ನೆಲ ಡೊಂಕು ಎನ್ನಲು ಪೂರ್ವತಯಾರಿಯೇ ?
ಭಾಸ್ಕರಾಯಣ
ಎಂ.ಕೆ.ಭಾಸ್ಕರ ರಾವ್
ಇವಿಎಂಗಳ ದುರುಪಯೋಗದ ಸಾಧ್ಯತೆಯನ್ನು ನಿಯಂತ್ರಿಸದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ೪೦೦ ಸ್ಥಾನ ದಾಟುವುದು ಖಚಿತ ಎಂದಿದ್ದಾರೆ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ. ಕಾಂಗ್ರೆಸ್ ವಿಧಾನಸಭಾ ಚುನಾವಣೆ ಗೆದ್ದ ರಾಜ್ಯಗಳಲ್ಲೂ ಇಂಥ ದುರುಪಯೋಗ ಆಗಿದೆಯೇ?
ಕೆಲವೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯನ್ನು ಭಾರಿ ಬಹುಮತದೊಂದಿಗೆ ಗೆಲ್ಲಲು ತಯಾರಿ ನಡೆಸಿರುವ ಆಡಳಿತಾರೂಢ ಎನ್‌ಡಿಎ/ಬಿಜೆಪಿ ಒಕ್ಕೂಟ ಈ ಗೆಲುವಿಗಾಗಿ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯನ್ನು ಅಂತಾ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಊಹಿಸಿದ್ದಾರೆ. ಹೊಸ ದಾಗಿ ಅಸ್ತಿತ್ವಕ್ಕೆ ಬಂದಿರುವ, ಬಹುತೇಕ ಬಿಜೆಪಿ ಯೇತರ ವಿರೋಧ ಪಕ್ಷ ಗಳುಳ್ಳ ‘ಇಂಡಿಯ’ ಒಕ್ಕೂಟವು ಇದರ ವಿರುದ್ಧ ಜಾಗ್ರತೆವಹಿಸದಿ ದ್ದರೆ ಭಾರತೀಯ ಜನತಾ ಪಾರ್ಟಿಯ ನೇತಾ ರರು ನಿರೀಕ್ಷಿಸುತ್ತಿರುವ ೪೦೦ ಸೀಟು ಗೆಲ್ಲುವ ಆಸೆ ನಿಜವಾದರೆ ಅಚ್ಚರಿಯೇನೂ ಇಲ್ಲ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್‌ನ ಇನ್ನೊಬ್ಬ ಹಿರಿಯ ಮುಖಂಡ ದಿಗ್ವಿಜಯ ಸಿಂಗ್, ಇವಿಎಂ ಬಳಕೆ ವಿರುದ್ಧ ವರ್ಷಗಳಿಂದ ತಾವು ವ್ಯಕ್ತಪಡಿಸುತ್ತ ಬಂದಿರುವ ಅನುಮಾನನಿಜವಾಗುವ ಸಾಧ್ಯತೆಯನ್ನು ಪುನರುಚ್ಚರಿಸಿದ್ದಾರೆ. ಎಐಸಿಸಿ ಅಧ್ಯಕ್ಷರಾಗುವುದಕ್ಕೆ ಪೂರ್ವದಲ್ಲಿ ಮಲ್ಲಿಕಾರ್ಜುನ ಖರ್ಗೆಯವರೂ ಇವಿಎಂ ದುರ್ಬಳಕೆ ಯಾಗುತ್ತಿದೆ, ಹಾಗೆಂದೇ ಕಾಂಗ್ರೆಸ್ ಸೋಲುತ್ತಿದೆ ಎಂಬ ಆತಂಕ ವ್ಯಕ್ತಪಡಿ ಸಿದ್ದರು. ಎಐಸಿಸಿ ಅಧ್ಯಕ್ಷರಾದ ತರುವಾಯದಲ್ಲಿ ಕೆಲವು ರಾಜ್ಯಗಳನ್ನುಅವರ ಪಕ್ಷ ಗೆದ್ದ ಬಳಿಕ ಈ ಬಗೆಯ ಆತಂಕವನ್ನು ಅವರು ವ್ಯಕ್ತಪಡಿಸಿದ್ದು ವರದಿಯಾಗಿಲ್ಲ.
ಇವಿಎಂ ಬಳಸಿಯೇ ನಡೆದ ಚುನಾವಣೆಗಳಲ್ಲಿ ಕೆಲವು ರಾಜ್ಯಗಳನ್ನು ಗೆದ್ದ ‘ಇಂಡಿಯ’ ಒಕ್ಕೂಟದ ಸದಸ್ಯ ಪಕ್ಷಗಳು ಕಾಂಗ್ರೆಸ್ ನಾಯಕರ ಅನುಮಾನಕ್ಕೆ ಬೆಂಬಲ ಸೂಚಿಸಿಲ್ಲ ಎನ್ನುವುದು ಗಮನಿಸಬೇಕಾಗಿರುವ ಬೆಳವಣಿಗೆ. ಎನ್‌ಡಿಎ ವಿರುದ್ಧ ಹೋರಾಟಕ್ಕೆ ಅಣಿಯಾಗುತ್ತಿರುವ ಸಂದರ್ಭ ಸನ್ನಿವೇಶದಲ್ಲಿ‘ಇಂಡಿಯ’ ಒಕ್ಕೂಟದ ಸದಸ್ಯ ಪಕ್ಷಗಳಲ್ಲಿ ‘ಎತ್ತು ಏರಿಗೆ, ಕೋಣ ನೀರಿಗೆ’ ನೀತಿ ಮೇಲುಗೈ ಪಡೆದಿರುವುದು ವಿಪರ್ಯಾಸ.
೨೦೧೪ ಮತ್ತು ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಅದರ ನೇತೃತ್ವದ ಯುಪಿಎ ಹೀನಾಯವಾಗಿ ಸೋತ ಬಳಿಕ, ಬಿಜೆಪಿ ನೇತೃತ್ವದ ಎನ್‌ಡಿಎ ಅಚ್ಚರಿಯ ಗೆಲುವನ್ನು ಪಡೆದ ನಂತರ, ಇವಿಎಂ ದುರ್ಬಳಕೆ ಆಗುತ್ತಿದೆಯೆಂಬ ಅನುಮಾನ ಕೆಲವು ಕಾಂಗ್ರೆಸ್ ನಾಯಕರದು. ದುರ್ಬಳಕೆ ಆಗುತ್ತಿರುವ ವಿಚಾರ ದಲ್ಲಿ ಪಕ್ಷವಾಗಿ ಕಾಂಗ್ರೆಸ್ಸು ತನ್ನ ನಿಲುವನ್ನು ದಾಖಲಿಸಿಲ್ಲ, ಕೆಲವು ನಾಯಕರು ಮಾತ್ರವೇ ಈ ಆರೋಪ ಮಾಡು ತ್ತಿರುವುದನ್ನು ಮಾತ್ರ ನಿಲ್ಲಿಸಿಲ್ಲ. ಇದೀಗ ಈ ಸಾಲಿಗೆ ಅಂತಾರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರು ತಮ್ಮ ಧ್ವನಿ ಬಲವನ್ನು ನೀಡಿದ್ದಾರೆ. ಅವರ ಹೇಳಿಕೆಗೆ ಸಹಜ ಮಹತ್ವವೂ ಇದ್ದು ಚುನಾವಣಾ ಆಯೋಗ ಈ ಆರೋಪದ ವಿಚಾರದಲ್ಲಿ ವ್ಯಕ್ತಪಡಿಸುವ ಪ್ರತಿಕ್ರಿಯೆ ಕುತೂಹಲ ಕೆರಳಿಸಿದೆ.
ಈಗಾಗಲೇ ಸುಪ್ರೀಂ ಕೋಟ್ ನಲ್ಲಿ ಇತ್ಯರ್ಥವಾಗಿರುವ ವಿಚಾರದಲ್ಲಿ ಕೇಳಿ ಬರುತ್ತಿರುವ ವ್ಯಕ್ತಿಗತ ಅನುಮಾನ ಆಧರಿತ ಆರೋಪಗಳಿಗೆ ಪ್ರತಿಕ್ರಿಯಿಸ ಬೇಕಾದ ಜರೂರತು ಇಲ್ಲ ಎಂಬ ನಿಲುವಿಗೆ ಚುನಾವಣಾ ಆಯೋಗ ಬಂದಲ್ಲಿ  ಮುಂದೆ ಮಾತಿಲ್ಲ. ಆರೋಪದ ಪಾಡಿಗೆ ಆರೋಪ ಕೇಳಿ ಬರುತ್ತದೆ, ಆಯೋಗದ ಕೆಲಸ ಅದರ ಪಾಡಿಗೆ ನಡೆಯುತ್ತಿರುತ್ತದೆ ಎಂದು ಭಾವಿಸಲು ಯಾರ ಅಡ್ಡಿಯೂ ಇಲ್ಲ. ಸ್ಯಾಮ್ ಪಿತ್ರೋಡಾ ಅಥವಾ ದಿಗ್ವಿಜಯ ಸಿಂಗ್(ದಿಗ್ಗಿ ಮಹಾರಾಜ) ಮಾಡುತ್ತಿರುವ ಆರೋಪ ಕೇವಲ ಅನುಮಾನ ಆಧರಿಸಿದ್ದೇ ಅಥವಾ ಸೂಕ್ತ ಸಾಕ್ಷ್ಯಾಧಾರ ಆಧರಿಸಿದ್ದೇ? ಅವರಿಬ್ಬರೂ ಏನನ್ನು ಹೇಳಿದರೂ ಕಾಂಗ್ರೆಸ್ ಪಕ್ಷ ಇವಿಎಂಗಳನ್ನು ಚುನಾವಣೆ ಪ್ರಕ್ರಿಯೆಯಿಂದ ದೂರ ಇಡಬೇಕಾದ ಅಗತ್ಯ ಕುರಿತಂತೆ ಏನನ್ನೂ ಹೇಳುತ್ತಿಲ್ಲವೇಕೆ? ಈ ಅನುಮಾನ ಕಾಡುವುದಕ್ಕೆ ಕಾರಣವಿದೆ. ಪಂಜಾಬ್‌ನಲ್ಲಿ ಈಗ ಆಮ್ ಆದ್ಮಿ ಪಕ್ಷದ ಸರಕಾರವಿದೆ.
ಅದಕ್ಕೂ ಪೂರ್ವದಲ್ಲಿ ಅಲ್ಲಿದ್ದುದು ಕಾಂಗ್ರೆಸ್ ಸರಕಾರ. ಅದು ಚುನಾವಣೆ ಗೆದ್ದಾಗ ಬಳಕೆಯಾಗಿದ್ದು ಇವಿಎಂ. ಸ್ಯಾಮ್ ಅಥವಾ ದಿಗ್ಗಿ ಮಹಾರಾಜರ ಪ್ರಕಾರ ಆಗ ಇವಿಎಂ ದುರುಪಯೋಗ ಆಗಲಿಲ್ಲ. ರಾಜಸ್ತಾನದಲ್ಲಿ ಐದೂವರೆ ವರ್ಷದ ಹಿಂದೆ ಕಾಂಗ್ರೆಸ್ ಗೆದ್ದಾಗಲೂ ಅಷ್ಟೆ. ಕಾಂಗ್ರೆಸ್ ಮುಖಂಡರಪ್ರಕಾರ ಇವಿಎಂ ದುರ್ಬಳಕೆ ಆಗಲಿಲ್ಲ. ಖರ್ಗೆಯವರು ಎಐಸಿಸಿ ಅಧ್ಯಕ್ಷರಾದ ನಂತರ ಹಿಮಾಚಲ ಪ್ರದೇಶ ವಿಧಾನಸಭೆ ಕಾಂಗ್ರೆಸ್ ಕೈವಶವಾಯಿತು. ಆಗ ಅಲ್ಲಿ ಬಳಕೆಯಾಗಿದ್ದು ಇವಿಎಂ. ಆದರೆ ಕಾಂಗ್ರೆಸ್ ನಾಯಕರ ಪ್ರಕಾರ ಅಲ್ಲಿ ಆ ಮತಯಂತ್ರಗಳ ದುರ್ಬಳಕೆ ಆಗಲಿಲ್ಲ. ಕಳೆದ ವರ್ಷದ ಮೇ ತಿಂಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆದಾಗ ಇವಿಎಂ ಬಳಕೆಯಾಯಿತು.
ಕಾಂಗ್ರೆಸ್ ಪಕ್ಷ ೧೩೫ ಸೀಟು ಗೆದ್ದು ಅಽಕಾರ ಹಿಡಿಯಿತು. ಆಗ ಇವಿಎಂ ದುರ್ಬಳಕೆ ಆಗಲಿಲ್ಲ. ತೀರಾ ಇತ್ತೀಚೆಗೆ ತೆಲಂಗಾಣ ವಿಧಾನಸಭಾ ಚುನಾವಣೆ ನಡೆದು, ಆ ರಾಜ್ಯ ಅಸ್ತಿತ್ವಕ್ಕೆ ಬಂದ ಹತ್ತು ವರ್ಷದ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಭರ್ಜರಿ ಬಹುಮತದ ಸಹಿತ ಜಯ ಸಾಧಿಸಿತು. ಇವಿಎಂ ದುರುಪಯೋಗ ಆಯಿತೇ? ಕಾಂಗ್ರೆಸ್‌ನ ಕೆಲವರು ಅನುಮಾನಿಸಿದಂತೆ ಆಗಲಿಲ್ಲ.
‘ಇಂಡಿಯ’ ಒಕ್ಕೂಟದ ಸದಸ್ಯ ಪಕ್ಷಗಳು ಆಡಳಿತ ನಡೆಸಿರುವ ವಿವಿಧ ರಾಜ್ಯ ವಿಧಾನಸಭಾ ಚುನಾವಣೆಯತ್ತ ಈಗ ನೋಟ ಹರಿಸೋಣ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸತತ ಮೂರನೇ ಅವಧಿಗೆ ವಿಧಾನಸಭೆ ಚುನಾವಣೆ ಗೆದ್ದುದು ಇವಿಎಂ ಬಳಕೆ ಯಾಗುತ್ತಿರುವಾಗಲೇ. ಪ್ರತಿಯೊಂದರಲ್ಲೂ ಬಿಜೆಪಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಪ್ರತಿಭಟಿಸುವ ಮಮತಾ ಬ್ಯಾನರ್ಜಿ ಇವಿಎಂ ಬಳಕೆ ವಿಚಾರದಲ್ಲಿ ದೂರು ದುಮ್ಮಾನ ದಾಖಲಿಸಿಲ್ಲ.
ಅವರು ಖುಷಿಯಲ್ಲಿದ್ದಾರೆಂದೇ ಇದರ ಅರ್ಥ. ತಮಿಳುನಾಡಿನಲ್ಲಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಸರಕಾರ ಚುನಾವಣೆಯನ್ನು ಮೂರನೇ ಎರಡುಬಹುಮತದಲ್ಲಿ ಗೆದ್ದದು ಇವಿಎಂ ಬಳಸಿ ಮತದಾನ ನಡೆದಾಗಲೇ. ಅವರು ಯಾವತ್ತೂ ಇವಿಎಂ ದುರ್ಬಳಕೆಯಾಗಿದೆ ಎಂಬ ಆಕ್ಷೇಪ ವ್ಯಕ್ತಪಡಿಸಿದ್ದುವರದಿ ಆಗಿಲ್ಲ. ಪಂಜಾಬ್ ಮತ್ತು ದೆಹಲಿ ವಿಧಾನಸಭೆಯಲ್ಲಿ ಬಹುಮತದ ಸರಕಾರ ನಡೆಸಿರುವ ಆಮ್ ಆದ್ಮಿ ಪಕ್ಷದ ನೇತಾರ ಅರವಿಂದ ಕೇಜ್ರಿವಾಲರುಇವಿಎಂ ದುರ್ಬಳಕೆಯಾಗಿದೆ ಎನ್ನಲು ತಯಾರಿಲ್ಲ. ಬಿಹಾರದಲ್ಲಿ ಜೆಡಿಯು-ಆರ್‌ಜೆಡಿ ಸಮ್ಮಿಶ್ರ ಸರಕಾರ ನಿತೀಶ್ ಕುಮಾರ್ ನೇತೃತ್ವದಲ್ಲಿ ಆಡಳಿತ ನಡೆಸಿದೆ.
ತಮ್ಮ ಪಕ್ಷಗಳು ಅಧಿಕಾರಕ್ಕೆ ಬಂದಿರುವ ಕಾರಣವೋ ಎಂಬಂತೆ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಇಲ್ಲವೇ ಆರ್ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಇವಿಎಂ ದುರ್ಬಳಕೆ ಆಗಿದೆ ಎನ್ನುತ್ತಿಲ್ಲ. ‘ಇಂಡಿಯ’ ಒಕ್ಕೂಟದ ಪ್ರಧಾನಮಂತ್ರಿ ಅಭ್ಯರ್ಥಿ ಆಗುವುದಕ್ಕೆ ನಿತೀಶ್ ಕುಮಾರ್ ಒಳಗೊಳಗೇ ಸಿದ್ಧತೆ ನಡೆಸಿದ್ದಾರೆ. ಅದೇ ಕಾಲಕ್ಕೆ, ನಿತೀಶರನ್ನು ದೆಹಲಿಗೆ ಸಾಗಹಾಕಿದರೆ ಬಿಹಾರದಲ್ಲಿ ಪ್ರಸ್ತುತ ಉಪ ಮುಖ್ಯಮಂತ್ರಿಯಾಗಿರುವ ಪುತ್ರ ತೇಜಸ್ವಿ ಯಾದವರನ್ನು ಸಿಎಂ ಮಾಡುವ ಮಾರ್ಗ ಸುಲಭವಾಗುತ್ತದಲ್ಲ ಎಂಬ ಕನಸಿನಲ್ಲಿ ಲಾಲೂ ಇದ್ದಾರೆ. ಈ ಧುರೀಣರಿಬ್ಬರಿಗೂ ಇವಿಎಂ ನೆರವಿಗೆ ಬರಬೇಕಿದೆ. ಹಾಗಾಗಿ ಅದರ ಬಳಕೆಯಲ್ಲಿ ಅನ್ಯಥಾ ತಂತ್ರಗಾರಿಕೆ ಅವರಿಗೆ ಕಾಣಿಸಿಲ್ಲ.
ಕೇರಳದಲ್ಲಿ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ನಾಯಕ ಪಿಣರಾಯಿ ವಿಜಯನ್ ನೇತೃತ್ವದ ಎಡಒಕ್ಕೂಟದ ಸರಕಾರ ಎರಡನೇ ಬಾರಿಗೆ ನಿಚ್ಚಳಬಹುಮತದೊಂದಿಗೆ ಗದ್ದುಗೆ ಹಿಡಿದಿದೆ. ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷವಾಗಲೀ, ಅದರ ಜತೆ ಅಧಿಕಾರ ಹಂಚಿಕೊಂಡಿರುವ ಪಕ್ಷಗಳಾಗಲೀ ಇವಿಎಂ  ದುರ್ಬಳಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿಲ್ಲ. ಎರಡು ಬಾರಿ ಇದೇ ಇವಿಎಂ ಬಳಸಿ ನಡೆಸಿದ ತೆಲಂಗಾಣ ವಿಧಾನಸಭಾ ಚುನಾವಣೆ ಗೆದ್ದು ಅಧಿಕಾರ ಹಿಡಿದಿದ್ದ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಅಧ್ಯಕ್ಷ ಕೆ.ಚಂದ್ರಶೇಖರ ರಾವ್ ಇತ್ತೀಚಿನ ಚುನಾವಣೆಯಲ್ಲಿ ಸೋತಿದ್ದಾರೆ. ತಮ್ಮ ಸೋಲಿಗೆ ಇವಿಎಂ ದುರ್ಬಳಕೆ ಕಾರಣ ಎಂದು ಅವರು ಸಬೂಬು ನೀಡಿಲ್ಲ. ಇವರು ‘ಇಂಡಿಯ’ ಒಕ್ಕೂಟದಲ್ಲಿಲ್ಲ ನಿಜ, ಆದರೆ ಬಿಜೆಪಿಯ ಕಡು ವಿರೋಧಿ.
ಆದರೂ ಅವರು ಚುನಾವಣಾ ಆಯೋಗದ ವಿರುದ್ಧ ತಕರಾರು ಮಂಡಿಸಿಲ್ಲ. ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ, ತಾನು ಹೊಂದಿದ್ದ ಛತ್ತೀಸ್‌ಗಡ ಮತ್ತು ರಾಜಸ್ತಾನ ರಾಜ್ಯಗಳನ್ನು ಕಾಂಗ್ರೆಸ್ ಕಳೆದುಕೊಂಡಿತು. ಆ ರಾಜ್ಯದಲ್ಲಿ ಮುಖ್ಯಮಂತ್ರಿಗಳಾಗಿದ್ದ ಬಘೇಲ್ ಮತ್ತು ಅಶೋಕ್ ಗೆಹ್ಲೋಥ್‌ರು, ಪಕ್ಷದ ಸೋಲಿಗೆ ಇವಿಎಂ ದುರ್ಬಳಕೆಯೇ ಕಾರಣ ಎಂದು ಬೆರಳು ಮಾಡಲಿಲ್ಲ. ಮಧ್ಯಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರಪತನಗೊಂಡು ಕಾಂಗ್ರೆಸ್ ನೇತೃತ್ವದ ಸರಕಾರ ರಚನೆಯಾಗುತ್ತದೆ; ತಾವು ಸಿಎಂ ಆಗುವುದು ನೂರಕ್ಕೆ ನೂರು ನಿಜ ಎಂದು ಕನಸಿದ್ದ ಹಿರಿಯ ಕಾಂಗ್ರೆಸಿಗಕಮಲನಾಥ್ ಅವರೇ ಪಕ್ಷದ ಸೋಲಿಗೆ ಇವಿಎಂ ವಿರುದ್ಧ ದೋಷಾರೋಪ ಮಾಡಿಲ್ಲ.
ಎಲ್ಲಕ್ಕಿಂತಲೂ ಮಿಗಿಲಾಗಿ, ಎಂಥ ವಿಚಾರದಲ್ಲೂ ಹಿಂದೆಮುಂದೆ ನೋಡದೆ ಸಾರಾಸಾರ ವಿಚಾರ ವಿಮರ್ಶೆ ಮಾಡದೇ ಹೇಳಿಕೆ ನೀಡುವ ಕಾಂಗ್ರೆಸ್‌ನ ಪ್ರಧಾನ ಮಂತ್ರಿ ಅಭ್ಯರ್ಥಿ ರಾಹುಲ್ ಗಾಂಧಿ ಕೂಡಾ ಏನೂ ಪ್ರತಿಕ್ರಿಯಿಸಿಲ್ಲ. ಹೀಗಿರುವಾಗ ‘ಇಂಡಿಯ’ ಒಕ್ಕೂಟದ ಮಿತ್ರ ಸದಸ್ಯ ಕೂಟದಲ್ಲಿ ಅಧಿಕಾರ ದಲ್ಲಿರುವ ಪಕ್ಷಗಳು ಒಂದು ರೀತಿ ಯೋಚಿಸುತ್ತಿದ್ದರೆ ಸ್ಯಾಮ್ ಮತ್ತು ದಿಗ್ಗಿ ಮಹಾರಾಜ ಇನ್ನೊಂದು ರೀತಿ ಯೋಚಿಸುತ್ತಿರುವುದು ಚರ್ಚೆಗೆ ಗ್ರಾಸ ಒದಗಿಸಿದೆ.
ಲೋಕಸಭಾ ಚುನಾವಣೆಯಲ್ಲಿ ಜನಮನ ಹೇಗೆ ಭಾವಿಸುತ್ತದೆಯೋ ಅದು ವೋಟಿನ ರೂಪದಲ್ಲಿ ವ್ಯಕ್ತವಾಗುತ್ತದೆ. ಸದ್ಯದ ಲಕ್ಷಣ ನೋಡಿದರೆ ಬರಲಿ ರುವ ಚುನಾವಣೆಯಲ್ಲೂ ಚುನಾವಣಾ ಆಯೋಗ ಇವಿಎಂ ಬಳಸಲಿರುವುದು ಅನುಮಾನಾತೀತ ರೀತಿಯಲ್ಲಿ ಖಚಿತವಾಗಿದೆ. ಈ ಯಂತ್ರಗಳ ಮೂಲಕವೇ ಚುನಾವಣಾ ಸಮರವನ್ನು ರಾಜಕೀಯ ಪಕ್ಷಗಳು ಜೈಸಬೇಕಿದೆ. ಮತದಾರರ ಚಿತ್ತ ಯಾವ ಪಕ್ಷದತ್ತ ಇಲ್ಲವೇ ಒಕ್ಕೂಟದತ್ತ? ಗೊತ್ತಿಲ್ಲ. ಜ್ಯೋತಿಷಿಗಳು, ಭವಿಷ್ಯ ನುಡಿಯುವವರು, ಗಿಳಿಶಾಸದ ಪುಂಗಿ ಊದುವವರು, ಜಾತಕ, ಹಸ್ತ ಸಾಮುದ್ರಿಕ ನೋಡಿ ಕಣಿ ಹೇಳುವವರು ಸೋತಿರುವ ಲೆಕ್ಕಾಚಾರ ಚುನಾವಣಾ ಭವಿಷ್ಯ ಈಗಿನದು. ಅವರು ಸೋತರೆ ಇವರು ಗೆಲ್ಲುತ್ತಾರೆ ಎಂಬಲ್ಲಿಗೆ ಜ್ಯೋತಿಷ ಹೇಳುವ ಸ್ಥಿತಿಗೆ ಬಂದು ನಿಂತಿರುವುದು ಸದ್ಯದ ಮತ್ತು ಸ್ವಾಗತಾರ್ಹ ಬೆಳವಣಿಗೆ.
ಮತದಾರರು ಮತ ಯಂತ್ರದ ಮುಂದೆ ನಿಂತ ಕ್ಷಣದಲ್ಲಿ ಹರಳುಗಟ್ಟುವ ತೀರ್ಮಾನವೇ ಅವರ ಅಂತಿಮ ಆಯ್ಕೆ ಆಗಿರುತ್ತದೆ. ಅವರ ತೀರ್ಮಾನದಂತೆ ಆಯ್ಕೆಯಾಗುವ ಪಕ್ಷ/ಒಕ್ಕೂಟ ಸಿಂಹಾಸನ ಹಿಡಿಯುತ್ತದೆ. ವಾಸ್ತವ ಹೀಗಿರುವಾಗ ಸ್ಯಾಮ್ ಪಿತ್ರೋಡಾ ಭವಿಷ್ಯ ನುಡಿಯುವ ಸಾಹಸಕ್ಕೆ ಬಂದಿದ್ದಾರೆ. ಇವಿಎಂ ದುರ್ಬಳಕೆ ತಡೆಯದೇ ಹೋದರೆ ಎನ್‌ಡಿಎ/ಬಿಜೆಪಿ ಲೋಕಸಭೆಯಲ್ಲಿ ೪೦೦ ಸ್ಥಾನಬಲ ಪಡೆಯಲಿದೆ ಎಂಬ ಮುನ್ಸೂಚನೆ ಅವರದು. ಚುನಾವಣೆ ಹತ್ತಿರ ಹತ್ತಿರವಾಗುತ್ತಿರುವಂತೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಕಟವಾಗುತ್ತಿರುವ ಸಮೀಕ್ಷೆಗಳು ಮತ್ತೆ ಎನ್ ಡಿಎ/ಬಿಜೆಪಿ ಕೈಗೆ ಅಧಿಕಾರ ಎನ್ನುತ್ತಿರುವಾಗಲೇ ಸ್ಯಾಮ್ ಪಿತ್ರೋಡಾ ಆತಂಕ ವ್ಯಕ್ತವಾಗಿದೆ. ಸಮೀಕ್ಷಾ ಏಜೆನ್ಸಿಗಳು ‘ಸೆಫಾಲಜಿ’ ಎಂಬ ಮತಪೂರ್ವ ಮತದಾರರ ಮನಸ್ಸುಅಳೆಯುವ ಜ್ಞಾನ ಆಧರಿಸಿ ಸಮೀಕ್ಷೆಯನ್ನು ಸಿದ್ಧಪಡಿಸುತ್ತವೆ. ಜ್ಞಾನ ಮುಗ್ಗರಿಸುವುದಿಲ್ಲ ಎಂದೇನೂ ಇಲ್ಲ.
ಆದರೆ ಬಹುತೇಕ ಸಂದರ್ಭದಲ್ಲಿ ಅವು ನಿಜವಾಗಿವೆ ಎಂಬ ಅಂಶ ಪಿತ್ರೋಡಾರ ಆತಂಕಕ್ಕೆ ಕಾರಣವಾಗಿರಬಹುದೇ? ಅವರು ನುಡಿದಿರುವ ಭವಿಷ್ಯ ವನ್ನು ನೋಡಿದರೆ ಮತ್ತೆ ಅಧಿಕಾರಕ್ಕೆ ಮರಳುವ ಅವರದೇ ಪಕ್ಷದ ನೈತಿಕ ಸ್ಥೈರ್ಯವನ್ನು ಉಡುಗಿಸುವ ಹುನ್ನಾರವೇನಾದರೂ ಇರಬಹುದೇ? ನೃತ್ಯ ಬಾರದ ತರುಣಿ ‘ನೆಲ ಡೊಂಕಾಗಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದ ಗಾದೆ ಮಾತೊಂದು ಕನ್ನಡದಲ್ಲಿ ಬಹು ಪ್ರಚಲಿತದಲ್ಲಿದೆ. ಚುನಾವಣೆಯನ್ನು ಗೆಲ್ಲಲಾಗದ ಪಕ್ಷ ತಾನು ಸೋಲುವುದಕ್ಕೆ ತಂತ್ರಗಾರಿಕೆ ದುರುಪಯೋಗ ಕಾರಣ ಎನ್ನಲು ಶುರುಮಾಡಿರುವುದು ಆ ಗಾದೆಮಾತನ್ನು ನೆನಪಿಗೆ ತರುತ್ತಿದೆ. ಪಿತ್ರೋಡಾ ಮಾತು ಆ ಪಕ್ಷದ ಒಳಬೇಗುದಿಯ ಲಕ್ಷಣವೇ ಎಂಬುದನ್ನು ಈಗಲೇ ಹೇಳುವುದು ಸರಿಯಲ್ಲ.
ಚುನಾವಣಾ ಫಲಿತಾಂಶವನ್ನು ಇವಿಎಂಗಳು ಹೊರ ಹಾಕುವ ದಿನಕ್ಕೆ ನಾವೆಲ್ಲರೂ ಕಾಯಬೇಕು. ಅದರ ಹೊರತಾಗಿ ‘ಇಂಡಿಯ’ ಒಕ್ಕೂಟ, ‘ಈ ಬಾರಿಯಚುನಾವಣೆಯಲ್ಲಿ ಎನ್‌ಡಿಎ/ಬಿಜೆಪಿ ಸರಕಾರ ಪತನವಾಗಿ ತಮ್ಮ ಒಕ್ಕೂಟ ಅಧಿಕಾರಕ್ಕೆ ಬರಲಿದೆ’ ಎನ್ನುತ್ತಿವೆ. ಪಿತ್ರೋಡಾ ಅಥವಾ ದಿಗ್ಗಿ ಮಹಾರಾಜ ರಲ್ಲಿರುವ ಅನುಮಾನ ‘ಇಂಡಿಯ’ ಒಕ್ಕೂಟದಲ್ಲಿಲ್ಲ ಎಂದೇ ಇದರ ಅರ್ಥ. ಕಾಂಗ್ರೆಸ್‌ನ ಅತಿರಥ ಮಹಾರಥಿಗಳ ಮೌನ ನೋಡಿದರೆ ಪಕ್ಷ ಯೋಚಿಸು ತ್ತಿರುವುದೇ ಬೇರೆ; ಸ್ಯಾಮ್, ದಿಗ್ಗಿ ಮಹಾರಾಜರಂಥವರು ಯೋಚಿಸುತ್ತಿರುವುದೇ ಬೇರೆ ಎನಿಸುತ್ತಿದೆ.