ಬಿಜೆಪಿಗೆ 400 ಪ್ಲಸ್ ಸ್ಥಾನ ಕೊಟ್ಟಾನೆ ಬಾಲರಾಮ ?
ವಿಶ್ಲೇಷಣೆ
ಅಮಿತಾಬ್ ತಿವಾರಿ
ಅಯೋಧ್ಯೆಯಲ್ಲಿ ಕಳೆದ ವಾರವಷ್ಟೇ ಬಹು ನಿರೀಕ್ಷಿತ ರಾಮಮಂದಿರ ಉದ್ಘಾಟನೆಯಾಗಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ರಾಮಲಲ್ಲಾನ ಪ್ರಾಣ ಪ್ರತಿಷ್ಠೆಯನ್ನು ನೆರವೇರಿಸುವ ಮೂಲಕ ಇಡೀ ದೇಶವನ್ನು ರಾಮನ ಹೆಸರಿನಲ್ಲಿ ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
‘ಅಪೂರ್ಣ ಮಂದಿರದ ಲೋಕಾರ್ಪಣೆ’ ಎಂಬ ಪ್ರತಿಪಕ್ಷಗಳ ಬೊಬ್ಬೆಯ ನಡುವೆಯೇ ಪ್ರಾಣಪ್ರತಿಷ್ಠೆಯೊಂದಿಗೆ ಮೋದಿಯವರು ‘ತಾವು ಪ್ರಣಾಳಿಕೆಗೆ ಬದ್ಧ’ ಎಂಬ ಸಂದೇಶವನ್ನು ಮತ್ತೊಂದು ಚುನಾವಣೆಯ ಹೊಸ್ತಿಲಲ್ಲೇ ರವಾನಿಸಿರುವುದು ಸಹಜವಾಗಿ ಎದುರಾಳಿಗಳಿಗೆ ಸಂಕಷ್ಟ ತಂದಿತ್ತಿದೆ. ಬಹು ಸಂಖ್ಯಾತರ ದೀರ್ಘಕಾಲದ ನಿರೀಕ್ಷೆಯ ಈಡೇರಿಕೆ ದೇಶದ ಉದ್ದಗಲಕ್ಕೂ ಮತದಾರರಲ್ಲಿ ‘ಬ್ರಾಂಡ್ ಮೋದಿ’ಯ ಜನಪ್ರಿಯತೆಯನ್ನು ಇನ್ನಷ್ಟು ದೃಢಗೊಳಿಸಿರುವುದು ಸುಳ್ಳಲ್ಲ. ದೇಶದಲ್ಲಿ ಎದ್ದಿರುವ ರಾಮಭಕ್ತಿಯ ಅಲೆಯನ್ನು ಪರಿಣಾಮಕಾರಿಯಾಗಿ ಕಾಪಿಟ್ಟು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಳಸಿದ್ದೇ ಆದಲ್ಲಿ ‘ಮೂರನೇ ಅವಽಗೆ ಮೋದಿ’ ಸುಲಭವಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ ಎನ್ನುತ್ತವೆ ರಾಜಕೀಯ ವಿಶ್ಲೇಷಣೆಗಳು.
ಹಾಗಾದಲ್ಲಿ ಮೋದಿ ವಿರುದ್ಧವೇ ಹುಟ್ಟಿಕೊಂಡ ಪ್ರತಿಪಕ್ಷಗಳ ಒಕ್ಕೂಟ ‘ಇಂಡಿಯ’ ತನ್ನ ಉದ್ದೇಶ ಸಾಧನೆಯಲ್ಲಿ ವಿಫಲವಾಗುವುದು ಮಾತ್ರವಲ್ಲ, ೪೦೦ಕ್ಕೂ ಹೆಚ್ಚು ಸ್ಥಾನಗಳಿಕೆಯೊಂದಿಗೆ ಬಿಜೆಪಿ, ಶೇ.೫೦ ಮತಗಳೊಂದಿಗೆ ಹಿಂದಿನ ದಾಖಲೆಗಳೆಲ್ಲವನ್ನೂ ಮುರಿಯುವ ನಿರೀಕ್ಷೆ ವ್ಯಕ್ತವಾಗಿದೆ.ಹಾಗೆಂದು ಬಿಜೆಪಿಯ ೪೦೦ ಪ್ಲಸ್ ಹಾಗೂ ಶೇ.೫೦ ಮತ ಗಳಿಕೆಯ ಹಾದಿ ಅಂದುಕೊಂಡಷ್ಟು ಸ್ಪಷ್ಟವೇನಲ್ಲ. ಕಾಂಗ್ರೆಸ್ ೧೯೮೪ರಲ್ಲಿ ಬಿಟ್ಟರೆ, ಈವರೆಗೆ ಭಾರತದಲ್ಲಿ ಯಾವುದೇ ಪಕ್ಷವು ಈ ಗಡಿಯನ್ನು ತಲುಪಿಲ್ಲ. ಆಗ ಇಂದಿರಾ ಗಾಂಧಿಯವರ ಹತ್ಯೆಯ ನಂತರದ ಅನುಕಂಪದ ಅಲೆಯಲ್ಲಿ ೪೦೦+ ಸ್ಥಾನ ಗೆದ್ದಿತ್ತು. ಆದರೆ, ಆ ಚುನಾವಣೆಯಲ್ಲಿ ಕಾಂಗ್ರೆಸ್ ಮತಗಳಿಕೆ ಶೇ.೪೮.೧ಕ್ಕೆ ಸೀಮಿತಗೊಂಡಿತ್ತು.
ಜತೆಗೆ ಇಂದಿಗೂ ‘ಪ್ಯಾನ್ ಇಂಡಿಯಾ ಒಲವು’ ಗಳಿಕೆಯಲ್ಲಿ ಬಿಜೆಪಿ ಯಶ ಕಂಡಿಲ್ಲ. ಇಂದಿಗೂ ಬಿಜೆಪಿ ಉತ್ತರ ಭಾರತದ ಪಕ್ಷವೆಂಬ ಪರಿಗಣನೆ ಜನಮನ ದಿಂದ ದೂರಾಗಿಲ್ಲ. ೨೦೧೯ರಲ್ಲಿ ಬಿಜೆಪಿ ಗಳಿಸಿದ್ದ ೩೦೩ ಸ್ಥಾನಗಳ ಪೈಕಿ ೨೨೩ ಸ್ಥಾನಗಳು ಬಂದದ್ದು ಪ್ರಮುಖ ಎಂಟು ರಾಜ್ಯಗಳಿಂದ ಮಾತ್ರ. ಉತ್ತರ ದಲ್ಲಿ ಉತ್ತರ ಪ್ರದೇಶ (೬೨), ಮಧ್ಯಪ್ರದೇಶ (೨೮), ಗುಜರಾತ್ (೨೬), ಪೂರ್ವದ ರಾಜಸ್ಥಾನ (೨೪) ಮಹಾರಾಷ್ಟ್ರ (೨೩) ಹಾಗೂ ಪಶ್ಚಿಮದ ಪಶ್ಚಿಮ ಬಂಗಾಳ (೧೮) ಮತ್ತು ಬಿಹಾರ (೧೭) ಮತ್ತು ದಕ್ಷಿಣದಲ್ಲಿ ಕರ್ನಾಟಕ (೨೫) ಕೊಡುಗೆ ನೀಡಿತ್ತು. ಇದೀಗ ಆರಂಭದಲ್ಲೇ ದುರ್ಬಲಗೊಳ್ಳುತ್ತಿರುವ ವಿರೋಧಿ ಒಕ್ಕೂಟ ಮತ್ತು ರಾಮಮಂದಿರ ಉದ್ಘಾಟನೆಯಿಂದ ಸೃಷ್ಟಿಯಾಗಿರುವ ಸಕಾರಾತ್ಮಕ ವಾತಾವರಣವನ್ನು ಪೂರಕವಾಗಿ ಬಳಸಿಕೊಂಡಲ್ಲಿ ಯಾವುದೂ ಅಸಾಧ್ಯವಲ್ಲ.
ಬದಲಾದ ಮೈತ್ರಿ ಸನ್ನಿವೇಶ
ಬಿಜೆಪಿ ಗೆದ್ದ ೨೨೫ ಸ್ಥಾನಗಳಲ್ಲಿ ಬಿಹಾರ ಮತ್ತು ಜಾರ್ಖಂಡ್‌ಗಳನ್ನು ಒಳಗೊಂಡಿರುವ ಹಿಂದಿ ಭಾಷಿಕ ಪ್ರದೇಶದ ೧೭೮ ಸ್ಥಾನಗಳಿದ್ದವು. ಉತ್ತರಪ್ರದೇಶದ ೮೦ರಲ್ಲಿ ಸಮಾಜವಾದಿ ಪಕ್ಷ-ಬಿಎಸ್ಪಿ- ರಾಷ್ಟ್ರೀಯ ಲೋಕದಳ ಮೈತ್ರಿಯನ್ನು ಎದುರಿಸಿ ೬೨ ಗೆದ್ದಿತ್ತು. ಆದರೆ ೨೦೧೯ರ ಬಳಿಕ ಮೈತ್ರಿಕೂಟದುರ್ಬಲಗೊಂಡಿದೆ. ಹೀಗಾಗಿ ಇಲ್ಲಿ ಬಿಜೆಪಿ ೮ರಿಂದ ೧೨ ಹೆಚ್ಚುವರಿ ಸ್ಥಾನ ಗಳಿಸುವ ನಿರೀಕ್ಷೆ ವ್ಯಕ್ತವಾಗಿದೆ.
ಬಿಹಾರದಲ್ಲಿ ಜೆಡಿಯು ಜತೆಗಿನ ಮೈತ್ರಿಯಿಂದಾಗಿ ಬಿಜೆಪಿ ಕೇವಲ ೧೭ ಸ್ಥಾನಗಳಲ್ಲಿ ಸ್ಪರ್ಧಿಸಿ ಎಲ್ಲವನ್ನು ಗೆದ್ದುಕೊಂಡಿತ್ತು. ಆದರೀಗ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮೈತ್ರಿಯನ್ನು ತೊರೆದಿರುವುದರಿಂದ, ಬಿಜೆಪಿ ೩೦ಕ್ಕೂ ಹೆಚ್ಚು ಕಡೆ ಸ್ಪರ್ಧಿಸುವ ಸಾಧ್ಯತೆಯಿದ್ದು, ಐದರಿಂದ ಏಳು ಸ್ಥಾನಗಳ ಏರಿಕೆ ಸಂಭವನೀಯ. ಇನ್ನು ಪಂಜಾಬ್, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲೂ ಮಿತ್ರ ಪಕ್ಷಗಳ ನಿರ್ಗಮನದಿಂದಾಗಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಹೀಗಾಗಿ ೨೦೧೯ ರಲ್ಲಿದ್ದ ೪೩೫ ಸ್ಥಾನಗಳ ಬದಲಿಗೆ ೪೭೫-೫೦೦ ಸ್ಥಾನಗಳಿಗೆ ಸ್ಪರ್ಧೆ ಏರಬಹುದು. ಹೀಗಾಗಿ ಸಹಜವಾಗಿಮತ ಹಂಚಿಕೆಯಲ್ಲೂ ಏರಿಕೆಯಾಗುವ ಸಾಧ್ಯತೆ ಇದೆ.
ಹಿಂದಿ ಭಾಷಿಕ ಇತರ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡ, ದೆಹಲಿ, ಹರಿಯಾಣ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಗಳಲ್ಲಿಬಿಜೆಪಿ ತನ್ನ ಸ್ಥಾನಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಬಹುದು. ೨೦೨೪ರ ಲೋಕಸಭಾ ಚುನಾವಣೆಗೆ ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಒಕ್ಕೂಟ ರಚಿಸಿದಾಗ ಇದೇ ನಿತೀಶ್ ಕುಮಾರ್ ಮುಂಚೂಣಿಯಲ್ಲಿ ಇದ್ದರು. ಅದರಲ್ಲೂ ನಾನಾ ಪಕ್ಷಗಳ ಜೊತೆಗೆ ಮಾತುಕತೆ ನಡೆಸಿದ್ದ ಅವರು, ಹಲವು ಸಭೆಗಳ ಮುಂದಾಳತ್ವ ವಹಿಸಿದ್ದರು. ಈ ಮೂಲಕ ಇಂಡಿಯಾ ಒಕ್ಕೂಟಕ್ಕೆ ಬೆಂಬಲವಾಗಿ ನಿಂತಿದ್ದರು. ಆದರೆ ಮೊದಲಿನಿಂದ ಪ್ರಧಾನಿ ಪಟ್ಟದ ಮೇಲೆ ಒಂದು ಕಣ್ಣು ಇಟ್ಟಿರುವ ನಿತೀಶ್ ಕುಮಾರ್ ಈಗ ‘ಇಂಡಿಯ’ಕ್ಕೆ ಕೈಕೊಟ್ಟು, ವಾಪಸ್ ಬಿಜೆಪಿ ನೇತೃತ್ವದ ಎನ್‌ಡಿಎಗೆ ಹೋಗಿರುವುದು ಸಂಚಲನ ಸೃಷ್ಟಿಸಿದೆ.
ಈಗಾಗಲೇ ಬಿಹಾರ ಸಿಎಂ ನಿತೀಶ್ ಕುಮಾರ್ ನಿರ್ಧಾರದ ಹಿಂದೆ ಸಾಕಷ್ಟು ಲೆಕ್ಕಾಚಾರಗಳಿವೆ. ಲೋಕಸಭೆ ಚುನಾವಣೆ ಸಮಯದಲ್ಲಿ ನಿತೀಶ್ ಕುಮಾರ್ ಅವರ ಬೆಂಬಲ ಬಿಜೆಪಿ ಅಗತ್ಯವಿದೆ. ಇದೇ ಸಮಯದಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್ ಜೊತೆಗೂ ನಿತೀಶ್ ಕುಮಾರ್ ಮುನಿಸೂ ಕೆಲಸ ಮಾಡಿತ್ತು. ಹೀಗಾಗಿ ಲೋಕಸಭಾ ಚುನಾವಣೆ ೨೦೨೪ಕ್ಕೆ ಮೊದಲು ಭಾರತೀಯ ರಾಜಕೀಯ ಶೇಕ್ ಆಗಿದೆ. ಹಾಗೇ ಕಾಂಗ್ರೆಸ್ ನಾಯಕರಿಗೂ ನಿತೀಶ್ ಕುಮಾರ್ ಸಂಪರ್ಕ ಸಾಧ್ಯವಾಗುತ್ತಿಲ್ಲ. ೨೦೨೪ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಜಯ ಸಾಧಿಸುವುದು ವಿಪಕ್ಷಗಳ ಒನ್‌ಲೈನ್ ಅಜೆಂಡಾ. ಇದೇ ಹಿನ್ನೆಲೆ ವಿರೋಧ ಪಕ್ಷಗಳ ನಡುವೆ ಒಗ್ಗಟ್ಟನ್ನೂ ಮೂಡಿಸಿ, ಲೋಕಸಭೆಗಾಗಿ ಸಜ್ಜಾಗಲು ಮೀಟಿಂಗ್ ಮೇಲೆ ಮೀಟಿಂಗ್ ಮಾಡಲಾಗಿತ್ತು.
ಹೀಗಿದ್ದಾಗ, ನಿತೀಶ್ ಕುಮಾರ್‌ಗೆ ಗಾಳ ಹಾಕಲು ಬಿಜೆಪಿ ನಾಯಕರು ಮೊದಲಿಂದ ಯತ್ನಿಸಿದ್ದರು ಎನ್ನುವ ಮಾತು ಹರಿದಾಡಿ ಸಂಚಲನ ಸೃಷ್ಟಿಯಾ ಗಿತ್ತು. ಆದರೆ ಇದೀಗ ಅದು ನಡೆದೇ ಹೋಗಿದೆ. ನಿತೀಶ್ ಕುಮಾರ್‌ಗೆ ಬಿಜೆಪಿಯಿಂದ ಕೆಂಪು ಹಾಸು ಹಾಸಲಾಗಿದೆ.
ದಕ್ಷಿಣಾಭಿಮುಖವಾಗುವುದೇ?ಪ್ರಶ್ನೆ ಇರುವುದು ಈವರೆಗೆ ಬಿಜೆಪಿಯನ್ನು ಒಳಗೆ ಬಿಟ್ಟುಕೊಳ್ಳದ ದಕ್ಷಿಣದ ರಾಜ್ಯಗಳದ್ದು. ಗೋವಾದಲ್ಲಿರುವುದೇ ಒಂದು. ಅದು ಅಬಾಧಿತ. ಆದರೆ,ಕರ್ನಾಟಕದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತು ಹೀನಾಯ ಸ್ಥಿತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಸ್ತಿತ್ವದ ಪ್ರಶ್ನೆಎದುರಿಸುತ್ತಿದ್ದ, ಮೈಸೂರು ಕರ್ನಾಟಕದಲ್ಲಷ್ಟೇ ಪ್ರಬಲವಾಗಿದ್ದ ಜೆಡಿಎಸ್ ಜತೆ ಮೈತ್ರಿ ಸಾಧಿಸಲಾಗಿದೆ. ಇದು ಕಡೇಪಕ್ಷ ಕಳೆದ ಬಾರಿಯ ಗಳಿಕೆಯನ್ನಾ ದರೂ ಉಳಿಸಿಕೊಡಬಹುದೇ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಕರ್ನಾಟಕ ಹೊರತು ಪಡಿಸಿ, ಸ್ಥಳೀಯ ನಾಯಕತ್ವದ ಪ್ರಯತ್ನ ಮತ್ತುಕಾಂಗ್ರೆಸ್ ನಾಯಕರ ಸೇರ್ಪಡೆಯಿಂದಾಗಿ ತೆಲಂಗಾಣ, ಕೇರಳ ಮತ್ತು ತಮಿಳುನಾಡಿನಲ್ಲಿ ಪಕ್ಷಕ್ಕೆ ಒಲವನ್ನು ಮೂಡಿಸಬಹುದು ಎಂದು ರಾಜಕೀಯತಂತ್ರಜ್ಞರು ಹೇಳುತ್ತಿದ್ದಾರಾದರೂ, ಸ್ಥಾನ ಗಳಿಕೆಯ ಬಗ್ಗೆ ಖಚಿತ ವಿಶ್ವಾಸ ಮೂಡಿಲ್ಲ.
ಹೆಚ್ಚುವರಿ ಸ್ಥಾನಗಳು ಎಲ್ಲಿಂದ?೨೦೧೯ರಲ್ಲಿ ಬಿಜೆಪಿ ೭೨ ಸ್ಥಾನಗಳಲ್ಲಿ ತೀವ್ರ ಪೈಪೋಟಿ ನೀಡಿ ಶೇ.೫ಕ್ಕಿಂತ ಕಡಿಮೆ ಅಂತರದಿಂದ ಎರಡನೇ ಸ್ಥಾನಗಳಿಸಿತ್ತು. ೧೫ ಸ್ಥಾನಗಳಲ್ಲಿ ಗೆಲುವಿನ ಅಂತರ ೪೫ಸಾವಿರಕ್ಕಿಂತ ಕಡಿಮೆ ಇತ್ತು. ಬಿಜೆಪಿ ಸೋತ ಸ್ಥಾನಗಳ ಪೈಕಿ ೧೫ರಲ್ಲಿ ಕಾಂಗ್ರೆಸ್ ಗೆದ್ದಿದೆ. ಉಳಿದಂತೆ ಟಿಎಂಸಿ ೨೧, ಬಿಎಸ್ಪಿ ೧೦, ಸಮಾಜ ವಾದಿ ಪಕ್ಷ ೫, ಬಿಜೆಡಿ ೧೧ ಮತ್ತು ಇತರರು ಈ ಪೈಕಿ ೧೦ ಸ್ಥಾನಗಳನ್ನು ಪಡೆದರು. ಅಸ್ಸಾಂ (೧), ಛತ್ತೀಸ್ಗಡ (೨), ಗೋವಾ (೧), ಜಾರ್ಖಂಡ್ (೨), ಕರ್ನಾಟಕ (೨), ಮಣಿಪುರ (೧), ಕೇರಳ (೧), ಮಹಾರಾಷ್ಟ್ರ (೨), ಮಧ್ಯಪ್ರದೇಶ (೧) ), ಒಡಿಶಾ (೧೧), ಪಂಜಾಬ್ (೧), ತಮಿಳುನಾಡು (೫), ತೆಲಂಗಾಣ (೨), ಉತ್ತರ ಪ್ರದೇಶ (೧೬), ಕೇಂದ್ರಾಡಳಿತ ಪ್ರದೇಶಗಳು (೨) ಮತ್ತು ಪಶ್ಚಿಮ ಬಂಗಾಳದಲ್ಲಿ (೨೨) ಇವು ಹಂಚಿಕೆಯಾಗಿವೆ.
ಇದರ ಮೇಲೆ ಪಕ್ಷ ಗಮನ ಕೇಂದ್ರೀಕರಿಸಿದ್ದು (ಮಣಿಪುರ ಬಿಟ್ಟು) ಆಂತರಿಕ ಸಮೀಕ್ಷೆಗಳ ಪ್ರಕಾರ ೭೧ ಸ್ಥಾನಗಳಲ್ಲಿ ಬಿಜೆಪಿ ಪರ ಶೇ.೧೦ರಷ್ಟು ಒಲವುವ್ಯಕ್ತವಾಗಿದೆ. ಇದು ಬಿಜೆಪಿಗೆ ಶೇ.೫ ಹೆಚ್ಚುವರಿ ಮತಗಳಿಕೆಗೆ ನೆರವಾಗುತ್ತದಲ್ಲದೇ, ಅದೇ ವೇಳೆ ವಿಪಕ್ಷಗಳ ಮತ ಹಂಚಿಕೆಯಲ್ಲಿ ಶೇ.೫ ಸಮಾನಾಂತರಕುಸಿತಕ್ಕೆ ಕಾರಣವಾಗಬಹುದು ಎಂಬುದು ಅಂದಾಜು. ಹಾಗಾದಲ್ಲಿ ಅಸ್ಸಾಂ (೧), ಛತ್ತೀಸ್ಗಡ (೨), ಗೋವಾ (೧), ಜಾರ್ಖಂಡ್ (೨), ಕೇರಳ (೧), ಮಹಾ ರಾಷ್ಟ್ರ (೧), ಮಧ್ಯಪ್ರದೇಶ (೧), ಒಡಿಶಾ (೬), ತೆಲಂಗಾಣ ( ೧), ಉತ್ತರ ಪ್ರದೇಶ (೮), ಕೇಂದ್ರಾಡಳಿತ ಪ್ರದೇಶಗಳು (೨) ಮತ್ತು ಪಶ್ಚಿಮ ಬಂಗಾಳ (೧೨) ರಾಜ್ಯಗಳ ಒಟ್ಟು ೩೮ ಸ್ಥಾನ ಗಳನ್ನು ಹೆಚ್ಚುವರಿಯಾಗಿ ಗಳಿಸಬಹುದು.
ಒಡಿಶಾ, ಪ.ಬಂಗಾಳದ ಕತೆಯೇನು?
ಒಡಿಶಾದಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಪ್ರಧಾನಿ ಮೋದಿಯವರ ಆಡಳಿತ ವೈಖರಿಯ ಬಗೆಗೆ ಸದಭಿಪ್ರಾಯ ವ್ಯಕ್ತಪಡಿಸಿದ್ದು, ಬಿಜೆಡಿಯ ಮತದಾರರು ಈ ಬಾರಿ ಕೇಂದ್ರದಲ್ಲಿ ನರೇಂದ್ರ ಮೋದಿಗೆ ಮತ ಹಾಕುತ್ತಾರೆ ಎಂಬುದು ಬಿಜೆಪಿ ನಿರೀಕ್ಷೆ. ೨೦೧೯ರಲ್ಲಿ ಬಿಜೆಡಿ ೧೨, ಬಿಜೆಪಿ ೮ ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ಗೆದ್ದಿತ್ತು. ೩ ಸ್ಥಾನಗಳಲ್ಲಿ, ಬಿಜೆಪಿ ೩೫ ಸಾವಿರಕ್ಕಿಂತ ಕಡಿಮೆ ಮತಗಳಿಂದ ಸೋತಿತ್ತು.
ಪಶ್ಚಿಮ ಬಂಗಾಳದಲ್ಲಿ, ಇಂಡಿಯ ಸದಸ್ಯರಾದ ತೃಣಮೂಲ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿ ಸೀಟು ಹಂಚಿಕೆಯ ಗೊಂದಲ, ಎಡಪಕ್ಷಗಳು ಮೈತ್ರಿ ಕೂಟದಿಂದ ಹೊರಗುಳಿ ಯುವ ಸಂಭವನೀಯತೆ ಬಿಜೆಪಿಗೆ ಪೂರಕ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಇಂಡಿಯ ಸದಸ್ಯರಾದ ಮಮತಾ ಬ್ಯಾನರ್ಜಿ  ಹಾಗೂ ಪಂಜಾಬ್ ಹಾಗೂ ದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸಲು ಮುಂದಾಗಿ ದ್ದಾರೆ. ಈ ಸನ್ನಿವೇಶದಲ್ಲಿ ಪೂರ್ವ ಮತ್ತುದಕ್ಷಿಣದ ರಾಜ್ಯಗಳಲ್ಲಿ ಮೈತ್ರಿ ಸಾಧಿಸಿದಲ್ಲಿ ಈ ಹಿಂದೆ ಬಿಜೆಪಿಗೆ ಲಾಭ ಸಾಧ್ಯತೆ ಇದೆ. ಮೋದಿ ಪರ ನಿಲುವು ತಳೆದಿದ್ದ ನವೀನ್ ಪಟ್ನಾಯಕ್ ಅವರ ಬಿಜೆಡಿ ಮತ್ತು ಜಗನ್ ರೆಡ್ಡಿ ಅವರ ವೈಎಸ್‌ಆರ್‌ಸಿಪಿಗಳು ಎನ್‌ಡಿ ಅಂಗಪಕ್ಷಗಳಾದರೂ ಅಚ್ಚರಿಯಿಲ್ಲ
(ಲೇಖಕರು ಹಿರಿಯ ಪತ್ರಕರ್ತರು)