ಚುನಾವಣಾ ರಾಜಕೀಯದ ಸುತ್ತಮುತ್ತ
ಭಾಸ್ಕರಾಯಣ
ಎಂ.ಕೆ.ಭಾಸ್ಕರ ರಾವ್
ಸ್ನೇಹಪರ ವ್ಯಕ್ತಿತ್ವದ ಅನಂತಕುಮಾರ್ ಹೆಗಡೆ, ಜನರನ್ನು ಮಂತ್ರಮುಗ್ಧರನ್ನಾಗಿಸುವ ಸಾಮರ್ಥ್ಯದ ವಾಕ್ಪಟು. ಆ ದೃಷ್ಟಿಯಿಂದಲೂ ಅವರೊಬ್ಬ ಅಪರೂಪದ ರಾಜಕಾರಣಿ. ಚರ್ಚೆ ಸಂದರ್ಭದಲ್ಲಿ, ಸಾರ್ವಜನಿಕ ವೇದಿಕೆಯಲ್ಲಿ ತಾವೊಬ್ಬ ಜನಪ್ರತಿನಿಧಿ ಎನ್ನುವುದನ್ನು ಕ್ಷಣಾರ್ಧದಲ್ಲಿ ಮರೆಯುವುದು ಅವರ ಬಹುದೊಡ್ಡ ದೌರ್ಬಲ್ಯ.
ಲೋಕಸಭಾ ಚುನಾವಣೆ ಮನೆ ಬಾಗಿಲಿಗೆ ಬಂದು ನಿಂತಿದೆ. ಚುನಾವಣಾ ಆಯೋಗ ದಿನಾಂಕದ ಅಽಸೂಚನೆ ಹೊರಡಿಸುವ ಮುಹೂರ್ತಕ್ಕೆ ಕಾಯುತ್ತಿ ರುವ ಅದು ಆ ಕ್ಷಣದಿಂದಲೇ ಕೋಟಿ ಕೋಟಿ ಮತದಾರ ಭಾರತೀಯರ ನಿರ್ಣಾಯಕ ಆದೇಶಕ್ಕೆ ಮೈಯೆಲ್ಲ ಕಣ್ಣಾಗಿ ಕಾಯಲಿದೆ. ಐದು ವರ್ಷದ ಹಿಂದಿನ ಚುನಾವಣೆಯಲ್ಲಿ ೩೦೦ಕ್ಕೂ ಅಧಿಕ ಸೀಟು ಗೆದ್ದಿರುವ ಬಿಜೆಪಿ/ಎನ್‌ಡಿಎ ಈ ಬಾರಿ ಬಹುಮತದ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಛಲದಲ್ಲಿ ೪೦೦ ಸ್ಥಾನಕ್ಕೆ ಲಗ್ಗೆ ಹಾಕಿದೆ.
ಹಾಗಾಗಿ ಒಂದೊಂದು ಸೀಟೂ ಒಕ್ಕೂಟಕ್ಕೆ ಅತ್ಯಂತ ಮಹತ್ವದ್ದೆನಿಸಿದೆ. ಹಾಗೆಂದೇ ‘ಗೆಲ್ಲುವುದೊಂದೇ ಮಾನದಂಡ’ ಒಕ್ಕೂಟದ ಪಾಲಿಗೆ ಮುಖ್ಯ ವಾಗಿದ್ದು ಗೆಲ್ಲುವ ಕುದುರೆಗಳನ್ನು ಆಯ್ದು ಕಣಕ್ಕಿಳಿಸುವ ಕೆಲಸಕ್ಕೆ ಚಾಲನೆ ದೊರಕಿದೆ. ನರೇಂದ್ರ ಮೋದಿಯವರು ಸ್ವತಃ ಘೋಷಿಸಿಕೊಂಡಿರುವಂತೆ ಮೂರನೇ ಅವಧಿಗೂ ತಾವೇ ಪ್ರಧಾನಿಯಾಗುವ ಅವರ ಮಹತ್ವಾಕಾಂಕ್ಷೆಯೆಂಬ ಅಶ್ವಮೇಧ ಯಾಗದ ಕುದುರೆಯನ್ನು ಕಟ್ಟಿ ಹಾಕಿ ಸೆಡ್ಡು ಹೊಡೆಯುವ ಯತ್ನದಲ್ಲಿ ವಿವಿಧ ವಿರೋಧ ಪಕ್ಷಗಳ ‘ಡಾಟೆಡ್ ಇಂಡಿಯ’ ಒಕ್ಕೂಟ ಸಮರ ಸನ್ನದ್ಧ ಸ್ಥಿತಿಗೆ ತನ್ನನ್ನು ಅಣಿಗೊಳಿಸಿಕೊಳ್ಳುವ ದಿಸೆಯಲ್ಲಿ ಕಾರ್ಯಾ ರಂಭ ಮಾಡಿದೆ.
ಎರಡು ಬಾರಿ ಗೆದ್ದಷ್ಟು ಸುಲಭದಲ್ಲಿ ಮೂರನೇ ಜಯ ಒಲಿಯದು ಎಂಬುದನ್ನು ಎನ್‌ಡಿಎಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ‘ಡಾಟೆಡ್ ಇಂಡಿಯ’ ಬಹುದೂರ ಸಾಗಬೇಕಿರುವುದು ಈ ಕ್ಷಣದ ವಾಸ್ತವ ಹೌದಾದರೂ ಅದರೊಳಗೆ ನಡೆದಿರುವ ಗಂಭೀರ ಚಟುವಟಿಕೆಗಳನ್ನು ನಿರ್ಲಕ್ಷಿಸ ಲಾಗದು. ಕರ್ನಾಟಕದಲ್ಲಿ ಕಳೆದ ಚುನಾವಣೆಯಲ್ಲಿ ೨೮ರಲ್ಲಿ ೨೫ ಸೀಟು ಗೆದ್ದು ದಾಖಲೆ ಬರೆದಿದ್ದ ಬಿಜೆಪಿಯಲ್ಲಿ ಆ ಗೆಲುವಿನ ಪುನರಾವರ್ತನೆ ಮಾಡಿ ಕೊಳ್ಳುವ ವಿಶ್ವಾಸ ಈಗಂತೂ ಕಾಣಿಸುತ್ತಿಲ್ಲ.
ಚುನಾವಣೆ ಹತ್ತಿರ ಹತ್ತಿರವಾಗುತ್ತಿದ್ದಂತೆ ಏನೂ ಆಗಿಬಿಡಬಹುದಾದ ರಾಜಕಾರಣ ನಮ್ಮ ದೇಶದ್ದು. ಏಳೆಂಟು ತಿಂಗಳ ಹಿಂದೆ ರಾಜ್ಯ ವಿಧಾನಸಭೆಗೆನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮುಗ್ಗರಿಸಿದ ವೈಖರಿಯನ್ನು ಸರಿಯಾಗಿ ಅಂದಾಜು ಮಾಡುವವರಿಗೆ ೨೦೧೯ರ ಗೆಲುವು ೨೦೨೪ರಲ್ಲಿ ಮರುಕಳಿಸುವುದು ಕಷ್ಟ ಎನ್ನುವುದು ಮನವರಿಕೆ ಆಗಬಹುದು. ಅಂದು ಹೇಗೋ ಈಗಲೂ ಮೋದಿಯವರು ಬರುತ್ತಾರೆ, ಚುನಾವಣೆಯನ್ನು ಜೈಸಿ ಕೊಡುತ್ತಾರೆಂಬ ಹುಂಬ ವಿಶ್ವಾಸದಲ್ಲಿ ರಾಜ್ಯ ಬಿಜೆಪಿ ಇರುವಂತಿದೆ. ಸ್ಥಳೀಯ ಬಿಜೆಪಿ ನಾಯಕರು ಮತ್ತು ಅವರನ್ನು ನಿತ್ಯವೂ ‘ಹೆಜ್ಜೇನು ಕಡಿದಂತೆ’ ಕುಟುಕುತ್ತಿರುವ ಭಿನ್ನಮತೀಯರು ತಾವು ನೀಡುವ ಹೇಳಿಕೆಯಲ್ಲಿ ಮೋದಿ ಮತ್ತೆ ಪ್ರಧಾನಿ ಆಗಬೇಕು ಎನ್ನುವುದನ್ನು ತುಟಿಯಂಚಿನ ಮಾತಾಗಿ ಹೇಳು ತ್ತಾರೆಯೇ ಹೊರತು, ಆ ನಿಟ್ಟಿನಲ್ಲಿ ಸಂಘಟನೆಯನ್ನು ಬಲಗೊಳಿಸುವ ಕೆಲಸಕ್ಕೆ ಮುಂದಾಗಿರುವ ನಿದರ್ಶನ ಕಾಣಿಸುತ್ತಿಲ್ಲ.
ಭಿನ್ನ ರಾಗವನ್ನು ಶಮನಗೊಳಿಸುವ ಯತ್ನ ರಾಜ್ಯದ ನಾಯಕರಿಂದ ಸಾಧ್ಯವಿಲ್ಲ ಎನ್ನುವುದು ಗೊತ್ತಾದ ಬಳಿಕವೂ ಬಾಯಿಗೆ ಅಕ್ಕಿಕಾಳು ತುಂಬಿ ಕೊಂಡಂತಿರುವ ಪಕ್ಷದ ಹೈಕಮಾಂಡ್ ಮೌನ ವ್ರತಾಚರಣೆ ಮುಂದುವರಿಸಿದೆ. ತನಗೂ ಪಕ್ಷದ ಕರ್ನಾಟಕ ಘಟಕದಲ್ಲಿ ನಡೆದಿರುವ ಘಟನಾವಳಿಗಳಿಗೂ ಸಂಬಂಧವೇ ಇಲ್ಲ ಎಂಬ ಅದರ ಈಗಿನ ನಕಾರಾತ್ಮಕ ಧೋರಣೆ ಭವಿಷ್ಯದಲ್ಲಿ ಮತ್ತೊಮ್ಮೆ ಪಶ್ಚಾತ್ತಾಪಕ್ಕೆ ಕಾರಣವಾದರೆ ಅಚ್ಚರಿಯೇನೂ ಇಲ್ಲ.‘ಗೆಲ್ಲುವುದೊಂದೇ ಮಾನದಂಡ’ ಎಂಬ ಮಾತು ಬಂತಲ್ಲ, ವಿಧಾನಸಭಾ ಚುನಾವಣೆಯಲ್ಲಿ ಹಿರಿಯರನೇಕರನ್ನು ಮೂಲೆಗೆ ತಳ್ಳಿದ ಪಕ್ಷ ೬೬ ಹೊಸ ಮುಖಗಳಿಗೆ ಟಿಕೆಟ್ ನೀಡಿತು. ಅದರಲ್ಲಿ ಗೆದ್ದವರು ೧೫-೧೬ ಜನ ಮಾತ್ರ. ಅದೊಂದೇ ಹೊಡೆತದಲ್ಲಿ ಐವತ್ತು ಶಾಸಕರ ‘ನಷ್ಟ’ ಅನುಭವಿಸಿದ ಪಕ್ಷ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಮಣ್ಣುಮುಕ್ಕಿದ ಅದೇ ಪ್ರಯೋಗವನ್ನು ಮತ್ತೆ ಮಾಡಲಾರದು ಎಂಬ ವಿಶ್ವಾಸ ಹಾಲಿ ಲೋಕಸಭಾ ಸದಸ್ಯರದು.
ತಮಗಲ್ಲದಿದ್ದರೆ ಮಗನಿಗೋ ಮಗಳಿಗೋ ಅಳಿಯನಿಗೋ ಟಿಕೆಟ್ ಕೊಡಿಸುವ ಯತ್ನದಲ್ಲಿ ಅವರೆಲ್ಲರೂ ಬಹಳಷ್ಟು ಮುಂದೆ ಹೋಗಿದ್ದಾರೆ. ವಿಧಾನ ಸಭಾ ಚುನಾವಣೆ ಸೋಲಿನ ಗಾಯವನ್ನು ಇನ್ನೂ ನೆಕ್ಕುತ್ತಿರುವ ಹೈಕಮಾಂಡ್‌ನ ದೌರ್ಬಲ್ಯ ಇವರೆಲ್ಲರ ಶಕ್ತಿ. ಇದೇ ಶಕ್ತಿ ‘ಅಜ್ಞಾತ ವಾಸದಲ್ಲಿದ್ದ’ ಕೆನರಾ ಸಂಸದ ಅನಂತಕುಮಾರ್ ಹೆಗಡೆಯವರ ಏಕಾಏಕಿ ರಂಗಸ್ಥಳ ಪ್ರವೇಶಕ್ಕೂ ಕಾರಣವಾಗಿರುವಂತಿದೆ.
ಉದರ ವೈರಾಗ್ಯ, ಸ್ಮಶಾನ ವೈರಾಗ್ಯ ಮುಂತಾದ ಬಗೆಬಗೆಯ ವೈರಾಗ್ಯದ ಮಾರ್ಗಗಳಿವೆ. ಈ ಸಾಲಿಗೆ ಅನಂತಕುಮಾರ್ ಹೆಗಡೆಯವರು ರಾಜಕೀಯ ವೈರಾಗ್ಯವನ್ನು ಸೇರಿಸಿದ್ದಾರೆ. ೨೦೧೯ರಲ್ಲಿ ಆರನೇ ಬಾರಿಗೆ ಅದರಲ್ಲೂ ದಕ್ಷಿಣ ಭಾರತದಿಂದ ಆಯ್ಕೆಯಾದ ಪಕ್ಷದ ಸಂಸದರಲ್ಲಿ ಅತ್ಯಂತ ದೊಡ್ಡ ಬಹುಮತದೊಂದಿಗೆ ಗೆದ್ದವರು ಹೆಗಡೆ. ಏಳು ಬಾರಿ ಸ್ಪರ್ಧಿಸಿ ಆರು ಗೆಲುವನ್ನು ಮುಡಿಗೇರಿಸಿಕೊಳ್ಳುವುದು ಅಷ್ಟೆಲ್ಲ ಸುಲಭದ್ದಲ್ಲ. ೧೯೯೯ರ ಚುನಾವಣೆ ಯಲ್ಲಿ ಕಾಂಗ್ರೆಸ್‌ನ ಮಾರ್ಗರೆಟ್ ಆಳ್ವಾ ವಿರುದ್ಧ ಒಮ್ಮೆ ಸೋಲಿನ ರುಚಿ ಕಂಡ ಹೆಗಡೆ ನಂತರದಲ್ಲಿ ಕ್ಷೇತ್ರದ ಮತದಾರರ ಮೇಲೆ ಮೋಡಿ ಮಾಡಿ ಕೊಂಡೇ ಬಂದಿದ್ದಾರೆ.
೨೦೧೪ರ ಚುನಾವಣೆ ಹತ್ತಿರ ಬಂದಿತ್ತು. ಮೋದಿಯವರೇ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ/ಎನ್‌ಡಿಎ ಇನ್ನೂ ಘೋಷಿಸಿರಲಿಲ್ಲ. ಅಂಥಒಂದು ದಿವಸ ಜೋಳದ ರೊಟ್ಟಿ ಊಟಕ್ಕೆಂದು ಹೆಗಡೆಯವರ ಜತೆಗೂಡಿದ್ದೆ. ಇನ್ನಿಬ್ಬರು ಅವರ ಆಪ್ತರು. ಊಟ ಮುಗಿಯಿತು, ಹೊರಕ್ಕೆ ಬಂದುಮರದ ನೆರಳಿಗೆ ಮೈಯೊಡ್ಡಿದಾಗ ಲೋಕಾಭಿ ರಾಮದ ಮಾತುಕತೆ ಮುಂದುವರಿಯಿತು. ಚುನಾವಣಾ ರಾಜಕೀಯ ತಮ್ಮಲ್ಲಿ ರೇಜಿಗೆ ಹುಟ್ಟಿಸಿದೆ ಎಂದ ಅವರು ‘ಇನ್ನು ನಾನು ಸ್ಪರ್ಧಿಸೋದಿಲ್ರೀ’  ಎಂದು ತಮ್ಮ ವಿಶಿಷ್ಟ ಶೈಲಿಯಲ್ಲಿ ಹೇಳಿದರು.
ಆ ಮಾತು ಅವರ ಬಾಯಿಂದ ಹೊರಬಿದ್ದಾಗ ಅದಕ್ಕೆ ಮೆತ್ತಿಕೊಂಡಿದ್ದು ಅವರು ಉದ್ದಕ್ಕೂ ಅನುಭವಿಸಿಕೊಂಡು ಬಂದಿರಬಹುದಾದ ರಾಜಕೀಯಅನ್ಯಾಯದ ಲೇಪ. ತಮ್ಮ ರಾಜಕೀಯ ಉತ್ಕರ್ಷಕ್ಕೆ ಅಡ್ಡಿಯಗಿ ನಿಂತಿರುವವರು ಬೆಂಗಳೂರು ದಕ್ಷಿಣ ಸಂಸದ ಅನಂತಕುಮಾರ್ ಎನ್ನುವುದು ಅವರನೋವು. ‘ದೆಹಲಿಗೆ ಹೋದರಲ್ವೇನ್ರೀ ಈ ಕಿರಿಕಿರಿ ಗೋಳು’ ಎಂದು ಬೈಬೈ ಹೇಳಿದರು. ಅದೇ ಸಂಜೆ ಟಿವಿಯೊಂದರ ರಾಜಕೀಯ ಚರ್ಚೆಯಲ್ಲಿ ಬಿಜೆಪಿ ಮುಖಂಡ ಡಾ.ವಾಮನಾಚಾರ್ಯರು ಭೇಟಿಯಾದರು. ಕೆನರಾ ಕ್ಷೇತ್ರದ ಅಭ್ಯರ್ಥಿ ಯಾರೆಂದು ಕೇಳಿದೆ.
‘ನಮಗೆ ಅಭ್ಯರ್ಥಿಯ ಕೊರತೆ ಇಲ್ಲ, ಯಾಕೆ ಈ ಪ್ರಶ್ನೆ?’ ಎಂದರು. ವಿವರಿಸಿದ ಬಳಿಕ ‘ನಮ್ಮ ಪಕ್ಷದಲ್ಲಿ ಅಭ್ಯರ್ಥಿ ನಾನು ಎನ್ನುವವರಿಗೆ ಟಿಕೆಟ್ ಸಿಗೋಲ್ಲ,ಸ್ಪರ್ಧಿಸೋಲ್ಲ ಎಂದವರನ್ನು ಹೋಗಿ ಬಾ ಎಂದು ಕಳಿಸುವುದೂ ಇಲ್ಲ. ಇಷ್ಟಕ್ಕೂ ಚುನಾವಣೆಗೆ ನಿಲ್ಲುವ ಅಥವಾ ನಿಲ್ಲದಿರುವ ನಿರ್ಧಾರ ತೆಗೆದುಕೊಳ್ಳುವುದು ಪಕ್ಷದ ಕಾರ್ಯಕರ್ತರ ಕೈಯಲ್ಲಿಲ್ಲ’ ಎಂದಿದ್ದರು. ಅನಂತಕುಮಾರ್ ಹೆಗಡೆಯವರ ರಾಜಕೀಯ ವೈರಾಗ್ಯದ ಮಾತು ಗಾಳಿಯಲ್ಲಿ ತೂರಿ ಹೋಯಿತು.
೨೦೧೪ರಲ್ಲೂ ಗೆದ್ದರು, ೨೦೧೯ರಲ್ಲೂ ಭರ್ಜರಿ ಗೆಲುವು ಸಾಧಿಸಿದರು. ವ್ಯಕ್ತಿಗತ ನೆಲೆಯಲ್ಲಿ ಸಂಭಾವಿತ-ಸ್ನೇಹಪರ ವ್ಯಕ್ತಿತ್ವದ ಹೆಗಡೆ, ಚೆನ್ನಾಗಿ ಓದಿಕೊಂಡಿರುವ, ಓದಿದ್ದನ್ನು ಜೀರ್ಣಿಸಿಕೊಂಡಿರುವ, ಜನರನ್ನು ಮಂತ್ರಮುಗ್ಧರನ್ನಾಗಿಸುವ ಸಾಮರ್ಥ್ಯದ ವಾಕ್ಪಟು. ಆ ದೃಷ್ಟಿಯಿಂದಲೂ ಅವರೊಬ್ಬ ಅಪರೂಪದ ರಾಜಕಾರಣಿ. ಚರ್ಚೆ ಸಂದರ್ಭದಲ್ಲಿ, ಸಾರ್ವಜನಿಕ ವೇದಿಕೆಯಲ್ಲಿ ತಾವು ಜನಪ್ರತಿನಿಧಿ ಎನ್ನುವುದನ್ನು ಕ್ಷಣಾರ್ಧದಲ್ಲಿ ಮರೆಯುವುದು ಅವರ ಬಹುದೊಡ್ಡ ದೌರ್ಬಲ್ಯ. ಸಿಟ್ಟಿನ ಭರದಲ್ಲಿ ತೋಳ್ಬಲ ಪ್ರದರ್ಶಿಸಿದ ಕು-ಖ್ಯಾತಿಯೂ ಅವರದು. ಇಂಥದಕ್ಕೆಲ್ಲ ಅವರು ತೆತ್ತುಕೊಂಡು ಬಂದಿರುವ ಬೆಲೆ ಬಹು ದುಬಾರಿಯದು.
ಅವರದು ಡೋಂಟ್ ಕೇರ್ ಮನಃಸ್ಥಿತಿ.೨೦೧೯ರಲ್ಲಿ ಆಯ್ಕೆಯಾದ ಅವರನ್ನು ಮೋದಿ ಸಂಪುಟಕ್ಕೆ ಕೌಶಲಾಭಿವೃದ್ಧಿ ಸಚಿವರನ್ನಾಗಿ ಸೇರಿಸಿಕೊಳ್ಳ ಲಾಯಿತು. ಮಂತ್ರಿಗಿರಿಯ ಮಹತ್ವ ಅರಿತು ನಾಲಗೆ ನಿಯಂತ್ರಣ ಸಾಧಿಸಿದ್ದರೆ ಕ್ಯಾಬಿನೆಟ್ ದರ್ಜೆಗೆ ಬಡ್ತಿ ಪಡೆಯುತ್ತಿದ್ದರಷ್ಟೇ ಅಲ್ಲ, ಇವತ್ತು ಮಹತ್ವದ ಖಾತೆ ಹೊಂದಿರುವ ಪ್ರಹ್ಲಾದ ಜೋಷಿಯವರ ಬುಡ ಇಷ್ಟೆಲ್ಲ ಭದ್ರವಾಗುವುದು ಸಾಧ್ಯವಿರಲಿಲ್ಲ. ಸಂವಿಧಾನದ ಬಗ್ಗೆ ಆಡಿದ ಮಾತು, ಮಹಾತ್ಮ ಗಾಂಧಿ ವಿಚಾರದಲ್ಲಿ ವಿಷ ಕಾರಿಕೊಂಡ ಬಗೆಯೇ ಮುಂತಾದವು ಅವರ ರಾಜಕೀಯಕ್ಕೆ ಮೋಕ್ಷ ಕಾಣದ ಗ್ರಹಣವಾದವು. ಅವರ ಇನ್ನೊಂದು ದೌರ್ಬಲ್ಯ ವೆಂದರೆ ಚುನಾವಣೆ ಹತ್ತಿರ ಬಂತೆನ್ನುವಾಗ ಹೊರ ಜಗತ್ತಿಗೆ ಮುಖ ತೋರಿಸಿ ಒಂದಿಷ್ಟು ವಿವಾದ ಸೃಷ್ಟಿಸಿ ಹಿಂದೂ ವೋಟು ಆಚೆ-ಈಚೆ ಹೋಗದಂತೆ ಮಾಡಿ, ‘ಅನಂತಕುಮಾರ್ ಹೆಗಡೆ ಕೆನರಾ ಕ್ಷೇತ್ರದಲ್ಲಿ ಗೆಲ್ಲುವ ಕುದುರೆ’ ಎಂಬ ಹವಾ ಏಳಿಸಿ ಪಕ್ಷದ ಉನ್ನತ ಮಟ್ಟದವರೆಗೂ ಅದು ಮುಟ್ಟುವಂತೆ ಮಾಡುವುದು.
ಆರನೇ ಬಾರಿ ಚುನಾವಣೆ ಗೆದ್ದ ತರುವಾಯದಲ್ಲಿ ‘ಅನಂತಕುಮಾರ್ ಹೆಗಡೆಯವರು ಎಲ್ಲಿ?’ ಎಂದು ದುರ್ಬೀನು ಹಾಕಿ ನೋಡಿದವರು ಆ ಪಕ್ಷದಲ್ಲೇ ಇದ್ದಾರೆ. ವಿಧಾನಸಭೆ ಚುನಾವಣೆ ಸಮಯದಲ್ಲಿ ಅಂಕೋಲೆಯಲ್ಲಿ ಪ್ರಧಾನಿಯವರ ರ‍್ಯಾಲಿ ನಡೆಯಿತಾದರೂ ಕ್ಷೇತ್ರದ ಸಂಸದರಾಗಿ ಅನಂತ್ ಅದರಿಂದ ದೂರವೇ ಉಳಿದರು. ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡದೇ ತಟಸ್ಥರಾದ ಹೆಗಡೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಹೊಂದಿದ್ದ ಪ್ರಭಾವತಗ್ಗಲು ಕಾರಣರಾದರು ಎಂಬ ಆರೋಪವೂ ಕೇಳಿಬಂತು. ಹೆಗಡೆ ಯಾವುದಕ್ಕೂ ಪ್ರತಿಕ್ರಿಯಿಸಲಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಎಂಬ ಕಾರಣಕ್ಕೆ ಪಕ್ಷದ ಶಿಸ್ತು ಸಮಿತಿ ಅವರಿಗೆ ಕಾಟಾಚಾರದ ನೋಟಿಸನ್ನೂ ನೀಡಲಿಲ್ಲ.
ತೀರಾ ಆಪ್ತರ ಜತೆ ಮಾತಾಡುವಾಗ ಅನಾರೋಗ್ಯವೇ ರಾಜಕೀಯದಿಂದ ತಾವು ದೂರ ಸರಿಯುವುದಕ್ಕೆ ಕಾರಣವೆಂಬ ವೈರಾಗ್ಯದ ಸಬೂಬು ಹೇಳಿ ನಂಬಿಸಿದರು. ಇದನ್ನು ನಂಬಿದ ಅವರ ಬೆಂಬಲಿಗರೆಲ್ಲರ ಆಶ್ಚರ್ಯ ಎಲ್ಲ ಎಲ್ಲೆ ಮೀರಿದೆ. ‘ಕಾರ್ಯಕರ್ತರ ಆಶಯಕ್ಕೆ ವಿರುದ್ಧ ಹೋದರೆ ಅದು ಮೂರ್ಖತನವಾಗುತ್ತದಲ್ವೇನ್ರೀ’ ಎನ್ನುವ ಮೂಲಕ ಅವರು ರಣಕ್ಷೇತ್ರದಲ್ಲಿ ತಮ್ಮ ಇರುವಿಕೆಯನ್ನು ಸಾರಿದ್ದಾರೆ. ಕೆನರಾದಲ್ಲಿ ಬಿಜೆಪಿ ಅಭ್ಯರ್ಥಿ ಯಾರೆಂಬ ವಿಚಾರದಲ್ಲಿ ಹತ್ತಾರು ಹೆಸರುಗಳು ಓಡಾಡುತ್ತಿವೆ. ಅದರಲ್ಲಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ ಜೋಷಿ ಅವರ  ಹೆಸರೂ ಸೇರಿವೆ. ಕೆಲವು ಸ್ಥಳೀಯ ಹೆಸರುಗಳೂ ತೇಲುತ್ತಿವೆ.
ಮೋದಿಯವರನ್ನು ಭೇಟಿ ಮಾಡಲು ‘ನಿರಾಕರಿಸಿದ್ದ’ ಹೆಗಡೆ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರರನ್ನು ಭೇಟಿ ಮಾಡಿರುವುದರ ಹಿಂದೆರಾಜಕೀಯ ಹೊರತಾಗಿ ಬೇರೆ ಉದ್ದೇಶ ಇರುವುದು ಸಾಧ್ಯವೇ ಇಲ್ಲ. ವಿಧಾನಸಭೆ ಚುನಾವಣೆ ಬಳಿಕ ಪಕ್ಷ ವಿರೋಽ ಚಟುವಟಿಕೆ ಆರೋಪದ ಮೇಲೆ ಸಸ್ಪೆಂಡ್ ಆಗಿದ್ದ ತಮ್ಮ ಬೆಂಬಲಿಗರನ್ನೆಲ್ಲ ಅವೇ ಅವೇ ಹುದ್ದೆಯಲ್ಲಿ ತಮ್ಮ ಪ್ರಭಾವ ಬಳಸಿ ಮರುಸ್ಥಾಪನೆ ಮಾಡಿಸಿರುವ ಹೆಗಡೆ, ಮೊದಲ ಚುನಾ ವಣಾ ದಾಳವನ್ನು ಉರುಳಿಸಿ ಕ್ಷೇತ್ರದಲ್ಲಿ ತಮ್ಮ ಪಕ್ಷದೊಳಗೇ ಇರುವ ವಿರೋಧಿಗಳ ಬಾಯಿ ಬಂದ್ ಮಾಡುವ ಯತ್ನವನ್ನು ಕೈಗೆತ್ತಿಕೊಂಡಿದ್ದಾರೆ.
ಕ್ಷೇತ್ರದಲ್ಲಿ ಅನಂತ್ ಕುಮಾರ್ ಹೆಗಡೆಯವರಿಗೆ ಪರ್ಯಾಯ ಇಲ್ಲವೆಂಬ ಅನಂತ್ ಸೃಷ್ಟಿಯ ಹವಾಕ್ಕೆ ಹೈಕಮಾಂಡ್ ಮಣಿಯುತ್ತದೋ ಇಲ್ಲವೋ ಈಗಲೇ ಕಣಿ ಹೇಳಲಾಗದು. ಒಂದು ವೇಳೆ, ಗೆಲ್ಲುವುದೊಂದೇ ಮಾನದಂಡ ಎಂಬ ಲೆಕ್ಕಾಚಾರದಲ್ಲಿ ಓಡುವ ಕುದುರೆಯಾಗಿ ಹೆಗಡೆ ಆಯ್ಕೆಯಾದರೆ, ಪಕ್ಷದ ಆ ಆಯ್ಕೆ ಚುನಾವಣಾ ಪ್ರಕ್ರಿಯೆಯಲ್ಲಿ ಊರ್ಜಿತವಾದರೆ ಕೆನರಾ ಕ್ಷೇತ್ರದ ಗೆಲುವು ಮೋದಿಯವರದೂ ಆಗದೆ ಪಕ್ಷದ್ದೂ ಆಗದೆ ಕೇವಲ ಅನಂತ್ಕುಮಾರ್ ಹೆಗಡೆಯವರದಷ್ಟೇ ಆಗಿರಲಿದೆ. ಮತದಾರರ ರೂಪದಲ್ಲಿ ಅದೃಷ್ಟ ಒಲಿದು ಗೆದ್ದರೆ ಮತ್ತೊಂದು ಲೋಕಸಭಾ ಚುನಾವಣೆ ಬರುವವರೆಗೆ ಅಜ್ಞಾತವಾಸಕ್ಕೆ ಅವರು ಮರಳುತ್ತಾರೆ; ಶಂಕೆ ಬೇಡ.