ಮಾತೃವಾತ್ಸಲ್ಯವನ್ನು ಪ್ರದರ್ಶಿಸಿ
ಚರ್ಚಾ ವೇದಿಕೆ
ಬಿ.ಎಸ್.ಶಿವಣ್ಣ
ರಾಜ್ಯದ ಹಿಂದುಳಿದ ವರ್ಗದವರಲ್ಲಿ ತಮ್ಮ ರಾಜಕೀಯ ಹಕ್ಕುಗಳ ಬಗ್ಗೆ ಆಗಷ್ಟೇ ಪ್ರಜ್ಞೆ ಮೂಡುತ್ತಿದ್ದ ಕಾಲವದು. ವಿಧಾನಸೌಧದಂಥ ಆಡಳಿತ ಕೇಂದ್ರದಲ್ಲಿಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಸಮುದಾಯದ ಹಲವು ಶಾಸಕರಿದ್ದರೂ, ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲೂ ರಾಜಕೀಯ ಮೀಸಲು ಪಡೆಯಬಹುದೆಂಬ ಭಾವನೆ ಆಗಷ್ಟೇ ಚಿಗುರೊಡೆಯುತ್ತಿದ್ದ ಸಮಯವಾಗಿತ್ತದು. ಆ ವೇಳೆ, ಜಿಲ್ಲಾ, ತಾಲೂಕು ಪಂಚಾಯತಿ, ನಗರಪಾಲಿಕೆ, ನಗರಸಭೆ, ಪುರಸಭೆ ಮತ್ತಿತರ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲು ಜಾರಿಯಾಗಬೇಕೆಂದು ಶೋಷಿತ ಮತ್ತು ಹಿಂದುಳಿದ ವರ್ಗದವರು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದರು.
ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಮೀಸಲಾತಿ ನೀಡುವುದಕ್ಕೆ ಸಹಜವಾಗಿಯೇ ಸಮಾಜದ ಪ್ರಬಲ ಜಾತಿಗಳಿಂದ, ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾ ಟಕದ ಕೆಲವು ಶಾಸಕರು-ಮಂತ್ರಿಗಳಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಹೀಗೆ ವಿರೋಧಿಸಿದವರಲ್ಲಿ ಕೆಲವರಂತೂ ಸಾರ್ವಜನಿಕ ವೇದಿಕೆಗಳಲ್ಲಿ ‘ಇವನಾರವ ಇವನಾರವ ಎಂದೆಣಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆಣಿಸಯ್ಯ’ ಎಂಬ ಬಸವಣ್ಣನವರ ವಚನವನ್ನು ಪಠಿಸುವವರಾಗಿದ್ದರು. ಭಾಷಣದಲ್ಲಿ ಸಮಾನತೆಯ ಪ್ರತಿಪಾದನೆ, ಆದರೆ ಸಚಿವ ಸಂಪುಟ ಸಭೆಯಲ್ಲಿ ಮಾತ್ರ ಹಿಂದುಳಿದವರು ಮತ್ತು ಶೋಷಿತ ಸಮುದಾಯದವರಿಗೆ ಮೀಸಲು ನೀಡುವುದಕ್ಕೆ ವಿರೋಧ!
ಹೀಗೆ ವಿರೋಧಿಸಿದವರ ಪೈಕಿ ಯಾರೊಬ್ಬರೂ ಈಗ ನಮ್ಮೊಂದಿಗಿಲ್ಲವಾದ್ದರಿಂದ, ಅವರ ಹೆಸರನ್ನು ಉಲ್ಲೇಖಿಸುವುದು ಅಸಮಂಜಸವೆಂದು ಭಾವಿಸಿದ್ದೇನೆ.ಅಂದಹಾಗೆ, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯ ಸ್ಥಾನಕ್ಕೆ ಮೀಸಲು ಕಲ್ಪಿಸುವ ಉದ್ದೇಶದಿಂದ ಅಂದಿನ ಮುಖ್ಯಮಂತ್ರಿ ಎಚ್ .ಡಿ.ದೇವೇಗೌಡರು ಸಿದ್ದರಾಮಯ್ಯರ ನೇತೃತ್ವದಲ್ಲಿ ಸಂಪುಟ ಉಪಸಮಿತಿಯೊಂದನ್ನು ರಚಿಸಿದ್ದರು. ಅದು ಮೀಸಲಾತಿಗೆ ಶಿಫಾರಸು ಮಾಡಿದಾಗ, ಮೇಲ್ವರ್ಗದಿಂದ ಈ ವಿರೋಧ ವ್ಯಕ್ತವಾಯಿತು.
ಸಜ್ಜನ ರಾಜಕಾರಣಿಯೆಂದೇ ಹೆಸರಾಗಿದ್ದ ದಿ.ಎಂ.ಪಿ.ಪ್ರಕಾಶರಂಥವರೇ ಈ ವಿರೋಧವನ್ನು ಎದುರಿಸಲಾಗದೆ ಕೈಚೆಲ್ಲಿದ್ದರು. ದೇವೇಗೌಡರು ಸಿದ್ದರಾಮಯ್ಯ ರನ್ನು ಕರೆಸಿ, ‘ಒಂದು ಸಮುದಾಯದ ಶಾಸಕರು-ಮಂತ್ರಿಗಳು ಈ ಪ್ರಸ್ತಾಪವನ್ನು ವಿರೋಧಿಸುತ್ತಿದ್ದಾರೆ; ಹೀಗಾಗಿ ಸಂಪುಟ ಉಪಸಮಿತಿಯ ವರದಿ ಒಪ್ಪಿಕೊಳ್ಳು ವುದು ಕಷ್ಟವಾಗಬಹುದು’ ಎಂದು ಓಲೈಸಲು ಯತ್ನಿಸಿದ್ದರು. ಆ ಸಮಯದಲ್ಲೂ ಸಿದ್ದರಾಮಯ್ಯನವರು ಹಠ ಬಿಡದೆ, ‘ರಾಜಿಯಾಗುವ ಪ್ರಶ್ನೆಯೇ ಇಲ್ಲ’ ಎಂದರು. ಆ ವೇಳೆ ಸಿದ್ದರಾಮಯ್ಯರಿಗೆ ಒತ್ತಾಸೆ ಯಾಗಿ ನಿಂತವರು ಮಾಜಿ ಸಿಎಂ ದಿ. ಜೆ.ಎಚ್ .ಪಟೇಲರು.
ಹಿಂದುಳಿದವರಿಗೆ ಮೀಸಲಾತಿಯನ್ನು ವಿರೋಧಿಸುತ್ತಿದ್ದ ಸಚಿವರನ್ನು ಸಂಪುಟ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡ ಪಟೇಲರು, ‘ಸಮಾಜದ ಮೇಲ್ವರ್ಗದವರಾದ ನಾವು ಇತರೆಲ್ಲಾ ಜಾತಿಯವರ ಬಗ್ಗೆ ಸದಾ ಮಾತೃವಾತ್ಸಲ್ಯದಿಂದಿರಬೇಕೇ ಹೊರತು, ಮೀಸಲು ವಿರೋಧಿಸುವುದು ಸರಿಯಲ್ಲ. ಭಾಷಣದಲ್ಲಿಬಸವಣ್ಣನ ವಚನ ಹೇಳಿ, ಕೃತಿಯಲ್ಲಿ ಅನ್ಯ ಸಮುದಾಯವನ್ನು ಅಽಕಾರದಿಂದ ತುಳಿಯುವುದು ಸರಿಯಲ್ಲ’ ಎಂದರು. ಪರಿಣಾಮ, ಹಿಂದುಳಿದ ವರ್ಗದವರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಮೀಸಲಾತಿ ನೀಡುವ ಸಿದ್ದರಾಮಯ್ಯನವರ ವರದಿ ಯನ್ನು ಒಪ್ಪಿಕೊಳ್ಳುವುದು ಅನಿವಾರ್ಯವಾಯಿತು.
ಅದರ ಫಲವನ್ನು ಅಹಿಂದ ವರ್ಗದವರು ಈಗ ಅನುಭವಿಸುತ್ತಿದ್ದಾರೆ. ಈಗಲೂ ಸಮಾಜದ ಮೇಲ್ವರ್ಗಗಳಲ್ಲಿ ಗುರುತಿಸಿಕೊಂಡವರು ಸಮಸಮಾಜ ಸೃಷ್ಟಿಯ ದೃಷ್ಟಿಯಿಂದ ಅಂಥದ್ದೇ ಇನ್ನೊಂದು ಪ್ರಸ್ತಾಪಕ್ಕೆ ಒಪ್ಪಿಕೊಳ್ಳುವ ಔದಾರ್ಯ ಪ್ರದರ್ಶಿಸಲು ಕಾಲವೀಗ ಪಕ್ವವಾಗಿದೆ. ಅದು ರಾಜ್ಯ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ಸಾಮಾಜಿಕ-ಶೈಕ್ಷಣಿಕ-ಆರ್ಥಿಕ ಸಮೀಕ್ಷೆ ಅರ್ಥಾತ್ ’ಜಾತಿಗಣತಿ’ಯ ಕುರಿತಾದುದು. ಹೌದು, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಮೊದಲ ಅವಽಯಲ್ಲಿ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ್ ನೇತೃತ್ವದಲ್ಲಿ ಈ ಸಮೀಕ್ಷೆ ನಡೆಸಲು ಆದೇಶಿಸಿದ್ದರು. ಸುಮಾರು ೧೬೦ ಕೋಟಿ ರು. ವೆಚ್ಚದಲ್ಲಿ ಈ ಸಮೀಕ್ಷೆ ನಡೆಸಿದ ಆಯೋಗ ಸರಕಾರಕ್ಕೆ ತನ್ನ ವರದಿ ಸಲ್ಲಿಸುವ ಸಂದರ್ಭದಲ್ಲಿ ಮೈತ್ರಿ ಸರಕಾರ ಅಧಿಕಾರಕ್ಕೆ ಬಂತು.
ಸಮೀಕ್ಷೆ ನಡೆಸುವಾಗಲೇ ವಿರೋಧಿಸಿದ್ದ ಕುಮಾರಸ್ವಾಮಿಯವರು ತಾವುಮುಖ್ಯಮಂತ್ರಿಯಾದ ಈ ಅವಧಿಯಲ್ಲಿ ವರದಿಯ ಜಾರಿಗೆ ಸಹಜವಾಗಿಯೇ ಮನಸ್ಸು ಬಿಚ್ಚಲಿಲ್ಲ. ಬಳಿಕ ಬಂದ ಬಿಜೆಪಿ ಸರಕಾರದ್ದೂ ಇದೇ ನಡೆಯಾಯಿತು. ಆದರೆ ಚುನಾವಣೆಗೂ ಮುನ್ನ ಸಿದ್ದರಾಮಯ್ಯ ನವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಂತರಾಜ್ ಆಯೋಗದ ವರದಿಯನ್ನು ಜಾರಿಗೊಳಿಸುವುದಾಗಿ ಅಹಿಂದ ಸಮುದಾಯಕ್ಕೆ ವಚನ ನೀಡಿದ್ದರು. ಈಗ ಅವರ ನೇತೃತ್ವದ ಕಾಂಗ್ರೆಸ್ ಸರಕಾರ ಬಂದು ೭ ತಿಂಗಳಾಗಿದ್ದು, ಶೋಷಿತ ಸಮುದಾಯವು ಸಹಜವಾಗಿಯೇ ಹಿಂದೆ ಅವರು ನೀಡಿದ ವಚನದ ಬಗ್ಗೆ ಕಾತರಗೊಂಡಿದೆ. ವರದಿ ಜಾರಿಗೆಂದು ಹಿಂದುಳಿದ,ಪರಿಶಿಷ್ಟ ಜಾತಿ ಮತ್ತು ಪಂಗಡದ ಮಠಾಧೀಶರು, ರಾಜಕೀಯ ನಾಯಕರು ಒತ್ತಾಯಿಸುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯನವರೂ ಈ ಬಗ್ಗೆ ಒಲವು ಹೊಂದಿರುವಾಗಲೇ ಸಮಾಜದ ೨ ಪ್ರಬಲ ವರ್ಗ ವಿರೋಧಿಸಿರುವುದು ಈಗ ತೊಡಕಾಗಿ ಪರಿಣಮಿಸಿದೆ.ಅಷ್ಟಕ್ಕೂ ಈ ವರದಿಯ ಜಾರಿಯ ಬಗ್ಗೆ ಕೆಲವರಿಗೆ ಮಿಥ್ಯಾಕಲ್ಪನೆಗಳು ಇದ್ದಂತಿದೆ. ಕೆಲವರಂತೂ ಇದರ ಲ್ಲಿ ಸೇಡಿನ ಕ್ರಮವನ್ನು ಹುಡುಕಲು ಯತ್ನಿಸಿದ್ದಾರೆ.ಈ ವರದಿಗೆ ಜಾತಿಗಣತಿ ಎಂಬ ಹಣೆಪಟ್ಟಿ ಅಂಟಿಸಿ, ತಮ್ಮ ಸಮುದಾಯವನ್ನು ತುಳಿಯಲು ಯತ್ನಿಸಲಾಗುತ್ತಿದೆ ಎಂಬ ಭಾವನೆಯನ್ನು ವ್ಯವಸ್ಥಿತವಾಗಿಬಿತ್ತಲಾಗುತ್ತಿದೆ. ಈ ವರದಿ ಜಾರಿಯಾದರೆ ತಮ್ಮ ಸಮುದಾಯದ ರಾಜಕೀಯ ಪ್ರಾಬಲ್ಯಕ್ಕೆ ಧಕ್ಕೆಯಾಗುತ್ತದೆ, ಹಕ್ಕುಗಳು ಕಸಿಯಲ್ಪಡುತ್ತವೆ. ಸಮಾಜದ ಸಂಖ್ಯಾಬಾಹುಳ್ಯವನ್ನು ಗಣನೀಯವಾಗಿ ತಗ್ಗಿಸಿ ಜನಸಂಖ್ಯೆಗೆ ತಕ್ಕಂತೆ ಸಿಗಬೇಕಾದ ಹಕ್ಕುಗಳನ್ನು ತಪ್ಪಿಸುವ ಕುತಂತ್ರ ಇದರಲ್ಲಡಗಿದೆ ಎಂಬಿತ್ಯಾದಿ ತಪ್ಪುಮಾಹಿತಿಯನ್ನು ಹಬ್ಬಿಸಲಾಗುತ್ತಿದೆ. ಆದರೆ ಇವೆಲ್ಲವೂ ಸುಳ್ಳು. ಅಷ್ಟಕ್ಕೂ ಸಮೀಕ್ಷೆ ನಡೆಸಿದ ಉದ್ದೇಶವೇ, ಸಮಾಜದಲ್ಲಿನ ಎಲ್ಲ ವರ್ಗಗಳ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಪರಿಸ್ಥಿತಿಯ ನ್ನರಿತು, ಅವರ ಸ್ಥಿತಿ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಹಾಗೂ ಹಕ್ಕುಗಳನ್ನು ಕಲ್ಪಿಸಲು ಎಂಬುದು ವಿರೋಧಿಸುತ್ತಿರುವ ಮಠಾಧೀಶರು, ರಾಜಕೀಯ ನಾಯಕರಿಗೆ ಅರ್ಥವಾದಂತಿಲ್ಲ.
ಹೀಗಾಗಿ ವರದಿ ಸ್ವೀಕರಿಸದಂತೆ ಸಿದ್ದರಾಮಯ್ಯರ ಮೇಲೆ ಒತ್ತಡ ಹೇರಲಾಗುತ್ತಿದೆ. ಆದರೆ ವರದಿ ಸ್ವೀಕರಿಸುವುದರಿಂದ ಸಮಾಜದ ಎಲ್ಲ ವರ್ಗದವರಿಗೆಅನುಕೂಲವಾಗುತ್ತದೆ. ವರ್ಷದ ಹಿಂದೆ, ಹಿಂದುಳಿದ ವರ್ಗದವರಿಗೆ ಬೆಂಗಳೂರು ಮಹಾನಗರ ಪಾಲಿಕೆಯ ಮೀಸಲು ನಿಗದಿಪಡಿಸಲು ಯಾವ ಮಾನದಂಡಅನುಸರಿಸುತ್ತೀರಿ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದಾಗ, ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕ ಹಿಂದುಳಿಕೆಯನ್ನು ನ್ಯಾಯಾಲಯಕ್ಕೆಮನದಟ್ಟು ಮಾಡಲು ರಾಜ್ಯ ಸರಕಾರದ ಮುಂದೆ ಯಾವುದೇ ದತ್ತಾಂಶಗಳಿರಲಿಲ್ಲ. ಈ ಸಮೀಕ್ಷಾ ವರದಿಯನ್ನು ಸರಕಾರ ಸ್ವೀಕರಿಸದೇ ಇದ್ದುದರಿಂದ,ಲಭ್ಯ ದತ್ತಾಂಶವನ್ನು ಸಾದರಪಡಿಸಲು ಸಾಧ್ಯವಾಗಿರಲಿಲ್ಲ.
ಹೀಗಾಗಿ ಸಿದ್ದರಾಮಯ್ಯರ ಸರಕಾರ ಜಾರಿಮಾಡಲು ಉದ್ದೇಶಿಸಿರುವ ಈ ವರದಿ ಸಾಮಾಜಿಕ ಸ್ವಾಸ್ಥ್ಯಕ್ಕೆ ಎಲ್ಲ ದೃಷ್ಟಿಯಿಂದಲೂ ಪೂರಕವೇ ವಿನಾ ಮಾರಕವಲ್ಲ. ಈ ವರದಿ ಜಾರಿಯ ವಿಚಾರದಲ್ಲೂ ಸಮಾಜದ ಮೇಲ್ವರ್ಗದವರು ಮತ್ತೆ ಮಾತೃವಾತ್ಸಲ್ಯ ಪ್ರದರ್ಶಿಸಬೇಕಾದ ಕಾಲ ಬಂದಿದೆ. ‘ಎಲ್ಲರೂ ಒಂದೇ’ ಎಂಬ ಉದಾರತೆಯ ಪ್ರದರ್ಶನಕ್ಕಿದು ಸಕಾಲವಾಗಿದೆ. ಈ ವಿಚಾರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಸಂದರ್ಭಾನುಸಾರ ಬಣ್ಣ ಬದಲಿಸುವುದನ್ನು ಮೊದಲು ನಿಲ್ಲಿಸಬೇಕಿದೆ; ಶೋಷಿತರು ಮತ್ತು ಹಿಂದುಳಿದ ವರ್ಗಗಳ ಬೇಡಿಕೆಯನ್ನು ಕಾನೂನು ಬಾಹಿರವೆಂಬಂತೆ ಬಿಂಬಿಸುವುದನ್ನು ನಿಲ್ಲಿಸಬೇಕಿದೆ.
ಈ ಹಿಂದೆ, ಹಾವನೂರು ಮತ್ತು ಮಂಡಲ್ ವರದಿಗಳ ಜಾರಿಯ ವೇಳೆ, ರಾಜಕೀಯ ಪಟ್ಟಭದ್ರ ಶಕ್ತಿಗಳು ಮತ್ತು ಸಾಮಾಜಿಕ ನ್ಯಾಯದ ವಿರೋಧಿಗಳು ಪ್ರಬಲವಾಗಿ ವಿರೋಧಿಸಿದ್ದಾಗ್ಯೂ ಆಗಿನ ಮುಖ್ಯಮಂತ್ರಿ ದಿ. ದೇವರಾಜ ಅರಸರು ಮತ್ತು ಮಾಜಿ ಪ್ರಧಾನಿ ದಿ. ವಿ.ಪಿ.ಸಿಂಗ್‌ರವರು ತಮ್ಮ ರಾಜಕೀಯ ಇಚ್ಛಾಶಕ್ತಿಯಿಂದ ಕ್ರಮವಾಗಿ ಆ ವರದಿಗಳನ್ನು ಜಾರಿಗೊಳಿಸಿದ್ದು, ಇದರಿಂದ ಅಹಿಂದ ವರ್ಗಗಳ ಕೋಟ್ಯಂತರ ಯುವಜನರು ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ಸೌಲಭ್ಯ ಪಡೆದು ಉನ್ನತ ಹುದ್ದೆಗಳಲ್ಲಿರುವುದು ಜಗಜ್ಜಾಹೀರು. ಆದ್ದರಿಂದ, ಸಾಮಾಜಿಕ ನ್ಯಾಯದ ಪ್ರಬಲ ಪ್ರತಿಪಾದಕರಾಗಿರುವ ಸಿದ್ದರಾಮಯ್ಯ ನವರು, ಜಯಪ್ರಕಾಶ್ ಹೆಗ್ಡೆಯವರು ಅಧ್ಯಕ್ಷರಾಗಿರುವ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವರದಿಯನ್ನು ತಕ್ಷಣವೇ ಸ್ವೀಕರಿಸಲಿ.
(ಲೇಖಕರು ರಾಮಮನೋಹರ್ ಲೋಹಿಯಾವಿಚಾರ ವೇದಿಕೆ ಅಧ್ಯಕ್ಷರು)(ಸೂಚನೆ: ಅನಿವಾರ್ಯ ಕಾರಣಗಳಿಂದಾಗಿ ಈವಾರ ‘ಭಾಸ್ಕರಾಯಣ’ ಅಂಕಣ ಪ್ರಕಟಗೊಂಡಿಲ್ಲ;ಮುಂದಿನ ವಾರದಿಂದ ಎಂದಿನಂತೆ ನಿಯತವಾಗಿಪ್ರಕಟಗೊಳ್ಳಲಿದೆ)