ಮಂದಿರವಾಯಿತು, ಇನ್ನು ರಾಮರಾಜ್ಯ ಸ್ಥಾಪನೆಯ ಸಮಯ
ಸಂಗತ
ಡಾ.ವಿಜಯ್ ದರಡಾ
ಅಂದು ಇಡೀ ದೇಶದ ಕಣ್ಣು ಅಯೋಧ್ಯೆಯ ಮೇಲೆ ನೆಟ್ಟಿತ್ತು. ಬಹಳ ವರ್ಷಗಳ ಹಿಂದೆ ರೂಪುಗೊಂಡ ಕೃಷ್ಣಶಿಲೆಯಿಂದ ಕೆತ್ತಿದ ಸುಂದರ ರಾಮಲಲ್ಲಾ ಮೂರ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭವ್ಯ ರಾಮಮಂದಿರದ ಗರ್ಭಗುಡಿಯೊಳಗೆ ಪ್ರತಿಷ್ಠಾಪನೆ ಮಾಡುತ್ತಿದ್ದರು. ಭಾರತೀಯರು ಮಾತ್ರವಲ್ಲದೆ, ಜಗತ್ತಿನಾದ್ಯಂತ ನಾನಾ ನಂಬಿಕೆಗಳ ಜನರು ಅಯೋಧ್ಯೆಯತ್ತ ಕಣ್ಣುಹಾಯಿಸಿದ್ದರು. ಬಹುಶಃ ಸ್ವಾತಂತ್ರ್ಯಾನಂತರ ಬೃಹತ್ ಭಾರತವು ಆ ಪರಿಯ ಒಗ್ಗಟ್ಟಿನಿಂದ ಸಂಭ್ರಮಾಚರಣೆ ನಡೆಸಿದ್ದು ಅಂದೇ ಇರಬೇಕು. ೨೦೨೪ರ ಜನವರಿ ೨೨ರಂದು ದೀಪಾವಳಿ ಹಬ್ಬವೇನೂ ಇರಲಿಲ್ಲ.
ಆವತ್ತು ಇದ್ದುದು ರಾಮನ ‘ಪ್ರಾಣ ಪ್ರತಿಷ್ಠಾಪನೆ’ಯ ಹಬ್ಬ. ಆದರೆ ಭಾರತೀಯರು ತಮ್ಮ ಮನೆಯಲ್ಲೇ ದೀಪಗಳನ್ನು ಬೆಳಗಿ ಅಕ್ಷರಶಃ ದೀಪಾವಳಿಆಚರಿಸಿದರು. ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಶ್ರೀರಾಮನಿಗೊಂದು ನೆಲೆ ಕಲ್ಪಿಸಬೇಕೆಂದು ನಡೆಸಿದ ಶತಮಾನಗಳ ಹೋರಾಟ, ತ್ಯಾಗ ಹಾಗೂ ಬಲಿದಾನಗಳಿಗೆ ಆ ದಿನ ಇತಿಶ್ರೀ ಹಾಡಲಾಯಿತು. ಅದರ ಸಂಕೇತವೆಂಬಂತೆ ಎಲ್ಲೆಡೆ ಸಂಭ್ರಮಾಚರಣೆ ನಡೆಯಿತು. ರಾಮಲಲ್ಲಾನ ಪ್ರತಿಷ್ಠಾಪನೆಯು ಈ ದೇಶದ ಇತಿಹಾಸದಲ್ಲೊಂದು ಆಧ್ಯಾತ್ಮಿಕ ಮೈಲುಗಲ್ಲು ಮಾತ್ರವಲ್ಲ, ಅದು ಇಡೀ ದೇಶದ ಅಸ್ಮಿತೆಯನ್ನು ಮರುಸ್ಥಾಪಿಸುವ ಮಾನವೀ ಯತೆಯ ಪ್ರತೀಕವೂ ಹೌದು.
ನಾನು ಈ ವಿಷಯದ ರಾಜಕೀಯ ಆಯಾಮವನ್ನು ಸ್ಪರ್ಶಿಸಲು ಹೋಗುವುದಿಲ್ಲ. ಹಿಂದೆ ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ ೩೭೦ನೇ ಪರಿಚ್ಛೇದ ದಡಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದಾಗಲೂ ನಾನಿದನ್ನು ಹೇಳಿದ್ದೆ. ದೇಶದ ಸಮಗ್ರತೆ ಹಾಗೂ ಭದ್ರತೆಯ ದೃಷ್ಟಿಯಿಂದ ಅದನ್ನು ರದ್ದುಪಡಿಸಲೇಬೇಕಿತ್ತು. ಕಾಶ್ಮೀರದಲ್ಲಿ ಕೆಲವರಿಗೆ ವಿಶೇಷ ಸ್ಥಾನಮಾನದಿಂದ ಪ್ರಯೋಜನ ಇದ್ದಿದ್ದರೂ ದೇಶದ ಸಾರ್ವಭೌಮತೆ ಹಾಗೂ ಸಮಾನತೆಯ ಕಾರಣಕ್ಕೆ ಅಂಥದೊಂದು ತಾರತಮ್ಯ ಹೋಗಬೇಕಿತ್ತು. ಕೊನೆಗೂ ಹೋಯಿತು.
ರಾಮ ಮಂದಿರದ ನಿರ್ಮಾಣ ಕೂಡ ಹಾಗೆಯೇ. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯಂತೆ ಇದಕ್ಕೂ ರಾಜಕೀಯ ಆಯಾಮಗಳಿವೆ ಎಂಬುದು ನಿಜ. ಆದರೆ ಕೇವಲ ರಾಜಕೀಯ ಉದ್ದೇಶದಿಂದ ಮಂದಿರ ನಿರ್ಮಾಣವಾಗಿದ್ದರೆ ಅದು ಶತಕೋಟಿ ಮೀರಿದ ಭಾರತೀಯರ ಮನಸ್ಸುಗಳಲ್ಲಿ ಈ ಪರಿಯಸಂತೋಷ ಹುಟ್ಟುಹಾಕಲು ಸಾಧ್ಯವಿತ್ತೇ? ಖಂಡಿತ ಇಲ್ಲ. ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೆ ಲಕ್ಷಾಂತರ ಜನರು ಅಯೋಧ್ಯೆಗೆ ಧಾವಿಸಿ ರಾಮ ಲಲ್ಲಾನ ದರ್ಶನ ಪಡೆಯಲು ‘ಜೈ ಶ್ರೀರಾಮ್, ಜೈ ಶ್ರೀರಾಮ್’ ಉದ್ಘೋಷ ಮೊಳಗಿಸುತ್ತಾ ಉತ್ಸಾಹದಿಂದ ಮುನ್ನುಗ್ಗಿದ್ದೇ ರಾಮ ಈ ದೇಶವಾಸಿಗಳ ಹೃದಯದಲ್ಲಿ ಯಾವ ಸ್ಥಾನ ಪಡೆದಿದ್ದಾನೆ ಮತ್ತು ರಾಮನ ಜೀವನದ ಮೌಲ್ಯಗಳನ್ನು ಈ ದೇಶವಾಸಿಗಳು ಎಂಥಾ ಉನ್ನತ ಸ್ಥಾನದಲ್ಲಿಟ್ಟು ಆರಾಧಿಸು ತ್ತಾರೆ ಎಂಬುದನ್ನು ಹೇಳುತ್ತದೆ.
ನಾವು ಆಗಾಗ ಮಾತನಾಡುವ ಆದರ್ಶ ರಾಮರಾಜ್ಯದಲ್ಲಿ ಪ್ರಭು ಶ್ರೀರಾಮನೇ ನಾಯಕನಾಗಿರುತ್ತಾನಲ್ಲವೇ? ಆ ನಾಯಕ ನಮಗೀಗ ದೊರೆತಿದ್ದಾನೆ.ಶ್ರೀರಾಮನ ಬದುಕನ್ನು ನಾವು ವಿಶ್ಲೇಷಣಾತ್ಮಕವಾಗಿ ನೋಡಿದರೆ ಅವನು ಖಂಡಿತ ಆ ಕಾಲದಲ್ಲಿ ಕಾಡಿನ ಜನರ, ಶೋಷಿತರ ಹಾಗೂ ದುರ್ಬಲರ ಹೀರೋ ಆಗಿದ್ದ ಎಂಬುದು ಅರಿವಾಗುತ್ತದೆ. ಅಯೋಧ್ಯೆ ತೊರೆದು ಅವನು ವನವಾಸಕ್ಕೆಂದು ಹೋದಾಗ ಕಲ್ಲುಮುಳ್ಳುಗಳ ಕಠಿಣ ಹಾದಿಯನ್ನೇ ಆಯ್ಕೆ ಮಾಡಿಕೊಂಡ. ಏಕೆಂದರೆ ಅವನಿಗೆ ಜನಸಾಮಾನ್ಯರ ಸಂಕಷ್ಟಗಳನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಒಂದು ಸಾಮ್ರಾಜ್ಯದ ರಾಜಕುಮಾರನಾಗಿದ್ದ ಅವನ ಸರಳತೆಯನ್ನು ಗಮನಿಸಿ. ವನವಾಸಕ್ಕೆ ಹೋಗುವಾಗ ಅವನು ಅಂಬಿಗನೊಬ್ಬನ ಬಳಿ ನದಿ ದಾಟಿಸುವಂತೆ ಕೇಳಿಕೊಳ್ಳುತ್ತಾನೆ.
ಅಂಬಿಗ ಇವರನ್ನು ದಡಕ್ಕೆ ತಲುಪಿಸಿದಾಗ ಅವನಿಗೆ ಕೃತಜ್ಞತೆ ಸಲ್ಲಿಸಲು ರಾಮ ಅವನನ್ನು ಅಪ್ಪಿಕೊಳ್ಳುತ್ತಾನೆ. ನಂತರ ಶಬರಿ ಅರ್ಧ ತಿಂದಿಟ್ಟ ಹಣ್ಣನ್ನು ತಿಂದಾಗ ಭಾವುಕನಾಗುತ್ತಾನೆ. ಹದಿನಾಲ್ಕು ವರ್ಷಗಳ ವನವಾಸದಲ್ಲಿ ಅವನು ಅರಣ್ಯವಾಸಿಗಳನ್ನು ಒಂದುಗೂಡಿಸುತ್ತಾನೆ. ನಂತರ ಸೀತಾಮಾತೆ ಯನ್ನು ರಾವಣ ಅಪಹರಿಸುತ್ತಾನೆ. ಆಗ ಅವಳನ್ನು ರಕ್ಷಿಸಲು ರಾಮ ತನ್ನ ತಮ್ಮನಾದ ಭರತನ ಬಳಿ ಸಹಾಯ ಕೇಳಬಹುದಿತ್ತು. ಹಿರಿಯ ರಾಜಕುಮಾರ ನಾದ ರಾಮನ ಮರದ ಪಾದುಕೆಗಳನ್ನು ಸಿಂಹಾಸನದ ಮೇಲಿಟ್ಟು ಭರತ ಅಯೋಧ್ಯೆಯನ್ನು ಆಳುತ್ತಿರುತ್ತಾನೆ.
ರಾಮ ಹೇಳಿದ್ದರೆ ಅವನು ಖಂಡಿತ ಅಯೋಧ್ಯೆಯ ಸೇನೆಯನ್ನೇ ಸಹಾಯಕ್ಕೆ ಕಳುಹಿಸಿ ಸೀತಾಮಾತೆಯನ್ನು ರಕ್ಷಿಸುತ್ತಿದ್ದ. ಅದು ಬೇಡ ಅಂದರೆ ರಾವಣನ ಮೇಲೆ ಯುದ್ಧ ಮಾಡಲು ಅವನು ಬೇರೆ ಯಾವುದಾದರೂ ಸಾಮ್ರಾಜ್ಯಗಳ ನೆರವನ್ನಾದರೂ ಕೇಳಬಹುದಿತ್ತು. ಆದರೆ ಹಾಗೆ ಮಾಡದೆ ಅರಣ್ಯವಾಸಿಗಳನ್ನೆಲ್ಲ ಒಂದುಗೂಡಿಸಿ, ಗುಡ್ಡಗಾಡು ಜನರ ನೆರವು ಕೇಳಿ, ಅವರದೇ ಸೇನೆಯನ್ನು ರಾಮ ಕಟ್ಟುತ್ತಾನೆ. ಈ ಅಪ್ರತಿಮ ಸೇನಾ ಸಂಘಟನೆ ಹಾಗೂ ಸಾಮಾಜಿಕ ಏಕತೆಯು ಪ್ರಭು ಶ್ರೀರಾಮನ ಚಾಣಾಕ್ಷತೆಯನ್ನು ತೋರಿಸುತ್ತದೆ.
ಯಾವುದೇ ದೇಶದ ಇತಿಹಾಸದಲ್ಲಿ ಇದೊಂದು ಅನುಪಮ ವಿದ್ಯಮಾನವೇ ಸರಿ. ಈ ಕಾರಣಕ್ಕಾಗಿಯೇ ರಾಮನು ಗುಡ್ಡಗಾಡು ಜನರ ಹಾಗೂ ಆದಿವಾಸಿ ಗಳ ಜಾನಪದದಲ್ಲೂ ಅಜರಾಮರನಾಗಿದ್ದಾನೆ. ರಾಮನ ಪ್ರಭಾವ ಭರತಖಂಡದಲ್ಲಿ ಮಾತ್ರ ಇಲ್ಲ. ಅದು ಇಡೀ ಹಿಂದು ಮಹಾಸಾಗರದ ಅಕ್ಕಪಕ್ಕದ ದೇಶಗಳಲ್ಲೆಲ್ಲ ವಿಸ್ತಾರವಾಗಿ ಹರಡಿದೆ. ಕಾಂಬೋಡಿಯಾ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಭೂತಾನ್, ಸುಮಾತ್ರ, ಥಾಯ್ಲೆಂಡ್, ಮಲೇಷ್ಯಾ, ಲಾವೋಸ್‌ನಲ್ಲೂ ರಾಮನ ಆರಾಧಕರಿದ್ದಾರೆ. ಜಗತ್ತಿನ ಅತಿದೊಡ್ಡ ಮುಸ್ಲಿಂ ದೇಶವಾದ ಇಂಡೋನೇಷ್ಯಾದಲ್ಲೂ ರಾಮ ಹಾಗೂ ರಾಮಾಯಣದ ಪ್ರಭಾವ ಸಾಕಷ್ಟಿದೆ.
ಇಂಡೋನೇಷ್ಯಾದ ಬಾಲಿಯಲ್ಲಿ ರಾಮಲೀಲಾ ಹಬ್ಬವನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಆಚರಿಸುತ್ತಾರೆ. ರಾಮನ ವ್ಯಕ್ತಿತ್ವದಲ್ಲಿ ನಾವೆಲ್ಲರೂ ಗಮನಿಸಬೇಕಾದ ಒಂದು ಪ್ರಮುಖ ಗುಣವೆಂದರೆ ಅವನು ವಸಾಹತುಶಾಹಿ ಸಿದ್ಧಾಂತಕ್ಕೆ ವಿರುದ್ಧವಾಗಿದ್ದ. ಬೇಕಿದ್ದರೆ ಅವನು ವಾಲಿ ಹಾಗೂ ರಾವಣ ನನ್ನು ಸೋಲಿಸಿದ ಬಳಿಕ ಕ್ರಮವಾಗಿ ಕಿಷ್ಕಿಂಧೆ ಮತ್ತು ಶ್ರೀಲಂಕಾವನ್ನು ತನ್ನ ಆಡಳಿತಕ್ಕೆ ಸೇರಿಸಿಕೊಳ್ಳಬಹುದಿತ್ತು. ಆದರೆ ಹಾಗೆ ಮಾಡದೆ ನಿಸ್ವಾರ್ಥ ಮನೋಭಾವದಿಂದ ಕಿಷ್ಕಿಂಧೆಗೆ ಸುಗ್ರೀವನನ್ನೂ, ಶ್ರೀಲಂಕಾಕ್ಕೆ ವಿಭೀಷಣನನ್ನೂ ರಾಜರನ್ನಾಗಿ ಮಾಡಿದ. ಇಂದು ಎಲ್ಲಾ ದೇಶಗಳೂ ರಾಮನ ಈ ಆದರ್ಶ ಹಾಗೂ ಔದಾರ್ಯವನ್ನು ಮೈಗೂಡಿಸಿಕೊಂಡರೆ ಜಗತ್ತಿನಲ್ಲಿ ನಡೆಯುತ್ತಿರುವ ರಕ್ತಪಾತ, ಹಿಂಸಾಚಾರ ಹಾಗೂ ಅನಾರೋಗ್ಯಕರ ಪೈಪೋಟಿ ಗಳೆಲ್ಲ ಕೊನೆಯಾಗುತ್ತವೆ.
ಮತ್ತೆ ಅಯೋಧ್ಯೆಗೆ ಬರೋಣ. ಅಲ್ಲಿನ ರಾಮಜನ್ಮ ಭೂಮಿಯಲ್ಲಿ ಶ್ರೀರಾಮನ ದೇಗುಲವೇ ಇರಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಮೇಲೆಅಲ್ಲೊಂದು ಭವ್ಯವಾದ ದೇಗುಲವನ್ನು ನಿರ್ಮಾಣ ಮಾಡಿದ್ದರಿಂದ ಯಾರಿಗೆ ತಾನೇ ಸಂತೋಷವಾಗಿಲ್ಲ? ಜಗತ್ತಿನ ಎಲ್ಲ ಆಸ್ತಿಕರಿಗೆ ಅದೊಂದು ಪವಿತ್ರ ಆಧ್ಯಾತ್ಮಿಕ ತಾಣವಾಗುವುದಷ್ಟೇ ಅಲ್ಲ, ಸಾವಿರಾರು ಜನರಿಗೆ ಉದ್ಯೋಗವನ್ನು ನೀಡುವ ಸ್ಥಳವಾಗಿಯೂ ರೂಪಾಂತರಗೊಳ್ಳುತ್ತಿದೆ. ಹಾಗೆ ಉದ್ಯೋಗ ಸಿಗುವುದು ರಾಮಭಕ್ತರಿಗೆ ಮಾತ್ರವಲ್ಲ, ಜೈನರು, ಬೌದ್ಧರು, ಸಿಖ್ಖರು ಹೀಗೆ ಅಯೋಧ್ಯೆಯನ್ನು ಯಾರು ಪವಿತ್ರ ಸ್ಥಳವೆಂದು ಭಾವಿಸುತ್ತಾರೋ ಅವರೆಲ್ಲ ರಿಗೂ ಜೀವನೋಪಾಯಕ್ಕೆ ದಾರಿ ಸಿಗಲಿದೆ. ಅಯೋಧ್ಯೆಯು ಜೈನರ ಮೊದಲ ತೀರ್ಥಂಕರ ಆದಿನಾಥ ಹಾಗೂ ಇನ್ನಿತರ ಮೂವರು ತೀರ್ಥಂಕರರ ಪುಣ್ಯಭೂಮಿಯೂ ಹೌದು. ಆದರೆ ಅವರು ಕೂಡ ಈವರೆಗೆ ಅಯೋಧ್ಯೆಯಲ್ಲಿ ಅನ್ಯಾಯವನ್ನು ಅನುಭವಿಸಿದ್ದರು. ಇದನ್ನು ಅಲ್ಲಿನ ಕೆಲ ಜೈನರೇ ಹೇಳುತ್ತಾರೆ.
ಅಯೋಧ್ಯೆಯ ಜೈನ ಸ್ನೇಹಿತರೊಬ್ಬರು ನನ್ನ ಜತೆ ಮಾತನಾಡುವಾಗ, ‘ನಾನು ದೇಶದ ಎಲ್ಲ ಜನರ ಬಗ್ಗೆ ಮಾತನಾಡಲು ಸಾಧ್ಯವಿಲ್ಲದಿರಬಹುದು. ಆದರೆ ನಮ್ಮ ಪೂರ್ವಜರು ಇಲ್ಲಿ ಸಾಕಷ್ಟು ಕಷ್ಟ ಅನುಭವಿಸಿರುವುದನ್ನು ಸ್ಮರಿಸಿಕೊಳ್ಳಲೇಬೇಕು. ಈಗ ಕೊನೆಗೂ ಇಲ್ಲಿ ರಾಮಮಂದಿರ ನಿರ್ಮಾಣ ವಾಗಿರುವುದರಿಂದ ಈ ದೇಗುಲದ ಮೂಲಕ ನಾವು ಜೀವನ ಕಟ್ಟಿಕೊಳ್ಳಬಹುದು’ ಎಂದು ಹೇಳಿದರು. ಹಸಿವು ಯಾವತ್ತೂ ಧರ್ಮಗಳ ನಡುವೆ ತಾರತಮ್ಯಮಾಡುವುದಿಲ್ಲ. ‘ಜೈ ಶ್ರೀರಾಮ್’ ಘೋಷಣೆ ಕೂಗಿದರೆ ಈ ಹಿಂದೆ ಸಿಟ್ಟಿಗೇಳುವವರು ಇದ್ದರು. ಆದರೆ ಈಗ ಆ ಸಿಟ್ಟು ಇಲ್ಲ. ಅದರ ಬದಲು ಇದೇ ‘ಜೈ ಶ್ರೀರಾಮ್’ ಘೋಷಣೆಯು ಅಯೋಧ್ಯೆಯಲ್ಲಿ ಧರ್ಮ-ಧರ್ಮಗಳ ನಡುವೆ ಸಹಬಾಳ್ವೆಯ ಕನಸನ್ನು ಬಿತ್ತಿದೆ.
ರಾಮಮಂದಿರ ನಿರ್ಮಾಣವಾಗುತ್ತಿದ್ದಂತೆ ಇಡೀ ಅಯೋಧ್ಯೆಯ ಚಹರೆಯೇ ಬದಲಾಗುತ್ತಿರುವುದರಿಂದ ಅಯೋಧ್ಯೆಯ ಮುಸ್ಲಿಂ ಸಮುದಾಯ ಕೂಡ ಖುಷಿಯಾಗಿದೆ. ಅಯೋಧ್ಯೆಯಿಂದ ಇಂದು ದೇಶದ ಎಲ್ಲ ದಿಕ್ಕುಗಳನ್ನು ಸಂಪರ್ಕಿಸುವ ರಸ್ತೆಗಳು ನಿರ್ಮಾಣವಾಗಿವೆ. ಇಡೀ ಜಗತ್ತಿಗೆ ಅಯೋಧ್ಯೆಯನ್ನು ಸಂಪರ್ಕಿಸಲು ಹೊಸ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಹೊಸ ಹೊಸ ಹೋಟೆಲ್‌ಗಳು ಅಯೋಧ್ಯೆಯಲ್ಲಿ ತಲೆಯೆತ್ತುತ್ತಿವೆ. ಸಾಕಷ್ಟು ಧರ್ಮಶಾಲೆ ಗಳು ನಿರ್ಮಾಣವಾಗುತ್ತಿವೆ. ಇವೆಲ್ಲವುಗಳಲ್ಲೂ ಭರಪೂರ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ.
ಅದರಿಂದಾಗಿ ಸ್ಥಳೀಯ ನಿವಾಸಿಗಳ ಬದುಕಿನಲ್ಲಿ ಬಹುದೊಡ್ಡ ರೂಪಾಂತರವೊಂದು ನಡೆಯುತ್ತಿದೆ. ಅವರ ಜೀವನಮಟ್ಟ ಹಾಗೂ ಆರ್ಥಿಕತೆ ಸುಧಾ ರಿಸಲಿದೆ. ಸಾವಿರಾರು ಜನರಿಗೆ ಕೆಲಸ ಸಿಗಲಿದೆ. ಆಸಕ್ತಿಕರ ಸಂಗತಿಯೆಂದರೆ, ಈಗ ಪ್ರತಿದಿನ ಗೋವಾಕ್ಕಿಂತ ಹೆಚ್ಚು ಜನರು ಅಯೋಧ್ಯೆಗೆ ಭೇಟಿನೀಡುತ್ತಿದ್ದಾರೆ. ಜಗತ್ತಿನಾದ್ಯಂತ ಇರುವ ಕ್ರಿಶ್ಚಿಯನ್ನರಿಗೆ ಹೇಗೆ ವ್ಯಾಟಿಕನ್ ಸಿಟಿ ಪವಿತ್ರವೋ ಹಾಗೆಯೇ ಭವಿಷ್ಯದಲ್ಲಿ ಎಲ್ಲ ಹಿಂದೂಗಳಿಗೆ ಅಯೋ ಧ್ಯೆಯು ಪವಿತ್ರ ನಗರವಾಗಿ ಮಾರ್ಪಡಲಿದೆ ಎಂದು ಹೇಳಲಾಗುತ್ತಿದೆ.
ಈಗ ಮೂಲಭೂತ ಪ್ರಶ್ನೆಗೆ ಬರೋಣ. ಅಯೋಧ್ಯೆಯಲ್ಲಿ ರಾಮ ಮಂದಿರವೇನೋ ನಿರ್ಮಾಣವಾಯಿತು. ಅದರಿಂದ ನಿಜವಾಗಿಯೂ ಯಾರಿಗೆ ಪ್ರಯೋಜನ ಮತ್ತು ಏನು ಪ್ರಯೋಜನ? ಜನರಿಗೆ ರಾಮ ಮಂದಿರಕ್ಕಿಂತ ಹೆಚ್ಚಾಗಿ ರಾಮರಾಜ್ಯ ನಿರ್ಮಾಣವಾಗಬೇಕಿದೆ. ಅದು ಈ ಮಂದಿರದಿಂದ ಸಾಧ್ಯವಿದೆಯೇ? ಪ್ರಾಣ ಪ್ರತಿಷ್ಠಾಪನೆಯ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ  ಸರಸಂಘ ಚಾಲಕ ಡಾ.ಮೋಹನ ಭಾಗ್ವತ್ ಅವರು ಇದರ ಬಗ್ಗೆ ಬಹಳ ಚೆನ್ನಾಗಿ ಹೇಳಿದ್ದಾರೆ. ನಾವೆಲ್ಲರೂ ಈ ದೇಗುಲದಿಂದ ಸಹಬಾಳ್ವೆ, ಏಕತೆ ಹಾಗೂ ಜಾತ್ಯತೀ ತತೆಯ ಮೌಲ್ಯವನ್ನೂ, ರಾಮನ ಬದುಕಿನಿಂದ ಧೈರ್ಯ, ಕರ್ತವ್ಯಪರತೆ ಹಾಗೂ ಬದ್ಧತೆಯನ್ನೂ ಆದರ್ಶವಾಗಿ ಸ್ವೀಕರಿಸಬೇಕೆಂದು ಅವರು ಸೂಚ್ಯ ವಾಗಿ ಹೇಳಿದರು. ಇದೇ ಅಲ್ಲವೇ ರಾಮರಾಜ್ಯ? ಅವರು ಹೇಳಿರುವ ಮೌಲ್ಯಗಳು ಜಾರಿಗೆ ಬಂದರೆ ಅದೇ ರಾಮರಾಜ್ಯ.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕೂಡ ಪದೇಪದೆ ರಾಮರಾಜ್ಯದ ಬಗ್ಗೆ ಮಾತನಾಡುತ್ತಿದ್ದರು. ನಾವು ನಿಜವಾಗಿಯೂ ರಾಮರಾಜ್ಯವನ್ನು ನಿರ್ಮಾಣ ಮಾಡುವ ಕನಸು ಹೊಂದಿದ್ದರೆ ರಾಮನ ಆದರ್ಶಗಳನ್ನು ಪಾಲಿಸಬೇಕು. ಅದು ಈ ದೇಶದ ಪ್ರತಿಯೊಬ್ಬ ದಮನಿತ, ಅವಕಾಶವಂಚಿತ ಹಾಗೂ ನಿರ್ಲಕ್ಷಿತ ವ್ಯಕ್ತಿಯ ಬದುಕನ್ನು ಧನಾತ್ಮಕವಾಗಿ ಬದಲಿಸುತ್ತದೆ. ಆಗ ನಾವೆಲ್ಲರೂ ನಮ್ಮ ಜವಾಬ್ದಾರಿಗಳನ್ನು ನಿಭಾಯಿಸಿದಂತೆಯೂ ಆಗುತ್ತದೆ. ರಾಮ ಮಂದಿರದ ನಿರ್ಮಾಣದ ಬಳಿಕ ನಮ್ಮೆಲ್ಲರ ಗುರಿ ಅದೇ ಆಗಬೇಕು. ರಾಮರಾಜ್ಯದ ಸ್ಥಾಪನೆಯಾಗುವುದು ಅಥವಾ ಆಗದಿರುವುದು ಈ ದೇಶದ ಪ್ರತಿಯೊಬ್ಬ ಪ್ರಜೆಯ ಕೈಲಿದೆ. ನಮಗಿಂತ ಹಿಂದುಳಿದಿರುವ ಎಲ್ಲರನ್ನೂ ನಮ್ಮ ಜತೆಗೆ ಕರೆದುಕೊಂಡು ಹೋಗುವ ಹೊಣೆ ನಮ್ಮೆಲ್ಲರ ಮೇಲಿದೆ. ಆಗಮಾತ್ರ ನಾವು ಅತ್ಯಂತ ಹೆಮ್ಮೆ ಹಾಗೂ ಪ್ರಾಮಾಣಿಕತೆಯಿಂದ ‘ಜೈ ಶ್ರೀರಾಮ್’ ಎಂದು ಹೇಳಬಹುದು!
(ಲೇಖಕರು ಹಿರಿಯ ಪತ್ರಕರ್ತರು)