರಿಸ್ಥಿತಿಯಲ್ಲೂ ನಾವು ತಾಳ್ಮೆಯಿಂದ ವರ್ತಿಸುವುದನ್ನು ಕಲಿತುಕೊಂಡರೆ ಸಾಕಷ್ಟು ಸಂಕಷ್ಟ ಗಳಿಂದ ಹೊರಬರಬಹುದಾಗಿದೆ, ಸಂಭಾವ್ಯ ಅಪಾಯ ಗಳನ್ನು ತಪ್ಪಿಸಬಹುದಾಗಿದೆ. ಮನಸ್ಸು ಚಂಚಲವಾದುದು, ಅದರ ಗುಣವೇ ಹಾಗೆ. ಆದರೆ ಇಂದ್ರಿಯಗಳ ಇಚ್ಛೆಗೆ ಮನಸ್ಸು ಅಧೀನವಾಗದಂತೆ ಎಚ್ಚರ ವಹಿಸಬೇಕು. ಹತ್ತು ಹಲವು ದಿಕ್ಕುಗಳ ಕಡೆಗೆ ಎಳೆಯುವ ಚಿತ್ತವೃತ್ತಿಗಳಿಗೆ ಒಂದಿಷ್ಟಾದರೂ ಕಡಿವಾಣ ಹಾಕಬೇಕು. ಒಂದು ಕ್ಷಣದ ಅಜಾಗರೂಕತೆ ನಮ್ಮ ಅದುವರೆಗಿನ ಸಾಧನೆಯನ್ನು ತಪಸ್ಸನ್ನು ನಿಷ್ಪ್ರಯೋಜಕಗೊಳಿಸಬಲ್ಲದು ಇಲ್ಲವೇ ನಿರ್ನಾಮ ಮಾಡಬಲ್ಲದು.
ಆದ್ದರಿಂದ, ಅನಗತ್ಯ ಭಾವಸಂಕೋಲೆಗಳ ಮಣಭಾರದಲ್ಲಿ ಬಂಧಿಯಾಗದೆ ಎಚ್ಚರವಾಗಿದ್ದುಕೊಂಡು ನಮ್ಮ ಬದುಕನ್ನು ಮುನ್ನಡೆಸಬೇಕು. ಈ ಅರಿವಿನ ಹಣತೆಯನ್ನು ಬೇರಾರೋ ಬಂದು ನಮ್ಮ ಮನದಲ್ಲಿ ಹಚ್ಚುವುದಿಲ್ಲ, ಇದು ನಮ್ಮೊಳಗೆ ನಾವೇ ಮಾಡಿಕೊಳ್ಳಬೇಕಾದ ಅರಿವಿನ ಯಜ್ಞ. ಇಂಥ ಅರಿವಿನ ಹಣತೆಯನ್ನು ನಿರಂತರ ಬೆಳಗಿಸುತ್ತಿದ್ದರೆ ಅಂತರಂಗವು ಉಜ್ವಲವಾಗಿ ಬೆಳಗುವುದರ ಜತೆಗೆ ಬದುಕೂ ಸುಂದರ ವಾಗುತ್ತದೆ. ಸಾರ್ಥಕತೆಯತ್ತ ಹೆಜ್ಜೆ ಹಾಕಲು ಅದೇ ಸಮರ್ಥವಾದ ಪಥವನ್ನು ರೂಪಿಸುತ್ತದೆ.
(ಲೇಖಕರು ಪ್ರೌಢಶಾಲಾ ಶಿಕ್ಷಕರು)