ಹೊಣೆಗಾರಿಕೆ ಮೆರೆಯೋಣ
ಅಭಿಮತ
ನರೇಂದ್ರ ಎಸ್.ಗಂಗೊಳ್ಳಿ
ಭಾರತದ ಬಹುಸಂಖ್ಯಾತ ಹಿಂದೂ ಧರ್ಮೀಯರು ಬಹುಕಾಲದಿಂದ ಕಾಣುತ್ತಿದ್ದ ಧರ್ಮಸಮ್ಮತ ಕನಸೊಂದು ಕೊನೆಗೂ ನನಸಾದ ಅಮೃತಘಳಿಗೆ ಯಲ್ಲಿ ನಾವಿದ್ದೇವೆ. ೨೦೨೪ರ ಜನವರಿ ೨೨ರ ದಿನವು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ ಎನ್ನುವುದು ಸತ್ಯ. ಏಕೆಂದರೆ, ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಯಾದ ಕ್ಷಣಗಳು ಸಮಸ್ತ ಹಿಂದೂಗಳ ಪಾಲಿಗೆ ಕೃತಾರ್ಥ ಭಾವ ವನ್ನು ಹೊತ್ತು ತಂದಿವೆ.
ಅಂದಿನ ಆಧ್ಯಾತ್ಮಿಕ ಕ್ಷಣಗಳು ದಿವ್ಯಾನುಭೂತಿ ನೀಡಿದ್ದರ ಜತೆಗೆ ಕೋಟ್ಯಂತರ ದೀಪಗಳು ಹೊರಗೆ ಬೆಳಗುವುದಕ್ಕೂ, ನಮ್ಮ ಆಂತರ್ಯದಲ್ಲಿ ಹೊಸ ತೊಂದು ಸಂಭ್ರಮದ ಬೆಳಕು ಮೂಡುವುದಕ್ಕೂ, ದೇಶಾದ್ಯಂತದ ಮನೆ-ಮನಗಳಲ್ಲಿ ರಾಮನಾಮದ ಪಠಣವಾಗುವುದಕ್ಕೂ ಕಾರಣವಾದವು. ಅಯೋ ಧ್ಯೆಯ ರಾಮಮಂದಿರವು ದೇಶದ ಬಹುದೊಡ್ಡ ಆಧ್ಯಾತ್ಮಿಕ ನೆಲೆಯಾಗುವುದರ ಜತೆಗೆ ಸುತ್ತಲಿನ ಸಮಾಜವನ್ನೂ ಬೆಳೆಸಿ ದೇಶದ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡಬಲ್ಲ ಶಕ್ತಿಕೇಂದ್ರವಾಗಿಯೂ ಬೆಳೆಯಲಿದೆ.
ಇನ್ನು ಮುಂದೆ ಭಾರತಕ್ಕೆ ಬರುವ ವಿದೇಶಿ ಪ್ರವಾಸಿಗರ ಆದ್ಯತೆಗಳಲ್ಲಿ ಒಂದಾಗಿರಲಿದೆ. ಇವೆಲ್ಲದರ ನಡುವೆ ಅಪ್ಪಟ ದೇಶದ್ರೋಹಿಗಳ ಗುಂಪೊಂದು ಬಹಳ ವರ್ಷಗಳಿಂದ ಅಯೋಧ್ಯೆ ಮತ್ತು ದೇಶದ ಅಭಿವೃದ್ಧಿಯನ್ನು ಸಹಿಸಲಾಗದೆ ಭಾರತದ ಬಹುಸಂಖ್ಯಾತರನ್ನು ಕೆರಳಿಸುವ ಕೃತ್ಯಗಳಲ್ಲಿ ತೊಡಗಿರು ವುದು ಖಂಡನೀಯ. ಮಂದಿರ ಕಟ್ಟುವ ಬದಲು ಆಸ್ಪತ್ರೆ/ಶಾಲೆ ಕಟ್ಟಿಸಬೇಕಿತ್ತು ಎಂದು ಮಾತನಾಡುವ ಎಡಬಿಡಂಗಿಗಳೂ ಇದ್ದಾರೆ. ಅವರಿಗೆ ಸಮರ್ಪಕ ವಾಗಿ ಉತ್ತರಿಸಬೇಕಾದ ಅವಶ್ಯಕತೆ ಇದ್ದೇ ಇದೆ. ಏಕೆಂದರೆ ರಾಮಮಂದಿರವನ್ನು ಕಟ್ಟಿರುವುದು ಜನರ ದೇಣಿಗೆಯಲ್ಲೇ ಹೊರತು ಸರಕಾರದ ಹಣ ದಿಂದಲ್ಲ.
ಅಯೋಧ್ಯೆಯಲ್ಲಿನ ಮಂದಿರ ಸಮುಚ್ಚಯ ಮತ್ತು ಪ್ರವಾಸೋದ್ಯಮ ಯೋಜನೆ ಗಳಿಂದ ಉತ್ತರ ಪ್ರದೇಶ ರಾಜ್ಯದ ತೆರಿಗೆ ಆದಾಯ ೨೦೨೪ರಲ್ಲಿ ಸುಮಾರು ೨೦,೦೦೦ ದಿಂದ ೨೫,೦೦೦ ಕೋಟಿ ರುಪಾಯಿಗೆ ಹೆಚ್ಚಾಗಲಿದೆ ಎಂದು ತಜ್ಞ ವರದಿಯೊಂದು ತಿಳಿಸಿದೆ. ಕಳೆದ ೪ ವರ್ಷಗಳಿಂದ ಅಲ್ಲಿನ ಆಟೋ ರಿಕ್ಷಾಗಳ ಸಂಖ್ಯೆ ದುಪ್ಪಟ್ಟಾಗಿದ್ದು, ಅವರ ಆದಾಯ ಮತ್ತು ಬೀದಿಬದಿ ವ್ಯಾಪಾರಿಗಳ ಗಳಿಕೆಯೂ ಗಣನೀಯವಾಗಿ ಹೆಚ್ಚಿದೆ ಎನ್ನಲಾಗಿದೆ. ಉದ್ಯೋಗವನ್ನರಸಿ ಅಯೋಧ್ಯೆಯತ್ತ ಬರುತ್ತಿರುವವರ ಸಂಖ್ಯೆಯೂ ಏರುತ್ತಿದೆ. ಹೀಗಾಗಿ ಒಂದು ಮಂದಿರ ಕಟ್ಟುವುದೆಂದರೆ ದೇಶವನ್ನು ಕಟ್ಟುವುದು ಎಂದೇ ಅರ್ಥ.
ಏಕೆಂದರೆ ಮಂದಿರವು ಸಮಾಜವನ್ನು ಕಟ್ಟಿ, ಜನರನ್ನು ಬೆಸೆದು ದೇಶದಲ್ಲಿ ಐಕ್ಯತೆ ಮೂಡಿಸುತ್ತದೆ. ಆದರೆ, ದೇಶವನ್ನು ಒಗ್ಗೂಡಿಸಬೇಕಿದ್ದ ಕೆಲ ರಾಜ ಕಾರಣಿಗಳು ಕೂಡ, ‘ನಮ್ಮದು ಗಾಂಧಿಯ ರಾಮ, ಅವರದ್ದು ಬೇರೆಯ ರಾಮ’ ಎಂಬರ್ಥದ ಹೇಳಿಕೆ ನೀಡಿ ಜನರ ಭಕ್ತಿಯನ್ನು ಅವಮಾನಿಸುತ್ತಿರುವು ದಕ್ಕೆ ಏನನ್ನುವುದು? ಇನ್ನು ಲೇಖಕರೊಬ್ಬರು, ‘ರಾಮನನ್ನು ಮುನ್ನೆಲೆಗೆ ತರುವ ಮೂಲಕ, ದಕ್ಷಿಣ ಭಾರತದ ದೇವನಾದ ಶಿವನನ್ನು ಹಿಂದೆ ಸರಿಸ ಲಾಗುತ್ತಿದೆ, ಇಲ್ಲಿನ ಮೂಲದೈವಗಳನ್ನು ಮೂಲೆಗುಂಪು ಮಾಡಲಾಗುತ್ತಿದೆ’ ಎನ್ನುವ ಮೂಲಕ ತಮ್ಮ ಅಜ್ಞಾನವನ್ನು ತೋರಿಸಿಕೊಂಡಿದ್ದುಂಟು.
ಇಂಥವರೆಲ್ಲ ಕಾಶಿ, ಕಾಶ್ಮೀರವನ್ನು ಒಮ್ಮೆ ನೋಡಿಬರಲಿ ಎನ್ನುವುದು ಆಶಯ. ನಾವು, ರಾಮ-ಕೃಷ್ಣ-ಶಿವ ಎಲ್ಲರೂ ಒಂದೇ ಎನ್ನುವುದರಲ್ಲಿ ನಂಬಿಕೆ ಯಿಟ್ಟವರು. ರಾಮನವಮಿಯಷ್ಟೇ ಸಂಭ್ರಮದಿಂದ ಕೃಷ್ಣ ಜನ್ಮಾಷ್ಟಮಿ, ಮಹಾಶಿವರಾತ್ರಿ, ಹನುಮ ಜಯಂತಿಯನ್ನೂ, ಜತೆಗೆ ಸ್ಥಳೀಯ ದೈವಗಳ ಪೂಜೆ, ನೇಮ, ಕೋಲಗಳನ್ನೂ ಶ್ರದ್ಧಾಭಕ್ತಿಯಿಂದ ಆಚರಿಸುತ್ತೇವೆ. ಇಷ್ಟು ಮಾತ್ರದ ತಿಳಿವಳಿಕೆ ಬರಹಗಾರರಿಗೆ ಬೇಕು. ಪ್ರಜಾಪ್ರಭುತ್ವ ಮತ್ತು ವಾಕ್ ಸ್ವಾತಂತ್ರ್ಯದ ಹೆಸರಲ್ಲಿ ಧರ್ಮದ ಬಗ್ಗೆ ಹಗುರವಾಗಿ ಮಾತಾಡುವವರ ಬಗ್ಗೆ ನಾವು ಜಾಗೃತರಾಗಿರಬೇಕಿದೆ. ಲಕ್ಷಾಂತರ ಜನರ ಹೋರಾಟ- ಬಲಿದಾನ ಗಳ ಫಲವಾಗಿ ರೂಪುಗೊಂಡಿರುವ ರಾಮಮಂದಿರವನ್ನು ಉಳಿಸಿ- ಬೆಳೆಸಿಕೊಂಡು ಹೋಗಬೇಕಾದ ಹೊಣೆ ನಮ್ಮೆಲರದ್ದು.
ಅಂಥ ಅರಿವು ಮತ್ತು ಕ್ಷಾತ್ರ ತೇಜಸ್ಸನ್ನು ನಾವು ಬೆಳೆಸಿಕೊಳ್ಳಬೇಕಿದೆ. ಇವನ್ನು ಪಡೆಯುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಿರಂತರವಾಗಿರಲಿ ಮತ್ತು ನಮ್ಮ ಮುಂದಿನ ಪೀಳಿಗೆಯವರಲ್ಲೂ ಇಂಥ ಅರಿವು ಮೂಡಿ ಸುವ ಕೆಲಸ ಸತತವಾಗಿ ಸಾಗಲಿ ಎನ್ನುವುದು ಸಹೃದಯಿಗಳ ಆಶಯ. ಜೈ ಶ್ರೀರಾಮ್.
(ಲೇಖಕರು ವಾಣಿಜ್ಯ ಶಾಸ್ತ್ರದ ಉಪನ್ಯಾಸಕರು)