ಮಬ್ಬಿನಿಂದ ಸರಿದು ಬೆಳಕಿನೆಡೆಗೆ ನಡೆಯೋಣ
ದಾರಿದೀವಿಗೆ
ಮಹಾದೇವ ಬಸರಕೋಡ
ಬದುಕಿನ ಬಹುತೇಕ ಸಂದರ್ಭಗಳಲ್ಲಿ ಸಲ್ಲದ ಭ್ರಾಂತಿಗೆ ಒಳಗಾಗಿಬಿಡುವ ನಾವು, ಕೆಲವೊಮ್ಮೆ ಕಹಿ ವಾಸ್ತವ ಅರ್ಥವಾದರೂ ನಮ್ಮ ಅಹಂ ನಿಂದಾಗಿನಿರ್ಲಕ್ಷಿಸಿಬಿಡುತ್ತೇವೆ. ನಮ್ಮ ಹಿತಕ್ಕಾಗಿಯೇ ಹೇಳಿದ ಮಾತುಗಳಿಗೆ ಕಿವಿಗೊಡದಿರುವುದು ಖಂಡಿತವಾಗಿಯೂ ಸರಿಯಾದ ನಡೆ ಯಲ್ಲ.
ನಾವು ಕೆಲವು ಬಾರಿ ನಮ್ಮದೇ ಆದ ಯೋಚನೆಯಲ್ಲಿ ಮುಳುಗು ಹಾಕುತ್ತಲಿರುತ್ತೇವೆ. ಒಂದಷ್ಟು ಸಿರಿತನ ಬಂದರೆ ಬಡವರ ಮಾತು ನಗಣ್ಯ ವೆನಿಸಿ ಬಿಡುತ್ತದೆ. ಅಧಿಕಾರ-ಅಂತಸ್ತುಗಳು ಕಾಲಿಗೆ ತೊಡರಿಕೊಂಡರೆ ಸಾಕು ಎಲ್ಲವೂ ನಾನು ಹೇಳಿದಂತಾಗಬೇಕು, ನಾನು ಮಾಡುವುದೇ ಸರಿ ಎಂದು ಭಾವಿಸು ತ್ತೇವೆ. ಇತರರು ನಮಗೇನಾದರೂ ಸಲಹೆ-ಸೂಚನೆ ನೀಡಿದರೆ ಅದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುವುದೇ ಇಲ್ಲ.
ಹಿತೈಷಿಗಳು ನಮ್ಮ ಹಿತಕ್ಕಾಗಿಯೇ ಹೇಳಿದ ಕಹಿವಾಸ್ತವಗಳನ್ನು ಕೂಡ ‘ನಮ್ಮ ಏಳಿಗೆ ಸಹಿಸದೆ ಸುಖಾಸುಮ್ಮನೆ ಹೇಳುತ್ತಿದ್ದಾರೆ’ ಎಂದುಕೊಂಡು ತೀರಾ ಉಡಾಫೆಯಿಂದ ನೋಡುತ್ತೇವೆ. ಮತ್ತೆ ಕೆಲವು ಸಂದರ್ಭಗಳಲ್ಲಿ, ಕಾಕತಾಳೀಯವಾಗಿ ಸಂಭವಿಸಿದ ಸಂಗತಿಗಳನ್ನು ಪರಮಸತ್ಯವೆಂದು ನಂಬಿಬಿಡು ತ್ತೇವೆ. ತೆನಾಲಿರಾಮನ ಬೆಕ್ಕು ಒಮ್ಮೆ ಬಿಸಿಹಾಲು ಕುಡಿದು ಬಾಯಿ ಸುಟ್ಟುಕೊಂಡ ನಂತರ, ಪ್ರತಿಸಲ ಹಾಲು ನೋಡಿದಾಗಲೂ ‘ಇದು ಬಿಸಿಯಾಗಿರುತ್ತದೆ, ನನ್ನ ಗಂಟಲು ಸುಡುತ್ತದೆ’ ಎಂದು ಭ್ರಮಿಸಿ ಮುಂದೆಂದೂ ಹಾಲು ಕುಡಿಯಲು ನಿರಾಕರಿಸಿದ ಹಾಗೆ, ತಾತ್ಕಾಲಿಕವಾಗಿ ಸಂಭವಿಸಿದ ಅವಘಡ ಗಳನ್ನು ಇದೇ ಶಾಶ್ವತ ಎಂದು ನಂಬಿಬಿಡುತ್ತದೆ ನಮ್ಮ ದುರ್ಬಲ ಮನಸ್ಸು.
‘ಅನುಭವದಲ್ಲಿ ಅಮೃತವಿದೆ’ ಎಂಬ ಮಾತು ಸತ್ಯವಾದರೂ, ಕೆಲವು ಸಲ ಅದು ಸಂದರ್ಭೋಚಿತ ವಾಗಿರುವುದಿಲ್ಲ ಎಂಬುದನ್ನು ಮರೆತು ನಂಬುವು ದರಿಂದಾಗಿ ಸಾರ್ವಕಾಲಿಕ ಸತ್ಯವಲ್ಲದಂಥ ಸಂಗತಿಗಳು ಕೆಲವೊಮ್ಮೆ ನಮ್ಮ ಮನದಲ್ಲಿ ಬೇರೂರಿಬಿಡುತ್ತವೆ. ಅವೇ ಮುಂದೆ ಪೂರ್ವ ಗ್ರಹಗಳಾಗಿ ರೂಪಾಂತರಗೊಳ್ಳುತ್ತವೆ. ಇಂಥ ಗ್ರಹಿಕೆಗಳ ನೆಲೆಯಿಂದ ನಾವು ಸ್ವಲ್ಪವೂ ಸರಿಯುವುದೇ ಇಲ್ಲ. ಇದಕ್ಕೆ ನಮ್ಮ ಅಹಂ ಜತೆಗೂಡಿದರಂತೂ ಮುಗಿದೇ ಹೋಯಿತು.
ಬಹುತೇಕ ವೇಳೆ ನಮ್ಮ ಹಿತೈಷಿಗಳು, ‘ನಿನ್ನ ನಿಲುವು ಸರಿಯಲ್ಲ, ನೀನು ಸಾಗುತ್ತಿರುವ ಹಾದಿಯಲ್ಲಿ ನೋವು ಅನುಭವಿಸಬೇಕಾಗುತ್ತದೆ. ಅದು ನಿನಗೆ ಅಪಜಯ ತರಬಹುದು’ ಎಂದು ತಿಳಿಹೇಳಿದಾಗಲೂ ಅದರಿಂದ ನಾವು ಹಿಂದೆ ಸರಿಯುವುದಿಲ್ಲ. ಭಿನ್ನ ನೆಲೆಯಲ್ಲಿ ಯೋಚಿಸುವುದೇ ಇಲ್ಲ. ಹೀಗಾಗಿ ಕಹಿವಾಸ್ತವ ನಮಗೆ ಅರಿವಾಗುವ ಹೊತ್ತಿಗೆ ನಮ್ಮ ಬದುಕು ಸರಿಪಡಿಸಿಕೊಳ್ಳಲಾಗದ ಸ್ಥಿತಿಗೆ ತಲುಪಿರುತ್ತದೆ. ಪುಟ್ಟ ಕಥೆಯೊಂದನ್ನು ನೋಡೋಣ. ಯಾತ್ರಿಕನೊಬ್ಬ ಮಾರ್ಗಮಧ್ಯದಲ್ಲಿ ಕುರುಡನೊಬ್ಬನನ್ನು ಭೇಟಿಯಾದ.
ಮರುಭೂಮಿಯನ್ನು ದಾಟುವಾಗ ಆದ ಭೇಟಿಯಿದು. ಇಬ್ಬರೂ ಜತೆಯಾಗಿ ಬಹುದಿನಗಳವರೆಗೆ ಯಾತ್ರೆಯಲ್ಲಿ ಹೆಜ್ಜೆಹಾಕಿದ್ದರಿಂದ ಅವರ ಸ್ನೇಹ ಗಾಢವಾಯಿತು. ಯಾತ್ರಿಕನ ಬಗ್ಗೆ ಅಪಾರ ಗೌರವ, ಪ್ರೀತಿ ಬೆಳೆಸಿಕೊಂಡ ಕುರುಡ, ತನ್ನ ಪಾಲಿಗೆ ಆತ ದೇವರು ಕೊಟ್ಟ ಕೊಡುಗೆಯೆಂದೇ ನಂಬಿದ್ದ.ಒಂದು ದಿನ ಕುರುಡನಿಗೆ ನಿದ್ರೆಯಿಂದ ಬಹುಬೇಗನೆ ಎಚ್ಚರವಾಯಿತು. ಆದರೆ ಇನ್ನೂ ಗಾಢ ಕತ್ತಲಿತ್ತು, ಚಳಿಯೂ ವಿಪರೀತವಾಗಿತ್ತು. ಯಾತ್ರಿಕ ಇನ್ನೂ ಮಲಗಿದ್ದ. ಕುರುಡ ತನ್ನ ಕೋಲಿಗಾಗಿ ತಡಕಾಡಿದ, ಅದು ಸಿಗಲಿಲ್ಲ. ಪಕ್ಕದಲ್ಲೇ ಒಂದು ಹಾವು ಬಿದ್ದುಕೊಂಡಿತ್ತು. ವಿಪರೀತ ಚಳಿಗೆ ಸಿಲುಕಿ ಅದರ ಮೈ ಗಡುಸಾಗಿತ್ತು, ಚಲನೆಯೂ ಇರಲಲಿಲ್ಲ.
ತಡ ಕಾಡುತ್ತಿದ್ದ ಕುರುಡನ ಕೈಗೆ ಈ ಹಾವಿನ ಸ್ಪರ್ಶವಾಗಿ ಅದು ಕೋಲಿನಂತೆ ಭಾಸವಾಯಿತು. ತನ್ನ ಕೋಲು ಕಳೆದು ಹೋದರೂ ಅದಕ್ಕಿಂತ ‘ನುಣು ಪಾದ’ ಕೋಲನ್ನು ದಯಪಾಲಿಸಿದ್ದಕ್ಕೆ ಕುರುಡ ದೇವರಿಗೆ ಕೃತಜ್ಞತೆ ಸಮರ್ಪಿಸಿದ. ಅದನ್ನು ಕೈಗೆತ್ತಿಕೊಂಡು ಯಾತ್ರಿಕನನ್ನು ತಿವಿದು ಎಚ್ಚರಿಸಿದ.ನಿದ್ರೆಯಿಂದ ಎಚ್ಚರಗೊಂಡ ಯಾತ್ರಿಕನಿಗೆ ಕುರುಡ ಹಾವು ಹಿಡಿದುಕೊಂಡಿರುವುದನ್ನು ಕಂಡು ಗಾಬರಿಯಾಗಿ, ‘ನಿನ್ನ ಕೈಯಲ್ಲಿರುವುದು ಕೋಲಲ್ಲ, ಹಾವು. ಅದನ್ನು ಎಸೆದುಬಿಡು’ ಎಂದ. ಕುರುಡನಿಗೆ ಇದು ಅಪಥ್ಯವೆನಿಸಿ, ‘ದೇವರು ನನಗೊಂದು ನುಣುಪಾದ ಕೋಲು ಕರುಣಿಸಿರುವುದನ್ನು ನಿನಗೆಸಹಿಸಲಾಗುತ್ತಿಲ್ಲ; ಹೀಗಾಗಿ ಅದನ್ನು ಹಾವೆಂದು ಹೇಳುತ್ತಿರುವೆ’ ಎಂದು ಯಾತ್ರಿಕನ ಮಾತನ್ನು ಧಿಕ್ಕರಿಸಿದ.
ಎಷ್ಟು ತಿಳಿಹೇಳಿದರೂ ಕುರುಡ ನಂಬದ ಕಾರಣಕ್ಕೆ ಯಾತ್ರಿಕ ಅಸಹಾಯಕನಾಗಿ ಸುಮ್ಮನಾಗಿಬಿಟ್ಟ. ಯಾತ್ರಿಕ ತನ್ನ ಮೇಲಿನ ಹೊಟ್ಟೆಕಿಚ್ಚಿನಿಂದ ಹೀಗೆ ಹೇಳುತ್ತಿದ್ದಾನೆ, ಇಷ್ಟು ದಿನ ಜತೆಯಲ್ಲಿದ್ದರೂ ತನ್ನ ಸಂತಸವನ್ನು ಅವನಿಗೆ ಸಹಿಸಲಾಗಲಿಲ್ಲ ಎಂದು ಭಾವಿಸಿ ಕುರುಡ ಅಲ್ಲಿಂದ ಜಾಗ ಖಾಲಿಮಾಡಿದ.ಕೆಲ ಹೊತ್ತಿನ ನಂತರ ಸೂರ್ಯೋದಯವಾಗಿ ಚಳಿ ನಿಧಾನ ವಾಗಿ ಕಡಿಮೆಯಾಯಿತು. ಸೆಟೆದುಕೊಂಡಿದ್ದ ಹಾವಿನಲ್ಲಿ ಪ್ರಾಣಸಂಚಾರವಾಗತೊಡಗಿ ಅದು ಕುರುಡನನ್ನು ಕಚ್ಚಿತು. ತನ್ನನ್ನು ಆವರಿಸಿದ್ದ ಮಬ್ಬಿನ ಫಲವಾಗಿ ಯಾತ್ರಿಕನ ಬುದ್ಧಿ ಮಾತಿಗೆ ಕಿವಿಗೊಡದ ಕಾರಣಕ್ಕೆ ಕುರುಡ ತನ್ನ ಪ್ರಾಣವನ್ನೇಕಳೆದುಕೊಳ್ಳಬೇಕಾಗಿ ಬಂತು.
ಸಂಗತವಲ್ಲದ ಕುರುಡು ನಿರ್ಧಾರಗಳಿಂದ ಕೆಲವೊಮ್ಮೆ ನಾವು ಬಂಧಿತರಾಗಿಬಿಡುತ್ತೇವೆ. ಹೀಗಾಗಿ ನಾವು ವಾಸ್ತವವನ್ನು ಅರಿಯುವುದಿಲ್ಲ, ವಿಶ್ಲೇಷಿ ಸುವುದಿಲ್ಲ. ಮಹಾಭಾರತದ ಮಹಾಪರಾಕ್ರಮಿ ಭೀಷ್ಮರು, ಕೌರವ-ಪಾಂಡವರಲ್ಲಿ ಹೊಗೆಯಾಡುತ್ತಿದ್ದ ದ್ವೇಷವನ್ನು ಕಿತ್ತುಹಾಕಿ, ಅವರು ಕೂಡಿಬಾಳು ವಂತಾಗಲು ಅತೀವವಾಗಿ ಯತ್ನಿಸುತ್ತಿದ್ದ ಗೌರವಾನ್ವಿತರು. ವಿಪರ್ಯಾಸವೆಂದರೆ, ಹಿಂದೊಮ್ಮೆ ತಾವು ಕೊಟ್ಟ ಮಾತಿಗೆ, ನಿಯೋಜಿತ ಕಾರ್ಯಕ್ಕೆ ಕಟ್ಟುಬೀಳಬೇಕಾದ ಕಾರಣಕ್ಕೆ ಭೀಷ್ಮರು ಅನೇಕ ಪ್ರಮಾದಗಳನ್ನು ಎಸಗು ವಂತಾಯಿತು.
ಕೊನೆಗೆ ಇದು, ಎಲ್ಲರೂ ಯುದ್ಧಕ್ಕೆ ಸನ್ನದ್ಧರಾಗಿ ತಮ್ಮವ ರೆಲ್ಲರನ್ನೂ ಕಳೆದುಕೊಳ್ಳುವ ಭೀಕರ ಪರಿಸ್ಥಿತಿಯನ್ನು ನಿರ್ಮಿಸಿತು. ಇಂಥ ಅಚಾತುರ್ಯಕ್ಕೆ ಭೀಷ್ಮರು ಹಿಂದೆ ತಾವು ನೀಡಿದ್ದ ಮಾತನ್ನು ಉಳಿಸಿಕೊಂಡು ಸಾಧಿಸಲು ತಳೆದ ಕುರುಡು ನಿರ್ಧಾರವೇ ಕಾರಣವಾಗಿತ್ತು. ಬದುಕಿನ ಬಹುತೇಕ ಸಂದರ್ಭಗಳಲ್ಲಿ ಸಲ್ಲದ ಭ್ರಾಂತಿಗೆ ಒಳಗಾಗಿಬಿಡುವ ನಾವು, ಕೆಲವೊಮ್ಮೆ ವಾಸ್ತವ ಅರ್ಥವಾದರೂ ನಮ್ಮ ಅಹಂನಿಂದಾಗಿ ನಿರ್ಲಕ್ಷಿಸಿಬಿಡುತ್ತೇವೆ. ನಮ್ಮ ಹಿತಕ್ಕಾಗಿಯೇ ಹೇಳಿದ ಮಾತುಗಳಿಗೆ ಕಿವಿಗೊಡದಿರುವುದು ಖಂಡಿತವಾಗಿಯೂ ಸರಿಯಾದ ನಡೆಯಲ್ಲ. ಹಿತೈಷಿಗಳ ಮಾತುಗಳಿಗೆ ಕಿವಿಯಾಗ ಬೇಕು ಎಂದ ಮಾತ್ರಕ್ಕೆ ಅಂಥ ಎಲ್ಲದಕ್ಕೂ ಒಪ್ಪಿಗೆಯ ಮುದ್ರೆ ಒತ್ತಬೇಕು ಎಂದೇನಿಲ್ಲ; ಅವನ್ನು ನಮ್ಮ ವಿವೇಚನೆಯ ಮೂಸೆಯಲ್ಲಿ ಪುಟಕ್ಕಿಕ್ಕಬೇಕು.
ಜಾಗೃತರಾಗಿ ನಮ್ಮದೇ ಅಸಂಗತ ನಿಲುವುಗಳಿಂದ ಹೊರಬರಬೇಕು. ಶಾಂತ ಮನಸ್ಸಿನಿಂದ ಆಲೋಚಿಸುವ, ಮುಕ್ತವಾಗಿ ಚರ್ಚಿಸುವ ಪರಿಪಾಠ ನಮ್ಮದಾಗಬೇಕು. ಕೊಲೆ-ಸುಲಿಗೆಯಲ್ಲೇ ಮನಸ್ಸನ್ನು ಕೇಂದ್ರೀಕರಿಸಿಕೊಂಡು ಅದುವೇ ಜೀವನವೆಂದು ಭ್ರಮಿಸಿ ರಾಕ್ಷಸನಂತೆ ಬದುಕುತ್ತಿದ್ದ ಅಂಗುಲಿ ಮಾಲನು ಬುದ್ಧನ ಮಾತಿಗೆ ಕಿವಿಗೊಟ್ಟ ನಂತರವೇ ಅವನ ಬದುಕಲ್ಲಿ ಸಕಾರಾತ್ಮಕ ಪರಿವರ್ತನೆಯಾಯಿತು. ಬುದ್ಧನ ಮಾತು ಆತನ ಒಳಗಣ್ಣನ್ನು ತೆರೆಸಿ, ಹೃದಯವನ್ನು ಅರಳಿಸಿತ್ತು. ಅವನ ಬದುಕನ್ನು ಸಂಪೂರ್ಣವಾಗಿ ಬದಲಿಸಿತ್ತು. ಅಂತೆಯೇ ನಾವು ಕೂಡ ಹೊಸ ವಿಚಾರಗಳು, ಅನುಭವ ಗಳಗೆ ಮನಸ್ಸನ್ನು ಮುಕ್ತವಾಗಿ ತೆರೆದಿಡಬೇಕು.
ಮುಸುಕಿದ ಮಬ್ಬನ್ನು ದೂರಕ್ಕೆ ಸರಿಸಿ, ಬೆಳಕಿನ ಕೈಹಿಡಿದು ಮುಂದೆ ಸಾಗಲು ನಿರಂತರವಾಗಿ ಪ್ರಯತ್ನಿಸಬೇಕು. ಇಂಥ ನಡೆಗಳು ನಮ್ಮ ಬದುಕನ್ನು ಸುಂದರಗೊಳಿಸಬಲ್ಲವು, ಅವಕಾಶಗಳನ್ನು ವಿಸ್ತರಿಸಬಲ್ಲವು.
(ಲೇಖಕರು ಶಿಕ್ಷಕರು)