ಮಕ್ಕಳ ಭವಿಷ್ಯ ಹೆತ್ತವರ ಕೈಯಲ್ಲಿದೆ
ದಾರಿ ದೀವಿಗೆ
ಗೋಪಾಲಕೃಷ್ನ ಭಟ್ ವಿ.
ಸಮರ್ಪಕ ಶಿಕ್ಷಣ, ಪೋಷಕರ ಮಾರ್ಗದರ್ಶನ, ಆರೈಕೆ ಇಲ್ಲದ ಮಕ್ಕಳು ಸಮಾಜಘಾತುಕ ಶಕ್ತಿಗಳಾಗುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆಯಂತೂ ಪೋಷಕರೇ ಮಕ್ಕಳನ್ನು ದುಡ್ಡಿಗಾಗಿ ಮಾರುವುದಿದೆ. ಇಂಥ ಅಪಾಯಗಳಿಂದ ಮಕ್ಕಳನ್ನು ಸಂರಕ್ಷಿಸಿ ಸಮರ್ಥ ಪ್ರಜೆಗಳನ್ನಾಗಿ ಅವರನ್ನು ರೂಪಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯ.
ಮಕ್ಕಳು ಸಣ್ಣವರಿರುವಾಗ ಹೆತ್ತವರನ್ನು ಸಂಪೂರ್ಣ ಅವಲಂಬಿಸಿರುತ್ತಾರೆ. ಆದ್ದರಿಂದ ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕಾದ್ದು ಹೆತ್ತವರ ಹೊಣೆ. ಮಕ್ಕಳಲಾಲನೆ-ಪಾಲನೆ ಎಂದರೆ ಸಣ್ಣ ವಯಸ್ಸಿನಿಂದ ಪ್ರೌಢಾವಸ್ಥೆವರೆಗೆ ಮಕ್ಕಳ ದೈಹಿಕ, ಭಾವನಾತ್ಮಕ ಹಾಗೂ ಬೌದ್ಧಿಕ ಬೆಳವಣಿಗೆಯನ್ನು ಉತ್ತೇಜಿಸುವ ಹಾಗೂ ಬೆಂಬಲಿಸುವ ಪ್ರಕ್ರಿಯೆ ಅಂದುಕೊಳ್ಳ ಬಹುದು. ಮಕ್ಕಳು ಎಷ್ಟೇ ದೊಡ್ಡವರಾದರೂ ಹೆತ್ತವರಿಗೆ ಮಕ್ಕಳೇ. ಹೀಗಾಗಿ ಅವರ ಭವಿಷ್ಯವನ್ನು ಉಜ್ವಲವಾಗಿಸುವಲ್ಲಿ ಪೋಷಕರ, ಶಿಕ್ಷಕರ ಮತ್ತು ಈ ಸಮಾಜದ ಕೊಡುಗೆಯೂ ಮಹತ್ತರವಾಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಮಕ್ಕಳ ಬೆಳವಣಿಗೆಯ ಪ್ರತಿ ಹಂತದಲ್ಲೂ ತೀವ್ರ ನಿಗಾ ಇಟ್ಟಿರಬೇಕು, ಎಚ್ಚರ ವಹಿಸಲೇಬೇಕು. ಇದು ತಪ್ಪಿದರೆ ಅನಾಹುತ ಖಂಡಿತ. ಆಧುನಿಕ ಕಾಲದಯುವ ಪೋಷಕರು ಒಂದು ಅಥವಾ ಎರಡು ಮಕ್ಕಳು ಸಾಕೆನ್ನುವ ಧೋರಣೆ/ಮನಸ್ಥಿತಿಯಲ್ಲಿ ದ್ದಾರೆ; ಅಷ್ಟೇಕೆ, ಮಕ್ಕಳೇ ಬೇಡ ಎಂಬ ಕಠಿಣ ನಿರ್ಧಾರವನ್ನೂ ತಳೆಯುವವರೂ ಇದ್ದಾರೆ. ಅನಿವಾರ್ಯ ಕಾರಣಗಳಿಂದಾಗಿ ಪುಟ್ಟ ಮಕ್ಕಳನ್ನು ಪ್ಲೇಹೋಮ್‌ಗೆ ಸೇರಿಸುವ ಪರಿಪಾಠ ಕೆಲವರಲ್ಲಿ ಕಂಡುಬರುತ್ತದೆ. ಎರಡು ವರ್ಷದ ವಯೋಮಾನದ ನಂತರ ಮಕ್ಕಳಲ್ಲಿ ತುಂಟತನ, ಹಠಮಾರಿತನ ಇತ್ಯಾದಿ ವರ್ತನೆಗಳು ಕಾಣಲು ಶುರುವಾಗುತ್ತವೆ.
ಅವರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಹೇಳುವುದು, ಅಂದರೆ, ಯಾವುದು ಒಳ್ಳೆಯ ಕೆಲಸ, ಏನು ಮಾಡಿದರೆ ಕೆಡುಕಾಗಬಹುದು ಎಂಬುದರ ಕುರಿತು ಅರಿವು ಮೂಡಿಸುವುದು ಪೋಷಕರ ಆದ್ಯಕರ್ತವ್ಯ. ಕುಂಬಾರನೊಬ್ಬ ಹಸಿ ಜೇಡಿಮಣ್ಣಿಗೆ ರೂಪ ಕೊಟ್ಟು ವಿವಿಧ ಆಕಾರದ ಮಡಕೆ-ಕುಡಿಕೆಗಳನ್ನು ಹೇಗೆ ರೂಪಿಸು ತ್ತಾನೋ, ಅದೇ ರೀತಿಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಚಿಕ್ಕಂದಿನಲ್ಲಿರುವಾಗಲೇ ಉತ್ತಮ ಮಾರ್ಗದರ್ಶನ ಕೊಟ್ಟು ಒಳ್ಳೆಯ ಸಂಸ್ಕಾರವನ್ನು ತುಂಬಿ ಬೆಳೆಸುವುದು ಆದ್ಯ ಹೊಣೆಗಾರಿಕೆ ಎನಿಸಿಕೊಳ್ಳುತ್ತದೆ. ಇಂದಿನ ವ್ಯವಸ್ಥೆಯಲ್ಲಿ ಮಗುವು ಮೂರು ವರ್ಷಕ್ಕೇ ಶಿಕ್ಷಣಕ್ರಮಕ್ಕೆ ಒಡ್ಡಿಕೊಳ್ಳುತ್ತದೆ. ಈ ವಯಸ್ಸಿನಲ್ಲಿ ಮಗುವಿನ ಮನಸ್ಸು ಕೋಮಲ ಹಾಗೂ ಮುಗ್ಧವಾಗಿರುತ್ತದೆ.
ಹೀಗಾಗಿ ಪುಟ್ಟಮಕ್ಕಳು ದೇವರಿಗೆ ಸಮಾನ ಎನ್ನುತ್ತಾರೆ ಹಿರಿಯರು. ಈ ಹಂತದಿಂದ ಮಗುವು ಇತರ ಮಕ್ಕಳೊಂದಿಗೆ ಬೆರೆಯುತ್ತದೆ, ತರುವಾಯದಲ್ಲಿ ಶಿಕ್ಷಕ ರಿಂದಲೂ ಉತ್ತಮ ಮಾರ್ಗದರ್ಶನವನ್ನು ಪಡೆಯುತ್ತದೆ. ಹೀಗಾಗಿ ಶಿಕ್ಷಕರ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಈ ಹಂತದಲ್ಲಿ ಅವರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ, ಮಾರ್ಗದರ್ಶನ ಮತ್ತು ಅರಿವು ದಕ್ಕಿದಲ್ಲಿ, ಮಕ್ಕಳು ಮುಂದೆ ಉತ್ತಮ ನಾಗರಿಕರಾಗಿ ಬೆಳೆದು ದೇಶಕ್ಕೆ ದೊಡ್ಡ ಆಸ್ತಿಯಾಗಬಲ್ಲರು. ರಾಷ್ಟ್ರ ನಿರ್ಮಾಣದಲ್ಲಿಇಂಥವರೇ ಬಹುಮುಖ್ಯ ಪಾತ್ರವನ್ನು ವಹಿಸುವು ದರಲ್ಲಿ ಸಂದೇಹವಿಲ್ಲ. ಆದ್ದರಿಂದಲೇ ಈ ಹಂತದಲ್ಲಿ ಮಕ್ಕಳಿಗೆ ಅರಿವಿನ ಭದ್ರಬುನಾದಿ ಅತ್ಯಗತ್ಯ.
ಇದನ್ನು ಕಟ್ಟಿಕೊಡಬೇಕಾದ್ದು ಶಿಕ್ಷಕರು. ಮುಂದೆ ಮಕ್ಕಳು ತಲುಪುವುದು ತಾರುಣ್ಯದ ಹಂತವನ್ನು. ಈ ಘಟ್ಟದಲ್ಲಿ ಮಕ್ಕಳಲ್ಲಿ ಕೆಲವೊಂದು ಹಾರ್ಮೋನ್ ಸ್ರವಿಕೆಗಳ ಕಾರಣದಿಂದಾಗಿ ಒಂದಷ್ಟು ಬದಲಾವಣೆಗಳಾಗುತ್ತವೆ. ದೈಹಿಕ ಚಹರೆ ಮತ್ತು ಚಿಂತನಾ ವಿಧಾನದಲ್ಲಿ ಈ ರೂಪಾಂತರವನ್ನು ಕಾಣಬಹುದು. ಆದರೆ ಇದನ್ನು ಸಮರ್ಪಕವಾಗಿ ಗ್ರಹಿಸದೆ, ‘ನನ್ನ ಮಗ/ಮಗಳು ವಿಚಿತ್ರವಾಗಿ ವರ್ತಿಸು ತ್ತಾರೆ; ಹೇಳಿದ ಮಾತು ಕೇಳುವುದಿಲ್ಲ. ಮನೆಯ ವರೊಂದಿಗೂ ಸರಿಯಾಗಿ ಬೆರೆಯದೆ ಒಂಟಿ ಯಾಗಿರಲು ಇಷ್ಟಪಡುತ್ತಾರೆ. ಮೊಬೈಲ್/ಟಿವಿ ವೀಕ್ಷಣೆಯಲ್ಲೇ ಮುಳುಗಿರುತ್ತಾರೆ. ಏನಾದರೂ ಹೇಳಲು ಹೋದರೆ ರೇಗಾಡುತ್ತಾರೆ, ಕೋಪಿಸಿಕೊಳ್ಳುತ್ತಾರೆ’ ಎಂಬೆಲ್ಲಾ ಅಸಹಾಯಕತೆಗಳನ್ನು ಪೋಷಕರು ವ್ಯಕ್ತಪಡಿಸುವುದಿದೆ.
ಮಕ್ಕಳಲ್ಲಿ ಕಾಣಬರುವ ಇಂಥ ಬದಲಾವಣೆಗಳಿಗೆ/ವರ್ತನೆಗಳಿಗೆ ಪೋಷಕರು ಚಿಂತಿಸಿ ನಿದ್ರೆಗೆಡಬೇಕಾದ ಅಗತ್ಯವಿಲ್ಲ ಎಂಬುದು ತಜ್ಞರ ಅನಿಸಿಕೆ. ಅವರು ಅಭಿಪ್ರಾಯಪಡುವಂತೆ ಇಂಥ ಸಂದರ್ಭಗಳಲ್ಲಿ ಪೋಷಕರು ಬಹಳ ಜಾಗರೂಕತೆಯಿಂದ ವರ್ತಿಸಬೇಕು. ಜತೆಗೆ ಸ್ವಲ್ಪ ತಾಳ್ಮೆಯಿಂದಿದ್ದರೆ ಎಲ್ಲವೂ ಸರಿ ಹೋಗುತ್ತದೆ. ಅದನ್ನು ಬಿಟ್ಟು ಮಕ್ಕಳು ರೇಗಿದರೆಂದು ಪೋಷಕರು ತಾವೂ ರೇಗಿದರೆ, ಕೋಪಿಸಿಕೊಂಡು ಕೂಗಾಡಿದರೆ ಜಗಳ ಮುಂದುವರಿಯುತ್ತದೆಯೇ ಹೊರತು ಪರಿಹಾರವಾಗುವುದಿಲ್ಲ.
ಹೀಗಾಗಿ ಹದಿಹರೆಯದ ಮಕ್ಕಳೊಂದಿಗೆ ಪೋಷಕರು ಮಾತಾಡುವಾಗ, ಒಡನಾಡುವಾಗ ತಜ್ಞರ ಒಂದಷ್ಟು ಸಲಹೆ-ಸೂಚನೆಗಳನ್ನು ಅನುಸರಿಸಿದರೆ, ಮಕ್ಕಳ ವ್ಯಕ್ತಿತ್ವವನ್ನು ಮತ್ತಷ್ಟು ಉತ್ತಮಗೊಳಿಸುವಲ್ಲಿ ಅದು ಸಹಕಾರಿಯಾಗಬಹುದು:
? ಮಕ್ಕಳೊಂದಿಗೆ ಸ್ನೇಹಿತರಂತೆ ಇದ್ದು ಅವರ ವಿಶ್ವಾಸ ಗಳಿಸುವುದು ಬಹುಮುಖ್ಯ. ಮಕ್ಕಳ ಭಾವನೆಗಳಿಗೆ ಬೆಲೆ ಕೊಡಬೇಕು ಹಾಗೂ ಅವರು ಮುಕ್ತವಾಗಿ ಮಾತಾಡುವುದಕ್ಕೆ ಅನುವು ಮಾಡಿ ಕೊಡಬೇಕು. ‘ನನ್ನ ಪೋಷಕರು ಖಂಡಿತವಾಗಿಯೂ ಗೌಪ್ಯತೆಯನ್ನು ಕಾಪಾಡಿಕೊಳ್ಳು ತ್ತಾರೆ’ ಎಂಬ ಆತ್ಮವಿಶ್ವಾಸವು ಮಕ್ಕಳಲ್ಲಿ ಬೆಳೆಯಲು ಅನುವುಮಾಡಿಕೊಡಬೇಕು.
? ಮಕ್ಕಳು ಶಾಲೆ ಮುಗಿಸಿ ಬಂದ ನಂತರ ಪೋಷಕರು ಅವರಿಗಾಗಿ ಒಂದೆರಡು ಗಂಟೆ ಮೀಸಲಿಡಬೇಕು. ಶಾಲೆಯಲ್ಲಿನ ಆಗುಹೋಗುಗಳ ಬಗ್ಗೆ, ದೈನಂದಿನ ಚಟುವಟಿಕೆಗಳ ಬಗ್ಗೆ ವಿಚಾರಿಸಬೇಕು. ಈ ನಿಟ್ಟಿನಲ್ಲಿ ಮುಕ್ತ ಸಂಭಾಷಣೆ ನಡೆಸಿದರೆ ಸಂಭಾವ್ಯ ಅಪಾಯಗಳನ್ನು ತಪ್ಪಿಸಬಹುದು.
? ಮಕ್ಕಳೊಂದಿಗೆ ಪ್ರವಾಸಕ್ಕೆ ತೆರಳುವುದು, ಆಟೋಟದಂಥ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಅವರನ್ನು ಪ್ರೇರೇಪಿಸುವುದು ಉತ್ತಮ. ಇದರಿಂದಾಗಿ ಮಕ್ಕಳು ಪೋಷಕ ರೊಂದಿಗೆ ಆತ್ಮೀಯತೆ ಬೆಳೆಸಿಕೊಳ್ಳುತ್ತಾರೆ, ಸಲೀಸಾಗಿ ಹೊಂದಿಕೊಳ್ಳುತ್ತಾರೆ.
? ಮಕ್ಕಳ ಪ್ರಮುಖ ವಿಷಯಗಳ ಮೇಲೆ ಪೋಷಕರು ಗಮನವನ್ನು ಕೇಂದ್ರೀಕರಿಸಬೇಕು. ಅವರ ಉಡುಗೆ-ತೊಡುಗೆ, ಸಂವಹನೆ, ವರ್ತನೆ ಹಾಗೂ ಇತರ ಚಟುವಟಿಕೆಗಳಲ್ಲಿ ಉತ್ತಮ ಸಲಹೆ-ಸೂಚನೆಗಳನ್ನು ನೀಡಬೇಕು.
? ಮಕ್ಕಳಿಗೆ ಸಂಬಂಧಿಸಿದ ಕೆಲವು ಆಯ್ಕೆಗಳ ವಿಷಯದಲ್ಲಿ ಪೋಷಕರು ಆರಂಭದಿಂದಲೂ ಒಂದಷ್ಟು ನಿಯಮಗಳನ್ನು ರೂಪಿಸಿ, ಅದರ ಅನುಸರಣೆಯ ವಿಷಯದಲ್ಲಿ ಕಟ್ಟುನಿಟ್ಟು ವಿಧಿಸಬೇಕು, ಆದರೆ ಅದು ಕಠೋರವಾಗಿರಬಾರದು.
? ಹದಿಹರೆಯದ ಮಕ್ಕಳು ಕೆಲವೊಮ್ಮೆ ಒಂಟಿ ಯಾಗಿರಲು ಬಯಸುತ್ತಾರೆ. ಇದರ ಹಿಂದೆ ಅನಪೇಕ್ಷಿತ ಬೆಳವಣಿಗೆ ಏನಾದರೂ ಇದೆಯೇ ಎಂಬುದನ್ನು ಕಂಡುಕೊಳ್ಳಲು ಪೋಷಕರು ಅವರೊಂದಿಗೆ ಮುಕ್ತ ಸಂವಹನೆ ನಡೆಸಬೇಕಾದ್ದು ಅತ್ಯಗತ್ಯ.
? ಸಮತೋಲಿತ ಆಹಾರ, ನಿಯತ ವ್ಯಾಯಾಮ, ಯಥೋಚಿತ ನಿದ್ರೆ ಸೇರಿದಂತೆ ಆರೋಗ್ಯಕರ ಜೀವನಶೈಲಿಯ ಕುರಿತು ಪೋಷಕರು ಮಕ್ಕಳಲ್ಲಿ ಅರಿವು ಮೂಡಿಸಬೇಕು. ಇದರಿಂದಾಗಿ ಮಕ್ಕಳ ಮನಸ್ಥಿತಿಯಲ್ಲಿ ಸ್ಥಿರತೆ ಮೂಡುತ್ತದೆ, ಗೊಂದಲ ದೂರವಾಗುತ್ತದೆ.
? ಹಠಾತ್ತನೆ ಎದುರಾಗುವ ಸವಾಲುಗಳು ಅಥವಾ ಹೇರಿಕೆಯಾಗುವ ಒತ್ತಡದ ನಿಭಾವಣೆ ಹೇಗೆ ಎಂಬುದು ಗೊತ್ತಾಗದೆ ಮಕ್ಕಳು ಕೆಲವೊಮ್ಮೆ ಕಂಗಾಲಾಗ ಬಹುದು. ಇಂಥ ವೇಳೆ, ಗಡಿಬಿಡಿ ಮಾಡಿಕೊಳ್ಳದೆ ತಾಳ್ಮೆ ಮತ್ತು ನಿರಾಳತೆಯನ್ನು ರೂಢಿಸಿಕೊಳ್ಳುವ ಪಾಠವನ್ನು ಮಕ್ಕಳಿಗೆ ಹೇಳಿ ಕೊಡಬೇಕು. ಒತ್ತಡದ ನಿರ್ವಹಣೆಯಲ್ಲಿ ಯೋಗ, ಧ್ಯಾನ, ಕ್ರೀಡಾ ಚಟುವಟಿಕೆಗಳು, ಉತ್ತಮ ಹವ್ಯಾಸಗಳು ವಹಿಸುವ ಪಾತ್ರವನ್ನು ಅವರಿಗೆ ಮನದಟ್ಟು ಮಾಡಿಕೊಡಬೇಕು.
? ಮೊಬೈಲ್ ಮತ್ತು ಟಿವಿ ವೀಕ್ಷಣೆಯಲ್ಲಿನ ಇತಿಮಿತಿಯ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವಿಕೆ ಹಾಗೂ ಅಂತರ್ಜಾಲದ ಬಳಕೆಯ ನೈಜ ಉದ್ದೇಶದಿಂದ ವಿಮುಖರಾಗಿ ವಿಕೃತ ವಸ್ತು- ವಿಷಯಗಳ ಕಡೆಗೆ ಅವರ ಮನಸ್ಸು ತಿರುಗದಂತೆ ನೀಡಬೇಕಾದ ಹಿತೋಪದೇಶವೂ ಮಕ್ಕಳನ್ನು ಸತ್ಪ್ರಜೆಗಳನ್ನಾಗಿಸುವಲ್ಲಿ ಬಹುಮುಖ್ಯ. ದೈನಂದಿನ ವೇಳಾಪಟ್ಟಿಯನ್ನು ಚಾಚೂತಪ್ಪದೆ ಪಾಲಿಸುವ ಅಭ್ಯಾಸ ಹೇಳಿಕೊಟ್ಟರೆ ಮಕ್ಕಳಲ್ಲಿ ತನ್ನಿಂತಾನೇ ಶಿಸ್ತು ಮೂಡುತ್ತದೆ.
? ಪೋಷಕರ ಇಚ್ಛೆಯ ಕ್ಷೇತ್ರವನ್ನೇ ಮಕ್ಕಳು ಆರಿಸಿಕೊಳ್ಳಬೇಕು ಎಂಬುದಕ್ಕಿಂತ ಮಕ್ಕಳು ತಮ್ಮ ಅಭಿರುಚಿಯ ಕ್ಷೇತ್ರದಲ್ಲಿ ಮುಂದುವರಿಯವುದಕ್ಕೆ ಅನುವು ಮಾಡಿಕೊಡಬೇಕು. ಡಾಕ್ಟರ್ ಅಥವಾ ಎಂಜಿನಿಯರ್ ಆಗುವುದೇ ಏಕೈಕ ಗುರಿಯಲ್ಲ, ಅವನ್ನು ಹೊರತುಪಡಿಸಿದ ಕಲಾ ಕಾರ, ವಿಜ್ಞಾನಿ, ಕ್ರೀಡಾಪಟು ಮುಂತಾದ ವೃತ್ತಿಗಳಲ್ಲೂ ಭವಿಷ್ಯವಿದೆ ಎಂಬುದನ್ನು ಪೋಷಕರು ಮೊದಲು ಮನಗಾಣಬೇಕು. ಇದನ್ನು ಅರಿತು ಮಕ್ಕಳ ಅಭಿರುಚಿಗೆ ನೀರೆರೆದಾಗ ಅವರು ಸಮಾಜಕ್ಕೆ ಹೆಮ್ಮೆಯ ಕೊಡುಗೆಯಾಗಬಲ್ಲರು.
? ಮಕ್ಕಳಲ್ಲಿ ಭೇದ-ಭಾವ ತೋರುವುದಾಗಲೀ, ಒಂದು ಮಗುವನ್ನು ಮತ್ತೊಂದು ಮಗುವಿ ನೊಂದಿಗೆ ಹೋಲಿಸುವುದಾಗಲೀ ಸಲ್ಲ. ಇಂಥ ಅನಪೇಕ್ಷಿತ ಹೆಜ್ಜೆಗಳನ್ನಿಟ್ಟಾಗ ಮಕ್ಕಳ ಅಬೋಧ ಮನಸ್ಸು ಮಲಿನವಾಗುತ್ತದೆ.
? ಎಲ್ಲ ಸಂದರ್ಭದಲ್ಲೂ ಮಕ್ಕಳಿಗೆ ಕಡಿವಾಣ ಹಾಕುವ ಬದಲು, ಕೆಲ ಸಮಯವಾದರೂ ಅವರು ಸ್ವತಂತ್ರವಾಗಿ ಇರುವುದಕ್ಕೆ ಪೋಷಕರು ಅವಕಾಶ ಕಲ್ಪಿಸಬೇಕು. ಹೀಗಾದಲ್ಲಿ ಅವರ ವ್ಯಕ್ತಿತ್ವಕ್ಕೆ ಹೊಸ ಆಯಾಮ ದಕ್ಕುತ್ತದೆ. ಎಲ್ಲಾ ಮಕ್ಕಳೂ ಅದೃಷ್ಟಶಾಲಿಗಳಾಗಿರುವುದಿಲ್ಲ. ಕೆಲವೊಮ್ಮೆ ಪೋಷಕರ ಆರ್ಥಿಕ ಮುಗ್ಗಟ್ಟು, ಅರಿವಿನ ಕೊರತೆ ಮತ್ತು ಇನ್ನಿತರ ಕಾರಣಗಳಿಂದಾಗಿ ಮಕ್ಕಳು ವಿದ್ಯಾಭ್ಯಾಸದಿಂದ ಮಾತ್ರವಲ್ಲದೆ ಮೂಲಭೂತ ಸೌಲಭ್ಯಗಳಿಂದಲೇ ವಂಚಿತರಾಗುತ್ತಾರೆ. ಆದರೆ, ನಮ್ಮ ಸಂವಿಧಾನದಲ್ಲಿ ಮಕ್ಕಳ ಕಡ್ಡಾಯ ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ನಮೂದಿಸಿರುವುದನ್ನು ಮನಗಂಡು, ಅದರ ನೆರವೇರಿಕೆಯ ಕಡೆಗೆಪೋಷಕರು ಶತಾಯಗತಾಯ ಯತ್ನಿಸಬೇಕು.
ಸಮರ್ಪಕ ಶಿಕ್ಷಣ, ಪೋಷಕರ ಸೂಕ್ತ ಮಾರ್ಗ ದರ್ಶನ, ಹತೋಟಿ, ಆರೈಕೆ ಇಲ್ಲದ ಮಕ್ಕಳು ಸಮಾಜಘಾತುಕ ಶಕ್ತಿಗಳಾಗಿ ಮಾರ್ಪಡುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆಯಂತೂ ಪೋಷಕರೇ ಮಕ್ಕಳನ್ನು ದುಡ್ಡಿಗಾಗಿ ಮಾರುವುದಿದೆ, ಭಿಕ್ಷಾಟನೆಗೆ ತಳ್ಳುವುದಿದೆ. ಇಂಥ ಅಪಾಯಗಳಿಗೆ ಸಿಲುಕದಂತೆ ಮಕ್ಕಳನ್ನು ಸಂರಕ್ಷಿಸಬೇಕಾದ್ದು, ಭವ್ಯ ಭಾರತದ ಸಮರ್ಥ ಪ್ರಜೆಗಳನ್ನಾಗಿ ಅವರನ್ನು ರೂಪಿಸ ಬೇಕಾದ್ದು ಪ್ರತಿಯೊಬ್ಬ ಪೋಷಕರ ಕರ್ತವ್ಯ. ‘ಪೋಷಕರು ತಮ್ಮ ಇಂದಿನ ದಿನವನ್ನು ಮಕ್ಕಳಿಗಾಗಿ ತ್ಯಾಗ ಮಾಡಿದರೆ, ಮಕ್ಕಳು ಉತ್ತಮ ನಾಳೆಗಳನ್ನು ಹೊಂದಲು ಸಾಧ್ಯವಾಗುತ್ತದೆ’ ಎಂಬ ನಮ್ಮ ಗೌರವಾನ್ವಿತ ಮಾಜಿ ರಾಷ್ಟ್ರಪತಿ ಹಾಗೂ ಶ್ರೇಷ್ಠ ವಿಜ್ಞಾನಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಮಾತು ನಮಗೆ ಆದರ್ಶವಾಗಲಿ.
(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)