ಪರೀಕ್ಷಾ ಪೇ ಚರ್ಚಾ; ಮತ್ತು ಮೋದಿ ಸಲಹೆ
ಅಭಿಮತ
ಸಿಹಿಜೀವಿ ವೆಂಕಟೇಶ್
ದಿವಂಗತ ಪ್ರಧಾನಿ ನೆಹರು ಮಕ್ಕಳ ಪ್ರೀತಿಯ ಚಾಚಾ ಆಗಿದ್ದರು. ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಅವರು ಮಕ್ಕಳಿಗೆ ಅಮೂಲ್ಯ ಸಲಹೆ, ಮಾರ್ಗದರ್ಶನ ನೀಡಿ ಪುಸ್ತಕಗಳನ್ನು ಸಹ ಬರೆದು ಹುರಿದುಂಬಿಸಿದರು. ಅದೇ ಹಾದಿಯಲ್ಲಿ ನಮ್ಮ ಪ್ರಧಾನಿ ಮೋದಿಯವರೂ ಸಾಗುತ್ತಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಪ್ರಧಾನಿಯವರು ‘ಪರೀಕ್ಷಾ ಪೆ ಚರ್ಚಾ’ ನಡೆಸಿ, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ನೇರ ಸಂವಾದ ನಡೆಸಿದರು. ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರ ಗೊಂದಲ ನಿವಾರಿಸುವ ಪ್ರಯತ್ನ ಮಾಡಿದರು. ಅದರಲ್ಲೂ, ಪರೀಕ್ಷೆಯ ಕುರಿತು ವಿದ್ಯಾರ್ಥಿಗಳು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದು, ಪ್ರಧಾನಿಯವರು ಹಲವು ಸಲಹೆಗಳನ್ನು ನೀಡಿದ್ದಾರೆ. ಉದಾಹರಣೆ, ನಿದರ್ಶನಗಳ ಮೂಲಕ ಪರೀಕ್ಷಾ ಭಯ ಹೋಗಲಾಡಿಸಲು ಯತ್ನಿಸಿದ್ದಾರೆ. ಅವುಗಳಲ್ಲಿ ಪ್ರಮುಖ ೧೦ ಸಲಹೆಗಳು ಇಲ್ಲಿವೆ.
ರೈಲು ಬರುತ್ತಲೇ ಯಾರೂ ಸ್ಟೇಷನ್ ತಲುಪುವುದಿಲ್ಲ. ರೈಲು ಬರುವ ೧೦ ನಿಮಿಷ ಮೊದಲೇ ತೆರಳುತ್ತೇವೆ. ಹಾಗೆಯೇ, ಪರೀಕ್ಷೆಯ ಕೊಠಡಿಗೂ ಮೊದಲೇ ತೆರಳಬೇಕು. ಕೊಠಡಿಯ ಬಾಗಿಲಿನವರೆಗೆ ಪುಸ್ತಕ ಹಿಡಿದುಕೊಂಡು ಹೋಗಬಾರದು. ೧೦ ನಿಮಿಷ ಮೊದಲೇ ಪರೀಕ್ಷಾ ಕೇಂದ್ರಕ್ಕೆ ತೆರಳಿ. ಗೆಳೆಯ ರೊಂದಿಗೆ ಮಾತನಾಡಿ, ಒಂದು ಜೋಕ್ ಹೇಳಿ, ಮೊದಲು ನಿರಾತಂಕವಾಗಿ ಉಸಿರಾಡಿ. ಪ್ರಶ್ನೆ ಪತ್ರಿಕೆ ಕೈಗೆ ನೀಡುತ್ತಲೇ ಗಾಬರಿಯಾಗದಿರಿ. ಎಲ್ಲ ಪ್ರಶ್ನೆಗಳನ್ನು ಓದಿಕೊಳ್ಳಿ. ಯಾವ ಪ್ರಶ್ನೆಗೆ ಹೆಚ್ಚು ಸಮಯ ಬೇಕಾಗುತ್ತದೆ ಎಂಬುದನ್ನು ಯೋಚಿಸಿ.
ಊಟ ಮಾಡುವಾಗ ಯಾರೂ ಗಡಿಯಾರ ನೋಡುವುದಿಲ್ಲ. ಹಾಗೆಯೇ, ಪರೀಕ್ಷೆ ಬರೆಯುವಾಗ ಅನಗತ್ಯ ಗಡಿಯಾರ ನೋಡಿಕೊಳ್ಳದಿರಿ. ಅವಸರಕ್ಕೆ ಬಿದ್ದು ಬರೆಯಲು ಮುಂದಾಗದಿರಿ. ಪರೀಕ್ಷೆಗೆ ಹೆಚ್ಚಿನ ವಿದ್ಯಾರ್ಥಿಗಳು ಓದಿಕೊಂಡು ಹೋಗುತ್ತಾರೆಯೇ ಹೊರತು, ಬರೆದು ಅಭ್ಯಾಸ ಮಾಡಿ ಕೊಂಡಿ ರುವುದಿಲ್ಲ. ಹಾಗಾಗಿ, ಎಷ್ಟೇ ಓದಿದರೂ ಪರೀಕ್ಷೆಯಲ್ಲಿ ಉತ್ತಮವಾಗಿ ಬರೆಯಲು ಆಗುವುದಿಲ್ಲ. ಮೊದಲು ಪ್ರಶ್ನೆಗಳಿಗೆ ಉತ್ತರ ಬರೆದು ಬರೆದುಅಭ್ಯಾಸ ಮಾಡಿಕೊಳ್ಳಿ. ಆಗ ಮನನವೂ ಆಗುತ್ತದೆ, ಪರೀಕ್ಷೆಯಲ್ಲಿ ಸುಲಭವಾಗಿ ಬರೆಯುವುದೂ ಸಾಧ್ಯವಾಗುತ್ತದೆ.
ಯಾರೇ ಆಗಲಿ, ನೀರಿಗೆ ಇಳಿಯದ ಹೊರತೂ ಈಜು ಕಲಿಯಲು ಸಾಧ್ಯವಿಲ್ಲ. ಹಾಗೆಯೇ, ಹಳೆಯ ಪ್ರಶ್ನೆಪತ್ರಿಕೆಗಳಿಗೆ, ಪ್ರಶ್ನೆಗಳಿಗೆ ಬರೆದು, ನೋಟ್ಸ್‌ ಗಳನ್ನು ಮಾಡಿಕೊಂಡು ಪರೀಕ್ಷೆಗೆ ತಯಾರಾಗಿ. ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳು ವಾಗಲೇ ಶಿಕ್ಷಕರೊಂದಿಗೆ ಉತ್ತಮ ಒಡನಾಟ ಇಟ್ಟುಕೊಳ್ಳಬೇಕು. ಓದುವಾಗ ಗೊಂದಲ ಬಂದರೆ ಶಿಕ್ಷಕರಿಗೆ ಪ್ರಶ್ನೆ ಕೇಳಬೇಕು, ಮನೆಯಲ್ಲಿದ್ದರೆ ಮೊಬೈಲ್ ಕರೆ ಮಾಡಬೇಕು. ಆಗ ತಕ್ಷಣವೇ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಮೊಬೈಲಅನ್ನು ನಿತ್ಯ ಚಾರ್ಜ್ ಮಾಡದಿದ್ದರೆ ಅದು ಸ್ವಿಚ್‌ಆಫ್ ಆಗುತ್ತದೆ. ಹಾಗೆಯೇ ಮನುಷ್ಯನ ದೇಹವನ್ನೂ ರಿಚಾರ್ಜ್ ಮಾಡಬೇಕಾಗುತ್ತದೆ. ಅದರಲ್ಲೂ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮೆದುಳು, ಮನಸ್ಸಿನ ಜತೆಗೆ ದೇಹವನ್ನೂ ಉಲ್ಲಸಿತಗೊಳಿಸಬೇಕು.
ವಿದ್ಯಾರ್ಥಿಗಳು ಒಂದೇ ಕಡೆ ಓದುವ ಬದಲು ಎಳೆ ಬಿಸಿಲಿನಲ್ಲಿ ಕುಳಿತು ಓದಬೇಕು. ಶಾಂತಿಯುತ ವಾತಾವರಣದಲ್ಲಿ ಅಧ್ಯಯನ ಮಾಡಬೇಕು. ಸರಿ ಯಾಗಿ ನಿದ್ದೆ ಮಾಡಬೇಕು. ಮೊಬೈಲ್‌ನಲ್ಲಿ ಒಂದರ ಹಿಂದೆ ಒಂದು ರೀಲ್ಸ್‌ಗಳನ್ನು ನೋಡಿದರೆ ಮೊದಲು ನೋಡಿದ ರೀಲ್ ನೆನಪಿರುವುದಿಲ್ಲ. ಹಾಗಾಗಿ, ಎಡೆಬಿಡದೆ ಓದುವ ಬದಲು ಮಧ್ಯಮಧ್ಯ ಬದಲಾವಣೆ, ವಿಶ್ರಾಂತಿ ಇರಲಿ.
ಓದುವುದು, ಬರೆಯುವುದು, ಮನನ ಮಾಡಿಕೊಳ್ಳುವುದು ಎಷ್ಟು ಮುಖ್ಯವೋ ಆಹಾರವೂ ಅಷ್ಟೇ ಮುಖ್ಯ. ಪರೀಕ್ಷೆಯ ದಿನಗಳಲ್ಲಿ ನಿಯಮಿತ ಆಹಾರ ಸೇವಿಸಿ. ಬಡತನ ಇರಲಿ ಸಿರಿತನ ಇರಲಿ ಇರುವ ಆಹಾರ ಸೇವಿಸಿ. ಸರಿಯಾದ ಸಮಯಕ್ಕೆ ಊಟ ಮಾಡಿ. ವ್ಯಾಯಾಮ ಪ್ರಮುಖವಾದುದು. ನಿತ್ಯವೂ ಬೆಳಗ್ಗೆ ಎದ್ದು ಹಲ್ಲುಜ್ಜುವ ರೀತಿ, ಬೆಳಗ್ಗೆ ಎದ್ದ ತಕ್ಷಣ ೧೦ ನಿಮಿಷವಾದರೂ ವ್ಯಾಯಾಮ ಮಾಡಿ. ಇದರಿಂದ ದೇಹವು ಉಲ್ಲಾಸಗೊಳ್ಳುತ್ತದೆ. ದೈಹಿಕ ಚಟುವಟಿಕೆಯು ವಿದ್ಯಾರ್ಥಿಗಳಿಗೆ ಪ್ರಮುಖವಾಗಿದೆ. ಚಳಿಯೊಂದಿಗೆ ಜೀವನ ಸಾಗಿಸುವ ಮನಃಸ್ಥಿತಿ ರೂಢಿಸಿಕೊಂಡರೆ, ಹೆಚ್ಚು ಚಳಿ ಎನಿಸುವುದಿಲ್ಲ. ಪರೀಕ್ಷೆಯೂ ಹಾಗೆಯೇ ನಾವು ಮೊದಲು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವ ದೃಢ ನಿಶ್ಚಯ ಮಾಡಿಕೊಳ್ಳಬೇಕು. ಮೊದಲು ಮೆದುಳನ್ನು ಪರೀಕ್ಷೆಗೆ ಸಿದ್ಧಗೊಳಿಸುವ ಜತೆಗೆ ಅದನ್ನು ಹುರಿಗೊಳಿಸಬೇಕು. ಈ ಪರೀಕ್ಷೆಯಲ್ಲಿ ನಾನು ಉತ್ತಮ ಅಂಕ ಪಡೆಯುತ್ತೇನೆ ಎಂದು ನಿಶ್ಚಯ  ಮಾಡಿಕೊಳ್ಳಬೇಕು.
ಈ ಸಲಹೆಗಳು ಕೇವಲ ಮಕ್ಕಳಿಗೆ ಮಾತ್ರವಲ್ಲದೆ, ಈ ವರ್ಷ ಪರೀಕ್ಷೆ ಬರೆಯುವ ಎಲ್ಲ ಪರೀಕ್ಷಾರ್ಥಿಗಳಿಗೆ ನೀಡಿದ ಸಲಹೆಯಂತೆ ತೋರುತ್ತದೆ. ಇವುಗಳನ್ನು ಪಾಲಿಸಿ ಹಾಗೂ ಗೆಲ್ಲವ ಪಾಲಿಸಿ ನಿಮ್ಮದಾಗಲಿ ಪರೀಕ್ಷೆ ಬರೆಯುವ ಸರ್ವರಿಗೂ ಶುಭವಾಗಲಿ..
