ಭಾರತವೆಂಬ ಗಣರಾಜ್ಯದಲ್ಲಿ ನಮ್ಮ ಯೋಗ್ಯತೆಯೆಷ್ಟು ?
ಸಂಗತ
ಡಾ.ವಿಜಯ್ ದರಡಾ
ಪ್ರಜಾಪ್ರಭುತ್ವದಲ್ಲಿ ಅಥವಾ ಯಾವುದೇ ಗಣರಾಜ್ಯದಲ್ಲಿ ಮತದಾರರೇ ಪ್ರಭುಗಳು. ಎಲ್ಲಾ ಸರಕಾರಗಳ ಮೊದಲ ಆದ್ಯತೆಯೂ ಜನ ಸಾಮಾನ್ಯರ ಜೀವನದ ಗುಣಮಟ್ಟವನ್ನು ಹೆಚ್ಚಿಸುವುದೇ ಆಗಿರಬೇಕು ಎಂಬುದರಲ್ಲಿ ಯಾವುದೇ ಅನುಮಾನ ಬೇಡ. ಆದರೆ, ಪ್ರಜಾ ಪ್ರಭುತ್ವದ ವ್ಯವಸ್ಥೆಯೊಳಗೆ ಅವ್ಯವಹಾರಗಳು ಮತ್ತು ಭ್ರಷ್ಟಾಚಾರ ನಡೆಯತೊಡಗಿದರೆ ಅದರ ಪರಿಣಾಮವನ್ನು ಕೂಡ ಜನಸಾಮಾನ್ಯರೇ ಉಣ್ಣಬೇಕಾಗುತ್ತದೆ.
ಇತ್ತೀಚೆಗೆ ಮಧ್ಯಪ್ರದೇಶದಿಂದ ಬಂದ ಒಂದು ಸುದ್ದಿ ಗಮನ ಸೆಳೆದಿತ್ತು. ಅಲ್ಲಿನ ಶಾಜಾಪುರದಲ್ಲಿ ಕೆಲಸ ಮಾಡುವ ಕಿಶೋರ್ ಕನ್ಯಾಲ್ ಎಂಬ ಐಎಎಸ್ಅಧಿಕಾರಿಯೊಬ್ಬರು ಒಬ್ಬ ಟ್ರಕ್ ಡ್ರೈವರ್ ಬಳಿ ‘ನಿನ್ನ ಯೋಗ್ಯತೆಯೇನು?’ ಎಂದು ಕೇಳಿ ಕೂಗಾಡಿದ ವಿಡಿಯೋ ವೈರಲ್ ಆಗಿತ್ತು. ಸಾರಿಗೆ ಸಂಘಟನೆಗಳ ಜತೆ ಸಭೆ ನಡೆಸುವಾಗ ಐಎಎಸ್ ಅಧಿಕಾರಿ ಈ ಪ್ರಶ್ನೆ ಕೇಳಿದ್ದರು. ನಂತರ ಈ ವಿಷಯ ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ.ಮೋಹನ್ ಯಾದವ್ ಅವರ ಗಮನಕ್ಕೂ ಬಂತು. ಅವರು ವಿಡಿಯೋ ನೋಡಿದವರೇ ತಡ ಮಾಡಲಿಲ್ಲ.
ಜಿಲ್ಲಾಧಿಕಾರಿ ಹುದ್ದೆಯಿಂದ ಕಿಶೋರ್ ಕನ್ಯಾಲ್‌ರನ್ನು ಸಸ್ಪೆಂಡ್ ಮಾಡಿದರು. ನಂತರ ಮಾಧ್ಯಮದವರು ಆ ಡ್ರೈವರ್ ಬಳಿ ಹೋಗಿ ಘಟನೆ ಬಗ್ಗೆ ಅಭಿ ಪ್ರಾಯ ಕೇಳಿದರು. ಆ ಮನುಷ್ಯ ಬಹಳ ಸರಳವಾಗಿ ಉತ್ತರಿಸುತ್ತಾ ಒಂದು ಗಂಭೀರ ಜಿಜ್ಞಾಸೆಯನ್ನೇ ನಮ್ಮ ಮುಂದಿಟ್ಟರು. ಆತ ಹೇಳಿದ್ದೇನು ಗೊತ್ತಾ? ‘ನಿಜ ಕಣ್ರೀ. ನಾವೆಲ್ಲರೂ ನಮ್ಮ ಯೋಗ್ಯತೆ ಏನು ಎಂಬ ಪ್ರಶ್ನೆ ಕೇಳಿಕೊಳ್ಳಬೇಕು!’. ಈ ಘಟನೆಯನ್ನು ನೋಡಿದಾಗ ನನಗೆ ಇಂಥದ್ದೇ ಇನ್ನೊಂದು ಘಟನೆ ನೆನಪಾಗುತ್ತದೆ. ‘ಲೋಕಮತ್ ಮಹಾ ರಾಷ್ಟ್ರಿಯನ್ ಆ- ದ ಇಯರ್’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ನಟ ನಾನಾ ಪಾಟೇಕರ್ ಭಾಗವಹಿಸಿ ದ್ದರು.
ಅಲ್ಲಿ ಅವರು ಮುಖ್ಯಮಂತ್ರಿ ಏಕನಾಥ್ ಶಿಂದೆ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬಳಿ ನೇರವಾಗಿ ‘ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮಂಥ ಮತದಾರರಿಗೆ ಏನಾದರೂ ಬೆಲೆ ಇದೆಯಾ?’ ಎಂದು ಕೇಳಿದ್ದರು. ನಾಳೆ (ಜ.೨೬) ನಾವು ದೇಶದ ೭೪ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಅದರೊಂದಿಗೆ ಸ್ವಾತಂತ್ರ್ಯೋತ್ಸವದ ‘ಅಮೃತ ಕಾಲ’ದ ೭೫ನೇ ಗಣರಾಜ್ಯದ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಈ ಸಂದರ್ಭದಲ್ಲಿ ನಾವೆಲ್ಲರೂ ನಮಗೇ ಒಂದು ಪ್ರಶ್ನೆ ಕೇಳಿಕೊಳ್ಳಬೇಕಾಗಿದೆ. ಭಾರತವೆಂಬ ಸಾರ್ವಭೌಮ ಸ್ವತಂತ್ರ ಗಣರಾಜ್ಯದಲ್ಲಿ ಒಬ್ಬ ಜನಸಾಮಾನ್ಯನ ನಿಜವಾದಯೋಗ್ಯತೆ ಏನು? ಅವನಿಗೆ ನಿಜವಾಗಿಯೂ ಎಷ್ಟು ಬೆಲೆಯಿದೆ? ಇದರ ಬಗ್ಗೆ ಚರ್ಚಿಸುವುದಕ್ಕೂ ಮುನ್ನ ಇನ್ನೊಂದು ವಿಷಯವನ್ನು ನಾನಿಲ್ಲಿ ಪ್ರಸ್ತಾಪಿಸಬೇಕು.
ಜಗತ್ತಿಗೆ ‘ಗಣರಾಜ್ಯ’ ಎಂಬ ವ್ಯವಸ್ಥೆಯ ಉಡುಗೊರೆ ನೀಡಿದ್ದೇ ಭಾರತ. ‘ರಿಪಬ್ಲಿಕನಿಸಮ್’ ಎಂಬ ಸಿದ್ಧಾಂತವನ್ನು ನಮ್ಮ ಪ್ರಾಚೀನರು ಹುಟ್ಟು ಹಾಕಿ ದ್ದರು. ಸುಮಾರು ೨೫೦೦ ವರ್ಷಗಳ ಹಿಂದೆ ವೈಶಾಲಿಯ ರಾಜ ಲಿಚ್ಚವಿ ಈ ಗಣರಾಜ್ಯ ವ್ಯವಸ್ಥೆಯನ್ನು ಮೊಟ್ಟಮೊದಲು ಸ್ಥಾಪಿಸಿದ್ದ. ವಿಶ್ವ ಸಂಸ್ಥೆಯಲ್ಲಿ ಮಾತನಾಡು ವಾಗ ಪ್ರಧಾನಿ ನರೇಂದ್ರ ಮೋದಿ ಕೂಡ ಲಿಚ್ಚವಿ ಗಣರಾಜ್ಯದ ಬಗ್ಗೆ ಪ್ರಸ್ತಾಪ ಮಾಡಿದ್ದರು. ಅದೇನೇ ಇದ್ದರೂ ನಾವೀಗ ಇತಿಹಾಸದ ಸಮುದ್ರದಲ್ಲಿ ಈಜಾಡಲು ಹೋಗದೆ ಇಂದಿನ ಪರಿಸ್ಥಿತಿಯನ್ನು ಅವಲೋಕನ ಮಾಡೋಣ.
ತಾತ್ವಿಕವಾಗಿ ಹೇಳುವುದಾದರೆ ಪ್ರಜಾಪ್ರಭುತ್ವದಲ್ಲಿ ಅಥವಾ ಯಾವುದೇ ಗಣರಾಜ್ಯದಲ್ಲಿ ಮತದಾರರೇ ಪ್ರಭುಗಳು. ಪ್ರಜಾಪ್ರಭುತ್ವದ ಮೂಲ ತಿರುಳು ಹಾಗೂ ಗಣರಾಜ್ಯ ವ್ಯವಸ್ಥೆಯ ಸೈದ್ಧಾಂತಿಕ ಮೂಲಬಿಂದು ಜನಸಾಮಾನ್ಯನೇ ಆಗಿದ್ದಾನೆ. ಈ ವ್ಯವಸ್ಥೆಯಲ್ಲಿ ನಾವು ಮತದಾರರು ಯಾರನ್ನು ಬೇಕಾ ದರೂ ಅಧಿಕಾರದ ಕುರ್ಚಿಯಲ್ಲಿ ಕುಳ್ಳಿರಿಸಬಹುದು ಹಾಗೂ ಯಾರು ಅಲ್ಲಿ ಕುಳಿತುಕೊಳ್ಳಲು ಯೋಗ್ಯನಲ್ಲ ಎಂದು ನಮಗೆ ಅನ್ನಿಸುತ್ತದೆಯೋ ಅವನನ್ನು ಅಲ್ಲಿಂದ ಕೆಳಗಿಳಿಸಬಹುದು.
ಮತದಾರರಿಗೆ ಇರುವ ಈ ಶಕ್ತಿ ಏನೆಂಬುದು ಆತ ಸಿಟ್ಟಿಗೆದ್ದಾಗ ಎಲ್ಲರಿಗೂ ಚೆನ್ನಾಗಿ ಅರಿವಾಗುತ್ತದೆ. ಮತದಾರರಿಗೂ ತಮ್ಮ ಶಕ್ತಿ ಹಾಗೂ ಸಾಮರ್ಥ್ಯ ವೇನು ಎಂಬುದು ಚೆನ್ನಾಗಿ ತಿಳಿದಿದೆ. ಆದರೆ ಸಮಸ್ಯೆ ಬರುವುದು ಯಾವಾಗ ಗೊತ್ತಾ? ಮತದಾರ ಒಮ್ಮೆ ನಾಯಕನನ್ನು ಆರಿಸಿ ಕಳುಹಿಸಿದ ನಂತರದ ಐದು ವರ್ಷಗಳ ಅವಧಿಯಿದೆಯಲ್ಲ, ಆ ಎರಡು ಚುನಾವಣೆಗಳ ನಡುವಿನ ಅವಧಿಯಲ್ಲಿ ಸರಕಾರ ತನಗೆ ಹೇಗೆ ಬೇಕೋ ಹಾಗೆ ವರ್ತಿಸಿದರೆ ಅಥವಾ ಜನಹಿತ ಮರೆತು ತನ್ನ ಅಜೆಂಡಾಕ್ಕೆ ತಕ್ಕಂತೆ ನಡೆದುಕೊಂಡರೆ ಮತದಾರ ಏನು ಮಾಡಬೇಕು? ಎರಡು ಚುನಾವಣೆಗಳ ನಡುವಿನ ಈ ಅವಧಿಯಲ್ಲಿ ಮತದಾರನ ಪಾತ್ರ ಏನು? ಅಥವಾ ಐಎಎಸ್ ಅಧಿಕಾರಿ ಕಿಶೋರ್ ಕನ್ಯಾಲ್ ಸಾಹೇಬರ ಭಾಷೆಯಲ್ಲೇ ಕೇಳುವುದಾದರೆ ‘ಐದು ವರ್ಷಗಳ ನಡುವಿನ ಸಮಯದಲ್ಲಿ ಮತದಾರನ ಯೋಗ್ಯತೆ ಏನು?’.
ಒಂದು ರೀತಿಯಲ್ಲಿ ನಾನು ಅದೃಷ್ಟವಂತ. ದೇಶದ ಆಡಳಿತ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಾನು ಮೂರು ರೀತಿಯಲ್ಲಿ ನೋಡಿ ಅರ್ಥಮಾಡಿಕೊಂಡಿದ್ದೇನೆ. ಮೊದಲನೆಯದಾಗಿ ನಾನೊಬ್ಬ ಸಾಮಾನ್ಯ ಮತದಾರ. ಎರಡನೆಯದಾಗಿ ನಾನೊಬ್ಬ ರಾಜಕಾರಣಿ. ಮೂರನೆಯದಾಗಿ ನಾನೊಬ್ಬ ಪತ್ರಕರ್ತ. ಮತದಾರನಾಗಿ ನಾನು ಪ್ರಜಾಪ್ರಭುತ್ವದಲ್ಲಿ ಜನಸಾಮಾನ್ಯನಿಗೆ ಇರುವ ಶಕ್ತಿಯನ್ನು ತಿಳಿದಿದ್ದೇನೆ. ರಾಜಕಾರಣಿಯಾಗಿ ಈ ದೇಶದ ಆಡಳಿತ ಹಾಗೂ ಪ್ರಶಾಸನ ವ್ಯವಸ್ಥೆ ಹೇಗೆ ವರ್ತಿಸುತ್ತದೆ ಎಂಬುದನ್ನು ಅರ್ಥಮಾಡಿಕೊಂಡಿದ್ದೇನೆ. ಪತ್ರಕರ್ತನಾಗಿ ಈ ಎರಡೂ ಬದಿಯಿಂದಸಾಕಷ್ಟು ಮಾಹಿತಿಗಳನ್ನು ಪಡೆದು ವಿಶ್ಲೇಷಣೆ ಮಾಡಿದ್ದೇನೆ.
ಹೀಗೆ ವಿಶ್ಲೇಷಣೆ ಮಾಡುವುದಷ್ಟೇ ಅಲ್ಲ, ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಸೂಕ್ಷ್ಮವಾಗಿ ತಿಳಿದುಕೊಂಡು, ಅದರಲ್ಲಿ ಜನಸಾಮಾನ್ಯನ ಪಾತ್ರವೇನು ಎಂಬುದನ್ನು ಅರ್ಥ ಮಾಡಿಕೊಂಡಿದ್ದೇನೆ. ಇಲ್ಲಿ ಮೊದಲನೆಯದಾಗಿ, ಮತದಾರರು ಹೇಗೆ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗ ಅವನ ಜಾತಿ, ಧರ್ಮ ಹಾಗೂ ಮೂಲಕ್ಕೆ ಆದ್ಯತೆ ನೀಡುತ್ತಾರೆ ಎಂಬುದನ್ನು ಚರ್ಚಿಸೋಣ. ನಿಜಕ್ಕೂ ಇದು ಬಹಳ ಗಂಭೀರವಾದ ವಿಷಯ. ದೇಶವನ್ನಾಳುವ ನಾಯಕನನ್ನು ಆಯ್ಕೆ ಮಾಡುವಾಗ ರಾಷ್ಟ್ರೀಯ ಹಿತಾಸಕ್ತಿಗಿಂತ ಹೆಚ್ಚಾಗಿ ಆತನ ಧರ್ಮ, ಜಾತಿ ಹಾಗೂ ರಾಜ್ಯ ಯಾವುದು ಎಂಬುದು ಮುಖ್ಯವಾಗುತ್ತದೆಯೆಂದರೆ ಅದು ಕಳವಳಕಾರಿ ಸಂಗತಿ. ಹಾಗೆಯೇ, ಈ ವಿಷಯದಲ್ಲಿ ಅನೇಕ ಮತದಾರರು ತಕ್ಷಣದ ಒಂದಷ್ಟು ಆಸೆ ಮತ್ತು  ಆಮಿಷ ಗಳಿಗೆ ಬಲಿಯಾಗುತ್ತಾರೆ.
ಅಂಥ ಮತದಾರರು ಯಾರು ಗೆದ್ದರೆ ದೇಶಕ್ಕೆ ಅಥವಾ ರಾಜ್ಯಕ್ಕೆ ನಿಜವಾಗಿಯೂ ಒಳ್ಳೆಯದಾಗುತ್ತದೆ ಎಂಬುದನ್ನು ಮರೆತುಬಿಡುತ್ತಾರೆ. ಪರಿಣಾಮ, ಭಗ್ನಗೊಂಡ ಮೂರ್ತಿಯನ್ನು ಪ್ರಜಾಪ್ರಭುತ್ವದ ದೇಗುಲದೊಳಗೆ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ಕಳಂಕಿತ ಮೂರ್ತಿಗಳು ವ್ಯವಸ್ಥೆಯನ್ನು ಭ್ರಷ್ಟಗೊಳಿಸಿ, ಅದನ್ನು ದುರ್ಬಳಕೆ ಮಾಡಿಕೊಂಡು, ತಮ್ಮ ಅನುಕೂಲಕ್ಕೆ ತಕ್ಕಂತೆ ಉಪಯೋಗಿಸಿಕೊಳ್ಳುತ್ತವೆ. ಆಗ ಜನಸಾಮಾನ್ಯರ ಕಲ್ಯಾಣ ವೆಂಬುದು ನಗಣ್ಯವಾಗುತ್ತದೆ.
ಅದರಿಂದಾಗಿ ವ್ಯವಸ್ಥೆ ಅಧಃಪತನದತ್ತ ಸಾಗುತ್ತದೆ. ಎಲ್ಲಾ ಸರಕಾರಗಳ ಮೊದಲ ಆದ್ಯತೆಯೂ ಜನಸಾಮಾನ್ಯರ ಜೀವನದ ಗುಣಮಟ್ಟವನ್ನು ಹೆಚ್ಚಿಸುವುದೇ ಆಗಿರಬೇಕು ಎಂಬುದರಲ್ಲಿ ಯಾವುದೇ ಅನುಮಾನ ಬೇಡ. ಆದರೆ, ಪ್ರಜಾಪ್ರಭುತ್ವದ ವ್ಯವಸ್ಥೆಯೊಳಗೆ ಅವ್ಯವಹಾರಗಳು ಮತ್ತುಭ್ರಷ್ಟಾಚಾರ ನಡೆಯತೊಡಗಿದರೆ ಅದರ ಪರಿಣಾಮವನ್ನು ಕೂಡ ಜನಸಾಮಾನ್ಯರೇ ಉಣ್ಣಬೇಕಾಗುತ್ತದೆ. ಎರಡು ಸ್ಪಷ್ಟ ಉದಾಹರಣೆಗಳ ಮೂಲಕ ಇದನ್ನು ಹೇಳುತ್ತೇನೆ. ಈ ಹಿಂದೆಯೂ ಇದರ ಬಗ್ಗೆ ಒಮ್ಮೆ ಬರೆದಿದ್ದೆ. ಆದರೂ ಇದು ಬಹಳ ಗಂಭೀರವಾದ ಮತ್ತು ನಮ್ಮ ವ್ಯವಸ್ಥೆಯಲ್ಲಿರುವ ಬಹುದೊಡ್ಡ ಲೋಪವಾಗಿರುವುದರಿಂದ ಇನ್ನೊಮ್ಮೆ ಹೇಳುತ್ತೇನೆ.
ಸರಕಾರ ಈ ದೇಶದ ಕೋಟ್ಯಂತರ ಜನರಿಗೆ ಉಚಿತವಾಗಿ ಆಹಾರ ಧಾನ್ಯಗಳನ್ನು ನೀಡುವ ಯೋಜನೆ ಜಾರಿಗೆ ತಂದಿದೆಯಲ್ಲವೇ? ಅದರಡಿ ಎಲ್ಲಾ ರಾಜ್ಯ ಸರಕಾರಗಳೂ ಜನರಿಗೆ ಪ್ರತಿ ತಿಂಗಳು ಉಚಿತವಾಗಿ ಪಡಿತರ ವಿತರಣೆ ಮಾಡುತ್ತವೆ. ಆದರೆ ಜಾರ್ಖಂಡ್‌ನಲ್ಲಿ ಒಬ್ಬಳು ಮಹಿಳೆ ಹಸಿವಿನಿಂದ ಸತ್ತು ಹೋದಳು. ಅವಳಿಗೆ ಸರಕಾರದಿಂದ ಉಚಿತ ಆಹಾರ ಧಾನ್ಯ ಸಿಗುತ್ತಿರಲಿಲ್ಲ. ಏಕೆಂದರೆ ಅವಳ ಬಳಿ ರೇಶನ್ ಕಾರ್ಡ್ ಇರಲಿಲ್ಲ. ರೇಶನ್ ಕಾರ್ಡ್ ಇಲ್ಲ ಎಂಬ ಯಃಕಶ್ಚಿತ್ ಕಾರಣಕ್ಕೆ ಈ ದೇಶದ ಪ್ರಜೆಯೊಬ್ಬರು ಹಸಿವಿನಿಂದ ಸಾಯಬೇಕೇ? ಆಹಾರ ಇಲಾಖೆಯ ತಳಮಟ್ಟದಲ್ಲಿ ಕೆಲಸ ಮಾಡುವ ಅಧಿಕಾರಿ ಆ ಮಹಿಳೆಯ ವಿಷಯದಲ್ಲಿ ಕನಿಷ್ಠ ಸೂಕ್ಷ್ಮತೆಯನ್ನು ಪ್ರದರ್ಶಿಸಿದ್ದರೂ ದುರಂತಮಯ ಸಾವನ್ನು ತಪ್ಪಿಸಬಹುದಿತ್ತಲ್ಲವೇ? ಎಲ್ಲಾ ರಂಗದಲ್ಲೂ ಶ್ರೀಮಂತವಾಗುತ್ತಾ, ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಮ್ಮ ದೇಶದಲ್ಲಿ ಹೊಟ್ಟೆಗೆ ಹಿಟ್ಟಿಲ್ಲದೆ ಒಬ್ಬರು ಸಾಯುತ್ತಾರೆ ಎಂಬುದು ಎಂಥಾ ದುರಂತ!
ಇನ್ನೊಂದು ಘಟನೆಯನ್ನು ಹೇಳುತ್ತೇನೆ. ಇದನ್ನೂ ಹಿಂದೆ ಹೇಳಿದ್ದೆ. ಸರಕಾರಿ ಆಸ್ಪತ್ರೆಯಲ್ಲಿ ಒಬ್ಬ ಮಹಿಳೆ ಸಾವನ್ನಪ್ಪುತ್ತಾಳೆ. ಆಕೆಯ ಶವವನ್ನು ಹಳ್ಳಿಗೆ ತೆಗೆದುಕೊಂಡು ಹೋಗಲು ಆಸ್ಪತ್ರೆಯವರು ಗಂಡನಿಗೆ ಆಂಬುಲೆನ್ಸ್ ನೀಡುವುದಿಲ್ಲ. ಅವನ ಕೈಯಲ್ಲಿ ಖಾಸಗಿ ವಾಹನಕ್ಕೆ ತೆರಲು ಹಣವಿಲ್ಲ. ಕೊನೆಗೆ ಆತ ತನ್ನ ಪತ್ನಿಯನ್ನು ಕಳೆದುಕೊಂಡ ದುಃಖವನ್ನೂ, ಆಕೆಯ ಶವವನ್ನೂ ಹೆಗಲ ಮೇಲೆ ಹೊತ್ತುಕೊಂಡು ಹಳ್ಳಿಗೆ ನಡೆದು ಹೋಗುತ್ತಾನೆ! ಮಹಾರಾಷ್ಟ್ರದ ಮೇಲ್ಘಾಟ್‌ನಲ್ಲಿ ಪ್ರತಿವರ್ಷ ಅಸಂಖ್ಯ ಮಕ್ಕಳು ಅಪೌಷ್ಟಿಕತೆ ಹಾಗೂ ರೋಗರುಜಿನಗಳಿಂದ ಸಾವನ್ನಪ್ಪುತ್ತಾರೆ. ಅದೊಂದು ಗುಡ್ಡ ಗಾಡು ಪ್ರದೇಶ.
ನಮ್ಮ ದೇಶದಲ್ಲಿ ಅಂಥ ಗುಡ್ಡಗಾಡು ಪ್ರದೇಶಗಳು ಎಷ್ಟೊಂದಿವೆ. ಅಲ್ಲಿಗೆ ಯಾವುದೇ ಸಂಪರ್ಕ ವ್ಯವಸ್ಥೆಗಳಿರುವುದಿಲ್ಲ. ಅಲ್ಲಿ ಇನ್ನೆಷ್ಟು ಸಾವುಗಳು ಸಂಭವಿಸುತ್ತಿರಬಹುದು? ಇಂಥ ಘಟನೆಗಳ ಬಗ್ಗೆಯೂ ನಾವು ಗಮನಹರಿಸಬೇಕಿದೆ. ಸರಪಂಚ, ಜಿಲ್ಲಾ ಪರಿಷತ್ ಚೇರ್ಮನ್, ಸಿಟಿ ಕಾರ್ಪೊರೇಷನ್ ಮೇಯರ್, ಶಾಸಕ, ಸಂಸದ ಅಥವಾ ಮಂತ್ರಿ ಹೀಗೆ ಪ್ರಭಾವಿ ಹುದ್ದೆಗಳಲ್ಲಿರುವವರು ತಮ್ಮ ಕರ್ತವ್ಯವನ್ನು ಮರೆತರೆ ಏಕೆ ನಮ್ಮ ಜನರು ಒಟ್ಟಾಗಿ ಅವರ ವಿರುದ್ಧ ಧ್ವನಿಯೆತ್ತುವುದಿಲ್ಲ? ಏಕೆ ನಮ್ಮ ಸಮುದಾಯಗಳು ಶಕ್ತಿಹೀನವಾಗಿವೆ? ಏಕೆ ನಮ್ಮವರಿಗೆ ಇನ್ನೂ ಇದರ ಬಗ್ಗೆ ಅರಿವು ಮೂಡಿಲ್ಲ? ದೇಶದಆಡಳಿತ ವ್ಯವಸ್ಥೆ ಚೆನ್ನಾಗಿ ಕೆಲಸ ಮಾಡಬೇಕು ಅಂದರೆ ರಾಜಕೀಯ ವ್ಯವಸ್ಥೆ ಸರಿಯಾಗಿ ಕೆಲಸ ಮಾಡಬೇಕು.
ರಾಜಕೀಯ ಪಕ್ಷಗಳು ದೇಶದ ಆಡಳಿತ ವ್ಯವಸ್ಥೆಯಲ್ಲಿ ಬಹಳ ಪ್ರಮುಖವಾದ ಪಾತ್ರ ನಿಭಾಯಿಸುತ್ತವೆ. ನಿಮ್ಮ ಹಳ್ಳಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಡಾಕ್ಟರ್ ಬಾರದಿದ್ದರೆ ಅದರ ವಿರುದ್ಧ ಊರಿನವರೆಲ್ಲ ಒಟ್ಟಾಗಿ ಪ್ರತಿಭಟನೆ ನಡೆಸಬೇಕಲ್ಲವೇ? ನಿಮ್ಮ ನಗರದಲ್ಲಿ ಟ್ರಾಫಿಕ್ ಸಮಸ್ಯೆ ತೀರಾ ಹದಗೆಟ್ಟಿದ್ದರೆ ನೀವೆಲ್ಲರೂ ಸೇರಿ ಜನರು ಟ್ರಾಫಿಕ್ ನಿಯಮಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸಬೇಕಲ್ಲವೇ? ಸ್ವತಃ ನೀವು ಟ್ರಾಫಿಕ್ ನಿಯಮ ಪಾಲಿಸುತ್ತಾ, ಬೇರೆಯವರಿಗೂ ಅದನ್ನು ಪಾಲಿಸುವಂತೆ ತಿಳಿಹೇಳಿದರೆ ಸಮಸ್ಯೆ ನಿವಾರಿಸಬಹುದು.
ಅದರ ಬದಲು ನನಗೇಕೆ ಈ ಉಸಾಬರಿ ಎಂದು ನೀವೂ ಎಲ್ಲರಂತೆ ಬೇಕಾಬಿಟ್ಟಿ ವಾಹನ ಚಾಲನೆ ಮಾಡುತ್ತಾ ಇದ್ದುಬಿಟ್ಟರೆ ವ್ಯವಸ್ಥೆ ಇನ್ನಷ್ಟು ಹದ ಗೆಡುತ್ತದೆ. ತಕ್ಷಣ ನೀವು ಆ ಉಸಾಬರಿಗೆ ಹೋಗದೆ ಇದ್ದರೆ ಮನೆಯಲ್ಲಿ ಇನ್ನಷ್ಟು ಹೊತ್ತು ಹೆಚ್ಚು ಹಾಯಾಗಿ ಕಾಲ ಕಳೆಯ ಬಹುದು, ಆದರೆ ಕ್ರಮೇಣ ಇಡೀ ವ್ಯವಸ್ಥೆ ಕೆಟ್ಟುಹೋಗಿ, ಅದು ನಿಮ್ಮ ನೆಮ್ಮದಿಯನ್ನೂ ಕಿತ್ತು ಕೊಳ್ಳುತ್ತದೆ. ಇದನ್ನೆಲ್ಲ ನೋಡಿದರೆ ನನಗೆ ಮಖನ್‌ಲಾಲ್ ಚತುರ್ವೇದಿ ಬರೆದ ಅದ್ಭುತ ಸಾಲುಗಳು ನೆನಪಾಗುತ್ತವೆ: ‘ದೇವಸ್ಥಾನಕ್ಕೆ ಹೋಗಿ ನೀನು ಕಲ್ಲಿನ ಮೂರ್ತಿಯನ್ನು ಹುಡುಕಿದೆ, ನನ್ನನ್ನು ಚೆನ್ನಾಗಿಡು, ನನಗೆ ಚಿನ್ನ ಕೊಡು ಎಂದು ಕೇಳಿದೆ; ನಾನಿಲ್ಲಿ ಕಲ್ಲುಬಂಡೆಗಳ ಮೇಲೆ ಹತ್ತಿ ಗೆಳೆಯನನ್ನು ಹುಡುಕಿದೆ, ಚಿನ್ನ-ಬೆಳ್ಳಿ ಸುಟ್ಟುಹಾಕು, ಕ್ರಾಂತಿಯ ಸುಮ ಅರಳುತ್ತದೆ ಎಂದು ಹೇಳಿದೆ’. ಎಲ್ಲರಿಗೂ ಅಡ್ವಾನ್ಸ್ ಆಗಿ ಗಣರಾಜ್ಯೋತ್ಸವದ ಶುಭಾಶಯಗಳು. ಜೈ ಹಿಂದ್!
(ಲೇಖಕರು ಹಿರಿಯ ಪತ್ರಕರ್ತರು)