ಚಿಟ್‌ಚಾಟ್ ವಿತ್ ರಾಮ
ಮಂಡಕ್ಕಿ-ಮಿರ್ಚಿ
ಕೃಷ್ಣಾನಂದ ಶರ್ಮ
ಐದು ಶತಮಾನಗಳ ಬಳಿಕ ಶ್ರೀರಾಮ ಅಯೋಧ್ಯೆಯ ಭವ್ಯಮಂದಿರದಲ್ಲಿ ವಿರಾಜಮಾನನಾಗಿದ್ದಾನೆ. ಕೋಟ್ಯಂತರ ಜನರ ಕನಸು ನನಸಾಗಿದೆ. ಅಕಸ್ಮಾತ್ ಈ ಹೊತ್ತಿನಲ್ಲಿ ವ್ಯಕ್ತಿಯೊಬ್ಬನಿಗೆ ಮಂದಿರದ ಪಡಸಾಲೆಯಲ್ಲಿ ರಾಮ ಎದುರಾಗಿ ಮಾತನಾಡಲು ಸಿಕ್ಕಿ, ಆತನ ಪ್ರಶ್ನೆಗಳಿಗೆ ಉತ್ತರಿಸಲು ನಿಂತರೆ ಹೇಗಿರುತ್ತದೆ? ರಾಮನ ವ್ಯಕ್ತಿತ್ವ, ಮಾತು, ಅವನ ಕುರಿತ ಪ್ರಾಚೀನ ಕೃತಿ ಗಳನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಕಾಲ್ಪನಿಕ ಸಂದರ್ಶನವಿದು.
? ವ್ಯಕ್ತಿ: ಈ ಬಾರಿ ಅಯೋಧ್ಯೆಗೆ ತಡವಾಗಿ ಬಂದೆ ಅನ್ನಿಸಿಲ್ವಾ?? ರಾಮ: ನಾನು ಎಂದೂ ತಡಮಾಡುವುದಿಲ್ಲ. ನೀವು ಕರೆಯುವುದು ತಡವಾಯಿತಷ್ಟೇ. ಹಿಂದೆ ರಾವಣನ ಪೀಡನೆಯನ್ನು ಎಷ್ಟೋ ವರ್ಷಗಳು ಅನುಭ ವಿಸಿದ ಬಳಿಕ ದೇವತೆಗಳೆಲ್ಲ ಸೇರಿ ಕರೆದರು. ಜತೆಗೆ ನಾನು ಬರಲು ಬೇಕಾದ ವ್ಯವಸ್ಥೆ ಮಾಡಿದ್ದರು. ಹಾಗಾಗಿ ಓಡೋಡಿ ಬಂದೆ. ಈಗಲೂ ಅಷ್ಟೆ, ನನಗೆ ಬೇಕಾದ ವ್ಯವಸ್ಥೆ ಮಾಡಿ ಕರೆದಿರಿ, ಓಡೋಡಿ ಬಂದೆ.
? ವ್ಯಕ್ತಿ: ಬಂದಾಯಿತು, ಇನ್ನುನಿನ್ನ ಕನಸೇನು?? ರಾಮ: ಎಲ್ಲರೂ ಧರ್ಮದ ಹಾದಿಯಲ್ಲಿ, ಸುಖ-ಸಂತೋಷದಿಂದ, ಯಾರನ್ನೂ ನೋಯಿಸದೆ ಬಾಳಬೇಕು. ರೋಗಬಾಧೆ, ಚೋರಭಯ ಯಾರಿಗೂ ಇರಬಾರದು. ಹಿರಿಯರು ಕಿರಿಯರ ಅಂತ್ಯಸಂಸ್ಕಾರ ಮಾಡುವ ಸಂದರ್ಭ ಒದಗಬಾರದು. ಕಾಲಕಾಲಕ್ಕೆ ಮಳೆಯಾಗಿ ಇಡೀ ರಾಷ್ಟ್ರವೇ ಫಲ ಪುಷ್ಪ, ಬೆಳೆಗಳಿಂದ ಕಂಗೊಳಿಸಬೇಕು. ಎಲ್ಲರೂ ತಂತಮ್ಮ ಕರ್ತವ್ಯದಲ್ಲಿ ನಿರತರಾಗಿ ರಬೇಕು. ಸುಳ್ಳು ಎಂದೂ ಹತ್ತಿರ ಸುಳಿಯ ಬಾರದು.
? ವ್ಯಕ್ತಿ: ಅಂದರೆ ರಾಮರಾಜ್ಯ ಆಗಬೇಕಾ?? ರಾಮ: ಹೀಗಿದ್ದರೆ ಜನರು ರಾಮರಾಜ್ಯ ಎನ್ನುತ್ತಾರಂತೆ.
? ವ್ಯಕ್ತಿ: ರಾವಣನ ಮೇಲೆಇನ್ನೂ ಸಿಟ್ಟಿದೆಯಾ?? ರಾಮ: ಖಂಡಿತ ಇಲ್ಲ, ಸಾವಿನ ಬಳಿಕ ಶತ್ರುತ್ವ ಸಲ್ಲ. ರಾವಣನ ಹನನವಾದಾಗ ವಿಭೀಷಣನಿಗೆ ಆತನ ಅಂತ್ಯಸಂಸ್ಕಾರ ಮಾಡಲು ಹೇಳುವಾಗ, ‘ಶತ್ರುತ್ವ ಸಾವಿನ ತನಕ ಮಾತ್ರ ಇರುತ್ತದೆ. ಇನ್ನುಮೇಲೆ, ನಿನಗೆ ರಾವಣ ಹೇಗೋ ನನಗೂ ಹಾಗೆಯೇ’ ಎಂದಿದ್ದೆ.
? ವ್ಯಕ್ತಿ: ಆದರೂ ರಾವಣ ಒಳ್ಳೆಯವನೇಅಂತಾರಲ್ಲ? ಸೀತೆಯನ್ನು ಅಪಹರಿಸಿಅಶೋಕ ವನದಲ್ಲಿಟ್ಟರೂ ಒಮ್ಮೆಯೂಅನುಚಿತವಾಗಿ ವರ್ತಿಸಲಿಲ್ಲವಲ್ಲ?? ರಾಮ: ಅದಕ್ಕೆ ಕಾರಣ ಅವನ ಮನಸ್ಸಲ್ಲ, ಅವನಿಗಿದ್ದ ಶಾಪ. ರಂಭೆಯ ಎದುರು ಅನಾಚಾರವೆಸಗಿದಾಗ, ನಳಕೂಬರ, ‘ಇನ್ನೊಮ್ಮೆ ಒಪ್ಪಿಗೆ ಇಲ್ಲದೆ ಮುಟ್ಟಿದರೆ ತಲೆ ಹೋಳಾಗುವುದು’ ಅಂತ ಶಾಪ ಕೊಟ್ಟಿದ್ದ. ಅದು ಕಾರಣ.
? ವ್ಯಕ್ತಿ: ನೀ ರಾಜನಾಗು ಎಂದಾಗಲೂ,ಕಾಡಿಗೆ ಹೋಗು ಎಂದಾಗಲೂ ಒಂದೇರೀತಿ ಇದ್ದೆಯಲ್ಲ, ಹೇಗೆ?? ರಾಮ: ಅವೆರಡೂ ಸುಖ-ದುಃಖದ ವಿಚಾರವಲ್ಲ. ರಾಜನಾಗು ಎಂದರೆ ರಾಜ್ಯದ ಪ್ರತಿ ಜೀವಿಯ ಯೋಗಕ್ಷೇಮದ ಹೊಣೆ, ಕಾಡಿಗೆ ಹೋಗು ಎಂದಾಗಪಿತೃವಾಕ್ಯಪರಿಪಾಲನೆಯ ಹೊಣೆ.
? ವ್ಯಕ್ತಿ: ಆ ಸಮಯದಲ್ಲೂಸಕಾರಾತ್ಮಕವಾಗಿ ಇದ್ದದ್ದು ಹೇಗೆ ಅಂತ?? ರಾಮ: ಭರತನಿಗೆ ಇಡೀ ರಾಷ್ಟ್ರದ ಹೊಣೆ ಹೊರೆಸಿ, ನನಗೆ ‘ನಿನ್ನನ್ನು ನೀನು ರಕ್ಷಿಸಿ ಕೊಂಡಿರು’ ಎಂದು ಕೈಕೇಯಿ ನನಗೆ ಒಳಿತೇ ಮಾಡಿದಳಲ್ಲವೇ?
? ವ್ಯಕ್ತಿ: ಕಾಡಿಗೆ ಹೊರಟಾಗ ಕೈಕೇಯಿ ಬಗ್ಗೆನಿನಗಿದ್ದ ಭಾವ?? ರಾಮ: ಆತಂಕ
?ವ್ಯಕ್ತಿ: ಯಾಕೆ?
? ರಾಮ: ಸಿಟ್ಟಿನಿಂದ ಅಯೋಧ್ಯೆಯ ಜನರು ಆಕೆಯನ್ನು ಅವಮಾನಿಸಿದರೆ ಅಂತ. ಹಾಗಾಗಿಯೇ ಭರತ ಕಾಡಿಗೆ ಬಂದಾಗ, ‘ಕೈಕೇಯಿಯನ್ನು ಸರಿಯಾಗಿನೋಡಿಕೋ’ ಎಂದು ಹೇಳಿದ್ದೆ.
? ವ್ಯಕ್ತಿ: ಜಟಾಯು ಅತ್ಯಮೂಲ್ಯಪ್ರಾಣವನ್ನೇ ಸೀತೆಯ ರಕ್ಷಣೆಗಾಗಿಕೊಟ್ಟ ಅಲ್ವಾ?? ರಾಮ: ಹೌದು, ಹಾಗಾಗಿಯೇ ನಾನು ತಂದೆ ದಶರಥನಿಗೆ ಮಾಡಲಾಗದ ಅಂತ್ಯ ಸಂಸ್ಕಾರವನ್ನು ಆತನಿಗೆ ಮಾಡಿದೆ.
? ವ್ಯಕ್ತಿ: ಸರಿಯಪ್ಪ, ನೀನು ಯಾವ ಪ್ರಶ್ನೆಕೇಳಿದರೂ ಪಟಪಟನೇ ಉತ್ತರಿಸ್ತೀಯಾ.ಅದಕ್ಕೇ ಇರಬೇಕು ವಾಲ್ಮೀಕಿಗಳು ನಿನ್ನನ್ನು‘ವಾಗ್ಮಿ’ ಅಂತ ಕರೆದದ್ದು. ಈಗ ಮುಂದಿನಪ್ರಶ್ನೆಗಳಿಗೆ ಒಂದೇ ಪದದಲ್ಲಿಉತ್ತರಿಸಬೇಕು.
? ರಾಮ: ಸರಿ
? ವ್ಯಕ್ತಿ: ನಿನಗಾಗಿ ಅಷ್ಟೆಲ್ಲ ಹೋರಾಡಿದಆಂಜನೇಯನಿಗೆ ಏನನ್ನು ಕೊಟ್ಟೆ?? ರಾಮ: ನನ್ನನ್ನೇ!
? ವ್ಯಕ್ತಿ: ಚತುರಂಗಬಲಯುತನಾದ ರಾವಣನನ್ನು ಎದುರಿಸುವಾಗ ನಿನ್ನಲ್ಲಿದ್ದುದು ಕಪಿಸೈನ್ಯ ಮಾತ್ರ. ಅವನೆದುರು ಗೆಲ್ಲುವಂಥದ್ದುನಿನ್ನಲ್ಲೇನಿತ್ತು?? ರಾಮ: ಧರ್ಮ
? ವ್ಯಕ್ತಿ: ರಾವಣನನ್ನು ಸಾಯಿಸಿದ್ದು ನಿಜವಾಗಲು ಯಾರು?? ರಾಮ: ಕಾಮ
? ವ್ಯಕ್ತಿ: ಪಿತೃವಾಕ್ಯಪಾಲನೆಗಾಗಿ ವನವಾಸದಲ್ಲಿ ಅಷ್ಟೆಲ್ಲ ಕಷ್ಟಪಟ್ಟೆಯಲ್ಲ, ನಿನಗೇನುಸಿಕ್ಕಿತು?? ರಾಮ: ಆತ್ಮತೃಪ್ತಿ
? ವ್ಯಕ್ತಿ: ಸುಗ್ರೀವ?? ರಾಮ: ಪರಮಮಿತ್ರ
? ವ್ಯಕ್ತಿ: ಸೀತೆ?? ರಾಮ: ಬಾಹ್ಯಪ್ರಾಣ
? ವ್ಯಕ್ತಿ: ಆಂಜನೇಯ?? ರಾಮ: ನಾನು
(ಲೇಖಕರು ಹವ್ಯಾಸಿ ಬರಹಗಾರರು)