ಅನುದಾನಿತ ಕಾಲೇಜುಗಳು ಸಂಕಷ್ಟದಲ್ಲಿವೆ
ಚರ್ಚಾ ವೇದಿಕೆ
ಡಾ.ಆರ್‌.ಜಿ.ಹೆಗಡೆ
ಏನೇ ಸೌಲಭ್ಯಗಳನ್ನು ಒದಗಿಸಿದರೂ ಅನುದಾನಿತ ಶಿಕ್ಷಣ ಸಂಸ್ಥೆಗಳು ಸರಕಾರ ವಿಽಸಿದ ಮಿತಿಯನ್ನು ದಾಟಿ ಶುಲ್ಕವನ್ನು ಸಂಗ್ರಹಿಸು ವಂತಿಲ್ಲ. ಸರಕಾರದ ಕಾನೂನುಗಳಿಗೆ ಅವು ಬದ್ಧವಾಗಿರಬೇಕು. ಜತೆಗೆ, ಅನುದಾನೇತರ ನೌಕರರ ಸಂಬಳವನ್ನು ಅವೇ ನೀಡಬೇಕು. ಈ ಸವಾಲುಗಳನ್ನು ಎದುರಿಸಿ ಅಸ್ತಿತ್ವ ಕಾಯ್ದುಕೊಳ್ಳುವುದು ಕಷ್ಟ.
ದಿನಕರ ದೇಸಾಯಿಯವರು ಕಟ್ಟಿ ಬೆಳೆಸಿದ ಹಾಗೂ ನಂತರವೂ ಅವರ ಮೌಲ್ಯ ಗಳನ್ನು ಉಳಿಸಿಕೊಂಡೇ ಬಂದ, ಬೆಳೆದ, ಉತ್ತರ ಕನ್ನಡ ಜಿಲ್ಲೆಯಅಂಕೋಲಾದ ಗೋಖಲೆ ಸೆಂಟಿನರಿ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಶೈಕ್ಷಣಿಕ ಚರ್ಚೆಯೊಂದರ ಕುರಿತು ಹೇಳಬೇಕು. ಏಕೆಂದರೆ ಈ ವಿಷಯಕ್ಕೆ ರಾಷ್ಟ್ರೀಯ ಮಹತ್ವವಿದೆ. ‘ಸಮಕಾಲೀನ ಸಂದರ್ಭದಲ್ಲಿ ಅನುದಾನಿತ ಪದವಿ ಕಾಲೇಜುಗಳನ್ನು ವ್ಯಾಪಾರೀಕರಣಗೊಳಿಸದೆ ಅಭಿವೃದ್ಧಿಪಡಿಸುವುದು ಹೇಗೆ? ಸಮಾಜಸೇವೆಯ ಮೂಲಗುರಿ ಬಿಟ್ಟುಕೊಡದೆ, ಗುಣಮಟ್ಟ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿ/ಸಂಬಳ- ಸಾರಿಗೆ ಗಾಗಿ ಸಂಪನ್ಮೂಲ (ಸರಕಾರಗಳು ಅನುದಾನಿತ ಕಾಲೇಜುಗಳಿಗೆ ಗ್ರಾಂಟ್ ಮಿತಿಗೊಳಿಸುತ್ತಲೇ ಸಾಗಿವೆ) ಕ್ರೋಡೀಕರಿಸುವುದು ಹೇಗೆ? ಕಡಿಮೆ ಶುಲ್ಕವಿರುವ ಸರಕಾರಿಕಾಲೇಜುಗಳು ಮತ್ತು ಭಾರಿ ಬಂಡವಾಳ ತೊಡಗಿಸಿ, ಮಾರುಕಟ್ಟೆ ತಂತ್ರಗಳನ್ನು ಬಳಸಿ ವಿದ್ಯಾರ್ಥಿಗಳನ್ನು ಸೆಳೆಯುವ ಖಾಸಗಿ ಸಂಸ್ಥೆಗಳ ಜತೆ ಸ್ಪರ್ಧಿಸುವುದು ಹೇಗೆ? ಅನುದಾನಿತ ಕಾಲೇಜುಗಳು ಸಾಮಾಜಿಕ ಸೇವಾಬದ್ಧತೆ ಇಟ್ಟು ಕೊಂಡೇ ಬದುಕುವುದು ಹೇಗೆ’ ಎಂಬ ಪ್ರಶ್ನೆಗಳು ಈ ವೇಳೆ ಚರ್ಚೆಗೆ ಬಂದವು.
ಈ ಪ್ರಶ್ನೆಗಳು ಯಾಕೆಂದರೆ, ಸುಮಾರು ೫೦ ವರ್ಷಗಳ ಇತಿಹಾಸ ಹೊಂದಿರುವ ‘ಐಕಾನಿಕ್’ ಕಾಲೇಜುಗಳಿಂದು ತಮ್ಮ ಅಸ್ತಿತ್ವವನ್ನೇ ಕಳೆದು ಕೊಳ್ಳುವ, ವಿದ್ಯಾರ್ಥಿಗಳೇ ಇಲ್ಲವಾಗುವ ಸವಾಲು ಎದುರಿಸುತ್ತಿವೆ. ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಭಾಗವಾಗಿ ಪದವಿ ಶಿಕ್ಷಣದ ಹಿನ್ನೆಲೆ ಮತ್ತು ಇಂದಿನಪರಿಸ್ಥಿತಿಯನ್ನು ಅರಿಯಬೇಕು. ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ, ಸಮಾಜವನ್ನು ಕಟ್ಟುವ ಸಲುವಾಗಿ ದೇಶಾದ್ಯಂತದ ಕೆಲವಷ್ಟು ಸಹೃದಯಿ ಗಳು ಶಾಲಾ-ಕಾಲೇಜುಗಳನ್ನು ಆರಂಭಿಸಿ ಶಿಕ್ಷಣವನ್ನು ಉಚಿತವಾಗಿ/ಆದಷ್ಟು ಕಡಿಮೆ ಹಣದಲ್ಲಿ ನೀಡಲು ಆರಂಭಿಸಿದರು.
ದೇಣಿಗೆಯಿಂದ ಹುಟ್ಟಿಕೊಂಡ / ಸಾಧು- ಸಂತರು, ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸೇವಕರು ಆರಂಭಿಸಿದ ಇಂಥ ಮಹಾನ್ ಉದ್ದೇಶದ ಸಂಸ್ಥೆಗಳು ದೇಶಾದ್ಯಂತ ಇವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂಥ ಜವಾಬ್ದಾರಿ ಯನ್ನು ನಿರ್ವಹಿಸಿದ ದಿನಕರ ದೇಸಾಯಿ ಯವರು, ಜನರು ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ಸಂಸ್ಥೆಗಳನ್ನು ಕಟ್ಟಿದರು. ಯುವ ಪೀಳಿಗೆಯನ್ನು ಪದವಿ ಶಿಕ್ಷಣಕ್ಕೆ ಒಡ್ಡುವುದು, ರಾಷ್ಟ್ರೀಯ ಮನೋಭಾವ ಬಿತ್ತುವುದು, ಆಧುನಿಕ ಸಮಾಜವನ್ನು ನಿರ್ಮಿಸಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವುದು, ಸಮಾಜಸೇವೆ ಇಂಥ ಸಂಸ್ಥೆ ಗಳ ಗುರಿಯಾಗಿದ್ದವು. ಈಕಾರಣದಿಂದಲೇ ಅಂದು ಮಾನವಿಕ ವಿಷಯಗಳು ಪಠ್ಯಕ್ರಮದ ಮುಂಚೂಣಿ ಯಲ್ಲಿದ್ದವು.
ಇದು ದೇಶದಲ್ಲಿ ಉನ್ನತ ಶಿಕ್ಷಣದ ಬೆಳವಣಿಗೆಯ ಮೊದಲ ಹಂತ ಮತ್ತು ಸ್ವರೂಪ. ಸ್ವಾತಂತ್ರ್ಯಾನಂತರದಲ್ಲಿ, ಈ ಕಾಲೇಜುಗಳ ಅಸಾಧಾರಣ ಸೇವೆಯ ಅರಿವಿದ್ದ ಸರಕಾರಗಳು ಇವಕ್ಕೆ ಪ್ರಾಮುಖ್ಯ ನೀಡಿ ಬೆಳವಣಿಗೆಗೆ ಉತ್ತೇಜಿಸಿ ದವು. ಕಾಲೇಜು ಮತ್ತು ಸರಕಾರಗಳ ನಡುವೆ ಒಂದು ತಿಳಿವಳಿಕೆ ಏರ್ಪಟ್ಟು, ಸರಕಾರಗಳು ಉನ್ನತ ಶಿಕ್ಷಣವನ್ನು ಸರಕಾರಿ-ಖಾಸಗಿ ಸಹಯೋಗದಲ್ಲಿ (ಪಿಪಿಪಿ ಮಾದರಿಯಲ್ಲಿ) ಮುನ್ನಡೆಸಿದವು. ಒಪ್ಪಂದದ ಪ್ರಕಾರ, ಪ್ರಾಧ್ಯಾಪಕರು ಮತ್ತು ಇತರರ ಸಂಬಳವನ್ನು ಅನುದಾನದ (ಗ್ರಾಂಟ್) ಮೂಲಕ ಭರಿಸುವ ಹೊಣೆಯನ್ನು ಸರಕಾರ ಹೊತ್ತಿತು, ಹೊಸ ವೇಕೆನ್ಸಿಗಳನ್ನು ನೀಡುವ ಜವಾಬ್ದಾರಿಯನ್ನೂ ತೆಗೆದು ಕೊಂಡಿತು.
ಮೂಲಭೂತ ಸೌಲಭ್ಯಗಳ ಸೃಷ್ಟಿ ಮತ್ತು ಕಾಲೇಜುಗಳ ದೈನಂದಿನ ವಹಿವಾಟು ನಡೆಸುವುದು ಖಾಸಗಿ ಸಂಸ್ಥೆಗಳ ಜವಾಬ್ದಾರಿಯಾಗಿತ್ತು. ಇಂಥ ಸಂಸ್ಥೆಗಳು ಇಲ್ಲದಿದ್ದಲ್ಲಿ ಮಾತ್ರ ಸರಕಾರಿ ಕಾಲೇಜುಗಳು ಆರಂಭವಾದವು. ಸರಕಾರಗಳ ನೀತಿ ಈ ಸಂಸ್ಥೆಗಳ ಬೆಳವಣಿಗೆಗೆ ಪೂರಕವಾಯಿತು. ಈವಿಷಯದಲ್ಲಿ ಕರ್ನಾಟಕದ ಹಿಂದಿನ ಮುಖ್ಯಮಂತ್ರಿ ದೇವರಾಜ ಅರಸರನ್ನು ಸ್ಮರಿಸಬೇಕು; ಅವರ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ ಖಾಸಗಿ ಸಂಸ್ಥೆಗಳ ಶಿಕ್ಷಕರಿಗೆ ಚೆಕ್ ಮೂಲಕ ಸಂಬಳ ಪಾವತಿ ಆರಂಭವಾಯಿತು. ಈ ಕಾಲೇಜುಗಳೇ ಕ್ರಮೇಣ ‘ಅನುದಾನಿತ ಕಾಲೇಜುಗಳು’ ಎನಿಸಿಕೊಂಡವು.
ಈ ಖಾಸಗಿ-ಸರಕಾರಿ ಪಾಲುದಾರಿಕೆ ಮಾದರಿಯು ಕಾಲೇಜುಗಳ ಗುಣಮಟ್ಟದ ನಿರ್ವ ಹಣೆಗೆ ಪೂರಕವಾಯಿತು. ಕಾಲೇಜುಗಳ ದೈನಂದಿನ ಆಡಳಿತ ನೋಡಿಕೊಳ್ಳಲು ಕೈಜೋಡಿಸಿದ ಸ್ಥಳೀಕ ಗಣ್ಯರು, ನಿಸ್ವಾರ್ಥಿಗಳು, ಹಿರಿಯರು, ದಕ್ಷತೆ- ಪ್ರೀತಿ-ಕಾಳಜಿಯಿಂದ ಕಾರ್ಯನಿರ್ವಹಿಸಿದರು. ಅವಶ್ಯವಿದ್ದೆಡೆ ಉಚಿತ ಶಿಕ್ಷಣ ನೀಡಿದರು. ಇದು ದೇಶದ ಉನ್ನತ ಶಿಕ್ಷಣದ ಬೆಳವಣಿಗೆಯ ೨ನೇ ಹಂತ. ಇಂಥ ಹಲವು ಸಂಸ್ಥೆಗಳು ಶಿಕ್ಷಣದ ಜತೆಗೆ ಉಚಿತ ಊಟ-ವಸತಿಯನ್ನೂ ನೀಡಿದವು. ೩ನೇ ಹಂತ ಎನ್ನಬಹುದಾದ ವರ್ತಮಾನದಲ್ಲಿ ಪರಿಸ್ಥಿತಿ ವ್ಯಾಪಕವಾಗಿ ಬದಲಾಗಿದೆ. ಮೊದಲನೆಯದಾಗಿ, ದೇಶದಲ್ಲಿ ಎಲ್ಲ ಹಂತದ ಶಿಕ್ಷಣವೂ ವಾಣಿಜ್ಯೀಕರಣ ಗೊಂಡಿದೆ. ಅದು ನಮ್ಮ ಸಾಮಾಜಿಕ ಬೆಳವಣಿಗೆಯ ಒಂದು ಸಹಜ ಪ್ರಕ್ರಿಯೆಯೂ ಹೌದು. ಏಕೆಂದರೆ ಈಗ ಆರ್ಥಿಕವಾಗಿ ಬೆಳೆದಿರುವ ದೇಶದ ಒಂದು ವರ್ಗವು ಜಾಗತಿಕ ಮಟ್ಟದ ಶಿಕ್ಷಣವನ್ನು ಅಪೇಕ್ಷಿಸುತ್ತಿದೆ ಮತ್ತು ಅದಕ್ಕಾಗಿ ಎಷ್ಟು ಖರ್ಚುಮಾಡಲೂ ಸಿದ್ಧವಿದೆ.
ಹಾಗಾಗಿ ದೇಶದಲ್ಲಿ ಜಾಗತಿಕ ಗುಣ ಮಟ್ಟದ (ಹಾಗೆಯೇ ಶುಲ್ಕದ!) ಖಾಸಗಿ ಶಿಕ್ಷಣ ಸಂಸ್ಥೆಗಳು ಎಲ್ಲ ಹಂತಗಳಲ್ಲಿ, ವಲಯಗಳಲ್ಲಿ ಹುಟ್ಟಿ ಕೊಂಡಿವೆ. ಒಪ್ಪಿಕೊಳ್ಳಬೇಕಾದ ಮಾತೆಂದರೆ, ಅಂತಾ ರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡಲು ಬೇಕಾಗುವ ಮೂಲಸೌಕರ್ಯಗಳು ಮತ್ತು ಪರಿಕರಗಳಿಗೆ ನೂರಾರು ಕೋಟಿ ರುಪಾಯಿ ಬಂಡವಾಳ ಬೇಕಾಗುತ್ತದೆ. ಪ್ರಯೋಗಾಲಯ, ಕ್ರೀಡಾಂಗಣ, ಡಿಜಿಟಲ್ ವ್ಯವಸ್ಥೆ ಇತ್ಯಾದಿಗಳಿಗೆ ನಿಜಕ್ಕೂ ಭಾರಿ ಹೂಡಿಕೆ ಅಗತ್ಯ. ಆರ್ಥಿಕತೆ ಬೆಳೆದಂತೆ ಇಂಥ ಸಂಸ್ಥೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇಂಥ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಒಳ್ಳೆಯ ‘ಕ್ಯಾಂಪಸ್ ಅನುಭವ’ ನೀಡುವುದರ ಜತೆಗೆ ಹಲವು ಆಕರ್ಷಣೆಗಳನ್ನು ಹೊಂದಿರುತ್ತವೆ. ಇವು ಹೆಚ್ಚಾಗಿ ದೊಡ್ಡ ನಗರಗಳಲ್ಲಿ ರುವುದರಿಂದ ವಿದ್ಯಾರ್ಥಿಗಳಿಗೆ ಬೇಕಾಗುವ ಇತರ ಆಕರ್ಷಣೆ ಗಳೂ ಅಲ್ಲಿ ಲಭ್ಯವಿರುತ್ತವೆ.
ಹೀಗಾಗಿ ಆರ್ಥಿಕವಾಗಿ ಸಬಲವಾದ ಕುಟುಂಬಗಳ ವಿದ್ಯಾ ರ್ಥಿಗಳು ಇಂಥ ಸಂಸ್ಥೆಗಳಿಗೆ ಪಟ್ಟಣ ಮತ್ತು ಹಳ್ಳಿಗಳಿಂದ ವಲಸೆ ಹೋಗುತ್ತಿದ್ದಾರೆ.ಒಂದರ್ಥದಲ್ಲಿ ಇವು ಶೈಕ್ಷಣಿಕ ಮಾಲ್‌ಗಳು. ಇಲ್ಲಿ ಶಿಕ್ಷಣವು ವ್ಯಾಪಾರದ ಸರಕು, ದುಡ್ಡು ಕೊಟ್ಟು ಖರೀದಿಸಬಲ್ಲ ಕಮಾಡಿಟಿ. ಶಿಕ್ಷಣ ಕ್ಷೇತ್ರವು ಹೀಗೆ ಮಾರ್ಪಾಡಾಗಿ ರುವುದಕ್ಕೆ ಯಾರಿಗೂ ಬೇಸರವಿಲ್ಲ; ಅದೊಂದು ಸಹಜ ಮಾರುಕಟ್ಟೆ ಪ್ರಕ್ರಿಯೆ. ಬೇಡಿಕೆ ಇರುವಲ್ಲಿ ಪೂರೈಕೆ ಹುಟ್ಟಿಕೊಳ್ಳುತ್ತದೆ. ಈ ‘ಮಾಲ್’ಗಳನ್ನು ಅನುಕರಿಸಿದ ಪುಟ್ಟ ಶೈಕ್ಷಣಿಕ ಮಾಲ್‌ಗಳು ಹೆಚ್ಚು ಕಡಿಮೆ ತಾಲೂಕು ಕೇಂದ್ರದವರೆಗೂ ಪಸರಿಸಿವೆ. ಸಂಪೂರ್ಣ ಖಾಸಗಿ ಕಾಲೇಜುಗಳಾಗಿರುವ ಇವು ಸರಕಾರದ ಅನುದಾನ ಕೇಳುತ್ತಲೂ ಇಲ್ಲ.
ಏಕೆಂದರೆ ಅವುಗಳ ಬಳಿ ಹಣವಿದೆ. ಹಣವಂತರ ಮಕ್ಕಳು ಹೋಗುವುದು ಇಂಥ ಕಾಲೇಜುಗಳಿಗೇ. ಅಂದರೆ, ಸಮಾಜದ ಮೇಲ್ಪದರದ ಸುಮಾರು ಶೇ.೨೦ರಷ್ಟು ವಿದ್ಯಾರ್ಥಿಗಳು ಮೊದಲು ತಾವು ಹೋಗುತ್ತಿದ್ದ ಅನುದಾನಿತ ಕಾಲೇಜುಗಳನ್ನು ತೊರೆದಿದ್ದಾರೆ. ಈ ಸಂದರ್ಭದಲ್ಲೇ ಇನ್ನೊಂದು ಬದಲಾವಣೆ ಯಾಗಿದೆ; ಒಂದು ದೃಷ್ಟಿಯಿಂದ ಇದು ಸ್ವಾಗತಾ ರ್ಹವೇ. ಅದೇನೆಂದರೆ, ವಿಶೇಷವಾಗಿ ಕರ್ನಾಟಕ ದಲ್ಲಿ ತಾಲೂಕು, ಹೋಬಳಿ ಮಟ್ಟದವರೆಗೂ ಸರಕಾರಿ ಕಾಲೇಜುಗಳು ಸ್ಥಾಪನೆಗೊಂಡಿವೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ದೊಡ್ಡ ಸಂಖ್ಯೆಯಲ್ಲಿ ಸರಕಾರಿ ಕಾಲೇಜುಗಳನ್ನು ಆರಂಭಿಸಿದರು. ಇದರ ಹಿಂದೆ ಒಂದು ತರ್ಕ ಮತ್ತು ಉದ್ದೇಶವಿದೆ. ಅದೇನೆಂದರೆ, ನಮ್ಮ ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ದಾಖಲಾಗುವ ಯುವಜನರ ಸರಾಸರಿ ಪ್ರಮಾಣವು ಜಗತ್ತಿನ ಹಲವು ದೇಶಗಳಿಗೆ ಹೋಲಿಸಿದಾಗ ತೀರಾ ಕಮ್ಮಿ; ಒಟ್ಟು ದಾಖಲಾತಿ ಅನುಪಾತವು ಕೆಲವೇ ವರ್ಷಗಳ ಹಿಂದಿನವರೆಗೂ ಕೇವಲ ಶೇ.೧೫ರಷ್ಟಿತ್ತು. ಈ ಅನುಪಾತವನ್ನು ಹೆಚ್ಚಿಸುವ ಉದ್ದೇಶದಿಂದ, ವಿಶೇಷವಾಗಿ ಹಳ್ಳಿಗರಿಗೆ ಮತ್ತು ಹುಡುಗಿಯರಿಗೆ ಪದವಿ ಶಿಕ್ಷಣದ ಬಾಗಿಲು ತೆರೆಯುವ ಸಲುವಾಗಿ ಸರಕಾರಿ ಕಾಲೇಜುಗಳನ್ನು ಎಲ್ಲೆಡೆ ಸ್ಥಾಪಿಸಲಾಗಿದೆ.
ಇದು ಸಬ್ಸಿಡಿ ಆಧರಿತ ಶಿಕ್ಷಣ. ಸರಕಾರಿ ಪದವಿ ಮಹಾವಿದ್ಯಾಲಯಗಳಲ್ಲಿ ಹುಡುಗಿಯರಿಗೆ ಶುಲ್ಕವಿಲ್ಲ; ಹುಡುಗರಿಗೆ ಕೂಡ ಶುಲ್ಕ ಕಡಿಮೆಯೇ. ಹಾಗೆ ನೋಡಿದರೆ, ಇತ್ತೀಚಿನ ವರ್ಷಗಳಲ್ಲಿ ಸರಕಾರಿ ಕಾಲೇಜುಗಳೂ ಉತ್ತಮವಾಗಿಯೇ ಕೆಲಸ ಮಾಡುತ್ತಿವೆ. ಒಳ್ಳೆಯ ಬೋಧಕರ, ಕಟ್ಟಡಗಳ ವ್ಯವಸ್ಥೆಯಾಗಿದೆ. ಹೀಗಾಗಿ ಬಹುತೇಕ ಸರಕಾರಿ ಕಾಲೇಜುಗಳು ವಿದ್ಯಾರ್ಥಿ ಗಳಿಂದ ತುಂಬಿ ತುಳುಕುತ್ತಿವೆ. ಕೆಲವು ಕಾಲೇಜು ಗಳಲ್ಲಿ ೪-೫ ಸಾವಿರದವರೆಗೂ ವಿದ್ಯಾರ್ಥಿಗಳ ಸಂಖ್ಯೆಯಿದೆ. ಅಂದರೆ ಕೆಳಮಧ್ಯಮ ಮತ್ತು ಬಡವರ್ಗಕ್ಕೆ ಸೇರುವ ಸುಮಾರು ಶೇ.೫೦ರಷ್ಟು ವಿದ್ಯಾರ್ಥಿಗಳು ಅನುದಾನಿತ ಕಾಲೇಜು ತೊರೆದು ಸರಕಾರಿ ಕಾಲೇಜು ಸೇರಿಕೊಂಡಿದ್ದಾರೆ.
ಈಗ ಮುಖ್ಯ ವಿಷಯಕ್ಕೆ ಬರೋಣ. ಮೇಲೆ ಉಲ್ಲೇಖಿಸಲಾಗಿರುವ ಎರಡೂ ಬೆಳವಣಿಗೆಗಳು ಅನುದಾನಿತ ಕಾಲೇಜುಗಳನ್ನು ಸಂಕಷ್ಟಕ್ಕೆ ಗುರಿ ಮಾಡಿವೆ. ಸಂಕಷ್ಟದ ಹಿಂದೆ ಬೇರೆ ಕಾರಣಗಳೂ ಇವೆ. ಒಂದನೆಯದು, ಏನೇ ಸೌಲಭ್ಯಗಳನ್ನು ಒದಗಿಸಿದರೂ ಅನುದಾನಿತ ಸಂಸ್ಥೆಗಳು ಸರಕಾರ ವಿಧಿಸಿದ ಮಿತಿಯನ್ನು ದಾಟಿ ಶುಲ್ಕವನ್ನು ಸಂಗ್ರಹಿಸುವಂತಿಲ್ಲ. ಸರಕಾರದ ಕಾನೂನುಗಳಿಗೆ ಅವು ಬದ್ಧವಾಗಿರಬೇಕು. ಎರಡನೆಯದಾಗಿ, ಅಗತ್ಯ ವಿರುವಅನುದಾನೇತರ ನೌಕರರ ಸಂಬಳವನ್ನು ಅವೇ ನೀಡಬೇಕು. ಇನ್ನೊಂದು, ಅವುಗಳ ಮೂಲ ಆದರ್ಶಗಳಿಗೆ ಸಂಬಂಧಿಸಿದ್ದು. ಇಂಥ ಹಲವು ಸಂಸ್ಥೆಗಳಿಗೆ ಈಗಲೂ ವ್ಯಾಪಾರೀಕರಣಗೊಳ್ಳಲು ಮನಸ್ಸಿಲ್ಲ; ಏಕೆಂದರೆ ಅದು ಅವುಗಳ ಸ್ಥಾಪಕರ ಮೂಲ ಆಶಯಗಳಿಗೆ ವಿರುದ್ಧವಾದುದು. ಹಾಗಾಗಿ ಅಭಿವೃದ್ಧಿಗೆಸಾಕಷ್ಟು ಹಣವಿಲ್ಲ.
ಶುದ್ಧ ಖಾಸಗಿಯವರ ರೀತಿಯಲ್ಲಿ ಇವು ಸೌಲಭ್ಯಗಳನ್ನು ಬೆಳೆಸಲಾರವು. ದೊಡ್ಡ ಸಮಸ್ಯೆಯೆಂದರೆ, ಹಿಂದೆ ಈ ಕಾಲೇಜುಗಳ ಹಿಂದೆ ನಿಂತಿದ್ದ ಸರಕಾರಗಳು ಇತ್ತೀಚಿನ ವರ್ಷಗಳಲ್ಲಿ ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿರುವಂತಿದೆ. ಹೀಗಾಗಿ ನಗರಗಳ ಲ್ಲಿರುವಂಥ ಕೆಲವನ್ನು ಬಿಟ್ಟು ರಾಜ್ಯದ ನೂರಾರು ಅನುದಾನಿತ ಕಾಲೇಜುಗಳು ಸಂಕಷ್ಟದಲ್ಲಿವೆ. ಈ ಪ್ರಸಿದ್ಧ ಕಾಲೇಜುಗಳನ್ನು ಉಳಿಸಲು ಈ ಕ್ರಮ ಗಳನ್ನು ಕೈಗೊಳ್ಳಬಹುದು:
? ಸರಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುವ ಶುಲ್ಕ ರಿಯಾಯಿತಿ ಮತ್ತಿತರ ಪೂರ್ಣ ಸೌಲಭ್ಯಗಳನ್ನು ಸರಕಾರವು ಅನುದಾನಿತ ಕಾಲೇಜುಗಳಿಗೂ ವಿಸ್ತರಿಸಬೇಕು.
?ಅನುದಾನಿತ ಕಾಲೇಜುಗಳಿಗೆ ದೊಡ್ಡ ಇತಿಹಾಸವಿದೆ. ಅವುಗಳ ಹಳೆಯ ವಿದ್ಯಾರ್ಥಿಗಳು ಇಂದು ಜಾಗತಿಕವಾಗಿ ಹರಡಿಕೊಂಡಿದ್ದು ಅವರ ಬೆಂಬಲ ವನ್ನು ಈ ಕಾಲೇಜುಗಳು ಗಳಿಸಿಕೊಳ್ಳಬೇಕು.
? ಅನುದಾನಿತ ಕಾಲೇಜುಗಳು ತಾವು ಖ್ಯಾತಿ ಪಡೆದಿರುವ ಆಟ್ , ಕಾಮರ್ಸ್, ಸೈನ್ಸ್ ಅಥವಾ ಯಾವುದೋ ಒಂದು ವಿಶಿಷ್ಟ ಕೋರ್ಸ್‌ನ ವೈಶಿಷ್ಟ್ಯದ ಮೇಲೆ ಹೆಚ್ಚು ಲಕ್ಷ್ಯ ವಹಿಸಿ ಅದನ್ನು ತಮ್ಮ ಬೆಳವಣಿಗೆಯ ಕೇಂದ್ರವಾಗಿಸಿಕೊಳ್ಳಬೇಕು.
? ಈ ಕಾಲೇಜುಗಳು ತಮಗಿರುವ ಸ್ವಾತಂತ್ರ್ಯದ ಇತಿಮಿತಿಯಲ್ಲೇ ಕಲಿಸುವಿಕೆಯ ಗುಣಮಟ್ಟವನ್ನು ಆಧುನಿಕಗೊಳಿಸಬೇಕು.
ಒಟ್ಟಾರೆ ಹೇಳುವುದಾದರೆ, ಅಂಕೋಲಾದಲ್ಲಿ ಆರಂಭವಾದ ಚರ್ಚೆ ಅಲ್ಲಿಗೇ ನಿಲ್ಲಬಾರದು.
(ಲೇಖಕರು ನಿವೃತ್ತ ಪ್ರಾಂಶುಪಾಲರು)