ನಿಮ್ಮ ವರ್ತನೆ ಘನತೆಗೆ ತಕ್ಕುದಾಗಿರಲಿ
ಅಭಿಮತ
ಬಿ.ಎಸ್.ಶಿವಣ್ಣ
ಎಚ್‌ಡಿಕೆ ಸಿಎಂ ಆಗಿದ್ದಾಗ ನಡೆದ ಪ್ರಮುಖ ಘಟನೆಗಳನ್ನು ನೆನಪಿಸಿದರೆ ಅವರು ಸಾರ್ವಜನಿಕವಾಗಿ ಕ್ಷಮೆಗೆ ಅನರ್ಹರಾಗಿ ಬಿಡುತ್ತಾರೆ. ನಿಮ್ಮ ಅವಧಿಯಲ್ಲಿ ನಡೆದ ಕೆಪಿಎಸ್ಸಿ ಹಗರಣದಲ್ಲಿ ನಿಮ್ಮ ಪಾತ್ರವಿಲ್ಲವೆ? ಸಿಐಡಿ ಡಿಜಿಪಿ ಶಂಕರ್ ಬಿದರಿ ಬಂಽಸಿದ್ದ ಲೋಕಸೇವಾ ಹಗರಣದ ಆರೋಪಿ ಎಚ್.ಎನ್.ಕೃಷ್ಣ ನಿಮ್ಮ ಅಂಕೆಗೆ ತಕ್ಕಂತೆ ಕುಣಿದವರಾಗಿರಲಿಲ್ಲವೇ?
ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿಯವರ ಗೋಸುಂಬೆ ಬುದ್ಧಿಮತ್ತೊಮ್ಮೆ ಬಟಾಬಯಲಾಗಿದೆ. ಆರು ಕೊಟ್ಟರೆ ಅತ್ತೆಯ ಕಡೆಗೆ ಮೂರು ಕೊಟ್ಟರೆ ಮಾವನ ಕಡೆಗೆ ಎಂಬುದು ಜಾತ್ಯತೀತ ಜನತಾ ದಳದ ಜೆನೆಟಿಕ್ ಪ್ರಾಬ್ಲೆಮ! ಅದಕ್ಕೆ ತಕ್ಕಂತೆ ಕುಮಾರಸ್ವಾಮಿಯವರು ಸಾಂದರ್ಭಿಕ ಶಿಶುವಾ ಬಿಡುತ್ತಾರೆ.
ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಲೇ ಕಳೆದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಮ್ಮ ಮನೆಯನ್ನು ದೀಪಾಲಂಕಾರ ಗೊಳಿಸಲು ಅನಧಿಕೃತವಾಗಿ ಕರೆಂಟ್ ಕದ್ದು ಸಿಕ್ಕಿಬಿದ್ದು ಸಾರ್ವಜನಿಕವಾಗಿ ತಮ್ಮ ವ್ಯಕ್ತಿತ್ವ ಹರಾಜು ಹಾಕಿಕೊಂಡ ಬಳಿಕವಂತೂ ಅವರ ಮಾನಸಿಕ ಸ್ಥಿಮಿತ ಕಳೆದು ಹೋಗಿದ್ದು, ಈಗ ದಿನಕ್ಕೊಂದು ವೇಷ ಹಾಗೂ ಆರೋಪದಲ್ಲಿ ಸಮಯ ಕಳೆಯಲಾರಂಭಿಸಿದ್ದಾರೆ. ಸಮಯ ಬಂದರೆ ದತ್ತಮಾಲೆ ಧರಿಸುತ್ತೇನೆ ಅದರಲ್ಲಿ ತಪ್ಪೇನು? ಎಂದು ಮಾಧ್ಯಮ ಪ್ರತಿನಿಧಿಗಳನ್ನೇ ಪ್ರಶ್ನಿಸುವ ಮೂಲಕ ತಾವು ಇಷ್ಟರವರೆಗೆ ನಾಟಕಕ್ಕೆ ಬಳಸುತ್ತಿದ್ದ ಜಾತ್ಯತೀತ ತತ್ವವನ್ನೇ ಈಗ ಬೀದಿ ಬದಿಯಲ್ಲಿ ಮಾರಾಟಕ್ಕೆ ಇಟ್ಟಿದ್ದಾರೆ.
ಲೋಕಸಭಾ ಚುನಾವಣೆ ದೃಷ್ಟಿಯಿಂದ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡ ಬಳಿಕ ವಂತೂ ಕುಮಾರಸ್ವಾಮಿಯವರ ಒಟ್ಟಾರೆ ವರಸೆ ಬದಲಾಗಿದೆ. ಅವರಿಗೆ ರಾಜ್ಯಕ್ಕಿಂತಲೂ ಹೆಚ್ಚಾಗಿ ದಿಲ್ಲಿಯ ಕೇಸರಿ ನಾಯಕರನ್ನು ಮೆಚ್ಚಿಸುವ ಉತ್ಸಾಹ ಹೆಚ್ಚಾಗಿದೆ. ಈ ಕಾರಣಕ್ಕಾಗಿ ರಾಜ್ಯ ಸರಕಾರದ ವಿರುದ್ಧ ದಿನಕ್ಕೊಂದು ಸುಳ್ಳು ಆರೋಪವನ್ನು ನಡೆಸುತ್ತಿದ್ದು ಪುಸ್ ಪಟಾಕಿ ವೀರನಿಗೆ ಅನ್ಯರ ಮಾನಹಾನಿ ಮಾಡುವುದೇ ನಿತ್ಯದ ಕೆಲಸವಾಗಿಬಿಟ್ಟಿದೆ.
ಅಷ್ಟಕ್ಕೂ ತಮ್ಮ ಇಷ್ಟು ವರ್ಷದ ರಾಜಕಾರಣದಲ್ಲಿ ಕುಮಾರಸ್ವಾಮಿ ಮಾಡಿದ ಆರೋಪಗಳ ಪೈಕಿ ಯಾವುದನ್ನೂ ಇದುವರೆಗೆ ಸಾಬೀತು ಮಾಡುವು ದಕ್ಕೆ ಸಾಧ್ಯವಾಗಿಲ್ಲ. ಅವರೊಬ್ಬ ಹಿಟ್ ಆಂಡ್ ರನ್ ರಾಜಕಾರಣಿ ಎನ್ನುವುದಕ್ಕೆ ನೂರು ದೃಷ್ಟಾಂತಗಳನ್ನು ನೀಡಬಹುದಾಗಿದೆ. ಅವರ ಕಾಮಾಲೆ ಕಣ್ಣಿಗೆ ಕಂಡಿದ್ದೆಲ್ಲವೂ ಲಂಚದ ವ್ಯವಹಾರವೇ ಆಗಿಬಿಟ್ಟಿದೆ. ಸರಕಾರ ಬಂದ ಆರಂಭದಲ್ಲಿ ಪೆನ್‌ಡ್ರೈವ್ ನಾಟಕ ಹೆಣೆದ ಅವರು ಆ ಬಳಿಕ ಸಿದ್ದರಾ ಮಯ್ಯ ಅವರ ವಿರುದ್ಧ ೨ ಕೋಟಿ ರು. ಸೋಫಾ ಸೆಟ್ ಖರೀದಿ ಮಾಡಿದರು, ಎಂಬ ಈ ಎರಡೂ ಆರೋಪಗಳನ್ನು ಸಾಬೀತು ಮಾಡಲು ಹೆಣಗುತ್ತಿರು ವಾಗಲೇ ಸಿದ್ದರಾಮಯ್ಯ ಹಾಗೂ ಅವರ ಪುತ್ರನ ವಿರುದ್ಧ ವರ್ಗಾವಣೆ ಆರೋಪ ಮಾಡಿದ್ದಾರೆ.
ಯಾವುದೋ ಮಾತುಗಳನ್ನು ಇನ್ಯಾವುದಕ್ಕೋ ಲಿಂಕ್ ಮಾಡಿ ಸಿನಿಮಾ ನಿರ್ಮಾಣ ಮಾಡುವುದು ಕುಮಾರಸ್ವಾಮಿಯವರ ಹಳೆ ಕಸುಬು, ಈಗ ಮಾಡು ತ್ತಿರುವುದೂ ಅದನ್ನೇ. ತಾನು ಕಳ್ಳ ಪರರ ನಂಬ ಎಂಬ ಸ್ಥಿತಿಯಲ್ಲಿರುವ ಅವರು ದಿನಕ್ಕೊಂದು ಬಣ್ಣಬಣ್ಣದ ಟ್ವೀಟ್ ಮಾಡಿಕೊಂಡು ರಾಜ್ಯದ ಜನರಲ್ಲಿ ಒಂದು ಜನಪರ ಸರಕಾರದ ವಿರುದ್ಧ ಸಂಶಯದ ಬೀಜ ಮೊಳಕೆ ಒಡೆಯುವಂತೆ ಮಾಡುವ ವಿಫಲ ಪ್ರಯತ್ನ ನಡೆಸುತ್ತಿದ್ದಾರೆ. ಇದು ನೀಚ ರಾಜಕಾರಣದ ಪರಮಾವಧಿ ಎನ್ನದೇ ಬೇರೆ ದಾರಿ ಇಲ್ಲ.
ಅಷ್ಟಕ್ಕೂ ಡಾ.ಯತೀಂದ್ರ ಅವರ ಜತೆಗೆ ತಾವು ನಡೆಸಿದ ಸಂಭಾಷಣೆ ಯಾವುದರ ಬಗ್ಗೆ ಎಂಬ ಸತ್ಯವನ್ನು ಸಿಎಂ ಸಿದ್ದರಾಮಯ್ಯ ಈಗಾಗಲೇಸ್ಪಷ್ಟಪಡಿಸಿದ್ದಾರೆ. ಆದಾದ ನಂತರವೂ ಕುಮಾರಸ್ವಾಮಿ ನಾಲಗೆ ಹರಿಬಿಡುವುದು ನಿಲ್ಲುತ್ತಿಲ್ಲ. ಫೋನ್ ಸಂಭಾಷಣೆಯಲ್ಲಿ ಡಾ.ಯತೀಂದ್ರ ಪ್ರಸ್ತಾಪಿಸಿದ ವಿವೇಕಾನಂದರವರು ವರುಣಾ ವಿಧಾನಸಭಾ ಕ್ಷೇತ್ರದ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ. ವರುಣಾರ ಸೇರಿದ ಹಾರೋಹಳ್ಳಿ, ಕೀಳನಸುರ, ದೇವಲಾಪುರಗ್ರಾಮ ಪಂಚಾಯಿತಿ ವ್ಯಾಪ್ತಿಯ ಇದು ಸರಕಾರಿ ಶಾಲೆಗಳ ಕೊಠಡಿ ರಿಪೇರಿ ಪಟ್ಟಿಯನ್ನು ಬಿಇಒ ಅವರೇ ನನ್ನ ಕಚೇರಿಗೆ ತಲುಪಿಸಿದ್ದರು. ಇದರ ಬಗ್ಗೆ ಸಿದ್ದರಾಮಯ್ಯ ಯತಿಂದ್ರ ಅವರ ಜತಗೆ ಚರ್ಚೆ ನಡೆಸಿzರೆ. ಕುಮಾರಸ್ವಾಮಿ ಮಾಡಿದ ವರ್ಗಾವಣೆ ಆರೋಪವನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆಂದು ಸವಾಲು ಹಾಕಿದ ಬಳಿಕ ಕುಮಾರಸ್ವಾಮಿಯವರ ನಂಜಿನ ಆರೋಪಗಳು ಮಾತ್ರ ನಿಂತಿಲ್ಲ.
ಇದಕ್ಕೆ ಕಾರಣ ಅವರಲ್ಲಿ ಅಂತಸ್ಥವಾಗಿರುವ ಅಸೂಯೆ. ಈ ಪ್ರಪಂಚದಲ್ಲಿ ಕಾಡ್ಗಿಚ್ಚನ್ನಾದರೂ ನಿಯಂತ್ರಿಸಬಹುದು. ಆದರೆ ಹೊಟ್ಟೆಯ ಕಿಚ್ಚನ್ನು ಆರಿಸುವುದಕ್ಕೆ ಸಾಧ್ಯವಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಿಂಗ್ ಮೇಕರ್ ಆಗಿ ಮತ್ತೆ ಅಧಿಕಾರ ಅನುಭವಿಸುವ ಕನಸು ಕಾಣುತ್ತಿದ್ದ ಅವರಿಗೆ ರಾಜ್ಯದ ಜನ ನೀಡಿದ ಮರ್ಮಾಘಾತ ಇನ್ನೂ ಮರೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ಹಿಂದೆ ಸಿದ್ದರಾಮಯ್ಯ ಸರಕಾರ ಆರು ತಿಂಗಳಲ್ಲಿ ಬಿದ್ದು ಹೋಗುತ್ತದೆ ಎಂದು ಹೇಳಿಕೆ ನೀಡಿ ರಾಜಕೀಯವಾಗಿ ನಗೆಪಾಟಲಿಗೆ ಗುರಿಯಾಗಿದ್ದ ಅವರಿಗೆ ಸರಕಾರ ಅನನ್ಯ ಸಾಧನೆಯೊಂದಿಗೆ ಆರು ತಿಂಗಳು ಪೂರ್ಣಗೊಳಿಸುವುದನ್ನು ತಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ.
ಸರಕಾರದ ಪತನದ ಬಗ್ಗೆ ಕನಸು ಕಾಣಬೇಡಿ, ಅದೇನು ನಿಮ್ಮ ಬಿಡದಿಯ ತೆಂಗಿನ ತೋಟದಲ್ಲಿ ನೆಟ್ಟು ಬೆಳೆಸಿದ ತೆಂಗಿನಮರದ ಎಳನೀರಲ್ಲ ಎಂದಿ ದ್ದನ್ನು ಅವರಿಗೆ ಮತ್ತೊಮ್ಮೆ ನೆನಪಿಸಬೇಕಾಗಿದೆ. ಅಷ್ಟಕ್ಕೂ ಕುಮಾರಸ್ವಾಮಿಯವರಾಗಲಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಾಗಲಿ ಒಮ್ಮೆಯೂ ಸಂಪೂರ್ಣ ಜನಾದೇಶದ ಆಧಾರದ ಮೇಲೆ ಅಽಕಾರವನ್ನು ಅನುಭವಿಸಿದವರೇ ಅಲ್ಲ. ಕುಮಾರಸ್ವಾಮಿಯವರು ಎರಡು ಬಾರಿ ಮುಖ್ಯಮಂತ್ರಿ ಯಾಗಿದ್ದೂ ಕೂಡುಕುಟುಂಬದ ಫಲವಾಗಿದ್ದು, ಒಮ್ಮೆ ಬಿಜೆಪಿ, ಇನ್ನೊಮ್ಮೆ ಕಾಂಗ್ರೆಸ್ ಜತೆ ಸೇರಿ ಅವರು ಸರಕಾರ ರಚಿಸಿದಾಗ ಜೆಡಿಎಸ್ ಗಳಿಸಿದ್ದ ಶಾಸಕರ ಸಂಖ್ಯೆ ಎಷ್ಟು? ಎಂಬುದನ್ನು ಅವರೇ ನೆನಪು ಮಾಡಿ ಕೊಳ್ಳುವುದು ಉತ್ತಮ. ಅಲ್ಪಮತದಲ್ಲಿ ಲಾಟರಿ ಸಿಎಂ ಆದ ಕುಮಾರಸ್ವಾಮಿ ಅಧಿಕಾರದಲ್ಲಿ ಇದನ್ನು ದಿನವೂ ತನ್ನ ಸರಕಾರ ಪತನವಾಗುತ್ತದೆ ಎಂಬ ಭೀತಿ ಸದಾ ಕಾಡುತ್ತಿತ್ತು. ಆದರೆ ಸಿದ್ದರಾಮಯ್ಯನವರು ಎರಡು ಬಾರಿ ಈರಾಜ್ಯದ ಮುಖ್ಯಮಂತ್ರಿಯಾಗಿದ್ದೂ ಅತಿ ಪ್ರಬಲ ಜನಾದೇಶದೊಂದಿಗೆ ಎಂಬದನ್ನು ಕುಮಾರಸ್ವಾಮಿ ಮರೆಯಕೂಡದು.
೨೦೧೪ರಲ್ಲಿ ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿ ಯಾದಾಗ ಕಾಂಗ್ರೆಸ್ ಗಳಿಸಿದ ಸಂಖ್ಯಾಬಲ ೧೨೦ಕ್ಕೂ ಅಧಿಕ. ಈ ಬಾರಿಯಂತೂ ೧೩೫ಶಾಸಕ ಬಲದ ಪ್ರಚಂಡ ಬಹುಮತ ಕುಮಾರ ಸ್ವಾಮಿಯವರಾಗಲಿ, ದೇವೇಗೌಡರಾಗಲಿ ಎಂದೂ ಕಾಣದ ಸಂಪೂರ್ಣ ಜನಾದೇಶವನ್ನು ಸಿದ್ದರಾಮಯ್ಯ ಅವರು ಎರಡು ಬಾರಿ ಪಡೆದು ಮುಖ್ಯಮಂತ್ರಿಯಾಗಿದ್ದಾರೆ. ತಮ್ಮ ಕುಟುಂಬಕ್ಕೆ ಒಮ್ಮೆಯೂ ಮಾಡಲಾಗದ ರಾಜಕೀಯ ಸಾಧನೆ ಯನ್ನು ಸಿದ್ದರಾ ಮಯ್ಯ ಎರಡು ಬಾರಿ ಮಾಡಿ ರುವಾಗ ಅದನ್ನು ಸಹಿಸಿಕೊಳ್ಳಲು ಸಾಂದರ್ಭಿಕ ಶಿಶುವಿಗೆ ಸಾಧ್ಯವೆ? ಅಷ್ಟಕ್ಕೂ ಕುಮಾರಸ್ವಾಮಿ ಸಿಎಂ ಆಗಿದ್ದಾಗನಡೆದ ಪ್ರಮುಖ ಘಟನೆಗಳನ್ನು ನೆನಪಿಸಿದರೆ ಅವರು ಸಾರ್ವಜನಿಕವಾಗಿ ಕ್ಷಮೆಗೆ ಅನರ್ಹರಾಗಿ ಬಿಡುತ್ತಾರೆ.
ನಿಮ್ಮ ಅವಧಿಯಲ್ಲಿ ನಡೆದ ಕೆಪಿಎಸ್ಸಿ ಹಗರಣದಲ್ಲಿ ನಿಮ್ಮ ಪಾತ್ರವಿಲ್ಲವೆ? ಸಿಐಡಿ ಡಿಜಿಪಿ ಶಂಕರ್ ಬಿದರಿ ಬಂಧಿಸಿದ್ದ ಲೋಕಸೇವಾ ಹಗರಣದ ಆರೋಪಿ ಎಚ್.ಎನ್.ಕೃಷ್ಣ ನಿಮ್ಮ ಅಂಕೆಗೆ ತಕ್ಕಂತೆ ಕುಣಿದವರಾಗಿರಲಿಲ್ಲವೇ? ಐಎಂಎ ಪ್ರಕರಣದಲ್ಲಿ ನೀವು ಕೇಂದ್ರ ತನಿಖಾ ಸಂಸ್ಥೆಗಳ ಅನುಮಾನದ ವ್ಯಾಪ್ತಿಯಲ್ಲಿ ಇರುವುದು ಸುಳ್ಳೇ? ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ನೀವು ಹಾಗೂ ನಿಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಬೇಲ್ ಪಡೆದುಕೊಂಡಿದ್ದೇಕೆ?ನೀವು ಅಷ್ಟೊಂದು ಸಾಚಾ ವ್ಯಕ್ತಿತ್ವದವರಾಗಿದ್ದರೆ ಅಕ್ರಮ ಗಣಿಗಾರಿಕೆಗೆ ಸಂಬಂಧಪಟ್ಟ ಎಸ್‌ಐಟಿ ಐಜಿಯಾಗಿದ್ದ ಚರಣ್ ರೆಡ್ಡಿ ನಿಮ್ಮನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಸುಳ್ಳೇ? ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಲೋಕಾಯುಕ್ತ ದಾಳಿಯಿಂದ ತಪ್ಪಿಸಿಕೊಳ್ಳಲು ಆಪ್ತರ ಮನೆಯಕಾಂಪೌಂಡ್ ಹಾಕಿ ಓಡಿ ಹೋಗಲಿಲ್ಲವೇ? ಇಷ್ಟೆಲ್ಲ ತಪ್ಪುಗಳನ್ನು ನಿಮ್ಮಲ್ಲಿಟ್ಟುಕೊಂಡು ಅನ್ಯರ ಬಗ್ಗೆ ಆರೋಪಿಸಿ ಸಾಚಾ ಆಗಲು ಹೊರಟರೆ ಜನನಂಬುತ್ತಾರೆಯೇ? ಕುಮಾರಸ್ವಾಮಿಯವರೇ ನೀವು ನಿಮ್ಮ ಅಸ್ತಿತ್ವ ಕಾಪಾಡಿಕೊಳ್ಳುವುದಕ್ಕಾಗಿ ಈಗ ಬಿಜೆಪಿ ಜತೆ ಕೈಜೋಡಿಸಿರಬಹುದು. ಆದರೆ ಹಿಂದೆ ಇದೇ ಬಿಜೆಪಿಗೆ ಮಾಡಿದ ದ್ರೋಹವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮರೆಯುವುದಕ್ಕೆ ಸಾಧ್ಯವಿಲ್ಲ.
ನಿಮ್ಮ ರಾಜಕೀಯ ಛದ್ಮವೇಶಕ್ಕೆ ಪಕ್ಷದ ಅಧ್ಯಕ್ಷರಾಗಿದ್ದ ಸಿ.ಎಂ.ಇಬ್ರಾಹಿಂ ಅವರನ್ನೇ ಬಲಿ ಹಾಕಿದ್ದೀರಿ. ೧೯ ಮಂದಿ ಶಾಸಕರು ನಿಮ್ಮ ಜತೆಗಿದ್ದಾರೆ ಎಂಬುದು ದೊಡ್ಡ ಭ್ರಮೆ. ಇಷ್ಟಾಗಿಯೂ ಕಾಂಗ್ರೆಸ್ ಸರಕಾರವನ್ನು ಕೆಡವುವ ಕನಸು ಕಾಣುತ್ತಾ ಸಿದ್ದರಾಮಯ್ಯ ಅವರ ವಿರುದ್ಧ ದಿನಕ್ಕೊಂದು ಸುಳ್ಳು ಆರೋಪ ಮಾಡುತ್ತಿದ್ದರೆ ಜನ ನಿಮ್ಮ ಬಗ್ಗೆಯೇ ಅಸಹ್ಯ ಪಡುತ್ತಾರಷ್ಟೇ.