ಇದೂ ಚದುರಂಗದಾಟವೇ!
ಪ್ರತಿಸ್ಪಂದನ
ಶಂಕರನಾರಾಯಣ ಭಟ್, ಮಾಡಗೇರಿ
ನಮ್ಮ ದೇಶದ ರಾಜಕೀಯದಲ್ಲಿ ಏನು ಬೇಕಾದರೂ ನಡೆಯಲು ಎಲ್ಲ ಅವಕಾಶಗಳಿವೆ. ಒಬ್ಬ ಸಾಮಾನ್ಯ ಚಾಯ್‌ವಾಲಾ ಪ್ರಧಾನಿಯಾಗಿಯೂ, ಹಳ್ಳಿಯ ಮೂಲೆಯಲ್ಲೆಲ್ಲೋ ವಾಸಿಸುತ್ತಿದ್ದವರು ರಾಷ್ಟ್ರಪತಿಯಾಗಿಯೂ ಕಾರ್ಯನಿರ್ವಹಿಸುವಂಥ ಘಟನೆ ಗಳಿಗೆ ನಾವು ಈಗಾಗಲೇ ಸಾಕ್ಷಿಯಾಗಿದ್ದೇವೆ. ಇಂಥ ಬೆಳವಣಿಗೆಗಳು ನಡೆಯುತ್ತಲೇ ಇರುತ್ತವೆ. ಇದು ಪ್ರಜಾಪ್ರಭುತ್ವದ ತಾಕತ್ತು ಎನ್ನಬಹುದು. ಆದರೆ ಸದ್ಯ ಆಗುತ್ತಿರುವ ಕೆಲವೊಂದು ರಾಜಕೀಯ ಬದಲಾವಣೆಗಳು ಪ್ರಜಾಪ್ರಭುತ್ವವನ್ನು ನಿಜಕ್ಕೂ ಗಟ್ಟಿಗೊಳಿಸುತ್ತವೋ ಅಥವಾ ಶಿಥಿಲಗೊಳಿಸುತ್ತವೋ ಎಂಬುದನ್ನು ತಿಳಿಯುವುದು ಅಷ್ಟುಸುಲಭವಲ್ಲ. ಈ ಅಭಿಪ್ರಾಯಕ್ಕೆ ಕಾರಣರಾಗಿರುವವರು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್.
ಒಂದೇ ದಿನದಲ್ಲಿ ರಾಜಕಾರಣಿಯೊಬ್ಬ ಮಾಜಿ ಮುಖ್ಯಮಂತ್ರಿಯೂ ಆಗಬಹುದು ಹಾಲಿ ಮುಖ್ಯಮಂತ್ರಿಯೂ ಆಗ ಬಹುದು ಎಂಬುದನ್ನು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತೋರಿಸಿ ಕೊಟ್ಟವರು ಈ ನಿತೀಶರು! ಕಾರಣ, ಹಿಂದಿನ ದಿನದವರೆಗೆ ಮುಖ್ಯ ಮಂತ್ರಿಯಾಗಿದ್ದವರು ಮರುದಿನ ಬೆಳಗ್ಗೆ ರಾಜೀನಾಮೆ ನೀಡಿ ಕೆಲ ಕಾಲದವರೆಗೆ ‘ಮಾಜಿ’ ಎನಿಸಿಕೊಂಡರು; ಅದಾದ ಕೆಲವೇ ಗಂಟೆಗಳಲ್ಲಿ ಮತ್ತೆ ಪ್ರಮಾಣವಚನ ಸ್ವೀಕರಿಸಿ ಮತ್ತೆ ಮುಖ್ಯಮಂತ್ರಿಯಾದರು! ಅಽಕಾರ ಮತ್ತು ಅದೃಷ್ಟ ದಕ್ಕಿದರೆ ಒದ್ದುಕೊಂಡು ಬರುತ್ತವೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ? ಆದರೆ ಬಿಹಾರದಲ್ಲಿ ನಿತೀಶರ ಜೆಡಿಯು ಪಕ್ಷದ ಸದಸ್ಯರ ಬಲ ೪೫ರಷ್ಟಿದ್ದರೆ, ಬಿಜೆಪಿಯ ಸದಸ್ಯಬಲ ೭೮ರಷ್ಟಿದೆ.
ಇಷ್ಟಾಗಿಯೂ ಬಿಜೆಪಿ ಮುಖ್ಯ ಮಂತ್ರಿ ಗದ್ದುಗೆಯನ್ನು ಬಿಟ್ಟುಕೊಟ್ಟಿದೆ. ಇದು ವಿಚಿತ್ರವೆನಿಸಿದರೂ ಸತ್ಯ. ಈ ಹಿಂದೆಲ್ಲ, ಕಡಿಮೆ ಸಂಖ್ಯೆ ಯಿದ್ದರೂ ಏನೇನೋ ಕಸರತ್ತು ಮಾಡಿ ಬಿಜೆಪಿ ಅಧಿಕಾರ ಗಿಟ್ಟಿಸಿಕೊಂಡಿದೆ ಎಂಬುದು ತಿಳಿದಿರುವ ವಿಷಯವೇ. ಆದರೂ ಈ ಬಾರಿ ‘ದೊಡ್ಡ ಮನಸ್ಸು’ ಮಾಡಿ ಸಿಎಂಸ್ಥಾನ ಬಿಟ್ಟುಕೊಟ್ಟಿರು ವುದರ ಹಿಂದಿನ ರಾಜಕೀಯವೂ ಅರ್ಥವಾಗದ ಸಂಗತಿಯೇನಲ್ಲ. ‘ಇಂಡಿಯ’ ಮೈತ್ರಿಕೂಟದ ರಚನೆಯಾಗಿದ್ದೇ ಮೋದಿಯವ ರನ್ನು ಹಣಿಯಲು ಎಂಬುದು ರಹಸ್ಯವೇನಲ್ಲ.
ಇಷ್ಟಾಗಿಯೂ ಅದರ ಅಧ್ವರ್ಯುವಾಗಿದ್ದ ನಿತೀಶರಿಗೆ ಬಿಜೆಪಿ ಒತ್ತಾಸೆ ಯಾಗಿ ನಿಂತಿರುವುದರ ಹಿಂದೆ ರಾಜಕೀಯ ಲೆಕ್ಕಾಚಾರವಿದೆ. ಬಿಹಾರದಲ್ಲಿ ೪೮ ಲೋಕಸಭಾ ಕ್ಷೇತ್ರಗಳಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟವು ೪೦೦ ಸ್ಥಾನ ಗಳಿಕೆಯ ಗಡಿದಾಟಲು ಬಿಹಾರದಅವಶ್ಯಕತೆಯೂ ಇದೆ. ಮತ್ತೊಂದೆಡೆ, ‘ಇಂಡಿಯ’ ಮೈತ್ರಿಕೂಟ ವನ್ನು ಹಳಿಗೆ ತರುವಲ್ಲಿ ಸಾಕಷ್ಟು ಶ್ರಮಿಸಿ ಸೋತು ಸುಣ್ಣವಾಗಿದ್ದ ನಿತೀಶರಿಗೂ ಒಂದು ಆಸರೆ ಬೇಕಿತ್ತು. ಈ ಎರಡು ಅನಿವಾರ್ಯ ಸಂದರ್ಭಗಳ ಸಮ್ಮಿಲನವೇ ನಿತೀಶರಿಗೆ (ಅವರ ಪಕ್ಷದ ಬಲಾಬಲ ಕಡಿಮೆಯಿದ್ದರೂ) ಮತ್ತೊಮ್ಮೆ ಮುಖ್ಯ ಮಂತ್ರಿ ಗಾದಿಯನ್ನು ಕೊಡುಗೆಯಾಗಿತ್ತಿದೆ.
ಸಂಬಂಧಪಟ್ಟವರಿಂದ ಈ ಸಮಯದಲ್ಲಿ ಹೊಮ್ಮುವ ಮಾತುಗಳಿಗೆ ಅದೇನು ಅರ್ಥ ಬಂದೀತೋ, ಅದು ಬೇರೆ ವಿಷಯ; ಇದು ರಾಜಕೀಯ ಅಂತ ಸುಮ್ಮನಿರುವುದೇ ಲೇಸು. ‘ಮಹಾಘಟಬಂಧನದಲ್ಲಿ ಎಷ್ಟೆಲ್ಲ ಪಕ್ಷಗಳಿದ್ದವು, ಅಲ್ಲಿ ಎಲ್ಲವೂ ಸರಿ ಇರಲಿಲ್ಲ, ಈಗ ಬಂದಿದ್ದೇನೆ ವಾಪಸ್ ಹೋಗಲ್ಲ’ ಎಂದೆಲ್ಲ ಹೇಳಿಕೊಂಡಿರುವ ನಿತೀಶರ ಮಾತುಗಳನ್ನು ಎಲ್ಲಿಯ ತನಕ ಒಪ್ಪಬಹುದು ಎಂಬುದು ಯಕ್ಷಪ್ರಶ್ನೆ. ಅದೇನೇ ಇರಲಿ, ಸದ್ಯದ ಮಟ್ಟಿಗೆ ಅವರ ಮಾತನ್ನು ನಂಬೋಣ ಮತ್ತು ಮುಂಬರುವ ಲೋಕ ಸಮರದಲ್ಲಿ ಅವರು ಅತಿಹೆಚ್ಚು ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿ ಎನ್‌ಡಿಎ ಪಾಳಯದ ಬಲ ಹೆಚ್ಚಿಸುತ್ತಾರೆ ಎಂದೇ ಆಶಿಸೋಣ.
‘ಇಂಡಿಯ’ ಮೈತ್ರಿಕೂಟದಲ್ಲಿರುವಾಗ ಮಹತ್ವದ ಪಾತ್ರ ವಹಿಸಿ, ಭಾವಿ ಪ್ರಧಾನಿಯಾಗುವ ಕನಸು ಕಂಡು ಏನೆಲ್ಲ ಗಿಮಿಕ್ ಮಾಡಿದ ನಿತೀಶರು ಇಷ್ಟು ಬೇಗ ಆ ‘ಕುಟುಂಬ’ವನ್ನು ತೊರೆಯಬಹುದು ಅಂತ ಯಾರಾದರೂ ಎಣಿಸಿದ್ದರೆ? ಆದರೆ, ಇದು ರಾಜಕೀಯ; ಇಲ್ಲಿ ‘ಅಸಂಭವ’ ಎಂಬ ಪದಕ್ಕೆ ಜಾಗವಿಲ್ಲ. ಅದರಲ್ಲೂ ನಮ್ಮ ದೇಶದ ರಾಜಕೀಯ ವ್ಯವಸ್ಥೆಯಲ್ಲಂತೂ ಇದಕ್ಕೆ ತನ್ನದೇ ಆದ ಘನತೆ-ಗೌರವ, ಸಮ್ಮಾನ-ಸತ್ಕಾರ, ವೈಶಿಷ್ಟ್ಯ ಎಲ್ಲವೂ ಇವೆ! ರಾಜಕೀಯ ಎಂದರೆ ಒಂದು ಚದುರಂಗದಾಟವಿದ್ದಂತೆ ಎನ್ನುವುದು ಅದಕ್ಕೇ ಇರಬೇಕು.