ಟಾಪ್ ಗೇರ್‌ನಲ್ಲಿ ನಡೆಯುತ್ತಿದೆ ಪಕ್ಷಾಂತರ ಪರ್ವ
ವಿಶ್ಲೇಷಣೆ
ರಮಾನಂದ ಶರ್ಮಾ
ಚುನಾವಣಾ ಪೂರ್ವದಲ್ಲಿ ಪಕ್ಷಾಂತರ ಪರ್ವ ಆರಂಭವಾಗುತ್ತದೆ ಎಂಬುವ ರಾಜಕೀಯ ವೀಕ್ಷಕರ, ಜನಸಾಮಾನ್ಯರ ನಿರೀಕ್ಷೆ ಹುಸಿಯಾಗಲಿಲ್ಲ. ಜಗದೀಶ್ ಶೆಟ್ಟರ್ ಇದಕ್ಕೆ ನಾಂದಿ ಹಾಡಿದ್ದು, ಇದು ಅರಂಭಮಾತ್ರ.
ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆಯವರೆಗೆ- ‘ನಾನೀಗ ಪಂಜರದ ಗಿಣಿಯಲ್ಲ, ಸ್ವತಂತ್ರ ಹಕ್ಕಿ, ಇಲ್ಲಿಯವರೆಗೆ ಉಸಿರು ಕಟ್ಟುವ ವಾತಾವರಣ ದಲ್ಲಿದ್ದೆ, ಈಗ ನಿರಾಳವಾಗಿದ್ದೇನೆ, ನಾನೀಗ ಗುಲಾಮನಲ್ಲ, ಮರಳಿ ತವರಿಗೆ ಬಂದಿದ್ದೇನೆ, ನನ್ನ ಮನೆಗೆ ನಾನು ಹಿಂತಿರುಗಿದ್ದೇನೆ, ಇಷ್ಟು ದಿನ ನನ್ನ ದೇಹ ಮಾತ್ರ ಅಲ್ಲಿ ಇತ್ತು, ಆದರೆ, ಮನಸ್ಸು ಮತ್ತು ಹೃದಯ ಇಲ್ಲಿತ್ತು, ನಾನೀಗ ನೆಮ್ಮದಿಯಲ್ಲಿದ್ದೇನೆ, ನಾನೀಗ ಇವರ ಕೈಯನ್ನು ಬಲಪಡಿಸಲು ಮತ್ತು ಇವರು ಅಧಿಕಾರದಲ್ಲಿ ಮುಂದುವರಿಯಲು ಹಗಲಿರಳೂ ಶ್ರಮಿಸುತ್ತೇನೆ…’ ಮುಂತಾದ ಹೇಳಿಕೆಗಳು ಢಾಳಾಗಿ ಕೇಳಿಬರುವ ಸಾಧ್ಯತೆ ತಳ್ಳಿ ಹಾಕಲಾಗದು.
ಇವರು ಮತ್ತು ಇವರ ಮಾತು ಎರಡೂ ಸಂದರ್ಭಕ್ಕೆ, ಅನುಕೂಲಕ್ಕೆ ಸರಿಯಾಗಿ ಬದಲಾಗುತ್ತವೆ. ಶೆಟ್ಟರ್ ಮೂಲತಃ ಆರೆಸ್ಸೆಸ್, ಜನಸಂಘದ ತಳಿಯವರು. ಅವರು ಕಾಂಗ್ರೆಸ್‌ನ ಸಿದ್ಧಾಂತ, ಕಾರ್ಯಕ್ರಮಗಳು, ಚಿಂತನೆಗಳು ಮತ್ತು ಕಾರ್ಯ ವೈಖರಿಗಳಿಗೆ ಹೊಂದಿಕೊಳ್ಳುವುದು ಅಸಾಧ್ಯವಾಗಿತ್ತು. ಒಂದು ಕೆಟ್ಟ ಘಳಿಗೆ, ಸಂದರ್ಭ, ಅನಿವಾರ್ಯತೆ, ಅಸಹಾಯಕತೆ, ತನ್ನಲ್ಲಿನ್ನೂ ರಾಜಕೀಯದ ಚೈತನ್ಯ ಇದೆ ಎಂದು ಜಗತ್ತಿಗೆ ತೋರಿಸುವ ಧಾವಂತ ಅವರನ್ನು ಪಕ್ಷಾಂತರಕ್ಕೆ ಪ್ರಚೋದಿಸಿತ್ತು.
ಸೈದ್ಧಾಂತಿಕವಾಗಿ ಇದು ಒಂದು ರೀತಿಯಲ್ಲಿ ಯುಟರ್ನ್ ಅಗಿತ್ತು. ವಿಶ್ಲೇಷಕರ ಪ್ರಕಾರ ಇದು ಒಲ್ಲದ ಮದುವೆಯಾಗಿದ್ದು, ವಿಚ್ಛೇದನ ಅನಿವಾರ್ಯ ವಾಗಿತ್ತು. ಇಷ್ಟು ದಿನ ಬದುಕಿ, ಬೆಳೆದು ಬಂದ ಸಂಸ್ಕೃತಿ ನರ ನಾಡಿಯಲ್ಲಿ ಹರಿಯುತ್ತಿರುವಾಗ, ಅದಕ್ಕೆ ತದ್ವಿರುದ್ಧ ಪ್ರವಾಹದಲ್ಲಿ ಈಜುವುದು ಯಾರಿಗೂ ಅಸಾದ್ಯ. ಕುಲ ನೋಡಿ ಹೆಣ್ಣು ಕೊಡು ಎನ್ನುವುದು ಹಳೆಯ ಮಾತು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಖಾರ್ಗೆಯವರು ಇದೇ ಧಾಟಿಯಲ್ಲಿ ಪೂರ್ವಾಪರ ನೋಡದೆ, ವಿಸ್ತೃತವಾಗಿ ಚಿಂತನ ಮಂಥನ ಮಾಡದೆ ಪಕ್ಷಕ್ಕೆ ಯಾರನ್ನೂ ಸೇರಿಸಿಕೊಳ್ಳಬಾರದು ಎಂದು ಡಿಕೆಶಿಗೆ ಹೇಳಿದ್ದರಂತೆ. ಅದನ್ನೂ ಮೀರಿ ಶೆಟ್ಟರ್ ಅವರನ್ನು ಸೇರಿಸಿಕೊಂಡಿದ್ದಲ್ಲದೇ, ಪಕ್ಷದಲ್ಲಿ ದಶಕಗಳ ಕಾಲದಿಂದ ಸೇವೆ ಸಲ್ಲಿಸುತ್ತಿರುವ ಹಳಬರನ್ನು ನಿರ್ಲಕ್ಷಿಸಿ ಅವರನ್ನುವಿಧಾನ ಪರಿಷತ್ತಿಗೆ ಆಯ್ಕೆ ಮಾಡಲಾಗಿತ್ತು.
ಮುಂದಿನ ದಿನಗಳಲ್ಲಿ ಮಂತ್ರಿಗಳಾಗುವ ಸಾದ್ಯತೆಯೂ ಕೇಳಿ ಬರುತ್ತಿತ್ತು. ಅವರ ಮೇಲಿನ ಒತ್ತಡ ಮತ್ತು ಅವರ ಅನಿವಾರ್ಯ ಏನೇ ಇರಲಿ, ಅವರ ಪಕ್ಷಾಂತರದ ಸುದ್ದಿ ಮಾಯುವ ಮೊದಲು, ಅವರು ಇನ್ನೊಂದು ಪಕ್ಷಾಂತರ ಮಾಡಿದ್ದು ಪ್ರಜ್ಞಾವಂತರು ಚಿಂತಿಸುವಂತೆ ಮಾಡಿದೆ. ಅಲ್ಪಸಂಖ್ಯಾತರಿಗೆ ಸಾವಿರಾರು ಕೋಟಿ ನೆರವು, ಹಿಜಾಬ್ ವಿಷಯದಲ್ಲಿ ತಳೆದ ನಿಲುವು, ಧರ್ಮದ ವಿಚಾರದಲ್ಲಿ ಕೆಲವರ ಹೇಳಿಕೆ, ಸನಾತನ ಧರ್ಮದ ವಿಚಾರದಲ್ಲಿ ಇಂಡಿಯಾ ಒಕ್ಕೂಟ ಪಕ್ಷದ ಕೆಲವರ ಹೇಳಿಕೆಯನ್ನು ಖಂಡಿಸಲಾರದ ಅಸಹಾಯಯಕತೆ, ಅಯೋಧ್ಯಾ ರಾಮ ಲೋಕಾರ್ಪಣೆ ವಿಚಾರದಲ್ಲಿ ದೇಶವೇ ಒಂದಾಗಿರುವಾಗ ಪಕ್ಷವು ತಳೆದ ವಿಭಿನ್ನ ನೀತಿ ಅವರು ಪಕ್ಷ ಬಿಡಲು ಕಾರಣ ಎನ್ನುವ ಕೆಲವು ವಿಶ್ಲೇಷಕರ ಅಭಿಮತದಲ್ಲಿ ಅರ್ಥವಿಲ್ಲದಿಲ್ಲ.
ಇನ್ನು ಲಕ್ಷ್ಮಣ ಸವದಿ ಹಿಂದೆ ಉಳಿಯಬಹುದೇ ಎನ್ನುವ ಜಿಜ್ಞಾಸೆ ಮುನ್ನೆಲೆಗೆ ಬಂದಿದೆ. ಹಾಗೆಯೇ ಗಣಿ ಧಣಿ ಜನಾರ್ದನ ರೆಡ್ಡಿಯವರ ಹೆಸರೂಇಂಥ ಸಂಭಾವ್ಯರ ಪಟ್ಟಿಯಲ್ಲಿ ಕೇಳಿ ಬರುತ್ತಿದೆ. ಇದು ಚುನಾವಣಾ ಪರ್ವ ಕಾಲವಾಗಿದ್ದು, ಮತಗಳ ಮೂಟೆಯನ್ನು ತರಬಹುದಾದ ಎಲ್ಲರಿಗೂ ತೆರೆದ ಹೃದಯದ ಸ್ವಾಗತ ನಿರೀಕ್ಷಿತ. ಇಲ್ಲಿ ಬೇರೆ ಎಲ್ಲ ಗುಣ ಮತ್ತು ಅವಗುಣಗಳು ಗೌಣವಾಗಿರುತ್ತವೆ. ೨೦೨೩ರ ವಿಧಾನ ಸಭಾ ಚುನಾವಣೆಯ ನಂತರ ಅಪರೇಷನ್ ಹಸ್ತದ ಸಾಧ್ಯತೆ ಭಾರೀ ಸದ್ದು ಮಾಡುತ್ತಿತ್ತು. ಸಂಭಾವ್ಯ ಪಕ್ಷಾಂತರಿಗಳ ಉದ್ದುದ್ದ ಪಟ್ಟಿ ಮಾಧ್ಯಮ ದಲ್ಲಿ ಮಿಂಚುತ್ತಿತ್ತು. ಮಾಜಿ ಸಚಿವರಾದ ಶಿವರಾಮ್ ಹೆಬ್ಬಾರ್ ಮತ್ತು ಸೊಮಶೇಖರ್ ಹೆಸರು ಮಂಚೂಣಿಯಲ್ಲಿದ್ದು ಅವರು ಗೋಡೆ ಹಾರಿಯೇ ಬಿಟ್ಟರು ಎನ್ನುವ ರೀತಿಯಲ್ಲಿವರದಿಗಳಾಗುತ್ತಿದ್ದವು. ಸೋಮಣ್ಣರಿಗೆ ತುಮುಕೂರಿನಿಂದ ಕಾಂಗ್ರೆಸ್ ಟಿಕೆಟ್ ಎಂದು ವದಂತಿಗಳೂ ತೀವ್ರವಾಗಿ ಹರಡಿತ್ತು. ಈ ಹಾರಿಕೆಯು ಪಂಚ  ಜ್ಯಚುನಾವಣೆಯ ನಂತರ ಮತ್ತು ಲೋಕಸಭಾ ಚುನಾವಣೆಯು ಹತ್ತಿರವಾದಂತೆ ಗೇರ್ ಬದಲಾಯಿಸುತ್ತದೆ ಎನ್ನುವ ಆಶಯ ನಿಜವಾಗುತ್ತಿದ್ದು, ಜಗದೀಶ್ಶೆಟ್ಟರ್ ಇನಿಂಗ್ಸ್ ಓಪನ್ ಮಾಡಿದ್ದಾರೆ.
ಬದಲಾದ ರಾಜಕೀಯ ವಾತಾವರಣ ಮತ್ತು ದೇಶದಲ್ಲಿನ ಅಯೋಧ್ಯಾ ರಾಮ ಮಂದಿರ ಲೋಕಾರ್ಪಣೆಯ ನಂತರದ ಸನ್ನಿವೇಶದಲ್ಲಿ ಹಲವರು ಕಮಲ ಪಕ್ಷದಿಂದ ಹೊರಹೋಗಲು ಎತ್ತಿದ್ದ ಕಾಲನ್ನು ಹಿಂದಿ ಕ್ಕುವ ಸಾಧ್ಯತೆ ಹೆಚ್ಚಾಗಿ ಕಾಣುತ್ತದೆ. ರಾಷ್ಟ್ರೀಯ ಪಕ್ಷಗಳಲ್ಲಿ ವರಿಷ್ಠರು ಮತ್ತು ಹೈಕಮಾಂಡ್ ವಿರುದ್ಧ ಎತ್ತಿದ ಧ್ವನಿ ಬಹುಕಾಲ ನಿಲ್ಲುವುದಿಲ್ಲ. ಯತ್ನಾಳ್ ವರ್ಷಗಟ್ಟಲೆ ವರಿಷ್ಠರ ವಿರುದ್ಧ ಪರೋಕ್ಷವಾಗಿ ಮತ್ತು ರಾಜ್ಯದ ಕೆಲವು ನಾಯಕರ ನೇರವಾಗಿ ದಾಳಿ ನಡೆಸಿದರು. ಸೋಮಣ್ಣ ಕೂಡ ಸುಮಾರು ಆರು ತಿಂಗಳ ಕಾಲ ಮುನಿಸಿಕೊಂಡಿದ್ದರು. ಇವರು ಪಕ್ಷಕ್ಕೆ ಏನಾದರೂ ಡ್ಯಾಮೇಜ್ ಮಾಡಬಹುದು ಎಂದು ನಿರೀಕ್ಷಿಸಿದವರಿಗೆ ನಿರಾಸೆಯಾಗಿದೆ.
ಇವರನ್ನು ದೆಹಲಿ ವರಿಷ್ಠರು ಒಮ್ಮೆ ಕರೆದು ಮಾತನಾಡುತ್ತಿದ್ದಂತೆ ಭಿನ್ನಮತ ತಣ್ಣಗಾಗಿದೆ. ಅವರು ಈಗ ಮಾಧ್ಯಮದಲ್ಲಿ ಕಾಣುವುದೇ ಇಲ್ಲ. ತುಮಕೂರಿನಿಂದ ಕಾಂಗ್ರೆಸ್ ಟಿಕೆಟ್ ಮೇಲೆ ಲೋಕಸಭೆಗೆ ಸೋಮಣ್ಣ ಸ್ಪರ್ಧಿಸುತ್ತಾರೆ ಎನ್ನುವ ವದಂತಿ ಈಗ ‘ಭಾಜಪ ಟಿಕೆಟ್ ಮೇಲೆ’ ಎಂದು ಬದಲಾಗಿದೆ. ಹಾಗೆಯೇ ಯತ್ನಾಳ ಹೆಸರು ವಿಜಾಪುರ ದಿಂದ ಸ್ಪರ್ಧಿಸುವರ ಸಂಭಾವ್ಯ ಪಟ್ಟಿಯಲ್ಲಿ ಕಾಣುತ್ತಿದೆ. ಸೋಮಸೇಖರ್ ಮತ್ತು ಹೆಬ್ಬಾರ್ ವಿಷಯದಲ್ಲೂ ಇದೇ ಪ್ರಹಸನ ನಡೆದರೂ ಆಶ್ಚರ್ಯವಿಲ್ಲ. ಯಾರು ಎಷ್ಟೇ ದೊಡ್ಡವರಿರಲಿ, ಪ್ರಭಾವಿಗಳಿರಲಿ ಹೈಕಮಾಂಡ್ ಎದುರಿಗೆ ಅವರು ಕುಬ್ಜರುಎನ್ನುವ ಚೋ ರಾಮಸ್ವಾಮಿಯವರ ಜೋಕ್ ಎಂದಿಗೂ ಪ್ರಸ್ತುತ.
ಇನ್ನು ಕೇಂದ್ರದತ್ತ ನೋಡಿದರೆ, ಭಾರತ ದಲ್ಲಿ ವಾಜಪೇಯಿಯವರ ಹೊರತಾಗಿ ಯಾರಿಂದಲೂ ಸಮ್ಮಿಶ್ರ ಸರಕಾರವನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಗಿಲ್ಲ. ಪ್ರಮೋದ್ ಮಹಾಜನ್‌ರ ಮಹತ್ವಾಕಾಂಕ್ಷೆಯ ‘ಇಂಡಿಯಾ ಶೈನಿಂಗ್’ ಘೊಷವಾಕ್ಯ ದಡಿಯ ಚುನಾವಣೆಯಲ್ಲಿ ಅವರ ೧೩ಪಕ್ಷಗಳ ಸರಕಾರ ಮುಂದುವರಿಯಲಿಲ್ಲ. ಅದೇ ಮಾದರಿಯಲ್ಲಿ ಹೊರಟ ಮಲ್ಲಿಕಾರ್ಜುನ ಖರ್ಗೆ, ಯುದ್ಧ ಆರಂಭವಾಗುವ ಮೊದಲೇ ಶಸ್ತ್ರತ್ಯಾಗದ ಸ್ಥಿತಿಯಲ್ಲಿದ್ದಾರೆ.
ಅವರ ಇಂಡಿಯಾ ಒಕ್ಕೂಟದಲ್ಲಿ ಆಟ ಆರಂಭವಾಗುವ ಮೊದಲೇ ಆಟಗಾರರು ಕಳಚಿಕೊಳ್ಳುತ್ತಿದ್ದು, ಇಂಡಿಯಾ ಒಕ್ಕೂಟ ಅಕಸ್ಮಾತ್ ಗೆಲುವು ಸಾಧಿಸಿದರೂ ತಮಗೆ ಪ್ರಧಾನಿ ಪಟ್ಟ ದೊರಕದು ಎನ್ನುವುದು ಖಾತ್ರಿಯಾಗುತ್ತಿರುವಂತೆ ಬಿಹಾರದ ನಿತೀಶ್ ಕುಮಾರ್ ತಮ್ಮ ವರಸೆ ಬದಲಿಸಿzರೆ.ಸಮ್ಮಿಶ್ರ ಸರಕಾರದಲ್ಲಿ ಭಿನ್ನಮತ ಮಾಮೂಲು. ಆದರೆ, ದಿಢೀರ್ ಆಗಿ ಇಂತಹ ನಿರ್ಣಯ ತೆಗೆದುಕೊಳ್ಳುವಷ್ಟು ಬಿಹಾರ ಸರಕಾರದಲ್ಲಿ ಭಿನ್ನಮತ ಗಂಭೀರವಾಗಿರಲಿಲ್ಲ. ಹತ್ತು ವರ್ಷಗಳಲ್ಲಿ ನಾಲ್ಕು ಬಾರಿ ಮಿತ್ರರನ್ನು ಬದಲಿಸಿ ೯ನೇ ಬಾರಿ ಮುಖ್ಯಮಂತ್ರಿಯಾಗಿ ಉಳಿದ ಅವರ ರಾಜಕೀಯ ಚಾಕಚಕ್ಯತೆಗೆ ಮತ್ತು ತಂತ್ರಗಾರಿಕೆಗೆ ಇಡೀ ದೇಶವೇ ಬೆಕ್ಕಸ ಬೆರಗಾಗಿದೆ.
ನೈತಿಕತೆ, ನೀತಿ, ಆದರ್ಶ, ತತ್ವ , ಸಿದ್ಧಾಂತಗಳನ್ನು ಮೆಟ್ಟಿ ನಿಂತು ಅಧಿಕಾರ ಹಿಡಿಯುವ ಅವರನ್ನು ಬಿಹಾರದ ಜನತೆ ಮತ್ತೆ ಮತ್ತೆ ಆಯ್ಕೆಮಾಡುವುದು ಮಾತ್ರ ತೀರಾ ಆಶ್ಚರ್ಯ. ಇದು ಅನ್ಯಥಾ ನಾಸ್ತಿ ಆಥವಾ ಇಂಗ್ಲಿಷ್‌ನಲ್ಲಿ ಹೇಳುವಂತೆ ತಿನಾ -ಕ್ಟರ್ ಇರಬಹುದೇ? ಅವರ ಈ ಹೊಸ ಮೈತ್ರಿಯನ್ನು ಭಾಜಪದ ಕೆಲವು ಉನ್ನತ ಮಟ್ಟದ ಧುರೀಣರು ‘ನಿತೀಶ್‌ರು ಅಪವಿತ್ರ ಮೈತ್ರಿಯಿಂದ ಹೊರಗೆ ಬಂದಿದ್ದಾರೆ’ ಎಂದು ಬಣ್ಣಿಸಿದ್ದು ಪ್ರeವಂತರಿಗೆ ಶಾಕ್ ಅಗಿದೆ. ತಮ್ಮೊಡನೆ ಮೈತ್ರಿ ಮಾಡಿಕೊಂಡರೆ ಅದು ಪವಿತ್ರ, ಇನ್ನೊಬ್ಬರೊಂದಿಗೆ ಮೈತ್ರಿ ಮಾಡಿಕೊಂಡರೆ ಅದು ಅಪವಿತ್ರ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬೇಕಾದಂತೆ ಬಗ್ಗಿಸಲು, ಅಪಹಾಸ್ಯ ಮಾಡಲು ಮತ್ತು ಲೇವಡಿ ಮಾಡಲು ಒಂದು ಮಿತಿ ಬೇಡವೇ?
(ಲೇಖಕರು ರಾಜಕೀಯ ಮತ್ತು ಆರ್ಥಿಕವಿಶ್ಲೇಷಕರು)