ಮತ್ಯಾವ ಮಂಥರೆಯೂ ಕಾಡದಿರಲಿ..
ಮನಮಂಥನ
ರಾಮಚಂದ್ರ ಐ.ಎಂ.
ಅಯೋಧ್ಯೆಯಲ್ಲಿ ಶ್ರೀರಾಮಮೂರ್ತಿಯ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ರಾಷ್ಟ್ರಕವಿ ಕುವೆಂಪುರವರ ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದ ಮಂಥರೆಯ ಪಾತ್ರ ನೆನಪಿಗೆ ಬರುತ್ತಿದೆ. ಅಂದಿನ ತ್ರೇತಾಯುಗದ ಮಂಥರೆ ಆತ್ಮಾವಲೋಕನ ಮಾಡಿಕೊಂಡಿದ್ದಳು. ಇಂದಿನ ಮಂಥರೆಯರು ಕುಬುದ್ಧಿಯ ಬಿಟ್ಟು ಆತ್ಮಾವಲೋಕನ ಮಾಡಿಕೊಂಡರೆ ಅದೆಷ್ಟು ಚೆನ್ನ ಅನಿಸುತ್ತಿದೆ.
ಕನ್ನಡ ಸಾಹಿತ್ಯ ಲೋಕದಲ್ಲಿ ಜ್ಞಾನಪೀಠ ಪ್ರಶಸ್ತಿಯ ಗೌರವದೊಂದಿಗೆ ಅಗಾಧ ಪ್ರಭಾವ ಬೀರಿದ ಕೃತಿ ‘ಶ್ರೀರಾಮಾಯಣ ದರ್ಶನಂ’. ಅಲ್ಲಿ ಬರುವ ಒಂದು ಪಾತ್ರ, ಕವಿ ಕುವೆಂಪುರವರೇ ಕರೆಯುವ ‘ಮಮತೆಯ ಸುಳಿ’ ಎನಿಸಿದ ‘ಮಂಥರೆ’. ನಿತ್ಯ ಬದುಕಿನ ಕ್ಷೀರಕ್ಕೆ ಹುಳಿ ಹಿಂಡುವ ಮಂಥರೆಯರು ತ್ರೇತಾಯುಗದಲ್ಲಿ, ಶಕುನಿಯರು ಮಹಾಭಾರತದಲ್ಲಿ ಮೆರೆದಿದ್ದನ್ನು ಕಂಡಿದ್ದೇವೆ.
‘ಕುತಂತ್ರಿ ಮಂಥರೆ’ ಎಂದೇ ರಾಮಾಯಣದಲ್ಲಿ ಪ್ರಸಿದ್ಧಿಯಾಗಿದ್ದರೂ ಅವಳಲ್ಲಿ ಕಡೆಯಲ್ಲಿ ಆಗಿದ್ದು ಮನೋ ಪರಿವರ್ತನೆಯೇ. ಕುವೆಂಪುರವರು ಅದನ್ನೇ ಆತ್ಮಾವಲೋಕನವೆಂದೂ ‘ದಶಶಿರನ ವಿಧಿ ಮಂಥರೆಯ ಮನದಲ್ಲಿ ಮಥಿಸಿದ್ದು’ ಎಂಬುದಾಗಿ ಚಿತ್ರಿಸಲು ಒದಗಿಸಿಕೊಂಡ ಭೂಮಿಕೆ ಆಪ್ತ ವೆನಿಸುತ್ತದೆ. ಮಂಥರೆಗೆ ಕೈಕೇಯಿ-ಭರತರ ಮೇಲೆ ಇದ್ದ ಅತೀವ ಪ್ರೀತಿಗಿಂತ ಅವಳ ಅಕಾರ್ಯಕ್ಕೆ ಅವಕಾಶವಾಗಿದ್ದು ಕೌಸಲ್ಯಳ ಮೇಲಿನ ವಿನಾ ಕಾರಣದ ಸೇಡು. ಈ ದರ್ಶನ ಕಾವ್ಯದಲ್ಲಿ ಮಂಥರೆಯ ಪ್ರವೇಶವಾಗು ವುದೇ ವಿಚಿತ್ರ ಸಂದರ್ಭದಲ್ಲಿ.
ಅಯೋಧ್ಯೆಯ ಅರ ಮನೆಯ ಉದ್ಯಾನವನ. ಬೆಳದಿಂಗಳ ಮಲ್ಲಿಗೆ ಹಾಸಿದಂತಿದ್ದ ರಾತ್ರಿ. ಮಕ್ಕಳನ್ನಾಡಿಸುತ್ತಿರುವ ರಾಜ ದಶರಥ ಮತ್ತವನ ರಾಣಿಯರು. ಇದ್ದಕ್ಕಿದ್ದಂತೆ ಅಲ್ಲಿದ್ದ ಕಂದ ರಾಮಚಂದ್ರನ ಅಳು. ಸೂರ್ಯವಂಶೀಯ ಕುಮಾರನಿಗೆ ಪೂರ್ಣಚಂದ್ರನ ಹಿಡಿಯಬೇಕಂತೆ! ತಾಯಂದಿರ ಸಂತೈಕೆ, ಅಪ್ಪನ ಸಮಾಧಾನಕ್ಕೂ ಅಳು ನಿಲ್ಲದು. ಬಳಲುತ್ತಿದೆ ಮಗು. ಎಲ್ಲರ ಮುಖಭಾವದಲ್ಲಿ ಎಲ್ಲಿಲ್ಲದ ದುಗುಡ ಸಂಕಟ. ಅಲ್ಲೊಬ್ಬ ಮುದುಕಿಯು ಬರುತ್ತಾಳೆ. ಅವಳ ಸೆರಗಲ್ಲೊಂದು ಮುಚ್ಚಿಟ್ಟ ಕನ್ನಡಿ. ಅದನ್ನು ತಾಯಿ ಕೈಕೇಯಿಗೆ ಕೊಡುವಳು.
ಅಳುವ ಕಂದಗೆ ತೋರಿದಾಗ ಕನ್ನಡಿಯಲ್ಲಿ ಚಂದ್ರನ ಬಿಂಬ ದರ್ಶನ ವಾಗುತ್ತದೆ. ನಿಜಚಂದ್ರ ಎಂದೇ ಅಂದುಕೊಂಡ ರಾಮಚಂದ್ರ ಅಳು ನಿಲ್ಲಿಸಿ ಕಿಲಕಿಲ ನಗುತ್ತಾನೆ. ಎಲ್ಲರ ಮೊಗದಲ್ಲೂ ಸಂತಸದ ವಾರಿ. ಪ್ರಾಯಶಃ, ಅಲ್ಲಿಂದಲೇ ಆ ಮಗು ತನ್ನ ಅಳುವನ್ನು ಬಿಟ್ಟು, ಅನ್ಯರ ಅಳುವನ್ನು ತನ್ನದೆಂದು ಬಗೆದು, ಜಗದ ಅಳಲಿಗೆ ಕಿವಿ ಮತ್ತು ದನಿಯಾಗುತ್ತಾನೇನೋ! ಅದು ಭುವನದ ಭಾಗ್ಯ, ಇರಲಿ.
ಆ ಮುದುಕಿಯೇ ಮಂಥರೆ. ಕಾವ್ಯದಲ್ಲಿ ಹೀಗೆ ಮೊದಲ ಪ್ರವೇಶವಾಗುತ್ತಾಳೆ. ಬೆಳದಿಂಗಳ ರಾತ್ರಿಯ ಹೊತ್ತಲ್ಲಿ ನೆರಳಾಗಿ ಮೂಡಿ ಬರುವಾಕೆ ಮಂಥರೆ. ಅವಳ ರೂಪವೋ ಅತಿ ವಿಚಿತ್ರ! ‘ಕರ್ರನೆಯ ಕುಬ್ಜತೆಯ, ಗೂನುವುಬ್ಬಿದ ಬೆನ್ನ, ಸುಕ್ಕು ನಿರಿನಿರಿಯಾಗಿ ಬತ್ತಿದ ತೊಗಲ್, ಪಲ್ಲುದುರಿ, ಬಚ್ಚುಬಾಯಿಯ, ಕೂದಲುದುರಿದ ಬೋಳು’ ಅವಳ ವರ್ಣನೆ ಹೀಗೆ ಸಾಗುತ್ತದೆ ಕಾವ್ಯದಲ್ಲಿ. ಮಂಥರೆಗೆ ಒಂದು ರೀತಿಯ ಸಂತಸವಾಗುತ್ತದೆ. ಮಗು ರಾಮನ ಸಂತೋಷಕ್ಕೆತಾನು ಕಾರಣಳಾಗಿದ್ದಕ್ಕೆ ಹಿಗ್ಗುತ್ತಾಳೆ. ಆದರೆ ಮರುಕ್ಷಣದಲ್ಲಿ ಆಗಿದ್ದೇ ಬೇರೆ. ಅದೇ ಬಾಲರಾಮನನ್ನು ಎತ್ತಿಕೊಳ್ಳಲು ಕೌಸಲ್ಯೆಯತ್ತ ಮಂಥರೆ ಕೈ ಚಾಚಿ ದಾಗ ಸಿಟ್ಟಾಗುವ ಕೌಸಲ್ಯೆ ‘ಕಂದಗೆ ಅಮಂಗಳಂ ಮುಟ್ಟದಿರ್, ಮುಟ್ಟದಿರ್, ಬೇಡ’ ಎನ್ನುತ್ತಾ ಕೊಡಲು ತಿರಸ್ಕರಿಸುತ್ತಾಳೆ.
ಮಂಥರೆಯ ಭಾವಕ್ಕೆ ಧಕ್ಕೆಯಾಗಲು ಅಷ್ಟು ಸಾಕಾಯಿತು. ಅಲ್ಲಿಂದ ಹೊರಟುಬಿಟ್ಟಳು. ಅದುವರೆಗೆ ಮೈತ್ರಿಭಾವದಲ್ಲಿದ್ದ ಮಂಥರೆ ಕಾಳಸರ್ಪಿಣಿ ಯಾಗುವಳು. ಇದು ಮಂಥರೆಯ ಭಾವಮಂಟಪದ ಕಂಬ ಸಡಿಲಗೊಳ್ಳಲು ಕವಿ ಒದಗಿಸುವ ಭೂಮಿಕೆ. ಕೇಕಯ ರಾಜ, ಕೈಕೇಯಿಯ ಅಪ್ಪ ಬೇಟೆಗೆ ಹೋಗಿದ್ದ ಸಂದರ್ಭದಲ್ಲಿ ಸಿಕ್ಕಿದ ‘ಹೇಸಿನಾಕೃತಿಯ’ ಕೂಸನ್ನು ತಂದು ಸಾಕುತ್ತಾನೆ. ಪ್ರಜೆಗಳ ಅಲಕ್ಷ್ಯದ ಮಧ್ಯೆ ಮಂಥರೆ ಬೆಳೆಯುತ್ತಾಳೆ. ಕೈಕೇಯಿ ಹುಟ್ಟಿದ ನಂತರ ಅವಳಿಗೆ ಆಗುವ ಭಾವ ಹೀಗೆ: ‘ಮಳೆ ಹೊಯ್ದ ತೆರನಾಯ್ತು ಮಂಥರೆಯ ಮರುಧರೆಗೆ, ಚೈತ್ರನಾಗಮನವಾಯ್ತು ಶಿಶಿರಕ್ಕೆ, ಬಾಳ್ನಿಶೆಗೆ ಶಶಿಯುದಿಸಿದಂತಾಯ್ತು’ ಎಂದು ಮಗು ನೋಡಿಕೊಳ್ಳುವ ಕೆಲಸಕ್ಕೆ ನಿಯುಕ್ತಿಗೊಳ್ಳುತ್ತಾಳೆ ಮಂಥರೆ.
ಜನರೆಲ್ಲ ದೂಷಿಸಿದರೂ ಕೈಕೇಯಿಗೆ ಮಾತ್ರ ಆಪ್ತಳೂ, ಸರ್ವಸ್ವವೂ ಆಗುತ್ತಾಳೆ. ಆದರೆ ಲೋಕದ ಕಣ್ಣಿಗೆ ಅವಳು ಹಾಲಿನೊಳಗಿನ ಇದ್ದಿಲಿನ ಚೂರಂತೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕೈಕೇಯಿ ಮತ್ತು ಮಂಥರೆಯ ಸ್ನೇಹವೆಂದರೆ ಒಂದಕ್ಕೊಂದು ಹೊಂದಿಕೆಯಾಗದ ಹಾಲು-ಇದ್ದಿಲಿನಂತೆ,ವರ್ಣವ್ಯತಿರಿಕ್ತ ಸ್ನೇಹ ಎಂದು ಚಿತ್ರಿತವಾಗಿದೆ. ಅಂತೂ ಕೈಕೇಯಿಯ ವಿವಾಹಾನಂತರ ಅವಳೊಂದಿಗೆ ಅಯೋಧ್ಯೆಯವರೆಗೂ ಬಂದಳು ಮಂಥರೆ. ಭರತನ ಜನನಾನಂತರ ಅವನೇ ಅವಳಿಗೆ ಸರ್ವಸ್ವ. ಬುದ್ಧಿಯಲ್ಲಿ ಬಡವಿಯೂ ಗುಣದಲ್ಲಿ ಜಿಪುಣಿಯೂ ಆಗಿದ್ದವಳು ಬಂಗಾರವನ್ನಪ್ಪಿಕೊಳ್ಳುವ ಹಾಗೆ ಭರತನನ್ನು ಸಲಹುವ ವಿಲಕ್ಷಣ ಅದೃಷ್ಟವಂತೆ ಮಂಥರೆ. ರಾಮಪಟ್ಟಾಭಿಷೇಕದ ಅರಿವೇ ಇಲ್ಲದ ಮಂಥರೆಗೆ ಹಿಂದಿನ ದಿನ ಕನಸೊಂದು ಬಿದ್ದಸಂದರ್ಭವನ್ನು ಚಿತ್ರಿಸುತ್ತಾರೆ ಕವಿ.
ಸೀತಾ-ರಾಮರ ಬಾಳದೋಣಿ ಅವಳ ಕನಸಿನ ಸುಳಿಯಲ್ಲಿ ಕೊಚ್ಚಿ ಹೋಗುವ ತೆರದ ಕನಸದು. ಎಚ್ಚರದ ನಂತರ, ‘ಮಥಿಸಿದುದು ದಶಶಿರನ ವಿಧಿ ಮಂಥರೆಯ ಮನದಿ’ ಎನ್ನುವಾಗ ಅವಳ ಒಡಲು ಬಲೆಗೆ ಬಿದ್ದ ಹುಳುವಂತೆ ನಡುಗಿತ್ತು. ನಂತರದ್ದೆಲ್ಲಾ ಕಥೆಯೇ. ರಾಮ-ಸೀತಾ-ಲಕ್ಷ್ಮಣರು ವನವಾಸಕ್ಕೆ ಹೋಗುತ್ತಾರೆ. ಅಯೋಧ್ಯೆ ಸ್ಮಶಾನ ಸದೃಶವಾಗುತ್ತದೆ. ಎಲ್ಲರ ನಿಂದೆಯ ನುಡಿ ಮಂಥರೆಯತ್ತಲೇ. ಭರತನಿಗೆ ಗೊತ್ತಾದಾಗ, ಅವನಾಡುವ ಮಾತು ಗಳಿಂದ ಮತ್ತಷ್ಟು ಜರ್ಜರಿತಳಾಗು. ವಳು ಮಂಥರೆ. ನಂತರವಷ್ಟೇ ಅವಳ ಮನಸ್ಥಿತಿ ಬದಲಾಗುತ್ತದೆ. ಇಲ್ಲಿಂದ ಚಿತ್ರಿತವಾಗುವ ಪಾತ್ರವೇ ಅವಳಆತ್ಮಾವಲೋಕನದ ಮನೋಜ್ಞ ಭಾಗ. ರಾಮ ಕಾಡಿಗೆ ಹೋದ ಮೇಲೆ ಭರತಂಗೆ ಸುಖವಿಲ್ಲ ಎಂದು ಮನಗಂಡೇ ಆತ್ಮಾವಲೋಕನ ಮಾಡಿಕೊಳ್ಳುವಳು. ಮಂಥರೆಯ ಪಾಲಿಗೆ ಈಗ ಎಲ್ಲವೂ ಶೂನ್ಯ ಎನಿಸುವ ಭಾವ.
‘ದೃಢ ಮನದ ಹೆಡೆಯೆತ್ತಿ ತನ್ನ ನಂಜಂ ತಾನೇ ಹೀರಲೆಳೆಸುವ ಕಾಳಸರ್ಪಿಣಿ ತೆರದಿ’ ತನ್ನ ವಿಷವನ್ನು ತಾನೇ ನುಂಗಿ ತಿದ್ದಿಕೊಳ್ಳುವ ಮನಸ್ಥಿತಿಗೆ ಬರುವಳು. ‘ರಾಮನು ಬಾರದೆ ಭರತನ ಒಲುಮೆ ತನಗಿಲ್ಲ. ಅವನು ಬರದೆ ಭರತನಿಗೂ ಸುಖವಿಲ್ಲ’ ಎಂದು ನಿಶ್ಚಯಿಸುತ್ತಾಳೆ. ‘ರಾಮನನಡವಿಗಟ್ಟಿದೆನ್ರಾಮನಂ ಮನೆಗೆ ಕರೆತಂದೆನಾದೊಡೆ ಕಂದ ಭರತಂಗೆ ಮುದವಪ್ಪುದು’ ಹೀಗೆಂದುಕೊಳ್ಳುತ್ತಲೇ ‘ಪುಣ್ಯದನ್ವೇಷಣೆಗೆ ಪೋಪ ಪಾಪದ ತೆರದಿ’ ಹೊರಡು ತ್ತಾಳೆ. ಇಲ್ಲಿ ರಾಮ ಎಂಬ ‘ಪುಣ್ಯ’ ಅರಣ್ಯಕ್ಕೆ ಹೋದ ಮೇಲೆ ಹುಡುಕಲು ಮಂಥರೆ ಎಂಬ ‘ಪಾಪಿ’ ಹೊರಟಳು. ಆಗ ಅವಳು ಮಮತೆಯ ಸುಳಿ. ಇಲ್ಲಿ, ಹರಿಶ್ಚಂದ್ರ ಕಾವ್ಯದಲ್ಲಿ ಹರಿಶ್ಚಂದ್ರ ರಾಜ್ಯವನ್ನು ತ್ಯಜಿಸಿ ಹೋಗುವಾಗ ‘ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ’ ಎಂಬ ರಾಘವಾಂಕ ಕವಿಯ ಮಾತು ನೆನಪಿಗೆ ಬರುತ್ತದೆ. ‘ಈ ಕುಬ್ಜೆ ಹೃದಯಾಬ್ಜದಲ್ಲಿ ರಘುರಾಮಚಂದ್ರ ನನಿರಿಸಿ’ ಅರಮನೆಯಲ್ಲಿ ಯಾರಿಗೂ ತಿಳಿಯದ ಹಾಗೆ ಹೊರಟು ಹಾದಿ ಬೀದಿಯಲ್ಲಿ ಸಿಕ್ಕಿದ್ದು ಕಲ್ಲೇಟು ತಿಂದು ರಾಮನನ್ನು ಹುಡುಕುತ್ತಾ ಬರುತ್ತಾಳೆ.
‘ಓ ಭರತನಣ್ಣಯ್ಯ ಓ ನನ್ನ ರಾಮಯ್ಯ ಬಾರಯ್ಯ ದಮ್ಮಯ್ಯ’ ಎಂದು ಗೋಗರೆಯುತ್ತಾಳೆ. ಕಾಡಂಚಲ್ಲಿ ಕಾಡುಗಿಚ್ಚಿಗೆ ಆಹುತಿಯಾಗುತ್ತಾಳೆ. ಮತ್ತೆ ಮಂಥರೆ ಬರುವುದು ಕಾವ್ಯದ ಕಡೆಯ ಭಾಗದಲ್ಲಿ, ಆದರೆ ದೈಹಿಕ ರೂಪದಲ್ಲಲ್ಲ. ರಾವಣ ಹರಣದ ನಂತರ ರಾಮ ಇನ್ನೂ ಬಂದಿಲ್ಲದ ಕಾರಣವಾಗಿ ಕುಗ್ಗುತ್ತಿದ್ದ ಭರತನಿಗೆ ಯಜ್ಞಾಗ್ನಿಯ ಶರೀರ ರೂಪದಲ್ಲಿ ಕಾಣಿಸಿ ‘ನಿನ್ನಗ್ರಜಂ ಇಂದೊ ನಾಳೆಯೋ ದಿಟಂ ಪಿಂತಿರುಗಿ ಬಂದಪನ್’ ಎಂಬ ಸಮಾಧಾನದ ನುಡಿಯಾಡಿ ಅಗ್ನಿಯಲ್ಲೇ ಲೀನಳಾಗುತ್ತಾಳೆ. ಮೊದಲು ಕಾಡ್ಗಿಚ್ಚಿನಲ್ಲಿ ಐಕ್ಯಳಾದ ದೈಹಿಕ ಊನೆ ಮಂಥರೆ ಈಗ ಮಂಗಳಕರ ಅಗ್ನಿಯಲ್ಲಿ ಲೀನವಾಗು ವಳು. ಸುಖವು ಬೇಕೆಂಬಾಗ ಆಗಿರುವ ಲೋಪಕ್ಕೆ ಆತ್ಮಾವಲೋಕನಕ್ಕೆ ಮನಸ್ಸು ಮಾಡುವುದೇ ಬದುಕಿನ ಮರ್ಮವಲ್ಲವೇ? ಮತ್ತೆ ಹೇಳುತ್ತೇನೆ. ತ್ರೇತೆಯ ಮಂಥರೆಯು ಆತ್ಮಾವಲೋಕನ ಮಾಡಿಕೊಂಡಳು. ಇಂದಿನ ಮಂಥರಾಬುದ್ಧಿಗೆ ಆತ್ಮಾವಲೋಕನವಾದೀತೇ! ಮತ್ಯಾವ ಮಂಥರೆಯರೂ ಕಾಡದಿರಲಿ, ‘ಪುಣ್ಯ’ವನು ಕಾಡಿಗಟ್ಟದಿರಲಿ.
(ಲೇಖಕರು ನಿವೃತ್ತ ವ್ಯವಸ್ಥಾಪಕರು, ಶಿಕ್ಷಣ ಇಲಾಖೆ)